ಪದ್ಯ ೯೩: ಅರ್ಜುನನು ಮತ್ಸ್ಯನಗರಿಗೆ ಹೇಗೆ ಹಿಂದಿರುಗಿದನು?

ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮಕುಟವನು ಮೂರಂಬಿನಲಿ ಕಡಿದು
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲುರಥದಿ ನಿಜನಗರಿಗೈತಂದ (ವಿರಾಟ ಪರ್ವ, ೯ ಸಂಧಿ, ೯೩ ಪದ್ಯ)

ತಾತ್ಪರ್ಯ:
ಭೀಷ್ಮನ ಬಿಲ್ಲನ್ನು ಅರ್ಜುನನು ಎರಡು ಬಾಣಗಳಿಂದ ಕತ್ತರಿಸಿದನು. ದುರ್ಯೋಧನನ ಕಿರೀಟವನ್ನು ಮೂರು ಬಾಣಗಳಿಂದ ಕಡಿದು ಅರ್ಜುನನು ಹಿಂದಿರುಗಿದನು. ತನ್ನ ಆಯುಧಾದಿಗಳನ್ನು ಬನ್ನಿಯ ಮರದಲ್ಲಿರಿಸಿ ಮೊದಲು ತಂದಿದ್ದ ಅಲ್ಪವಾದ ರಥವನ್ನೇರಿ ಬೃಹನ್ನಳೆಯ ವೇಷವನ್ನು ಧರಿಸಿ ಉತ್ತರನೊಡನೆ ಮತ್ಸ್ಯನಗರಿಗೆ ಹಿಂದಿರುಗಿದನು.

ಅರ್ಥ:
ಶರ: ಬಾಣ; ಚಾಪ: ಬಿಲ್ಲು; ಕತ್ತರಿಸು: ಕಡಿ, ಸೀಳು; ನಿಲಿಸು: ತಡೆ; ಧರಣಿಪಾಲ: ರಾಜ; ಧರಣಿ: ಭೂಮಿ; ಪಾಲ: ಒಡೆಯ, ರಕ್ಷಿಸುವ; ಮಕುಟ: ಕಿರೀಟ; ಅಂಬು: ಬಾಣ; ಕಡಿ: ಸೀಳು; ತಿರುಗು: ಚಲಿಸು, ಸುತ್ತು; ಕಲಿ: ಶೂರ; ನಗು: ಹರ್ಷಿಸು; ಸಹಿತ: ಜೊತೆ; ಬನ್ನಿ: ಶಮಿ ವೃಕ್ಷ; ಕೈದು: ಆಯುಧ; ಇರಿಸು: ಇಡು; ಮುನ್ನ: ಮೊದಲು; ಹುಲು: ಅಲ್ಪ; ರಥ: ಬಂಡಿ; ನಗರ: ಊರು; ಐತಂದು: ಬಂದು ಸೇರು;

ಪದವಿಂಗಡಣೆ:
ಎರಡು +ಶರದಲಿ+ ಚಾಪವನು +ಕ
ತ್ತರಿಸಿ +ಭೀಷ್ಮನ+ ನಿಲಿಸಿ +ಕೌರವ
ಧರಣಿಪಾಲನ +ಮಕುಟವನು +ಮೂರಂಬಿನಲಿ +ಕಡಿದು
ತಿರುಗಿದನು +ಕಲಿ+ಪಾರ್ಥ +ನಗುತ್
ಉತ್ತರ+ ಸಹಿತ +ಬನ್ನಿಯಲಿ +ಕೈದುವ
ನಿರಿಸಿ +ಮುನ್ನಿನ +ಹುಲು+ರಥದಿ +ನಿಜನಗರಿಗ್+ಐತಂದ

ಅಚ್ಚರಿ:
(೧) ಶರ, ಅಂಬು – ಸಮನಾರ್ಥಕ ಪದ

ಪದ್ಯ ೯೨: ಅರ್ಜುನನನ್ನು ಯಾರು ಅಡ್ಡಗಟ್ಟಲು ಮುಂದೆ ಬಂದರು?

ಫಲುಗುಣನ ನೇಮದಲಿ ರಥದಿಂ
ದಿಳಿದನುತ್ತರನವನಿಪನ ಕೋ
ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ
ಸುಲಲಿತಾಂಬರ ರತ್ನಭೂಷಣ
ಗಳನು ಕೊಂಡಡರಿದನು ರಥವನು
ಬಿಲುದುಡುಕಿ ಗಾಂಗೇಯನಡಹಾಯ್ದನು ಧನಂಜಯನ (ವಿರಾಟ ಪರ್ವ, ೯ ಸಂಧಿ, ೯೨ ಪದ್ಯ)

ತಾತ್ಪರ್ಯ:
ಅರ್ಜುನನ ಅಪ್ಪಣೆಯಂತೆ ಉತ್ತರನು ರಥದಿಂದ ಕೆಳಗಿಳಿದು ದುರ್ಯೋಧನ, ಕರ್ಣ, ಕೃಪ, ಅಶ್ವತ್ಥಾಮರ ವಸ್ತ್ರಗಳನ್ನು ಆಭರಣಗಳ್ನ್ನು ಸೆಳೆದುಕೊಂಡು ರಥವನ್ನು ಹತ್ತಿದನು. ಆಗ ಭೀಷ್ಮನು ಬಿಲ್ಲು ಹಿಡಿದು ಅರ್ಜುನನನ್ನು ಅಡ್ಡಗಟ್ಟಿದನು.

