ಪದ್ಯ ೭೮: ಪಾಂಡವರು ಅರಣ್ಯಕ್ಕೆ ಹೇಗೆ ತೆರಳಿದರು?

ಮುನಿಪ ಜಪಿಸುತ ನಡೆದನಗ್ನಿಯ
ವಿನುತಸೂಕ್ತವನೆತ್ತುಗೈದು ವಿ
ನನಿಲಜನು ದುಗುಡದಲಿ ಫಲುಗುಣ ಯಮಳರೊಂದಾಗಿ
ವನಿತೆಯನು ನಡುವಿಟ್ಟು ಹೊರವಂ
ಟನು ಯುಧಿಷ್ಠಿರನೃಪತಿ ನಿಯತದಿ
ನೆನೆವುತಿದ್ದನು ವೀರನಾರಾಯಣನ ಪದಯುಗವ (ಸಭಾ ಪರ್ವ, ೧೭ ಸಂಧಿ, ೭೮ ಪದ್ಯ)

ತಾತ್ಪರ್ಯ:
ವಿದುರನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಧೌಮ್ಯರು ಅಗ್ನಿಸೂಕ್ತವನ್ನು ಹೇಳುತ್ತಾ ಹೋದರು. ಭೀಮನು ಗದೆಯನ್ನೆತ್ತಿ ಹಿಡಿದು ಅರ್ಜುನ, ನಕುಲ ಸಹದೇವರೊಡನೆ, ದ್ರೌಪದಿಯನು ತಮ್ಮ ನಡುವೆ ಇರಿಸಿಕೊಂಡು ದುಃಖದಿಂದ ಹೋದನು. ಧರ್ಮರಾಯನು ಶ್ರೀಕೃಷ್ಣನ ಪಾದಕಮಲಗಳನ್ನು ಸ್ಮರಿಸುತ್ತಾ ಅರಣ್ಯಕ್ಕೆ ತೆರಳಿದನು.

ಅರ್ಥ:
ಮುನಿ: ಋಷಿ; ಜಪಿಸು: ಪಠಿಸು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ನಡೆ: ಚಲಿಸು; ಅಗ್ನಿ: ಬೆಂಕಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಸೂಕ್ತ: ಹಿತವಚನ ಅನಿಲಜ: ಭೀಮ; ದುಗುಡ: ದುಃಖ; ಯಮಳರು: ನಕುಲ ಸಹದೇವ; ವನಿತೆ: ಹೆಣ್ಣು; ನಡುವು: ಮಧ್ಯದೊಳಗೆ; ಹೊರವಂಟು: ಹೊರನಡೆದರು; ನೃಪತಿ: ರಾಜ; ನಿಯತ: ಅಚಲವಾದ, ನಿಶ್ಚಿತವಾದ; ಪದಯುಗ: ಚರಣಕಮಲ;

ಪದವಿಂಗಡಣೆ:
ಮುನಿಪ +ಜಪಿಸುತ +ನಡೆದನ್+ಅಗ್ನಿಯ
ವಿನುತ+ಸೂಕ್ತವನ್+ಎತ್ತುಗೈದುವಿನ್
ಅನಿಲಜನು +ದುಗುಡದಲಿ +ಫಲುಗುಣ +ಯಮಳರೊಂದಾಗಿ
ವನಿತೆಯನು +ನಡುವಿಟ್ಟು +ಹೊರವಂ
ಟನು +ಯುಧಿಷ್ಠಿರ+ನೃಪತಿ +ನಿಯತದಿ
ನೆನೆವುತಿದ್ದನು +ವೀರನಾರಾಯಣನ +ಪದಯುಗವ

ಅಚ್ಚರಿ:
(೧) ಧೌಮ್ಯರನ್ನು ಮುನಿಪ, ಭೀಮನನ್ನು ಅನಿಲಜ, ನಕುಲ ಸಹದೇವರನ್ನು ಯಮಳರು, ದ್ರೌಪದಿಯನ್ನು ವನಿತೆ ಎಂದು ಕರೆದಿರುವುದು

ಪದ್ಯ ೭೭: ಧೃತರಾಷ್ಟ್ರನು ವಿದುರನನ್ನು ಏನು ಕೇಳಿದ?

ಕಳುಹಿ ಮರಳಿಯೆ ವಿದುರನೃಪತಿಯ
ನಿಲಯಕೈತಂದನು ಕುಮಾರರ
ಕಳುಹಿ ಬಂದೈ ತಮ್ಮ ಮತವೇನಾ ಯುಧಿಷ್ಠಿರನ
ಉಳಿದವರ ಹದನೇನು ದ್ರೌಪದಿ
ಲಲನೆಯೇನೆಂದಳು ನಿಧಾನವ
ತಿಳಿದು ಬಂದೈ ಹೇಳೆನುತ ಧೃತರಾಷ್ಟ್ರ ಬೆಸಗೊಂಡ (ಸಭಾ ಪರ್ವ, ೧೭ ಸಂಧಿ, ೭೭ ಪದ್ಯ)

