ಪದ್ಯ ೩೨: ದ್ರೌಪದಿಯು ಯಾರ ಸಖಿಯಾದಳು?

ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳನಿಬರಿಗಾಯ್ತು ನಿರ್ವಾಹ
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈಮರೆ
ಸನುಪಮಿತ ಭುಜ ಸತ್ವರಿದ್ದರು ಭೂಪ ಕೇಳೆಂದ (ವಿರಾಟ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ವಿರಾಟನರಾಣಿಯು ಮೆಚ್ಚಿ ತನ್ನ ಸಖಿಯನ್ನಾಗಿ ನೇಮಿಸಿಕೊಂಡಳು. ಪಾಂಡವರಿಗೂ ದ್ರೌಪದಿಗೂ ಅಜ್ಞಾತವಾಸದ ಸಮಯದಲ್ಲಿ ತಲೆಮರೆಸಿಕೊಂಡಿರಲು ಒಂದು ದಾರಿ ಸಿಕ್ಕಿತು. ಅವರೆಲ್ಲರ ತಾಪಗಳೂ ಅಡಗಿದವು. ಮಹಾ ಪರಾಕ್ರಮಶಾಲಿಗಳಾದ ಅವರು ಮತ್ಸ್ಯನಗರದಲ್ಲಿ ಯಾರಿಗೂ ತಿಳಿಯದಂತೆ ಅಡಗಿಕೊಂಡಿದ್ದರು.

ಅರ್ಥ:
ಮೆಚ್ಚು: ಪ್ರೀತಿ, ಇಷ್ಟ; ವನಿತೆ: ಹೆಣ್ಣು, ಸ್ತ್ರೀ; ವೀರ: ಪರಾಕ್ರಮ; ವಧು: ಹೆಣ್ಣು; ಸಖಿ: ಗೆಳತಿ; ನೇಮಿಸು: ಅಪ್ಪಣೆ ಮಾಡು; ಅನಿಬರು: ಅಷ್ಟು ಜನ; ನಿರ್ವಾಹ: ವ್ಯವಸ್ಥೆ; ಮನ: ಮನಸ್ಸು; ಢಗೆ: ಕಾವು, ಕಳವಳ; ಅಡಗು: ಮರೆಯಾಗು; ಈಶ: ಒಡೆಯ; ಪುರ: ಊರು; ಅನುಪಮಿತ: ಉಪಮಾತೀತ; ಭುಜ: ಬಾಹು; ಸತ್ವ: ಸಾರ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎನಲು +ಮೆಚ್ಚಿದಳ್+ಆ+ ವಿರಾಟನ
ವನಿತೆ+ ವೀರರ+ ವಧುವನ್+ಆ+ ಸಖಿ
ಜನದೊಳಗೆ +ನೇಮಿಸಿದಳ್+ಅನಿಬರಿಗಾಯ್ತು +ನಿರ್ವಾಹ
ಮನದ +ಢಗೆ+ಅಡಗಿದವು +ಮತ್ಸ್ಯೇ
ಶನ +ಪುರಾಂತರದೊಳಗೆ+ ಮೈಮರೆಸ್
ಅನುಪಮಿತ +ಭುಜ+ ಸತ್ವರಿದ್ದರು +ಭೂಪ +ಕೇಳೆಂದ

ಅಚ್ಚರಿ:
(೧) ವಿರಾಟನ ರಾಣಿ ಸುದೇಷ್ಣೆಯನ್ನು ವಿರಾಟನ ವನಿತೆ ಎಂದು ಕರೆದಿರುವುದು
(೨) ದ್ರೌಪದಿಯನ್ನು ವೀರರ ವಧು ಎಂದು ಕರೆದಿರುವುದು

ಪದ್ಯ ೩೧: ದ್ರೌಪದಿಯು ಯಾವ ಕೆಲಸವನ್ನು ಮಾಡುವೆನೆಂದು ಹೇಳಿದಳು?

ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವೆ
ಸೂನ ಮುಡಿಸುವೆ ವರಕಟಾಕ್ಷಕೆ ಕಾಡಿಯನಿಡುವೆ
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ (ವಿರಾಟ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ವಿರಾಟ ರಾಣಿಯು ಏನು ಮಾಡಲು ಬಲ್ಲೆ ಎಂದು ಕೇಳಲು, ದ್ರೌಪದಿಯು ಮಹಾರಾಣಿಯವರ ಕೇಶ ವಿನ್ಯಾಸ ಮಾಡಬಲ್ಲೆ, ಅವರ ಮುಡಿಗೆ ಹೂವನ್ನು ಮುಡಿಸಬಲ್ಲೆ, ಅವರ ಕಣ್ಣಿಗೆ ಕಾಡಿಗೆಯನ್ನು ಇಡಬಲ್ಲೆ, ಯಾವ ಕೆಲಸವನ್ನು ಹೇಳಿದರೂ ನಾನು ಪ್ರೀತಿಯಿಂದ ಮಾಡಬಲ್ಲೆ ಎಂದು ಹೇಳಲು, ಸುದೇಷ್ಣೆಯು ದ್ರೌಪದಿಯ ಮಾತಿಗೆ ಮೆಚ್ಚಿದಳು.

