ಪದ್ಯ ೨೧: ಗರ್ಭವ್ಯೂಹಕ್ಕೆ ಯಾರನ್ನು ನೇಮಿಸಿದನು?

ಕೆಲಬಲದ ಸಬಳಿಗರು ಸಬಳದ
ವಳಯದಲಿ ಹರಿಗೆಗಳು ಹರಿಗೆಗ
ಳೊಳಗೆ ಬಿಲ್ಲಾಳುಗಳ ಮರೆಯಲಿ ವಾಜಿ ಗಜರಥವ
ನಿಲಿಸಿ ಗರ್ಭವ್ಯೂಹವನು ಮಂ
ಡಳಿಸಿದನು ಸಂವೀರರನು ಸಿಂ
ಹಳರ ನಿಲಿಸಿದ ಹತ್ತು ಸಾವಿರ ಮಂಡಳೇಶ್ವರರ (ದ್ರೋಣ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಕ್ಕಪಕ್ಕದಲ್ಲಿ ಈಟಿಯನ್ನು ಆಯುಧವನ್ನಾಗಿಸಿಕೊಂಡಿದ್ದ ಪದಾತಿಗಳು, ವೃತ್ತಾಕಾರದಲ್ಲಿದ್ದರು, ಅದರೊಳಗೆ ಕತ್ತಿಗುರಾಣಿಗಳನ್ನು ಹಿಡಿದವರು, ಗುರಾಣಿಗಳ ಹಿಂದೆ ಬಿಲ್ಲಾಳುಗಳು, ಅವರ ಹಿಂದೆ ಕುದುರೆ ಆನೆ ರಥಗಳು ಹೀಗೆ ಗರ್ಭವ್ಯೂಹವನ್ನು ರಚಿಸಿ ಅಲ್ಲಿ ಸಿಂಹಳ ಸಂವೀರ ದೇಶಗಳ ಹತ್ತು ಸಾವಿರ ಮಂಡಲಾಧಿಪತಿಗಳನ್ನು ನಿಲ್ಲಿಸಿದನು.

ಅರ್ಥ:
ಕೆಲಬಲ: ಅಕ್ಕಪಕ್ಕ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಸಬಳ: ಈಟಿ; ವಳಯ: ವರ್ತುಲ, ಪರಿಧಿ; ಹರಿಗೆ: ಚಿಲುಮೆ; ಬಿಲ್ಲಾಳು: ಬಿಲ್ಲುಗಾರ; ಮರೆ: ಅವಚು; ವಾಜಿ: ಕುದುರೆ; ಗಜ: ಆನೆ; ರಥ: ಬಂಡಿ; ನಿಲಿಸು: ತಡೆ; ವ್ಯೂಹ: ಗುಂಪು, ಸಮೂಹ; ಮಂಡಳ: ವರ್ತುಲಾಕಾರ; ವೀರ: ಶೂರ; ಸಾವಿರ: ಸಹಸ್ರ; ಮಂಡಳೇಶ್ವರ: ಸಾಮಂತ ರಾಜ;

ಪದವಿಂಗಡಣೆ:
ಕೆಲಬಲದ+ ಸಬಳಿಗರು+ ಸಬಳದ
ವಳಯದಲಿ+ ಹರಿಗೆಗಳು+ ಹರಿಗೆಗಳ್
ಒಳಗೆ +ಬಿಲ್ಲಾಳುಗಳ +ಮರೆಯಲಿ +ವಾಜಿ +ಗಜ+ರಥವ
ನಿಲಿಸಿ +ಗರ್ಭವ್ಯೂಹವನು +ಮಂ
ಡಳಿಸಿದನು +ಸಂವೀರರನು +ಸಿಂ
ಹಳರ+ ನಿಲಿಸಿದ +ಹತ್ತು +ಸಾವಿರ +ಮಂಡಳೇಶ್ವರರ

ಅಚ್ಚರಿ:
(೧) ಪದಗಳ ಬಳಕೆ – ಸಬಳಿಗರು ಸಬಳದ; ಹರಿಗೆಗಳು ಹರಿಗೆಗ; ಸಂವೀರರನು ಸಿಂಹಳರ

ಪದ್ಯ ೨: ಅರ್ಜುನನು ಆಯುಧಗಳನ್ನು ಹೇಗೆ ಪೂಜಿಸಿದನು?

