ಪದ್ಯ ೬೧: ಏತಕ್ಕಾಗಿ ಕರ್ಣನು ಧರ್ಮರಾಯನನ್ನು ಕೊಲ್ಲಲಿಲ್ಲ?

ಕೊಲುವಡವ್ವೆಗೆ ಕೊಟ್ಟ ಮಾತಿಂ
ಗಳುಕುವೆನು ನೀ ಹೋಗು ಹರಿಬಕೆ
ಮಲೆವರಾದರೆ ಕಳುಹು ಭೀಮಾರ್ಜುನರನಾಹವಕೆ
ಉಲುಕಿದರೆ ನಿನ್ನಾಣೆಯೆನುತ
ಗ್ಗಳಿಸಿ ನೃಪತಿಯ ಕೇಡನುಡಿದು ಪರ
ಬಲವ ಬರಹೇಳೆನುತ ನಿಂದನು ನುಡಿಸಿ ನಿಜಧನುವ (ಕರ್ಣ ಪರ್ವ, ೧೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕರ್ಣನು ಯುಧಿಷ್ಠಿರನನ್ನು ಮತ್ತೂ ಹೀಯಾಳಿಸುತ್ತಾ, ನಿನ್ನನ್ನು ಕೊಲ್ಲುತ್ತಿದ್ದೆ ಆದರೆ ತಾಯಿಗೆ ಕೊಟ್ಟ ಮಾತಿಗೆ ಅಳುಕುತ್ತೇನೆ. ನೀನು ಹೋಗಿ ನಿನ್ನ ಪರವಾಗಿ ಭೀಮಾರ್ಜುನರನ್ನು ಯುದ್ಧಕ್ಕೆ ಕಳುಹಿಸು, ಸ್ವಲ್ಪ ಮಿಸುಕಿದರೂ ನಿನ್ನಾಣೆ ಎಂದು ಧರ್ಮಜನನ್ನು ಹೀಯಾಳಿಸಿ, ಜರಿದು, ಶತ್ರು ಸೈನ್ಯವು ಯುದ್ಧಕ್ಕೆ ಬರಹೇಳು ಎಂದು ಹೇಳುತ್ತಾ ತನ್ನ ಧನಸ್ಸನ್ನು ಹೆದೆಯೇರಿಸಿ ನಿಂತನು.

ಅರ್ಥ:
ಕೊಲು: ಕೊಲ್ಲು, ಸಾವು; ಅವ್ವೆ: ಅಮ್ಮ; ಕೊಟ್ಟು: ನೀಡು; ಮಾತು: ವಾಣಿ, ಆಣೆ; ಅಳುಕು: ಹೆದರು; ಹೋಗು: ತೆರಳು; ಹರಿಬ: ಕಾಳಗ, ಯುದ್ಧ; ಕಳುಹು: ಕಳಿಸು; ಆಹವ: ಕಾಳಗ; ಉಲುಕು: ಅಲ್ಲಾಡು; ಆಣೆ: ಪ್ರಮಾಣ; ಅಗ್ಗಳಿಕೆ: ಶ್ರೇಷ್ಠತೆ; ನೃಪತಿ: ರಾಜ; ಕೆಡೆ:ಹಾಳು; ನುಡಿ: ಮಾತು; ಕೆಡೆನುಡಿ: ಹೀಯಾಳಿಸುವ ಮಾತು; ಪರಬಲ: ವೈರಿಯ ಸೈನ್ಯ; ಬರಹೇಳು: ಕರೆ; ನುಡಿಸಿ: ಮಾತನಾಡಿಸಿ, ಪ್ರಯೋಗಿಸು; ಧನು: ಧನಸ್ಸು, ಬಿಲ್ಲು;

ಪದವಿಂಗಡಣೆ:
ಕೊಲುವಡ್+ಅವ್ವೆಗೆ +ಕೊಟ್ಟ+ ಮಾತಿಂಗ್
ಅಳುಕುವೆನು +ನೀ +ಹೋಗು +ಹರಿಬಕೆ
ಮಲೆವರಾದರೆ+ ಕಳುಹು +ಭೀಮಾರ್ಜುನರನ್+ಆಹವಕೆ
ಉಲುಕಿದರೆ+ ನಿನ್ನಾಣೆ+ಎನುಗ್
ಅಗ್ಗಳಿಸಿ +ನೃಪತಿಯ +ಕೇಡನುಡಿದು +ಪರ
ಬಲವ +ಬರಹೇಳೆನುತ+ ನಿಂದನು +ನುಡಿಸಿ +ನಿಜ+ಧನುವ

ಅಚ್ಚರಿ:
(೧) ಆಹವ, ಹರಿಬ; ಆಣೆ, ಕೊಟ್ಟಮಾತು – ಸಮನಾರ್ಥಕ ಪದ
(೨) ನ ಕಾರದ ತ್ರಿವಳಿ ಪದ – ನಿಂದನು ನುಡಿಸಿ ನಿಜಧನುವ

ಪದ್ಯ ೬೦: ಕರ್ಣನು ಧರ್ಮರಾಯನನ್ನು ಏನು ಮಾಡಲು ಹೇಳಿ ಹಂಗಿಸಿದನು?

