ಪದ್ಯ ೧೯: ಮಾರ್ಕಂಡೇಯ ಮುನಿಗಳು ಎಲ್ಲಿಗೆ ಪ್ರಯಾಣ ಬಳಸಿದರು?

ಎಂದು ಮಾರ್ಕಂಡೇಯ ಮುನಿ ಯಮ
ನಂದನನನಿತಿಹಾಸ ಕಥೆಗಳ
ಲಂದವಿಟ್ಟನು ಚಿತ್ತವನು ಖಯಖೋಡಿಗಳ ಕಳೆದು
ಕಂದು ಕಸರಿಕೆಯೇಕೆ ನಿಮಗೆ ಮು
ಕುಂದನೊಲವಿದೆ ಬಯಕೆ ಬೇರೇ
ಕೆಂದು ಮಾರ್ಕಂಡೇಯ ನಾರದರಡರಿದರು ನಭವ (ಅರಣ್ಯ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಹೀಗೆ ಮಾರ್ಕಂಡೇಯ ಮುನಿಯು ಇತಿಹಾಸ ಕಥೆಗಳಿಂದ ಧರ್ಮಜನ ಮನಸ್ಸಿನ ಚಿಂತೆ, ಕಳವಳಗಳನ್ನು ಕಳೆದು ಸಂತೋಷ ಪಡಿಸಿದನು. ನಿಮಗೆ ಶ್ರೀಕೃಷ್ಣನ ಒಲವಿದೆ. ಮನಸ್ಸಿನಲ್ಲಿ ಚಿಂತೆ ದುಗುಡಗಳು ಬೇಡ, ಅವನೊಲವಿದ್ದ ಮೇಲೆ ಏತಕ್ಕೂ ಚಿಂತಿಸಬೇಡಿರಿ ಎಂದು ಹೇಳಿ ಮಾರ್ಕಂಡೇಯ ಮುನಿಗಳು ಮತ್ತು ನಾರದರು ಆಕಾಶಮಾರ್ಗದಲ್ಲಿ ಹೊರಟು ಹೋದರು.

ಅರ್ಥ:
ಮುನಿ: ಋಷಿ; ನಂದನ: ಮಗ; ಇತಿಹಾಸ: ಚರಿತ್ರೆ; ಕಥೆ: ವೃತ್ತಾಮ್ತ; ಅಂದವಿಡು: ಅಲಂಕರಿಸು; ಚಿತ್ತ: ಮನಸ್ಸು; ಖಯಖೋಡಿ: ಅಳುಕು, ಅಂಜಿಕೆ; ಕಳೆದು: ದೂರಮಾಡು; ಕಂದು: ಕಳಾಹೀನ; ಕಸರು: ತೊಂದರೆ; ಒಲವು: ಪ್ರೀತಿ; ಬಯಕೆ: ಇಷ್ಟ; ಅಡರು: ಮೇಲಕ್ಕೆ ಹತ್ತು; ನಭ: ಆಗಸ;

ಪದವಿಂಗಡಣೆ:
ಎಂದು +ಮಾರ್ಕಂಡೇಯ +ಮುನಿ +ಯಮ
ನಂದನನನ್+ಇತಿಹಾಸ +ಕಥೆಗಳಲ್
ಅಂದವಿಟ್ಟನು +ಚಿತ್ತವನು +ಖಯಖೋಡಿಗಳ +ಕಳೆದು
ಕಂದು +ಕಸರಿಕೆ+ಏಕೆ +ನಿಮಗೆ+ ಮು
ಕುಂದನ್+ಒಲವಿದೆ +ಬಯಕೆ+ ಬೇರೇ
ಕೆಂದು+ ಮಾರ್ಕಂಡೇಯ +ನಾರದರ್+ಅಡರಿದರು +ನಭವ

ಅಚ್ಚರಿ:
(೧) ಎಂದು, ಕಂದು; ನಂದನ, ಮುಕುಂದನ – ಪದಗಳ ಬಳಕೆ

ಪದ್ಯ ೨೫: ಅರ್ಜುನನ ಪರಾಕ್ರಮದ ಬಗ್ಗೆ ಶಿವನು ಪಾರ್ವತಿಗೆ ಏನು ಹೇಳಿದ?

ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ
ಮೀರಿ ಹತ ಕಂತುಕದವೊಲ್ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ (ಅರಣ್ಯ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕೈಯಲ್ಲಿದ್ದ ಆಯುಧಗಳು ಹಾರಿಹೋದವೆಂದು ಅವನೇನಾದರೂ ಹೆದರಿಕೊಂಡನೇ? ವೀರರಸದ ಮೇಲಿನ ನೊರೆಯಾದರೂ ಆರಿತೇ? ಅವನ ಬಾಹು ಸತ್ವಕ್ಕೆ ಏನಾದರೂ ಕುಂದು ಬಂದೀತೇ? ಕೆಳಕ್ಕೆ ಹಾಕಿದ ಚಂಡಿನಂತೆ ಅವನ ತೋಳುಗಳು ನೆಗೆಯುತ್ತಿವೆ, ಅವನು ಸೆಡ್ಡು ಹೊಡೆಯುವುದನ್ನು ನೋಡು ಎಂದು ಶಿವನು ಪಾರ್ವತಿಗೆ ಹೇಳಿದನು.

ಅರ್ಥ:
ಹಾರು: ಲಂಘಿಸು; ಆಯುಧ: ಶಸ್ತ್ರ; ಭೀತಿ: ಭಯ; ಮಾರುಹೋಗು: ವಶವಾಗು, ಅಧೀನವಾಗು; ವೀರ: ಶೂರ; ಅರಸ: ರಾಜ; ನೊರೆ: ಬುರುಗು; ಆರು: ಬತ್ತುಹೋಗು; ನಿಜ: ತನ್ನ, ದಿಟ; ಬಾಹು: ಭುಜ; ಸತ್ವ: ಸಾರ; ಖಯಖೋಡಿ: ಅಳುಕು, ಅಂಜಿಕೆ; ಮೀರು: ಉಲ್ಲಂಘಿಸು; ಹತ: ಕೊಂದ, ಸಂಹರಿಸಿದ; ಕಂತುಕ: ಚೆಂಡು; ಪುಟ: ನೆಗೆತ; ಏರು: ಹೆಚ್ಚಾಗು; ವಿಕ್ರಮ: ಗತಿ, ಗಮನ; ಚಡಾಳಿಸು: ವೃದ್ಧಿಹೊಂದು, ಅಧಿಕವಾಗು; ಬೀರು: ಒಗೆ, ಎಸೆ, ತೋರು; ಭುಜ: ಬಾಹು; ಭಾರಿ:ಭಾರವಾದುದು, ತೂಕವಾದುದು; ಅಂಕ: ತೊಡೆ, ಯುದ್ಧ; ದೇವಿ: ಭಗವತಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಹಾರಿತ್+ಆಯುಧವೆಂದು +ಭೀತಿಗೆ
ಮಾರುವೋದನೆ+ ವೀರರಸ+ ನೊರೆ
ಯಾರಿತೇ +ನಿಜ+ ಬಾಹುಸತ್ವದೊಳುಂಟೆ +ಖಯಖೋಡಿ
ಮೀರಿ +ಹತ+ ಕಂತುಕದವೊಲ್+ಪುಟವ್
ಏರುತಿದೆ +ವಿಕ್ರಮ +ಚಡಾಳಿಸಿ
ಬೀರುತಿದೆ +ಭುಜ +ಭಾರಿಯಂಕವ+ ದೇವಿ +ನೋಡೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀರುತಿದೆ ಭುಜ ಭಾರಿಯಂಕವ
(೨) ಅರ್ಜುನನ ಪರಾಕ್ರಮದ ವರ್ಣನೆ – ಹಾರಿತಾಯುಧವೆಂದು ಭೀತಿಗೆ ಮಾರುವೋದನೆ ವೀರರಸ ನೊರೆ ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ

ಪದ್ಯ ೭೦: ಪಾಂಡವ ಕುಮಾರರ ಸ್ಥಿತಿ ಹೇಗಿತ್ತು?

ಕೇಳಿದಭಿಮನ್ಯು ಪ್ರಮುಖ ಭೂ
ಪಾಲ ತನುಜರು ಸಚಿವರಾಪ್ತರು
ಪಾಳೆಯದ ತಲ್ಲಣದ ಖಯಖೋಡಿಯ ಮನೋವ್ಯಥೆಯ
ಹೇಳಲರಿಯೆನು ಬಂದು ಕಂಡರು
ಗೋಳಿಡುತ ಪದಕೆರಗಿದರು ನೃಪ
ನಾಲಿ ನೀರೇರಿದವು ನನೆದರು ನಯನವಾರಿಯಲಿ (ಸಭಾ ಪರ್ವ, ೧೭ ಸಂಧಿ, ೭೦ ಪದ್ಯ)