ಸವಗ ಮೊಚ್ಚಯ ಜೋಡು ಸೀಸಕ
ಕವಚ ಬಾಹುರಿಕೆಗಳ ನಿಲಿಸಿದ
ನವಿರಳಾಕ್ಷತೆ ಗಂಧ ಪುಷ್ಪ ಸುಧೂಪ ದೀಪದಲಿ
ವಿವಿಧ ಸತ್ಕಾರದಲಿ ದುರ್ಗಾ
ಸ್ತವವ ಜಪಿಸಿದ ವರ ಘೃತೋದನ
ನವರುಧಿರ ಮಾಂಸೋಪಹಾರಂಗಳಲಿ ಪೂಜಿಸಿದ (ದ್ರೋಣ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಕವಚ, ಪಾದರಕ್ಷೆ, ಶಿರಸ್ತ್ರಾನ, ಬಾಹುರಕ್ಷೆಗಲನ್ನು ಸಾಲಾಗಿಟ್ಟನು. ಎಲ್ಲವನ್ನೂ ಅಕ್ಷತೆ, ಗಂಧ, ಪುಷ್ಪ, ಧೂಪ, ದೀಪಗಳಿಮ್ದ ಪೂಜಿಸಿದನು. ಅನೇಕ ಸತ್ಕಾರಗಳನ್ನು ಮಾಡಿದನು. ದುರ್ಗಾಸ್ತವವನ್ನು ಜಪಿಸಿದನು. ತುಪ್ಪದನ್ನ, ರಕ್ತ ಮಾಂಸೋಪಹಾರಗಳನ್ನು ನಿವೇದಿಸಿದನು.

ಅರ್ಥ:
ಸವಗ: ಕವಚ; ಮೊಚ್ಚೆ: ಪಾದರಕ್ಷೆ; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಕವಚ: ಉಕ್ಕಿನ ಅಂಗಿ; ಬಾಹುರಿಕೆ: ತೋಳರಕ್ಷೆ; ಅಕ್ಷತೆ: ಮಂತ್ರಿಸಿದ ಅಕ್ಕಿ; ಗಂಧ: ಚಂದನ; ಪುಷ್ಪ: ಹೂವು; ಧೂಪ: ಸುಗಂಧ ದ್ರವ್ಯ; ದೀಪ: ಹಣತೆ; ವಿವಿಧ: ಹಲವಾರು; ಸತ್ಕಾರ: ಗೌರವ, ಉಪಚಾರ; ದುರ್ಗಾಸ್ತವ: ದುರ್ಗೆಯನ್ನು ಆರಾಧಿಸುವ ಸ್ತುತಿ; ಜಪಿಸು: ಮಂತ್ರಿಸು; ವರ: ಶ್ರೇಷ್ಠ; ಘೃತ: ತುಪ್ಪ; ರುಧಿರ: ರಕ್ತ; ನವ: ಹೊಸ; ಮಾಂಸ: ಅಡಗು; ಆಹಾರ: ಊಟ; ಪೂಜಿಸು: ಆರಾಧಿಸು;

ಪದವಿಂಗಡಣೆ:
ಸವಗ +ಮೊಚ್ಚಯ +ಜೋಡು +ಸೀಸಕ
ಕವಚ +ಬಾಹುರಿಕೆಗಳ +ನಿಲಿಸಿದ
ನವಿರಳ+ಅಕ್ಷತೆ +ಗಂಧ +ಪುಷ್ಪ +ಸುಧೂಪ +ದೀಪದಲಿ
ವಿವಿಧ +ಸತ್ಕಾರದಲಿ +ದುರ್ಗಾ
ಸ್ತವವ +ಜಪಿಸಿದ +ವರ +ಘೃತೋದನ
ನವ+ರುಧಿರ +ಮಾಂಸ+ಉಪಹಾರಂಗಳಲಿ +ಪೂಜಿಸಿದ

ಅಚ್ಚರಿ:
(೧) ಅಂಗರಕ್ಷೆಗಳು – ಸವಗ, ಮೊಚ್ಚೆ, ಜೋಡು, ಸೀಸಕ, ಕವಚ, ಬಾಹುರಿಕೆ

ಪದ್ಯ ೫೦: ಅರ್ಜುನನ ಬೆಂಬಲಕ್ಕಾಗಿ ಯಾರು ಬಂದರು?

