ಪದ್ಯ ೪೮: ಸಂಜಯನನು ಏನೆಂದು ಕೊಂಡು ಹಸ್ತಿನಾಪುರಕ್ಕೆ ಹೊರಟನು?

ಹೊನ್ನಿನಲಿ ಮಧುರೋಕ್ತಿಯಲಿ ವಿವಿ
ಧಾನ್ನವುಡುಗೊರೆಗಳಲಿ ದೂತನ
ಮನ್ನಿಸಿದನವನೀಶ ನುಚಿತದಲವನ ಬೀಳ್ಕೊಟ್ಟು
ಪನ್ನಗನ ಸಿರಿಮಂಚದಾತನು
ಬೆನ್ನಲಿರಲೀ ಪಾಂಡು ತನಯರಿ
ಗಿನ್ನು ಮಂಗಳವೆನುತ ಸಂಜಯ ಬಂದನಿಭಪುರಿಗೆ (ಉದ್ಯೋಗ ಪರ್ವ, ೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸಂಜಯನನ್ನು ಧರ್ಮರಾಯನು, ಹೊನ್ನು, ಪ್ರೀತಿಯ ಮಾತು, ನಾನಾ ವಿಧವಾದ ಪಕ್ವಾನ್ನಗಳು, ಉಡುಗೊರೆಗಳಿಂದ ಯುಧಿಷ್ಠಿರನು ಮನ್ನಿಸಿ ಬೀಳ್ಕೊಟ್ಟನು. ಹಿಂದಿರುಗೆ ಹೋಗುತ್ತಾ ಸಂಜಯನು “ಆದಿಶೇಷನೇ ಮಂಚವಾಗಿರುವ ಮಹಾವಿಷ್ಣುವು ಶ್ರೀಕೃಷ್ಣನಾಗಿ ಪಾಂಡವರ ಬೆಂಬಲವಾಗಿರುವುದರಿಂದ ಅವರಿಗೆ ಸಮಸ್ತ ಸನ್ಮಂಗಳಾಗುವುದು ನಿಶ್ಚಿತ ಎಂದುಕೊಂಡು ಹಸ್ತಿನಾಪುರಕ್ಕೆ ಬಂದನು.

ಅರ್ಥ:
ಹೊನ್ನು: ಚಿನ್ನ; ಮಧುರ: ಸಿಹಿಯಾದುದು; ಉಕ್ತಿ: ಮಾತು; ವಿವಿಧ: ಬಹಳ ಬಗೆ; ಅನ್ನ: ತಿನಿಸು; ಉಡುಗೊರೆ; ಕಾಣಿಕೆ, ಬಳುವಳಿ; ದೂತ: ದಾಸ; ಮನ್ನಿಸು: ಗೌರವಿಸು; ಅವನೀಶ: ರಾಜ; ಉಚಿತ: ಸರಿಯಾದ; ಬೀಳ್ಕೊಡು: ಕಳಿಸು; ಪನ್ನಗ: ಹಾವು; ಸಿರಿ: ಶ್ರೇಷ್ಠ, ಐಶ್ವರ್ಯ; ಮಂಚ: ಮಲಗುವ ಸಾಧನ, ಪರ್ಯಂಕ; ಬೆನ್ನು: ಹಿಂಬಾಗ; ತನಯ: ಮಕ್ಕಳು; ಮಂಗಳ: ಒಳ್ಳೆಯ; ಇಭಪುರಿ: ಹಸ್ತಿನಾಪುರಿ; ಇಭ: ಆನೆ, ಹಸ್ತಿ;

ಪದವಿಂಗಡಣೆ:
ಹೊನ್ನಿನಲಿ+ ಮಧುರ+ಉಕ್ತಿಯಲಿ +ವಿವಿ
ಧ+ಅನ್ನ+ ಉಡುಗೊರೆಗಳಲಿ +ದೂತನ
ಮನ್ನಿಸಿದನ್+ಅವನೀಶನ್ +ಉಚಿತದಲ್+ಅವನ +ಬೀಳ್ಕೊಟ್ಟು
ಪನ್ನಗನ +ಸಿರಿ+ಮಂಚದ್+ಆತನು
ಬೆನ್ನಲಿರಲೀ +ಪಾಂಡು+ ತನಯರಿಗ್
ಇನ್ನು +ಮಂಗಳವೆನುತ+ ಸಂಜಯ +ಬಂದನ್+ಇಭಪುರಿಗೆ

ಅಚ್ಚರಿ:
(೧) ಹಸ್ತಿನಾಪುರವನ್ನು ಇಭಪುರಿ ಎಂದು ಕರೆದಿರುವುದು
(೨) ಕೃಷ್ಣನನ್ನು ಪನ್ನಗಸಿರಿಮಂಚದಾತ

ಪದ್ಯ ೪೭: ಮತ್ತಾರ ಯೋಗಕ್ಷೇಮವನ್ನು ಧರ್ಮರಾಯನು ಕೇಳಿದನು?