ಅರ್ಥ:
ನೇಮ: ಅಪ್ಪಣೆ; ರಥ: ಬಂಡಿ; ಅವನಿಪ: ರಾಜ; ಕೋಮಲ: ಮೃದು; ವಸ್ತ್ರ: ಬಟ್ಟೆ; ಆಭರಣ: ಒಡವೆ; ಸುತ: ಮಗ; ಸುಲಲಿತ: ಸುಂದರವಾದ; ಅಂಬರ: ಬಟ್ಟೆ; ರತ್ನ: ಬೆಲೆಬಾಳುವ ಮಣಿ; ಭೂಷಣ: ಶೃಂಗರಿಸುವುದು; ಅಡರು: ಮೇಲಕ್ಕೆ ಹತ್ತು; ರಥ: ಬಂಡಿ; ಬಿಲು: ಬಿಲ್ಲು; ಅಡಹಾಯ್ದು: ನಡುವೆ ಆಗಮಿಸು;

ಪದವಿಂಗಡಣೆ:
ಫಲುಗುಣನ +ನೇಮದಲಿ +ರಥದಿಂದ್
ಇಳಿದನ್+ಉತ್ತರನ್+ಅವನಿಪನ+ ಕೋ
ಮಲ +ಸುವಸ್ತ್ರಾಭರಣ+ ಕರ್ಣನ +ಕೃಪನ +ಗುರುಸುತನ
ಸುಲಲಿತ+ಅಂಬರ +ರತ್ನಭೂಷಣ
ಗಳನು +ಕೊಂಡ್+ಅಡರಿದನು +ರಥವನು
ಬಿಲುದುಡುಕಿ +ಗಾಂಗೇಯನ್+ಅಡಹಾಯ್ದನು +ಧನಂಜಯನ

ಅಚ್ಚರಿ:
(೧) ಫಲುಗುಣ, ಧನಂಜಯ – ಪದ್ಯದ ಮೊದಲ ಮತ್ತು ಕೊನೆಯ ಪದ ಅರ್ಜುನನ ಹೆಸರುಗಳಿಂದ ಕೂಡಿರುವುದು

ಪದ್ಯ ೯೧: ಅರ್ಜುನನು ಯಾರ ಮಕುಟವನ್ನು ತೆಗೆದನು?

ಧರಣಿಪಾಲರ ಮಕುಟವನು ಕ
ತ್ತರಿಸಿ ದುಶ್ಯಾಸನನ ಘನ ಶಿರ
ವರದ ರತ್ನವನುಡಿದು ಭೂರಿಶ್ರವ ಜಯದ್ರಥರ
ಹೊರಳಿಚಿದನು ವಿಶೋಕ ಕುವರರ
ಹುರುಳುಗೆಡಿಸಿದನಖಿಳ ರಾಯರ
ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ (ವಿರಾಟ ಪರ್ವ, ೯ ಸಂಧಿ, ೯೧ ಪದ್ಯ)

ತಾತ್ಪರ್ಯ:
ದುಶ್ಯಾಸನನ ಶಿರೋರತ್ನವನ್ನು ತೆಗೆಸಿ, ರಾಜರ ಕಿರೀಟಗಳನ್ನು ತೆಗೆಸಿ, ಭೂರಿಶ್ರವ, ಜಯದ್ರಥ, ವಿಶೋಕ ಮೊದಲಾದವರ ಮಕುಟ, ವಸ್ತ್ರಗಳನ್ನು ತೆಗೆಸಿ, ಅವರಿಗೆ ಭಂಗವಾಗುವಂತೆ ಮಾಡಿ ಅರ್ಜುನನು ತನ್ನ ರಥವನ್ನು ಹತ್ತಿದನು.

ಅರ್ಥ:
ಧರಣಿ: ಭೂಮಿ; ಧರಣಿಪಾಲರು: ರಾಜ; ಮಕುಟ: ಕಿರೀಟ; ಕತ್ತರಿಸು: ಕೀಳು, ತೆಗೆ; ಘನ: ಶ್ರೇಷ್ಠ; ಶಿರ: ತಲೆ; ವರ: ಶ್ರೇಷ್ಠ; ರತ್ನ: ಬೆಲೆಬಾಳುವ ಮಣಿ; ಉಡಿ: ಮುರಿ, ತುಂಡು ಮಾಡು; ಹೊರಳು: ಬಾಗು; ಕುವರ: ಮಕ್ಕಳು; ಹುರುಳು:ಅಂದ, ಸಾರ, ವಸ್ತು; ಕೆಡಿಸು: ಹಾಳುಮಾದು; ಅಖಿಳ: ಎಲ್ಲಾ; ರಾಯ: ರಾಜ; ಶಿರ: ತಲೆ; ಭಂಗ: ತುಂಡು, ಚೂರು; ಹೊರಿಸು: ಭಾರವನ್ನು ಹೇರು; ಅಡರು: ಮೇಲಕ್ಕೆ ಹತ್ತು; ರಥ: ಬಂಡಿ;