ವರ ನದಿಗಳಲಿ ಮುಳುಗಿ ಮೂಗಿನ
ಬೆರಳಲೂರ್ಧ್ವಶ್ವಾಸಪವನನ
ಧರಿಸಿ ಕಾಲತ್ರಯಜಪಾನುಷ್ಠಾನಹೋಮದಲಿ
ಪರಮಋಷಿ ಮಧ್ಯದಲಿ ನೀವಾ
ಚರಿಸುವುದ ಬಿಸುಟುಗಿವಡಾಯ್ದದ
ಹೊರಳಿಗಿಡಿಗಳ ಹೊದರೊಳಾಚರಿಸುವರೆ ನೀವೆಂದ (ಕರ್ಣ ಪರ್ವ, ೧೧ ಸಂಧಿ, ೬೦ ಪದ್ಯ)

ತಾತ್ಪರ್ಯ:
ಪವಿತ್ರವಾದ ನದಿಗಳಲ್ಲಿ ಮಿಂದು, ಮೂಗಿನ ಒಂದು ಹೋಳ್ಳೆಯನ್ನು ಬೆರಳಿನಿಂದ ಮುಚ್ಚಿ ವಾಯುವನ್ನು ಮೇಲಕ್ಕೆಳೆದುಕೊಂಡು, ತ್ರಿಕಾಲಗಳಲ್ಲಿಯೂ ಸಂಧ್ಯಾವಂದನೆಯನ್ನೂ, ಜಪ, ತಪ, ಅನುಷ್ಠಾನ, ಹೋಮಗಳಲ್ಲಿ ತೊಡಗಿ ಋಷಿಗಳ ನಡುವೆ ಇರುವುದನ್ನು ಬಿಟ್ಟು, ಒರೆಯಿಂದೆಳೆದ ಕತ್ತಿಗಳ ಕಿಡಿಗಳ ನಡುವೆ ಧರ್ಮಾಚರಣೆ ಮಾಡಬಹುದೇ ಎಂದು ಕರ್ಣನು ಧರ್ಮರಾಯನನ್ನು ಹಂಗಿಸಿದನು.

ಅರ್ಥ:
ವರ: ಶ್ರೇಷ್ಠ; ನದಿ: ಸರೋವರ; ಮುಳುಗಿ: ತೊಯ್ದು; ಮೂಗು: ನಾಸಿಕ; ಬೆರಳ: ಅಂಗುಲಿ ಊರ್ಧ್ವ:ಮೇಲ್ಭಾಗ; ಶ್ವಾಸ: ಉಸಿರಾಟ; ಪವನ: ವಾಯು; ಧರಿಸಿ: ತೊಟ್ಟು; ಕಾಲ: ಸಮಯ; ತ್ರಯ: ಮೂರು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಅನುಷ್ಠಾನ: ಆಚರಣೆ; ಹೋಮ: ಯಜ್ಞ, ಯಾಗ; ಪರಮ: ಶ್ರೇಷ್ಠ; ಮುನಿ: ಋಷಿ; ಮಧ್ಯ: ನಡುವೆ; ಆಚರಣೆ: ನೆರವೇರಿಸುವುದು; ಬಿಸುಟು: ಹೊರಹಾಕಿ; ಇಡಿ: ತಿವಿ, ಚುಚ್ಚು; ಹೊರಳಿ: ಗುಂಪು, ಸಮೂಹ; ಕಿಡಿ: ಬೆಂಕಿಯ ಜ್ವಾಲೆ;

ಪದವಿಂಗಡಣೆ:
ವರ +ನದಿಗಳಲಿ +ಮುಳುಗಿ +ಮೂಗಿನ
ಬೆರಳಲ್+ಊರ್ಧ್ವ+ಶ್ವಾಸ+ಪವನನ
ಧರಿಸಿ+ ಕಾಲ+ತ್ರಯ+ಜಪ+ಅನುಷ್ಠಾನ+ಹೋಮದಲಿ
ಪರಮಋಷಿ +ಮಧ್ಯದಲಿ +ನೀವ್
ಆಚರಿಸುವುದ +ಬಿಸುಟುಗಿವಡ್+ಆಯ್ದದ
ಹೊರಳಿ +ಕಿಡಿಗಳ +ಹೊದರೊಳ್+ ಆಚರಿಸುವರೆ +ನೀವೆಂದ

ಅಚ್ಚರಿ:
(೧) ಪ್ರಾಣಾಯಾಮದ ಚಿತ್ರಣ: ಮೂಗಿನ ಬೆರಳಲೂರ್ಧ್ವಶ್ವಾಸಪವನನ ಧರಿಸಿ

ಪದ್ಯ ೫೯: ಧರ್ಮರಾಯನಿಗೆ ಕರ್ಣನು ಯಾವ ಸಲಹೆಯನ್ನು ನೀಡಿದನು?

ಶ್ರುತಿರಹಸ್ಯವನರಿವ ಧರ್ಮ
ಸ್ಥಿತಿಗತಿಯನಾರೈವ ಶಾಸ್ತ್ರ
ಪ್ರತತಿಯರ್ಥವಿಚಾರವಾಚರಣಾದಿ ಕರ್ಮದಲಿ
ಚತುರರಹ ದರುಶನದ ತರ್ಕದ
ಮತನಿಧಾನವನರಿವ ವರ ಪಂ
ಡಿತರು ನಿಮಗೀ ಕದನಕರ್ಕಶವಿದ್ಯೆಯೇಕೆಂದ (ಕರ್ಣ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ವೇದದ ರಹಸ್ಯವನ್ನು ತಿಳಿದುಕೊಳ್ಳುವ ಧರ್ಮವಾವುದು? ಹೇಗೆ ವೇದವನ್ನು ಪಾಲಿಸಬೇಕು ಎನ್ನುವುದು ಹುಡುಕುವ ಶಾಸ್ತ್ರಗಳ ಅರ್ಥವಿಚಾರ ಆಚರಣೆ ಕರ್ಮಗಳಲ್ಲಿ ಚಾತುರ್ಯವನ್ನು ಸಂಪಾದಿಸುವ ತರ್ಕ ಎಲ್ಲಿಗೆ ಒಯ್ದು ಬಿಡುತ್ತದೆ ಎನ್ನುವುದನ್ನು ಹುಡುಕುವ ಪಂಡಿತರು ನೀವು. ನಿಮಗೆ ಕರ್ಕಶವಾನ್ದ ಯುದ್ಧದ ಗೋಡವೆಯೇಕೆ ಎಂದು ಕರ್ಣನು ಧರ್ಮರಾಯನಿಗೆ ತಿಳಿಸಿದನು.

