ಪದ್ಯ ೩೩: ಅರ್ಜುನನು ಕೃಷ್ಣನಿಗೆ ಏನು ಹೇಳಿದನು?

ಮೇಲುಲೋಕವ ಬಯಸಿ ಕುರುಬಲ
ಮೇಲೆ ಬಿದ್ದುದು ಜೀಯ ಜಡಿದು ನೃ
ಪಾಲನೇಕಾಂಗದಲಿ ಹೊಕ್ಕನು ಹೊದರನೊಡೆಬಡಿದು
ಮೇಲುದಾಯದಲವನಿಪನ ಸಂ
ಭಾಳಿಸುವೆನೆನೆ ನಗುತ ಲಕ್ಷ್ಮೀ
ಲೋಲ ಚಪ್ಪರಿಸಿದನು ನರನುದ್ದಂಡವಾಜಿಗಳ (ಗದಾ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನು ಶ್ರೀಕೃಷ್ಣನಿಗೆ, ಒಡೆಯಾ ಕುರುಬಲವು ಸ್ವರ್ಗವನ್ನು ಬಯಸಿ ನಮ್ಮ ಸೇನೆಯ ಮೇಲೆ ಬಿದ್ದಿತು. ಧರ್ಮಜನೊಬ್ಬನೇ ಶತ್ರು ಸೈನ್ಯದ ಹಿಂಡನ್ನೊಡೆದು ಯುದ್ಧಮಾಡುತ್ತಿದ್ದಾನೆ. ನಾನೂ ಹೋಗಿ ಅವನಿಗೆ ಸಹಾಯಕನಾಗಿ ಯುದ್ಧಮಾಡಿ ಸಂತೈಸುತ್ತೇನೆ ಎಂದು ಹೇಳಲು ಶ್ರೀಕೃಷ್ಣನು ನಕ್ಕು ಅರ್ಜುನನ ಪ್ರಚಂಡವಾದ ಕುದುರೆಗಳನ್ನು ಚಪ್ಪರಿಸಿ ರಥವನ್ನು ನಡೆಸಿದನು.

ಅರ್ಥ:
ಮೇಲೆ: ಊರ್ಧ್ವ; ಲೋಕ: ಜಗತ್ತು; ಬಯಸು: ಇಚ್ಛಿಸು; ಬಲ: ಸೈನ್ಯ; ಬಿದ್ದು: ಎರಗು; ಜೀಯ: ಒಡೆಯ; ನೃಪಾಲ: ರಾಜ; ಏಕಾಂಗ: ಒಬ್ಬನೆ; ಹೊಕ್ಕು: ಸೇರು; ಹೊದರು: ತೊಡಕು, ತೊಂದರೆ; ಬಡಿ: ಸೀಳು, ಪೆಟ್ಟು; ಅವನಿಪ: ರಾಜ; ಸಂಭಾಳಿಸು: ಸಂತೈಸು; ನಗು: ಹರ್ಷ; ಲಕ್ಷ್ಮೀಲೋಲ: ಲಕ್ಷ್ಮಿಯ ಪ್ರಿಯಕರ (ಕೃಷ್ಣ); ಚಪ್ಪರಿಸು: ಸವಿ, ರುಚಿನೋಡು; ನರ: ಅರ್ಜುನ; ಉದ್ದಂಡ: ಪ್ರಬಲವಾದ; ವಾಜಿ: ಕುದುರೆ;

ಪದವಿಂಗಡಣೆ:
ಮೇಲು+ಲೋಕವ +ಬಯಸಿ +ಕುರುಬಲ
ಮೇಲೆ +ಬಿದ್ದುದು +ಜೀಯ +ಜಡಿದು +ನೃ
ಪಾಲನ್+ಏಕಾಂಗದಲಿ +ಹೊಕ್ಕನು +ಹೊದರನ್+ಒಡೆಬಡಿದು
ಮೇಲುದಾಯದಲ್+ಅವನಿಪನ+ ಸಂ
ಭಾಳಿಸುವೆನ್+ಎನೆ +ನಗುತ+ ಲಕ್ಷ್ಮೀ
ಲೋಲ +ಚಪ್ಪರಿಸಿದನು +ನರನ್+ಉದ್ದಂಡ+ವಾಜಿಗಳ

