ಪದ್ಯ ೭೧: ಪಾಂಡವರು ಯಾವ ಸುದ್ದಿಯನ್ನು ಕೇಳಿದರು?

ಕೇಳಿದರು ಪಾಂಡವರು ಕುರು ಭೂ
ಪಾಲಕನ ಸಂಕಲ್ಪವನು ಪಾ
ತಾಳದಲಿ ಸುರವೈರಿ ವರ್ಗದ ಸತ್ಯ ಸಂಗತಿಯ
ಮೇಲಣಧ್ವರ ಕರ್ಮವನು ನಗು
ತಾಲಿಸಿದರಡಿಗಡಿಗೆ ಲಕ್ಷ್ಮೀ
ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ (ಅರಣ್ಯ ಪರ್ವ, ೨೨ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕೌರವನು ಪಾತಾಳದಲ್ಲಿ ದೈತ್ಯರ ಸ್ನೇಹ ಮಾಡಿದುದನ್ನೂ, ಅವನು ರಾಜ್ಯವನ್ನು ಕೊಡದಿರುವ ಸಂಕಲ್ಪವನ್ನೂ ಕೇಳಿದರು. ಅವನು ಯಜ್ಣಮಾಡಿದ ಸುದ್ದಿಯನ್ನೂ ನಗುತ್ತಾ ಕೇಳಿದರು. ಲಕ್ಷ್ಮೀರಮಣನಾದ ವೀರನಾರಾಯಣನ ಪಾದಕಮಲಗಳನ್ನು ನೆನೆಯುತ್ತಿದ್ದರು.

ಅರ್ಥ:
ಕೇಳು: ಆಲಿಸು; ಭೂಪಾಲ: ರಾಜ; ಸಂಕಲ್ಪ: ನಿರ್ಧಾರ; ಪಾತಾಳ: ಅಧೋಲೋಕ; ಸುರವೈರಿ: ರಾಕ್ಷಸ; ವರ್ಗ: ಗುಂಪು; ಸತ್ಯ: ನಿಜ; ಸಂಗತಿ: ವಿಚಾರ; ಮೇಲಣ: ಆನಂತರ; ಅಧ್ವರ: ಯಾಗ; ಕರ್ಮ: ಕಾರ್ಯ; ನಗುತ: ಸಂತಸ; ಆಲಿಸು: ಕೇಳು; ಅಡಿಗಡಿಗೆ: ಮತ್ತೆ ಮತ್ತೆ; ನೆನೆ: ಜ್ಞಾಪಿಸು;

ಪದವಿಂಗಡಣೆ:
ಕೇಳಿದರು +ಪಾಂಡವರು +ಕುರು +ಭೂ
ಪಾಲಕನ +ಸಂಕಲ್ಪವನು +ಪಾ
ತಾಳದಲಿ +ಸುರವೈರಿ +ವರ್ಗದ +ಸತ್ಯ +ಸಂಗತಿಯ
ಮೇಲಣ್+ಅಧ್ವರ +ಕರ್ಮವನು +ನಗುತ
ಆಲಿಸಿದರ್+ಅಡಿಗಡಿಗೆ +ಲಕ್ಷ್ಮೀ
ಲೋಲನ್+ಅಂಘ್ರಿಯ +ನೆನೆವುತಿದ್ದರು +ವೀರ +ನರಯಣನ

ಅಚ್ಚರಿ:
(೧) ರಾಕ್ಷಸರು ಎಂದು ಹೇಳಲು – ಪಾತಾಳದಲಿ ಸುರವೈರಿ ವರ್ಗ

ಪದ್ಯ ೭೦: ಕೌರವನು ಯಾವ ಯಜ್ಞವನ್ನು ಮಾಡಿದನು?

ಮರೆದು ಕಳೆದನು ಬಂದಲಜ್ಜೆಯ
ಬರನ ದಿನವನು ಮುಂದಣುಪಹತಿ
ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು
ಮುರಿದುದಿನ್ನೇ ನಹಿತ ದರ್ಪದ
ಹೊರಿಗೆಯೆಂದುತ್ಸವದಲವನಿಪ
ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ (ಅರಣ್ಯ ಪರ್ವ, ೨೨ ಸಂಧಿ, ೭೦ ಪದ್ಯ)

ತಾತ್ಪರ್ಯ:
ಹಿಂದೆ ಒದಗಿದ್ದ ನಾಚಿಕೆಗೇಡಿನ ಮಾನಭಂಗವನ್ನು ದುರ್ಯೋಧನನು ಮರೆತನು. ಮುಂದಿನ ಯುದ್ಧದಲ್ಲಿ ದೈತ್ಯರ ಬೆಮ್ಬಲವಿರುವುದನ್ನು ನೆನೆದು ಹಿಗ್ಗಿದನು. ಶತುಗಲ ದರ್ಪವು ಇನ್ನೇನು ಮುರಿಯಿತೆಂಬ ಉತ್ಸಾಹದಿಂದ ಕೌರವನು ಯಾಗಶಾಲೆಯಲ್ಲಿ ಮಹಾಯಜ್ಞವನ್ನು ಮಾಡಿದನು.