ತಾತ್ಪರ್ಯ:
ಪಾಂಡವರು ಕಾಡಿಗೆ ಹೊರಟ ಸುದ್ದಿಯನ್ನು ಕೇಳಿದ ಅಭಿಮನ್ಯು ಮುಂತಾದ ಪಾಂಡವರ ಕುಮಾರರು, ಸಚಿವರು, ಆಪ್ತರು ಮತ್ತು ಪಾಳೆಯದವರ ಮನಸ್ಸಿನ ದುಃಖವನ್ನು ನಾನು ಹೇಗೆ ವರ್ಣಿಸಲಿ, ಅವರೆಲ್ಲರೂ ಗೋಳಾಡುತ್ತಾ ಬಂದು ಧರ್ಮಜನ ಪಾದಕ್ಕೆರಗಿದರು, ಧರ್ಮಜನ ಕಣ್ಣಿನಲ್ಲಿ ನೀರು ತುಂಬಿರಲು ಅವರೆಲ್ಲರ ಕಣ್ಣೂ ಸಹ ನೀರಿನಲ್ಲಿ ಒದ್ದೆಯಾಗಿತ್ತು.

ಅರ್ಥ:
ಕೇಳು: ಆಲಿಸು; ಪ್ರಮುಖ: ಮುಖ್ಯ; ಭೂಪಾಲ: ರಾಜ; ತನುಜ: ಮಕ್ಕಳು; ಸಚಿವ: ಮಂತ್ರಿ; ಆಪ್ತ: ಹತ್ತಿರ; ಪಾಳೆ: ಸೀಮೆ; ತಲ್ಲಣ: ಅಂಜಿಕೆ, ಭಯ; ಖಯಖೋಡಿ: ಅಳುಕು, ಅಂಜಿಕೆ; ಮನೋವ್ಯಥೆ: ಮನಸ್ಸಿನ ಯಾತನೆ; ಅರಿ: ತಿಳಿ; ಹೇಳು: ತಿಳಿಸು; ಬಂದು: ಆಗಮಿಸಿ; ಕಂಡರು: ನೋಡಿದರು; ಗೋಳು: ಅಳು, ದುಃಖ; ಪದ: ಪಾದ, ಚರಣ; ಎರಗು: ನಮಸ್ಕರಿಸು; ನೃಪ: ರಾಜ; ಆಲಿ: ಕಣ್ಣು; ನೀರೇರು: ನೀರು ತುಂಬು; ನನೆ:ತೋಯು, ಒದ್ದೆಯಾಗು; ನಯನ: ಕಣ್ಣು; ವಾರಿ: ಜಲ;

ಪದವಿಂಗಡಣೆ:
ಕೇಳಿದ್+ಅಭಿಮನ್ಯು ಪ್ರಮುಖ +ಭೂ
ಪಾಲ+ ತನುಜರು +ಸಚಿವರ್+ಆಪ್ತರು
ಪಾಳೆಯದ +ತಲ್ಲಣದ +ಖಯಖೋಡಿಯ +ಮನೋವ್ಯಥೆಯ
ಹೇಳಲ್+ಅರಿಯೆನು +ಬಂದು +ಕಂಡರು
ಗೋಳಿಡುತ +ಪದಕೆರಗಿದರು +ನೃಪ
ನಾಲಿ +ನೀರ್+ಏರಿದವು +ನನೆದರು +ನಯನ+ವಾರಿಯಲಿ

ಅಚ್ಚರಿ:
(೧) ಭೂಪಾಲ, ನೃಪ – ಸಮನಾರ್ಥಕ ಪದ
(೨) ದುಃಖವನ್ನು ವಿವರಿಸುವ ಪರಿ – ಹೇಳಲರಿಯೆನು ಬಂದು ಕಂಡರು ಗೋಳಿಡುತ ಪದಕೆರಗಿದರು ನೃಪನಾಲಿ ನೀರೇರಿದವು ನನೆದರು ನಯನವಾರಿಯಲಿ
(೩) ನ ಕಾರದ ಸಾಲು ಪದ – ನೃಪ ನಾಲಿ ನೀರೇರಿದವು ನನೆದರು ನಯನವಾರಿಯಲಿ

ಪದ್ಯ ೪೬: ಜನರೇಕೆ ಧರ್ಮಜನನ್ನು ನೋಡಿ ಮರುಗಿದರು?