ಅಚ್ಚರಿ:
(೧) ಸ್ವರ್ಗವನ್ನು ಮೇಲುಲೋಕ ಎಂದು ಕರೆದಿರುವುದು;
(೨) ಮೇಲು ಪದದ ಬಳಕೆ – ಮೇಲುಲೋಕವ ಬಯಸಿ ಕುರುಬಲ ಮೇಲೆ ಬಿದ್ದುದು ಜೀಯ; ಮೇಲುದಾಯದಲವನಿಪನ ಸಂಭಾಳಿಸುವೆನೆನೆ

ಪದ್ಯ ೭೪: ಕೌರವನೊಡನೆ ಯಾವ ಸೈನವು ಮುನ್ನುಗ್ಗಿತು?

ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ (ಶಲ್ಯ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕೌರವನೊಡನೆ ಸಮಸ್ತ ಸೇನೆಯೂ ಮುನ್ನುಗ್ಗಿತು. ಅತ್ತ ಭೀಮ, ಅರ್ಜುನ, ಸಾತ್ಯಕಿಗಳೊಡನೆ ಪಾಂಡವ ಸೇನೆಯೂ ಸೇರಿತು. ಬಾಣ, ಈಟಿಗಳನ್ನು ಹಿಡಿದ ಪದಾತಿಗಳು ರಾವುತರು ಮದಗಜಗಳು ಸನ್ನದ್ಧರಾದವು. ಲಾಯದ ಉತ್ತಮ ಕುದುರೆಗಳು ಸಾಲಾಗಿ ಮುಂದಕ್ಕೆ ಓಡಿಬಂದವು.

ಅರ್ಥ:
ರಾಯ: ರಾಜ; ಒಡನೆ: ಜೊತೆ; ಸಮಸ್ತ: ಎಲ್ಲಾ; ಬಲ: ಸೈನ್ಯ; ಅಡುಪಾಯ: ಇನ್ನೊಂದು ಉಪಾಯ; ಔಕು: ನೂಕು; ಸುತ: ಮಗ; ಆಚೆ: ಹೊರಗೆ; ಮೇಳೈಸು: ಗುಂಪು; ನೃಪ: ರಾಜ; ಸಾಯಕ: ಬಾಣ; ಸೂಠಿ: ವೇಗ; ಸಬಳ: ಈಟಿ; ಪಾಯದಳ: ಸೈನಿಕ, ಕಾಲಾಳು; ರಥ: ಬಂಡಿ; ವಾಜಿ: ಕುದುರೆ; ಗಜಘಟೆ: ಆನೆಯ ಗುಂಪು; ಲಾಯ: ಅಶ್ವಶಾಲೆ; ಶುದ್ಧ: ನಿರ್ಮಲ; ತೇಜಿ: ಕುದುರೆ; ಹೊಕ್ಕು: ಸೇರು; ವಾಘೆ: ಲಗಾಮು; ಸರಿಸ: ನೇರವಾಗಿ, ಸರಳವಾಗಿ;

ಪದವಿಂಗಡಣೆ:
ರಾಯನೊಡನೆ +ಸಮಸ್ತ +ಬಲವ್+ಅಡು
ಪಾಯಲ್+ಔಕಿತು +ಪಾರ್ಥ +ಸಾತ್ಯಕಿ
ವಾಯುಸುತರ್+ಆಚೆಯಲಿ +ಮೇಳೈಸಿತ್ತು +ನೃಪಸೇನೆ
ಸಾಯಕದ +ಸೂಠಿಗಳ+ ಸಬಳದ
ಪಾಯದಳ +ರಥ +ವಾಜಿ +ಗಜಘಟೆ
ಲಾಯ+ಶುದ್ಧದ +ತೇಜಿ +ಹೊಕ್ಕವು +ವಾಘೆ+ಸರಿಸದಲಿ

ಅಚ್ಚರಿ:
(೧) ರಾಯ, ನೃಪ; ಮೇಳೈಸು, ಘಟೆ – ಸಮಾನರ್ಥಕ ಪದ
(೨) ಸ ಕಾರದ ತ್ರಿವಳಿ ಪದ – ಸಾಯಕದ ಸೂಠಿಗಳ ಸಬಳದ
(೩) ಶ್ರೇಷ್ಠವಾದ ಕುದುರೆ ಎಂದು ಹೇಳಲು – ಲಾಯಶುದ್ಧದ ತೇಜಿ

ಪದ್ಯ ೪೧: ದ್ರೋಣರು ಹೇಗೆ ತೋರಿದರು?