ಪದವಿಂಗಡಣೆ:
ಧರಣಿಪಾಲರ+ ಮಕುಟವನು +ಕ
ತ್ತರಿಸಿ +ದುಶ್ಯಾಸನನ +ಘನ +ಶಿರ
ವರದ +ರತ್ನವನ್+ಉಡಿದು +ಭೂರಿಶ್ರವ+ ಜಯದ್ರಥರ
ಹೊರಳಿಚಿದನು +ವಿಶೋಕ +ಕುವರರ
ಹುರುಳುಗೆಡಿಸಿದನ್+ಅಖಿಳ +ರಾಯರ
ಶಿರಕೆ +ಭಂಗವ +ಹೊರಿಸಿ +ಫಲುಗುಣನ್+ಅಡರಿದನು +ರಥವ

ಅಚ್ಚರಿ:
(೧) ಧರಣಿಪಾಲ, ರಾಯ; ಘನ, ವರ – ಸಮನಾರ್ಥಕ ಪದ

ಪದ್ಯ ೯೦: ಅರ್ಜುನನು ಉತ್ತರನಿಗೆ ಏನು ಹೇಳಿದ?

ಇಳಿದು ದ್ರೋಣನ ಚರಣ ಕಮಲಂ
ಗಳಿಗೆ ತನ್ನಯ ನೊಸಲು ಚಾಚಿದ
ನಳಿವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ
ಸುಲಿದು ಕರ್ಣನ ಮಕುಟ ಪಟ್ಟೆಯ
ಸೆಳೆದು ದುರ್ಯೋಧನನ ವಸ್ತ್ರವ
ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ (ವಿರಾಟ ಪರ್ವ, ೯ ಸಂಧಿ, ೯೦ ಪದ್ಯ)

ತಾತ್ಪರ್ಯ:
ತನ್ನ ರಥದಿಂದ ಕೆಳಗಿಳಿದು ಅರ್ಜುನನು ದ್ರೋಣರ ಪಾದಾರವಿಂಗಳಿಗೆ ನಮಸ್ಕರಿಸಿದನು, ಸಂತಸದಿಂದ ಭೀಷ್ಮರ ರಥದೊಳಗೆ ಹೋಗಿ ನಮಸ್ಕರಿಸಿದನು. ಕರ್ಣನ ಮಕುಟ ವಸ್ತ್ರಗಳು, ದುರ್ಯೋಧನನ ವಸ್ತ್ರ ಆಭರಣಗಳನ್ನು ತೆಗೆದುಕೊಂಡು ಬರುವಂತೆ ಉತ್ತರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಹೋಗು; ಚರಣ: ಪಾದ; ಕಮಲ: ತಾವರೆ; ನೊಸಲು: ಹಣೆ; ಚಾಚು: ಹರಡು; ನಳಿವು: ಆನಂದ; ಮೈಯಿಕ್ಕು: ನಮಸ್ಕರಿಸು; ರಥ: ಬಂಡಿ; ಸುಲಿ: ತೆಗೆ; ಮಕುಟ: ಕಿರೀಟ; ಪಟ್ಟೆ: ಬಟ್ಟೆ, ರೇಷ್ಮೆ; ಸೆಳೆ: ವಶಪಡಿಸಿಕೊಳ್ಳು; ವಸ್ತ್ರ: ಬಟ್ಟೆ; ಸುಲಲಿತ: ಸುಂದರವಾದ; ಆಭರಣ: ಒಡವೆ; ತೆಗೆ: ಸೆಳೆ, ಈಚೆಗೆ ತರು;

ಪದವಿಂಗಡಣೆ:
ಇಳಿದು +ದ್ರೋಣನ +ಚರಣ +ಕಮಲಂ
ಗಳಿಗೆ +ತನ್ನಯ +ನೊಸಲು +ಚಾಚಿದ
ನಳಿವಿಯಲಿ+ ಭೀಷ್ಮಂಗೆ +ಮೈಯಿಕ್ಕಿದನು+ ರಥದೊಳಗೆ
ಸುಲಿದು +ಕರ್ಣನ +ಮಕುಟ +ಪಟ್ಟೆಯ
ಸೆಳೆದು +ದುರ್ಯೋಧನನ+ ವಸ್ತ್ರವ
ಸುಲಲಿತ+ಆಭರಣವನು +ನೀ +ತೆಗೆಯೆಂದನ್+ಉತ್ತರಗೆ

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳುವ ಪರಿ – ಮೈಯಿಕ್ಕಿದನು, ನೊಸಲು ಚಾಚಿದ

ಪದ್ಯ ೮೯: ಅಮರರೇಕೆ ಪುಷ್ಪವೃಷ್ಟಿ ಸುರಿದರು?

ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಡಗೆಡಹಿದನು ಮೋಹನ ಮಂತ್ರ ಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ (ವಿರಾಟ ಪರ್ವ, ೯ ಸಂಧಿ, ೮೯ ಪದ್ಯ)

ತಾತ್ಪರ್ಯ:
ಅರ್ಜುನನು ಸಮ್ಮೋಹನಾಸ್ತ್ರವೊಂದರಿಂದ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಅಡ್ಡಬೀಳಿಸಿದನು. ಇದನ್ನು ನೋಡಿದ ದೇವತೆಅಳು ಪುಷ್ಪವೃಷ್ಟಿ ಮಾಡಿ ನರ್ತಿಸಿದರು. ಕೌರವ ಸೈನ್ಯದ ಮುಖ್ಯಸ್ಥರೂ ರಾಜರಿದ್ದ ಕಡೆಗೆ ಅರ್ಜುನನು ರಥವನ್ನೊಯ್ದನು.

ಅರ್ಥ:
ಎಣಿಸು: ಲೆಕ್ಕ ಹಾಕು; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು, ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಶಕ್ತಿ; ರಣ: ಯುದ್ಧ; ಕೆಡಹು: ನಾಶಮಾಡು; ಮೋಹನ: ಆಕರ್ಷಣೆ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಬಾಣ: ಶರ; ಕುಣಿ: ನರ್ತಿಸು; ಕುಸುಮ: ಹೂವು; ಸರಿವು:ಧಾರೆ, ಸುರಿತ; ಸಂದಣಿ: ಗುಂಪು; ಅಮರ: ದೇವತೆ; ಸೂಸು: ಹರಡು; ಫಲುಗುಣ: ಅರ್ಜುನ; ರಥ: ಬಂಡಿ; ನೂಕು: ತಳ್ಳು; ನಿಜ: ದಿಟ; ಮಹಿಪ: ರಾಜ;

ಪದವಿಂಗಡಣೆ:
ಎಣಿಸುವರೆ +ಏಕಾದಶ+ಅಕ್ಷೋ
ಹಿಣಿಯ +ಬಲವನು +ಪಾರ್ಥನೊಬ್ಬನೆ
ರಣದೊಳ್+ಅಡಕೆಡಹಿದನು +ಮೋಹನ +ಮಂತ್ರ +ಬಾಣದಲಿ
ಕುಣಿದು +ಕುಸುಮದ+ ಸರಿವುಗಳ +ಸಂ
ದಣಿಯನ್+ಅಮರರು +ಸೂಸಿದರು +ಫಲು
ಗುಣನು+ ರಥವನು +ನೂಕಿದನು +ನಿಜ +ಮಹಿಪರಿದ್ದೆಡೆಗೆ

ಅಚ್ಚರಿ:
(೧) ದೇವತೆಗಳ ಸಂತಸವನ್ನು ಹೇಳುವ ಪರಿ – ಕುಣಿದು ಕುಸುಮದ ಸರಿವುಗಳ ಸಂದಣಿಯನಮರರು ಸೂಸಿದರು

ಪದ್ಯ ೮೮: ಭೀಷ್ಮನ ಸ್ಥಿತಿ ಹೇಗಿತ್ತು?

ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾತ್ರಯದೊಳಗೆ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ತುರ್ಯ ಸಿಲುಕುವನೆ
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳತೊಳಗಿದನು ರಥದೊಳಗೆ (ವಿರಾಟ ಪರ್ವ, ೯ ಸಂಧಿ, ೮೮ ಪದ್ಯ)

ತಾತ್ಪರ್ಯ:
ಎಚ್ಚರ, ಕನಸು, ಗಾಢ ನಿದ್ರೆಗಳೆಂಬ ಮುರು ಅವಸ್ಥೆಗಳಲ್ಲಿ ಕರ್ತೃ ನಾನು ಭೋಕ್ತ್ರ ನಾನು ಎಂದು ಅಭಿಮಾನಿಸುವ ಜೀವನು ಒಂದಾಗಿ ತನ್ನ ನಿಜವನ್ನು ಮರೆಯುತ್ತಾನೆ, ಆದರೆ ಸಹಜಾವಸ್ಥೆಯಾದ ತುರಿಯಾವಸ್ಥೆಗಲ್ಲಿರುವ ಜ್ಞಾನಿಗೆ ಈ ಅವಸ್ಥೆಗಳ ಲೇಪವಿಲ್ಲ. ಸಮಸ್ತ ಸೈನ್ಯವು ನಿದ್ದೆಯಲ್ಲಿದ್ದರೂ ಜ್ಞಾನಿಯಾದ ಭೀಷ್ಮನು ನಿರ್ಮಲನಾಗಿ ರಥದಲ್ಲಿ ಕುಳಿತು ರಾರಾಜಿಸುತ್ತಿದ್ದನು.