ತಾತ್ಪರ್ಯ:
ಪಾಂಡವರನ್ನು ಕಳುಹಿಸಿಕೊಟ್ಟು ವಿದುರನು ಧೃತರಾಷ್ಟ್ರನ ಮನೆಗೆ ಹೋದನು. ತಮ್ಮಾ ವಿದುರ, ಪಾಂಡವರನ್ನು ಕಳುಹಿಸಿ ಬಂದೆಯಾ? ಯುಧಿಷ್ಠಿರನ ಅಭಿಪ್ರಾಯವೇನು? ಉಳಿದವರು ಏನೆಂದು ಯೋಚಿಸುತ್ತಿರುವರು? ದ್ರೌಪದಿಯು ಏನೆಂದಳು, ಎಲ್ಲವನ್ನೂ ತಿಳಿದು ಬಂದಿರುವೆಯಾ, ಹೇಳು ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಕಳುಹಿ: ಬೀಳ್ಕೊಂಡು; ಮರಳು: ಹಿಂತಿರುಗು; ನೃಪತಿ: ರಾಜ; ನಿಲಯ: ಮನೆ; ಕುಮಾರ: ಮಕ್ಕಳು; ಬಂದು: ಆಗಮಿಸು; ಮತ: ವಿಚಾರ; ಉಳಿದ: ಮಿಕ್ಕ; ಹದ: ಸ್ಥಿತಿ; ಲಲನೆ: ಹೆಣ್ಣು; ನಿಧಾನ:ವಿಳಂಬ, ಸಾವಕಾಶ; ತಿಳಿದು: ಅರಿತು; ಹೇಳು: ತಿಳಿಸು; ಬೆಸ: ಕೇಳುವುದು; ಐತರು: ಬಂದು ಸೇರು; ತಮ್ಮ: ಅನುಜ;

ಪದವಿಂಗಡಣೆ:
ಕಳುಹಿ +ಮರಳಿಯೆ +ವಿದುರ+ನೃಪತಿಯ
ನಿಲಯಕ್+ಐತಂದನು +ಕುಮಾರರ
ಕಳುಹಿ +ಬಂದೈ +ತಮ್ಮ +ಮತವೇನಾ +ಯುಧಿಷ್ಠಿರನ
ಉಳಿದವರ +ಹದನೇನು+ ದ್ರೌಪದಿ
ಲಲನೆ+ಏನೆಂದಳು +ನಿಧಾನವ
ತಿಳಿದು +ಬಂದೈ +ಹೇಳೆನುತ +ಧೃತರಾಷ್ಟ್ರ +ಬೆಸಗೊಂಡ

ಅಚ್ಚರಿ:
(೧) ಕಳುಹಿ – ೧, ೩ ಸಾಲಿನ ಮೊದಲ ಪದ
(೨) ಕಳುಹಿ ಬಂದೈ, ತಿಳಿದು ಬಂದೈ – ಪದಗಳ ಬಳಕೆ – ೩, ೬ ಸಾಲು

ಪದ್ಯ ೭೬: ಕುಂತಿಯನ್ನು ಎಲ್ಲಿ ಇರಿಸಿದರು?

ಪುರವ ಹೊರವಂಟಿವರು ಗಂಗಾ
ವರನದಿಯ ತೀರದಲಿ ನಿಂದರು
ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ
ಗುರುಜನಕೆ ಪೊಡವಂಟು ಬೀಳ್ಕೊಂ
ಡರು ನದೀಜ ದ್ರೋಣ ಕೃಪರನು
ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ (ಸಭಾ ಪರ್ವ, ೧೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಪಾಂಡವರು ಊರ ಹೊರಕ್ಕೆ ಹೊರಟು, ಗಂಗಾನದಿಯ ತೀರದಲ್ಲಿ ನಿಂತರು. ಧೃತರಾಷ್ಟ್ರನಿಗೆ ಆಪ್ತರಾಗಿದ್ದ ತಮ್ಮ ಕೆಲವು ಪರಿಜನರನ್ನು ಹಸ್ತಿನಾಪುರಕ್ಕೆ ಕಳಿಸಿದರು. ಅವರು ಭೀಷ್ಮ, ದ್ರೋಣ, ಕೃಪರೇ ಮೊದಲಾದ ಗುರುಜರನ್ನು ಕಂಡು ಅವರ ಮೂಲಕ ಕುಂತಿಯನ್ನು ವಿದುರನ ಮನೆಯಲ್ಲಿರಲು ವ್ಯವಸ್ಥೆ ಮಾಡಿದರು.

ಅರ್ಥ:
ಪುರ: ಊರು; ಹೊರವಂಟು: ಹೊರಬಂದು; ವರ: ಶ್ರೇಷ್ಠ; ನದಿ: ಸರೋವರ; ತೀರ: ತಟ; ನಿಂದು: ನಿಲ್ಲು; ಪರಿಜನ: ಪರಿವಾರದ ಜನ; ಕಳುಹು: ಬೀಳ್ಕೊಡು; ಪಸಾಯಿತ: ಸಾಮಂತರಾಜ; ಗುರುಜನ: ಹಿರಿಯರು; ಪೊಡವಡು: ನಮಸ್ಕರಿಸು; ಬೀಳ್ಕೊಂಡು: ತೆರಳು; ಕರೆ: ಬರೆಮಾಡಿ; ನಿಲಿಸು: ಇಡು, ತಂಗು; ನಿವಾಸ; ಮನೆ;