ಅರ್ಥ:
ಮಾಡು: ನಿರ್ವಹಿಸು; ಬಲ್ಲೆ: ತಿಳಿ; ಮಾನಿನಿ: ಹೆಣ್ಣು; ಸಿರಿಮುಡಿ: ಶ್ರೇಷ್ಠವಾದ ಶಿರ; ಕಟ್ಟು:ಬಂಧಿಸು; ಸೂನ: ಪುಷ್ಪ, ಹೂವು; ಮುಡಿಸು: ತಲೆಗೆ ಅಲಂಕರಿಸು; ವರ: ಶ್ರೇಷ್ಠ; ಕಟಾಕ್ಷ: ಓರೆನೋಟ, ದೃಷ್ಟಿ; ಕಾಡಿಗೆ: ಕಣ್ಣಿಗೆ ಹಚ್ಚಿಕೊಳ್ಳುವ ಕಪ್ಪು, ಅಂಜನ; ಅನುರಾಗ: ಪ್ರೀತಿ; ನಸುನಗು: ಸಂತಸ; ನುಡಿಸು: ಮಾತನಾಡಿಸು; ವಿನಯ: ಸೌಜನ್ಯ;

ಪದವಿಂಗಡಣೆ:
ಏನ +ಮಾಡಲು +ಬಲ್ಲೆ+ಎಂದರೆ
ಮಾನಿನಿಯ +ಸಿರಿಮುಡಿಯ +ಕಟ್ಟುವೆ
ಸೂನ +ಮುಡಿಸುವೆ +ವರ+ಕಟಾಕ್ಷಕೆ+ ಕಾಡಿಯನಿಡುವೆ
ಏನ+ ಹೇಳಿದ +ಮಾಡಬಲ್ಲೆನು
ಸಾನುರಾಗದೊಳ್+ಎಂದೆನಲು +ವರ
ಮಾನಿನಿಯ +ನಸುನಗುತ+ ನುಡಿಸಿದಳಂದು+ ವಿನಯದಲಿ

ಅಚ್ಚರಿ:
(೧) ಮಾನಿನಿ – ೨, ೬ ಸಾಲಿನ ಮೊದಲ ಪದ

ಪದ್ಯ ೩೦: ದ್ರೌಪದಿ ತನ್ನನ್ನು ಹೇಗೆ ಪರಿಚಯಿಸಿಕೊಂಡಳು?

ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯಮಾಡಿದರೊಂದು ವರುಷವು ಬಿಡುವೆನವರುಗಳ
ಸತತವಾ ಕುಂತೀಕುಮಾರರ
ಸತಿಯನೋಲೈಸಿದ್ದೆ ಬಳಿಕವ
ರತಿಗಹನದಲಿ ನಿಷ್ಠರಾಗಲು ತನಗೆ ಬರವಾಯ್ತು (ವಿರಾಟ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಮಹಾ ಪರಾಕ್ರಮಿಗಳಾದ ಐದು ಗಂಧರ್ವರು ನನ್ನ ಪತಿಗಳು. ನನ್ನ ಮನಸ್ಸಿಗೆ ಬೇಸರವಾದಾಗ ಅವರನ್ನು ಒಂದು ವರ್ಷ ಅಗಲಿ ಭೂಮಿಗೆ ಬರುತ್ತೇನೆ. ಇದುವರೆಗೆ ಹೀಗೆ ಬಂದಿದ್ದಾಗ ದ್ರೌಪದಿಯನ್ನು ಓಲೈಸಿಕೊಂಡಿದ್ದೆ. ಪಾಂಡವರು ಕಾಡಿಗೆ ಹೋದದ್ದರಿಂದ ನಿಮ್ಮ ಬಳಿಗೆ ಬಂದಿದ್ದೇನೆ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಅತುಳಬಲ: ಮಹಾ ಪರಾಕ್ರಮಿ; ಗಂಧರ್ವ: ಖಚರು; ಪತಿ: ಗಂಡ; ಚಿತ್ತ: ಮನಸ್ಸು; ಖತಿ: ಕೋಪ; ವರುಷ: ಸಂವತ್ಸರ; ಬಿಡುವೆ: ತೊರೆ; ಸತತ: ಯಾವಾಗಲು; ಕುಮಾರ: ಮಕ್ಕಳು; ಸತಿ: ಹೆಂಡತಿ; ಓಲೈಸು: ಉಪಚರಿಸು; ಬಳಿಕ: ನಂತರ; ಅತಿ: ಬಹಳ; ಗಹನ: ಕಾಡು, ಅಡವಿ; ನಿಷ್ಠ: ಶ್ರದ್ಧೆಯುಳ್ಳವ; ಬರವು: ಆಗಮನ;