ಅರ್ಥ:
ಕನಸು: ಸ್ವಪ್ನ; ಮೇಣ್: ಮತ್ತು, ಅಥವ; ಎಚ್ಚರ: ನಿದ್ರೆಯಿಂದ ಏಳುವುದು; ಸುಷುಪ್ತಿ: ಮೈಮರೆತ ಸ್ಥಿತಿ; ನಿದ್ರಾವಸ್ಥೆ; ಅವಸ್ಥೆ: ಸ್ಥಿತಿ; ತ್ರಯ: ಮೂರು; ಜೀವ: ಪ್ರಾಣ; ಸಂಚಿಸು: ಶೇಖರವಾಗು; ಬೀಳು: ಜಾರು; ತುರ್ಯ: ನಾಲ್ಕನೆ, ಪರಮಾತ್ಮನಲ್ಲಿ ಐಕ್ಯವಾಗುವ ಸ್ಥಿತಿ; ಸಿಲುಕು: ಬಿಗಿ; ಬಲ: ಶಕ್ತಿ; ತೂಕಡಿಸು: ನಿದ್ರೆಗೆ ಜಾರು; ಝೋಂಪಿಸು: ಮೈಮರೆ, ಎಚ್ಚರ ತಪ್ಪು; ತನಿ: ಹೆಚ್ಚಾಗು; ಕೆಡೆ:ಮಲಗು, ಕುಸಿ; ಭಾಗೀರಥಿ: ಗಂಗೆ; ನಂದನ: ಮಗ; ನಿರ್ಮಲ: ಶುಚಿ; ತೊಳತೊಳಗು: ಹೊಳೆ; ರಥ: ಬಂಡಿ;

ಪದವಿಂಗಡಣೆ:
ಕನಸು +ಮೇಣ್+ಎಚ್ಚರು +ಸುಷುಪ್ತಿಗಳ್
ಎನಿಪ್+ ಅವಸ್ಥಾ+ತ್ರಯದೊಳಗೆ +ಜೀ
ವನು +ವಿಸಂಚಿಸಿ +ಬೀಳ್ವನಲ್ಲದೆ+ ತುರ್ಯ +ಸಿಲುಕುವನೆ
ಇನಿತು+ ಬಲ +ತೂಕಡಿಸಿ+ ಝೋಂಪಿಸಿ
ತನಿ+ಕೆಡೆಯೆ +ಭಾಗೀರಥೀ +ನಂ
ದನನು +ನಿರ್ಮಲನಾಗಿ +ತೊಳತೊಳಗಿದನು +ರಥದೊಳಗೆ

ಅಚ್ಚರಿ:
(೧) ಜ್ಞಾನಿಯ ಲಕ್ಷಣ – ಕನಸು ಮೇಣೆಚ್ಚರು ಸುಷುಪ್ತಿಗಳೆನಿಪವಸ್ಥಾತ್ರಯದೊಳಗೆ ಜೀವನು ವಿಸಂಚಿಸಿ ಬೀಳ್ವನಲ್ಲದೆ ತುರ್ಯ ಸಿಲುಕುವನೆ

ಪದ್ಯ ೮೭: ಅತಿರಥರ ಸ್ಥಿತಿ ಹೇಗಿತ್ತು?

ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನರಾ ಸಮ್ಮೋಹನಾಸ್ತ್ರದ ಬಾಧೆಗೊಳಗಾಯ್ತು (ವಿರಾಟ ಪರ್ವ, ೯ ಸಂಧಿ, ೮೭ ಪದ್ಯ)

ತಾತ್ಪರ್ಯ:
ಜೀವನಿಗೆ ಸಂಸಾರದ ಹುಟ್ಟು ಸಾವುಗಳ ಚಕ್ರದಲ್ಲಿ ಸಿಲುಕಿದಂತೆ, ಸೇನೆಗೆ ನಿದ್ರೆ ಆವರಿಸಿತು. ಜನಮೇಜಯ ನಾನು ಏನೆಂದು ಹೇಳಲಿ,ಯುದ್ಧರಂಗವೆಂಬ ಕಾಡಿನಲ್ಲಿ ಅತಿರಥರು ಸಮ್ಮೋಹನಾಸ್ತ್ರದ ಬಾಧೆಗೆ ಸಿಲುಕಿ ಸೋಲನ್ನನುಭವಿಸಿದರು.

