ಪದ್ಯ ೭೭: ಕೃಷ್ಣನು ಅರ್ಜುನನಿಗೆ ಯಾವ ಅಸ್ತ್ರವನ್ನು ಹೂಡಲು ಹೇಳಿದನು?

ಕೆದರುತದೆ ನಮ್ಮವರ ದಳ ದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ (ಶಲ್ಯ ಪರ್ವ, ೩ ಸಂಧಿ, ೭೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಪರಾಕ್ರಮವನ್ನು ಕಂಡು ಶ್ರೀಕೃಷ್ಣನು ಪಾರ್ಥನಲ್ಲಿ ನುಡಿದನು, ಅರ್ಜುನಾ ಈಗ ನಮ್ಮ ಸೈನ್ಯ ಚದುರುತ್ತಿದೆ. ಧರ್ಮಜನ ಪರಾಕ್ರಮ ಕುಗ್ಗಿದೆ ದುರ್ಯೋಧನನೊಬ್ಬನೇ ನಮ್ಮ ಮಹಾರಥರನ್ನು ಸೋಲಿಸಿದನು. ಸೈನ್ಯದ ಗುಂಪು ಚೆಲ್ಲಿಹೋಯಿತು. ರಣವಾದ್ಯಗಳು ಮೌನವಾಗಿವೆ, ಈಗ ದಿವ್ಯಾಸ್ತ್ರಗಳನ್ನು ಪ್ರಯೋಗಿಸು ಎಂದು ಕೃಷ್ಣನು ಅಪ್ಪಣೆ ಮಾಡಿದನು.

ಅರ್ಥ:
ಕೆದರು: ಹರಡು; ದಳ: ಸೈನ್ಯ; ಅದಟು: ಪರಾಕ್ರಮ, ಶೌರ್ಯ; ಸುಕ್ಕು: ನಿರುತ್ಸಾಹ, ಮಂಕಾಗು; ರಾಯ: ರಾಜ; ಕದನ: ಯುದ್ಧ; ಕೈದೋರು: ಪ್ರದರ್ಶಿಸು; ಭಂಗಿಸು: ಅಪಮಾನ ಮಾಡು; ಮಹಾರಥ: ಪರಾಕ್ರಮಿ; ಹೊದರು: ಗುಂಪು, ಸಮೂಹ, ತೊಡಕು, ತೊಂದರೆ; ತಳಿತ: ಚಿಗುರು; ಲಗ್ಗೆ: ವಾದ್ಯಗಳಮೇಳ; ಮೋನ: ಮೌನ; ಮಗುಳು: ಹಿಂತಿರುಗು, ಪುನಃ; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ಕೈಮಾಡು: ತೊಡು, ಪ್ರಯೋಗಿಸು; ನುಡಿ: ಮಾತಾಡು;

ಪದವಿಂಗಡಣೆ:
ಕೆದರುತದೆ +ನಮ್ಮವರ +ದಳ +ದೊರೆ
ಅದಟು +ಸುಕ್ಕಿತು +ರಾಯನೊಬ್ಬನೆ
ಕದನದಲಿ +ಕೈದೋರಿ +ಭಂಗಿಸಿದನು+ ಮಹಾರಥರ
ಹೊದರು +ತಳಿತುದು +ಲಗ್ಗೆವರೆ+ ಮೋ
ನದಲಿ +ಮಗುಳ್ದುವು +ಪಾರ್ಥ +ದಿವ್ಯಾ
ಸ್ತ್ರದಲಿ +ಕೈಮಾಡೆಂದು +ನುಡಿದನು +ವೀರನಾರಯಣ

ಅಚ್ಚರಿ:
(೧) ದೊರೆ, ರಾಯ – ಸಮಾನಾರ್ಥಕ ಪದ
(೨) ಶಕ್ತಿ ಕಡಿಮೆಯಾಯಿತು ಎಂದು ಹೇಳಲು – ದೊರೆಯದಟು ಸುಕ್ಕಿತು
(೩) ವಾದ್ಯಗಳು ಸುಮ್ಮನಾದವು ಎಂದು ಹೇಳುವ ಪರಿ – ಲಗ್ಗೆವರೆ ಮೋನದಲಿ ಮಗುಳ್ದುವು

ಪದ್ಯ ೭೬: ದುರ್ಯೋಧನನ ಪರಾಕ್ರಮದ ಯುದ್ಧವು ಹೇಗೆ ನಡೆಯಿತು?