ಅರ್ಥ:
ಮರೆ: ಗುಟ್ಟು, ರಹಸ್ಯ; ಕಳೆ:ತೊರೆ; ಲಜ್ಜೆ: ನಾಚಿಕೆ, ಅವಮಾನ; ಬರ: ಕ್ಷಾಮ; ದಿನ: ದಿವಸ; ಮುಂದು: ಮುಂದೆ; ಉಪಹತಿ: ಹೊಡೆತ; ಗುರುವ: ಅಹಂಕಾರ; ದೈತ್ಯ: ರಾಕ್ಷಸ; ಮೈತ್ರಿ: ಸ್ನೇಹ; ನೆನೆ: ಜ್ಞಾಪಿಸಿಕೊಳ್ಳು; ಹಿಗ್ಗು: ಸಂತೋಷ, ಆನಂದ; ಮುರಿ: ಸೀಳು; ಅಹಿತ: ಶತ್ರು; ದರ್ಪ: ಅಹಂಕಾರ; ಹೊರಿಗೆ: ಭಾರ, ಹೊರೆ; ಉತ್ಸವ: ಸಂಭ್ರಮ; ಅವನಿಪ: ರಾಜ; ಮೆರೆ: ಹೊಳೆ, ಪ್ರಕಾಶಿಸು; ಅಧ್ವರ: ಯಜ್ಞ, ಯಾಗ; ಶಾಲೆ: ಮನೆ; ಕ್ರತು: ಯಾಗ, ಯಜ್ಞ;

ಪದವಿಂಗಡಣೆ:
ಮರೆದು +ಕಳೆದನು +ಬಂದ+ಲಜ್ಜೆಯ
ಬರನ +ದಿನವನು +ಮುಂದಣ್+ಉಪಹತಿ
ಗುರುವ +ದೈತ್ಯರ +ಮೈತ್ರಿಯನು +ನೆನೆ +ನೆನೆದು +ಹಿಗ್ಗಿದನು
ಮುರಿದುದ್+ಇನ್ನೇನ್+ಅಹಿತ +ದರ್ಪದ
ಹೊರಿಗೆಯೆಂದ್+ಉತ್ಸವದಲ್+ಅವನಿಪ
ಮೆರೆದನ್+ಅಧ್ವರ +ಶಾಲೆಯಲಿ +ಮಾಡಿದ +ಮಹಾಕ್ರತುವ

ಅಚ್ಚರಿ:
(೧) ದುರ್ಯೋಧನನು ಹಿಗ್ಗಲು ಕಾರಣ – ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು

ಪದ್ಯ ೬೯: ದುರ್ಯೋಧನನ ಆಗಮನವು ಯಾವುದನ್ನು ಸೂಚಿಸಿತು?

ಮತ್ತೆ ನೆಗ್ಗಿತು ನಯವಧರ್ಮದ
ಕುತ್ತುದಲೆ ನೆಗಹಿದುದು ಸತ್ಯದ
ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ
ನೆತ್ತಿಗಣ್ಣಾಯ್ತಧಮತೆಗೆ ನಗೆ
ಯೊತ್ತಿ ತಾರಡಿ ಸುಜನಮಾರ್ಗವ
ಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ (ಅರಣ್ಯ ಪರ್ವ, ೨೨ ಸಂಧಿ, ೬೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನಾಡಿಗೆ ಬಂದುದರಿಂದ ನ್ಯಾಯವು ನೆಗ್ಗಿ ಹೋಯಿತು, ತಗ್ಗಿಸಿದ್ದ ಅಧರ್ಮದ ತಲೆ ಮೇಲೆತ್ತಿತು, ಸತ್ಯದ ಬೀಜ ಹುರಿದುಹೋಯಿತು, ಕೃತಘ್ನತೆಗೆ ಪಟ್ಟಗಟ್ಟಿತು, ಅಧಮತನಕ್ಕೆ ನೆತ್ತಿಯಲ್ಲಿ ಕಣ್ಣು ಬಂದಿತು, ವಂಚನೆಯು ನಕ್ಕಿತು, ಸುಳ್ಳು ಮೋಸಗಳು ಸಜ್ಜನರ ಮಾರ್ಗವನ್ನು ಕೆತ್ತಿ ಹಾಕಿದವು.