ಎಳ್ಳನಿತು ಖಯಖೋಡಿ ಚಿತ್ತದೊ
ಳೆಲ್ಲ ನಿಜಪಾಂಡಿತ್ಯ ಪರಿಣತಿ
ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕ ವಿಸ್ತಾರ
ಖುಲ್ಲರೊಡನೆಯ ಖೇಳಮೇಳಕೆ
ಚಲ್ಲಣವ ವೆಂಟಣಿಸಲಾ ಜನ
ವೆಲ್ಲ ಮರುಗಿತು ಧರ್ಮಜನ ಮರುಜೂಜಿನುಬ್ಬಟೆಗೆ (ಸಭಾ ಪರ್ವ, ೧೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜನಿಗೆ ಎಳ್ಳಷ್ಟು ತಾನು ಸೋಲಬಹುದೆಂಬ ಆತಂಕ, ಭಯ ವಿರಲಿಲ್ಲ. ತನ್ನ ನಿಜಪಾಂಡಿತ್ಯ, ಬುದ್ಧಿವಂತಿಕೆ, ಕೌಶಲವು ಕೈಲ್ಲಿದ್ದ ಬಿಲ್ಲನ್ನು ಹೊರಹಾಕಿತು, ಬುದ್ಧಿವಂತಿಕೆ ವಿವೇಕಗಳು ಬೆದರಿಹೋದವು, ನೀಚರೊಡನೆ ಆಟವಾಡಲು ಧರ್ಮಜನು ಸಿದ್ಧನಾಗಲು, ಸಭೆಯಲ್ಲಿದ್ದ ಜನರೆಲ್ಲರೂ ಧರ್ಮಜನ್ ಉತ್ಸಾಹವನ್ನು ನೋಡಿ ಮರುಗಿದರು.

ಅರ್ಥ:
ಖಯಖೋಡಿ: ಅಳುಕು, ಅಂಜಿಕೆ; ಎಳ್ಳನಿತು: ಸ್ವಲ್ಪವೂ; ಚಿತ್ತ: ಮನಸ್ಸು; ನಿಜ: ನೈಜ, ದಿಟ; ಪಾಂಡಿತ್ಯ: ವಿದ್ವತ್ತು, ಜ್ಞಾನ; ಪರಿಣತ: ಬುದ್ಧಿವಂತನಾದ; ಬಿಲ್ಲು: ಚಾಪ; ಬಿಸುಟು: ಹೊರಹಾಕು; ಬೆದರು: ಭಯ, ಅಂಜಿಕೆ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ವಿಸ್ತಾರ: ಹರಹು, ವ್ಯಾಪ್ತಿ; ಖುಲ್ಲ: ಅಲ್ಪತನ, ಕ್ಷುದ್ರತೆ, ದುಷ್ಟ; ಖೇಳ: ಆಟ; ಮೇಳ: ಗುಂಪು; ಚಲ್ಲಣ: ಷರಾಯಿ, ಚಡ್ಡಿ;
ವೆಂಟಣಿಸು: ಮುತ್ತಿಗೆ ಹಾಕು; ಮರುಗು: ತಳಮಳ, ಸಂಕಟ; ಮರು: ಪುನಃ; ಉಬ್ಬಟೆ: ಉತ್ಸಾಹ;

ಪದವಿಂಗಡಣೆ:
ಎಳ್ಳನಿತು+ ಖಯಖೋಡಿ +ಚಿತ್ತದೊ
ಳಿಲ್ಲ+ ನಿಜಪಾಂಡಿತ್ಯ+ ಪರಿಣತಿ
ಬಿಲ್ಲ+ ಬಿಸುಟುದು +ಬೆದರಿಹೋಯ್ತು +ವಿವೇಕ +ವಿಸ್ತಾರ
ಖುಲ್ಲರೊಡನೆಯ+ ಖೇಳಮೇಳಕೆ
ಚಲ್ಲಣವ +ವೆಂಟಣಿಸಲ್+ಆ+ ಜನ
ವೆಲ್ಲ +ಮರುಗಿತು +ಧರ್ಮಜನ +ಮರು+ಜೂಜಿನ್+ಉಬ್ಬಟೆಗೆ

ಅಚ್ಚರಿ:
(೧) ಸ್ವಲ್ಪವೂ ಅಳುಕಿಲ್ಲವೆಂದು ಹೇಳಲು – ಎಳ್ಳನಿತು ಖಯಖೋಡಿ ಚಿತ್ತದೊಳೆಲ್ಲ
(೨) ಧರ್ಮಜನ ಸ್ಥಿತಿಯನ್ನು ಹೇಳುವ ಪರಿ – ನಿಜಪಾಂಡಿತ್ಯ ಪರಿಣತಿ ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕ ವಿಸ್ತಾರ

ಪದ್ಯ ೩೪: ಕೃಷ್ಣನು ಅರ್ಜುನನನ್ನು ಏನು ಮಾಡುವುದರಿಂದ ತಡೆದನು?