ಅರ್ಥ:
ಶ್ರುತಿ: ವೇದ; ರಹಸ್ಯ: ಗುಟ್ಟು, ಗೋಪ್ಯ; ಅರಿ: ತಿಳಿ; ಧರ್ಮ: ಧಾರಣೆ ಮಾಡಿದ; ಸ್ಥಿತಿ: ಇರವು, ಅಸ್ತಿತ್ವ; ಗತಿ: ಇರುವ ಸ್ಥಿತಿ, ಅವಸ್ಥೆ, ಗಮನ; ಶಾಸ್ತ್ರ: ವಿಧಿ, ನಿಯಮ; ಪ್ರತತಿ: ಗುಂಪು, ಸಮೂಹ; ವಿಚಾರ: ಪರ್ಯಾಲೋಚನೆ, ವಿಮರ್ಶೆ; ಅರ್ಥ: ಪುರುಷಾರ್ಥ; ಆಚರಣೆ: ಅನುಸರಿಸುವುದು; ಕರ್ಮ: ಕೆಲಸ; ಚತುರ: ಜಾಣ; ದರುಶನ: ಅವಲೋಕನ, ತತ್ತ್ವಜ್ಞಾನ; ತರ್ಕ: ಊಹೆ, ಅನುಮಾನ; ಮತ: ಅಭಿಪ್ರಾಯ; ನಿಧಾನ: ವಿಳಂಬ; ವರ: ಶ್ರೇಷ್ಠ; ಪಂಡಿತ: ವಿಧಾಂಸ; ಕದನ: ಯುದ್ಧ; ಕರ್ಕಶ: ಜೋರಾದ ಶಬ್ದ, ಅಬ್ಬರ; ವಿದ್ಯೆ: ಜ್ಞಾನ;

ಪದವಿಂಗಡಣೆ:
ಶ್ರುತಿ+ರಹಸ್ಯವನ್+ಅರಿವ +ಧರ್ಮ
ಸ್ಥಿತಿಗತಿಯನ್+ಆರೈವ +ಶಾಸ್ತ್ರ
ಪ್ರತತಿ+ ಅರ್ಥ+ವಿಚಾರ+ವಾಚರಣಾದಿ+ ಕರ್ಮದಲಿ
ಚತುರರಹ +ದರುಶನದ +ತರ್ಕದ
ಮತ+ನಿಧಾನವನ್+ಅರಿವ +ವರ +ಪಂ
ಡಿತರು +ನಿಮಗೀ +ಕದನ+ಕರ್ಕಶ+ವಿದ್ಯೆ+ಏಕೆಂದ

ಅಚ್ಚರಿ:
(೧) ಶ್ರುತಿ, ಸ್ಥಿತಿ, ಪ್ರತತಿ – ಪ್ರಾಸ ಪದಗಳು

ಪದ್ಯ ೫೮ : ಕರ್ಣನು ಧರ್ಮರಾಯನನ್ನು ಹೇಗೆ ಹಂಗಿಸಿದನು?

ಸಾಳುವನ ಕೂಡರಗಿಳಿಗೆ ಸಮ
ಮೇಳವೇ ಶಸ್ತ್ರಜ್ಞನಾದಡೆ
ಸೋಲುವುದೆ ವರ ಶಸ್ತ್ರ ವಿದ್ಯಾಪ್ರೌಢಿಯದು ಬೇರೆ
ಆಳುತನದಭಿಮಾನವದು ಕರ
ವಾಳಧಾರಾಗಮನವರಸರೆ
ಖೂಳರಾದಿರಿ ನೀವೆನುತ ಭಂಗಿಸಿದನಾ ಕರ್ಣ (ಕರ್ಣ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಬೇಟೆಗಾಗಿಯೇ ತಯಾರಾದ ಗಿಡುಗಕ್ಕೆ ಅರಿಗಿಳಿ ಸರಿಸಮಾನವೇ? ಶಸ್ತ್ರವಿದ್ಯೆಯನ್ನರಿತವನು ಸೋಲುವುದಿಲ್ಲವೇ? ಶಸ್ತ್ರವಿದ್ಯೆಯಲ್ಲಿ ಪ್ರೌಢಿಮೆಯೆನ್ನುವುದು ಬೇರೆಯೇ ವಿಷಯ. ನಾನು ವೀರನೆಂಬ ಅಭಿಮಾನ ಕತ್ತಿಯ ಅಲಗಿನ ಮೇಲೆ ನಡೆದಂತೆ. ರಾಜ ನೀವು ಅಲ್ಪರಾದಿರಿ ಎಂದು ಕರ್ಣನು ಧರ್ಮರಾಯನನ್ನು ಹಂಗಿಸಿದನು.

ಅರ್ಥ:
ಸಾಳುವ: ಗಿಡುಗ; ಅರಗಿಳಿ: ಗಿಳಿಗಳಲ್ಲಿ ಶ್ರೇಷ್ಠವಾದುದು ಸಮಮೇಳ: ಸಮಾನ; ಶಸ್ತ್ರಜ್ಞ: ಆಯುಧಗಳಲ್ಲಿ ಪ್ರವೀಣನಾದ; ಸೋಲು: ಪರಾಜಯ; ವರ: ಶ್ರೇಷ್ಠ; ಶಸ್ತ್ರ; ಆಯುಧ; ವಿದ್ಯ: ಜ್ಞಾನ; ಪ್ರೌಢಿಮೆ: ಹಿರಿಮೆ, ಹೆಚ್ಚು; ಬೇರೆ: ಅನ್ಯ; ಆಳು: ಶೂರ; ಅಭಿಮಾನ: ಹೆಮ್ಮೆ, ಅಹಂಕಾರ; ಕರವಾಳ: ಕತ್ತಿ; ಕರವಾಳಧಾರೆ: ಕತ್ತಿಯ ಅಂಚು; ಗಮನ: ನಡೆಯುವುದು; ಅರಸ: ರಾಜ; ಖೂಳ: ಅಲ್ಪ, ನೀಚ, ದುಷ್ಟ; ಭಂಗಿಸು: ಅಪಮಾನ ಮಾಡು;