ಮರಳಿ ಪಂಚದ್ರೌಪದೇಯರ
ಪರಿಭವಿಸಿದನು ಧರ್ಮಪುತ್ರನ
ತೆರಳಿಚಿದ ಸಹದೇವ ನಕುಲರ ಮತ್ತೆ ಸೋಲಿಸಿದ
ವರ ಯುಧಾಮನ್ಯೂತ್ತಮೌಜರ
ಹೊರಳಿಸಿದನವನಿಯಲಿ ಭೀಮಾ
ದ್ಯರಿಗೆ ಭೀತಿಯ ಬೀರಿದನು ಬೇಸರದೆ ಕುರುರಾಯ (ಶಲ್ಯ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಉಪಪಾಂಡವರನ್ನು, ಧರ್ಮಜ, ಸಹದೇವ, ನಕುಲರನ್ನು ಮತ್ತೆ ಸೋಲಿಸಿದನು. ಯುಧಾಮನ್ಯು, ಉತ್ತಮೌಜಸರನ್ನು ಹೊಡೆದು ನೆಲದಲ್ಲಿ ಬೀಳಿಸಿದನು. ಭೀಮನೇ ಮೊದಲಾದವರು ದುರ್ಯೋಧನನ ಪರಾಕ್ರಮದ ಯುದ್ಧಕ್ಕೆ ಭೀತಿಗೊಳ್ಳುವಂತೆ ಮಾಡಿದನು.

ಅರ್ಥ:
ಮರಳು: ಹಿಂದಿರುಗು, ಮತ್ತೆ; ಪಂಚ: ಐದು; ದ್ರೌಪದೇಯರು: ಉಪಪಾಂಡವರು; ಪರಿಭವ: ತಿರಸ್ಕಾರ, ಕಷ್ಟ; ತೆರಳು: ಹೋಗು, ನಡೆ; ಸೋಲಿಸು: ಪರಾಭವ; ವರ: ಶ್ರೇಷ್ಠ; ಹೊರಳು: ತಿರುವು, ಬಾಗು; ಅವನಿ: ಭೂಮಿ; ಆದಿ: ಮುಂತಾದ; ಭೀತಿ: ಭಯ; ಬೀರು: ತೋರು; ಬೇಸರ: ಬೇಜಾರು; ರಾಯ: ರಾಜ;

ಪದವಿಂಗಡಣೆ:
ಮರಳಿ+ ಪಂಚ+ದ್ರೌಪದೇಯರ
ಪರಿಭವಿಸಿದನು +ಧರ್ಮಪುತ್ರನ
ತೆರಳಿಚಿದ +ಸಹದೇವ +ನಕುಲರ +ಮತ್ತೆ +ಸೋಲಿಸಿದ
ವರ +ಯುಧಾಮನ್ಯು+ಉತ್ತಮೌಜರ
ಹೊರಳಿಸಿದನ್+ಅವನಿಯಲಿ +ಭೀಮಾ
ದ್ಯರಿಗೆ +ಭೀತಿಯ +ಬೀರಿದನು+ ಬೇಸರದೆ +ಕುರುರಾಯ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭೀಮಾದ್ಯರಿಗೆ ಭೀತಿಯ ಬೀರಿದನು ಬೇಸರದೆ
(೨) ಕೆಳಗೆ ಬೀಳಿಸು ಎಂದು ಹೇಳಲು – ಹೊರಳಿಸಿದನವನಿಯಲಿ

ಪದ್ಯ ೭೫: ಕೌರವನು ಪಾಂಡವರನ್ನು ಹೇಗೆ ಹೊಡೆದನು?

ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ (ಶಲ್ಯ ಪರ್ವ, ೩ ಸಂಧಿ, ೭೫ ಪದ್ಯ)

ತಾತ್ಪರ್ಯ:
ಕೌರವನು ಪಾಂಡವ ಸೇನೆಯನ್ನು ಕೆಳಬೀಳುವಂತೆ ಹೊಡೆದು, ನಕುಲನನ್ನು ಓಡಿಸಿದನು. ಎದುರಾದ ಸಹದೇವನನ್ನು ಶಸ್ತ್ರದಿಂದ ಹೊಡೆದನು. ಧೃಷ್ಟದ್ಯುಮ್ನ, ಸಾತ್ಯಕಿಗಲನ್ನು ಬಾಣಗಳಿಂದ ಘಾತಿಸಿದನು.

