ಪದ್ಯ ೪೮: ಯಾರ ಕಥೆಯನ್ನು ಮಾರ್ಕಂಡೇಯ ಮುನಿಗಳು ಹೇಳಲು ಬಯಸಿದರು?

ಧರಣಿಪತಿ ಕೇಳ್ ಜಾತಿ ವರ್ಗದ
ಪರಮಧರ್ಮದ ಸಾರವಿದನಾ
ಚರಿಸಿ ಸಿದ್ಧಿಯನೈದಿದನು ಪಿತೃಮಾತೃ ಭಕ್ತಿಯಲಿ
ಒರೆಗೆ ಬಣ್ಣಕೆ ಬೆರೆಸಿ ವೇದೋ
ಚ್ಚರಿತ ಧರ್ಮವನರುಹಿದನು ಭೂ
ಸುರಗೆ ಧರ್ಮವ್ಯಾಧನೆಂಬನ ಕಥೆಯ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ಜಾತಿ ಧರ್ಮದ ಸಾರವನ್ನು ಆಚರಿಸುತ್ತಾ, ತಂದೆ ತಾಯಿಗಳ ಭಕ್ತಿಯನ್ನು ಅದಕ್ಕೆ ಸೇರಿಸಿದ ಧರ್ಮವ್ಯಾದನೆಂಬುವನು ವೇದ ಧರ್ಮದ ಸಾರವನ್ನು ಬ್ರಾಹ್ಮಣನಿಗೆ ಹೇಳಿದ ಕಥೆಯನ್ನು ಕೇಳು ಎಂದು ಮಾರ್ಕಂಡೇಯನು ಧರ್ಮಜನಿಗೆ ಹೇಳಿದನು.

ಅರ್ಥ:
ಧರಣಿಪತಿ: ರಾಜ; ಜಾತಿ: ಹುಟ್ಟಿದ ಕುಲ, ವಂಶ; ವರ್ಗ: ಗುಂಪು; ಪರಮ: ಶ್ರೇಷ್ಠ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ಆಚರಿಸು: ನಡೆಸು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಐದು: ಬಂದು ಸೇರು; ಪಿತೃ: ತಂದೆ; ಮಾತೃ: ತಾಯಿ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಒರೆಗೆ: ಪರೀಕ್ಷಿಸು; ಅರುಹು: ಹೇಳು; ಭೂಸುರ: ಬ್ರಾಹ್ಮಣ; ಕಥೆ: ಚರಿತೆ; ಕೇಳು: ಆಲಿಸು;

ಪದವಿಂಗಡಣೆ:
ಧರಣಿಪತಿ +ಕೇಳ್ +ಜಾತಿ +ವರ್ಗದ
ಪರಮಧರ್ಮದ +ಸಾರವಿದನ್
ಆಚರಿಸಿ +ಸಿದ್ಧಿಯನ್+ಐದಿದನು +ಪಿತೃ+ಮಾತೃ +ಭಕ್ತಿಯಲಿ
ಒರೆಗೆ+ ಬಣ್ಣಕೆ +ಬೆರೆಸಿ +ವೇದೋ
ಚ್ಚರಿತ +ಧರ್ಮವನ್+ಅರುಹಿದನು+ ಭೂ
ಸುರಗೆ +ಧರ್ಮವ್ಯಾಧನೆಂಬನ +ಕಥೆಯ +ಕೇಳೆಂದ

ಅಚ್ಚರಿ:
(೧) ಧರ್ಮವನ್ನು ತಿಳಿಸಿದ ಪರಿ – ಒರೆಗೆ ಬಣ್ಣಕೆ ಬೆರೆಸಿ ವೇದೋಚ್ಚರಿತ ಧರ್ಮವನರುಹಿದನು

ಪದ್ಯ ೪೭: ಸಂನ್ಯಾಸಿಯ ಲಕ್ಷಣಗಳೇನು?

ಮದನನಂಬನು ಮುರಿದು ರೋಷವ
ಕದನದಲಿ ಸೋಲಿಸಿದು ಲೋಭವ
ನೊದೆದು ಮೋಹವ ನೂಕಿಯುಳಿದಾ ಮದವ ಮತ್ಸರದ
ಎದೆಯಲಂಕವ ಬರೆದು ವೈರಾ
ಗ್ಯದ ಸುಸಮ್ಯಕ್ ಜ್ಞಾನ ಯೋಗದ
ಪದದ ಬೆಳೆ ಸಿರಿವಂತನೇ ಯತಿಯೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕಾಮವನ್ನು ಮುರಿದು, ಕ್ರೋಧವನ್ನು ಸೋಲಿಸಿ, ಲೋಭವನ್ನು ಹೊಡೆದೋಡಿಸಿ, ಮೋಹವನ್ನು ನೂಕಿ, ಮದ ಮತ್ಸರಗಳಿಗೆ ಲೋಪವನ್ನು ತಂದು, ವೈರಾಗ್ಯ, ಸಮ್ಯಕ್ ಜ್ಞಾನ, ಆತ್ಮ ಸಾಕ್ಷಾತ್ಕಾರಗಳ ಉತ್ತಮ ಬೆಳೆಯನ್ನು ತೆಗೆಯುವವನೇ ಯತಿ ಎಂದು ಮಾರ್ಕಂಡೇಯ ಮುನಿಗಳು ತಿಳಿಸಿದರು.