ನರನ ಬೆಂಬಲವಾಗಿ ಪಾಂಚಾ
ಲರನು ಮತ್ಸ್ಯನ ಭೀಮಸೇನನ
ವರ ನಕುಲ ಸಹದೇವ ಧೃಷ್ಟದ್ಯುಮ್ನ ಸಾತ್ಯಕಿಯ
ಅರಸನಟ್ಟಿದನಿತ್ತಲಂಬಿನ
ತಿರುಹುವೆರಳಿನ ಮೊರೆವ ಬಿಲ್ಲಿನ
ವರ ರಥದ ದುವ್ವಾಳಿ ಮೆರೆಯೆ ಶಿಖಂಡಿ ನಡೆತಂದ (ಭೀಷ್ಮ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನಿಗೆ ಬೆಂಬಲವಾಗಿ ಯುಧಿಷ್ಠಿರನು ದ್ರುಪದ, ವಿರಾಟ, ಭೀಮ, ನಕುಲ, ಸಹದೇವ, ಧೃಷ್ಟದ್ಯುಮ್ನ, ಸಾತ್ಯಕಿ ಜೊತೆಗೂಡಲು ಸೂಚಿಸಿದನು. ಒಡನೆಯೇ ಬಾಣವನ್ನು ಬೆರಳಿನಿಂದ ತೂಗುತ್ತಾ ಧನುಷ್ಠೇಂಕಾರವನ್ನು ಮಾಡುತ್ತಾ ಶಿಖಂಡಿಯು ಬಂದನು.

ಅರ್ಥ:
ನರ: ಅರ್ಜುನ; ಬೆಂಬಲ: ಸಹಾಯ; ವರ: ಶ್ರೇಷ್ಠ; ಅರಸ: ರಾಜ; ಅಟ್ಟು: ಕಳುಹಿಸು; ಅಂಬು: ಬಾಣ; ತಿರುಹು: ತಿರುಗು,ತೂಗು; ವೆರಳು: ಬೆರಳು; ಮೊರೆ: ಧ್ವನಿ ಮಾಡು, ಝೇಂಕರಿಸು; ಬಿಲ್ಲು: ಚಾಪ; ರಥ: ಬಂಡಿ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ, ಓಟ; ಮೆರೆ: ಶೋಭಿಸು; ಶಿಖಂಡಿ: ನಪುಂಸಕ; ನಡೆತಂದ: ಬಂದ, ಆಗಮಿಸು;

ಪದವಿಂಗಡಣೆ:
ನರನ+ ಬೆಂಬಲವಾಗಿ +ಪಾಂಚಾ
ಲರನು +ಮತ್ಸ್ಯನ +ಭೀಮಸೇನನ
ವರ+ ನಕುಲ+ ಸಹದೇವ+ ಧೃಷ್ಟದ್ಯುಮ್ನ +ಸಾತ್ಯಕಿಯ
ಅರಸನ್+ಅಟ್ಟಿದನ್+ಇತ್ತಲ್+ಅಂಬಿನ
ತಿರುಹು+ಬೆರಳಿನ +ಮೊರೆವ +ಬಿಲ್ಲಿನ
ವರ +ರಥದ +ದುವ್ವಾಳಿ +ಮೆರೆಯೆ +ಶಿಖಂಡಿ +ನಡೆತಂದ

ಅಚ್ಚರಿ:
(೧) ಶಿಖಂಡಿ ಬಂದ ಪರಿ – ಅಂಬಿನ ತಿರುಹುವೆರಳಿನ ಮೊರೆವ ಬಿಲ್ಲಿನ ವರ ರಥದ ದುವ್ವಾಳಿ ಮೆರೆಯೆ ಶಿಖಂಡಿ ನಡೆತಂದ

ಪದ್ಯ ೪೯: ಭೀಷ್ಮನ ನೆರವಿಗೆ ಯಾರು ಧಾವಿಸಿದರು?

ಮೇಲೆ ಹೇಳಿಕೆಯಾಯ್ತು ಕೌರವ
ರಾಳಿನಲಿ ದುಶ್ಯಾಸನಂಗೆ ಕ
ರಾಳ ಭೂರಿಶ್ರವ ಜಯದ್ರಥ ಗುರು ಕೃಪಾದ್ಯರಿಗೆ
ಕೋಲ ಹೊದೆಗಳ ಬಂಡಿಯಲಿ ನಿ
ಸ್ಸಾಳ ಸೂಳಿನ ಲಗ್ಗೆಯಲಿ ಹೇ
ರಾಳದೊಡ್ಡವಣೆಯಲಿ ಪಡಿಬಲ ಕವಿದುದುರವಣಿಸಿ (ಭೀಷ್ಮ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಹೀಗೆ ಯುದ್ಧವು ಭಯಂಕರವಾಗಿ ನಡೆಯುತ್ತಿರಲು, ಕೌರವ ಸೈನ್ಯದಲ್ಲಿ ದ್ರೋಣ, ದುಶ್ಯಾಸನ, ಭೂರಿಶ್ರವ, ಜಯದ್ರಥರಿಗೆ ಭೀಷ್ಮನ ಬೆಂಬಲಕ್ಕೆ ಹೋಗಲು ಸೂಚಿಸಲಾಯಿತು. ಬಾಣಗಳ ಬಂಡಿಗಳೊಡನೆ ಭೇರಿ ತಮ್ಮಟೆಗಳ ಸದ್ದಿನೊಂದಿಗೆ ಕೌರವರ ಪಡೆಯು ಹೇರಾಳ ಸನ್ನಾಹದಿಂದ ಪಾಂಡವರಿಗೆ ಎದುರಾಗಿ ಬಂದಿತು.