ವರ ಪುರೋಹಿತರನು ಸುಸಾವಂ
ತರನು ವೈದ್ಯರ ವಿದುರನನು ಮ
ತ್ತರಮನೆಯ ವಿಶ್ವಾಸಿಗಳನೋಲಗದ ಗಣಿಕೆಯರ
ಕರಿಹಯಾಧ್ಯಕ್ಷರನು ಪಡಿಹಾ
ರರನು ಬಾಹತ್ತರ ನಿಯೋಗದ
ಪರಿಜನದ ಕುಶಲವನು ಕೇಳಿದೆನೆಂದು ಹೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಪುರೋಹಿತರು, ವಿದುರ, ಸಾಮಂತರು, ವೈದ್ಯರು, ಅರಮನೆಯ ವಿಶ್ವಾಸಿಗಳು, ಆಸ್ಥಾನದ ಗಣಿಕೆಯರು, ಆನೆ ಕುದುರೆ ಶಾಲೆಗಳ ಅಧ್ಯಕ್ಷರು, ಎಪ್ಪತ್ತೆರಡು ಬಗೆಯ ಸೇವಕರು ಇವರೆಲ್ಲರ ಕುಶಲವನ್ನು ನಾನು ವಿಚಾರಿಸಿದೆನೆಂದು ಹೇಳು ಎಂದು ಧರ್ಮರಾಯ ಸಂಜಯನಿಗೆ ಹೇಳಿದ.

ಅರ್ಥ:
ವರ: ಶ್ರೇಷ್ಠ; ಪುರೋಹಿತ: ಅರ್ಚಕ; ಸಾವಂತ:ಚಕ್ರವರ್ತಿಗೆ ಅಧೀನವಾಗಿರುವ – ರಾಜ; ವೈದ್ಯ: ರೋಗ ಚಿಕಿತ್ಸೆ ಮಾಡುವವನು; ಅರಮನೆ: ರಾಜನ ವಾಸಸ್ಥಾನ; ವಿಶ್ವಾಸ:ನಂಬಿಕೆ; ಗಣಿಕೆ:ವೇಶ್ಯೆ; ಕರಿ: ಆನೆ; ಹಯ: ಕುದುರೆ; ಅಧ್ಯಕ್ಷ: ಒಡೆಯ; ಪಡಿಹಾರ: ಬಾಗಿಲು ಕಾಯುವವನು; ಬಾಹತ್ತರ: ಎಪ್ಪತ್ತೆರಡು; ನಿಯೋಗ: ಕೆಲಸ, ಉದ್ಯೋಗ; ಪರಿಜನ: ಸೇವೆ ಮಾಡುವ ಜನ; ಕುಶಲ: ಕ್ಷೇಮ; ಕೇಳು: ಆಲಿಸು;

ಪದವಿಂಗಡಣೆ:
ವರ +ಪುರೋಹಿತರನು+ ಸುಸಾವಂ
ತರನು +ವೈದ್ಯರ +ವಿದುರನನು +ಮ
ತ್ತರಮನೆಯ +ವಿಶ್ವಾಸಿಗಳನ್+ಓಲಗದ +ಗಣಿಕೆಯರ
ಕರಿ+ಹಯಾಧ್ಯಕ್ಷರನು +ಪಡಿಹಾ
ರರನು +ಬಾಹತ್ತರ+ ನಿಯೋಗದ
ಪರಿಜನದ +ಕುಶಲವನು +ಕೇಳಿದೆನೆಂದು +ಹೇಳೆಂದ

ಅಚ್ಚರಿ:
(೧) ೧೩ ಬಗೆಯ ಜನರನ್ನು ಪರಿಚಯಿಸುವ ಪದ್ಯ

ಪದ್ಯ ೪೬: ಸಂಜಯನ ಮೂಲಕ ಧರ್ಮರಾಯ ಯಾರಿಗೆ ತನ್ನ ವಂದನೆಗಳನ್ನು ಅರ್ಪಿಸಿದನು?

ಜನಕನನು ಗಾಂಧಾರಿ ದುರಿಯೋ
ಧನನನವರೊಡಹುಟ್ಟಿದರನಂ
ಗನೆಯರನು ದುಶ್ಶಳೆಯ ಸೈಂಧವ ಕರ್ಣ ಶಕುನಿಗಳ
ವಿನುತ ಬಾಹ್ಲಿಕ ಶಲ್ಯ ಭಗದ
ತಾನ ನದೀಸುತ ಗುರು ಕೃಪರ ಗುರು
ತನುಜನನು ವಂದಿಸಿದರುಚಿತದಲೆಂದು ಹೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಗಾಂಧಾರಿ, ದುರ್ಯೋಧನ, ಅವನ ತಮ್ಮಂದಿರು, ಅವರ ರಾಣೀವಾಸದವರು, ದುಶ್ಶಳೆ, ಸೈಂಧವ, ಕರ್ಣ, ಶಕುನಿ, ಬಾಹ್ಲಿಕ, ಶಲ್ಯ, ಭಗದತ್ತ, ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮರಿಗೆ ನಾನು ವಂದಿಸುವೆನೆಂದು ಹೇಳು ಎಂದು ಧರ್ಮರಾಯನು ಸಂಜಯನಿಗೆ ಹೇಳಿದನು.