ಅರ್ಥ:
ಮದನ: ಕಾಮ; ಅಂಬು: ಬಾಣ; ಮುರಿ: ಸೀಳು; ರೋಷ: ಕೋಪ; ಕದನ: ಯುದ್ಧ; ಸೋಲಿಸು: ಪರಾಭವಗೊಳಿಸು; ಲೋಭ: ಅತಿಯಾಸೆ; ಒದೆ: ದೂಡು; ಮೋಹ: ಮೈ ಮರೆಯುವಿಕೆ, ಭ್ರಾಂತಿ; ನೂಕು: ತಳ್ಳು; ಉಳಿದ: ಮಿಕ್ಕ; ಮದ: ಅಹಂಕಾರ; ಮತ್ಸರ: ಹೊಟ್ಟೆಕಿಚ್ಚು; ಎದೆ: ಹೃದಯ; ಅಂಕ: ಗುರುತು; ಬರೆ: ಲೇಖಿಸು; ವೈರಾಗ್ಯ: ಪ್ರಪಂಚದ ವಿಷಯಗಳಲ್ಲಿ ಅನಾಸಕ್ತಿ, ವಿರಕ್ತಿ; ಸಮ್ಯಕ್: ಒಳ್ಳೆಯ, ಸರಿಯಾದ, ಪೂರ್ಣ; ಜ್ಞಾನ: ಬುದ್ಧಿ; ಯೋಗ: ಏಕಾಗ್ರತೆ, ಧ್ಯಾನ; ಪದ: ಚರಣ; ಬೆಳೆ: ಬೆಳೆಯುವಿಕೆ; ಸಿರಿ: ಐಶ್ವರ್ಯ; ಯತಿ: ಸಂನ್ಯಾಸಿ; ಮುನಿಪ: ಋಷಿ;

ಪದವಿಂಗಡಣೆ:
ಮದನನ್+ಅಂಬನು +ಮುರಿದು +ರೋಷವ
ಕದನದಲಿ +ಸೋಲಿಸಿದು +ಲೋಭವನ್
ಒದೆದು +ಮೋಹವ +ನೂಕಿ+ಉಳಿದಾ+ ಮದವ +ಮತ್ಸರದ
ಎದೆಯಲ್+ಅಂಕವ+ ಬರೆದು+ ವೈರಾ
ಗ್ಯದ +ಸುಸಮ್ಯಕ್ +ಜ್ಞಾನ +ಯೋಗದ
ಪದದ +ಬೆಳೆ +ಸಿರಿವಂತನೇ +ಯತಿ+ಎಂದನಾ +ಮುನಿಪ

ಅಚ್ಚರಿ:
(೧) ಅರಿಷಡ್ವರ್ಗಗಳನ್ನು ದೂರವಿಡುವ ಪರಿ – ಮದನನಂಬ (ಕಾಮ), ರೋಷ (ಕ್ರೋಧ), ಲೋಭ, ಮೋಹ, ಮತ್ಸರ, ಮದ

ಪದ್ಯ ೪೬: ವಾನಪ್ರಸ್ಥಾಶ್ರಮದ ಗುಣಗಳೇನು?

ವನವನದೊಳಾಶ್ರಮದೊಳಗೆ ಕುಲ
ವನಿತೆ ಸಹಿತಮಲಾಗ್ನಿ ಹೋತ್ರದ
ನೆನಹು ತಪ್ಪದೆ ಕಂದ ಮೂಲ ಫಲಾಶನಂಗಳಲಿ
ವಿನಯ ಯಜ್ಞ ತಪೋವ್ರತಾದಿಗ
ಳನಿತರಲಿ ನಿಷ್ಠಾತ್ಮನಾದೊಡೆ
ವಿನುತ ವಾನಪ್ರಸ್ಥನೆಂಬರು ರಾಯ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ವನಗಳಲ್ಲಿ ಪತ್ನೀ ಸಮೇತನಾಗಿ ಅಗ್ನಿ ಹೋತ್ರ ನಿರತನಾಗಿ, ಗಡ್ಡೆ, ಬೇರು, ಹಣ್ಣುಗಳನ್ನು ತಿನ್ನುತ್ತಾ, ವಿನಯ, ಯಜ್ಞ, ತಪಸ್ಸು, ವ್ರತಗಳಲ್ಲೇ ನಿಷ್ಠೆಯಿಂದಿರುವವನೇ ವಾನಪ್ರಸ್ಥ ಎಂದು ಮುನಿಯು ಹೇಳಿದರು.

ಅರ್ಥ:
ವನ: ಕಾದು; ಆಶ್ರಮ: ಕುಟೀರ; ಕುಲವನಿತೆ: ಹೆಂಡತಿ; ವನಿತೆ: ಹೆಣ್ಣು; ಸಹಿತ: ಜೊತೆ; ಅಮಲ: ನಿರ್ಮಲ; ಅಗ್ನಿ: ಬೆಂಕಿ; ಅಗ್ನಿಹೋತ್ರ: ಅಗ್ನಿಯನ್ನು ಉದ್ದೇಶಿಸಿ ಮಾಡುವ ಹೋಮ; ನೆನಹು: ಜ್ಞಾಪಕ; ತಪ್ಪದೆ: ಬಿಡದೆ; ಕಂದ: ಗೆಡ್ಡೆಗಳು; ಮೂಲ: ಬೇರು; ಫಲ: ಹಣ್ಣು; ವಿನಯ: ಸಜ್ಜನತೆ; ಯಜ್ಞ: ಕ್ರತು; ತಪಸ್ಸು: ಧ್ಯಾನ; ವ್ರತ: ನಿಯಮ; ಆದಿ: ಮುಂತಾದ; ಅನಿತು: ಅಷ್ಟು; ನಿಷ್ಠ: ಶ್ರದ್ಧೆಯುಳ್ಳವನು; ಆತ್ಮ: ಜೀವ, ಮನಸ್ಸು; ವಿನುತ: ಹೊಗಳಲ್ಪಟ್ಟ; ವಾನಪ್ರಸ್ಥ: ನಾಲ್ಕು ಆಶ್ರಮಗಳಲ್ಲಿ ಒಂದು; ರಾಯ: ಒಡೆಯ; ಕೇಳು: ಆಲಿಸು;