ಪದವಿಂಗಡಣೆ:
ಸಾಳುವನ +ಕೂಡರಗಿಳಿಗೆ+ ಸಮ
ಮೇಳವೇ +ಶಸ್ತ್ರಜ್ಞನ್+ಆದಡೆ
ಸೋಲುವುದೆ +ವರ+ ಶಸ್ತ್ರ+ ವಿದ್ಯಾ+ಪ್ರೌಢಿಯದು +ಬೇರೆ
ಆಳುತನದ್+ಅಭಿಮಾನವ್+ಅದು +ಕರ
ವಾಳಧಾರಾ+ಗಮನವ್+ಅರಸರೆ
ಖೂಳರಾದಿರಿ+ ನೀವೆನುತ+ ಭಂಗಿಸಿದನಾ+ ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಳುವನ ಕೂಡರಗಿಳಿಗೆ ಸಮಮೇಳವೇ
(೨) ಅಭಿಮಾನವನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ತಿಳಿಸುವ ನುಡಿ – ಆಳುತನದಭಿಮಾನವದು ಕರವಾಳಧಾರಾಗಮನವ್

ಪದ್ಯ ೫೭: ಧರ್ಮರಾಯನನ್ನು ಯಾರಿಗೆ ಶರಣಾಗಲು ಕರ್ಣನು ಹೇಳಿದನು?

ಸಿಕ್ಕಿದೆಯಲಾ ಸ್ವಾಮಿದ್ರೋಹಿಗ
ಳಿಕ್ಕಿ ಹೋದರೆ ಭೀಮ ಫಲುಗುಣ
ರೆಕ್ಕತುಳದಲಿ ತೊಡಕಿ ನೀಗಿದೆಲಾ ನಿಜೋನ್ನತಿಯ
ಚುಕ್ಕಿಗಳು ನಿನ್ನವರ ಮಡುವಿನ
ಲಿಕ್ಕಿ ಕೌರವರಾಯನನು ಮರೆ
ವೊಕ್ಕು ಬದುಕಾ ಧರ್ಮಸುತ ಬಾಯೆಂದನಾ ಕರ್ಣ (ಕರ್ಣ ಪರ್ವ, ೧೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎಲೈ ಧರ್ಮರಾಯ ನೀನು ನನಗೆ ಸಿಕ್ಕಿಬಿದ್ದೆಯಲಾ! ಸ್ವಾಮಿದ್ರೋಹಿಗಳಾದ ಭೀಮಾರ್ಜುನರು ನಿನ್ನನ್ನು ಒಬ್ಬೊಂಟಿಯಾಗಿ ಬಿಟ್ಟು ಹೋದರೇ? ನನ್ನೊಡನೆ ದ್ವಂದ್ವ ಯುದ್ಧದಲ್ಲಿ ಸೆಣಸಿ ನಿನ್ನ ಹಿರಿಮೆಯನ್ನು ಕಳೆದುಕೊಂಡೆಯಲ್ಲವೇ? ನಿನ್ನವರು ಕ್ಷುದ್ರರು ಅವರನ್ನು ಮಡುವಿನಲ್ಲಿ ಮುಳುಗಿಸಿ ಕೌರವನಿಗೆ ಶರಣಾಗಿ ಬದುಕು, ಬಾ ಎಂದು ಕರ್ಣನು ಯುಧಿಷ್ಠಿರನನ್ನು ಹಂಗಿಸಿದನು.

ಅರ್ಥ:
ಸಿಕ್ಕು: ಅಡ್ಡಿ, ನಿರ್ಬಂಧ; ಸ್ವಾಮಿ: ಒಡೆಯ; ದ್ರೋಹ: ವಿಶ್ವಾಸಘಾತ, ವಂಚನೆ; ಇಕ್ಕು: ಹೊಡಿ, ಬಿಟ್ಟು ಹೋಗು; ಹೋಗು: ತೆರಳು; ಎಕ್ಕ: ಒಂದು; ಅತುಳ: ಹೋಲಿಕೆಯಿಲ್ಲದ; ತೊಡಕು: ಸಿಕ್ಕು, ಗೋಜು; ನೀಗು: ನಿವಾರಿಸಿಕೊಳ್ಳು; ನಿಜ: ದಿಟ; ಉನ್ನತಿ: ಹಿರಿಮೆ; ಚುಕ್ಕಿ: ಕ್ಷುದ್ರರು, ಅಲ್ಪ; ಮಡು: ಕೊಳ, ಸರೋವರ; ರಾಯ: ರಾಜ; ಮರೆವೊಕ್ಕು: ಶರಣಾಗತ; ಬದುಕು: ಜೀವಿಸು; ಬಾ: ಆಗಮಿಸು;

ಪದವಿಂಗಡಣೆ:
ಸಿಕ್ಕಿದೆಯಲಾ +ಸ್ವಾಮಿ+ದ್ರೋಹಿಗಳ್
ಇಕ್ಕಿ +ಹೋದರೆ +ಭೀಮ +ಫಲುಗುಣರ್
ಎಕ್ಕ್+ಅತುಳದಲಿ +ತೊಡಕಿ +ನೀಗಿದೆಲಾ+ ನಿಜ+ಉನ್ನತಿಯ
ಚುಕ್ಕಿಗಳು+ ನಿನ್ನವರ+ ಮಡುವಿನಲ್
ಇಕ್ಕಿ +ಕೌರವರಾಯನನು +ಮರೆ
ವೊಕ್ಕು +ಬದುಕಾ +ಧರ್ಮಸುತ+ ಬಾಯೆಂದನಾ+ ಕರ್ಣ

ಅಚ್ಚರಿ:
(೧) ಸಿಕ್ಕಿ, ಇಕ್ಕಿ, ಚುಕ್ಕಿ – ಪ್ರಾಸ ಪದಗಳು
(೨) ಅಲ್ಪವ್ಯಕ್ತಿಗಳು ಎಂದು ಹೇಳಲು – ಚುಕ್ಕಿಗಳು ಪದದ ಬಳಕೆ

ಪದ್ಯ ೫೬: ಧರ್ಮಜನ ಆಪ್ತರು ಹೇಗೆ ರಾಜನನ್ನು ಶುಶ್ರೂಷೆ ಮಾಡಿದರು?