ಪದವಿಂಗಡಣೆ:
ಅತುಳಬಲ +ಗಂಧರ್ವರ್+ಐವರು
ಪತಿಗಳ್+ಎನಗುಂಟ್+ಎನ್ನ +ಚಿತ್ತಕೆ
ಖತಿಯ+ಮಾಡಿದರ್+ಒಂದು +ವರುಷವು+ ಬಿಡುವೆನ್+ಅವರುಗಳ
ಸತತವ್+ಆ+ ಕುಂತೀ+ಕುಮಾರರ
ಸತಿಯನ್+ಓಲೈಸಿದ್ದೆ+ ಬಳಿಕವರ್
ಅತಿ+ಗಹನದಲಿ +ನಿಷ್ಠರಾಗಲು +ತನಗೆ +ಬರವಾಯ್ತು

ಅಚ್ಚರಿ:
(೧) ಪತಿ, ಖತಿ, ಸತಿ, ಅತಿ – ಪ್ರಾಸ ಪದಗಳು

ಪದ್ಯ ೨೯: ದ್ರೌಪದಿಯನ್ನು ರಾಣಿಯು ಯಾವ ಪ್ರಶ್ನೆ ಕೇಳಿದಳು?

ಕೆಳದಿಯರು ಕಾಣಿಸಿದರರಸನ
ಲಲನೆಯನು ಪರಿಯಂಕ ಪೀಠದ
ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ
ನಳಿನಮುಖಿ ನೀನಾರು ನಿನಗಾ
ರೊಳರು ರಮಣರು ಮಾಸಿಕೊಂಡಿಹ
ಮಲಿನವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ (ವಿರಾಟ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ದಾಸಿಯರು ರಾಣಿಯ ಆಸೀನಳಾಗಿದ್ದ ಮಂಚನ ಪಕ್ಕಕ್ಕೆ ಕರೆತಂದರು. ರಾಣಿಯು ದ್ರೌಪದಿಯನ್ನು ಪ್ರೀತಿಯಿಂದ ಮಾತನಾಡಿಸುತ್ತಾ, ಕಮಲಮುಖಿ, ನೀನಾರು, ನಿನ್ನ ಪತಿಯಾರು? ನಿನಗೆ ಇಂತಹ ಮಲಿನ ವೃತ್ತಿಯ ದುರ್ಗತಿಯೇಕೆ ಬಂದಿತು ಎಂದು ಕೇಳಿದಳು.

ಅರ್ಥ:
ಕೆಳದಿ: ಗೆಳತಿ, ಸ್ನೇಹಿತೆ; ಕಾಣಿಸು: ತೋರು, ಗೋಚರಿಸು; ಅರಸ: ರಾಜ; ಲಲನೆ: ಹೆಣ್ಣು; ಪರಿಯಂಕ: ಹಾಸುಗೆ; ಪೀಠ: ಆಸನ; ಕೆಲ: ಪಕ್ಕ; ಕರೆ: ಬರೆಮಾಡು; ಕಮಲವದನೆ: ಕಮಲದಂತಹ ಮುಖವುಳ್ಳವಳು; ಉಚಿತ: ಸರಿಯಾದ; ವಚನ: ಮಾತು, ನುಡಿ; ನಳಿನಮುಖಿ: ಕಮಲದಂತಹ ಮುಖವುಳ್ಳವಳು; ರಮಣ: ಪ್ರಿಯತಮ; ಮಾಸು: ಬಾಡು; ಮಲಿನ: ಕೊಳೆ, ಹೊಲಸು; ವೃತ್ತಿ: ಕೆಲಸ; ಬೆಸ:ಕೆಲಸ, ಕಾರ್ಯ, ಅಪ್ಪಣೆ; ಅಂಗನೆ: ಸ್ತ್ರಿ;

ಪದವಿಂಗಡಣೆ:
ಕೆಳದಿಯರು +ಕಾಣಿಸಿದರ್+ಅರಸನ
ಲಲನೆಯನು +ಪರಿಯಂಕ +ಪೀಠದ
ಕೆಲಕೆ+ ಕರೆದಳು +ಕಮಲವದನೆಯನ್+ಉಚಿತ +ವಚನದಲಿ
ನಳಿನಮುಖಿ +ನೀನಾರು+ ನಿನಗ್
ಆರೊಳರು+ ರಮಣರು+ ಮಾಸಿ+ಕೊಂಡಿಹ
ಮಲಿನ+ವೃತ್ತಿಯಿದೇಕೆನುತ +ಬೆಸಗೊಂಡಳ್+ಅಗನೆಯ