ಅರ್ಥ:
ಥಟ್ಟು: ಪಕ್ಕ, ಕಡೆ, ಗುಂಪು; ಹೊಯ್ದು: ಹೊಡೆ; ಅವನಿಪತಿ: ರಾಜ; ಜಗಜಟ್ಟಿ: ಪರಾಕ್ರಮಿ; ಕೆಣಕು: ಪ್ರಚೋದಿಸು; ಅಟ್ಟು: ಬೆನ್ನುಹತ್ತಿ ಹೋಗು; ಅಡಹಾಯ್ದು: ಮಧ್ಯ ಪ್ರವೇಶಿಸಿ ಹೊಡೆ; ವಿಭಾಡಿಸು: ನಾಶಮಾಡು; ಬಿಟ್ಟ: ತೊರೆದ; ಹುಡಿ: ಹಿಟ್ಟು, ಪುಡಿ; ಕುಟ್ಟು: ನಾಶಮಾಡು; ಜೋಡು: ಜೊತೆ; ಕೂರಂಬು: ಹರಿತವಾದ ಬಾಣ; ಒಟ್ಟು: ಕೂಡಿಸು, ರಾಶಿ, ಗುಂಪು;

ಪದವಿಂಗಡಣೆ:
ಥಟ್ಟನ್+ಒಡಹೊಯ್ದ್+ಅವನಿಪತಿ+ ಜಗ
ಜಟ್ಟಿಗಳ +ಕೆಣಕಿದನು +ನಕುಲನನ್
ಅಟ್ಟಿದನು +ಸಹದೇವನ್+ಅಡಹಾಯ್ದರೆ +ವಿಭಾಡಿಸಿದ
ಬಿಟ್ಟ +ಧೃಷ್ಟದ್ಯುಮ್ನನನು+ ಹುಡಿ
ಕುಟ್ಟಿದನು +ಸಾತ್ಯಕಿಯ +ಜೋಡಿನಲ್
ಒಟ್ಟಿದನು +ಕೂರಂಬುಗಳನ್+ಉಬ್ಬಿನಲಿ +ಕುರುರಾಯ

ಅಚ್ಚರಿ:
(೧) ಅಟ್ಟಿದ, ಕುಟ್ಟಿದ, ಒಟ್ಟಿದ – ಪ್ರಾಸ ಪದಗಳು

ಪದ್ಯ ೭೪: ಕೌರವನೊಡನೆ ಯಾವ ಸೈನವು ಮುನ್ನುಗ್ಗಿತು?

ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ (ಶಲ್ಯ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕೌರವನೊಡನೆ ಸಮಸ್ತ ಸೇನೆಯೂ ಮುನ್ನುಗ್ಗಿತು. ಅತ್ತ ಭೀಮ, ಅರ್ಜುನ, ಸಾತ್ಯಕಿಗಳೊಡನೆ ಪಾಂಡವ ಸೇನೆಯೂ ಸೇರಿತು. ಬಾಣ, ಈಟಿಗಳನ್ನು ಹಿಡಿದ ಪದಾತಿಗಳು ರಾವುತರು ಮದಗಜಗಳು ಸನ್ನದ್ಧರಾದವು. ಲಾಯದ ಉತ್ತಮ ಕುದುರೆಗಳು ಸಾಲಾಗಿ ಮುಂದಕ್ಕೆ ಓಡಿಬಂದವು.

ಅರ್ಥ:
ರಾಯ: ರಾಜ; ಒಡನೆ: ಜೊತೆ; ಸಮಸ್ತ: ಎಲ್ಲಾ; ಬಲ: ಸೈನ್ಯ; ಅಡುಪಾಯ: ಇನ್ನೊಂದು ಉಪಾಯ; ಔಕು: ನೂಕು; ಸುತ: ಮಗ; ಆಚೆ: ಹೊರಗೆ; ಮೇಳೈಸು: ಗುಂಪು; ನೃಪ: ರಾಜ; ಸಾಯಕ: ಬಾಣ; ಸೂಠಿ: ವೇಗ; ಸಬಳ: ಈಟಿ; ಪಾಯದಳ: ಸೈನಿಕ, ಕಾಲಾಳು; ರಥ: ಬಂಡಿ; ವಾಜಿ: ಕುದುರೆ; ಗಜಘಟೆ: ಆನೆಯ ಗುಂಪು; ಲಾಯ: ಅಶ್ವಶಾಲೆ; ಶುದ್ಧ: ನಿರ್ಮಲ; ತೇಜಿ: ಕುದುರೆ; ಹೊಕ್ಕು: ಸೇರು; ವಾಘೆ: ಲಗಾಮು; ಸರಿಸ: ನೇರವಾಗಿ, ಸರಳವಾಗಿ;