ಮಂತ್ರಜಲದಲಿ ತೊಳೆದು ಘಾಯವ
ಮಂತ್ರಿಸುತ ಕರ್ಪುರದ ಕವಳದ
ಯಂತ್ರ ರಕ್ಷೆಯಲವನಿಪನ ಸಂತೈಸಿ ಮಲಗಿಸುತ
ತಂತ್ರ ತಲ್ಲಣಿಸದಿರಿ ಜಿತ ಶರ
ತಂತ್ರನೋ ಭೂಪತಿ ವಿರೋಧಿಭ
ಟಾಂತ್ರ ಭಂಜನ ನೀಗಳೆಂದುದು ರಾಯನಾಪ್ತಜನ (ಕರ್ಣ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮಜನ ಆಪ್ತರು ಅವನ ಗಾಯಗಳನ್ನು ಮಂತ್ರ ಜಲದಿಂದ ತೊಳೆದು ಮಂತ್ರಿಸಿದ ಕರ್ಪೂರ ತಾಂಬೂಲವನ್ನು ಕೊಟ್ಟು, ಯಂತ್ರದ ರಕ್ಷಣೆಯಿಂದ ಅವನನ್ನು ಸಂತೈಸಿ ಮಲಗಿಸಿದರು. ಬಳಿಕ ಸುತ್ತಲಿದ್ದವರಿಗೆ ಸೈನ್ಯವು ಬೆದರದಿರಲಿ ಅರಸನು ಬಾಣಗಳ ಹೊಡೆತವನ್ನು ಸುಧಾರಿಸಿ ಗೆದ್ದಿದ್ದಾನೆ, ವಿರೋಧಿಗಳ ಭಟರ ಕರುಳನ್ನು ಭಂಜಿಸಿ ಗೆಲ್ಲುತ್ತಾನೆ ಎಂದು ಹೇಳಿದರು.

ಅರ್ಥ:
ಮಂತ್ರ: ಪವಿತ್ರವಾದ ದೇವತಾಸ್ತುತಿ; ಜಲ: ನೀರು; ತೊಳೆ: ಸ್ವಚ್ಛಗೊಳಿಸು; ಘಾಯ: ಪೆಟ್ಟು; ಕರ್ಪುರ: ಸುಗಂಧ ದ್ರವ್ಯ; ಕವಳ:ತುತ್ತು, ತಾಂಬೂಲ; ಯಂತ್ರ: ತಾಯಿತಿ, ಕಾಪು; ರಕ್ಷೆ:ಕಾಪು, ರಕ್ಷಣೆ; ಅವನಿಪ: ರಾಜ; ಸಂತೈಸು: ಸಮಾಧಾನ ಪಡಿಸು; ಮಲಗು: ನಿದ್ರೆ, ಶಯನ; ತಂತ್ರ: ಔಷಧಿ, ಮದ್ದು; ತಲ್ಲಣ: ಅಂಜಿಕೆ, ಭಯ; ಜಿತ: ಗೆಲ್ಲಲ್ಪಟ್ಟ; ಶರ: ಬಾಣ; ಭೂಪತಿ: ರಾಜ; ವಿರೋಧ:ತಡೆ, ಅಡ್ಡಿ; ವಿರೋಧಿ: ವೈರಿ; ಅಂತ್ರ: ಕರುಳು; ಭಂಜನ: ಸೀಳು, ನಾಶಮಾಡು; ನೀಗು: ನಿವಾರಿಸಿಕೊಳ್ಳು; ರಾಯ: ರಾಜ; ಆಪ್ತ: ಹತ್ತಿರದ;

ಪದವಿಂಗಡಣೆ:
ಮಂತ್ರ+ಜಲದಲಿ +ತೊಳೆದು +ಘಾಯವ
ಮಂತ್ರಿಸುತ +ಕರ್ಪುರದ +ಕವಳದ
ಯಂತ್ರ +ರಕ್ಷೆಯಲ್+ಅವನಿಪನ +ಸಂತೈಸಿ +ಮಲಗಿಸುತ
ತಂತ್ರ +ತಲ್ಲಣಿಸದಿರಿ+ ಜಿತ+ ಶರ
ತಂತ್ರನೋ +ಭೂಪತಿ +ವಿರೋಧಿಭಟ
ಅಂತ್ರ +ಭಂಜನ +ನೀಗಳ್+ಎಂದುದು +ರಾಯನ್+ಆಪ್ತಜನ

ಅಚ್ಚರಿ:
(೧) ಮಂತ್ರ, ಯಂತ್ರ, ತಂತ್ರ, ಅಂತ್ರ – ಪ್ರಾಸ ಪದಗಳು
(೨) ಅವನಿಪ, ಭೂಪತಿ, ರಾಯ – ಸಮನಾರ್ಥಕ ಪದ

ಪದ್ಯ ೫೫: ಧರ್ಮರಾಯನ ಸ್ಥಿತಿಯನ್ನು ನೋಡಿ ಯಾರು ಶೋಕ ಪಟ್ಟರು?

ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆ
ತ್ತರ ನಿಹಾರದ ಮೈಯ ಸಡಲಿದ ಕೈಯ ಬಿಲುಸರಳ
ಅರಸನನು ಕಂಡಳಲಿದರು ಚಾ
ಮರದ ಛತ್ರದ ಹಡಪದವರಾ
ಪ್ತರು ವಿಘಾತಿಯಲಂಬಕಿತ್ತರು ಬಹಳ ಶೋಕದಲಿ (ಕರ್ಣ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳ ಪೆಟ್ಟಿನಿಂದ ಧರ್ಮಜನು ಕೆಳಕ್ಕುರುಳಿದನು. ಅವನ ಕಣ್ಣುಗುಡ್ಡೆಗಳು ಅರ್ಧ ಹಿಂದಕ್ಕೆ ತಿರುಗಿದವು. ಕತ್ತು ಓಲಿತು, ರಕ್ತ ಮೈ ಮೇಲೆ ಒಂದೇ ಸಮನಾಗಿ ಹೊರಬರುತ್ತಿತ್ತು, ಕೈಯಲ್ಲಿದ್ದ ಬಿಲ್ಲು ಬಾಣಗಳ ನಿಯಂತ್ರಣ ತಪ್ಪಿ ಸಡಿಲಗೊಂಡವು. ಈ ಸ್ಥಿತಿಯಲ್ಲಿದ್ದ ಧರ್ಮಜನನ್ನು ನೋಡಿ ಛತ್ರ, ಚಾಮರ, ಹಡಪದವರು, ಆಪ್ತರೂ ದುಃಖಿಸಿದರು. ನೆಟ್ಟ ಬಾಣಗಳನ್ನು ಅತ್ಯಂತ ಶೋಕದಿಂದ ಹೊರತೆಗೆಯಲು ಪ್ರಯತ್ನಿಸಿದರು.

ಅರ್ಥ:
ಅರೆ: ಅರ್ಧ; ಮರಳು: ಹಿಂದಕ್ಕೆ ಹೋಗು; ಆಲಿ: ಕಣ್ಣಿನ ಮಧ್ಯೆ ಇರುವ ಕರಿಯ ಗುಡ್ಡೆ; ಹೆಗಲು: ಭುಜ; ಮುರಿ: ಸೀಳು; ಗೋಣು:ಕಂಠ, ಕುತ್ತಿಗೆ; ದುರುದುರಿಪ: ಒಂದೇ ಸಮನಾಗಿ ಹೊರ ಚಿಮ್ಮು; ನೆತ್ತರ: ರಕ್ತ; ನಿಹಾರ: ಮಂಜು; ಮೈ: ತನು, ಶರೀರ; ಸಡಲು: ಬಿಗಿಯಿಲ್ಲದಂತಾಗು, ಶಿಥಿಲ; ಕೈ: ಕರ; ಬಿಲು: ಬಿಲ್ಲು; ಸರಳು: ಬಾಣ; ಅರಸ; ರಾಜ; ಕಂಡು: ನೋಡಿ; ಅಳಲು: ನೋವಾಗು, ಅಳು, ದುಃಖಿಸು; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಛತ್ರ: ಕೊಡೆ; ಹಡಪ: ಕೈಚೀಲ; ಆಪ್ತ: ಬೇಕಾದವರು, ಹತ್ತಿರದವರು; ವಿಘಾತಿ: ಹೊಡೆತ; ಅಂಬು: ಬಾಣ; ಕೀಳು: ಹೊರಕ್ಕೆ ತರು; ಶೋಕ: ದುಃಖ, ದುಗುಡ; ಬಹಳ: ತುಂಬ;

ಪದವಿಂಗಡಣೆ:
ಅರೆ+ಮರಳುವ್+ಆಲಿಗಳ+ ಹೆಗಲಲಿ
ಮುರಿದ +ಗೋಣಿನ +ದುರುದುರಿಪ +ನೆ
ತ್ತರ +ನಿಹಾರದ +ಮೈಯ +ಸಡಲಿದ +ಕೈಯ +ಬಿಲುಸರಳ
ಅರಸನನು +ಕಂಡ್+ಅಳಲಿದರು +ಚಾ
ಮರದ +ಛತ್ರದ +ಹಡಪದವರ್
ಆಪ್ತರು +ವಿಘಾತಿಯಲ್+ಅಂಬ+ಕಿತ್ತರು +ಬಹಳ +ಶೋಕದಲಿ

ಅಚ್ಚರಿ:
(೧) ಅಂಬು, ಸರಳು – ಸಮನಾರ್ಥಕ ಪದ
(೨) ಧರ್ಮರಾಯನ ಸ್ಥಿತಿಯನ್ನು ವರ್ಣಿಸುವ ಸಾಲು – ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆತ್ತರ ನಿಹಾರದ ಮೈಯ ಸಡಲಿದ ಕೈಯ ಬಿಲುಸರಳ

ಪದ್ಯ ೫೪: ಧರ್ಮಜನನ್ನು ಕರ್ಣನು ಹೇಗೆ ಬೀಳಿಸಿದನು?

ಕೆದರಿದನು ಮಾರ್ಗಣೆಯೊಳರಸನ
ಹೊದಿಸಿದನು ಹುಸಿಯೇಕೆ ರಾಯನ
ಹುದಿದ ಕವಚವ ಭೇದಿಸಿದವೊಳಬಿದ್ದವಂಬುಗಳು
ಎದೆಯೊಳೌಕಿದ ಬಾಣ ಬೆನ್ನಲಿ
ತುದಿ ಮೊನೆಯ ತೋರಿದವು ಪೂರಾ
ಯದ ವಿಘಾತಿಯಲರಸ ಕಳವಳಿಸಿದನು ಕಂಪಿಸುತ (ಕರ್ಣ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ಬಾಣಗಳನ್ನು ಕೆದರಿ ಧರ್ಮಜನನ್ನು ಬಾಣಗಳಿಂದ ಹೊದಿಸಿದನು. ಕರ್ಣನ ಬಾಣಗಳು ಅರಸನ ಕವಚವನ್ನು ಭೇದಿಸಿ ಒಳಹೊಕ್ಕವು. ಕೆಲವು ಎದೆಗೆ ನಟ್ಟು ಬೆನ್ನಿನಲ್ಲಿ ಮೊನೆಯು ಕಾಣಿಸಿತು. ಬಲವಾದ ಪೆಟ್ಟು ಪೂರ್ಣವಾಗಿ ಬೀಳಲು, ಧರ್ಮಜನು ನಡುಗಿ ಕಳವಳಿಸಿದನು.