ಅರ್ಥ:
ಹೇಳು: ತಿಳಿಸು; ಆಳಿ: ಸಾಲು, ಗುಂಪು; ಕರಾಳ: ಭಯಂಕರ; ಕೋಲ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಬಂಡಿ: ರಥ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳು: ಕದನ, ಯುದ್ಧ; ಲಗ್ಗೆ: ಮುತ್ತಿಗೆ, ಆಕ್ರಮಣ; ಹೇರಾಳ: ದೊಡ್ಡ, ವಿಶೇಷ; ಒಡ್ಡವಣೆ: ಗುಂಪು; ಪಡಿಬಲ: ವೈರ ಸೈನ್ಯ; ಕವಿದು: ಆವರಿಸು; ಉರವಣೆ: ಆತುರ, ಅವಸರ;

ಪದವಿಂಗಡಣೆ:
ಮೇಲೆ +ಹೇಳಿಕೆಯಾಯ್ತು +ಕೌರವರ್
ಆಳಿನಲಿ +ದುಶ್ಯಾಸನಂಗೆ+ ಕ
ರಾಳ +ಭೂರಿಶ್ರವ+ ಜಯದ್ರಥ +ಗುರು +ಕೃಪಾದ್ಯರಿಗೆ
ಕೋಲ +ಹೊದೆಗಳ +ಬಂಡಿಯಲಿ +ನಿ
ಸ್ಸಾಳ +ಸೂಳಿನ+ ಲಗ್ಗೆಯಲಿ +ಹೇ
ರಾಳದ್+ಒಡ್ಡವಣೆಯಲಿ+ ಪಡಿಬಲ +ಕವಿದುದ್+ಉರವಣಿಸಿ

ಅಚ್ಚರಿ:
(೧) ಕೌರವ ಪಡೆ ಬಂದ ಪರಿ – ಕೋಲ ಹೊದೆಗಳ ಬಂಡಿಯಲಿ ನಿಸ್ಸಾಳ ಸೂಳಿನ ಲಗ್ಗೆಯಲಿ ಹೇರಾಳದೊಡ್ಡವಣೆಯಲಿ
(೨) ಕರಾಳ, ನಿಸ್ಸಾಳ, ಹೇರಾಳ – ಪ್ರಾಸ ಪದಗಳು

ಪದ್ಯ ೪೮: ಅರ್ಜುನನು ಹೇಗೆ ಭೀಷ್ಮನ ವೇಗವನ್ನು ಮೀರಿಸಿದನು?

ಆವ ಚಾಪವ ತುಡುಕಿ ಕೆನ್ನೆಗೆ
ತೀವಿ ತೆಗೆಯದ ಮುನ್ನ ಫಲುಗುಣ
ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ
ಆವ ದಿವ್ಯಾಸ್ತ್ರವನು ಕುಂತಿಯ
ಮಾವ ತೊಡುವನು ತೊಡದ ಮುನ್ನ ಶ
ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ (ಭೀಷ್ಮ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕುಂತಿಯ ಮಾವನಾದ ಭೀಷ್ಮನು ಯಾವ ಬಿಲ್ಲನ್ನು ಹಿಡಿದು ಹೆದೆಯನ್ನು ಕೆನ್ನೆಗೆ ಸೆಳೆದು ಬಾಣವನ್ನು ಬಿಡುವ ಮೊದಲೇ ಅರ್ಜುನನು ಅದನ್ನು ಮುರಿಯುವನು. ಯಾವ ದಿವ್ಯಾಸ್ತ್ರಗಳನ್ನು ಭೀಷ್ಮನು ಪ್ರಯೋಗಿಸುವ ಮೊದಲೇ ಅರ್ಜುನನು ಅದನ್ನು ತುಂಡು ಮಾಡುತ್ತಿದ್ದನು.