ಪದವಿಂಗಡಣೆ:
ವನವನದೊಳ್+ಆಶ್ರಮದೊಳಗೆ+ ಕುಲ
ವನಿತೆ +ಸಹಿತ್+ಅಮಲ+ಅಗ್ನಿ+ ಹೋತ್ರದ
ನೆನಹು+ ತಪ್ಪದೆ+ ಕಂದ+ ಮೂಲ +ಫಲಾಶನಂಗಳಲಿ
ವಿನಯ+ ಯಜ್ಞ +ತಪೋವ್ರತಾದಿಗಳ್
ಅನಿತರಲಿ+ ನಿಷ್ಠಾತ್ಮನಾದೊಡೆ
ವಿನುತ +ವಾನಪ್ರಸ್ಥನೆಂಬರು +ರಾಯ +ಕೇಳೆಂದ

ಅಚ್ಚರಿ:
(೧) ಹೆಂಡತಿಗೆ ಕುಲವನಿತೆ ಪದದ ಬಳಕೆ
(೨) ವಿನಯ, ವಿನುತ – ಪದಗಳ ಬಳಕೆ

ಪದ್ಯ ೪೫: ಗೃಹಸ್ತನ ಲಕ್ಷಣವೇನು?

ದೇವ ಗುರು ಪಿತೃ ವಹ್ನಿ ಶುಶ್ರೂ
ಷಾವಧಾನ ನಿರಂತ ಷಟ್ಕ
ರ್ಮಾವಲಂಬ ನಿಜೋನ್ನತಾಲಾಭೈಕ ಸಂತೋಷ
ಪಾವನವ್ರತ ನಿಜ ಪುರಂಧ್ರೀ
ಸೇವೆ ಸತ್ಯಾಸ್ತೇಯ ಶೌಚಗು
ಣಾವಳಿಗಳುಳ್ಳಾತ ಗೃಹಪತಿಯೆಂದ ನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದೇವೆಅತೆಗಳು, ಗುರು, ಪಿತೃಗಳು, ಅಗ್ನಿ, ಇವರ ಶುಶ್ರೂಷೆಯನ್ನು ಸದಾ ಮಾಡುತ್ತಾ, ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ ಪರಿಗ್ರಹಗಳೆಂಬ ಷಟ್ಕರ್ಮನಿರತನಾಗಿ, ಆತ್ಮೋನ್ನತಿಯಿಂದ ಉಂಟಾಗುವ ಸಂತೋಷವುಳ್ಳವನಾಗಿ ತನ್ನ ಉನ್ನತಿಯನ್ನು ಸಾಧಿಸುತ್ತಾ, ಪವಿತ್ರವಾದ ವ್ರತಗಳು, ಪತ್ನಿಯನ್ನು ಸಂತೋಷಗೊಳಿಸುವುದು, ಸತ್ಯ, ಕಳ್ಳತನವಿಲ್ಲದಿರುವುದು, ತ್ರಿಕರಣದಲ್ಲೂ ಶುಚಿಯಾಗಿರುವುದು, ಇವುಗಳನ್ನು ರೂಢಿಸಿಕೊಂಡಿರುವವನೇ ಗೃಹಸ್ಥನು.

ಅರ್ಥ:
ದೇವ: ಭಗವಂತ; ಗುರು: ಆಚಾರ್ಯ; ಪಿತೃ: ತಂದೆ; ವಹ್ನಿ: ಬೆಂಕಿ, ಅಗ್ನಿ; ಶುಶ್ರೂಷ: ಪೋಷಿಸು; ಅವಧಾನ: ಸ್ಮರಣೆ, ಬುದ್ಧಿ; ನಿರಂತ: ಯಾವಾಗಲು; ಷಟ್: ಆರು; ಕರ್ಮ: ಕಾರ್ಯ; ನಿಜ: ದಿಟ, ತನ್ನ; ಉನ್ನತ: ಹೆಚ್ಚಿನ; ಲಾಭ: ಪ್ರಯೋಜನ; ಸಂತೋಷ: ಹರ್ಷ; ಪಾವನ: ನಿರ್ಮಲ; ವ್ರತ: ನಿಯಮ; ಪುರಂಧ್ರಿ: ಸುಮಂಗಲಿ, ಮಾತೆ; ಸೇವೆ: ಉಪಚಾರ; ಆಸ್ತೆ: ಅಕ್ಕರೆ, ಪ್ರೀತಿ; ಶೌಚ: ನಿರ್ಮಲ; ಗುಣ: ನಡತೆ, ಸ್ವಭಾವ; ಆವಳಿ: ಗುಂಪು; ಗೃಹ: ಮನೆ; ಪತಿ: ಒಡೆಯ; ಗೃಹಪತಿ: ಮನೆಯೊಡೆಯ; ಮುನಿ: ಋಷಿ;

ಪದವಿಂಗಡಣೆ:
ದೇವ +ಗುರು +ಪಿತೃ +ವಹ್ನಿ +ಶುಶ್ರೂ
ಷ+ಅವಧಾನ+ ನಿರಂತ +ಷಟ್
ಕರ್ಮಾವಲಂಬ +ನಿಜ+ಉನ್ನತ+ಲಾಭೈಕ +ಸಂತೋಷ
ಪಾವನ+ವ್ರತ +ನಿಜ ಪುರಂಧ್ರೀ
ಸೇವೆ +ಸತ್ಯ+ಆಸ್ತೇಯ +ಶೌಚ+ಗು
ಣಾವಳಿಗಳ್+ಉಳ್ಳಾತ +ಗೃಹಪತಿಯೆಂದ +ನಾ +ಮುನಿಪ

ಅಚ್ಚರಿ:
(೧) ಹೆಂಡತಿಗೆ ಪುರಂಧ್ರೀ ಪದದ ಬಳಕೆ

ಪದ್ಯ ೪೪: ಬ್ರಹ್ಮಚರ್ಯಾಶ್ರಮದ ನಿಯಮವೇನು?

