ಪದ್ಯ ೫೮ : ಕರ್ಣನು ಧರ್ಮರಾಯನನ್ನು ಹೇಗೆ ಹಂಗಿಸಿದನು?

ಸಾಳುವನ ಕೂಡರಗಿಳಿಗೆ ಸಮ
ಮೇಳವೇ ಶಸ್ತ್ರಜ್ಞನಾದಡೆ
ಸೋಲುವುದೆ ವರ ಶಸ್ತ್ರ ವಿದ್ಯಾಪ್ರೌಢಿಯದು ಬೇರೆ
ಆಳುತನದಭಿಮಾನವದು ಕರ
ವಾಳಧಾರಾಗಮನವರಸರೆ
ಖೂಳರಾದಿರಿ ನೀವೆನುತ ಭಂಗಿಸಿದನಾ ಕರ್ಣ (ಕರ್ಣ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಬೇಟೆಗಾಗಿಯೇ ತಯಾರಾದ ಗಿಡುಗಕ್ಕೆ ಅರಿಗಿಳಿ ಸರಿಸಮಾನವೇ? ಶಸ್ತ್ರವಿದ್ಯೆಯನ್ನರಿತವನು ಸೋಲುವುದಿಲ್ಲವೇ? ಶಸ್ತ್ರವಿದ್ಯೆಯಲ್ಲಿ ಪ್ರೌಢಿಮೆಯೆನ್ನುವುದು ಬೇರೆಯೇ ವಿಷಯ. ನಾನು ವೀರನೆಂಬ ಅಭಿಮಾನ ಕತ್ತಿಯ ಅಲಗಿನ ಮೇಲೆ ನಡೆದಂತೆ. ರಾಜ ನೀವು ಅಲ್ಪರಾದಿರಿ ಎಂದು ಕರ್ಣನು ಧರ್ಮರಾಯನನ್ನು ಹಂಗಿಸಿದನು.

ಅರ್ಥ:
ಸಾಳುವ: ಗಿಡುಗ; ಅರಗಿಳಿ: ಗಿಳಿಗಳಲ್ಲಿ ಶ್ರೇಷ್ಠವಾದುದು ಸಮಮೇಳ: ಸಮಾನ; ಶಸ್ತ್ರಜ್ಞ: ಆಯುಧಗಳಲ್ಲಿ ಪ್ರವೀಣನಾದ; ಸೋಲು: ಪರಾಜಯ; ವರ: ಶ್ರೇಷ್ಠ; ಶಸ್ತ್ರ; ಆಯುಧ; ವಿದ್ಯ: ಜ್ಞಾನ; ಪ್ರೌಢಿಮೆ: ಹಿರಿಮೆ, ಹೆಚ್ಚು; ಬೇರೆ: ಅನ್ಯ; ಆಳು: ಶೂರ; ಅಭಿಮಾನ: ಹೆಮ್ಮೆ, ಅಹಂಕಾರ; ಕರವಾಳ: ಕತ್ತಿ; ಕರವಾಳಧಾರೆ: ಕತ್ತಿಯ ಅಂಚು; ಗಮನ: ನಡೆಯುವುದು; ಅರಸ: ರಾಜ; ಖೂಳ: ಅಲ್ಪ, ನೀಚ, ದುಷ್ಟ; ಭಂಗಿಸು: ಅಪಮಾನ ಮಾಡು;

ಪದವಿಂಗಡಣೆ:
ಸಾಳುವನ +ಕೂಡರಗಿಳಿಗೆ+ ಸಮ
ಮೇಳವೇ +ಶಸ್ತ್ರಜ್ಞನ್+ಆದಡೆ
ಸೋಲುವುದೆ +ವರ+ ಶಸ್ತ್ರ+ ವಿದ್ಯಾ+ಪ್ರೌಢಿಯದು +ಬೇರೆ
ಆಳುತನದ್+ಅಭಿಮಾನವ್+ಅದು +ಕರ
ವಾಳಧಾರಾ+ಗಮನವ್+ಅರಸರೆ
ಖೂಳರಾದಿರಿ+ ನೀವೆನುತ+ ಭಂಗಿಸಿದನಾ+ ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಳುವನ ಕೂಡರಗಿಳಿಗೆ ಸಮಮೇಳವೇ
(೨) ಅಭಿಮಾನವನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ತಿಳಿಸುವ ನುಡಿ – ಆಳುತನದಭಿಮಾನವದು ಕರವಾಳಧಾರಾಗಮನವ್