ಅರ್ಥ:
ಜನಕ: ತಂದೆ; ಒಡಹುಟ್ಟು: ಜೊತೆಯಲ್ಲಿ ಜನಿಸಿದವರು; ಅಂಗನೆ: ಸ್ತ್ರೀ; ವಿನುತ:ಸ್ತುತಿಗೊಂಡ; ನದಿ: ಸರೋವರ; ಸುತ: ಮಗ; ಗುರು: ಆಚಾರ್ಯ; ತನುಜ: ಮಗ; ವಂದಿಸು: ನಮಸ್ಕರಿಸು;

ಪದವಿಂಗಡಣೆ:
ಜನಕನನು +ಗಾಂಧಾರಿ +ದುರಿಯೋ
ಧನನನನ್+ಅವರ್+ಒಡಹುಟ್ಟಿದರನ್
ಅಂಗನೆಯರನು +ದುಶ್ಶಳೆಯ +ಸೈಂಧವ +ಕರ್ಣ +ಶಕುನಿಗಳ
ವಿನುತ +ಬಾಹ್ಲಿಕ +ಶಲ್ಯ +ಭಗದ
ತಾನ +ನದೀಸುತ+ ಗುರು +ಕೃಪರ+ ಗುರು
ತನುಜನನು +ವಂದಿಸಿದರ್+ಉಚಿತದಲೆಂದು +ಹೇಳೆಂದ

ಪದ್ಯ ೪೫: ಸಂಜಯನನ್ನು ಹೇಗೆ ಬೀಳ್ಕೊಡಲಾಯಿತು?

ಕಳುಹಿದನು ಬೀಡಾರಕವನಿಪ
ತಿಲಕನಾ ಸಂಜಯನನಲ್ಲಿಂ
ಬಳಿಕ ಮರುದಿನ ಕೃಷ್ಣಪಾರ್ಥರು ಸಂಜಯನ ಕರೆಸಿ
ಬಲುಹು ಮೆಲುಹಿನ ನುಡಿಗಳಿಂದವೆ
ತಿಳುಹಿದರು ಬಳಿಕಿತ್ತಲೋಲಗ
ದೊಳಗೆ ದೂತನ ಕರೆಸಿ ಬೀಳ್ಕೊಟ್ಟನು ಯುಧಿಷ್ಠಿರನು (ಉದ್ಯೋಗ ಪರ್ವ, ೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧರ್ಮರಾಯನು ಸಂಜಯನನ್ನ ಅವನು ತಂಗಿದ್ದ ಬಿಡಾರಕ್ಕೆ ಕಳುಹಿಸಿದನು, ಮರುದಿನ ಸಂಜಯನನ್ನು ಕೃಷ್ಣ, ಅರ್ಜುನರು ಭೇಟಿಮಾಡಿ ನಿಷ್ಠುರವಾಗಿಯೂ ಸಮಾಧಾನವಾಗಿಯೂ ಮಾತಾಡಿಸಿ ಕಳಿಸಿಕೊಟ್ಟರು, ನಂತರ ಧರ್ಮರಾಯನು ಅವನನ್ನು ತನ್ನ ದರ್ಮಾರಿಗೆ ಕರೆದು ಬೀಳ್ಕೊಟ್ಟನು.

ಅರ್ಥ:
ಕಳುಹು: ಬೀಳ್ಕೊಡು; ಬಿಡಾರ: ತಂಗುವ ಸ್ಥಳ; ಅವನಿಪ: ರಾಜ; ತಿಲಕ: ಶ್ರೇಷ್ಠ, ಅಗ್ರ; ಬಳಿಕ: ನಮ್ತರ; ಮರುದಿನ: ನಾಳೆ; ಕರೆಸು: ಬರೆಮಾಡು; ಬಲುಹು: ಬಹಳ; ಮೆಲುಹು: ಸಮಾಧಾನ; ನುಡಿ: ಮಾತು; ತಿಳುಹು: ತಿಳಿದುಕೊಳ್ಳು; ಓಲಗ: ದರ್ಬಾರು; ದೂತ: ಓಲೆಕಾರ, ರಾಯಭಾರಿ;

ಪದವಿಂಗಡಣೆ:
ಕಳುಹಿದನು+ ಬೀಡಾರಕ್+ಅವನಿಪ
ತಿಲಕನ್+ಆ+ ಸಂಜಯನನ್+ಅಲ್ಲಿಂ
ಬಳಿಕ+ ಮರುದಿನ +ಕೃಷ್ಣಪಾರ್ಥರು +ಸಂಜಯನ +ಕರೆಸಿ
ಬಲುಹು +ಮೆಲುಹಿನ +ನುಡಿಗಳಿಂದವೆ
ತಿಳುಹಿದರು +ಬಳಿಕ್+ಇತ್ತಲ್+ಓಲಗ
ದೊಳಗೆ +ದೂತನ +ಕರೆಸಿ +ಬೀಳ್ಕೊಟ್ಟನು +ಯುಧಿಷ್ಠಿರನು

ಅಚ್ಚರಿ:
(೧) ಯುಧಿಷ್ಠಿರನನ್ನು ಅವನಿಪ ತಿಲಕ ಎಂದು ಕರೆದಿರುವುದು

ಪದ್ಯ ೪೪: ಧರ್ಮಜನು ಯಾವ ರೀತಿ ಸಮಾಧಾನ ಪಡಿಸಿದನು?