ಅರ್ಥ:
ಚಾಪ: ಬಿಲ್ಲು; ತುಡುಕು: ಹೋರಾಡು, ಸೆಣಸು; ಕೆನ್ನೆ: ಗಲ್ಲ; ತೀವು: ಚೆಲ್ಲು, ಹರಡು; ತೆಗೆ: ಹೊರತರು; ಮುನ್ನ: ಮೊದಲು; ಎಸು: ಬಾಣ ಪ್ರಯೋಗ ಮಾದು; ಕಡಿ: ಸೀಳು; ಬಿಸುಡು: ಹೊರಹಾಕು; ಬಿಲ್ಲು: ಚಾಪ; ದಿವ್ಯಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಮಾವ: ಗಂಡನ ತಂದೆ; ತೊಡು: ಧರಿಸು; ಶರಾವಳಿ: ಬಾಣಗಳ ಗುಂಪು; ಮುಂಕೊಂಡು: ಮೊದಲೇ; ಖಂಡಿಸು: ಚೂರು ಮಾಡು;

ಪದವಿಂಗಡಣೆ:
ಆವ +ಚಾಪವ +ತುಡುಕಿ +ಕೆನ್ನೆಗೆ
ತೀವಿ +ತೆಗೆಯದ +ಮುನ್ನ +ಫಲುಗುಣನ್
ಓವದ್+ಎಸುವನು +ಕಡಿದು +ಬಿಸುಡುವನ್+ಇವರ +ಬಿಲ್ಲುಗಳ
ಆವ +ದಿವ್ಯಾಸ್ತ್ರವನು +ಕುಂತಿಯ
ಮಾವ +ತೊಡುವನು +ತೊಡದ +ಮುನ್ನ +ಶ
ರಾವಳಿಯ +ಮುಂಕೊಂಡು +ಖಂಡಿಸಿ+ ಪಾರ್ಥನ್+ಎಸುತಿರ್ದ

ಅಚ್ಚರಿ:
(೧) ಭೀಷ್ಮನನ್ನು ಕುಂತಿಯ ಮಾವ ಎಂದು ಕರೆದ ಪರಿ

ಪದ್ಯ ೪೭: ಭೀಷ್ಮಾರ್ಜುನರ ಸಮರವು ಹೇಗೆ ಸಾಗಿತ್ತು?

ಉಲಿಯೆ ಕಿರುಘಂಟೆಗಳು ಹೊಳ ಹೊಳ
ಹೊಳೆವ ಶಕ್ತಿಯ ತುಡುಕಿ ಭೀಷ್ಮನು
ಫಲುಗುಣನನಿಡೆ ಕಡಿದು ಬಿಸುಟನು ನೂರು ಬಾಣದಲಿ
ಸೆಳೆದು ಫಲುಗುಣ ತಿರುಹಿ ಭೀಷ್ಮನ
ತಲೆಯ ಲಕ್ಷಿಸಿ ಹೊನ್ನ ಘಂಟೆಗ
ಳುಲಿಯೆ ಬಿಟ್ಟೇರಿಂದಲಿಡೆ ಖಂಡಿಸಿದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಷ್ಮನು ಒಂದು ಶಕ್ತಿಯನ್ನು ಹಿಡಿದು ಅದರ ಕಿರುಘಂಟೆಗಳು ಸದ್ದು ಮಾಡುತ್ತಿರಲು ಅರ್ಜುನನನ್ನು ಹೊಡೆದನು, ಅರ್ಜುನನು ನೂರು ಬಾಣಗಳಿಂದ ಆ ಶಕ್ತಿಯನ್ನು ಕಡಿದು, ಭೀಷ್ಮನ ತಲೆಗೆ ಗುರಿಯಿಟ್ಟು ಶಕ್ತಿಯೊಂದನ್ನು ಎಸೆದನು. ಭೀಷ್ಮನು ಅದನ್ನು ಕತ್ತರಿಸಿ ಬಿಟ್ಟನು.

ಅರ್ಥ:
ಉಲಿ: ಶಬ್ದ; ಕಿರುಘಂಟೆ; ಚಿಕ್ಕ ಘಂಟೆ; ಹೊಳೆ: ಪ್ರಕಾಶ; ಶಕ್ತಿ: ಸಾಮರ್ಥ್ಯ; ತುಡುಕು: ಹೋರಾಡು, ಸೆಣಸು; ಕಡಿ: ಕತ್ತರಿಸು; ಬಿಸುಟು: ಹೊರಹಾಕು; ನೂರು: ಶತ; ಬಾಣ: ಅಂಬು; ಸೆಳೆ: ಎಳೆತ, ಸೆಳೆತ; ತಿರುಹಿ: ತಿರುಗು; ತಲೆ: ಶಿರ; ಲಕ್ಷಿಸು: ಗುರಿಯಿಡು; ಹೊನ್ನ: ಚಿನ್ನ; ಬಿಟ್ಟೇರು: ಈಟಿ; ಖಂಡಿಸು: ತುಂಡು ಮಾಡು;