ನಯವಿದನೆ ಕೇಳ್ ವೇದ ಶಾಸ್ತ್ರಾ
ಧ್ಯಯನದಲಿ ಪಿತೃಮಾತೃ ಶುಶ್ರೂ
ಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ ಕಾರ್ಯದಲಿ
ನಿಯತಮೌನವ್ರತದಸಂಗ
ಪ್ರಿಯದ ಶೌಚಾಸ್ತೇಯದಿಂದ್ರಿಯ
ಜಯದ ವಿಮಲ ಬ್ರಹ್ಮಚರ್ಯಾಶ್ರಮದಗತಿಯೆಂದ (ಅರಣ್ಯ ಪರ್ವ, ೧೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ವೇದ ಶಾಸ್ತ್ರಗಳ ಅಧ್ಯಯನ, ತಂದೆ ತಾಯಿಗಳ ಶುಶ್ರೂಷೆ, ಗುರುಸೇವೆ, ಅಗ್ನಿ ಕಾರ್ಯದಲ್ಲಿ ನಿರತನಾಗಿರುವುದು, ಮೌನವ್ರತ, ಏಕಾಂಗಿಯಾಗಿರುವುದು, ನಿರ್ಮಲ, ಕಳ್ಳತನಮಾಡದಿರುವುದು, ಇಂದ್ರಿಯಗಳ ಜಯ ಇವು ಬ್ರಹ್ಮಚರ್ಯಾಶ್ರಮಕ್ಕೆ ಅಗತ್ಯ ಎಂದು ಮುನಿಗಳು ವಿವರಿಸಿದರು.

ಅರ್ಥ:
ನಯ: ರಾಜನೀತಿ, ನುಣುಪು; ಕೇಳು: ಆಲಿಸು; ವೇದ: ಆಗಮ; ಶಾಸ್ತ್ರ: ಧಾರ್ಮಿಕ ವಿಷಯ; ಅಧ್ಯಯನ: ಓದುವುದು, ಕಲಿಯುವುದು; ಪಿತೃ: ತಂದೆ; ಮಾತೃ: ತಾಯಿ; ಶುಶ್ರೂಷೆ: ಉಪಚಾರ, ಸೇವೆ; ಗುರು: ಆಚಾರ್ಯ; ಪರಿಚರ್ಯ: ಸೇವೆ, ಕೈಂಕರ್ಯ; ವಿಮಲ: ನಿರ್ಮಲ; ಅಗ್ನಿ: ಬೆಂಕಿ; ಕಾರ್ಯ: ಕೆಲಸ; ನಿಯತ: ನಿಶ್ಚಿತವಾದುದು; ಮೌನ: ಸುಮ್ಮನಿರುವಿಕೆ, ನೀರವತೆ; ವ್ರತ: ನಡವಳಿಕೆ; ಅಸಂಗ: ಏಕಾಂಗಿ; ಪ್ರಿಯ: ಇಷ್ಟ; ಶೌಚ:ನೈರ್ಮಲ್ಯ, ಪರಿಶುದ್ಧತೆ; ಅಸ್ತೇಯ: ಕದಿಯದಿರುವುದು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಜಯ: ಗೆಲುವು; ಬ್ರಹ್ಮಚರ್ಯ: ಇಂದ್ರಿಯ ನಿಗ್ರಹ, ಚತುರಾಶ್ರಮಗಳಲ್ಲಿ ಮೊದಲನೆಯದು; ಗತಿ: ಚಲನೆ, ಸ್ಥಿತಿ;

ಪದವಿಂಗಡಣೆ:
ನಯವಿದನೆ+ ಕೇಳ್ +ವೇದ+ ಶಾಸ್ತ್ರ
ಅಧ್ಯಯನದಲಿ +ಪಿತೃ+ಮಾತೃ +ಶುಶ್ರೂ
ಷೆಯಲಿ +ಗುರು +ಪರಿಚರ್ಯದಲಿ+ ವಿಮಲಾಗ್ನಿ +ಕಾರ್ಯದಲಿ
ನಿಯತ+ಮೌನವ್ರತದ್+ಅಸಂಗ
ಪ್ರಿಯದ +ಶೌಚ+ಅಸ್ತೇಯದ್+ಇಂದ್ರಿಯ
ಜಯದ +ವಿಮಲ +ಬ್ರಹ್ಮಚರ್ಯ+ಆಶ್ರಮದ+ಗತಿಯೆಂದ

ಅಚ್ಚರಿ:
(೧) ಧರ್ಮಜನನ್ನು ನಯವಿದನೆ ಎಂದು ಕರೆದಿರುವುದು
(೨) ಬ್ರಹ್ಮಚರ್ಯದ ಗತಿ: ನಿಯತಮೌನವ್ರತದಸಂಗ ಪ್ರಿಯದ ಶೌಚಾಸ್ತೇಯದಿಂದ್ರಿಯ ಜಯದ ವಿಮಲ ಬ್ರಹ್ಮಚರ್ಯಾಶ್ರಮದಗತಿಯೆಂದ

ಪದ್ಯ ೪೩: ಯಾರು ನರಕದಲ್ಲೇ ಇರುತ್ತಾರೆ?