ಅರ್ಥ:
ಕೆದರು: ಹರಡು, ಚದರಿಸು; ಮಾರ್ಗಣೆ:ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಅರಸ: ರಾಜ; ಹೊದಿಸು: ಮುಚ್ಚು, ಆವರಿಸು; ಹುಸಿ: ಸುಳ್ಳು; ರಾಯ: ರಾಜ; ಹುದಿ:ಆವೃತವಾಗು, ಒಳಸೇರು; ಕವಚ: ಹೊದಿಕೆ, ಉಕ್ಕಿನ ಅಂಗಿ; ಭೇದಿಸು: ಛಿದ್ರ, ಸೀಳು; ಅಂಬು: ಬಾಣ; ಎದೆ: ವಕ್ಷ; ಔಕು: ಒತ್ತು; ಬಾಣ: ಶರ; ಬೆನ್ನು: ಹಿಂಬದಿ; ತುದಿ: ಅಗ್ರಭಾಗ; ಮೊನೆ: ಚೂಪು; ತೋರು: ಕಾಣಿಸು; ಪೂರಾಯದ: ಪೂರ್ಣವಾಗಿ; ವಿಘಾತಿ: ಹೊಡೆತ, ವಿರೋಧ; ಕಳವಳ: ತಳಮಳ, ಚಿಂತೆ; ಕಂಪಿಸು: ನಡುಗು;

ಪದವಿಂಗಡಣೆ:
ಕೆದರಿದನು +ಮಾರ್ಗಣೆಯೊಳ್+ಅರಸನ
ಹೊದಿಸಿದನು+ ಹುಸಿಯೇಕೆ+ ರಾಯನ
ಹುದಿದ +ಕವಚವ +ಭೇದಿಸಿದವ್+ಒಳಬಿದ್ದವ್+ಅಂಬುಗಳು
ಎದೆಯೊಳ್+ಔಕಿದ +ಬಾಣ +ಬೆನ್ನಲಿ
ತುದಿ +ಮೊನೆಯ +ತೋರಿದವು+ ಪೂರಾ
ಯದ +ವಿಘಾತಿಯಲ್+ಅರಸ +ಕಳವಳಿಸಿದನು +ಕಂಪಿಸುತ

ಅಚ್ಚರಿ:
(೧) ಕೆದರು, ಹೊದಿಸು, ಭೇದಿಸು, ಔಕು, ವಿಘಾತಿ – ಹೋರಟವನ್ನು ವಿವರಿಸುವ ಪದಗಳು
(೨) ರಾಯ, ಅರಸ; ಬಾಣ, ಅಂಬು – ಸಮಾನಾರ್ಥಕ ಪದಗಳು
(೩) ಬಾಣದ ತೀವ್ರತೆಯನ್ನು ವಿವರಿಸುವ ಬಗೆ – ಎದೆಯೊಳೌಕಿದ ಬಾಣ ಬೆನ್ನಲಿ
ತುದಿ ಮೊನೆಯ ತೋರಿದವು

ಪದ್ಯ ೫೩: ಕರ್ಣನ ಬಾಣಗಳು ಸಾರಥಿಗೆ ಹೇಗೆ ಮುಳುವಾಯಿತು?

ಅರಿಯ ಶರಹತಿಗಡ್ಡವರಿಗೆಯ
ನರಸನಭಿಮುಖಕೊಡ್ಡಿದರು ರಥ
ತುರಗವನು ಚಪ್ಪರಿಸಿ ಸಾರಥಿ ನೂಕಿದನು ರಥವ
ಧರಣಿಪತಿ ಕೇಳೈದು ಶರದಲಿ
ಹರಿಗೆಯನು ಮುರಿಯೆಚ್ಚು ಸೂತನ
ಶಿರವನಿಳುಹಿದೊಡೊದೆದುಕೊಂಡುದು ಮುಂಡಸಾರಥಿಯ (ಕರ್ಣ ಪರ್ವ, ೧೧ ಸಂಧಿ, ೫೩ ಪದ್ಯ)

ತಾತ್ಪರ್ಯ:
ಶತ್ರುವಾದ ಕರ್ಣನ ಬಾಣವನ್ನು ತಪ್ಪಿಸಲು ಯುಧಿಷ್ಠಿರನು ಗುರಾಣಿಯನ್ನು ಧರ್ಮಜನ ಮುಂದೆ ಒಡ್ಡಿದನು. ಸಾರಥಿಯು ಕುದುರೆಗಳನ್ನು ಚಪ್ಪರಿಸಿ ರಥವನ್ನು ಮುಂದಕ್ಕೊಯ್ದನು. ಧೃತರಾಷ್ಟ್ರನೇ ಕೇಳು, ಕರ್ಣನು ಐದು ಬಾಣಗಳಿಂದ ಗುರಾಣಿಯನ್ನು ಮುರಿದು, ಸೂತನ ತಲೆಯನ್ನು ಕತ್ತರಿಸಲು, ಅವನ ಮುಂಡವು ನೆಲಕ್ಕೆ ಬಿದ್ದು ಉರುಳಿತು.

ಅರ್ಥ:
ಅರಿ: ವೈರಿ, ಆಯುಧ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಅಡ್ಡ: ಮಧ್ಯ ಬರುವುದು; ಅರಸ: ರಾಜ; ಅಭಿಮುಖ: ಎದುರು; ಒಡ್ಡು: ತೋರು; ರಥ: ಬಂಡಿ, ತೇರು; ತುರಗ: ಕುದುರೆ; ಚಪ್ಪರಿಸು: ಅಪ್ಪಳಿಸು, ಕೂಗು; ಸಾರಥಿ: ರಥವನ್ನು ಓಡಿಸುವವ, ಸೂತ; ನೂಕು: ತಳ್ಳು; ಧರಣಿಪತಿ: ರಾಜ; ಕೇಳು: ಆಲಿಸು; ಹರಿಗೆ: ಚಿಲುಮೆ, ತಲೆಪೆರಿಗೆ; ಮುರಿ: ಸೀಳು; ಎಚ್ಚು: ಬಾಣಬಿಡು; ಸೂತ: ರಥವನ್ನು ಓಡಿಸುವವ; ಶಿರ: ತಲೆ; ಇಳುಹು: ಕೆಳಕ್ಕೆ ತರು; ಒದೆ: ತಳ್ಳು, ನೂಕು, ಮೆಟ್ಟು; ಮುಂಡ: ತಲೆಯಿಲ್ಲದ ದೇಹ;