ಪದವಿಂಗಡಣೆ:
ಉಲಿಯೆ +ಕಿರುಘಂಟೆಗಳು +ಹೊಳ +ಹೊಳ
ಹೊಳೆವ+ ಶಕ್ತಿಯ +ತುಡುಕಿ +ಭೀಷ್ಮನು
ಫಲುಗುಣನನಿಡೆ+ ಕಡಿದು+ ಬಿಸುಟನು +ನೂರು +ಬಾಣದಲಿ
ಸೆಳೆದು +ಫಲುಗುಣ +ತಿರುಹಿ +ಭೀಷ್ಮನ
ತಲೆಯ +ಲಕ್ಷಿಸಿ+ ಹೊನ್ನ +ಘಂಟೆಗಳ್
ಉಲಿಯೆ +ಬಿಟ್ಟೇರಿಂದಲಿಡೆ+ ಖಂಡಿಸಿದನಾ +ಭೀಷ್ಮ

ಅಚ್ಚರಿ:
(೧) ಉಲಿಯೆ – ೧, ೬ ಸಾಲಿನ ಮೊದಲ ಪದ

ಪದ್ಯ ೪೬: ಅರ್ಜುನನು ಭೀಷ್ಮನ ಎಷ್ಟು ಬಿಲ್ಲನ್ನು ತುಂಡುಮಾಡಿದನು?

ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ (ಭೀಷ್ಮ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭೀಷ್ಮನು ಮತ್ತೆ ಹೊಸಬಿಲ್ಲನ್ನು ಹಿಡಿದು ಕೋಪಗೊಂಡು ಮೃತ್ಯುವಿನಂತೆ ಬಾಣವನ್ನು ಬಿಡಲು, ಅರ್ಜುನನು ಭೀಷ್ಮನ ಆ ಬಿಲ್ಲನ್ನು ಮುರಿದನು. ಹೀಗೆ ಭೀಷ್ಮನು ಹಿಡಿದ ಹತ್ತು ಸಾವಿರ ಬಿಲ್ಲುಗಳನ್ನು ಅರ್ಜುನನು ತುಂಡು ಮಾಡಿದನು.

ಅರ್ಥ:
ಹೊಸ: ನವೀನ; ಚಾಪ: ಬಿಲ್ಲು; ಮಿತ್ತು: ಮೃತ್ಯು; ಖತಿ: ಕೋಪ; ಶರ: ಬಾಣ; ಕೆತ್ತು: ನಡುಕ, ಸ್ಪಂದನ; ಆಕಾಶ: ಅಂಬರ, ಆಗಸ; ಕಡಿ: ಸೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಮುತ್ತಯ್ಯ: ಮುತ್ತಾತ; ಕರತಳ: ಹಸ್ತ; ಧನು: ಬಿಲ್ಲು; ಕತ್ತರಿಸು: ಸೀಳು; ಹಿಡಿ: ಗ್ರಹಿಸು; ಸವೆ: ನಾಶ, ನೀಗು; ಪಿತಾಮಹ: ತಾತ; ಸಾವಿರ: ಸಹಸ್ರ;

ಪದವಿಂಗಡಣೆ:
ಮತ್ತೆ +ಹೊಸ +ಚಾಪದಲಿ +ಭೀಷ್ಮನು
ಮಿತ್ತು +ಖತಿಗೊಂಡಂತೆ +ಶರದಲಿ
ಕೆತ್ತನ್+ಆಕಾಶವನು+ ಕಡಿದನು+ ಪಾರ್ಥ +ನಿಮಿಷದಲಿ
ಮುತ್ತಯನ+ ಕರತಳದ +ಧನುವನು
ಕತ್ತರಿಸಿದನು +ಹಿಡಿಯಲ್+ಈಯದೆ
ಹತ್ತು +ಸಾವಿರ +ಬಿಲ್ಲು +ಸವೆದವು +ಕುರು+ಪಿತಾಮಹನ

ಅಚ್ಚರಿ:
(೧) ಭೀಷ್ಮನ ಸವೆದ ಬಿಲ್ಲುಗಳು – ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ
(೨) ಚಾಪ, ಬಿಲ್ಲು, ಧನು – ಸಮಾನಾರ್ಥಕ ಪದ

ಪದ್ಯ ೪೫: ಭೀಷ್ಮನ ಬಿಲ್ಲನ್ನು ಯಾರು ಕತ್ತರಿಸಿದರು?

ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ (ಭೀಷ್ಮ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಎರಡು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಅತಿ ವೇಗದಿಂದ ಹೊಸ ಬಿಲ್ಲನ್ನು ಹಿಡಿದು ಅರ್ಜುನನನ್ನು ಘಾತಿಸಿದನು. ಅರ್ಜುನನು ಭೀಷ್ಮನ ಬಿಲ್ಲನ್ನು ಮೂರು ತುಂಡುಗಳಾಗುವಂತೆ ಕತ್ತರಿಸಿದನು.