ನಿಜ ಕೃಷಿವ್ಯ್ವಸಾಯದಲಿ ತ
ದ್ದ್ವಿಜಕುಲದ ಶುಶ್ರೂಷೆಯಲಿ ಪಾ
ದಜರು ಕೃತಕೃತ್ಯರು ಚತುರ್ವರ್ಣದಲಿ ಮಾರ್ಗವಿದು
ನಿಜ ನಿಜಾಂಗದ ಧರ್ಮಗತಿಯಲಿ
ಮಜಡರಾದರೆ ಮನುಜರಾದವ
ರಜನ ಪರಮಾಯುಷ್ಯ ಪರಿಯಂತಿಹರು ನರಕದಲಿ (ಅರಣ್ಯ ಪರ್ವ, ೧೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೃಷಿ, ವ್ಯವಸಾಯ ಬ್ರಾಹ್ಮಣರ ಶುಶ್ರೂಷೆಗಳಲ್ಲಿ ಶೂದ್ರರು ಕೃತಕೃತ್ಯರಾಗಿದ್ದರು. ನಾಲ್ಕು ವರ್ಣಗಳವರಿಗೆ ಕೃತಯುಗದಲ್ಲಿ ಹೀಗೆ ನಡತೆಯಿತ್ತು. ತಮ್ಮ ಧರ್ಮಗತಿಯಲ್ಲಿ ಮೂಢರಾಗಿ ಅದನ್ನು ತ್ಯಜಿಸಿದರಾದರೆ ಮನುಷ್ಯರು ಬ್ರಹ್ಮನ ಆಯುಷ್ಯವಿರುವವರೆಗೂ ನರಕದಲ್ಲೇ ಇರುತ್ತಾರೆ.

ಅರ್ಥ:
ಕೃಷಿ: ಬೇಸಾಯ; ವ್ಯವಸಾಯ: ಬೇಸಾಯ, ಒಕ್ಕಲುತನ; ದ್ವಿಜ: ಬ್ರಾಹ್ಮಣ; ಕುಲ: ವಂಶ; ಶುಶ್ರೂಷೆ: ಪೋಷಣೆ; ಪಾದಜ: ಶೂದ್ರ; ಕೃತಕೃತ್ಯ: ಧನ್ಯ, ಕೃತಾರ್ಥ; ಚತುರ್ವರ್ಣ: ನಾಲ್ಕು ವರ್ಣಗಳು; ಮಾರ್ಗ: ದಾರಿ; ನಿಜ: ದಿಟ; ಧರ್ಮ: ಧಾರಣ ಮಾಡಿದುದು; ಗತಿ: ಗಮನ, ಸಂಚಾರ; ಮಜಡ: ತಿಳಿಗೇಡಿ; ಮನುಜ: ಮಾನವ; ಅಜ: ಬ್ರಹ್ಮ; ಆಯುಷ್ಯ: ಜೀವಿತದ ಅವಧಿ; ಪರಿಯಂತ: ವರೆಗೆ, ತನಕ; ನರಕ: ಅಧೋಲೋಕ;

ಪದವಿಂಗಡಣೆ:
ನಿಜ +ಕೃಷಿ+ವ್ಯವಸಾಯದಲಿ +ತದ್
ದ್ವಿಜ+ಕುಲದ +ಶುಶ್ರೂಷೆಯಲಿ +ಪಾ
ದಜರು +ಕೃತಕೃತ್ಯರು +ಚತುರ್ವರ್ಣದಲಿ+ ಮಾರ್ಗವಿದು
ನಿಜ+ ನಿಜಾಂಗದ +ಧರ್ಮಗತಿಯಲಿ
ಮಜಡರಾದರೆ+ ಮನುಜರಾದವರ್
ಅಜನ +ಪರಮಾಯುಷ್ಯ +ಪರಿಯಂತಿಹರು+ ನರಕದಲಿ

ಅಚ್ಚರಿ:
(೧) ನರಕಕ್ಕೆ ಸೇರುವವರು – ಧರ್ಮಗತಿಯಲಿ ಮಜಡರಾದರೆ ಮನುಜರಾದವರಜನ ಪರಮಾಯುಷ್ಯ ಪರಿಯಂತಿಹರು ನರಕದಲಿ

ಪದ್ಯ ೪೨: ವೈಶ್ಯರು ಕೃತಯುಗದಲ್ಲಿ ಹೇಗೆ ವ್ಯವಹರಿಸುತ್ತಿದ್ದರು?

ಪ್ರೌಢನೇ ವ್ಯವಹರಿಸಲಗ್ಗದ
ಮೂಢನೇ ಬರಲೊಂದೆ ಸತ್ಯ ನಿ
ರೂಢಿಯಲಿ ವಾಣಿಜ್ಯ ಸುವ್ಯವಹಾರ ಮಾರ್ಗದಲಿ
ಗಾಢ ವಿಕ್ರಯ ಸಕ್ರಯದಲೇ
ಗೂಢಕರು ಮೂಲೈಕಲಾಭ ನಿ
ರೂಢ ಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ (ಅರಣ್ಯ ಪರ್ವ, ೧೫ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೃತಯುಗದಲ್ಲಿ ವೈಶ್ಯರು, ತಿಳಿದವರು ಬಂದರೂ, ಅರಿಯದವರು ಬಂದರೂ ಒಂದೇ ರೀತಿಯ ವ್ಯವಹಾರ ಮಾಡುತ್ತಿದ್ದರು. ಕೊಡುವುದು, ಕೊಳ್ಳುವುದರಲ್ಲಿ ರಹಸ್ಯವನ್ನು ರಕ್ಷಿಸುತ್ತಿದ್ದರು. ಬೆಲೆಗೆ ಅತ್ಯಂತ ಕಡಿಮೆಯ ಲಾಭವನ್ನೇ ಎಲ್ಲ ವ್ಯವಹಾರಗಳಲ್ಲೂ ಕೊಳ್ಳುತ್ತಿದ್ದರು.