ಪದವಿಂಗಡಣೆ:
ಪುರವ +ಹೊರವಂಟಿವರು +ಗಂಗಾ
ವರನದಿಯ +ತೀರದಲಿ +ನಿಂದರು
ಪರಿಜನವ +ಕಳುಹಿದರು +ಧೃತರಾಷ್ಟ್ರನ +ಪಸಾಯಿತರ
ಗುರುಜನಕೆ+ ಪೊಡವಂಟು +ಬೀಳ್ಕೊಂ
ಡರು +ನದೀಜ +ದ್ರೋಣ +ಕೃಪರನು
ಕರೆದು +ಕುಂತಿಯ+ ನಿಲಿಸಿದರು+ ವಿದುರನ+ ನಿವಾಸದಲಿ

ಅಚ್ಚರಿ:
(೧) ಭೀಷ್ಮರನ್ನು ನದೀಜ ಎಂದು ಕರೆದಿರುವುದು

ಪದ್ಯ ೭೫: ಭೀಮನು ಏಕೆ ಗದೆಯನ್ನು ಕೆಳಗಿಳಿಸಿದನು?

ತಿರುಗಿ ಕಂಡನು ಭೀಮನುಬ್ಬಿದ
ಹರುಷ ಹೃದಯನ ಮನದ ರೋಷದೊ
ಳರಸನನು ನೋಡಿದನು ಭೂಪತಿ ಮೊಗದ ಸನ್ನೆಯಲಿ
ತಿರುಹಿದನು ತಮ್ಮನನು ಗದೆಯನು
ತಿರುಗಿ ಹಾಯಿಕಿ ಹಿಡಿದು ಮಾರುತಿ
ಯರಸನಾಜ್ಞೆಯೊಳಂಜಿ ನಡೆದನು ನೃಪತಿ ಕೇಳೆಂದ (ಸಭಾ ಪರ್ವ, ೧೭ ಸಂಧಿ, ೭೫ ಪದ್ಯ)

ತಾತ್ಪರ್ಯ:
ದುಶ್ಯಾಸನನ ಅಣುಕ ನುಡಿಗೆ ಭೀಮನು ಹಿಂದಿರುಗಿ ನೋಡಿದನು. ಸಂತೋಷಾತಿರೇಕದಿಂದ ಬೀಗುತ್ತಿದ್ದ ದುಶ್ಯಾಸನನನ್ನು ಕಂಡು ಮಹಾಕೋಪದಿಂದ ಧರ್ಮಜನನ್ನು ನೋಡಿದನು. ಅಗ ಧರ್ಮಜನು ಕಣ್ಣಿನ ಸನ್ನೆಯಿಂದ ಭೀಮನನ್ನು ತಿರುಗಿಸಿದನು. ಎತ್ತಿ ಹಿಡಿದಿದ್ದ ಗದೆಯನ್ನು ಭೀಮನು ತಗ್ಗಿಸಿ ಅಣ್ಣನ ಆಜ್ಞೆಗೆ ಅಂಜಿ ಮುಂದಕ್ಕೆ ಹೋದನು.

ಅರ್ಥ:
ತಿರುಗು: ಸುತ್ತು, ಹಿಂದಿರುಗಿ ನೋಡು; ಕಂಡು: ನೋಡು; ಉಬ್ಬು: ಹೆಚ್ಚು; ಹರುಷ: ಸಂತಸ; ಹೃದಯ: ಎದೆ; ಮನ: ಮನಸ್ಸು; ರೋಷ: ಕೋಪ; ನೋಡು: ವೀಕ್ಷಿಸು; ಭೂಪತಿ: ರಾಜ; ಮೊಗ: ಮುಖ; ಸನ್ನೆ: ಗುರುತು, ಚಿಹ್ನೆ; ತಿರುಹು: ಸುತ್ತು; ತಮ್ಮ: ಅನುಜ; ಗದೆ: ಮುದ್ಗರ; ಹಾಯಿಕಿ: ಇಡು; ಹಿಡಿ: ಧರಿಸು; ಮಾರುತಿ: ಭೀಮ; ಅರಸ: ರಾಜ; ಆಜ್ಞೆ: ಆದೇಶ; ಅಂಜು: ಹೆದರು; ನಡೆ: ಮುಂದೆ ಹೋಗು; ನೃಪ: ರಾಜ;

ಪದವಿಂಗಡಣೆ:
ತಿರುಗಿ +ಕಂಡನು +ಭೀಮನ್+ಉಬ್ಬಿದ
ಹರುಷ +ಹೃದಯನ +ಮನದ+ ರೋಷದೊಳ್
ಅರಸನನು +ನೋಡಿದನು +ಭೂಪತಿ +ಮೊಗದ +ಸನ್ನೆಯಲಿ
ತಿರುಹಿದನು +ತಮ್ಮನನು +ಗದೆಯನು
ತಿರುಗಿ +ಹಾಯಿಕಿ +ಹಿಡಿದು +ಮಾರುತಿ
ಅರಸನ್+ಆಜ್ಞೆಯೊಳ್+ಅಂಜಿ +ನಡೆದನು +ನೃಪತಿ +ಕೇಳೆಂದ

ಅಚ್ಚರಿ:
(೧) ತಿರುಗಿ, ಅರಸ – ೧,೫; ೩,೬ ಸಾಲಿನ ಮೊದಲ ಪದ
(೨) ಅರಸ, ಭೂಪತಿ, ನೃಪತಿ – ಸಮನಾರ್ಥಕ ಪದ
(೩) ಮಾರುತಿ, ಭೂಪತಿ, ನೃಪತಿ – ಪ್ರಾಸ ಪದ

ಪದ್ಯ ೭೪: ದುಶ್ಯಾಸನು ಪಾಂಡವರನ್ನು ಹೇಗೆ ಅಣಕಿಸಿದನು?