ಪದವಿಂಗಡಣೆ:
ರಾಯನೊಡನೆ +ಸಮಸ್ತ +ಬಲವ್+ಅಡು
ಪಾಯಲ್+ಔಕಿತು +ಪಾರ್ಥ +ಸಾತ್ಯಕಿ
ವಾಯುಸುತರ್+ಆಚೆಯಲಿ +ಮೇಳೈಸಿತ್ತು +ನೃಪಸೇನೆ
ಸಾಯಕದ +ಸೂಠಿಗಳ+ ಸಬಳದ
ಪಾಯದಳ +ರಥ +ವಾಜಿ +ಗಜಘಟೆ
ಲಾಯ+ಶುದ್ಧದ +ತೇಜಿ +ಹೊಕ್ಕವು +ವಾಘೆ+ಸರಿಸದಲಿ

ಅಚ್ಚರಿ:
(೧) ರಾಯ, ನೃಪ; ಮೇಳೈಸು, ಘಟೆ – ಸಮಾನರ್ಥಕ ಪದ
(೨) ಸ ಕಾರದ ತ್ರಿವಳಿ ಪದ – ಸಾಯಕದ ಸೂಠಿಗಳ ಸಬಳದ
(೩) ಶ್ರೇಷ್ಠವಾದ ಕುದುರೆ ಎಂದು ಹೇಳಲು – ಲಾಯಶುದ್ಧದ ತೇಜಿ

ಪದ್ಯ ೭೩: ದುರ್ಯೋಧನನು ಏನೆಂದು ಗರ್ಜಿಸಿದನು?

ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ (ಶಲ್ಯ ಪರ್ವ, ೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಶಲ್ಯನ ಮರಣದ ಸುದ್ದಿಯು ದುರ್ಯೋಧನನನ್ನು ತಲುಪಿತು. ಆತನು ತನ್ನ ಸೈನಿಕರು, ರಾವುತರು, ಮದಗಜಗಳು, ರಥಗಳನ್ನು ಕರೆಸಿದನು. ಅವರ ನಡುವೆ ಕೌರವನ್ ರಥವು ಮಹಾವೇಗದಿಂದ ನುಗ್ಗಿತು. ಪಾಂಡವರನ್ನು ಹೊಯ್ಯಿರಿ, ಹೊಯ್ಯಿರಿ ಎಂದು ಕೌರವನು ಗರ್ಜಿಸಿದನು.

ಅರ್ಥ:
ಕೇಳು: ಆಲಿಸು; ನೃಪಾಲ: ರಾಜ; ಅವಸಾನ: ಸಾವು; ಕರಸು: ಬರೆಮಾಡು; ಆಳು: ಸೇವಕ, ಸೈನಿಕ; ಕುದುರೆ: ಹಯ; ರಥ: ಬಂಡಿ; ಮದ: ಅಮಲು, ಅಹಂಕಾರ; ಉತ್ಕಟ: ಹೆಚ್ಚಾದ; ಗಜಘಟೆ: ಆನೆಗಳ ಗುಂಪು; ಆವಳಿ: ಸಾಲು; ಮೇಳ: ಸೇರುವಿಕೆ, ಗುಂಪು; ಮೋಡಿ: ರೀತಿ, ಶೈಲಿ; ರಥ: ಬಂಡಿ; ದುವ್ವಾಳಿಸು: ಓಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ತನುಜ: ಮಕ್ಕಳು; ಹೊಯ್: ಹೊಡೆ; ಹೊಕ್ಕು: ಸೇರು; ಲಳಿ: ರಭಸ; ಲಗ್ಗೆ: ಮುತ್ತಿಗೆ;

ಪದವಿಂಗಡಣೆ:
ಕೇಳಿದನು +ಕುರುರಾಯ +ಮಾದ್ರ+ನೃ
ಪಾಲನ್+ಅವಸಾನವನು +ಕರಸಿದನ್
ಆಳು +ಕುದುರೆಯ +ರಥ +ಮದ+ಉತ್ಕಟ+ ಗಜಘಟ+ಆವಳಿಯ
ಮೇಳವದ +ಮೋಡಿಯಲಿ +ರಥ+ ದು
ವ್ವಾಳಿಸಿತು +ಫಡ +ಪಾಂಡು+ತನುಜರ
ಸಾಲ +ಹೊಯ್ +ಹೊಯ್ದೆನುತ +ಹೊಕ್ಕನು +ಲಳಿಯ +ಲಗ್ಗೆಯಲಿ

ಅಚ್ಚರಿ:
(೧) ಜೋಡಿ ಪದಗಳು – ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ

ಪದ್ಯ ೭೨: ಧರ್ಮಜನನ್ನು ಯಾರು ಮುತ್ತಿದರು?