ಅರ್ಥ:
ಪ್ರೌಢ: ಅನುಭವಿ, ಪ್ರಬುದ್ಧನಾದ; ವ್ಯವಹರ: ಕೆಲಸ, ಉದ್ಯೋಗ; ಅಗ್ಗ: ಶ್ರೇಷ್ಠ; ಮೂಢ: ತಿಳಿವಳಿಕೆಯಿಲ್ಲದವನು, ತಿಳಿಗೇಡಿ; ಬರಲು: ಆಗಮಿಸು; ಸತ್ಯ; ದಿಟ, ತನ್ನ; ನಿರೂಢಿ: ಸಾಮಾನ್ಯ; ವಾಣಿಜ್ಯ: ವ್ಯಾಪಾರ; ಮಾರ್ಗ: ದಾರಿ; ಗಾಢ: ಹೆಚ್ಚಳ, ಅತಿಶಯ; ವಿಕ್ರಯ: ಮಾರಾಟ; ಸಕ್ರಯ: ಸರಿಯಾದ ಬೆಲೆ; ಗೂಢ: ಗುಟ್ಟು, ರಹಸ್ಯ; ಮೂಲ: ಪ್ರಾರಂಭ; ಏಕ: ಒಂದು; ಲಾಭ: ಪ್ರಯೋಜನ, ಪ್ರಾಪ್ತಿ; ಪರರು: ಬೇರೆಯವರು; ಒಪ್ಪು: ಸಮ್ಮತಿಸು; ವೈಶ್ಯ: ವ್ಯಾಪಾರಿ; ಧರ್ಮ: ಧಾರಣ ಮಾಡಿದುದು; ಕಾಲ: ಸಮಯ;

ಪದವಿಂಗಡಣೆ:
ಪ್ರೌಢನೇ+ ವ್ಯವಹರಿಸಲ್+ಅಗ್ಗದ
ಮೂಢನೇ+ ಬರಲ್+ಒಂದೆ +ಸತ್ಯ+ ನಿ
ರೂಢಿಯಲಿ+ ವಾಣಿಜ್ಯ +ಸುವ್ಯವಹಾರ +ಮಾರ್ಗದಲಿ
ಗಾಢ +ವಿಕ್ರಯ +ಸಕ್ರಯದಲೇ
ಗೂಢಕರು+ ಮೂಲ+ಏಕ+ಲಾಭ+ ನಿ
ರೂಢ +ಪರರೊಪ್ಪಿದರು+ ವೈಶ್ಯರು+ ಧರ್ಮ+ಕಾಲದಲಿ

ಅಚ್ಚರಿ:
(೧) ನಿರೂಢ, ಪ್ರೌಢ, ಮೂಢ, ಗಾಢ, ಗೂಢ – ಢ ಕಾರದಿಂದ ಕೊನೆಗೊಳ್ಳುವ ಪದಗಳ ಬಳಕೆ

ಪದ್ಯ ೪೧: ಕೃತಯುಗದ ರಾಜರು ಹೇಗೆ ಬಾಳಿದರು?

ರಣದೊಳಹಿತರ ಶಿರದ ಮಿದುಳೌ
ತಣವು ಶಸ್ತ್ರಕೆ ವಿತ್ತ ಭೂಸುರ
ಗನಕೆ ವರಯವ್ವನದ ವಿಭ್ರಮ ನಿಜಸತೀಜನಕೆ
ಗುಣ ಮನುಷ್ಯವ್ರಜಕೆ ಪರಿ ರ
ಕ್ಷನವಶೇಷ ಪ್ರಜೆಗೆನಲು ಧಾ
ರುಣಿಪತಿಗಳೊಪ್ಪಿದರು ಕೃತಯುಗದಾದಿಕಾಲದಲಿ (ಅರಣ್ಯ ಪರ್ವ, ೧೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ತಮ್ಮ ಶಸ್ತ್ರಗಳಿಗೆ ಯುದ್ಧದಲ್ಲಿ ಕೊಂದ ಶತ್ರುಗಳ ಮೆದುಳು ಔತಣ, ಬ್ರಾಹ್ಮಣರಿಗೆ ದಾನ ಮಾಡಿದ ಹಣವು ಔತಣ, ಯೌವನದ ವೈಭವವು ತಮ್ಮ ಪತ್ನಿಯರಿಗೆ ಔತಣ, ಮನುಷ್ಯರಿಗೆ ಅಗತ್ಯವಾದ ಆದರವೇ ಔತಣ, ಸಮಸ್ತ ಪ್ರಜೆಗಳಿಗೂ ಸಂಪೂರ್ಣ ರಕ್ಷಣೆಯೇ ಔತಣ ಎನ್ನುವಂತೆ ಕೃತಯುಗದ ಮೊದಲಿನ ರಾಜರು ಬಾಳಿದರು.