ಅರಸ ಕೇಳಾಶ್ಚರ್ಯವನು ಗಜ
ಪುರದ ಬೀದಿಯೊಳಿವರು ಬರುತಿರೆ
ದುರುಳ ದುಶ್ಯಾಸನನು ಮಿಗೆ ಹರಿತಂದನೇಡಿಸುತ
ಬೆರಲನಾಡಿಸಿ ಹೋದರೀ ಹೋ
ದರಸು ಕಾನನದೆತ್ತು ಪುನರಪಿ
ಸರಿದವೆತ್ತುಗಳೆನುತ ಬಂದನು ಹಿಂದೆ ಪವನಜನ (ಸಭಾ ಪರ್ವ, ೧೭ ಸಂಧಿ, ೭೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ, ಪಾಂಡವರು ಹಸ್ತಿನಾಪುರದ ಬೀದಿಯಲ್ಲಿ ತೆರಳುತ್ತಿದ್ದಾಗ ನಡೆದ ಆಶ್ಚರ್ಯಕರ ಸಂಗತಿಯನ್ನು ಕೇಳು, ಪಾಂಡವರು ಬೀದಿಯಲ್ಲಿ ಬರುತ್ತಿದ್ದಾಗ ದುಷ್ಟನಾದ ದುಶ್ಯಾಸನನು ಅವರನ್ನು ಅಣಕಿಸುತ್ತಾ ಬಂದನು. ಅವರ ಕಡೆಗೆ ಬೆರಳನ್ನು ತೋರಿಸಿ, ಇವು ಕಾಡಿನ ಎಮ್ಮೆಗಳು, ಊರಿಗೆ ಬಂದಿದ್ದವು ಈಗ ಮತ್ತೆ ಕಾಡಿಗೆ ಹೋಗುತ್ತಿವೆ ಎಂದು ಅಣಕಿಸುತ್ತಾ ಭೀಮನ ಹಿಂದೆ ಬಂದನು.

ಅರ್ಥ:
ಅರಸ: ರಾಜ; ಆಶ್ಚರ್ಯ: ಸೋಜಿಗ, ಅದ್ಭುತ; ಗಜ: ಆನೆ; ಪುರ: ಊರು; ಬೀದಿ: ದಾರಿ, ಮಾರ್ಗ; ದುರುಳ: ದುಷ್ಟ; ಮಿಗೆ: ಅಧಿಕವಾಗಿ; ಹರಿ:ಧಾವಿಸು; ಏಡಿಸು: ಅವಹೇಳನ ಮಾಡು, ನಿಂದಿಸು; ಬೆರಳು: ಅಂಗುಲಿ; ಹೋದರು: ತೆರಳು; ಕಾನನ: ಕಾಡು; ಪುನರಪಿ: ಮತ್ತೆ; ಸರಿ: ಸಾರು, ಹೋಗು; ಬಂದನು: ಆಗಮಿಸು; ಹಿಂದೆ: ಹಿಂಭಾಗ; ಪವನಜ: ಭೀಮ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರ್ಯವನು+ ಗಜ
ಪುರದ+ ಬೀದಿಯೊಳ್+ಇವರು +ಬರುತಿರೆ
ದುರುಳ +ದುಶ್ಯಾಸನನು+ ಮಿಗೆ +ಹರಿ+ತಂದನ್+ಏಡಿಸುತ
ಬೆರಲನಾಡಿಸಿ+ ಹೋದರೀ +ಹೋ
ದರಸು +ಕಾನನದ್+ಎತ್ತು +ಪುನರಪಿ
ಸರಿದವ್+ಎತ್ತುಗಳೆನುತ +ಬಂದನು +ಹಿಂದೆ +ಪವನಜನ

ಅಚ್ಚರಿ:
(೧) ಪಾಂಡವರನ್ನು ಅಣಕಿಸುವ ಪರಿ – ಬೆರಲನಾಡಿಸಿ ಹೋದರೀ ಹೋದರಸು ಕಾನನದೆತ್ತು ಪುನರಪಿ ಸರಿದವೆತ್ತುಗಳೆನುತ

ಪದ್ಯ ೭೩: ಕೌರವರು ಇಂದ್ರಪ್ರಸ್ಥನಗರದ ಅಧಿಕಾರ ಹೇಗೆ ಪಡೆದರು?

