ಪದ್ಯ ೬೭: ಯಾರಿಗೆ ಸೋಲಾಗದು?

ಸೋಲವರಿಗಳಿಗೆಂದು ಹರುಷವ
ತಾಳದಿರು ಧೃತರಾಷ್ಟ್ರ ಕೃಷ್ಣನ
ಸೋಲವದು ಪಾಂಡವರು ಸೋತವರಲ್ಲ ನಂಬುವುದು
ಸೋಲವಿದು ನಾಳಿನಲಿ ಪ್ರಳಯದ
ಕಾಲ ಕೌರವಕುಲಕೆ ದಿಟವಿದು
ಸೋಲವುಂಟೇ ವೀರನಾರಾಯಣನ ಭಕ್ತರಿಗೆ (ದ್ರೋಣ ಪರ್ವ, ೬ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಶತ್ರುಗಳು ಸೋತರೆಂದು ಸಂತೋಷ ಪಡಬೇಡ, ಪಾಂಡವರು ಸೋತವರಲ್ಲ, ಸೋಲು ಕೃಷ್ಣನದು, ಈ ಸೋಲು ಕೌರವ ಕುಲಕ್ಕೆ ಮುಂದೆ ಪ್ರಳಯಕಾಲವನ್ನು ತರುತ್ತದೆ. ಈ ಮಾತು ನಿಜ, ವೀರನಾರಾಯಣನ ಭಕ್ತರಿಗೆ ಸೋಲುಂಟೇ!

ಅರ್ಥ:
ಸೋಲು: ಪರಾಭವ; ಹರುಷ: ಸಂತಸ; ತಾಳು: ಹೊಂದು, ಧರಿಸು; ನಂಬು: ವಿಶ್ವಾಸವಿಡು; ನಾಳೆ: ಮರುದಿನ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಕಾಲ: ಸಮಯ; ಕುಲ: ವಂಶ; ದಿಟ: ಸತ್ಯ; ಭಕ್ತ: ಆರಾಧಕ;

ಪದವಿಂಗಡಣೆ:
ಸೋಲ್+ಅವರಿಗಳಿಗೆಂದು +ಹರುಷವ
ತಾಳದಿರು +ಧೃತರಾಷ್ಟ್ರ +ಕೃಷ್ಣನ
ಸೋಲವದು +ಪಾಂಡವರು +ಸೋತವರಲ್ಲ+ ನಂಬುವುದು
ಸೋಲವಿದು +ನಾಳಿನಲಿ +ಪ್ರಳಯದ
ಕಾಲ +ಕೌರವಕುಲಕೆ +ದಿಟವಿದು
ಸೋಲವುಂಟೇ +ವೀರನಾರಾಯಣನ +ಭಕ್ತರಿಗೆ

ಅಚ್ಚರಿ:
(೧) ಸೋಲ – ಮೊದಲನೇ ಪದವಾಗಿ ೪ ಬಾರಿ ಪ್ರಯೋಗ

ಪದ್ಯ ೬೬: ಕೌರವರು ಹೇಗೆ ಪಾಳೆಯಕ್ಕೆ ಹಿಂದಿರುಗಿದರು?

ಧುರದ ಪ್ರಳಯಕೃತಾಂತನನು ಪರಿ
ಹರಿಸಿದೆವು ಮೃತ್ಯುವಿನ ಪಾಶದ
ಕೊರಳ ಬಳಚಿದೆವೆನುತ ಕೌರವ ಬಲದ ನಾಯಕರು
ಶಿರವ ತಡಹುತ ತಮ್ಮ ಶಿಬಿರಕೆ
ತಿರುಗಿದರು ಬಾಲಕನನೀಕ್ಷಿಸ
ಲರಿದು ತನಗೆಂಬಮ್ತೆ ರವಿ ಜಾರಿದನು ಪಶ್ಚಿಮಕೆ (ದ್ರೋಣ ಪರ್ವ, ೬ ಸಂಧಿ, ೬೬ ಪದ್ಯ)

ತಾತ್ಪರ್ಯ:
ಪ್ರಳಯ ಯಮನನ್ನು ನಿವಾರಿಸಿಕೊಂಡೆವು, ಕತ್ತಿಗೆ ಬಿದ್ದಿದ್ದ ಮೃತ್ಯುಪಾಶವನ್ನು ತಪ್ಪಿಸಿಕೊಂಡೆವು ಎಂದು ತಿಳಿದು ಕೌರವ ನಾಯಕರು ತಮ್ಮ ತಲೆ ಇನ್ನೂ ಕೊರಳ ಮೇಲಿದೆಯೇ ಎಂದು ಕೈಯಿಂದ ತಡವಿಕೊಳ್ಳುತ್ತಾ ತಮ್ಮ ಶಿಬಿರಕ್ಕೆ ಹೋದರು. ಮೃತನಾದ ಅಭಿಮನ್ಯುವನ್ನು ನೋಡಲಾರದೆ ಸೂರ್ಯನೂ ಪಶ್ವಿಮ ದಿಕ್ಕಿನಲ್ಲಿ ಅಸ್ತಂಗತನಾದನು.

