ಪದ್ಯ ೧೭: ಭೀಮನಿಗೆ ವರ್ತನೆಗೆ ಧರ್ಮಜನೇಕೆ ಅಸಮ್ಮತಿ ಸೂಚಿಸಿದನು?

ಗುಣನಿಧಿಯನೇಕಾದಶಾಕ್ಷೋ
ಹಿಣಿಯ ಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ
ರಣದೊಳನ್ಯಾಯದಲಿ ತೊಡೆಗಳ
ಹಣಿದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ (ಗದಾ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಗುಣನಿಧಿಯೂ, ಹನ್ನೊಂದು ಅಕ್ಷೋಹಿಣಿಯ ಒಡೆಯನೂ, ಸಮಸ್ತ ಕ್ಷತ್ರಿಯರ ಕಿರೀಟದಿಮ್ದ ಶೋಭಿತವಾದ ಪಾದಗಳನ್ನುಳ್ಳವನ್ನೂ ಆದವನ ತೊಡೆಯನ್ನು ಗದಾಯುದ್ಧದಲ್ಲಿ ಅನ್ಯಾಯದಿಂದ ಮುರಿದುದಲ್ಲದೆ, ಅವನ ತಲೆಯನ್ನು ಪಾದಗಳಿಂದೊದೆಯಬಹುದೇ? ಎಂದನು.

ಅರ್ಥ:
ಗುಣ: ನಡತೆ, ಸ್ವಭಾವ, ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಮೂಲ ಸ್ವಭಾವಗಳು; ನಿಧಿ: ಸಂಪತ್ತು, ಐಶ್ವರ್ಯ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ; ಪತಿ: ಒಡೆಯ; ಪಾರ್ಥಿವ: ಭೌತಿಕವಾದುದು; ಮಣಿಮಕುಟ: ರತ್ನಖಚಿತವಾದ ಕಿರೀಟ; ಕಿರಣ: ರಶ್ಮಿ, ಬೆಳಕಿನ ಕದಿರು; ಲಾಲಿತ: ಪ್ರೀತಿಯ, ಮಮತೆಯ; ಪಾದ: ಚರಣ; ಪಲ್ಲವ: ಚಿಗುರು, ತಳಿರು; ರಣ: ಯುದ್ಧ; ಅನ್ಯಾಯ: ಸರಿಯಲ್ಲದ ರೀತಿ; ತೊಡೆ: ಜಂಘೆ; ಹಣಿ: ಬಾಗು, ಮಣಿ; ಕೆಣಕು: ರೇಗಿಸು; ಮೌಳಿ: ಶಿರ; ಭೂಪ: ರಾಜ;

ಪದವಿಂಗಣೆ:
ಗುಣನಿಧಿಯನ್+ಏಕಾದಶ+ಅಕ್ಷೋ
ಹಿಣಿಯ +ಪತಿಯನ್+ಅಶೇಷ +ಪಾರ್ಥಿವ
ಮಣಿಮಕುಟ+ ಕಿರಣೋಪ+ಲಾಲಿತ +ಪಾದ+ಪಲ್ಲವನ
ರಣದೊಳ್+ಅನ್ಯಾಯದಲಿ +ತೊಡೆಗಳ
ಹಣಿದುದಲ್ಲದೆ+ ಪಾದದಲಿ +ನೀ
ಕೆಣಕುವರೆ +ಕುರುರಾಜಮೌಳಿಯನ್+ಎಂದನಾ ಭೂಪ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ: ಗುಣನಿಧಿ, ಕುರುರಾಜಮೌಳಿ, ಏಕಾದಶಾಕ್ಷೋಹಿಣಿಯ ಪತಿಯನ್

ಪದ್ಯ ೨೨: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೩?

ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು
ಎತ್ತಣೀ ಕೊಳುಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯ ಘಟನೆ ನೃಪಾಲ ನಿನಗೆಂದ (ಗದಾ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಡೆತನವೆಲ್ಲಿ? ಏಕಾಕಿಯಾಗಿ ಹೋಗುವುದೆಲ್ಲಿ? ಆನೆ, ಕುದುರೆ, ರಥಗಳ ಸುಖಾಸನದ ಮೇಲೆ ಮಾಡುತ್ತಿದ್ದ ಪ್ರಯಾಣವೆಲ್ಲಿ? ರಣರಂಗದಲ್ಲಿ ಕಾಲಿಂದ ನಡೆಯುತ್ತಿರುವುದೆಲ್ಲಿ? ಯುದ್ಧಾರಂಭಮಾಡಿ ಮುಂದೆ ಹೊರಟುದೇನು, ಸೋತು ಪಲಾಯನ ಮಾಡುವ ಈ ಗತಿಯೆಲ್ಲಿ? ಎಂದು ಸಂಜಯನು ದುರ್ಯೋಧನನನ್ನು ಕೇಳಿದನು.