ಹರಿದರಿಂದ್ರಪ್ರಸ್ಥಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ (ಸಭಾ ಪರ್ವ, ೧೭ ಸಂಧಿ, ೭೩ ಪದ್ಯ)

ತಾತ್ಪರ್ಯ:
ಕೌರವನ ದೂತರು, ಸಚಿವರು, ಇಂದ್ರಪ್ರಸ್ಥ ನಗರಕ್ಕೆ ಹೋಗಿ ಪಾಂಡವರ ಅರಮನೆಗೆ ಬೀಗಮುದ್ರೆ ಹಾಕಿದರು. ಪಾಂಡವರ ರಾಜ್ಯದ ನಾಡುಬೀಡುಗಳ ನಾಯಕರನ್ನು ಕರೆಸಿ ಕೌರವನ ಮುದ್ರೆಯಿಂದ ಅವರಿಗೆ ಅಧಿಕಾರವನ್ನು ನೀಡಿದರು.

ಅರ್ಥ:
ಹರಿದು: ಚಲಿಸು; ಚರರು: ದೂತರು; ಸಚಿವ: ಮಂತ್ರಿ; ಹೊಕ್ಕು: ಸೇರು; ಅರಮನೆ: ರಾಜರ ಆಲಯ; ಮುದ್ರಿಸು: ಕಟ್ಟು, ಗುರುತುಮಾಡು; ನಾಡು: ಪುರ, ಊರು; ಬೀಡು: ಮನೆ, ವಾಸಸ್ಥಳ; ಕರೆಸು: ಬರೆಮಾಡು; ಕಾಣಿಕೆ: ಉಡುಗೊರೆ; ಠಾಣೆ: ನೆಲೆ, ಬೀಡು; ಅಂತರ: ವ್ಯತ್ಯಾಸ, ಭೇದ; ನಾಯಕ: ಒಡೆಯ; ವಾಡಿ: ಗೋಡೆ; ಬಿಡಾರ; ಸಂವರಣೆ: ಸಜ್ಜು; ಸಂತವಿಸು: ತೃಪ್ತಿಗೊಳಿಸು; ಮುದ್ರೆ: ಗುರುತು;

ಪದವಿಂಗಡಣೆ:
ಹರಿದರ್+ಇಂದ್ರಪ್ರಸ್ಥಕ್+ಆತನ
ಚರರು+ ಸಚಿವರು +ಹೊಕ್ಕು +ಪಾಂಡವರ್
ಅರಮನೆಯ +ಮುದ್ರಿಸಿದರ್+ಅಲ್ಲಿಯ +ನಾಡು +ಬೀಡುಗಳ
ಕರೆಸಿ +ಕಾಣಿಕೆಗೊಂಡು +ಠಾಣಾಂ
ತರದ +ನಾಯಕ+ವಾಡಿಗಳ+ ಸಂ
ವರಣೆಗಳ +ಸಂತವಿಸಿದರು +ಕುರುರಾಜ +ಮುದ್ರೆಯಲಿ

ಅಚ್ಚರಿ:
(೧) ನಾಡು ಬೀಡು – ಜೋಡಿ ಪದ

ಪದ್ಯ ೭೨: ಕಾಡಿಗೆ ಹೊರಡಲು ಪಾಂಡವರು ಹೇಗೆ ಸಿದ್ಧರಾದರು?

ಕರಿಗಳನು ಕೌರವರ ಮಾವಂ
ತರಿಗೆ ಕೈಗೊಳಿಸಿದರು ರಥಹಯ
ತುರುಗಳನು ಕೈವರ್ತಿಸಿತು ಸೂತರಿಗೆ ಗೋವರಿಗೆ
ಸರಕನವನಿಪನನುಚರರಿಗು
ತ್ತರಿಸಿದರು ಪಾರಕವನೊಪ್ಪಿಸಿ
ವರ ಸುಭಟರಳವಡಿಸಿಕೊಂಡರು ಕಾನನೋಚಿತವ (ಸಭಾ ಪರ್ವ, ೧೭ ಸಂಧಿ, ೭೨ ಪದ್ಯ)

ತಾತ್ಪರ್ಯ:
ಸೈನ್ಯದ ಆನೆಗಳನ್ನು ಕೌರವನ ಮಾವುತರಿಗೂ, ರಥ ಕುದುರೆಗಳನ್ನು ಕೌರವನ ಸೂತರಿಗೂ, ಆಕಳು-ಎಮ್ಮೆಗಳನ್ನು ಕೌರವನ್ ಗೋಪಾಲರಿಗೂ, ವಸ್ತುಗಳನ್ನು ಕೌರವನ ಕಡೆಯವರಿಗೂ ವಹಿಸಿ ಕೊಟ್ಟ, ಕಾಡಿಗೆ ಬೇಕಾದ ವಸ್ತುಗಳನ್ನು ಪಾಂಡವರು ಜೋಡಿಸಿ ಕೊಂಡರು.