ಎನುತಡಾಯ್ದವನೊರೆಯೊಳುಗಿದ
ರ್ಜುನನು ತನ್ನಯ ಕೊರಳ ಸಂದಿಗೆ
ಮನದೊಳಗೆ ಖಯಖೋಡಿಯಿಲ್ಲದೆ ಚಾಚಿದನು ಬಳಿಕ
ದನುಜರಿಪುವಡಹಾಯ್ದು ಪಿಡಿದೀ
ತನ ಕೃಪಾಣವ ಕೊಂಡು ನಿನ್ನಯ
ನೆನಹಿದೇನೈ ಪಾರ್ಥ ಹೇಳೆನ್ನಾಣೆ ಹೇಳೆಂದ (ಕರ್ಣ ಪರ್ವ, ೧೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹೀಗೆ ಧರ್ಮಜನನ್ನು ತನ್ನ ಮಾತುಗಳಿಂದ ಅರಿದ ಅರ್ಜುನನು ಕತ್ತಿಯನ್ನು ತನ್ನ ಒರೆಯಿಂದ ತೆಗೆದು ತನ್ನ ಕುತ್ತಿಗೆಯನ್ನು ಅಂಜಿಕೆಯ ಲವಲೇಶವಿಲ್ಲದೆ ಕೊಯ್ದುಕೊಳ್ಳಲು ಬೀಸುತ್ತಿರಲು, ಇದನ್ನು ನೋಡಿದ ಶ್ರೀಕೃಷ್ಣನು ತಕ್ಷಣವೇ ಅವನ ಮಧ್ಯ ಬಂದು ಅವನ ಕೈಯ ಖಡ್ಗವನ್ನು ತೆಗೆದುಕೊಂಡು ಅರ್ಜುನ ನೀನು ಏನು ಮಾಡಬೇಕೆಂದು ಹೀಗೆ ಮಾಡುತ್ತಿರುವೆ? ಹೇಳು ನನ್ನಾಣೆ ಹೇಳು ಎಂದು ಕೇಳಿದನು.

ಅರ್ಥ:
ಎನುತ: ಹೀಗೆ ಹೇಳುತ್ತಾ; ಆಯ್ದ: ಆಯುಧ, ಶಸ್ತ್ರ; ಒರೆ: ಕತ್ತಿಯನ್ನು ಇಡುವ ಸಾಧನ, ತುಂಬು; ಉಗಿದು: ಹೊರತೆಗೆದು; ಕೊರಳು: ಕತ್ತು; ಸಂಧಿ: ಸೇರಿವೆ, ಸಂಯೋಗ; ಮನ: ಮನಸ್ಸು; ಖಯಖೋಡಿ: ಅಳುಕು, ಅಂಜಿಕೆ; ಚಾಚು: ಹರಡು; ಬಳಿಕ: ನಂತರ; ದನುಜ: ರಾಕ್ಷಸ; ರಿಪು: ವೈರಿ; ದನುಜರಿಪು: ಕೃಷ್ಣ; ಅಡಹಾಯ್ದು: ಅಡ್ಡಬಂದು; ಪಿಡಿ: ಹಿಡಿ; ಕೃಪಾಣ: ಕತ್ತಿ; ಕೊಂಡು: ತೆಗೆದು; ನೆನಹು: ಯೋಚನೆ; ಆಣೆ: ಪ್ರಮಾಣ; ಹೇಳು: ತಿಳಿಸು;

ಪದವಿಂಗಡಣೆ:
ಎನುತಡ್+ಆಯ್ದವನ್+ಒರೆಯೊಳ್+ಉಗಿದ್
ಅರ್ಜುನನು +ತನ್ನಯ +ಕೊರಳ +ಸಂದಿಗೆ
ಮನದೊಳಗೆ +ಖಯಖೋಡಿಯಿಲ್ಲದೆ+ ಚಾಚಿದನು +ಬಳಿಕ
ದನುಜರಿಪುವ್+ಅಡಹಾಯ್ದು +ಪಿಡಿದೀ
ತನ +ಕೃಪಾಣವ +ಕೊಂಡು +ನಿನ್ನಯ
ನೆನಹು+ಇದೇನೈ+ ಪಾರ್ಥ +ಹೇಳ್+ಎನ್ನಾಣೆ +ಹೇಳೆಂದ

ಅಚ್ಚರಿ:
(೧) ಖಯಖೋಡಿ – ಪದದ ಬಳಕೆ