ಅಚ್ಚರಿ:
(೧) ದಾಸಿ ವೃತ್ತಿಯು ದ್ರೌಪದಿಗೆ ಸರಿಯಲ್ಲ ಎಂದು ಹೇಳುವ ಪರಿ – ಮಾಸಿಕೊಂಡಿಹ ಮಲಿನವೃತ್ತಿಯಿದೇಕೆನುತ
(೨) ಕ ಕಾರದ ತ್ರಿವಳಿ ಪದ – ಕೆಲಕೆ ಕರೆದಳು ಕಮಲವದನೆ
(೩) ನಳಿನಮುಖಿ, ಕಮಲವದನೆ – ಸಮನಾರ್ಥಕ ಪದ

ಪದ್ಯ ೨೮: ದ್ರೌಪದಿಯು ಎಲ್ಲಿಗೆ ಬಂದು ಸೇರಿದಳು?

ಬರವ ಕಂಡು ಸುದೇಷ್ಣೆ ಮನದಲಿ
ಹರುಷಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನಿನಿಬರನು
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ (ವಿರಾಟ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಕಂಡು ಸುದೇಷ್ಣೆಯು ಹಿಗ್ಗಿ ಆ ಯುವತಿ ಯಾರು? ಅವಳನ್ನು ಕರೆದುಕೊಂಡು ಬನ್ನಿ, ಎಂದು ಸಖಿಯರನ್ನು ಕಳಿಸಿದಳು. ಅರಳಿದ ಕಮಲದ ಸೌಂದರ್ಯವನ್ನು ಒಳಗೊಂಡ ದೇಹ ಅದಕ್ಕೆ ಮೊದಲೇ ಬರುವ ಪರಿಮಳವನ್ನು ಬೀರುತ್ತಾ ದ್ರೌಪದಿಯು ಬಂದಳು.

ಅರ್ಥ:
ಬರವ: ಆಗಮನ; ಕಂಡು: ನೋಡು; ಮನ: ಮನಸ್ಸು; ಹರುಷ: ಸಂತಸ; ಹೊಂಗು: ಉತ್ಸಾಹ, ಹುರುಪು; ಕರೆ: ಬರೆಮಾಡು; ತರುಣಿ: ಹೆಂಗಸು; ಅಟ್ಟು: ಕಳುಹಿಸು; ಕೆಳದಿ:ಗೆಳತಿ, ಸ್ನೇಹಿತೆ; ಅನಿಬರು: ಅಷ್ಟು ಜನ; ಸರಸಿಜ: ಕಮಲ; ಆಯತ: ವಿಶಾಲವಾದ; ಅಂದ: ಚೆಲುವು; ಮೋಹರ: ಗುಂಪು, ಸಮೂಹ; ಮುಂಚು: ಮೊದಲು; ಪರಿಮಳ: ಸುಗಂಧ; ಬೀರು: ಹರಡು; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ಬರವ +ಕಂಡು +ಸುದೇಷ್ಣೆ +ಮನದಲಿ
ಹರುಷಮಿಗೆ +ಹೊಂಗಿದಳು +ಕರೆ+ ಕರೆ
ತರುಣಿ+ಆರೆಂದ್+ಅಟ್ಟಿದಳು +ಕೆಳದಿಯರನ್+ಇನಿಬರನು
ಸರಸಿಜಾಯತದ್+ಅಂದವನು +ಮೋ
ಹರಿಸಿ+ ಮುಂಚುವ +ಪರಿಮಳವನಂ
ದರಸಿ+ ಬೀರುತ +ಬಂದು +ಹೊಕ್ಕಳು +ರಾಜ+ಮಂದಿರವ

ಅಚ್ಚರಿ:
(೧) ದ್ರೌಪದಿಯ ಸೊಬಗು – ಸರಸಿಜಾಯತದಂದವನು ಮೋಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ

ಪದ್ಯ ೨೭: ರಾಣಿಯರೇಕೆ ಅಳುಕಿದರು?

ಜನರ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯ ಭವನಕೆ ಬರಲು ಬೆರಗಾಯ್ತಖಿಳ ನಾರಿಯರು
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು (ವಿರಾಟ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ದ್ರೌಪದಿಯ ಲಾವಣ್ಯದ ಮೋಹನ ಸಮುದ್ರದಲ್ಲಿ ಜನರ ಅರಿವು ಮುಳುಗಿಹೋಯಿತು. ಅವಳು ರಾಣಿಯ ಮನೆಗೆ ಬರಲು ಅಂತಃಪುರದ ಸ್ತ್ರೀಯರೆಲ್ಲರೂ ಬೆರಗಾಗಿ, ಇವಳು ಮನುಷ್ಯಳಲ್ಲ, ಮನುಷ್ಯ ಸ್ತ್ರೀಯರಿಗೆ ಇಷ್ಟೊಂದು ರೂಪ ಹೇಗೆ ಬಂದೀತು ಇದು ಆಶ್ಚರ್ಯಕರವೆಂದುಕೊಂಡು ಮನಸ್ಸಿನಲ್ಲೇ ತಮ್ಮ ಪಾಡೇನೆಂದಳುಕಿದರು.