ಅರ್ಥ:
ಕರಿ: ಆನೆ; ಮಾವಂತ: ಆನೆಗಳನ್ನು ನೋಡಿಕೊಳ್ಳುವವ; ಕೈಗೊಳಿಸು: ಹಸ್ತಾಂತರಿಸು; ರಥ: ಬಂಡಿ; ಹಯ: ಕುದುಎ; ತುರು: ಗೋವು; ಸೂತ: ರಥವನ್ನು ನಡೆಸುವವನು; ಗೋವರಿಗೆ: ಗೋಪಾಲರು; ಸರಕ: ವಸ್ತು; ಅವನಿಪ: ರಾಜ; ಅನುಚರ: ಸೇವಕ; ಉತ್ತರಿಸು: ಉತ್ತರಕೊಡು, ಹೇಳು; ಪಾರಕ: ಆಚೆಗೆ ಒಯ್ಯುವ; ಒಪ್ಪಿಸು: ಸಮ್ಮತಿಸು; ವರ: ಶ್ರೇಷ್ಠ; ಭಟ: ಸೈನಿಕ; ಅಳವಡಿಸು: ಜೋಡಿಸು; ಕಾನನ: ಕಾಡು; ಉಚಿತ: ಸರಿಯಾದ;

ಪದವಿಂಗಡಣೆ:
ಕರಿಗಳನು +ಕೌರವರ +ಮಾವಂ
ತರಿಗೆ +ಕೈಗೊಳಿಸಿದರು+ ರಥ+ಹಯ
ತುರುಗಳನು +ಕೈವರ್ತಿಸಿತು +ಸೂತರಿಗೆ +ಗೋವರಿಗೆ
ಸರಕನ್+ಅವನಿಪನ್+ಅನುಚರರಿಗ್+
ಉತ್ತರಿಸಿದರು +ಪಾರಕವನ್+ಒಪ್ಪಿಸಿ
ವರ+ ಸುಭಟರ್+ಅಳವಡಿಸಿಕೊಂಡರು+ ಕಾನನ್+ಉಚಿತವ

ಅಚ್ಚರಿ:
(೧) ಮಾವಂತ, ಸೂತ, ಗೋವ – ಪದಗಳ ಬಳಕೆ

ಪದ್ಯ ೭೧: ಸಹದೇವನು ಮಂತ್ರಿಗಳಿಗೆ ಏನು ಹೇಳಿದ?

ಕರೆಸಿದನು ಪರಿವಾರವನು ನಿಮ
ಗರಸು ಕೌರವನೆಮ್ಮ ಗಜರಥ
ತುರಗ ಕೊಟ್ಟಿಗೆಯತ್ತು ಭಂಡಿ ಕೊಟಾರ ಕೊಪ್ಪರಿಗೆ
ಸರಕು ಸರ್ವಸ್ವಗಳು ಕೌರವ
ನರಮನೆಗೆ ನಡೆಯಲಿ ವನಾಂತದೊ
ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ (ಸಭಾ ಪರ್ವ, ೧೭ ಸಂಧಿ, ೭೧ ಪದ್ಯ)

ತಾತ್ಪರ್ಯ:
ಸಹದೇವನು ಸಚಿವರನ್ನು ಪರಿವಾರದವರನ್ನು ಕರೆಸಿ, ಇನ್ನು ಮುಂದೆ ಕೌರವನೇ ನಿಮ್ಮ ದೊರೆ, ಆನೆ, ಕುದುರೆಗಳ ಶಾಲೆ, ಗೋಶಾಲೆ, ಎತ್ತು ಬಂಡಿಗಳು, ಉಗ್ರಾಣ, ಕೊಪ್ಪರಿಗೆ ಸಮಸ್ತ ಸರಕುಗಳು ಕೌರವನರಮನೆಗೆ ಹೋಗಲಿ, ನಾವೆಲ್ಲರು ಅರಣ್ಯವಾಸದಲ್ಲಿರುತ್ತೇವೆ ಎಂದು ಹೇಳಿದನು.

ಅರ್ಥ:
ಕರೆಸು: ಬರೆಮಾಡು; ಪರಿವಾರ: ಸಂಬಂಧಿಕರು; ಅರಸು: ರಾಜ; ಗಜ: ಆನೆ; ರಥ: ಬಂಡಿ; ತುರಗ: ಕುದುರೆ; ಕೊಟ್ಟಿಗೆ: ದನದ ಹಟ್ಟಿ; ಎತ್ತು: ಬಸವ, ವೃಷಭ; ಭಂಡಿ:ಗಾಡಿ, ರಥ; ಕೊಟಾರ: ಉಗ್ರಾಣ, ಕಣಜ; ಕೊಪ್ಪರಿಗೆ: ದೊಡ್ಡ ಬಾಣಲೆ; ಸರಕು: ಸಾಮಾನು, ಸಾಮಗ್ರಿ; ಸರ್ವಸ್ವ: ಎಲ್ಲಾ; ಅರಮನೆ: ರಾಜರ ಆಲಯ; ನಡೆ: ಹೋಗು; ವನ: ಕಾಡು; ಅಂತ: ಕೊನೆ; ಅರುಹು: ಹೇಳು; ಸಚಿವ: ಮಂತ್ರಿ;

ಪದವಿಂಗಡಣೆ:
ಕರೆಸಿದನು +ಪರಿವಾರವನು +ನಿಮಗ್
ಅರಸು +ಕೌರವನ್+ಎಮ್ಮ +ಗಜರಥ
ತುರಗ +ಕೊಟ್ಟಿಗೆ+ಎತ್ತು +ಭಂಡಿ +ಕೊಟಾರ+ ಕೊಪ್ಪರಿಗೆ
ಸರಕು +ಸರ್ವಸ್ವಗಳು+ ಕೌರವನ್
ಅರಮನೆಗೆ +ನಡೆಯಲಿ +ವನಾಂತದೊಳ್
ಇರವು+ ನಮಗೆಂದ್+ಅರುಹಿದನು +ಸಚಿವರಿಗೆ+ ಸಹದೇವ

ಅಚ್ಚರಿ:
(೧) ಅರಸು ಅರಮನೆ – ಅರ ಪದದ ಬಳಕೆ
(೨) ಕೊಟಾರ ಕೊಪ್ಪರಿಗೆ; ಸಚಿವರಿಗೆ ಸಹದೇವ – ಕೊ, ಸ ಅಕ್ಷರದ ಜೋಡಿ ಪದ

ಪದ್ಯ ೭೦: ಪಾಂಡವ ಕುಮಾರರ ಸ್ಥಿತಿ ಹೇಗಿತ್ತು?