ಆತನಿಂದೇನಹುದು ಹೊಲ್ಲೆಹ
ವಾತನಿಂದೇನಹುದು ಲೇಸುಗ
ಳಾತನಿಂದೇ ಬರಲಿ ಹಿಂದಣ ಕಾನನಾಯಸದ
ಯಾತನೆಯ ಸೈರಿಸಿದ ನಮಗಿ
ನ್ನಾತ ನುಡಿದೊಡೆ ಹಾನಿಯೇ ನೀವ್
ಕಾತರಿಸದಿರಿಯೆಂದು ಸಂತೈಸಿದನು ಯಮಸೂನು (ಉದ್ಯೋಗ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭೀಮನು ಮೊದಲಾಗಿ ಎಲ್ಲಾ ರಾಜರ ಆವೇಶದ ಮಾತುಗಳನ್ನು ಕೇಳಿದ ಧರ್ಮರಾಯ, ನೀವೆಲ್ಲಾ ಯಾತಕ್ಕಾಗಿ ಹೀಗೆ ವರ್ತಿಸುತ್ತಿದ್ದೀರಿ? ಅವನಿಂದು ಏನು ಕೇಡು ಅಥವ ಒಳ್ಳೆಯದಾದೀತು? ಒಂದು ಪಕ್ಷ ಆದರೂ ಆಗಲಿ, ಹಿಂದೆ ವನವಾಸದ ಕಷ್ಟವನ್ನು ಸೈರಿಸಿದ ನಮಗೆ, ಬರಿ ಮಾತಿನಿಂದ ಏನು ಹಾನಿಯಾದೀತು? ನೀವು ಕಾತರಿಸದೆ ಸಮಾಧಾನವಾಗಿರಿ ಎಂದು ಸಮಾಧಾನ ಪಡಿಸಿದನು.

ಅರ್ಥ:
ಏನಹುದು: ಏನು ಆಗುತ್ತದೆ; ಹೊಲ್ಲೆಹ: ದೋಷ; ಲೇಸು: ಒಳ್ಳೆಯದು; ಹಿಂದಣ: ಪೂರ್ವ; ಕಾನನ: ಕಾಡು; ವಾಸ: ಜೀವನ; ಯಾತನೆ: ನೋವು; ಸೈರಿಸು: ತಡೆದುಕೊ; ನುಡಿ: ಮಾತು; ಹಾನಿ: ಹಾಳು; ಕಾತರ: ಕಳವಳ; ಸಂತೈಸು: ಸಮಾಧಾನ ಪಡಿಸು; ಸೂನು: ಮಗ; ಆಯಸ: ಬಳಲಿಕೆ;

ಪದವಿಂಗಡಣೆ:
ಆತನಿಂದ್+ಏನಹುದು +ಹೊಲ್ಲೆಹವ್
ಆತನಿಂದ್+ಏನಹುದು +ಲೇಸುಗಳ್
ಆತನಿಂದೇ +ಬರಲಿ +ಹಿಂದಣ +ಕಾನನ+ಆಯಸದ
ಯಾತನೆಯ +ಸೈರಿಸಿದ +ನಮಗಿನ್
ಆತ +ನುಡಿದೊಡೆ+ ಹಾನಿಯೇ +ನೀವ್
ಕಾತರಿಸದಿರಿಯೆಂದು+ ಸಂತೈಸಿದನು +ಯಮಸೂನು

ಅಚ್ಚರಿ:
(೧) ಆತನಿಂದ್ – ೧-೩ ಸಾಲಿನ ಮೊದಲ ಪದ
(೨) ಏನಹುದು – ೧, ೨ ಸಾಲಿನ ೨ ಪದ

ಪದ್ಯ ೪೩: ಧರ್ಮರಾಯನ ಆಸ್ಥಾನದಲ್ಲಿದ್ದ ಅತಿರಥರು ಹೇಗೆ ಗರ್ಜಿಸಿದರು?

ಕದಡಿತಾಯಾಸ್ಥಾನ ಕಲ್ಪಾಂ
ತದ ಮಹಾಸಿಡಿಲಂತೆ ವೀರರು
ಕೆದರಿ ತಮತಮಗೆದ್ದು ನುಡಿದರು ಖಂಡೆಯವ ಜಡಿದು
ಉದಿರ ಹೊಯ್ವೆವು ಹಲುಗಳನು ಕಿ
ಬ್ಬದಿಯಲುಗಿವೆವು ಕರುಳನಹಿತರ
ತಿದಿಯ ಸುಲಿವೆವು ಬೆಸಸು ನೇಮವನೆಂದರತಿರಥರು (ಉದ್ಯೋಗ ಪರ್ವ, ೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲಿದ್ದ ಮಹಾವೀರರೂ ಕೂಡ ದುರ್ಯೋಧನನ ಮಾತನ್ನು ಕೇಳಿ ಕುಪಿತರಾದರು. ಮಹಾಕಲ್ಪದ ಕೊನೆಯಲ್ಲಿ ಆಗುವ ಶಬ್ದದಂತೆ ಯುಧಿಷ್ಠಿರನ ಆಸ್ಥಾನದಲ್ಲಿ ಶಬ್ದವಾಯಿತು. ಆಸ್ಥಾನದಲ್ಲಿದ್ದ ವೀರರು ಕತ್ತಿಗಳನ್ನು ಜಡಿದು ಒಬ್ಬೊಬ್ ಬ್ ಅರೂ ತಮಗೆ ಬಂದಂತೆ ಕೂಗಿದರು. ಅವರ ಹಲ್ಲುಗಳು ಉದುರುವಂತೆ ಹೊಡೆಯುತ್ತೇವೆ, ಕರುಳುಗಳನ್ನು ಪಕ್ಕೆಯಲ್ಲಿ ಕೀಳುತ್ತೇವೆ, ಚರ್ಮ ಸುಲಿಯುತ್ತೇವೆ ಅಪ್ಪಣೆ ಕೊಡಿ ಎಂದು ಅತಿರಥರು ಅಬ್ಬರಿಸಿದರು.