ಅರ್ಥ:
ಎತ್ತಣ: ಎಲ್ಲಿಯ; ಏಕಾದಶ: ಹನ್ನೊಂದು; ಚಮೂಪತಿ: ಸೇನಾಧಿಪತಿ; ಏಕಾಕಿತನ: ಒಂಟಿತನ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಸುಖಾಸನ: ಸಿಂಹಾಸನ; ಅತಿಶಯ: ಹೆಚ್ಚು; ಸುಳಿವು: ಚಿಹ್ನೆ, ಗುರುತು; ಕೊಳುಗುಳ: ಯುದ್ಧ, ರಣರಂಗ; ಕಾಲ್ನಡೆ: ನಡಿಗೆ; ಆಹವ: ಯುದ್ಧ; ಅಭಿಮುಖ: ಎದುರು; ಬಳಿಕ: ನಂತರ; ಅಪಜಯ: ಸೋಲು; ವಿಧಿ: ನಿಯಮ; ಘಟನೆ: ನಡೆದದ್ದು; ನೃಪಾಲ: ರಾಜ;

ಪದವಿಂಗಡಣೆ:
ಎತ್ತಣ್+ಏಕಾದಶ +ಚಮೂಪತಿ
ಎತ್ತಣೀ+ಏಕಾಕಿತನ +ತಾನ್
ಎತ್ತ +ಗಜ+ಹಯ +ರಥ +ಸುಖಾಸನದ್+ಅತಿಶಯದ +ಸುಳಿವು
ಎತ್ತಣೀ +ಕೊಳುಗುಳದ +ಕಾಲ್ನಡೆ
ಎತ್ತಣ+ಆಹವದ್+ಅಭಿಮುಖತೆ +ಬಳಿಕ್
ಎತ್ತಣ್+ಅಪಜಯ+ವಿಧಿಯ +ಘಟನೆ +ನೃಪಾಲ +ನಿನಗೆಂದ

ಅಚ್ಚರಿ:
(೧) ಎತ್ತಣ – ಪದದ ಬಳಕೆ
(೨) ಏಕಾದಶ, ಏಕಾಕಿತನನ – ಪದಗಳ ಬಳಕೆ

ಪದ್ಯ ೧೯: ದುರ್ಯೋಧನನು ಯಾವ ಪಾಪ ಮಾಡಿದ?

ರಣಮುಖದೊಳೇಕಾದಶಾಕ್ಷೋ
ಹಿಣೀಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧವಿನ್ಯಸ್ತ ಕಿಲ್ಭಿಷವ
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ (ಗದಾ ಪರ್ವ, ೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸಂಜಯನು ದುರ್ಯೋಧನನ ಸ್ಥಿತಿಯನ್ನು ನೋಡಿ, ಹನ್ನೊಂದು ಅಕ್ಷೋಹಿಣೀ ಸೇನೆಯು ಯುದ್ಧದಲ್ಲಿ ನಾಶವಾಯಿತೇ? ಗೋತ್ರವಧೆಯಿಂದ ಕಳಂಕಿತವಾದ ಈ ಭೂಮಿಯನ್ನು ಧರ್ಮಜನು ಭೋಗಿಸಲಿ, ಭೂಮಿಯನ್ನು ಹಂಚಿಕೊಂಡು ಅನುಭವಿಸುವ ಐಶ್ವರ್ಯವನ್ನು ಧಿಕ್ಕರಿಸಿ, ದೈವದೊಡನೆ ಹೋರಾಡಿ, ಕುರುರಾಜವಂಶವೆಂಬ ಕಲ್ಪತರುವನ್ನು ಕಡಿದುಹಾಕಿದೆ ಎಂದು ಹೇಳಿದನು.

ಅರ್ಥ:
ರಣ: ಯುದ್ಧ; ಮುಖ: ಆನನ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಹರಿ: ನಾಶ; ಉಣು: ತಿನ್ನು; ಧರೆ: ಭೂಮಿ; ಗೋತ್ರ: ಕುಲ, ವಂಶ, ನಾಮಧೇಯ; ವಧ: ನಾಶ; ವಿನ್ಯಸ್ತ: ಇಟ್ಟ, ಇರಿಸಿದ; ಕಿಲ್ಬಿಷ: ಪಾಪ; ಸೆಣಸು: ಹೋರಾಡು; ದೈವ: ಭಗವಂತ; ಧಾರುಣಿ: ಭೂಮಿ; ಹುದು: ತಿರುಳು, ಸಾರ; ಸಿರಿ: ಐಶ್ವರ್ಯ; ಸೇರು: ಜೊತೆಯಾಗು; ಹಣಿ:ಬಾಗು, ಮಣಿ; ವಂಶ: ಕುಲ; ಕಲ್ಪತರು: ಬೇಡಿದುದನ್ನು ಕೊಡುವ ಸ್ವರ್ಗ ಲೋಕದ ಒಂದು ಮರ;