ಆರಿ ಹೊಕ್ಕುದು ಶಲ್ಯನೃಪ ಪರಿ
ವಾರ ಮಾದ್ರದ ನಾಯಕರು ಜ
ಜ್ಝಾರ ಮನ್ನೆಯ ಮಂಡಳಿಕ ಸಾಮಂತಸಂದೋಹ
ಭೂರಿಬಲ ಸಾಲ್ವನ ಭಟಾವಳಿ
ಯಾರುಭಟೆಯಲಿ ನೂಕಿದುದು ವಿ
ಸ್ತಾರಿಸಿತಲೈ ಧರ್ಮನಂದನನೊಡನೆ ಬಲುಸಮರ (ಶಲ್ಯ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ಶಲ್ಯನ ಪರಿವಾರದವರು, ಮಾದ್ರದೇಶದ ನಾಯಕರು, ಮನ್ನೆಯರು, ಮಾಂಡಲೀಕರು, ಸಾಮಂತರಾಜರು, ಸಾಲ್ವನ ಸೈನಿಕರು ಎಲ್ಲರೂ ಸೇರಿ ಮುನ್ನುಗ್ಗಿ ಧರ್ಮಜನನ್ನು ಮುತ್ತಿದರು.

ಅರ್ಥ:
ಆರು: ಘರ್ಷಿಸು; ಹೊಕ್ಕು: ಸೇರು; ನೃಪ: ರಾಜ; ಪರಿವಾರ: ಬಂಧುಜನ; ನಾಯಕ: ಒಡೆಯ; ಜಜ್ಝಾರ: ಪರಾಕ್ರಮಿ; ಮನ್ನೆಯ: ಮೆಚ್ಚಿನ; ಮಂಡಳಿಕ: ಸಾಮಂತರಾಜ; ಸಾಮಂತ: ಆಶ್ರಿತರಾಜ; ಸಂದೋಹ: ಗುಂಪು; ಭೂರಿ: ಹೆಚ್ಚು, ಅಧಿಕ; ಬಲ: ಸೈನ್ಯ; ಭಟಾವಳಿ: ಸೈನ್ಯ; ಆರುಭಟೆ: ಗರ್ಜನೆ; ನೂಕು: ತಳ್ಲು; ವಿಸ್ತಾರ: ವಿಶಾಲ; ನಂದನ: ಮಗ; ಬಲು: ಬಹಳ; ಸಮರ: ಯುದ್ಧ;

ಪದವಿಂಗಡಣೆ:
ಆರಿ +ಹೊಕ್ಕುದು +ಶಲ್ಯ+ನೃಪ +ಪರಿ
ವಾರ +ಮಾದ್ರದ +ನಾಯಕರು +ಜ
ಜ್ಝಾರ +ಮನ್ನೆಯ +ಮಂಡಳಿಕ+ ಸಾಮಂತ+ಸಂದೋಹ
ಭೂರಿಬಲ+ ಸಾಲ್ವನ +ಭಟಾವಳಿ
ಆರುಭಟೆಯಲಿ +ನೂಕಿದುದು +ವಿ
ಸ್ತಾರಿಸಿತಲೈ +ಧರ್ಮನಂದನನೊಡನೆ+ ಬಲು+ಸಮರ

ಅಚ್ಚರಿ:
(೧) ಸಂದೋಹ, ಆವಳಿ; ಮಂಡಳಿಕ, ಸಾಮಂತ – ಸಮಾನಾರ್ಥಕ ಪದ

ಪದ್ಯ ೭೧: ಶಲ್ಯನ ನಂತರ ಧರ್ಮಜನು ಯಾರನ್ನು ಸಾಯಿಸಿದನು?

ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ (ಶಲ್ಯ ಪರ್ವ, ೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಶಲ್ಯಾನುಜನ ಅಸ್ತ್ರವನು ಮುರಿದು, ರಥ ಸಾರಥಿ ಕುದುರೆಗಳನ್ನು ಕತ್ತರಿಸಿದ ಧರ್ಮಜನು ಬಾಣಗಳಿಂದ ಅವನನ್ನು ಸಂಹರಿಸಿದನು. ಅವನ ಸೇಡನ್ನು ತೀರಿಸಲು ಸಾಲ್ವರಾಜನು ಬಂದು ಧರ್ಮಜನನ್ನು ಕೆಣಕಿ ಧರ್ಮಜನ ಬಾಣಗಳಿಂದ ಸಾವನಪ್ಪಿ ದೇವತೆಗಳ ಜೊತೆಗೆ ಸೇರಿದನು.