ಅರ್ಥ:
ರಣ: ಯುದ್ಧ ಭೂಮಿ; ಅಹಿತ: ವೈರಿ; ಶಿರ: ತಲೆ; ಮಿದುಳು: ಮಸ್ತಿಷ್ಕ; ಔತಣ: ವಿಶೇಷ ಊಟ; ಶಸ್ತ್ರ: ಆಯುಧ; ವಿತ್ತ: ಹಣ, ಐಶ್ವರ್ಯ; ಭೂಸುರ: ಬ್ರಾಹ್ಮಣ; ಗಣ: ಗುಂಪು; ವರ: ಶ್ರೇಷ್ಠ; ಯೌವನ: ತರುಣ; ನಿಜ: ತನ್ನ, ದಿಟ; ವಿಭ್ರಮ: ಅಲೆದಾಟ, ಭ್ರಮೆ; ಸತಿ: ಗರತಿ, ಹೆಂಡತಿ; ಜನ: ಮನುಷ್ಯ; ಗುಣ: ನಡತೆ; ಮನುಷ್ಯ: ಮಾನವ; ವ್ರಜ:ಗುಂಪು; ಪರಿ: ಚಲಿಸು, ನಡೆ; ರಕ್ಷಣ: ಕಾಪಾಡುವಿಕೆ; ಶೇಷ: ಉಳಿದ; ಪ್ರಜೆ: ಜನಾಂಗ, ಜನತೆ; ಧಾರುಣಿ: ಭೂಮಿ; ಧಾರುಣಿಪತಿ: ರಾಜ; ಒಪ್ಪು: ಸಮ್ಮತಿ; ಕೃತ: ಯುಗದ ಹೆಸರು; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಆದಿ: ಮೊದಲು; ಕಾಲ: ಸಮಯ;

ಪದವಿಂಗಡಣೆ:
ರಣದೊಳ್+ಅಹಿತರ +ಶಿರದ +ಮಿದುಳ್
ಔತಣವು +ಶಸ್ತ್ರಕೆ +ವಿತ್ತ +ಭೂಸುರ
ಗಣಕೆ+ ವರ+ಯವ್ವನದ +ವಿಭ್ರಮ +ನಿಜ+ಸತೀಜನಕೆ
ಗುಣ+ ಮನುಷ್ಯ+ವ್ರಜಕೆ +ಪರಿ+ ರ
ಕ್ಷಣವ+ಶೇಷ +ಪ್ರಜೆಗೆನಲು+ ಧಾ
ರುಣಿಪತಿಗಳ್+ಒಪ್ಪಿದರು +ಕೃತಯುಗದ್+ಆದಿ+ಕಾಲದಲಿ

ಅಚ್ಚರಿ:
(೧) ಯಾರಿಗೆ ಯಾವುದು ಔತಣ ವೆಂದು ತಿಳಿಸುವ ಪದ್ಯ
(೨) ಗಣ, ವ್ರಜ, ಜನ – ಸಾಮ್ಯಾರ್ಥ ಪದ

ಪದ್ಯ ೪೦: ಧುಂಧುಮಾರನ ರಾಜ್ಯವು ಹೇಗಿತ್ತು?

ಆ ನೃಪನ ರಾಜ್ಯದಲ್ಲಿ ಯಜ್ಞವಿ
ಧಾನ ವೈದಿಕ ವಿಧಿ ಕೃತಾನು
ಷ್ಠಾನ ಯಮ ನಿಯಮಾದಿ ಯೋಗ ವಿಶಿಷ್ಟ ನೀತಿಯಲಿ
ದೀನ ಭಾವವನುಳಿದು ಯಾಚನ
ಹೀನ ವೃತ್ತಿಯ ಬಿಸುಟು ಲೋಕದಿ
ಭಾನು ತೇಜದಲೆಸೆದುದಂದು ಮಹೀಸುರವ್ರಾತ (ಅರಣ್ಯ ಪರ್ವ, ೧೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ಆ ರಾಜನ ಆಳ್ವಿಕೆಯಲ್ಲಿ ವೇದವು ವಿಧಿಸಿದಂತೆ ಅನುಷ್ಠಾನ ಮಾಡುತ್ತಾ, ಯಮ ನಿಯಮಾದಿ ಯೋಗ ಸಮ್ಮತವಾದ ನೀತಿಯಿಮ್ದ, ಯಾಚನೆಯನ್ನು ಬಿಟ್ಟು, ದೈನ್ಯವನ್ನು ತೊರೆದು ಬ್ರಾಹ್ಮಣರು ಸೂರ್ಯಸಮವಾದ ತೇಜಸ್ಸಿನಿಂದ ಬೆಳಗುತ್ತಿದ್ದರು.

ಅರ್ಥ:
ನೃಪ: ರಾಜ; ರಾಜ್ಯ: ರಾಷ್ಟ್ರ, ದೇಶ; ಯಜ್ಞ: ಕ್ರತು; ವಿಧಾನ: ರೀತಿ; ವೈದಿಕ: ವೇದಗಳನ್ನು ಬಲ್ಲವನು; ವಿಧಿ: ನಿಯಮ; ಕೃತ: ಪುಣ್ಯವಂತ; ಅನುಷ್ಠಾನ: ಆಚರಣೆ; ಯಮ: ಇಂದ್ರಿಯ ನಿಗ್ರಹ, ಸಂಯಮ; ನಿಯಮ: ಕಟ್ಟುಪಾಡು, ಕಟ್ಟಳೆ; ಆದಿ: ಮೊದಲಾದ; ಯೋಗ: ಹೊಂದಿಸುವಿಕೆ; ವಿಶಿಷ್ಟ: ಪ್ರಮುಖ; ನೀತಿ: ಒಯ್ಯುವಿಕೆ; ದೀನ: ಬಡವ, ದರಿದ್ರ; ಭಾವ: ಮನೋಧರ್ಮ, ಭಾವನೆ; ಉಳಿದು: ಮಿಕ್ಕ; ಯಾಚನ: ಬೇಡು; ಹೀನ: ಕೀಳಾದ, ಕೆಟ್ಟ; ವೃತ್ತಿ: ಸ್ಥಿತಿ, ನಡವಳಿಕೆ; ಬಿಸುಟು: ಹೊರಹಾಕು; ಲೋಕ: ಜಗತ್ತು; ಭಾನು: ಸೂರ್ಯ; ತೇಜ: ಪ್ರಕಾಶ; ಎಸೆ: ಹೊರತರು; ಮಹೀಸುರ: ಬ್ರಹ್ಮಣ; ಮಹೀ: ಭೂಮಿ; ಸುರ: ದೇವತೆ; ವ್ರಾತ: ಗುಂಪು;