ಅರ್ಥ:
ಸೇನೆ: ಸೈನ್ಯ; ಮೈಮರೆ: ಎಚ್ಚರತಪ್ಪು; ಒರಗು: ಮಲಗು; ಅದಟ: ಶೂರ, ಪರಾಕ್ರಮಿ; ನಿಧಾನ: ಮೆಲ್ಲನೆ; ಅರುಹು: ಹೇಳು; ನಿದ್ರೆ: ಶಯನ; ವಿಭ್ರಮ: ಸುತ್ತಾಟ, ಭ್ರಾಂತಿ; ಬಲು: ಬಹಳ; ಸಂಸಾರ: ಹುಟ್ಟು, ಜನ್ಮ;
ಕದನ: ಯುದ್ಧ; ಕಾನನ: ಅರಣ್ಯ; ಅತಿರಥ: ಪರಾಕ್ರಮಿ; ವಿಜಯ: ಗೆಲುವು; ವಿಹೀನ: ತೊರೆದ; ಸಮ್ಮೋಹನ: ಮೈಮರೆವು; ಬಾಧೆ: ನೋವು, ವೇದನೆ;

ಪದವಿಂಗಡಣೆ:
ಸೇನೆ +ಮೈಮರೆದ್+ಒರಗಿದ್+ಅದಟ +ನಿ
ಧಾನವ್+ಒಗೆದ್+ಅರುಹಿತ್ತು+ ನಿದ್ರಾ
ಮಾನ +ವಿಭ್ರಮಿಸಿತ್ತು +ಬಲು +ಸಂಸಾರದಂದದಲಿ
ಏನ +ಹೇಳುವೆನ್+ಅದನು +ಕದನದ
ಕಾನನದೊಳ್+ಅತಿರಥರು +ವಿಜಯ +ವಿ
ಹೀನರ್+ಆ+ ಸಮ್ಮೋಹನಾಸ್ತ್ರದ +ಬಾಧೆಗೊಳಗಾಯ್ತು

ಅಚ್ಚರಿ:
(೧) ಅತಿರಥರ ಸ್ಥಿತಿ – ಕದನದ ಕಾನನದೊಳತಿರಥರು ವಿಜಯ ವಿಹೀನರಾ ಸಮ್ಮೋಹನಾಸ್ತ್ರದ ಬಾಧೆಗೊಳಗಾಯ್ತು

ಪದ್ಯ ೮೬: ಕೌರವರ ಸ್ಥಿತಿ ಹೇಗಾಯಿತು?

ಸರಳ ಸೊಕ್ಕವಗಡಿಸೆ ಕೃಪ ಮೈ
ಮರೆದನತ್ತಲು ದ್ರೋಣನಿತ್ತಲು
ಪರಮ ನಿದ್ರಾಸಕ್ತನಾದನು ತನ್ನ ಮಗನೊಡನೆ
ಕರದ ಬಿಲು ನಸು ಸಡಿಲೆ ಕರ್ಣನು
ಮರೆದನತ್ತಲು ರಥದೊಳಿತ್ತಲು
ದುರುಳ ದುರ್ಯೋಧನನೊಡನೆ ಮೈಮರೆದುದಾಸೇನೆ (ವಿರಾಟ ಪರ್ವ, ೯ ಸಂಧಿ, ೮೬ ಪದ್ಯ)

ತಾತ್ಪರ್ಯ:
ಸಮ್ಮೋಹನಾಸ್ತ್ರದ ಸೊಕ್ಕೇರಿ ಕೃಪನು ಮೈಮರೆತನು, ದ್ರೋಣನು ಅಶ್ವತ್ಥಾಮನೊಡನೆ ಮಾಗಿದನು. ಕೈಯಲ್ಲಿದ್ದ ಬಿಲ್ಲಿನ ಹಿಡಿತವು ಸಡಿಲಿ ಕರ್ಣನು ರಥದಲ್ಲಿ ನಿದ್ದೆ ಮಾಡಿದನು. ದುರ್ಯೋಧನಾದಿಯಾಗಿ ಸಮಸ್ತ ಸೈನ್ಯವು ನಿದ್ರಾಸಕ್ತವಾಯಿತು.

ಅರ್ಥ:
ಸರಳು: ಬಾಣ; ಸೊಕ್ಕು: ಗರ್ವ; ಅವಗಡಿಸು: ಕಡೆಗಣಿಸು, ಸೋಲಿಸು; ಮೈಮರೆ: ಮೂರ್ಛೆ ಹೊಂದು; ಪರಮ: ಶ್ರೇಷ್ಠ; ನಿದ್ರಾಸಕ್ತ: ನಿದ್ರೆಯಲ್ಲಿ ತತ್ಪರತೆ; ಮಗ: ಸುತ; ಒಡನೆ: ಜೊತೆ; ಕರ: ಹಸ್ತ; ಬಿಲು: ಬಿಲ್ಲು; ನಸು: ಸ್ವಲ್ಪ; ಸಡಿಲು: ಸಡಲಿಸು, ಜಾರು; ಮರೆ: ಜ್ಞಾಪಕವಿಲ್ಲದ ಸ್ಥಿತಿ; ರಥ: ಬಂಡಿ; ದುರುಳ: ದುಷ್ಟ; ಸೇನೆ: ಸೈನ್ಯ;