ಅರ್ಥ:
ಮತ್ತೆ: ಪುನಃ; ನೆಗ್ಗು: ತಗ್ಗು, ಬೀಳು; ನಯ:ನುಣುಪು, ಮೃದುತ್ವ; ಕುತ್ತು: ತೊಂದರೆ, ಆಪತ್ತು; ನೆಗಹು: ಮೇಲೆತ್ತು; ಸತ್ಯ: ನಿಜ; ಬಿತ್ತು: ಬೀಜ; ಹುರಿ: ಕಾಯಿಸು; ಪಟ್ಟ:ಹಣೆಗಟ್ಟು; ಕೃತಘ್ನತೆ: ಉಪಕಾರವನ್ನು ಮರೆಯುವವನು; ನೆತ್ತಿ: ಶಿರ; ಕಣ್ಣು: ನಯನ; ಅಧಮ: ಕೀಳು, ನೀಚ; ನಗೆ:ಅಪಹಾಸ್ಯ, ಕುಚೋದ್ಯ; ಆರಡಿ: ಕಿರುಕುಳ, ಮೋಸ; ಸುಜನ: ಒಳ್ಳೆಯತನ, ಸುಜನ; ಮಾರ್ಗ: ದಾರಿ; ಕೆತ್ತು: ಖಂಡಿಸು, ಸುಲಿ; ಅಟಮಟ: ಮೋಸ; ಸೌಮನಸ್ಯ: ಒಳ್ಳೆಯ ಮನಸ್ಸುಳ್ಳವ;

ಪದವಿಂಗಡಣೆ:
ಮತ್ತೆ +ನೆಗ್ಗಿತು +ನಯವ್+ಅಧರ್ಮದ
ಕುತ್ತು+ತಲೆ+ ನೆಗಹಿದುದು +ಸತ್ಯದ
ಬಿತ್ತು +ಹುರಿದುದು +ಪಟ್ಟಗಟ್ಟಿದುದಾ +ಕೃತಘ್ನತೆಗೆ
ನೆತ್ತಿ+ಕಣ್ಣಾಯ್ತ್+ಅಧಮತೆಗೆ +ನಗೆ
ಯೊತ್ತಿತ್ + ಆರಡಿ +ಸುಜನ+ಮಾರ್ಗವ
ಕೆತ್ತುದ್+ಅಟಮಟವ್+ಈ+ಸುಯೋಧನ +ಸೌಮನಸ್ಯದಲಿ

ಅಚ್ಚರಿ:
(೧) ಸತ್ಯ, ನ್ಯಾಯ ದೂರವಾಯಿತು ಎಂದು ಹೇಳುವ ಪರಿ – ನೆತ್ತಿಗಣ್ಣಾಯ್ತಧಮತೆಗೆ; ಸುಜನಮಾರ್ಗವಕೆತ್ತುದಟಮಟವ್;

ಪದ್ಯ ೬೮: ಹಸ್ತಿನಾಪುರದಲ್ಲೇಕೆ ಆನಂದ ತುಂಬಿತು?

ಎಂದು ಭೂಪನ ತಿಳುಹಿ ಕಳುಹಲು
ಬಂದು ಮರಳಿ ಮಹೀತಳಕೆ ತ
ನ್ನಿಂದು ವದನೆಯ ಮಾತಿನಲಿ ನಿಂದವನು ತಾನಾಗಿ
ಬಂದನರಮನೆಗಖಿಳಜನವಾ
ನಂದ ರಸದಲಿ ಮುಳುಗೆ ಪುರದಲಿ
ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ (ಅರಣ್ಯ ಪರ್ವ, ೨೨ ಸಂಧಿ, ೬೮ ಪದ್ಯ)

ತಾತ್ಪರ್ಯ:
ದುರ್ಯೋಧನನಿಗೆ ಧೈರ್ಯ ತುಂಬಿ ರಾಕ್ಷಸರು ಅವನನ್ನು ಮತ್ತೆ ಭೂಮಿಗೆ ತಂದು ಬಿಟ್ಟರು. ಭಾನುಮತಿಯ ಮಾತಿನಂತೆ ಅವನು ಅರಮನೆಗೆ ಮತ್ತೆ ಬಂದನು. ಹಸ್ತಿನಾಪುರದಲ್ಲಿ ಆನಂದ ತುಂಬಿತು. ಚಕ್ರವರ್ತಿಯು ಬಂದನೆಂಬ ಶುಭವಾರ್ತೆಯು ಆನಂದೋತ್ಸವವನ್ನುಂಟು ಮಾಡಿತು.

ಅರ್ಥ:
ಭೂಪ: ರಾಜ; ತಿಳುಹಿ: ತಿಳಿಸಿ; ಕಳುಹು: ತೆರಳು; ಬಂದು: ಆಗಮಿಸು; ಮರಳಿ: ಮತ್ತೆ; ಮಹೀತಳ: ಭೂಮಿ; ಇಂದುವದನೆ: ಚಂದ್ರನಂತ ಮುಖವುಳ್ಳವಳು; ಮಾತು: ನುಡಿ; ನಿಂದು: ನಿಲ್ಲು; ಬಂದು: ಆಗಮಿಸು; ಅರಮನೆ: ರಾಜರ ಆಲಯ; ಅಖಿಳ: ಎಲ್ಲಾ; ಜನ: ಮನುಷ್ಯ; ಆನಂದ: ಸಂತಸ; ರಸ: ಸಾರ; ಮುಳುಗು: ಮುಚ್ಚಿಹೋಗು; ಪುರ: ಊರು; ಸಂದಣಿಸು: ಒಟ್ಟಾಗು; ಗುಡಿ:ಕುಟೀರ, ಮನೆ; ಒಸಗೆ: ಶುಭ, ಮಂಗಳಕಾರ್ಯ; ಲಳಿ: ರಭಸ; ಲಗ್ಗೆ: ಮುತ್ತಿಗೆ, ಆಕ್ರಮಣ;