ಕೇಳಿದಭಿಮನ್ಯು ಪ್ರಮುಖ ಭೂ
ಪಾಲ ತನುಜರು ಸಚಿವರಾಪ್ತರು
ಪಾಳೆಯದ ತಲ್ಲಣದ ಖಯಖೋಡಿಯ ಮನೋವ್ಯಥೆಯ
ಹೇಳಲರಿಯೆನು ಬಂದು ಕಂಡರು
ಗೋಳಿಡುತ ಪದಕೆರಗಿದರು ನೃಪ
ನಾಲಿ ನೀರೇರಿದವು ನನೆದರು ನಯನವಾರಿಯಲಿ (ಸಭಾ ಪರ್ವ, ೧೭ ಸಂಧಿ, ೭೦ ಪದ್ಯ)

ತಾತ್ಪರ್ಯ:
ಪಾಂಡವರು ಕಾಡಿಗೆ ಹೊರಟ ಸುದ್ದಿಯನ್ನು ಕೇಳಿದ ಅಭಿಮನ್ಯು ಮುಂತಾದ ಪಾಂಡವರ ಕುಮಾರರು, ಸಚಿವರು, ಆಪ್ತರು ಮತ್ತು ಪಾಳೆಯದವರ ಮನಸ್ಸಿನ ದುಃಖವನ್ನು ನಾನು ಹೇಗೆ ವರ್ಣಿಸಲಿ, ಅವರೆಲ್ಲರೂ ಗೋಳಾಡುತ್ತಾ ಬಂದು ಧರ್ಮಜನ ಪಾದಕ್ಕೆರಗಿದರು, ಧರ್ಮಜನ ಕಣ್ಣಿನಲ್ಲಿ ನೀರು ತುಂಬಿರಲು ಅವರೆಲ್ಲರ ಕಣ್ಣೂ ಸಹ ನೀರಿನಲ್ಲಿ ಒದ್ದೆಯಾಗಿತ್ತು.

ಅರ್ಥ:
ಕೇಳು: ಆಲಿಸು; ಪ್ರಮುಖ: ಮುಖ್ಯ; ಭೂಪಾಲ: ರಾಜ; ತನುಜ: ಮಕ್ಕಳು; ಸಚಿವ: ಮಂತ್ರಿ; ಆಪ್ತ: ಹತ್ತಿರ; ಪಾಳೆ: ಸೀಮೆ; ತಲ್ಲಣ: ಅಂಜಿಕೆ, ಭಯ; ಖಯಖೋಡಿ: ಅಳುಕು, ಅಂಜಿಕೆ; ಮನೋವ್ಯಥೆ: ಮನಸ್ಸಿನ ಯಾತನೆ; ಅರಿ: ತಿಳಿ; ಹೇಳು: ತಿಳಿಸು; ಬಂದು: ಆಗಮಿಸಿ; ಕಂಡರು: ನೋಡಿದರು; ಗೋಳು: ಅಳು, ದುಃಖ; ಪದ: ಪಾದ, ಚರಣ; ಎರಗು: ನಮಸ್ಕರಿಸು; ನೃಪ: ರಾಜ; ಆಲಿ: ಕಣ್ಣು; ನೀರೇರು: ನೀರು ತುಂಬು; ನನೆ:ತೋಯು, ಒದ್ದೆಯಾಗು; ನಯನ: ಕಣ್ಣು; ವಾರಿ: ಜಲ;

ಪದವಿಂಗಡಣೆ:
ಕೇಳಿದ್+ಅಭಿಮನ್ಯು ಪ್ರಮುಖ +ಭೂ
ಪಾಲ+ ತನುಜರು +ಸಚಿವರ್+ಆಪ್ತರು
ಪಾಳೆಯದ +ತಲ್ಲಣದ +ಖಯಖೋಡಿಯ +ಮನೋವ್ಯಥೆಯ
ಹೇಳಲ್+ಅರಿಯೆನು +ಬಂದು +ಕಂಡರು
ಗೋಳಿಡುತ +ಪದಕೆರಗಿದರು +ನೃಪ
ನಾಲಿ +ನೀರ್+ಏರಿದವು +ನನೆದರು +ನಯನ+ವಾರಿಯಲಿ

ಅಚ್ಚರಿ:
(೧) ಭೂಪಾಲ, ನೃಪ – ಸಮನಾರ್ಥಕ ಪದ
(೨) ದುಃಖವನ್ನು ವಿವರಿಸುವ ಪರಿ – ಹೇಳಲರಿಯೆನು ಬಂದು ಕಂಡರು ಗೋಳಿಡುತ ಪದಕೆರಗಿದರು ನೃಪನಾಲಿ ನೀರೇರಿದವು ನನೆದರು ನಯನವಾರಿಯಲಿ
(೩) ನ ಕಾರದ ಸಾಲು ಪದ – ನೃಪ ನಾಲಿ ನೀರೇರಿದವು ನನೆದರು ನಯನವಾರಿಯಲಿ

ಪದ್ಯ ೬೯: ಜನರು ಪಾಂಡವರನ್ನು ನೋಡಿ ಹೇಗೆ ಮರುಗಿದರು?