ಪದವಿಂಗಡಣೆ:
ಆ +ನೃಪನ +ರಾಜ್ಯದಲ್ಲಿ +ಯಜ್ಞ+ವಿ
ಧಾನ +ವೈದಿಕ +ವಿಧಿ +ಕೃತ+ಅನು
ಷ್ಠಾನ +ಯಮ +ನಿಯಮಾದಿ +ಯೋಗ +ವಿಶಿಷ್ಟ+ ನೀತಿಯಲಿ
ದೀನ +ಭಾವವನ್+ಉಳಿದು +ಯಾಚನ
ಹೀನ +ವೃತ್ತಿಯ +ಬಿಸುಟು +ಲೋಕದಿ
ಭಾನು +ತೇಜದಲ್+ಎಸೆದುದ್+ಅಂದು +ಮಹೀಸುರವ್ರಾತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲೋಕದಿ ಭಾನು ತೇಜದಲೆಸೆದುದಂದು ಮಹೀಸುರವ್ರಾತ

ಪದ್ಯ ೩೯: ಧುಂಧುಮಾರ ನೃಪನಾರು?

ಈಯಧರ್ಮವ ಪತಿಕರಿಸಿ ತ
ನ್ನಾಯತಕೆ ಭೂತಳವ ತಂದು ನಿ
ರಾಯಸದಲೇ ಬಳಸುತ್ತಿದ್ದನು ಧುಂಧುವೆಂಬಸುರ
ರಾಯಕೇಳಾದೈತ್ಯನನು ತ
ನ್ನಾಯುಧಕೆ ಬಲಿಗೊಟ್ಟು ಬಳಿಕ
ಸ್ಥಾಯಿಧರ್ಮವ ಬಲಿದುಕೊಟ್ಟನು ಧುಂಧುಮಾರ ನೃಪ (ಅರಣ್ಯ ಪರ್ವ, ೧೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೈ ರಾಜ ಕೇಳು, ಧುಂಧುವೆಂಬ ಅಸುರನು ಅಧರ್ಮವನ್ನೇ ಸ್ವೀಕರಿಸಿ, ಭೂಮಿಯನ್ನು ತನ್ನ ಹಿಡಿತಕ್ಕೆ ತಂದುಕೊಂಡು ಭೋಗಿಸುತ್ತಿದ್ದನು. ಆ ರಾಕ್ಷಸನನ್ನು ಕುವಲಾಶ್ವನೆಂಬ ರಾಜನು ತನ್ನ ಆಯುಧದಿಂದ ಸಂಹರಿಸಿ ಧುಂಧುಮಾರನೆಂಬ ಹೆಸರನ್ನು ಪಡೆದನು.

ಅರ್ಥ:
ಅಧರ್ಮ: ಅನೀತಿ; ಪತಿಕರಿಸು: ಅಂಗೀಕರಿಸು; ಆಯತ: ಅಣಿಗೊಳಿಸು; ಭೂತಳ: ಭೂಮಿ; ನಿರಾಯಸದ: ಆಯಾಸವಿಲ್ಲದೆ; ಬಳಸು: ಉಪಯೋಗಿಸು; ಅಸುರ: ರಾಕ್ಷಸ; ರಾಯ: ರಾಜ; ಕೇಳು: ಆಲಿಸು; ದೈತ್ಯ: ರಾಕ್ಷಸ; ಆಯುಧ: ಶಸ್ತ್ರ; ಬಲಿ: ಕಾಣಿಕೆ, ಕೊಡುಗೆ; ಬಳಿಕ: ನಂತರ; ಸ್ಥಾಯಿ: ರವಾಗಿರುವುದು, ಕಾಯಂ; ಬಲಿದು: ಸಮರ್ಥವಾಗಿ, ಅಧಿಕವಾಗಿ; ನೃಪ: ರಾಜ;

ಪದವಿಂಗಡಣೆ:
ಈ+ಅಧರ್ಮವ +ಪತಿಕರಿಸಿ+ ತನ್ನ್
ಆಯತಕೆ +ಭೂತಳವ +ತಂದು +ನಿ
ರಾಯಸದಲೇ+ ಬಳಸುತ್ತಿದ್ದನು+ ಧುಂಧುವೆಂಬ್+ಅಸುರ
ರಾಯ+ಕೇಳ್+ಆ+ದೈತ್ಯನನು +ತನ್
ಆಯುಧಕೆ +ಬಲಿಗೊಟ್ಟು +ಬಳಿಕ
ಸ್ಥಾಯಿ+ಧರ್ಮವ +ಬಲಿದುಕೊಟ್ಟನು +ಧುಂಧುಮಾರ +ನೃಪ

ಅಚ್ಚರಿ:
(೧) ಬಲಿಗೊಟ್ಟು, ಬಲಿದುಕೊಟ್ಟು – ಪದಗಳ ಬಳಕೆ
(೨) ಅಸುರ, ದೈತ್ಯ – ಸಮನಾರ್ಥಕ ಪದ