ಪದವಿಂಗಡಣೆ:
ಎಂದು +ಭೂಪನ +ತಿಳುಹಿ +ಕಳುಹಲು
ಬಂದು +ಮರಳಿ +ಮಹೀತಳಕೆ +ತನ್ನ್
ಇಂದು ವದನೆಯ +ಮಾತಿನಲಿ +ನಿಂದವನು +ತಾನಾಗಿ
ಬಂದನ್+ಅರಮನೆಗ್+ಅಖಿಳ+ಜನವ್
ಆನಂದ +ರಸದಲಿ +ಮುಳುಗೆ +ಪುರದಲಿ
ಸಂದಣಿಸಿದವು +ಗುಡಿಗಳ್+ಒಸಗೆಯ +ಲಳಿಯ +ಲಗ್ಗೆಗಳ

ಅಚ್ಚರಿ:
(೧) ಭಾನುಮತಿಯನ್ನು ಇಂದುವದನೆೆ ಎಂದು ಕರೆದಿರಿವುದು

ಪದ್ಯ ೬೭: ದಾನವರು ದುರ್ಯೋಧನನಿಗೆ ಏನೆಂದು ಆಣೆ ಮಾಡಿದರು?

ನರರು ನೀವ್ ದಾನವರು ನಾವೆಂ
ದಿರದಿರೊಡಹುಟ್ಟಿದರು ನಿಮಗಿ
ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ
ಸುರಪುರದ ಸೂಳೆಯರ ಪಡಿಗವ
ನಿರಿಸುವರು ಗಂಧರ್ವರವದಿರ
ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ (ಅರಣ್ಯ ಪರ್ವ, ೨೨ ಸಂಧಿ, ೬೭ ಪದ್ಯ)

ತಾತ್ಪರ್ಯ:
ನಾವು ರಾಕ್ಷಸರು, ನೀನು ಮನುಷ್ಯನೆಂದು ಭಾವಿಸಲೇ ಬೇಡ. ನಾವಿನ್ನು ನಿನ್ನ ಒಡಹುಟ್ಟಿದವರು. ನಮ್ಮಲ್ಲಿರುವ ಮಹಾಪ್ರಬಲ ದಾನವರು ಇನ್ನು ಮುಮ್ದೆ ನಿನ್ನ ಆಪತ್ಭಾಂಧವರು. ಇನ್ನು ಗಂಧರ್ವರ ಸುದ್ದಿ ಬೇಕೆ, ಅವರು ಅಮರಾವತಿಯ ಅಪ್ಸರೆಯರಿಗೆ ಆಹಾರವನ್ನು ತಂದಿಡುವ ಸೇವಕರು. ನಾವು ಅವರ ಕರುಳನ್ನು ಬಗಿದು ತಿನ್ನುತ್ತೇವೆ ಎಂದು ಗರ್ಜಿಸಿದರು.

ಅರ್ಥ:
ನರ: ಮನುಷ್ಯ; ದಾನವ: ರಾಕ್ಷಸ; ಒಡಹುಟ್ಟು: ಅಣ್ಣ ತಮ್ಮ; ಅರಸ: ರಾಜ; ವೇಳಾಯಿತ:ಸಮಯಕ್ಕೆ ಒದಗುವವನು, ಆಪದ್ಬಾಂಧವ; ವೆಗ್ಗಳ: ಶ್ರೇಷ್ಠ; ಭಟ: ವೀರ, ಸೈನಿಕ; ಸುರಪುರ: ಅಮರಾವತಿ; ಸೂಳೆ: ಗಣಿಕೆ, ಅಪ್ಸರೆ; ಪಡಿಗ: ಪಾತ್ರ, ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ತಿಂಬೆವು: ತಿನ್ನುವೆವು; ಗರ್ಜಿಸು: ಜೋರಾಗಿ ಕೂಗು; ಖಳ: ದುಷ್ಟ; ನಿಕರ: ಗುಂಪು;