ಅರ್ಥ:
ಶರ: ಬಾಣ; ನರ: ಅರ್ಜುನ; ಕರ: ಹಸ್ತ; ಕಾರ್ಮುಕ: ಬಿಲ್ಲು; ದಂಡ: ಕೋಲು; ಕತ್ತರಿಸು: ಸೀಳು, ಚೂರು ಮಾಡು; ಕೊಂಡು: ಧರಿಸು; ಹೊಸ: ನವೀನ; ಧನು: ಬಿಲ್ಲು; ಸರಳ: ಬಾಣ; ಸೂಟಿ: ವೇಗ, ರಭಸ; ತೋರಿಸು: ಪ್ರದರ್ಶಿಸು; ಅಬ್ಬರಿಸು: ಗರ್ಜಿಸು; ಬಾಣ: ಸರಳು; ಅರಿ: ವೈರಿ; ಭಟ: ಶೂರ; ಚಾಪ: ಬಿಲ್ಲು; ಕಡಿ: ಕತ್ತರಿಸು; ಖಂಡಿಸು: ಕಡಿ, ಕತ್ತರಿಸು;

ಪದವಿಂಗಡಣೆ:
ಎರಡು+ ಶರದಲಿ +ನರನು +ಭೀಷ್ಮನ
ಕರದ +ಕಾರ್ಮುಕ +ದಂಡವನು +ಕ
ತ್ತರಿಸಿದನು +ಕೈಯೊಡನೆ +ಕೊಂಡನು +ಭೀಷ್ಮ +ಹೊಸ +ಧನುವ
ಸರಳ +ಸೂಟಿಯ +ತೋರಿಸಿದಡ್
ಅಬ್ಬರಿಸಿ +ಫಲುಗುಣನ್+ಐದು +ಬಾಣದಲ್
ಅರಿ +ಭಟನ +ಚಾಪವನು +ಕಡಿ +ಮೂರಾಗಿ +ಖಂಡಿಸಿದ

ಅಚ್ಚರಿ:
(೧) ಶರ, ಬಾಣ; ಚಾಪ, ಕಾರ್ಮುಕ, ಧನು – ಸಮಾನಾರ್ಥಕ ಪದಗಳು
(೨) ಕ ಕಾರದ ತ್ರಿವಳಿ ಪದ – ಕತ್ತರಿಸಿದನು ಕೈಯೊಡನೆ ಕೊಂಡನು

ಪದ್ಯ ೪೪: ಭೀಷ್ಮಾರ್ಜುನರ ಬಾಣ ಪ್ರಯೋಗದ ವೇಗ ಹೇಗಿತ್ತು?

ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಯಾವ ವಿಧದಲ್ಲಿ ಅರ್ಜುನನು ಬಾಣಪ್ರಯೋಗ ಮಾಡುತ್ತಿದ್ದನೋ, ಅಷ್ಟೇ ಬೇಗ ಭೀಷ್ಮನು ಅವನ್ನು ಮುರಿದು ಹಾಕುವನು. ಬಿಲ್ವಿದ್ಯೆಯ ಯಾವ ರಹಸ್ಯದಿಂದ ಅರ್ಜುನನು ಹೊಡೆಯುತ್ತಿದ್ದನೋ ಅದೇ ರೀತಿ ಅದೇ ಸ್ವೀಕಾರ. ಅದಕ್ಕೇನು ಎದುರೊಡ್ಡಬೇಕೋ ಅದೇ ವೇಗದಿಂದ ಭೀಷ್ಮನು ನಾನಾ ಪರಿಯಿಮ್ದ ಅರ್ಜುನನಿಗೆ ಸರಿಮಿಗಿಲಾಗಿ ಕಾದಿದನು.

ಅರ್ಥ:
ವಿಧ: ರೀತಿ; ಎಸು: ಬಾಣ ಪ್ರಯೋಗ ಮಾಡು; ಬೇಗ: ವೇಗ; ಮುರಿ: ಸೀಳು; ಚಾಪ: ಬಿಲ್ಲು; ರಹಸ್ಯ: ಗುಟ್ತು; ವಿದ್ಯೆ: ಜ್ಞಾನ; ಬಳಸು: ಉಪಯೋಗಿಸು; ವಿಧ: ರೀತಿ; ಪರಿ: ಕ್ರಮ; ಸಂಭಾವನೆ: ಆಲೋಚನೆ, ಅಭಿಪ್ರಾಯ; ಲುಳಿ: ರಭಸ, ವೇಗ; ವಿಧಾನ: ರೀತಿ; ಮಿಗಿಲು: ಹೆಚ್ಚು;