ಅರ್ಥ:
ಜನ: ಮನುಷ್ಯ; ಜಾಣ: ಬುದ್ಧಿವಂತಿಕೆ; ಕಾಡು: ಪೀಡಿಸು; ಮೋಹನ: ಭ್ರಾಂತಿಗೊಳಿಸುವ, ಆಕರ್ಷಿಸು; ಮಹಾಂಬುಧಿ: ಸಾಗರ; ನೃಪ: ರಾಜ; ಅಂಗನೆ: ಸ್ತ್ರೀ; ಭವನ: ಆಲಯ; ಬರಲು: ಆಗಮಿಸಲು; ಬೆರಗು: ಆಶ್ಚರ್ಯ; ಅಖಿಳ: ಎಲ್ಲಾ; ನಾರಿ: ಸ್ತ್ರೀ; ವನಿತೆ: ಹೆಣ್ಣು; ಮಾನಿಸೆ: ಮನುಷ್ಯ; ಮನುಜ: ಮಾನವ; ಇನಿತು: ಇಷ್ಟು; ರೂಪ: ಆಕೃತಿ; ವಿಸ್ಮಯ: ಆಶ್ಚರ್ಯ; ಮನ: ಮನಸ್ಸು; ಅಳುಕು: ಹೆದರು; ಈಶ: ಒಡೆಯ; ಅರಸಿ: ರಾಣಿ;

ಪದವಿಂಗಡಣೆ:
ಜನರ +ಜಾಣಕ್+ಕಾಡಲ್+ಆ+ ಮೋ
ಹನ +ಮಹಾಂಬುಧಿಯೊಳಗೆ+ ನೃಪನ್+ಅಂ
ಗನೆಯ +ಭವನಕೆ+ ಬರಲು +ಬೆರಗಾಯ್ತಖಿಳ+ ನಾರಿಯರು
ವನಿತೆ +ಮಾನಿಸೆಯಲ್ಲ +ಮನುಜರಿ
ಗಿನಿತು +ರೂಪೆಲ್ಲಿಯದು+ ವಿಸ್ಮಯ
ವೆನುತ+ ಮನದೊಳಗ್+ಅಳುಕಿದರು+ ಮತ್ಸ್ಯೇಶನ್+ಅರಸಿಯರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಜನರ ಜಾಣಕ್ಕಾಡಲಾ ಮೋಹನ ಮಹಾಂಬುಧಿಯೊಳಗೆ
(೨) ಬ ಕಾರದ ತ್ರಿವಳಿ ಪದ – ಭವನಕೆ ಬರಲು ಬೆರಗಾಯ್ತಖಿಳ
(೩) ನಾರಿ, ವನಿತೆ, ಅಂಗನೆ, ಅರಸಿ – ಸ್ತ್ರೀ, ಹೆಣ್ಣು ಪದದ ರೂಪಗಳ ಪ್ರಯೋಗ

ಪದ್ಯ ೨೬: ದ್ರೌಪದಿಯ ಆಗಮನ ಯಾರ ಮನಸ್ಸನ್ನು ಗಾಸಿಯಾಗಿಸಿತು?

ಎಲೆಲೆ ಮದನನಗಜವು ತೊತ್ತಳ
ದುಳಿದುದೋ ಕಾಮುಕರನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟವಿದೂಷಕರ
ಅಳುಕಿದರು ಮನುಮಥನ ಗರುಡಿಯ
ಬಲುಮೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ (ವಿರಾಟ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿಟ ವಿದೂಷಕರೇ ಮೊದಲಾದವರು, ಎಲೆಲೆ ಮನ್ಮಥನ ಮದದಾನೆಯು ಕಾಮುಕರನ್ನು ಕೆಡವಿ ತುಳಿಯುತ್ತಿದೆ ಎಂದರು. ಜನರ ಗುಂಪು ಗಾಸಿಯಾಯಿಗು, ಇವಳಾರಿರಬಹುದು ಎಂದು ಎಲ್ಲರೂ ಆಶ್ಚರ್ಯಪಡಲು, ದ್ರೌಪದಿಯು ಆಗಮಿಸಿದಳು.