ಪದವಿಂಗಡಣೆ:
ನರರು +ನೀವ್ +ದಾನವರು +ನಾವೆಂದ್
ಇರದಿರ್+ಒಡಹುಟ್ಟಿದರು +ನಿಮಗಿನ್
ಅರಸ +ವೇಳಾಯಿತರು +ವೆಗ್ಗಳ +ದೈತ್ಯ +ಭಟರೆಲ್ಲ
ಸುರಪುರದ +ಸೂಳೆಯರ +ಪಡಿಗವನ್
ಇರಿಸುವರು+ ಗಂಧರ್ವರ್+ಅವದಿರ
ಕರುಳ +ತಿಂಬೆವು +ನಾವೆನುತ +ಗರ್ಜಿಸಿತು +ಖಳ+ನಿಕರ

ಅಚ್ಚರಿ:
(೧) ಗಂಧರ್ವರನ್ನು ತೆಗಳುವ ಪರಿ – ಸುರಪುರದ ಸೂಳೆಯರ ಪಡಿಗವ ನಿರಿಸುವರು ಗಂಧರ್ವ

ಪದ್ಯ ೬೬: ದುರ್ಯೋಧನನು ದಾನವರಿಗೆ ಏನು ಹೇಳಿದ?

ಮಾನವನು ನಾನಿನ್ನು ನೀವೋ
ದಾನವರು ಗಂಧರ್ವರಿಂದಭಿ
ಮಾನವೆನಗಕ್ಕಾಡಿ ಹೋಯಿತು ಹೇಳಲೇನದನು
ಮಾನಿನಿಯ ಮೂದಲೆಯ ನಾ ಪವ
ಮಾನ ಸುತನ ಸಗರ್ವ ವಚನವ
ನೇನ ಹೇಳುವೆನೆನುತ ಸುಯ್ದನು ಕೌರವರ ರಾಯ (ಅರಣ್ಯ ಪರ್ವ, ೨೨ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ನಾನಾದರೋ ಮನುಷ್ಯ, ನೀವೋ ದಾನವರು. ಗಂಧರ್ವರಿಂದ ನನ್ನ ಅಭಿಮಾನವು ನಾಶವಾಗಿ ಹೋಗಿದೆ, ಅದನ್ನು ನಾನು ಏನೆಂದು ಹೇಳಲಿ, ದ್ರೌಪದಿಯು ಆಡಿದ ಹಂಗಿಸುವಂತಹ ಮಾತುಗಳು, ಭೀಮನ ಗರ್ವದ ಮಾತುಗಳು, ಇವನ್ನು ನಾನೇನೆಂದು ನಿಮಗೆ ಹೇಳಲಿ ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ಮಾನವ: ಮನುಷ್ಯ; ದಾನವ: ರಾಕ್ಷಸ; ಗಂಧರ್ವ: ಖಚ; ಅಭಿಮಾನ: ಆತ್ಮಗೌರವ; ಅಕ್ಕಾಡು: ನಷ್ಟವಾಗು; ಮಾನಿನಿ: ಹೆಣ್ಣು; ಮೂದಲಿಸು: ಹಂಗಿಸು; ಪವಮಾನ: ವಾಯು; ಸುತ: ಮಗ; ವಚನ: ಮಾತು; ಸುಯ್ದು: ನಿಟ್ಟುಸಿರಿಡು; ರಾಯ: ರಾಜ;

ಪದವಿಂಗಡಣೆ:
ಮಾನವನು +ನಾನಿನ್ನು +ನೀವೋ
ದಾನವರು+ ಗಂಧರ್ವರಿಂದ್+ಅಭಿ
ಮಾನವ್+ಎನಗ್+ಅಕ್ಕಾಡಿ+ ಹೋಯಿತು +ಹೇಳಲೇನದನು
ಮಾನಿನಿಯ +ಮೂದಲೆಯನ್+ ಆ +ಪವ
ಮಾನ+ ಸುತನ +ಸಗರ್ವ +ವಚನವನ್
ಏನ+ ಹೇಳುವೆನೆನುತ+ ಸುಯ್ದನು +ಕೌರವರ+ ರಾಯ

ಅಚ್ಚರಿ:
(೧) ಮಾನವ, ದಾನವ; ಅಭಿಮಾನ, ಪವಮಾನ – ಪ್ರಾಸ ಪದ

ಪದ್ಯ ೬೫: ದೈತ್ಯರು ದುರ್ಯೋಧನನಿಗೆ ಯಾವ ಅಭಯವನ್ನು ನೀಡಿದರು?