ಅರ್ಥ:
ಧುರ: ಯುದ್ಧ, ಕಾಳಗ; ಪ್ರಳಯ: ನಾಶ, ಹಾಳು; ಕೃತಾಂತ: ಯಮ; ಪರಿಹರಿಸು: ನಿವಾರಿಸು; ಮೃತ್ಯು: ಸಾವು; ಪಾಶ: ಹಗ್ಗ, ಮಿಣಿ; ಕೊರಳು: ಕಂಠ; ಬಳಚು: ಜಾರು, ನುಣುಚಿಕೊಳ್ಳು; ಬಲ: ಸೈನ್ಯ; ನಾಯಕ: ಒಡೆಯ; ಶಿರ: ತಲೆ; ತಡಹು: ಹುಡುಕು; ಶಿಬಿರ: ಪಾಳೆಯ, ಬೀಡು; ತಿರುಗು: ಮರಳು, ಹಿಂದಿರುಗು; ಈಕ್ಷಿಸು: ನೋಡು; ಅರಿ: ತಿಳಿ; ಜಾರು: ಬೀಳು; ಪಶ್ಚಿಮ: ಪಡುವಣ; ರವಿ: ಸೂರ್ಯ;

ಪದವಿಂಗಡಣೆ:
ಧುರದ+ ಪ್ರಳಯ+ಕೃತಾಂತನನು +ಪರಿ
ಹರಿಸಿದೆವು +ಮೃತ್ಯುವಿನ +ಪಾಶದ
ಕೊರಳ +ಬಳಚಿದೆವೆನುತ +ಕೌರವ +ಬಲದ +ನಾಯಕರು
ಶಿರವ +ತಡಹುತ +ತಮ್ಮ +ಶಿಬಿರಕೆ
ತಿರುಗಿದರು +ಬಾಲಕನನ್+ಈಕ್ಷಿಸ
ಲರಿದು +ತನಗೆಂಬಂತೆ +ರವಿ +ಜಾರಿದನು +ಪಶ್ಚಿಮಕೆ

ಅಚ್ಚರಿ:
(೧) ದಿನ ಕಳೆಯಿತು ಎಂದು ಹೇಳುವ ಪರಿ – ರವಿ ಜಾರಿದನು ಪಶ್ಚಿಮಕೆ
(೨) ಕೌರವರ ಸ್ಥಿತಿ – ಶಿರವ ತಡಹುತ ತಮ್ಮ ಶಿಬಿರಕೆ ತಿರುಗಿದರು
(೩) ಸೂರ್ಯನು ದುಃಖಿಸಿದ ಎಂದು ಹೇಳುವ ಪರಿ – ಬಾಲಕನನೀಕ್ಷಿಸಲರಿದು ತನಗೆಂಬಮ್ತೆ ರವಿ ಜಾರಿದನು ಪಶ್ಚಿಮಕೆ

ಪದ್ಯ ೬೫: ಅಭಿಮನ್ಯುವಿನ ಕಾಯವನ್ನು ಎಲ್ಲಿಗೆ ತರಲಾಯಿತು?

ಹಲವು ಗಜಗಳು ಸಿಂಹ ಶಿಶುವನು
ಗೆಲಿದ ಪರಿಯಂತಾಯ್ತು ಹಾವಿನ
ಬಳಗ ಗರುಡನ ಮರಿಯ ಮುರಿದವೊಲಾಯಿತಕಟೆನುತ
ಅಳಲಿದುದು ಸುರ ಕಟಕವವನಿಯೊ
ಳಿಳಿದರಪ್ಸರ ಗಣಿಕೆಯರು ಕೋ
ಮಳನ ತಂದರು ವಾಸವನ ಸಿಂಹಾಸನದ ಹೊರೆಗೆ (ದ್ರೋಣ ಪರ್ವ, ೬ ಸಂಧಿ, ೬೫ ಪದ್ಯ)

ತಾತ್ಪರ್ಯ:
ಅನೇಕ ಆನೆಗಳು ಸೇರಿ ಒಂದು ಸಿಂಹದ ಮರಿಯನ್ನು ಕೊಂದಹಾಗೆ, ಹಾವಿನ ಬಳಗವು ಗರುಡನ ಮರಿಯನ್ನು ಸಾಯಿಸಿದ ಹಾಗೆ ಅಭಿಮನ್ಯುವಿನ ಸಾವು ಎಂದು ಆಕಾಶದಲ್ಲಿ ದೇವತೆಗಳು ದುಃಖಿಸಿದರು. ಅಪ್ಸರೆಯರು ಕೋಮಲಕಾಯದ ಅಭಿಮನ್ಯುವನ್ನು ದೇವೇಂದ್ರನ ಸಿಂಹಾಸನದ ಬಳಿಗೆ ಕರೆ ತಂದರು.