ಪದವಿಂಗಡಣೆ:
ರಣಮುಖದೊಳ್+ಏಕಾದಶ+ಅಕ್ಷೋ
ಹಿಣಿಗೆ+ ಹರಿವಾಯ್ತೇ +ಯುಧಿಷ್ಠಿರನ್
ಉಣಲಿ +ಧರೆಯನು +ಗೋತ್ರವಧ+ವಿನ್ಯಸ್ತ +ಕಿಲ್ಭಿಷವ
ಸೆಣಸ +ಮಾಡಿದೆ +ದೈವದಲಿ +ಧಾ
ರುಣಿಯ +ಹುದುವಿನ +ಸಿರಿಗೆ+ ಸೇರದೆ
ಹಣಿದವಾಡಿದೆ +ರಾಜವಂಶದ +ಕಲ್ಪತರು+ವನವ

ಅಚ್ಚರಿ:
(೧) ಅನುಭವಿಸಲಿ ಎಂದು ಹೇಳುವ ಪರಿ – ಯುಧಿಷ್ಠಿರನುಣಲಿ ಧರೆಯನು
(೨) ದುರ್ಯೋಧನನ ಪಾಪ – ಗೋತ್ರವಧವಿನ್ಯಸ್ತ ಕಿಲ್ಭಿಷವ ಸೆಣಸ ಮಾಡಿದೆ
(೩) ವಂಶ, ಗೋತ್ರ – ಸಮಾನಾರ್ಥಕ ಪದ

ಪದ್ಯ ೮೯: ಅಮರರೇಕೆ ಪುಷ್ಪವೃಷ್ಟಿ ಸುರಿದರು?

ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಡಗೆಡಹಿದನು ಮೋಹನ ಮಂತ್ರ ಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ (ವಿರಾಟ ಪರ್ವ, ೯ ಸಂಧಿ, ೮೯ ಪದ್ಯ)

ತಾತ್ಪರ್ಯ:
ಅರ್ಜುನನು ಸಮ್ಮೋಹನಾಸ್ತ್ರವೊಂದರಿಂದ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಅಡ್ಡಬೀಳಿಸಿದನು. ಇದನ್ನು ನೋಡಿದ ದೇವತೆಅಳು ಪುಷ್ಪವೃಷ್ಟಿ ಮಾಡಿ ನರ್ತಿಸಿದರು. ಕೌರವ ಸೈನ್ಯದ ಮುಖ್ಯಸ್ಥರೂ ರಾಜರಿದ್ದ ಕಡೆಗೆ ಅರ್ಜುನನು ರಥವನ್ನೊಯ್ದನು.

ಅರ್ಥ:
ಎಣಿಸು: ಲೆಕ್ಕ ಹಾಕು; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು, ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಶಕ್ತಿ; ರಣ: ಯುದ್ಧ; ಕೆಡಹು: ನಾಶಮಾಡು; ಮೋಹನ: ಆಕರ್ಷಣೆ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಬಾಣ: ಶರ; ಕುಣಿ: ನರ್ತಿಸು; ಕುಸುಮ: ಹೂವು; ಸರಿವು:ಧಾರೆ, ಸುರಿತ; ಸಂದಣಿ: ಗುಂಪು; ಅಮರ: ದೇವತೆ; ಸೂಸು: ಹರಡು; ಫಲುಗುಣ: ಅರ್ಜುನ; ರಥ: ಬಂಡಿ; ನೂಕು: ತಳ್ಳು; ನಿಜ: ದಿಟ; ಮಹಿಪ: ರಾಜ;

ಪದವಿಂಗಡಣೆ:
ಎಣಿಸುವರೆ +ಏಕಾದಶ+ಅಕ್ಷೋ
ಹಿಣಿಯ +ಬಲವನು +ಪಾರ್ಥನೊಬ್ಬನೆ
ರಣದೊಳ್+ಅಡಕೆಡಹಿದನು +ಮೋಹನ +ಮಂತ್ರ +ಬಾಣದಲಿ
ಕುಣಿದು +ಕುಸುಮದ+ ಸರಿವುಗಳ +ಸಂ
ದಣಿಯನ್+ಅಮರರು +ಸೂಸಿದರು +ಫಲು
ಗುಣನು+ ರಥವನು +ನೂಕಿದನು +ನಿಜ +ಮಹಿಪರಿದ್ದೆಡೆಗೆ

ಅಚ್ಚರಿ:
(೧) ದೇವತೆಗಳ ಸಂತಸವನ್ನು ಹೇಳುವ ಪರಿ – ಕುಣಿದು ಕುಸುಮದ ಸರಿವುಗಳ ಸಂದಣಿಯನಮರರು ಸೂಸಿದರು