ಅರ್ಥ:
ಕದಡು: ಕಲ್ಕ, ರಾಡಿ; ಆಸ್ಥಾನ: ದರ್ಬಾರು; ಕಲ್ಪ:ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಮಹಾ: ದೊಡ್ಡ; ಸಿಡಿಲು: ಚಿಮ್ಮು, ಸಿಡಿ; ವೀರ: ಶೂರ; ಕೆದರು: ಹರಡು, ಚದರಿಸು; ಎದ್ದು: ಮೇಲೇಳು; ನುಡಿ: ಮಾತಾಡು; ಖಂಡ:ತುಂಡು, ಚೂರು; ಜಡಿ: ಹೊಡೆತ; ಉದಿರ: ತುಂಡರಿಸು; ಹೊಯ್: ಹೊಡೆ; ಹಲು: ರದ; ಅಲುಗು: ಅಳ್ಳಾಡು, ಅದುರು; ಕಿಬ್ಬದಿ: ಪಕ್ಕ; ಕರುಳು: ಒಂದು ಜೀರ್ಣಾಂಗ, ಪಚನಾಂಗ; ತಿದಿ: ಚರ್ಮದ ಪದರಗಳು; ಸುಲಿ: ಬಿಡಿಸು; ಬೆಸಸು: ಹೇಳು, ಆಜ್ಞಾಪಿಸು; ನೇಮ:ವ್ರತ; ಅತಿರಥ: ಮಹಾವೀರರು; ಆಯ: ಪ್ರಮಾಣ; ಅಂತ: ಕೊನೆ;

ಪದವಿಂಗಡಣೆ:
ಕದಡಿತ್+ಆಯ+ಆಸ್ಥಾನ +ಕಲ್ಪಾಂ
ತದ +ಮಹಾಸಿಡಿಲಂತೆ +ವೀರರು
ಕೆದರಿ+ ತಮತಮಗೆದ್ದು+ ನುಡಿದರು +ಖಂಡೆಯವ +ಜಡಿದು
ಉದಿರ+ ಹೊಯ್ವೆವು +ಹಲುಗಳನು+ ಕಿ
ಬ್ಬದಿಯಲ್+ಉಗಿವೆವು +ಕರುಳನ್+ಅಹಿತರ
ತಿದಿಯ +ಸುಲಿವೆವು +ಬೆಸಸು +ನೇಮವನ್+ಎಂದರ್+ಅತಿರಥರು

ಅಚ್ಚರಿ:
(೧) ಹಲುಗಳನು ಹೊಯ್ಚೆವು, ಕರುಳನ್ ಉಗಿವೆವು, ತಿದಿಯ ಸುಲಿವೆವು – ಯಾವ ರೀತಿ ಶತ್ರುಗಳನ್ನು ನಾಶಮಾಡುತ್ತೇವೆ ಎಂದು ತಿಳಿಸಿರುವುದು
(೨) ನುಡಿ, ಜಡಿ – ಪ್ರಾಸ ಪದಗಳು
(೩) ವೀರ, ಅತಿರಥ – ಸಮನಾರ್ಥಕ ಪದ

ಪದ್ಯ ೪೨: ಉಪಪಾಂಡವರು ಹೇಗೆ ಗರ್ಜಿಸಿದರು?

ಬೆಸಸುವುದು ಹಿಂದಾದ ಜೂಜಿನೊ
ಳೆಸೆದ ಜಾಡ್ಯವೆ ಸಾಕು ಧರ್ಮದ
ದೆಸೆಗೆ ನೀವಿನ್ನುತ್ತರಾಯಿ ಸುಯೋಧನನ ಕುಲವ
ದೆಸೆ ದೆಸೆಯ ದೈವಂಗಳಿಗೆ ಹೆಸ
ರಿಸುವರೆಮ್ಮನು ಕಳುಹೆನುತ ಗ
ರ್ಜಿಸಿದರಂದಭಿಮನ್ಯು ಸಾತ್ಯಕಿ ಭೀಮನಂದನರು (ಉದ್ಯೋಗ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಮನು ಆರ್ಭಟಿಸಿದ ನಂತರ ಉಪಪಾಂಡವರು ತಮ್ಮ ಕ್ರೋಧವನ್ನು ಹೊರಹಾಕಿದರು. ಹಿಂದೆ ಜೂಜಾಟದಲ್ಲಿ ನೀವು ತೋರಿದ ನಿರುತ್ಸಾಹವೇ ಸಾಕು, ಇನ್ನು ಮೇಲೆ ಧರ್ಮದ ಪಾಲನೆ ನಿಮಗೇ ಇರಲಿ. ದುರ್ಯೋಧನನ ಪರಿವಾರವನ್ನು ದಿಕ್ಕು ದಿಕ್ಕಿನ ದೈವಗಳಿಗೆ ಹೆಸರು ಹೇಳಿ ಬಲಿ ಕೊಡುತ್ತೇವೆ. ನಮಗೆ ಅಪ್ಪಣೆ ಕೊಡಿ ಎಂದು ಅಭಿಮನ್ಯು, ಸಾತ್ಯಕಿ ಮತ್ತು ಘಟೋತ್ಕಚರು ಗರ್ಜಿಸಿದರು.