ಅರ್ಥ:
ಹಲವು: ಬಹಳ; ಗಜ: ಆನೆ; ಸಿಂಹ: ಕೇಸರಿ; ಶಿಶು: ಚಿಕ್ಕಮರಿ; ಗೆಲಿದು: ಜಯಿಸು; ಪರಿ: ರೀತಿ; ಹಾವು: ಉರಗ; ಬಳಗ: ಗುಂಪು; ಗರುಡ: ವಿಷ್ಣುವಿನ ವಾಹನ; ಮರಿ: ಚಿಕ್ಕದ್ದು; ಮುರಿ: ಸಾಯಿಸು; ಅಕಟ: ಅಯ್ಯೋ; ಅಳಲು: ದುಃಖಿಸು; ಸುರ: ದೇವತೆ; ಕಟಕ: ಗುಂಪು; ಅವನಿ: ಭೂಮಿ; ಅಪ್ಸರೆ: ದೇವತಾ ಸ್ತ್ರೀ; ಗಣಿಕೆ: ವೇಶ್ಯೆ; ಕೋಮಳ: ಮೃದು; ವಾಸವ: ಇಂದ್ರ; ಸಿಂಹಾಸನ: ಪೀಠ; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಹಲವು +ಗಜಗಳು +ಸಿಂಹ +ಶಿಶುವನು
ಗೆಲಿದ +ಪರಿಯಂತಾಯ್ತು +ಹಾವಿನ
ಬಳಗ+ ಗರುಡನ+ ಮರಿಯ +ಮುರಿದವೊಲ್+ಆಯಿತ್+ಅಕಟೆನುತ
ಅಳಲಿದುದು +ಸುರ +ಕಟಕವ್+ಅವನಿಯೊಳ್
ಇಳಿದರ್+ಅಪ್ಸರ +ಗಣಿಕೆಯರು +ಕೋ
ಮಳನ +ತಂದರು +ವಾಸವನ+ ಸಿಂಹಾಸನದ +ಹೊರೆಗೆ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಹಲವು ಗಜಗಳು ಸಿಂಹ ಶಿಶುವನುಗೆಲಿದ ಪರಿ; ಹಾವಿನ ಬಳಗ ಗರುಡನ ಮರಿಯ ಮುರಿದವೊಲ್

ಪದ್ಯ ೬೪: ಗೌರೀದೇವಿಯು ಏಕೆ ಕೊರಗಿದಳು?

ಮಗುವು ವೇಷವ ಧರಿಸಿ ದೂರದ
ಲಗಲಿ ಹೋಗಲು ತನ್ನ ಚಿತ್ತಕೆ
ಢಗೆಯ ಢಾವರವಾಯ್ತು ತನಗೊಳಗಾಯ್ತು ಪರಿತಾಪ
ಮಗನ ಮರಣದಲೆಂತು ಜೀವವ
ಬಗೆವಳಕಟ ಸುಭದ್ರೆಯೆನುತವೆ
ದೃಗುಜಲವ ಬೆರಳಿಂದ ಮಿಡಿದರು ಗೌರಿದೇವಿಯರು (ದ್ರೋಣ ಪರ್ವ, ೬ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಸಾವು ಜಗನ್ಮಾತೆ ಗೌರಿದೇವಿಯನ್ನು ದುಃಖದ ಮಡುವಿನಲ್ಲಿ ಬಿಟ್ಟಿತು. ದೂರದಲ್ಲಿದ್ದ ಆ ಬಾಲಕನು ಸತ್ತಾಗ ನನಗೆ ತಾಪಾತಿಶಯ ಕಾಡಿತು, ದುಃಖವುಕ್ಕಿತು, ತನ್ನ ಮಗನ ಮರಣದಿಂದ ಸುಭದ್ರೆ ಎಷ್ಟು ದುಃಖಿಸಿಯಾಳು, ಹೇಗೆ ಜೀವಿಸಿಯಾಳು ಎಂದು ಕೈಲಾಸದಲ್ಲಿ ಗೌರೀದೇವಿಯು ಕಣ್ಣೀರನ್ನು ಬೆರಳ ತುದಿಯಿಂದ ಮಿಡಿದಳು.

ಅರ್ಥ:
ಮಗು: ಪುತ್ರ; ವೇಷ: ರೂಪ; ಧರಿಸು: ಧಾರಣೆ ಮಾಡು; ದೂರ: ಹತ್ತಿರವಿಲ್ಲದ; ಅಗಲಿ: ದೂರವಾಗು; ಹೋಗು: ತೆರಳು; ಚಿತ್ತ: ಮನಸ್ಸು; ಢಗೆ: ಕಾವು, ದಗೆ; ಢಾವರ: ಬರ, ಕ್ಷೋಭೆ; ಪರಿತಾಪ: ಅತಿಯಾದ ದುಃಖ; ಮರಣ: ಸಾವು; ಜೀವ: ಬದುಕು; ಬಗೆ: ಆಲೋಚನೆ; ಅಕಟ: ಅಯ್ಯೋ; ದೃಗುಜಲ: ಕಣ್ಣೀರು; ಬೆರಳು: ಅಂಗುಲಿ; ಮಿಡಿ: ತವಕಿಸು;

ಪದವಿಂಗಡಣೆ:
ಮಗುವು+ ವೇಷವ +ಧರಿಸಿ +ದೂರದಲ್
ಅಗಲಿ +ಹೋಗಲು +ತನ್ನ +ಚಿತ್ತಕೆ
ಢಗೆಯ +ಢಾವರವಾಯ್ತು +ತನಗೊಳಗಾಯ್ತು +ಪರಿತಾಪ
ಮಗನ +ಮರಣದಲೆಂತು +ಜೀವವ
ಬಗೆವಳ್+ಅಕಟ +ಸುಭದ್ರೆ+ಎನುತವೆ
ದೃಗುಜಲವ +ಬೆರಳಿಂದ +ಮಿಡಿದರು +ಗೌರಿದೇವಿಯರು

ಅಚ್ಚರಿ:
(೧) ದುಃಖವನ್ನು ಸೂಚಿಸುವ ಪರಿ – ಚಿತ್ತಕೆ ಢಗೆಯ ಢಾವರವಾಯ್ತು ತನಗೊಳಗಾಯ್ತು ಪರಿತಾಪ

ಪದ್ಯ ೬೩: ದೇವಗಣವು ಕೌರವರನ್ನು ಹೇಗೆ ನಿಂದಿಸಿತು?