ಸಾಯದಿರು ನಿನಗಿಂದು ಮೊದಲು ಸ
ಹಾಯರಾವಾವಹಕೆ ರಿಪುಕೌಂ
ತೇಯರಿಗೆ ಕೊಡಬೇಡವಿನ್ನು ತಿಲಾಂಶ ಭೂತಳವ
ಲಾಯ ಸಹಿತೀ ಗಜರಥಾಶ್ವ ನಿ
ಕಾಯ ನಿನ್ನದು ದೈತ್ಯ ಸಚಿವ ಪ
ಸಾಯತರು ನಿನ್ನವರು ಸಾವೆವು ನಿಮ್ಮ ಸಮರದಲಿ (ಅರಣ್ಯ ಪರ್ವ, ೨೨ ಸಂಧಿ, ೬೫ ಪದ್ಯ)

ತಾತ್ಪರ್ಯ:
ದೈತ್ಯರು ದುರ್ಯೋಧನ ಪರ ನಿಂತರು, ನೀನು ಸಾಯಬೇಡ, ಇವತ್ತಿನಿಂದಲೇ ನಾವು ಯುದ್ಧದಲ್ಲಿ ನಿನ್ನ ಪರವಾಗಿ ಹೋರಾಡುತ್ತೇವೆ, ಕುಂತಿಯ ಮಕ್ಕಳಿಗೆ ಒಂದು ಎಳ್ಳು ಕಾಳಿನಷ್ಟೂ ಭೂಮಿಯನ್ನು ಕೊಡಬೇಡ, ನಮ್ಮ ಆನೆ, ಕುದುರೆಗಳ ಲಾಯವೇ ನಿನ್ನದು, ನಮ್ಮ ಸಚಿವರು ಆಪ್ತರು ನಿನ್ನವರು. ನಿನ್ನೊಡನೆ ಯುದ್ಧದಲ್ಲಿ ಭಾಗವಹಿಸಿ ಸಾಯುತ್ತೇವೆ ಎಂದು ಹೇಳಿದರು.

ಅರ್ಥ:
ಸಾವು: ಮರಣ; ಸಹಾಯ: ನೆರವು; ಆವಹ: ಯುದ್ಧ; ರಿಪು: ವೈರಿ; ಕೌಂತೇಯ: ಪಾಂಡವರು; ಕೊಡು: ನೀಡು; ತಿಲ: ಎಳ್ಳು; ಅಂಶ: ಭಾಗ; ಭೂತಳ: ಭೂಮಿ; ಲಾಯ: ಕುದುರೆಗಳಿಡುವ ಸ್ಥಳ; ಸಹಿತ: ಜೊತೆ; ಗಜ: ಆನೆ; ರಥ: ಬಂಡಿ; ಅಶ್ವ: ಕುದುರೆ; ನಿಕಾಯ: ಗುಂಪು; ದೈತ್ಯ: ರಾಕ್ಷಸ; ಸಚಿವ: ಮಂತ್ರಿ; ಪಸಾಯ: ಉಡುಗೊರೆ, ಬಹುಮಾನ; ಪಸಾಯಿತ: ಸಾಮಂತ ರಾಜ; ಸಮರ: ಯುದ್ಧ;

ಪದವಿಂಗಡಣೆ:
ಸಾಯದಿರು +ನಿನಗಿಂದು +ಮೊದಲು +ಸ
ಹಾಯರ್+ಆವ್+ಆವಹಕೆ +ರಿಪು+ಕೌಂ
ತೇಯರಿಗೆ +ಕೊಡಬೇಡವ್+ಇನ್ನು +ತಿಲಾಂಶ +ಭೂತಳವ
ಲಾಯ +ಸಹಿತೀ+ ಗಜ+ರಥ+ಅಶ್ವ+ ನಿ
ಕಾಯ +ನಿನ್ನದು +ದೈತ್ಯ +ಸಚಿವ+ ಪ
ಸಾಯತರು +ನಿನ್ನವರು +ಸಾವೆವು +ನಿಮ್ಮ +ಸಮರದಲಿ

ಅಚ್ಚರಿ:
(೧) ಸಾಯ, ಸಹಾಯ, ಲಾಯ, ನಿಕಾಯ, ಪಸಾಯ – ಪ್ರಾಸ ಪದಗಳು

ಪದ್ಯ ೬೪: ದೈತ್ಯರು ದುರ್ಯೋಧನನ ನಿರ್ಧಾರವನ್ನು ತಪ್ಪೆಂದರೇಕೆ?

ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಲೆಸಿದೆಲಾ
ಸುರರು ಪಾಂಡುಕುಮಾರರಾಗವ
ತರಸಿದರು ಗೆಲವವದಿರಿಗೆ ತಾ
ವಿರಲು ಸುಡಲೀ ದೈತ್ಯ ಜನ್ಮವನೆಂದರಾ ಖಳರು (ಅರಣ್ಯ ಪರ್ವ, ೨೨ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ, ನೀನು ಅನ್ನ ನೀರು ಬಿಟ್ಟು ಮರಣಹೊಂದುವ ದೀಕ್ಷೆ ಹಿಡಿದೆ, ಇದು ಕ್ಷತ್ರಿಯಕುಲಕ್ಕೆ ಅನುಚಿತವಾದ ನಿರ್ಧಾರ, ನೀನು ತಪ್ಪುಮಾಡಿದೆ, ದೇವತೆಗಳು ಪಾಂಡವರಾಗಿ ಅವತರಿಸಿದ್ದಾರೆ, ನಿನ್ನ ನಿರ್ಧಾರದಿಂದ ಅವರಿಗೆ ಗೆಲುವಾಗುತ್ತದೆ, ನಾವಿದ್ದೂ ಅವರು ಗೆದ್ದರೆ ಈ ರಾಕ್ಷಸ ಜನ್ಮವನ್ನು ಸುಡಬೇಕೆಂದು ಹೇಳಿದರು.