ಅರ್ಥ:
ಬೆಸಸು: ಹೇಳು, ಆಜ್ಞಾಪಿಸು; ಹಿಂದೆ: ಪೂರ್ವ; ಜೂಜು: ಜುಗಾರಿ, ಸಟ್ಟ; ಜಾಡ್ಯ: ನಿರುತ್ಸಾಹ; ಸಾಕು: ಕೊನೆ, ಅಂತ್ಯ; ಧರ್ಮ: ಧಾರಣ ಮಾಡಿದುದು, ನಿಯಮ; ದೆಸೆ: ದಿಕ್ಕು; ಉತ್ತರಾಯಿ: ಜವಾಬುದಾರಿ, ಬೇರೆಯವ; ಕುಲ: ವಂಶ; ದೈವ: ದೇವ; ಹೆಸರು: ನಾಮ; ಕಳುಹು: ಕಳಿಸು; ಗರ್ಜಿಸು: ಜೋರಾಗಿ ಕೂಗು; ನಂದನ: ಮಗ;

ಪದವಿಂಗಡಣೆ:
ಬೆಸಸುವುದು +ಹಿಂದಾದ +ಜೂಜಿನೊಳ್
ಎಸೆದ +ಜಾಡ್ಯವೆ +ಸಾಕು +ಧರ್ಮದ
ದೆಸೆಗೆ + ನೀವಿನ್+ಉತ್ತರಾಯಿ +ಸುಯೋಧನನ+ ಕುಲವ
ದೆಸೆ +ದೆಸೆಯ +ದೈವಂಗಳಿಗೆ+ ಹೆಸ
ರಿಸುವರ್+ಎಮ್ಮನು +ಕಳುಹ್+ಎನುತ +ಗ
ರ್ಜಿಸಿದರಂದ್+ಅಭಿಮನ್ಯು +ಸಾತ್ಯಕಿ +ಭೀಮನಂದನರು

ಅಚ್ಚರಿ:
(೧) ‘ದ’ ಕಾರದ ಜೋಡಿ ಪದಗಳ ಬಳಕೆ – ದೆಸೆ ದೆಸೆಯ ದೈವಂಗಲೀಗೆ

ಪದ್ಯ ೪೧: ಭೀಮನು ದುರ್ಯೋಧನನ ಮಾತನ್ನು ಕೇಳಿ ಹೇಗೆ ಪ್ರತಿಕ್ರಯಿಸಿದನು?

ಸಾಕು ಕೌರವ ನಾಯ ಮಾತನ
ದೇಕೆ ಚಿತ್ತೈಸುವಿರಿ ದೂತನ
ನೂಕು ನೂಕು ಕುಠಾರ ದುರ್ಯೋಧನನನೊಡೆಹೊಯ್ದು
ಶಾಕಿನಿಯರನು ರಕುತವಾರಿಯೊ
ಳೋಕುಳಿಯನಾಡಿಸುವೆ ನಿಲು ತಡ
ವೇಕೆನುತ ಘುಡುಘುಡಿಸಿ ಕಿಡಿಕಿಡಿಯೋದನಾ ಭೀಮ (ಉದ್ಯೋಗ ಪರ್ವ, ೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಸಂಜಯನ ಬಾಯಿಂದ ಕೇಳಿದ ಭೀಮ ಕುಪಿತಗೊಂಡನು. ಕೌರವನ ನಾಯಿ ಯಾದ ದುರ್ಯೋಧನನ ಮಾತುಗಳನ್ನು ಸಾಕು ಮಾದು, ಅದನ್ನೇಕೆ ಗಮನವಿಟ್ಟು ಕೇಳುತ್ತಿರುವಿರಿ, ದೂತನನ್ನು ಮೊದಲು ನೂಕಿ, ಕುಲಕ್ಕೆ ಕೊಡಲಿಯಾದ ದುರ್ಯೋಧನನನ್ನು ಸಾಯಿಸಿ ಅವನ ರಕ್ತವನ್ನು ಶಾಕಿನಿಯರು ಓಕುಳಿಯಾಡುವಂತೆ ಮಾಡುತ್ತೇನೆ. ತಡ ಮಾಡುವುದು ಬೇಡ ಎಂದು ಕೋಪಗೊಂಡ ಭೀಮನು ಗರ್ಜಿಸಿದನು.