ಸಾವ ಹರಯವೆ ಎನುತ ಗಗನದ
ದೇವತತಿ ಮರುಗಿತ್ತು ಶಕ್ರನ
ಸಾವಿರಾಲಿಯೊಳೊರತೆ ಮಸಗಿತು ಪೌತ್ರಶೋಕದಲಿ
ತಾವು ಷಡುರಥರೊಬ್ಬ ಹಸುಳೆಯ
ಹೇವವಿಲ್ಲದೆ ಕೊಂದರೋ ಸುಡ
ಲಾವ ವೀರರು ಕೌರವಾದಿಗಳೆಂದುದಮರಗಣ (ದ್ರೋಣ ಪರ್ವ, ೬ ಸಂಧಿ, ೬೩ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ನಿಂತು ನೋಡುತ್ತಿದ್ದ ದೇವತೆಗಳ ಗುಂಪು ದುಃಖಿಸುತ್ತಾ, ಇದು ಅಭಿಮನ್ಯುವು ಸಾಯುವ ವಯಸ್ಸೇ? ಅಯ್ಯೋ ಎಂದು ಮರುಗಿತು. ದೇವೇಂದ್ರನ ಸಾವಿರ ಕಣ್ಣುಗಳಲ್ಲೂ ಮೊಮ್ಮೊಗನನ್ನು ಕಳೆದುಕೊಂಡ ದುಃಖವು ಆವರಿಸಿ ಕಣ್ಣೀರು ಸುರಿಸಿತು. ಆರು ಜನ ಮಹಾರಥರು ಸೇರಿ ಒಬ್ಬ ಹಸುಳೆಯನ್ನು ಕೊಂದರು, ಇವರಿಗೆ ನಾಚಿಕೆ ಇಲ್ಲವೇ, ಈ ಕೌರವರು ಎಂಥಾ ವೀರರು, ಇವರ ಪೌರುಷವು ಸುಡಲಿ ಎಂದು ದೇವಗಣವು ನಿಂದಿಸಿತು.

ಅರ್ಥ:
ಸಾವು: ಮರಣ; ಹರಯ: ಚಿಕ್ಕ ವಯಸ್ಸು, ಯೌವ್ವನ; ಗಗನ: ಆಗಸ; ದೇವತತಿ: ದೇವತೆಗಳ ಗುಂಪು; ಮರುಗು: ತಳಮಳ, ಸಂಕಟ; ಶಕ್ರ: ಇಂದ್ರ; ಸಾವಿರ: ಸಹಸ್ರ; ಆಲಿ: ಕಣ್ಣು; ಒರತೆ: ನೀರು ಜಿನುಗುವ ತಗ್ಗು; ಮಸಗು: ಹರಡು, ತಿಕ್ಕು; ಪೌತ್ರ: ಮೊಮ್ಮಗ; ಶೋಕ: ದುಃಖ; ಹಸುಳೆ: ಚಿಕ್ಕವ; ಹೇವ: ಲಜ್ಜೆ, ಮಾನ; ಕೊಂದು: ಸಾಯಿಸು; ಸುಡು: ದಹಿಸು; ವೀರ: ಪರಾಕ್ರಮಿ; ಅಮರಗಣ: ದೇವತೆಗಳ ಗುಂಪು;

ಪದವಿಂಗಡಣೆ:
ಸಾವ +ಹರಯವೆ +ಎನುತ +ಗಗನದ
ದೇವತತಿ+ ಮರುಗಿತ್ತು +ಶಕ್ರನ
ಸಾವಿರ+ಆಲಿಯೊಳ್+ಒರತೆ +ಮಸಗಿತು +ಪೌತ್ರ+ಶೋಕದಲಿ
ತಾವು +ಷಡುರಥರೊಬ್ಬ+ ಹಸುಳೆಯ
ಹೇವವಿಲ್ಲದೆ +ಕೊಂದರೋ +ಸುಡ
ಲಾವ +ವೀರರು +ಕೌರವಾದಿಗಳ್+ಎಂದುದ್+ಅಮರಗಣ

ಅಚ್ಚರಿ:
(೧) ದೇವತತಿ, ಅಮರಗಣ – ಸಮಾನಾರ್ಥಕ ಪದಗಳು
(೨) ಅತೀವ ದುಃಖವನ್ನು ಸೂಚಿಸುವ ಪರಿ – ಶಕ್ರನ ಸಾವಿರಾಲಿಯೊಳೊರತೆ ಮಸಗಿತು ಪೌತ್ರಶೋಕದಲಿ

ಪದ್ಯ ೬೨: ಅಭಿಮನ್ಯುವಿನ ದೇಹವು ಹೇಗೆ ಕಂಡಿತು?