ಅರ್ಥ:
ಅಸ್ತ್ರ: ಶಸ್ತ್ರ, ಆಯುಧ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ರಥ: ಬಂಡಿ; ಸೂತ: ಸಾರಥಿ; ಹಯ: ಕುದುರೆ; ತರಿ: ಸೀಳು; ಬಾಣ: ಅಂಬು, ಸರಳು; ವ್ರಾತ: ಗುಂಪು; ಅನುಜ: ತಮ್ಮ; ಹೂಳು: ಕವಿ, ಮುಚ್ಚು; ಹರಹು: ವಿಸ್ತಾರ, ವೈಶಾಲ್ಯ, ಹೆಚ್ಚಳ; ಕೆಡಹು: ಬೀಳಿಸು; ಮಹೀತಳಾಧಿಪ: ರಾಜ; ಹರಿಬ: ಕೆಲಸ; ಭೂತಳೇಶ: ರಾಜ; ಕೆಣಕು: ಪ್ರಚೋದಿಸು; ಕಂಡು: ನೋಡು; ವರ: ಶ್ರೇಷ್ಠ; ಸುರ: ದೇವತೆ, ಅಮರ; ವ್ರಜ: ಗುಂಪು;

ಪದವಿಂಗಡಣೆ:
ಆತನ್+ಅಸ್ತ್ರವ +ಮುರಿ+ಎಸುತ+ ರಥ
ಸೂತ +ಹಯವನು +ತರಿದು +ಬಾಣ
ವ್ರಾತದಲಿ+ ಶಲ್ಯ+ಅನುಜನ +ಹೂಳಿದನು +ಹರಹಿನಲಿ
ಈತನನು +ಕೆಡಹಿದನು+ ಸಾಲ್ವ+ಮ
ಹೀತಳಾಧಿಪನ್+ಅವನ +ಹರಿಬಕೆ
ಭೂತಳೇಶನ +ಕೆಣಕಿ +ಕಂಡನು +ವರ +ಸುರವ್ರಜವ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಹೂಳಿದನು ಹರಹಿನಲಿ, ಕಂಡನು ವರ ಸುರವ್ರಜವ
(೨) ಭೂತಳೇಶ, ಮಹೀತಳಾಧಿಪ; ವ್ರಾತ, ವ್ರಜ – ಸಮಾನಾರ್ಥಕ ಪದ

ಪದ್ಯ ೭೦: ಶಲ್ಯನ ತಮ್ಮ ಧರ್ಮಜನಿಗೆ ಏನು ಹೇಳಿದ?

ಗೆಲವು ನಿನಗಾಯ್ತರಸ ಹರಿಬಕೆ
ನಿಲುಕಿದೆನ್ನನು ಸಂತವಿಸಿ ನಿಜ
ಬಲದಲೊಸಗೆಯ ಮಾಡಿಸಾ ಮಾದ್ರೇಶಮಾರಣವ
ಅಳುಕದಿದಿರಾಗೆನುತ ಬಾಣಾ
ವಳಿಯ ತವಿಸೆ ನಿರಂತರಾಸ್ತ್ರದ
ಜಲನಿಧಿಗೆ ವಡಬಾಗ್ನಿಯಾದನು ನಗುತ ಯಮಸೂನು (ಶಲ್ಯ ಪರ್ವ, ೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ಶಲ್ಯನ ತಮ್ಮನು ಅರಸ, ನೀನು ಈಗ ಗೆದ್ದಿದ್ದೀ ಆದರೆ ನನ್ನನ್ನು ಗೆದ್ದಮೇಲೆ ನಿನ್ನ ಸೈನ್ಯದಲ್ಲಿ ಗೆಲುವಿನ ಸಂಭ್ರಮವನ್ನು ಆಚರಿಸು. ಹೆದರಬೇಡ ನನ್ನೆದುರು ಯುದ್ಧವನ್ನು ಮಾಡು ಎಂದು ಹೇಳಿ ಧರ್ಮಜನ ಮೇಲೆ ಬಾಣವನ್ನು ಬಿಟ್ಟನು. ಧರ್ಮಜನು ನಗುತ್ತಾ ಆ ಎಲ್ಲಾ ಬಾಣಗಳನ್ನು ಸುಟ್ಟುಹಾಕಿದನು.

ಅರ್ಥ:
ಗೆಲುವು: ಜಯ; ಅರಸ: ರಾಜ; ಹರಿಬ: ಕಾರ್ಯ; ನಿಲುಕು: ನೀಡುವಿಕೆ; ಸಂತವಿಸು: ಹರ್ಷ; ಬಲ: ಸೈನ್ಯ; ಒಸಗೆ: ಶುಭ, ಮಂಗಳಕಾರ್ಯ; ಮಾರಣ: ಸಾವು; ಅಳುಕು: ಹೆದರು; ಇದಿರು: ಎದುರು; ಬಾಣಾವಳಿ: ಬಾಣಗಳ ಸಾಲು; ತವಿಸು: ಕೊಲ್ಲು; ನಿರಂತರ: ಯಾವಾಗಲು; ಅಸ್ತ್ರ: ಶಸ್ತ್ರ; ಜಲನಿಧಿ: ಸಾಗರ; ವಡಬಾಗ್ನಿ: ಸಮದ್ರದೊಳಗಿನ ಬೆಂಕಿ; ನಗು: ಸಂತಸ; ಸೂನು: ಮಗ;