ಹರನ ಜೋಡು ಮುರಾಂತಕನ ಸಮ
ದೊರೆ ವಿರಿಂಚನ ಪಾಡು ಶಕ್ರನ
ಸರಿಸದವರಿಗೆ ಭಂಗವೀ ವಿಧಿಯೀ ವಿಪತ್ತುಗಳೆ
ನರರನೀ ಕೌರವರ ಮಿಕ್ಕಿನ
ನೊರಜುಗಳ ಪಾಡೇನು ಶಿವ ಶಿವ
ಕರುಣಿಯಲ್ಲ ವಿಧಾತ್ರನೆಂದುದು ನೆರೆದ ಜನನಿಕರ (ಸಭಾ ಪರ್ವ, ೧೭ ಸಂಧಿ, ೬೯ ಪದ್ಯ)

ತಾತ್ಪರ್ಯ:
ಜನರ ಗುಂಪು ಪಾಂಡವರನ್ನು ನೋಡುತ್ತಾ, ಇವರು ಶಿವ ವಿಷ್ಣುವಿನ ಸರಿಸಮಾನರಾದ ವೀರರು. ಬ್ರಹ್ಮ ದೇವೆಂದ್ರರಿಗೆ ಸರಿಸಮಾನರು. ಅಂತಹವರಿಗೆ ಈ ವಿಪತ್ತು ಈ ತೀಜೋಹಾನಿಗಳಾದವೇ? ಇವರಿಗೇ ಹೀಗಾದ ಮೇಲೆ ಸಾಮಾನ್ಯ ಮನುಷ್ಯರು, ಕೌರವರು, ಮತ್ತಿತರ ಅಲ್ಪವ್ಯಕ್ತಿಗಳ ಪಾಡೇನು? ಶಿವ ಶಿವಾ ಎಂದು ಕೊರಗುತ್ತಾ ಬ್ರಹ್ಮನು ಕರುಣಾಶಾಲಿಯಲ್ಲ ಎಂದು ಮಾತಾಡಿಕೊಳ್ಳುತ್ತಿದ್ದರು.

ಅರ್ಥ:
ಹರ: ಶಿವ; ಜೋಡು:ಜೊತೆ,ಸಮಾನ; ಮುರಾಂತಕ: ವಿಷ್ಣು, ಕೃಷ್ಣ; ಸಮ: ಸರಿಸಮಾನವಾದ; ದೊರೆ: ರಾಜ; ವಿರಿಂಚ: ಬ್ರಹ್ಮ; ಪಾಡು: ಸ್ಥಿತಿ, ಅವಸ್ಥೆ; ಶಕ್ರ: ಇಂದ್ರನ; ಸರಿಸ: ಸಮ, ಸಾಟಿ; ಭಂಗ: ಮುರಿ, ಚೂರುಮಾಡು; ವಿಧಿ: ನಿಯಮ, ಆಜ್ಞೆ, ಆದೇಶ; ವಿಪತ್ತು: ತೊಂದರೆ; ನರ: ಮನುಷ್ಯ; ಮಿಕ್ಕು: ಉಳಿದ; ನೊರಜು: ಸಣ್ಣ ಕೀಟ, ಅಲ್ಪವಾದ; ಕರುಣಿ: ದಯೆ; ವಿಧಾತೃ: ಬ್ರಹ್ಮ, ಸೃಷ್ಟಿಸುವವ; ನೆರೆ: ಸೇರಿದ; ಜನನಿಕರ: ಜನರ ಗುಂಪು;

ಪದವಿಂಗಡಣೆ:
ಹರನ +ಜೋಡು +ಮುರಾಂತಕನ+ ಸಮ
ದೊರೆ +ವಿರಿಂಚನ +ಪಾಡು +ಶಕ್ರನ
ಸರಿಸದವರಿಗೆ+ ಭಂಗವ್+ಈ+ ವಿಧಿ+ಈ +ವಿಪತ್ತುಗಳೆ
ನರರನ್+ಈ+ ಕೌರವರ+ ಮಿಕ್ಕಿನ
ನೊರಜುಗಳ +ಪಾಡೇನು +ಶಿವ +ಶಿವ
ಕರುಣಿಯಲ್ಲ +ವಿಧಾತ್ರನೆಂದುದು +ನೆರೆದ +ಜನನಿಕರ

ಅಚ್ಚರಿ:
(೧) ಜನರು ಮರಗುವ ಪರಿ – ನರರನೀ ಕೌರವರ ಮಿಕ್ಕಿನ ನೊರಜುಗಳ ಪಾಡೇನು ಶಿವ ಶಿವ
ಕರುಣಿಯಲ್ಲ ವಿಧಾತ್ರನೆಂದುದು ನೆರೆದ ಜನನಿಕರ