ಅರ್ಥ:
ಸಾಕು: ನಿಲ್ಲಿಸು; ನಾಯ: ನಾಯಿ, ಶ್ವಾನ; ಮಾತು: ವಾಣಿ; ಚಿತ್ತೈಸು: ಮನಸಿಟ್ಟು ಕೇಳು; ದೂತ: ಸೇವಕ; ನೂಕು: ತಳ್ಳು;ಕುಠಾರ: ಕೊಡಲಿ; ಒಡೆ: ಕೆಡವು; ಶಾಕಿನಿ: ಕ್ಷುದ್ರ ದೇವತೆ; ರಕುತ: ನೆತ್ತರು; ವಾರಿ: ಸಮುದ್ರ; ಓಕುಳಿ: ಬಣ್ಣದ ನೀರು; ಆಡಿಸು: ಆಟವಾಡು; ನಿಲು: ನಿಲ್ಲು; ತಡ: ನಿಧಾನ; ಘುಡುಘುಡು: ಜೋರಾಗಿ ಗರ್ಜಿಸು; ಕಿಡಿಕಿಡಿ: ಕೋಪಗೊಳ್ಳು;

ಪದವಿಂಗಡಣೆ:
ಸಾಕು +ಕೌರವ +ನಾಯ +ಮಾತನದ್
ಏಕೆ +ಚಿತ್ತೈಸುವಿರಿ +ದೂತನ
ನೂಕು+ ನೂಕು+ ಕುಠಾರ +ದುರ್ಯೋಧನನನ್+ಒಡೆಹೊಯ್ದು
ಶಾಕಿನಿಯರನು +ರಕುತ+ವಾರಿಯೊಳ್
ಓಕುಳಿಯನ್+ಆಡಿಸುವೆ +ನಿಲು +ತಡ
ವೇಕೆನುತ +ಘುಡುಘುಡಿಸಿ+ ಕಿಡಿಕಿಡಿಯೋದನಾ +ಭೀಮ

ಅಚ್ಚರಿ:
(೧) ಘುಡುಘುಡಿಸಿ, ಕಿಡಿಕಿಡಿ – ಜೋಡಿ ಪದಗಳ ಬಳಕೆ
(೨) ದುರ್ಯೋಧನನನ್ನು ಬೈಯುವ ರೀತಿ – ಕೌರವ ನಾಯ
(೩) ದುರ್ಯೋಧನನ ಅಂತ್ಯ ಹೇಗೆ ಮಾಡಬೇಕು – ದುರ್ಯೋಧನನನೊಡೆಹೊಯ್ದು
ಶಾಕಿನಿಯರನು ರಕುತವಾರಿಯೊಳೋಕುಳಿಯನಾಡಿಸುವೆ

ಪದ್ಯ ೪೦: ಯಾರು ದುರ್ಯೋಧನನಿಗೆ ನಿಜವಾದ ಶತ್ರು?

ತಳಿತ ಜವ್ವನ ದುಬ್ಬುಗಳ ಕಳ
ವಳಿಗರರ್ಜುನ ಭೀಮರೆಂಬವ
ರೊಳಗೆ ವೈರವ ಬಿತ್ತಿ ಬೆಳೆಸುವ ಕೃಷ್ಣ ಹಗೆ ನಮಗೆ
ಉಳಿದ ದ್ರುಪದ ವಿರಾಟರೆಂಬೀ
ಹುಳುಗಳವರಂ ತೋರೆಗೆಡೆವರು
ತಿಳಿಯೆ ತಾನೇ ಕಡೆಗೆ ಕೆಡದಿರನೆಂದು ಹೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ದುರ್ಯೋಧನನು ಹೇಳಿಕಳಿಸಿದ ಮಾತುಗಳನ್ನು ಮುಂದುವರೆಸುತ್ತಾ ಸಂಜಯನನು “ಯೌವನದ ಹುಮ್ಮಸ್ಸಿನಲ್ಲಿ ತೇಲುತ್ತಿರುವ ಭೀಮಾರ್ಜುನರನ್ನು ನೀವು ನಂಬಿದ್ದೀರಿ, ನಮ್ಮ ಮೇಲೆ ಒಳಗೇ ವೈರವನ್ನು ಬೆಳೆಸುತ್ತಿರುವ ಕೃಷ್ಣನೇ ನಮಗೆ ನಿಜವಾದ ಶತ್ರು. ದ್ರುಪದ ವಿರಾಟ ರೆಂಬ ಹುಳುಗಳು ತಮಗೆ ತಾವೇ ಬೀಳುತ್ತಾರೆ. ಕೊನೆಗೆ ಕೆಡುವವನು ಧರ್ಮಜನೇ” ಎಂದು ಸಂಜಯನನು ದುರ್ಯೋಧನನ ಮಾತುಗಳನ್ನು ಪಾಂಡವರ ಸಭೆಯಲ್ಲಿ ಹೇಳಿದನು.

ಅರ್ಥ:
ತಳಿತ: ಚಿಗುರಿದ; ಜವ್ವನ: ಯೌವನ, ಹರೆಯ; ಉಬ್ಬು:ಗರ್ವಿಸು; ಕಳವಳಿಗ: ಚಿಂತಿಸುವವ; ಒಳಗೆ: ಅಂತರ್ಯ; ವೈರ: ಹಗೆ; ಬಿತ್ತು: ನಾಟು; ಬೆಳೆಸು: ಅಭಿವೃದ್ಧಿಗೊಳಿಸು; ಹಗೆ: ದ್ವೇಷ; ಉಳಿದ: ಮಿಕ್ಕ; ಹುಳು: ಚಿಕ್ಕ, ಲೆಕ್ಕಕ್ಕೆ ಬಾರದ, ಕ್ರಿಮಿ; ಎಡೆವರಿ: ಹಿಮ್ಮೆಟ್ಟು; ತಿಳಿ: ಅರ್ಥೈಸು; ಕಡೆ: ಕೊನೆ; ಕೆಡು: ನಾಶವಾಗು;