ಬಿಗಿದ ಹುಬ್ಬಿನ ಬಿಟ್ಟ ಕಂಗಳ
ಹೊಗರು ಮೋರೆಯ ಹಿಣಿಲ ಮಂಡೆಯ
ಬಿಗಿಯ ರಕುತದ ಜೋರಿನೊಡಲಿನ ತುರುಗಿದಂಬುಗಳ
ಹೆಗಲ ಕೊಯ್ಲಿನ ತಗ್ಗಿನಲಿ ಸೈ
ನೆಗೆದ ರೋಮದ ವಿಕ್ರಮಾಗ್ನಿಯ
ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ (ದ್ರೋಣ ಪರ್ವ, ೬ ಸಂಧಿ, ೬೨ ಪದ್ಯ)

ತಾತ್ಪರ್ಯ:
ಹುಬ್ಬುಗಳು ಬಿಗಿದಿದ್ದವು, ಕಣ್ಣಗಳು ತೆರೆದಿದ್ದವು, ಮುಖವು ಕಾಂತಿಯುಕ್ತವಾಗಿ ಬೆಳಗುತ್ತಿತ್ತು, ತಲೆಯ ಕೂದಲು ಕೆದರಿತ್ತು, ದೇಹದೊಳಗೆ ಸೇರಿದ ಬಾಣಗಳಿಂದ ರಕ್ತವು ಸುರಿಯುತ್ತಿತ್ತು, ಹೆಗಲ ತಗ್ಗಿನಲ್ಲಿ ಜೋಲುಬಿದ್ದ ಕೂದಲುಗಳು, ಪರಾಕ್ರಮಾಗ್ನಿಯು ಶಾಂತವಾಗದ ಅಭಿಮನ್ಯುವು ಬಾಣಗಳ ಹಾಸಿಗೆಯಲ್ಲಿ ರಾರಾಜಿಸಿದನು.

ಅರ್ಥ:
ಬಿಗಿ: ಬಂಧಿಸು, ಗಟ್ಟಿ; ಹುಬ್ಬು: ಕಣ್ಣ ಮೇಲಿನ ಕೂದಲು; ಬಿಟ್ಟ: ತೆರೆದ; ಕಂಗಳು: ಕಣ್ಣು; ಹೊಗರು: ಕಾಂತಿ, ಪ್ರಕಾಶ; ಮೋರೆ: ಮುಖ; ಹಿಣಿಲು: ಹೆರಳು, ಜಡೆ; ಮಂಡೆ: ತಲೆ; ರಕುತ: ನೆತ್ತರು; ಜೋರು: ವೇಗ; ಒಡಲು: ದೇಹ; ತುರುಗು: ಸಂದಣಿ; ಅಂಬು: ಬಾಣ; ಹೆಗಲು: ಭುಜ; ಕೊಯ್ಲು: ಕೊಯ್ದ ಗಾಯ; ತಗ್ಗು: ಹಳ್ಳ, ಗುಣಿ; ನೆಗೆ: ನೆಗೆತ, ಜಿಗಿತ; ರೋಮ: ಕೂದಲು; ವಿಕ್ರಮಾಗ್ನಿ: ಪರಾಕ್ರಮದ ಜ್ವಾಲೆ; ತಗಹು: ನಿಲ್ಲಿಸು; ಮೆರೆ: ಶೋಭಿಸು; ಶಸ್ತ್ರ: ಆಯುಧ; ಶಯನ: ನಿದ್ರೆ;

ಪದವಿಂಗಡಣೆ:
ಬಿಗಿದ +ಹುಬ್ಬಿನ +ಬಿಟ್ಟ +ಕಂಗಳ
ಹೊಗರು +ಮೋರೆಯ +ಹಿಣಿಲ +ಮಂಡೆಯ
ಬಿಗಿಯ +ರಕುತದ +ಜೋರಿನೊಡಲಿನ +ತುರುಗಿದ್+ಅಂಬುಗಳ
ಹೆಗಲ +ಕೊಯ್ಲಿನ +ತಗ್ಗಿನಲಿ +ಸೈ
ನೆಗೆದ+ ರೋಮದ +ವಿಕ್ರಮಾಗ್ನಿಯ
ತಗಹು +ಬಿಡದ್+ಅಭಿಮನ್ಯು +ಮೆರೆದನು +ಶಸ್ತ್ರ +ಶಯನದಲಿ

ಅಚ್ಚರಿ:
(೧) ಅಭಿಮನ್ಯುವನ್ನು ಹೊಗಳುವ ಪರಿ – ವಿಕ್ರಮಾಗ್ನಿಯ ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ

ಪದ್ಯ ೬೧: ಅಭಿಮನ್ಯುವು ಹೇಗೆ ಮಲಗಿದನು?

ತೋಳ ತಲೆಗಿಂಬಿನಲಿ ಕೈದುಗ
ಳೋಳಿಗಳ ಹಾಸಿನಲಿ ತನ್ನಯ
ಕಾಲ ದೆಸೆಯಲಿ ಕೆಡೆದ ಕೌರವ ಸುತರ ನೂರ್ವರಲಿ
ಬಾಲಕನು ಬಳಲಿದನು ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ (ದ್ರೋಣ ಪರ್ವ, ೬ ಸಂಧಿ, ೬೧ ಪದ್ಯ)

ತಾತ್ಪರ್ಯ:
ತೋಳನ್ನೇ ತಲೆದಿಂಬಾಗಿ ಮಾಡಿಕೊಂಡು, ಆಯುಧಗಳ ಹಾಸಿಗೆಯ ಮೇಲೆ ತನ್ನ ಕಾಲ ಕೆಳಗೆ ಕೌರವನ ನೂರು ಮಕ್ಕಳೂ ಬಿದ್ದಿರಲು, ಯುದ್ಧದಾಟದಲ್ಲಿ ಕುಣಿಕುಣಿದು ಬಳಲಿ ವೀರಾಗ್ರಣಿಯಾದ ಅಭಿಮನ್ಯುವು ಮಹಾಯುದ್ಧದಲ್ಲಿ ಮಲಗಿದನು.