ಅರ್ಥ:
ಮದನ: ಮನ್ಮಥ, ಕಾಮ; ಗಜ: ಆನೆ; ತೊತ್ತಳ: ನುಗ್ಗುನುರಿ, ರಭಸ; ತುಳಿ: ಮೆಟ್ಟುವಿಕೆ, ತುಳಿತ; ಕಾಮುಕ: ವಿಟ; ಗಾವಳಿ: ಗುಂಪು; ಗಾರು: ಒರಟು, ಹಿಂಸೆ; ಗರುವ: ಶ್ರೇಷ್ಠ; ವಿಟ: ಕಾಮುಕ, ವಿಷಯಾಸಕ್ತ; ವಿದೂಷಕ: ಹಾಸ್ಯಗಾರ; ಅಳುಕು: ಹೆದರು; ಮನುಮಥ: ಮದನ; ಗರುಡಿ: ವ್ಯಾಯಾಮಶಾಲೆ; ಬಲುಮೆ:ಬಲ, ಶಕ್ತಿ; ಬಂದಳು: ಆಗಮಿಸು; ಅಗ್ಗ: ಶ್ರೇಷ್ಠ; ನಳಿನಮುಖಿ: ಕಮಲದಂತಹ ಮುಖ; ಬಹು: ಬಹಳ; ಜನ: ಮನುಷ್ಯ; ಮನ: ಮನಸ್ಸು; ಅಚ್ಚರಿ: ಆಶ್ಚರ್ಯ; ಒದವಿಸು: ಕೊಡು, ನೀಡು;

ಪದವಿಂಗಡಣೆ:
ಎಲೆಲೆ +ಮದನನ+ಗಜವು +ತೊತ್ತಳದ್
ಉಳಿದುದೋ +ಕಾಮುಕರನ್+ಎನೆ +ಗಾ
ವಳಿಯೊಳಗೆ+ ಗಾರಾಯ್ತು +ಗರುವಿಕೆ+ ವಿಟ+ವಿದೂಷಕರ
ಅಳುಕಿದರು+ ಮನುಮಥನ+ ಗರುಡಿಯ
ಬಲುಮೆಗಾರರು+ ಬಂದಳ್+ಅಗ್ಗದ
ನಳಿನಮುಖಿ +ಬಹುಜನದ +ಮನಕಚ್ಚರಿಯನ್+ಒದವಿಸುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮದನನಗಜವು ತೊತ್ತಳದುಳಿದುದೋ ಕಾಮುಕರನೆ
(೨) ಗ ಕಾರದ ತ್ರಿವಳಿ ಪದ – ಗಾವಳಿಯೊಳಗೆ ಗಾರಾಯ್ತು ಗರುವಿಕೆ

ಪದ್ಯ ೨೫: ದ್ರೌಪದಿಯ ಸೌಂದರ್ಯದ ಪ್ರಭಾವ ಹೇಗಿತ್ತು?

ಮೊಲೆಯ ಮೇಲುದು ಜಾರೆ ಜಾರಿದ
ರಳಿಮನರು ಕಂಗಳಿನ ಮಿಂಚಿನ
ಹಿಳುಕಿನೆಡೆ ನಡೆಗೆಟ್ಟುನಿಂದರು ಚಿತ್ತವಿಹ್ವಲರು
ತೆಳುವಸುರು ತಲೆದೋರೆ ತೋರಿದು
ದಲಗು ಮರುಮೊನೆಯೆನುತ ವಿಟರಳ
ವಳಿಯೆ ನಡೆತರುತಿರ್ದಳಂಗನೆ ರಾಜವೀಧಿಯಲಿ (ವಿರಾಟ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಬರುವಾಗ ಅವಳ ಸೆರಗು ಜಾರಿದಗ ದುರ್ಬಲ ಚಿತ್ತರು ಅಳುಕಿದರು. ಅವಳ ಕಣ್ಮಿಂಚನ್ನು ಕಂಡು ನಡೆಯುತ್ತಿದ್ದವರು ನಿಮ್ತು ಗೊಂದಲಕ್ಕೊಳಗಾದರು. ಅವಳ ತೆಳು ಹೊಟ್ಟೆಯು ಕಾಣಿಸಿದಾಗ ಮನ್ಮಥನ ಬಾಣಗಳು ಮುರಿದಂತಾಯಿತು. ಅಲ್ಲಿರುವ ಪುರುಷರೆಲ್ಲರೂ ಎದೆಗುಂದಿದರು.

ಅರ್ಥ:
ಮೊಲೆ: ಸ್ತನ; ಮೇಲುದು: ಹೊದಿಕೆ; ಜಾರು: ಕೆಳಗೆ ಬೀಳು; ಅಳಿ: ಆಸೆ; ಮನ: ಮನಸ್ಸು; ಕಂಗಳು: ಕಣ್ಣು; ಮಿಂಚು: ಪ್ರಕಾಶ; ಹಿಳುಕು: ಬಾಣದ ಗರಿ; ನೆಡೆ: ಚಲಿಸು; ನಿಂದರು: ನಿಲ್ಲು; ಚಿತ್ತ: ಮನಸ್ಸು; ವಿಹ್ವಲ: ಹತಾಶ; ತೆಳುವಸುರು: ತೆಳುವಾದ ಹೊಟ್ಟೆ; ತಲೆದೋರೆ: ಕಾಣಿಸಿದಾಗ; ತೋರು: ಗೋಚರಿಸು; ಅಲಗು: ಬಾಣ; ಮರು: ಪ್ರತಿಯಾದ, ವಿರುದ್ಧವಾದ; ಮೊನೆ: ತುದಿ, ಕೊನೆ, ಹರಿತ; ವಿಟ: ಕಾಮುಕ, ವಿಷಯಾಸಕ್ತ; ಅಂಗನೆ: ಸ್ತ್ರಿ, ಹೆಣ್ಣು; ರಾಜವೀಧಿ: ರಾಜಮಾರ್ಗ;