ಪದವಿಂಗಡಣೆ:
ಸರಳ+ ಸೊಕ್ಕ್+ಅವಗಡಿಸೆ +ಕೃಪ +ಮೈ
ಮರೆದನ್+ಅತ್ತಲು +ದ್ರೋಣನ್+ಇತ್ತಲು
ಪರಮ +ನಿದ್ರಾಸಕ್ತನಾದನು +ತನ್ನ +ಮಗನೊಡನೆ
ಕರದ +ಬಿಲು +ನಸು +ಸಡಿಲೆ +ಕರ್ಣನು
ಮರೆದನ್+ಅತ್ತಲು +ರಥದೊಳ್+ಇತ್ತಲು
ದುರುಳ +ದುರ್ಯೋಧನನೊಡನೆ +ಮೈಮರೆದುದ್+ಆ+ಸೇನೆ

ಅಚ್ಚರಿ:
(೧) ಅತ್ತಲು, ಇತ್ತಲು – ಪದದ ಬಳಕೆ – ೨, ೫ ಸಾಲು

ಪದ್ಯ ೮೫: ಅತಿರಥರ ಸ್ಥಿತಿ ಹೇಗಿತ್ತು?

ಸೆಳೆ ಸಡಿಲೆ ಕೈದುಗಳ ಕೈಯಿಂ
ಕಳಚೆಯೊಬ್ಬರನೊಬ್ಬರತ್ತಲು
ಮಲಗೆ ಬೆಂಬತ್ತಳಿಕೆ ಬದಿಯೊಳಗಡಗೆ ತೋಳುಗಳ
ತಲೆಯೊಳೊರಿಗಿಸಿ ಗುರುಗುರಿಸಿ ರಥ
ದೊಳಗೆ ನಿದ್ರಾಕುಲರು ಸಾರಥಿ
ಗಳು ಬೆರಸಿ ನಿದ್ರೆಯೊಳು ಮೈಮರೆದಿರ್ದರತಿರಥರು (ವಿರಾಟ ಪರ್ವ, ೯ ಸಂಧಿ, ೮೫ ಪದ್ಯ)

ತಾತ್ಪರ್ಯ:
ಆಯುಧಗಳು ತಮ್ಮ ಕೈಗಳಿಂದ ಜಾರುತ್ತಿತ್ತು, ಬಾಣಗಳನ್ನು ತೆಗೆಯಲು ಹೋದರೆ ಅವರ ಕೈಗಳು ಅಲ್ಲಾಡುತ್ತಾ ಬಾಣ್ಗಳನ್ನು ತೆಗೆಯಲಾಗದೆ, ರಥಿಕರು ಬತ್ತಳಿಕೆಗಳನ್ನು ಕಂಕುಳಿನಲ್ಲಿ ಇರುಕಿ ಕೈಗಳನ್ನು ಇಂಬಾಗಿ ಮಾಡಿಕೊಂಡು ಸಾರಥಿ ಸಮೇತರಾಗಿ ಮಲಗಿ ಬಿಟ್ಟರು.

ಅರ್ಥ:
ಸೆಳೆ: ಜಗ್ಗು, ಎಳೆ, ಹೊರತೆಗೆ; ಸಡಿಲು: ಬಿಗಿಯಿಲ್ಲದುದು; ಕೈದು: ಆಯುಧ; ಕೈ: ಹಸ್ತ; ಕಳಚು: ಬೇರೆಮಾಡು, ಜಾರು; ಮಲಗು: ನಿದ್ರಿಸು; ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ಬದಿ: ಹತ್ತಿರ; ಅಡಗು: ಅವಿತುಕೊಳ್ಳು; ತೋಳು: ಬಾಹು; ತಲೆ: ಶಿರ; ಒರಗು:ಮಲಗು; ಗುರು: ಗೊರಕೆಯ ಶಬ್ದ; ರಥ: ಬಂಡಿ; ನಿದ್ರ: ಶಯನ; ಆಕುಲ: ತುಂಬಿದ; ಸಾರಥಿ: ಸೂತ; ಬೆರಸು: ಸೇರಿಸು; ಮೈಮರೆ: ಮೂರ್ಛೆ; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಸೆಳೆ +ಸಡಿಲೆ +ಕೈದುಗಳ +ಕೈಯಿಂ
ಕಳಚೆ+ಒಬ್ಬರನ್+ಒಬ್ಬರ್+ಅತ್ತಲು
ಮಲಗೆ +ಬೆಂಬತ್ತಳಿಕೆ+ ಬದಿಯೊಳಗ್+ಅಡಗೆ +ತೋಳುಗಳ
ತಲೆಯೊಳ್+ಒರಗಿಸಿ+ ಗುರುಗುರಿಸಿ +ರಥ
ದೊಳಗೆ +ನಿದ್ರಾಕುಲರು +ಸಾರಥಿ
ಗಳು +ಬೆರಸಿ +ನಿದ್ರೆಯೊಳು +ಮೈಮರೆದಿರ್ದರ್+ಅತಿರಥರು

ಅಚ್ಚರಿ:
(೧) ನಿದ್ರೆಗೆ ಜಾರಿದ ಪರಿ – ತಲೆಯೊಳೊರಿಗಿಸಿ ಗುರುಗುರಿಸಿ ರಥದೊಳಗೆ ನಿದ್ರಾಕುಲರು ಸಾರಥಿ
ಗಳು ಬೆರಸಿ ನಿದ್ರೆಯೊಳು ಮೈಮರೆದಿರ್ದರತಿರಥರು

ಪದ್ಯ ೮೪: ಅಶ್ವ ಮತ್ತು ಅಶ್ವಾರೋಹಿಯರ ಸ್ಥಿತಿ ಹೇಗಿತ್ತು?