ಅರ್ಥ:
ತೋಳು: ಬಾಹು; ತಲೆ: ಶಿರ; ಇಂಬು: ಆಶ್ರಯ; ಕೈದುಗ: ಆಯುಧ; ಊಳಿಗ: ಸೇವೆ, ಕಾರ್ಯ; ಹಾಸಿ: ಹಾಸಿಗೆ; ಕಾಲು: ಪಾದ; ದೆಸೆ: ದಿಕ್ಕು; ಕೆಡೆ: ಬೀಳು, ಕುಸಿ; ಸುತ: ಮಕ್ಕಳು; ನೂರು: ಶತ; ಬಾಲಕ: ಚಿಕ್ಕವ; ಬಳಲು: ಆಯಾಸ; ಸಮರ: ಯುದ್ಧ; ಲೀಲೆ: ಆನಂದ, ಸಂತೋಷ; ಕುಣಿ: ನರ್ತಿಸಿ; ಬಸವಳಿ: ಆಯಾಸಗೊಳ್ಳು; ಆಳು: ಸೇವಕ, ಸೈನಿಕ; ದೇವ: ಒಡೆಯ, ಶ್ರೇಷ್ಠ; ಆಹವ: ಯುದ್ಧ; ಪವಡಿಸು: ಮಲಗು;

ಪದವಿಂಗಡಣೆ:
ತೋಳ +ತಲೆಗಿಂಬಿನಲಿ+ ಕೈದುಗಳ್
ಊಳಿಗಳ+ ಹಾಸಿನಲಿ+ ತನ್ನಯ
ಕಾಲ +ದೆಸೆಯಲಿ +ಕೆಡೆದ+ ಕೌರವ+ ಸುತರ+ ನೂರ್ವರಲಿ
ಬಾಲಕನು +ಬಳಲಿದನು+ ಸಮರದ
ಲೀಲೆಯಲಿ +ಕುಣಿಕುಣಿದು +ಬಸವಳಿದ್
ಆಳುಗಳ +ದೇವನು +ಮಹ+ಆಹವದೊಳಗೆ +ಪವಡಿಸಿದ

ಅಚ್ಚರಿ:
(೧) ಅಭಿಮನ್ಯುವಿನ ಮರಣವನ್ನು ವಿವರಿಸುವ ಪರಿ – ಬಾಲಕನು ಬಳಲಿದನು ಸಮರದ ಲೀಲೆಯಲಿ ಕುಣಿಕುಣಿದು ಬಸವಳಿದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ
(೨) ಅಭಿಮನ್ಯುವನ್ನು ಹೊಗಳುವ ಪರಿ – ಆಳುಗಳ ದೇವನು

ಪದ್ಯ ೬೦: ಅಭಿಮನ್ಯುವಿನ ಅಂತ್ಯಕ್ಕೆ ಯಾವ ದೃಷ್ಟಾಂತವನ್ನು ಕವಿ ನೀಡಿದ್ದಾರೆ?

ಕಾಳುಕಿಚ್ಚಿದ್ದಡವಿಯನು ಕುಡಿ
ನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು ಗಗನದ ಮುಗಿಲ ಮೋಹರವ
ದಾಳಿಯಲಿಯರೆಯಟ್ಟಿ ಸುಂಟರು
ಗಾಳಿಯುರವಣೆ ನಿಂದವೊಲು ಸುರ
ಪಾಲ ತನಯನ ತನಯನಸ್ತಮಿಸಿದನು ರಣದೊಳಗೆ (ದ್ರೋಣ ಪರ್ವ, ೬ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕಾಡುಕಿಚ್ಚು ಭುಗಿಲ್ಲ್ ಎಂದು ಎದ್ದು ಅಡವಿಯನ್ನು ತನ್ನ ನಾಲಿಗೆಗಳಿಂದ ಸುಟ್ಟು ಅಡಗಿ ಹೋಗುವಂತೆ ಆಕಾಶದಲ್ಲಿ ದಟ್ಟೈಸಿದ್ದ ಮೋಡಗಳನ್ನು ಬಿರುಗಾಳಿಯು ದೂರಕ್ಕೆ ಕಳಿಸಿ ಸುಮ್ಮನಾದಂತೆ ಇಂದ್ರನ ಮೊಮ್ಮಗನಾದ ಅಭಿಮನ್ಯುವು ಯುದ್ಧದಲ್ಲಿ ಅಸ್ತಂಗತನಾದನು.

ಅರ್ಥ:
ಕಾಳುಕಿಚ್ಚು: ಕಾಡಿನಲ್ಲಿ ಕಾಣಿಸಿಕೊಂಡ ಬೆಂಕಿ; ಅಡವಿ: ಕಾಡು; ಕುಡಿ: ತುದಿ, ಕೊನೆ; ನಾಲಗೆ: ಜಿಹ್ವೆ; ಅಳವಡಿಸು: ಸೇರಿಸು; ದಳ್ಳುರಿ: ಜೋರಾದ ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ತಗ್ಗು: ಕಡಿಮೆಯಾಗು; ಗಗನ: ಆಗಸ; ಮುಗಿಲು: ಆಕಾಶ; ಮೋಹರ: ಯುದ್ಧ; ದಾಳಿ: ಆಕ್ರಮಣ; ಸುಂಟರಗಾಳಿ: ಜೋರಾದ ಗಾಳಿ, ಬಿರುಗಾಳಿ; ಉರವಣೆ: ಹೆಚ್ಚು, ಅಬ್ಬರ; ಸುರಪಾಲ: ಇಂದ್ರ; ತನಯ: ಮಗ; ಅಸ್ತಮ: ಕೊನೆಯಾಗು; ರಣ: ಯುದ್ಧ;