ಪದವಿಂಗಡಣೆ:
ಮೊಲೆಯ +ಮೇಲುದು +ಜಾರೆ +ಜಾರಿದರ್
ಅಳಿಮನರು+ ಕಂಗಳಿನ + ಮಿಂಚಿನ
ಹಿಳುಕಿ+ನೆಡೆ+ ನಡೆಗೆಟ್ಟು+ನಿಂದರು +ಚಿತ್ತ+ವಿಹ್ವಲರು
ತೆಳುವಸುರು +ತಲೆದೋರೆ +ತೋರಿದುದ್
ಅಲಗು +ಮರುಮೊನೆ+ಎನುತ +ವಿಟರಳ
ವಳಿಯೆ +ನಡೆತರುತಿರ್ದಳ್+ಅಂಗನೆ+ ರಾಜ+ವೀಧಿಯಲಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತೆಳುವಸುರು ತಲೆದೋರೆ ತೋರಿದುದಲಗು
(೨) ಜಾರೆ ಜಾರಿದರ್, ನಡೆ ನಡೆಗೆಟ್ಟು, ದೋರೆ ತೋರಿ – ಜೋಡಿ ಪದಗಳ ಬಳಕೆ

ಪದ್ಯ ೨೪: ದ್ರೌಪದಿಯು ವಿರಾಟ ನಗರಕ್ಕೆ ಹೇಗೆ ಬಂದಳು?

ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ
ಹಿರಿದು ಸೈರಿಸಲಾರೆನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳಢಾಳವೊಪ್ಪಿರೆ ಬಂದಳಬುಜಮುಖಿ (ವಿರಾಟ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸೂರ್ಯನಿಗೆ ಹೆದರಿ ಚಂದ್ರನು ಕತ್ತಲೆಯ ತೆಕ್ಕೆಗಳನ್ನು ಮರೆಮಾಡಿಟ್ಟನೋ ಎಂಬಂತೆ ದ್ರೌಪದಿಯ ಮುಡಿ ಕೂದಲುಗಳು ಕಂಡವು. ಸೂರ್ಯನ ತಾಪಕ್ಕೆ ಮತ್ತೆ ಹೆದರಿ ಕನ್ನೈದಿಲೆಯನ್ನು ಇಟ್ಟಿರುವನೋ ಎಂಬಂತಹ ಕಣ್ಣುಗಳು, ಕಂಗಳ ಕಾಂತಿ ಹೊಳೆಯುತ್ತಿರಲು ದ್ರೌಪದಿಯು ವಿರಾಟ ನಗರದಲ್ಲಿ ಬರುತ್ತಿದ್ದಳು.

ಅರ್ಥ:
ತರಣಿ: ಸೂರ್ಯ; ಅಂಜು: ಹೆದರು; ಇಂದು: ಚಂದ್ರ; ತಲೆ: ಶಿರ; ಕಾಯ್ದು: ಕಾಪಾಡು; ಮರೆ: ಕಾಣದಾಗು; ತಿಮಿರ: ಕತ್ತಲು; ಹೊರಳು: ತಿರುವು, ಬಾಗು; ಮುಡಿ: ಶಿರ; ಮೋಹ: ಆಕರ್ಷಣೆ, ಸೆಳೆತ, ಭ್ರಾಂತಿ; ವೇಣಿ: ಜಡೆ, ತರುಬು; ವಲ್ಲರಿ: ಬಳ್ಳಿ; ಹಿರಿದು: ದೊಡ್ಡ; ಸೈರಿಸು: ತಾಳು, ಸಹಿಸು; ಇರಿಸು: ಇಡು; ಕೈರವ: ಬಿಳಿಯ ನೈದಿಲೆ, ನೀಲಕಮಲ; ಕಂಗಳು: ಕಣ್ಣು, ನಯನ; ಢಾಳ: ಕಾಂತಿ, ಪ್ರಕಾಶ; ಬಂದು: ಆಗಮಿಸು; ಅಬುಜಮುಖಿ: ಕಮಲದಂತ ಮುಖವುಳ್ಳವಳು;