ಅರ್ಥ:
ಅರಸ: ರಾಜ; ಪ್ರಾಯೋಪವೇಶ: ಅನ್ನ ನೀರು ಇಲ್ಲದೆ ಪ್ರಾಣ ಬಿಡುವುದು; ಮರಣ: ಸಾವು; ದೀಕ್ಷೆ: ವ್ರತ, ನಿಯಮ; ಗಡ: ಅಲ್ಲವೇ; ಕುಲ: ವಂಶ; ಅನುಚಿತ: ಸರಿಯಲ್ಲದ; ನೆನೆ: ಜ್ಞಾಪಿಸಿಕೋ; ಕಾಕ: ನೀಚ, ಕ್ಷುಲ್ಲಕ; ಬಳಸು: ಆವರಿಸುವಿಕೆ; ಸುರ: ದೇವತೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಗೆಲವು: ಜಯ; ಅವದಿರು: ಅವರು; ಸುಡು: ದಹಿಸು; ದೈತ್ಯ: ರಾಕ್ಷಸ; ಜನ್ಮ: ಹುಟ್ಟು; ಖಳ: ದುಷ್ಟ;

ಪದವಿಂಗಡಣೆ:
ಅರಸ +ನೀ +ಪ್ರಾಯೋಪವೇಶದಿ
ಮರಣ+ ದೀಕ್ಷಿತನಾದೆ+ ಗಡ +ನಿ
ಮ್ಮರಸು+ ಕುಲಕ್+ಅನುಚಿತವ +ನೆನೆದೈ +ಕಾಕ +ಬಳೆಸಿದೆಲಾ
ಸುರರು +ಪಾಂಡುಕುಮಾರರಾಗ್+ಅವ
ತರಸಿದರು+ ಗೆಲವ್+ಅವದಿರಿಗೆ +ತಾ
ವಿರಲು +ಸುಡಲೀ +ದೈತ್ಯ +ಜನ್ಮವನೆಂದರಾ+ ಖಳರು

ಅಚ್ಚರಿ:
(೧) ಸುರರು ಅವತರಿಸಿದ ಬಗೆ – ಸುರರು ಪಾಂಡುಕುಮಾರರಾಗವತರಸಿದರು

ಪದ್ಯ ೬೩: ಯಾರು ದುರ್ಯೋಧನನನ್ನು ಕರೆದುಕೊಂಡು ಹೋದರು?

ರಾಯನೀಪರಿನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ (ಅರಣ್ಯ ಪರ್ವ, ೨೨ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ದುರ್ಯೊಧನನು ಜನರನ್ನು ಹಿಂದಕ್ಕೆ ಕಳಿಸಿದನು. ನಂತರ ಭಗವಂತನ ಭಕ್ತಿಯನ್ನು ಬಯಸಿ ಸಮಾಧಿಯಲ್ಲಿದ್ದನು. ರಾತ್ರಿಯಾಯಿತು, ಆಗ ರಾಕ್ಷಸರು ಲೆಕ್ಕ ಹಾಕಿ ಇದೇ ಸಮಯವೆಂದು ಕೌರವನನ್ನು ರಸಾತಳಕ್ಕೆ ತೆಗೆದುಕೊಂಡು ಹೋಗಿ ಅವನಿಗೆ ಸಾಂಗವಗಿ ಸಾಮೋಪಾಯದಿಂದ ಹೀಗೆ ಹೇಳಿದರು.

ಅರ್ಥ:
ರಾಯ: ರಾಜ; ಪರಿ: ರೀತಿ; ನುಡಿ: ಮಾತು; ಜನ: ಗುಂಪು; ಸಮುದಾಯ: ಸಮೂಹ, ಗುಂಪು; ಕಳುಹಿ: ತೆರಳು; ಸುಮನ: ಒಳ್ಳೆಯ ಮನಸ್ಸು; ಉಭಯ: ಎರಡು; ಸಾಪೇಕ್ಷ: ಪೂರಕವಾದುದು; ಸಮಾಧಿ: ಏಕಾಗ್ರತೆ, ತನ್ಮಯತೆ; ರಾತ್ರಿ: ನಿಶಿ, ಇರುಳು; ದಾಯ:ಸಮಯ; ದೈತ್ಯ: ರಾಕ್ಷಸ; ನಿಕಾಯ: ಗುಂಪು; ಬಂದು: ಆಗಮಿಸು; ರಸಾತಳ: ಭೂಮಿಯ ಮೇಲ್ಭಾಗ;ಕೊಂಡೊಯ್ದು: ಕರೆದುಕೊಂಡು ಹೋಗು; ತಿಳುಹಿ: ಹೇಳು ಸಾಮ: ಸಮಾಧಾನ;