ಪದವಿಂಗಡಣೆ:
ಕಾಳುಕಿಚ್ಚಿದ್+ಅಡವಿಯನು +ಕುಡಿ
ನಾಲಗೆಯೊಳ್+ಅಳವಡಿಸಿ+ ದಳ್ಳುರಿ
ಜ್ವಾಲೆ +ತಗ್ಗಿದವೋಲು +ಗಗನದ +ಮುಗಿಲ +ಮೋಹರವ
ದಾಳಿಯಲಿ+ಅರೆಯಟ್ಟಿ +ಸುಂಟರು
ಗಾಳಿ+ಉರವಣೆ+ ನಿಂದವೊಲು+ ಸುರ
ಪಾಲ +ತನಯನ +ತನಯನ್+ಅಸ್ತಮಿಸಿದನು +ರಣದೊಳಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಳುಕಿಚ್ಚಿದ್ದಡವಿಯನು ಕುಡಿನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು; ಗಗನದ ಮುಗಿಲ ಮೋಹರವ ದಾಳಿಯಲಿಯರೆಯಟ್ಟಿ ಸುಂಟರುಗಾಳಿಯುರವಣೆ ನಿಂದವೊಲು
(೨) ಅಭಿಮನ್ಯುವನ್ನು ಸುರಪಾಲ ತನಯನ ತನಯ ಎಂದು ಕರೆದ ಪರಿ

ಪದ್ಯ ೫೯: ಯಾರ ಹೊಡೆತದಿಂದ ಅಭಿಮನ್ಯುವು ಭೂಮಿಗೆ ಬಿದ್ದನು?

ಕರಹತಿಗೆ ಧಡಧಡಿಸಿ ತಿರ್ರನೆ
ತಿರುಗಿ ಬೀಳುತ ಧೈರ್ಯದಲಿ ಹೊಡ
ಕರಿಸಿ ಹೊರಬಿನೊಳೆದ್ದು ಹೊಯ್ದನು ಪಾರ್ಥನಂದನನ
ಅರಿ ಕೃಪಾಣದ ಘಾಯವನು ತರ
ಹರಿಸಲರಿಯದೆ ಬೀಳುತಹಿತನ
ನೆರಗಿದನು ಬಳಿಕವನಿಗೊರಗಿದರಾ ಕುಮಾರಕರು (ದ್ರೋಣ ಪರ್ವ, ೬ ಸಂಧಿ, ೫೯ ಪದ್ಯ)

ತಾತ್ಪರ್ಯ:
ಆ ಹೊಡೆತಕ್ಕೆ ದುಶ್ಯಾಸನನ ಮಗನು ಧಡಧಡಿಸಿ ತಿರ್ರನೆ ತಿರುಗಿ ಬಿದ್ದು ಧೈರ್ಯದಿಂದೆದ್ದು ಅಭಿಮನ್ಯುವನ್ನು ಕತ್ತಿಯಿಂದ ಹೊಡೆದನು. ಆ ಗಾಯವನ್ನು ತಡೆದುಕೊಳ್ಳಲ್ಲಾಗದೆ ಅಭಿಮನ್ಯುವು ಬೀಳುತ್ತಾ ಶತ್ರುವಿನ ಮೇಲೆರಗಿದನು, ಇಬ್ಬರು ಕುಮಾರರು ಭೂಮಿಗೆ ಬಿದ್ದರು.

ಅರ್ಥ:
ಕರ: ಹಸ್ತ; ಹತಿ: ಪೆಟ್ಟು, ಹೊಡೆತ; ಧಡಧಡ: ಬೇಗ, ಆತುರವನ್ನು ತಿಳಿಸುವ ಪದ; ತಿರುಗು: ವೃತ್ತಾಕಾರವಾಗಿ ಚಲಿಸು; ಬೀಳು: ಎರಗು; ಧೈರ್ಯ: ಕೆಚ್ಚು; ಹೊಡಕರಿಸು: ಕಾಣಿಸು, ಬೇಗಬೆರಸು; ಹೊರಬಿ: ಹೊರ ವಲಯದ; ಎದ್ದು: ಮೇಲೇಳು; ಹೊಯ್ದು: ಹೊಡೆ; ನಂದನ: ಮಗ; ಅರಿ: ವೈರಿ; ಕೃಪಾಣ: ಕತ್ತಿ, ಖಡ್ಗ; ಘಾಯ: ಪೆಟ್ಟು; ತರಹರಿಸು: ಕಳವಳಿಸು, ತಡಮಾಡು; ಅರಿ: ತಿಳಿ; ಬೀಳು: ಜಾರು; ಅಹಿತ: ಶತ್ರು; ಎರಗು: ಬೀಳು; ಬಳಿಕ: ನಂತರ; ಅವನಿ: ಭೂಮಿ; ಒರಗು: ಮಲಗು, ಕೆಳಕ್ಕೆ ಬಾಗು; ಕುಮಾರ: ಮಕ್ಕಳು;