ಪದವಿಂಗಡಣೆ:
ತರಣಿಗ್+ಅಂಜಿದಡ್+ಇಂದು+ ತಲೆ+ಕಾ
ಯ್ದಿರಿಸಿದನೊ+ ಮರೆಯಾಗಿ+ ತಿಮಿರದ
ಹೊರಳಿಗಳನ್+ಎನೆ+ ಮುಡಿಗೆ +ಮೋಹಿದ +ವೇಣಿ+ವಲ್ಲರಿಯ
ಹಿರಿದು +ಸೈರಿಸಲಾರೆನೆಂದ್+ಒಡ
ನಿರಿಸಿದನೊ +ಕೈರವವನ್+ಎನಲ್+ಎಂದ್
ಅರರೆ +ಕಂಗಳ+ಢಾಳ+ವೊಪ್ಪಿರೆ +ಬಂದಳ್+ಅಬುಜಮುಖಿ

ಅಚ್ಚರಿ:
(೧) ಉಪಮಾನಗಳ ಬಳಕೆ – ತರಣಿಗಂಜಿದಡಿಂದು ತಲೆಗಾಯ್ದಿರಿಸಿದನೊ; ಹಿರಿದು ಸೈರಿಸಲಾರೆನೆಂದೊಡ
ನಿರಿಸಿದನೊ ಕೈರವವ

ಪದ್ಯ ೨೩: ಅರ್ಜುನನು ಯಾವ ಕಾರ್ಯಕ್ಕೆ ಸಿದ್ಧನಾದನು?

ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯ ವಿದ್ಯಾಭ್ಯಾಸ ಸಂಗದಲಿ
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ (ವಿರಾಟ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇಂದ್ರನ ಅರಮನೆಯಲ್ಲಿದ್ದ ಅಮರಕನ್ಯೆ ಊರ್ವಶಿಯ ಶಾಪದಿಂದ ಅರ್ಜುನನು ನಪುಂಸಕನಾಗಿ ವಿರಾಟನ ಮಗಳಿಗೆ ನಾಟ್ಯವನ್ನು ಕಲಿಸುವವನಾದನು. ನಕುಲ ಸಹದೇವರು ಕುದುರೆಗಳ, ಗೋವುಗಳ ಪಾಲಕರಾದರು. ಬಳಿಕ ದ್ರೌಪದಿಯು ವಿರಾಟನಗರವನ್ನು ಪ್ರವೇಶಿಸಿದಳು.

ಅರ್ಥ:
ಸುರಪ: ಇಂದ್ರ; ಅರಸಿ: ರಾಣಿ; ಶಾಪ: ನಿಷ್ಠುರದ ನುಡಿ; ಸಿತತುರಗ: ಬಿಳಿ ಕುದುರೆ; ಅರೆ: ಅರ್ಧ; ವೆಣ್ಣು: ಹೆಣ್ಣು; ಮಗಳು: ತನುಜೆ; ನಾಟ್ಯ: ನೃತ್ಯ; ವಿದ್ಯಾಭ್ಯಾಸ: ಶಿಕ್ಷಣ; ಸಂಗ: ಜೊತೆ; ಯಮಳರು: ಅವಳಿ ಮಕ್ಕಳು; ತುರಗ: ಅಶ್ವ; ಗೋವ್ರಜ: ಆಕಳುಗಳ ಗುಂಪು; ಭರಣ:ಕಾಪಾಡುವುದು, ರಕ್ಷಣೆ; ಬಳಿಕ: ನಂತರ; ಅರಸಿ: ರಾಣಿ; ಒಲವು: ಪ್ರೀತಿ; ಪಟ್ಟಣ: ಊರು; ಸಾರು: ಸಮೀಪಿಸು;

ಪದವಿಂಗಡಣೆ:
ಸುರಪನ್+ಅರಸಿಯ +ಶಾಪದಲಿ +ಸಿತ
ತುರಗನ್+ಅರೆವೆಣ್ಣಾಗಿ+ ಮತ್ಸ್ಯೇ
ಶ್ವರನ+ ಮಗಳಿಗೆ+ ನಾಟ್ಯ +ವಿದ್ಯಾಭ್ಯಾಸ +ಸಂಗದಲಿ
ಇರಲು +ಯಮಳರು+ ತುರಗ +ಗೋವ್ರಜ
ಭರಣರಾದರು +ಬಳಿಕ +ಪಾಂಡವರ್
ಅರಸಿ +ಸಾರಿದಳ್+ಒಲವಿನಲಿ+ ವೈರಾಟ +ಪಟ್ಟಣವ

ಅಚ್ಚರಿ:
(೧) ಸುರಪನರಸಿ, ಪಾಂಡವರರಸಿ – ಅರಸಿ ಪದದ ಬಳಕೆ – ಊರ್ವಶಿ, ದ್ರೌಪದಿಯನ್ನು ಕರೆಯುವ ಪರಿ