ಪದವಿಂಗಡಣೆ:
ಅರಿಯ +ಶರಹತಿಗ್+ಅಡ್ಡವ್+ಅರಿಗೆಯನ್
ಅರಸನ್+ಅಭಿಮುಖಕ್+ಒಡ್ಡಿದರು +ರಥ
ತುರಗವನು +ಚಪ್ಪರಿಸಿ +ಸಾರಥಿ +ನೂಕಿದನು +ರಥವ
ಧರಣಿಪತಿ+ ಕೇಳ್+ಐದು +ಶರದಲಿ
ಹರಿಗೆಯನು +ಮುರಿ+ಎಚ್ಚು +ಸೂತನ
ಶಿರವನ್+ಇಳುಹಿದೊಡ್+ಒದೆದು+ಕೊಂಡುದು +ಮುಂಡ+ಸಾರಥಿಯ

ಅಚ್ಚರಿ:
(೧) ಅರಿ – ವೈರಿ ಮತ್ತು ಶಸ್ತ್ರ ಅರ್ಥಗಳಲ್ಲಿ ಬಳಕೆ

ಪದ್ಯ ೫೨: ಕರ್ಣನು ಧರ್ಮರಾಯನನ್ನು ಯಾವ ಮಾತುಗಳಿಂದ ಹಂಗಿಸಿದನು?

ಕಾವನಾರೈ ಕರ್ಣಮುನಿದರೆ
ಜೀವದಲಿ ಕಕ್ಕುಲಿತೆಯೇಕೆ ಶ
ರಾವಳಿಗಳಿವಲಾ ಕರಾಗ್ರದಲುಗ್ರಧನುವಿದಲಾ
ನಾವು ಸೂತನ ಮಕ್ಕಳುಗಳೈ
ನೀವಲೇ ಕ್ಷತ್ರಿಯರು ನಿಮಗೆದು
ದಾವುದಂತರವತಿಬಳರು ನೀವೆನುತ ತೆಗೆದೆಚ್ಚ (ಕರ್ಣ ಪರ್ವ, ೧೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕರ್ಣನು ಕೋಪಗೊಂಡರೆ ನಿಮ್ಮನ್ನು ರಕ್ಷಿಸುವವರಾರು? ಇನ್ನು ಜೀವದ ಮೇಲಿನ ಆಸೆಯೇತಕ್ಕೆ? ಕೈಯಲ್ಲಿ ಉಗ್ರವಾದ ಬಿಲ್ಲಿದೆ ಬತ್ತಳಿಕೆಯಲ್ಲಿ ಬಾಣಗಳಿವೆ, ನೀವೆ ನಿಂತು ನನ್ನನ್ನು ಎದುರಿಸಿ, ಓಹೋ ನಾವದರೂ ಸೂತಪುತ್ರರು, ನೀವು ಕ್ಷತ್ರಿಯರು ಅತಿ ಶಕ್ತಿಶಾಲಿಗಳು! ನಾವೆಲ್ಲಿ ನೀವೆಲ್ಲಿ ಎಂದು ಹೇಳುತ್ತಾ ಕರ್ಣನು ಧರ್ಮಜನ ಮೇಲೆ ಬಾಣ ಪ್ರಯೋಗ ಮಾಡಿದನು.

ಅರ್ಥ:
ಕಾವು: ರಕ್ಷಣೆ; ಮುನಿ: ಕೋಪ; ಜೀವ: ಬದುಕುವ; ಕಕ್ಕುಲಿತೆ: ಚಿಂತೆ, ಪ್ರೀತಿ; ಶರ: ಬಾಣ; ಆವಳಿ: ಸಾಲು, ಗುಂಪು; ಕರ: ಹಸ್ತ; ಅಗ್ರ: ಮುಂಭಾಗ; ಉಗ್ರ: ಭಯಂಕರ; ಧನು: ಬಿಲ್ಲು; ಸೂತ: ರಥವನ್ನು ಓಡಿಸುವವ; ಮಕ್ಕಳು: ಸುತರು; ಕ್ಷತ್ರಿಯ: ರಾಜ್ಯವನ್ನು ಆಳುವ ಪಂಗಡ; ಅಂತರ: ದೂರ; ಬಳರು: ಶಕ್ತಿವಂತರು; ಎಚ್ಚ: ಬಾಣಹೂಡು;

ಪದವಿಂಗಡಣೆ:
ಕಾವನಾರೈ +ಕರ್ಣ+ಮುನಿದರೆ
ಜೀವದಲಿ +ಕಕ್ಕುಲಿತೆ+ಏಕೆ +ಶ
ರಾವಳಿಗಳ್+ಇವಲ್+ಆ+ ಕರಾಗ್ರದಲ್+ಉಗ್ರ+ಧನುವಿದಲಾ
ನಾವು+ ಸೂತನ+ ಮಕ್ಕಳುಗಳೈ
ನೀವಲೇ +ಕ್ಷತ್ರಿಯರು +ನಿಮಗೆದುದ್
ಆವುದ್+ಅಂತರವ್+ಅತಿಬಳರು +ನೀವೆನುತ +ತೆಗೆದೆಚ್ಚ

ಅಚ್ಚರಿ:
(೧) ಧರ್ಮರಾಯನನ್ನು ಹಂಗಿಸುವ ಪರಿ – ನಾವು ಸೂತನ ಮಕ್ಕಳು, ನೀವಲೇ ಕ್ಷತ್ರಿಯಲು, ಅತಿಬಳರು