ಪದವಿಂಗಡಣೆ:
ಕರಹತಿಗೆ +ಧಡಧಡಿಸಿ +ತಿರ್ರನೆ
ತಿರುಗಿ +ಬೀಳುತ +ಧೈರ್ಯದಲಿ +ಹೊಡ
ಕರಿಸಿ+ ಹೊರಬಿನೊಳ್+ಎದ್ದು +ಹೊಯ್ದನು +ಪಾರ್ಥ+ನಂದನನ
ಅರಿ +ಕೃಪಾಣದ +ಘಾಯವನು +ತರ
ಹರಿಸಲ್+ಅರಿಯದೆ +ಬೀಳುತ್+ಅಹಿತನನ್
ಎರಗಿದನು +ಬಳಿಕ್+ಅವನಿಗ್+ಒರಗಿದರಾ +ಕುಮಾರಕರು

ಅಚ್ಚರಿ:
(೧) ಯುದ್ಧವನ್ನು ಚಿತ್ರಿಸುವ ಪರಿ – ಕರಹತಿಗೆ ಧಡಧಡಿಸಿ ತಿರ್ರನೆ ತಿರುಗಿ ಬೀಳುತ
(೨) ಅರಿ, ಅಹಿತ – ಸಮಾನಾರ್ಥಕ ಪದ
(೩) ಅರಿ ಪದದ ಬಳಕೆ – ಅರಿ ಕೃಪಾಣದ ಘಾಯವನು ತರಹರಿಸಲರಿಯದೆ

ಪದ್ಯ ೫೮: ಅಭಿಮನ್ಯುವು ದುಶ್ಯಾಸನ ಮಗನ ಎದೆಯನ್ನು ಹೇಗೆ ತಿವಿದನು?

ಗಾಲಿ ತೀರಿದವೆಂದು ಬಂದನೆ
ಕಾಳೆಗಕೆ ತಪ್ಪೇನೆನುತ ಕರ
ವಾಳಿನಾತನ ಬಗೆಯದೊಳಹೊಕ್ಕೆರಗಿದನು ಶಿರವ
ಮೇಲುವಲಗೆಯಲಣೆದು ಹಾಯ್ದನು
ಬಾಲಕನ ಘಾಯವನು ನಸುನಗು
ತೇಳಿಸುತ ದಂಡೆಯಲಿ ಕಳೆದನು ತಿವಿದನವನುರವ (ದ್ರೋಣ ಪರ್ವ, ೬ ಸಂಧಿ, ೫೮ ಪದ್ಯ)

ತಾತ್ಪರ್ಯ:
ನನ್ನ ಗಾಲಿಯಿಲ್ಲವೆಂದು ಯುದ್ಧಕ್ಕೆ ಬಂದನೇ, ಒಳ್ಳೆಯದಾಯಿತು, ತಪ್ಪೇನು ಎಂದು ಅಭಿಮನ್ಯುವು ದುಶ್ಯಾಸನ ನ ಮಗನನ್ನು ಲೆಕ್ಕಿಸದೆ ಒಳಹೊಕ್ಕು ಅವನ ತಲೆಗೆ ಬಡಿದನು. ಗುರಾಣಿಯಿಂದ ಹೊಡೆದು ತಿವಿತವನ್ನು ತಪ್ಪಿಸಿಕೊಂಡು ಅಭಿಮನ್ಯುವು ಅವನೆದೆಗೆ ತಿವಿದನು.

ಅರ್ಥ:
ಗಾಲಿ: ಚಕ್ರ; ತೀರು: ಮುಕ್ತಾಯ; ಬಂದು: ಆಗಮಿಸು; ಕಾಳೆಗ: ಯುದ್ಧ; ತಪ್ಪು: ಸರಿಯಲ್ಲದ; ಕರವಾಳ: ಕತ್ತಿ; ಬಗೆ: ಆಲೋಚನೆ; ಹೊಕ್ಕು: ಸೇರು; ಎರಗು: ಬಾಗು; ಶಿರವ: ತಲೆ; ಅಲಗೆ: ಕತ್ತಿ; ಅಣೆ: ತಿವಿ; ಹಾಯ್ದು: ಹೊಡೆ; ಬಾಲಕ: ಚಿಕ್ಕವ; ಘಾಯ: ಪೆಟ್ಟು; ನಸುನಗು: ಹಸನ್ಮುಖಿ; ಏಳು: ನಿಲ್ಲು; ದಂಡೆ: ಗುರಾಣಿ; ಕಳೆ: ತೊರೆ; ತಿವಿ: ಚುಚ್ಚು; ಉರ: ಎದೆ;

ಪದವಿಂಗಡಣೆ:
ಗಾಲಿ +ತೀರಿದವೆಂದು +ಬಂದನೆ
ಕಾಳೆಗಕೆ +ತಪ್ಪೇನ್+ಎನುತ+ ಕರ
ವಾಳಿನಾತನ +ಬಗೆಯದ್+ಒಳಹೊಕ್ಕ್+ಎರಗಿದನು +ಶಿರವ
ಮೇಲುವ್+ಅಲಗೆಯಲ್+ಅಣೆದು +ಹಾಯ್ದನು
ಬಾಲಕನ +ಘಾಯವನು +ನಸುನಗುತ್
ಏಳಿಸುತ +ದಂಡೆಯಲಿ +ಕಳೆದನು +ತಿವಿದನ್+ಅವನ್+ಉರವ

ಅಚ್ಚರಿ:
(೧) ಗಾಲಿ, ಕರವಾಳಿ, ಏಳಿ – ಪ್ರಾಸ ಪದಗಳು