ಪದವಿಂಗಡಣೆ:
ಗೆಲವು +ನಿನಗಾಯ್ತ್+ಅರಸ+ ಹರಿಬಕೆ
ನಿಲುಕಿದ್+ಎನ್ನನು +ಸಂತವಿಸಿ+ ನಿಜ
ಬಲದಲ್+ಒಸಗೆಯ +ಮಾಡಿಸಾ +ಮಾದ್ರೇಶ+ಮಾರಣವ
ಅಳುಕದ್+ಇದಿರಾಗೆನುತ +ಬಾಣಾ
ವಳಿಯ +ತವಿಸೆ +ನಿರಂತರಾಸ್ತ್ರದ
ಜಲನಿಧಿಗೆ +ವಡಬಾಗ್ನಿ+ಯಾದನು +ನಗುತ +ಯಮಸೂನು

ಅಚ್ಚರಿ:
(೧) ರೂಪಕದ ಪ್ರಯೋಗ – ನಿರಂತರಾಸ್ತ್ರದ ಜಲನಿಧಿಗೆ ವಡಬಾಗ್ನಿಯಾದನು
(೨) ಮ ಕಾರದ ತ್ರಿವಳಿ ಪದ – ಮಾಡಿಸಾ ಮಾದ್ರೇಶ ಮಾರಣವ

ಪದ್ಯ ೬೯: ಶಲ್ಯನ ನಂತರ ಯಾರು ಯುದ್ಧಕ್ಕೆ ಬಂದರು?

ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ (ಶಲ್ಯ ಪರ್ವ, ೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ಅಯ್ಯೋ ಸೇನಾಪತಿಯು ಭೂಮಿಗೆ ಮಗ್ಗುಲಾಗಿ ಬಿದ್ದುಬಿಟ್ಟನು. ಅವನ ನಂತರ ಕುರುಸೇನೆಯಲ್ಲಿ ಯುದ್ಧ ಧುರಂಧರರು ಇನ್ನಾರಿದ್ದಾರೆ. ಕರ್ಣ, ದ್ರೋಣ, ಭೀಷ್ಮರ ಜೊತೆ ಶಲ್ಯನು ಸೇರಿದನು ಎನ್ನಲು, ಇದೇನು ಮಹಾ ಎಂದು ಶಲ್ಯನ ತಮ್ಮನು ಯುದ್ಧಕ್ಕೆ ಬಂದನು.

ಅರ್ಥ:
ಸೇನಾಪತಿ: ದಳಪತಿ; ಮಗ್ಗುಲು: ಪಕ್ಕ, ಪಾರ್ಶ್ವ; ಮಹಿ: ಭೂಮಿ; ಬಿದ್ದು: ಬೀಳು; ಬೆಚ್ಚು: ಹೆದರು; ಬಹಳ: ತುಂಬ; ಬಲ: ಸೈನ್ಯ; ಧುರಂಧರ: ಪರಾಕ್ರಮಿ; ಮಿಹಿರ: ಸೂರ್ಯ; ಸುತ: ಮಗ; ಗುರು: ಆಚಾರ್ಯ; ಸನ್ನಿಹಿತ: ಹತ್ತಿರ; ಕಿಂಗಹನ: ಏನು ಮಹಾಕಷ್ಟ; ರಣ: ಯುದ್ಧ; ಅನುಜ: ತಮ್ಮ; ಮಾರಾಂತು: ಯುದ್ಧಕ್ಕೆ ನಿಂತು;

ಪದವಿಂಗಡಣೆ:
ಅಹಹ +ಸೇನಾಪತಿಯ +ಮಗ್ಗುಲು
ಮಹಿಗೆ +ಬಿದ್ದುದು +ಬೆಚ್ಚಿತ್+ಈಚೆಯ
ಬಹಳಬಲರ್+ಇನ್ನಾರು +ಕುರುಸೇನಾ+ಧುರಂಧರರು
ಮಿಹಿರಸುತ +ಗುರು +ಭೀಷ್ಮರಲಿ +ಸ
ನ್ನಿಹಿತನಾದನು +ಶಲ್ಯನ್+ಎನೆ +ಕಿಂ
ಗಹನವೀ +ರಣವೆನುತ +ಶಲ್ಯ+ಅನುಜನು +ಮಾರಾಂತ

ಅಚ್ಚರಿ:
(೧) ಅತೀವ ಆತ್ಮವಿಶ್ವಾಸ – ಕಿಂಗಹನವೀ ರಣವೆನುತ ಶಲ್ಯಾನುಜನು ಮಾರಾಂತ
(೨) ಶಲ್ಯನು ಸತ್ತನು ಎಂದು ಹೇಳುವ ಪರಿ – ಮಿಹಿರಸುತ ಗುರು ಭೀಷ್ಮರಲಿ ಸನ್ನಿಹಿತನಾದನು ಶಲ್ಯನ್

ಪದ್ಯ ೬೮: ಕುರುಸೇನೆಯು ಚೀರಲು ಕಾರಣವೇನು?