ಪದವಿಂಗಡಣೆ:
ಆವ +ವಿಧದಲಿ+ ಪಾರ್ಥನ್+ಎಸುವನದ್
ಆವ +ಬೇಗದಿ +ಮುರಿವನ್+ಈತನದ್
ಆವ+ ಚಾಪ +ರಹಸ್ಯ+ವಿದ್ಯೆಗಳೊಳಗೆ +ಬಳಸಿದನೊ
ಆ +ವಿಧದಲ್+ಆ+ ಪರಿಯಲ್+ಆ ಸಂ
ಭಾವನೆಯಲ್+ಆ+ ಲುಳಿಯಲ್+ಆ+ ನಾ
ನಾ +ವಿಧಾನದಲ್+ಒದಗಿ +ಸರಿ +ಮಿಗಿಲೆನಿಸಿದನು+ ಭೀಷ್ಮ

ಅಚ್ಚರಿ:
(೧) ಆವ ಪದದ ಪ್ರಯೋಗ – ೧-೩ ಸಾಲಿನ ಮೊದಲ ಪದ

ಪದ್ಯ ೪೩: ಭೀಷ್ಮಾರ್ಜುನರು ಯಾವ ಅಸ್ತ್ರಗಳಿಂದ ಯುದ್ಧವನ್ನು ಮಾಡಿದರು?

ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ (ಭೀಷ್ಮ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಸರ್ಪಾಸ್ತ್ರವನ್ನು ಅರ್ಜುನನು ಗರುಡಾಸ್ತ್ರದಿಂದ ಕಡಿದನು, ಅರ್ಜುನನ ಆಗ್ನೇಯಾಸ್ತ್ರವನ್ನು ಭೀಷ್ಮನು ವರುಣಾಸ್ತ್ರದಿಂದ ಉಪಶಮನ ಮಾಡಿದನು, ಪರ್ವತಾಸ್ತ್ರವನ್ನು ಭೀಷ್ಮನು ವಜ್ರಾಸ್ತ್ರದಿಂದ ವಿಫಲಗೊಳಿಸಿದನು, ಅರ್ಜುನನ ತಿಮಿರಾಸ್ತ್ರವನ್ನು ಭೀಷ್ಮನು ಸೂರ್ಯಾಸ್ತ್ರದಿಂದ ಗೆದ್ದನು.

ಅರ್ಥ:
ಉರಗ: ಹಾವು; ಬಾಣ: ಅಂಬು; ಕರೆ: ಬರೆಮಾಡು; ಶರ: ಬಾಣ; ತವಿಸು: ಕೊಲ್ಲು, ನಾಶಮಾಡು; ಉರಿ: ಬೆಂಇ; ವಿಶಿಖ: ಬಾಣ, ಅಂಬು; ನಂದಿಸು: ಆರಿಸು; ಜಲ: ನೀರು; ಅಸ್ತ್ರ: ಶಸ್ತ್ರ; ಗಿರಿ: ಬೆಟ್ಟ; ಶಿಳೀಮುಖ: ಬಾಣ; ವಜ್ರ: ವಜ್ರಾಸ್ತ್ರ; ಹರಿಸು: ಬಿಡು, ವ್ಯಾಪಿಸು; ತಿಮಿರ: ಕತ್ತಲೆ; ತರಣಿ: ಸೂರ್ಯ; ಮಾರ್ಗಣ: ಬಾಣ; ತರಿ: ಬಿಡು; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ಉರಗ +ಬಾಣವನ್+ಇವರು +ಕರೆದರು
ಗರುಡ +ಶರದಲಿ +ಪಾರ್ಥ +ತವಿಸಿದನ್
ಉರಿಯ +ವಿಶಿಖವನ್+ಇವರು +ನಂದಿಸಿದರು+ ಜಲಾಸ್ತ್ರದಲಿ
ಗಿರಿ+ಶಿಳೀಮುಖಕ್+ಇವರು +ವಜ್ರವ
ಹರಿಸಿದರು +ತಿಮಿರಾಸ್ತ್ರವ್+ಎದ್ದರೆ
ತರಣಿ+ ಮಾರ್ಗಣದಿಂದ +ತರಿದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ಬಾಣಕ್ಕೆ ಬಳಸಿದ ಪದಗಳು – ಬಾಣ, ಶರ, ವಿಶಿಖ, ಶಿಳೀಮುಖ, ಮಾರ್ಗಣ
(೨) ಅಸ್ತ್ರಗಳ ಬಲಕೆ – ಉರಗ, ಗರುಡ; ಉರಿ, ಜಲ; ಗಿರಿ, ವಜ್ರ; ತಿಮಿರ, ತರಣಿ;