ಪದವಿಂಗಡಣೆ:
ರಾಯನ್+ಈ+ಪರಿನುಡಿದು+ ಜನ +ಸಮು
ದಾಯವನು+ ಕಳುಹಿದನು+ ಸುಮನೋ
ಭೂಯ +ಸಾಪೇಕ್ಷೆಯ +ಸಮಾಧಿಯೊಳಿರಲು+ ರಾತ್ರಿಯಲಿ
ದಾಯವಿದು+ ತಮಗೆಂದು+ ದೈತ್ಯ+ನಿ
ಕಾಯ +ಬಂದು +ರಸಾತಳಕೆ+ ಕುರು
ರಾಯನನು +ಕೊಂಡೊಯ್ದು +ತಿಳುಹಿದರವರು+ ಸಾಮದಲಿ

ಅಚ್ಚರಿ:
(೧) ರಾಯ, ದಾಯ, ಸಮುದಾಯ,ನಿಕಾಯ, ಭೂಯ – ಪ್ರಾಸ ಪದಗಳು

ಪದ್ಯ ೬೨: ದುರ್ಯೋಧನನು ಊರಿನ ಜನರಿಗೆ ಏನು ಹೇಳಿದನು?

ಪರಿಜನದೊಳವರವರ ಮುಖ್ಯರ
ಕರೆಸಿದನು ದುಶ್ಯಾಸನನು ನಿಮ
ಗರಸು ನೃಪನೀತಿಯಲಿ ಪಾಲಿಸುವನು ಮಹೀತಳವ
ಧರೆಯನಾತಂಗಿತ್ತೆವೆಮಗೀ
ಸುರನದೀ ತೀರದಲಿ ಕಾಶೀ
ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೬೨ ಪದ್ಯ)

ತಾತ್ಪರ್ಯ:
ತನ್ನ ಬಳಿಗೆ ಬಂದ ಜನ ಸಮುದಾಯದ ಮುಖ್ಯಸ್ಥರನ್ನು ದುರ್ಯೋಧನನು ಕರೆಸಿಕೊಂಡು, ಇನ್ನು ಮುಂದೆ ದುಶ್ಯಾಸನನೇ ನಿಮ್ಮ ದೊರೆ, ನಾವು ರಾಜ್ಯವನ್ನು ಅವನಿಗೆ ಕೊಟ್ಟಿದ್ದೇವೆ, ಅವನು ರಾಜನೀತಿಗನುಸಾರವಾಗಿ ಭೂಮಿಯನ್ನು ಪಾಲಿಸುತ್ತಾನೆ, ನಾವು ಈ ಗಂಗಾತೀರದಲ್ಲಿ ಶಂಕರನ ಸನ್ನಿಧಿಯಲ್ಲಿರುತ್ತೇವೆ ಎಂದು ಹೇಳಿದನು.

ಅರ್ಥ:
ಪರಿಜನ: ಪರಿವಾರ; ಮುಖ್ಯ: ಶ್ರೇಷ್ಠ; ಕರೆಸು: ಬರೆಮಾಡು; ಅರಸು: ರಾಜ; ನೃಪ: ರಾಜ; ನೀತಿ: ಮಾರ್ಗ ದರ್ಶನ; ಪಾಲಿಸು: ರಕ್ಷಿಸು, ಕಾಪಾಡು; ಮಹೀತಳ: ಭೂಮಿ; ಧರೆ: ಭೂಮಿ; ಸುರನದಿ: ಗಂಗೆ; ತೀರ: ತಟ; ಕಾಶೀಶ್ವರ: ಶಂಕರ; ಸನ್ನಿಧಿ: ಹತ್ತಿರ; ಘಟಿಸು: ಏರ್ಪಡಿಸು; ಭೂಪ: ರಾಜ;

ಪದವಿಂಗಡಣೆ:
ಪರಿಜನದೊಳ್+ಅವರವರ+ ಮುಖ್ಯರ
ಕರೆಸಿದನು +ದುಶ್ಯಾಸನನು+ ನಿಮಗ್
ಅರಸು +ನೃಪನೀತಿಯಲಿ+ ಪಾಲಿಸುವನು +ಮಹೀತಳವ
ಧರೆಯನ್+ಆತಂಗ್+ ಇತ್ತೆವ್+ಎಮಗ್+ಈ
ಸುರನದೀ +ತೀರದಲಿ +ಕಾಶೀ
ಶ್ವರನ +ಸನ್ನಿಧಿಯಿರವು+ ಘಟಿಸಿದುದೆಂದನಾ +ಭೂಪ

ಅಚ್ಚರಿ:
(೧) ಭೂಪ, ಅರಸು, ನೃಪ; ಮಹೀತಳ, ಧರೆ – ಸಮನಾರ್ಥಕ ಪದಗಳು