ಕಾರಿದನು ರುಧಿರವನು ಧರಣಿಗೆ
ಹಾರಿ ಬಿದ್ದನು ಮಾದ್ರಪತಿಯೆದೆ
ಡೋರಿನಲಿ ಡಾವರಿಸಿದವು ರಕ್ತಾಂಬುಧಾರೆಗಳು
ಮೀರಿತಸು ಕಂಠವನು ನಾಸಿಕ
ಕೇರಿದುದು ನಿಟ್ಟುಸುರು ನಿಮಿಷಕೆ
ಚೀರಿದುದು ಕುರುರಾಯದಳ ಶಲ್ಯಾವಸಾನದಲಿ (ಶಲ್ಯ ಪರ್ವ, ೩ ಸಂಧಿ, ೬೮ ಪದ್ಯ)

ತಾತ್ಪರ್ಯ:
ಶಲ್ಯನು ರಕ್ತವನ್ನು ಕಾರಿ ಭೂಮಿಗೆ ಹಾರಿ ಬಿದ್ದನು. ಎದೆಯ ಹೋರಿನಲ್ಲಿ ರಕ್ತವು ಹರಿಯಿತು. ಪ್ರಾಣವು ಕಂಠವನ್ನು ಮೀರಿ ಮೂಗಿಗೆ ಏರಿ ಹಾರಿಹೋಯಿತು. ಶಲ್ಯನ ಅವಸಾನದಿಂದ ಕುರುಸೇನೆಯು ಆಕ್ರಂದನಕ್ಕೊಳಗಾಯಿತು.

ಅರ್ಥ:
ಕಾರು: ಮಳೆಗಾಲ; ರುಧಿರ: ರಕ್ತ, ನೆತ್ತರು; ಧರಣಿ: ಭೂಮಿ; ಹಾರು: ಲಂಘಿಸು; ಬೀಳು: ಕುಸಿ; ಮಾದ್ರಪತಿ: ಮದ್ರ ದೇಶದ ಒಡೆಯ (ಶಲ್ಯ); ಎದೆ: ಉರು; ಡೋರು: ತೂತು, ರಂಧ್ರ; ರಕ್ತ: ನೆತ್ತರು; ಅಂಬುಧಾರೆ: ಮಳೆ; ಮೀರು: ಹೆಚ್ಚಾಗು; ಕಂಠ: ಕೊರಳು; ನಾಸಿಕ: ಮೂಗು; ಏರು: ಮೇಲೇಳು; ನಿಟ್ಟುಸುರು: ದೀರ್ಘವಾದ ಉಸಿರು; ನಿಮಿಷ: ಕ್ಷಣ, ಕಾಲ ಪ್ರಮಾಣ; ಚೀರು: ಕಿರಚು, ಕೂಗು; ದಳ: ಸೈನ್ಯ; ಅವಸಾನ: ಸಾವು;

ಪದವಿಂಗಡಣೆ:
ಕಾರಿದನು +ರುಧಿರವನು +ಧರಣಿಗೆ
ಹಾರಿ +ಬಿದ್ದನು +ಮಾದ್ರಪತಿ+ಎದೆ
ಡೋರಿನಲಿ +ಡಾವರಿಸಿದವು +ರಕ್ತಾಂಬು+ಧಾರೆಗಳು
ಮೀರಿತ್+ಅಸು +ಕಂಠವನು +ನಾಸಿಕಕ್
ಏರಿದುದು +ನಿಟ್ಟುಸುರು +ನಿಮಿಷಕೆ
ಚೀರಿದುದು +ಕುರುರಾಯದಳ +ಶಲ್ಯ+ಅವಸಾನದಲಿ

ಅಚ್ಚರಿ:
(೧) ಪ್ರಾಣವು ಹೋಗುವುದನ್ನು ವಿವರಿಸುವ ಪರಿ – ಮೀರಿತಸು ಕಂಠವನು ನಾಸಿಕಕೇರಿದುದು ನಿಟ್ಟುಸುರು