ಪದವಿಂಗಡಣೆ:
ತಳಿತ +ಜವ್ವನದ್ +ಉಬ್ಬುಗಳ +ಕಳ
ವಳಿಗರ್+ಅರ್ಜುನ +ಭೀಮರೆಂಬವರ್
ಒಳಗೆ +ವೈರವ +ಬಿತ್ತಿ +ಬೆಳೆಸುವ +ಕೃಷ್ಣ +ಹಗೆ +ನಮಗೆ
ಉಳಿದ +ದ್ರುಪದ +ವಿರಾಟರೆಂಬ್+ಈ
ಹುಳುಗಳ್+ಅವರಂ +ತೋರೆಗ್+ಎಡೆವರು
ತಿಳಿಯೆ +ತಾನೇ +ಕಡೆಗೆ +ಕೆಡದಿರನೆಂದು+ ಹೇಳೆಂದ

ಅಚ್ಚರಿ:
(೧) ವೈರ, ಹಗೆ – ಸಮನಾರ್ಥಕ ಪದ

ಪದ್ಯ ೩೯: ಧರ್ಮರಾಜನಿಗೆ ಏಕೆ ಭೂಮಿಯ ಒಡೆತನವು ಅನುಚಿತ?

ಮೊದಲೊಳಮಲ ಬ್ರಹ್ಮಚರ್ಯವು
ಮದುವೆಯಾಯಿತು ಬಳಿಕ ವನವಾ
ಸದೊಳು ವಾನ ಪ್ರಸ್ಥವೆಂಬಾಶ್ರಮವನಳವಡಿಸಿ
ತುದಿಗೆ ತಾಂ ಸನ್ಯಾಸವನು ಮಾ
ಡಿದನು ಮತ್ತಳುಪುವೊಡೆ ರಾಜ್ಯದ
ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತು ಇನ್ನು ಇತ್ತು, ಸಂಜಯನನು ದುರ್ಯೋಧನನ ಮಾತುಗಳನ್ನು ಹೇಳುತ್ತಾ ಮುಂದುವರೆಸಿದ, ಯುಧಿಷ್ಠಿರನು ಮೊದಲು ಬ್ರಹ್ಮಚರ್ಯನಾಗಿದ್ದ, ನಂತರ ಮದುವೆಮಾಡಿಕೊಂಡು ಗೃಹಸ್ಥನಾದ, ನಂತರ ವನವಾಸದಲ್ಲಿ ವಾನಪ್ರಸ್ಥಾಶ್ರಮವನ್ನು ಅನುಭವಿಸಿ, ವಿರಾಟನಗರದಲ್ಲಿ ಸನ್ಯಾಸವೂ ಅನುಭವಿಸಾಯಿತು. ಕ್ರಮವಾಗಿ ನಾಲ್ಕು ಆಶ್ರಮಗಳನ್ನು ಅನುಭವಿಸಿದ ಇವನಿಗೆ, ಭೂಮಿಯ ಒಡೆತನು ಅನುಚಿತವಾಗಿದೆ ಎಂದು ಹೇಳು ಎಂದು ಸಂಜಯನ ಬಳಿ ತಿಳಿಸಿದನು.

ಅರ್ಥ:
ಮೊದಲು: ಆದಿ; ಅಮಲ: ನಿರ್ಮಲ; ಬ್ರಹ್ಮಚರ್ಯ: ಇಂದ್ರಿಯ ನಿಗ್ರಹ ೨ ಚತುರಾಶ್ರಮಗಳಲ್ಲಿ ಮೊದಲನೆಯದು; ಮದುವೆ: ವಿವಾಹ; ಬಳಿಕ: ನಂತರ; ವನ: ಬನ, ಕಾಡು; ವಾಸ: ಇರುವಿಕೆ; ವಾನಪ್ರಸ್ಥ: ಚತುರಾಶ್ರಮಗಳಲ್ಲಿ ಮೂರನೆಯದು; ಅಳವಡಿಸು: ಹೊಂದಿಸು; ಯಮಜ: ಧರ್ಮರಾಯ; ಹೇಳು: ತಿಳಿಸು; ಅಳುಪು: ಬಯಸು;

ಪದವಿಂಗಡಣೆ:
ಮೊದಲೊಳ್+ಅಮಲ +ಬ್ರಹ್ಮಚರ್ಯವು
ಮದುವೆಯಾಯಿತು +ಬಳಿಕ +ವನವಾ
ಸದೊಳು +ವಾನಪ್ರಸ್ಥವೆಂಬ+ಆಶ್ರಮವನ್+ಅಳವಡಿಸಿ
ತುದಿಗೆ + ತಾಂ+ ಸನ್ಯಾಸವನು+ ಮಾ
ಡಿದನು +ಮತ್ತ್+ಅಳುಪುವೊಡೆ +ರಾಜ್ಯದ
ಪದವಿಗನುಚಿತವಾಯ್ತು +ಯಮಜಂಗೆಂದು+ ಹೇಳೆಂದ

ಅಚ್ಚರಿ:
(೧) ಮೊದಲು, ತುದಿ – ಪದಗಳ ಬಳಕೆ