ದೃಗುಯುಗಳವರೆದೆರೆಯೆ ರೋಮಾ
ಳಿಗಳು ತೆಕ್ಕೆಯ ಸಾರೆ ಕೊರಳರೆ
ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು
ಬಿಗುಹು ಸಹಿತವೆ ಹೊನ್ನಮರಗೋ
ಡುಗಳ ಮೇಲಡೆಗೆಡೆದು ನಿದ್ರಾ
ಮುಗುದರಾದರು ರಾವುತರು ತೂಕಡಿಸಿದವು ತುರಗ (ವಿರಾಟ ಪರ್ವ, ೯ ಸಂಧಿ, ೮೪ ಪದ್ಯ)

ತಾತ್ಪರ್ಯ:
ಕುದುರೆಗಳ ಕಣ್ಣುಗಳು ಅರೆ ಮುಚ್ಚಿದವು. ಕೂದಲುಗಳು ತೆಕ್ಕೆಯಾದವು, ಕತ್ತು ಅರ್ಧಕ್ಕೆ ಡೊಂಕಾಯಿತು, ಹಿಂಗಾಲ ಮೇಲೆ ನಿಮ್ತು ಗೊರಸುಗಳನ್ನು ಅಲುಗಾಡಿಸಿ ತಮಗೆ ಕಟ್ಟಿದ್ದ ಜೀನು ತಡಿಗಳ ಸಹಿತ ಕುದುರೆಗಳು ತೂಕಡಿಸಿದವು. ಬಂಗಾರದ ಮರಗೋಡುಗಳ ಮೇಲೆ ರಾವುತರು ನಿದ್ರಿಸಿದರು.

ಅರ್ಥ:
ದೃಗು:ಕಣ್ಣು, ನೇತ್ರ; ಯುಗಳ: ಎರದು; ಅರೆ: ಅರ್ಧ; ತೆರೆ: ಬಿಚ್ಚುವಿಕೆ; ರೋಮ: ಕೂದಲು; ತೆಕ್ಕೆ: ಅಪ್ಪುಗೆ, ಆಲಿಂಗನ; ಸಾರು: ಡಂಗುರ ಹೊಡೆಸು; ಕೊರಳು: ಗಂಟಲು; ಮುಗುಳು: ಮೂಡು; ಹಿಂಗಾಲು: ಹಿಂಬದಿಯ ಕಾಲು; ಖುರ: ಕುದುರೆ ಕಾಲಿನ ಗೊರಸು; ತೂಗು: ಅಲ್ಲಾಡಿಸು; ಒಲೆ: ತೂಗಾಡು; ಬಿಗುಹು: ಬಿಗಿ; ಸಹಿತ: ಜೊತೆ; ಹೊನ್ನು: ಚಿನ್ನ; ಮರಗೋಡು: ಕುದುರೆಯ ಹಣೆಗೆ ಕಟ್ಟಿದ ಲೋಹದ ಪಟ್ಟಿ; ಕೆಡೆ: ಬೀಳು, ಕುಸಿ; ನಿದ್ರ: ಶಯನ; ಮುಗುದ: ಕಪಟವನ್ನು ತಿಳಿಯದವನು; ರಾವುತ: ಅಶ್ವಾರೋಹಿ; ತೂಕಡಿಸು: ನಿದ್ರೆಗೆ ಜಾರು; ತುರಗ: ಅಶ್ವ;

ಪದವಿಂಗಡಣೆ:
ದೃಗು+ಯುಗಳವ್+ಅರೆ+ತೆರೆಯೆ +ರೋಮಾ
ಳಿಗಳು +ತೆಕ್ಕೆಯ +ಸಾರೆ +ಕೊರಳ್+ಅರೆ
ಮುಗುಳೆ +ಹಿಂಗಾಲ್ಗೊಂಡು +ಖುರವನು+ ತೂಗಿ+ಒಲೆದ್+ಒಲೆದು
ಬಿಗುಹು +ಸಹಿತವೆ+ ಹೊನ್ನ+ಮರಗೋ
ಡುಗಳ +ಮೇಲ್+ಅಡೆ+ಕೆಡೆದು +ನಿದ್ರಾ
ಮುಗುದರ್+ಆದರು +ರಾವುತರು+ ತೂಕಡಿಸಿದವು +ತುರಗ

ಅಚ್ಚರಿ:
(೧) ಅರೆದೆರೆ, ಒಲೆದೊರೆ, ಅಡೆಗೆಡೆ – ಪದಗಳ ಬಳಕೆ
(೨) ರಾವುತರ ಸ್ಥಿತಿ – ನಿದ್ರಾಮುಗುದರಾದರು ರಾವುತರು