ಅರುಣಮಯ ರಥವಾಜಿಗಳ ವಿ
ಸ್ತರದ ಹೇಮದ ಕಳಶ ಸಿಂಧದ
ಸರಳು ತೀವಿದ ಬಂಡಿ ಬಳಿಯಲಿ ಲಕ್ಷಸಂಖ್ಯೆಗಳ
ತರಣಿಯನು ಸೋಲಿಸುವ ರತ್ನಾ
ಭರಣಕಾಂತಿಯ ರಾಯಕಟಕದ
ಗುರುವ ಕಂಡನು ಪಾರ್ಥ ಶಕಟ ವ್ಯೂಹದಗ್ರದಲಿ (ದ್ರೋಣ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನು ಶಕಟ ವ್ಯೂಹದ ಮುಂದೆ ಉಭಯ ರಾಜರ ಗುರುವಾದ ದ್ರೋಣನನ್ನು ಕಂಡನು. ಅವನ ರಥಕ್ಕೆ ಕೆಂಪು ಬಣ್ಣದ ಕುದುರೆಗಳನ್ನು ಕಟ್ಟಿತ್ತು. ಬಂಗಾರದ ಕಳಶವು ಅವನ ಧ್ವಜದಲ್ಲಿ ವಿರಾಜಿಸುತ್ತಿತ್ತು. ಅವನು ಧರಿಸುವ ಆಭರನಗಳ ಕಾಂತಿ ಸೂರ್ಯನ ಪ್ರಭೆಯನ್ನು ಸೋಲಿಸುತ್ತಿತ್ತು.

ಅರ್ಥ:
ಅರುಣ: ಕೆಂಪು ಬಣ್ಣ; ರಥ: ಬಂಡಿ; ವಾಜಿ: ಕುದುರೆ; ವಿಸ್ತರ: ವಿಶಾಲ; ಹೇಮ: ಚಿನ್ನ; ಕಳಶ: ಕುಂಭ; ಸಿಂಧ:ಒಂದು ಬಗೆ ಪತಾಕೆ, ಬಾವುಟ; ಸರಳು: ಬಾಣ; ತೀವಿ: ಚುಚ್ಚು; ಬಂಡಿ: ರಥ; ಬಳಿ: ಹತ್ತಿರ; ಲಕ್ಷ: ಅಸಂಖ್ಯಾತ; ಸಂಖ್ಯೆ: ಎಣಿಕೆ; ತರಣಿ: ಸೂರ್ಯ; ಸೋಲಿಸು: ಪರಾಭವ; ಆಭರಣ: ಒಡವೆ; ಕಾಂತಿ: ಪ್ರಕಾಶ; ಕಟಕ: ಯುದ್ಧ; ರಾಯ: ರಾಜ; ಗುರು: ಆಚಾರ್ಯ; ಕಂಡು: ನೋಡು; ಶಕಟ: ರಥ, ಬಂಡಿ, ಗಾಡಿ; ಅಗ್ರ: ತುದಿ, ಮೊದಲು;

ಪದವಿಂಗಡಣೆ:
ಅರುಣಮಯ +ರಥ+ವಾಜಿಗಳ +ವಿ
ಸ್ತರದ +ಹೇಮದ +ಕಳಶ +ಸಿಂಧದ
ಸರಳು +ತೀವಿದ +ಬಂಡಿ +ಬಳಿಯಲಿ +ಲಕ್ಷ+ಸಂಖ್ಯೆಗಳ
ತರಣಿಯನು +ಸೋಲಿಸುವ +ರತ್ನಾ
ಭರಣ+ಕಾಂತಿಯ +ರಾಯ+ಕಟಕದ
ಗುರುವ +ಕಂಡನು +ಪಾರ್ಥ +ಶಕಟ+ ವ್ಯೂಹದ್+ಅಗ್ರದಲಿ

ಅಚ್ಚರಿ:
(೧) ದ್ರೋಣನು ಕಂಡ ಪರಿ: ತರಣಿಯನು ಸೋಲಿಸುವ ರತ್ನಾಭರಣಕಾಂತಿಯ ರಾಯಕಟಕದ ಗುರುವ ಕಂಡನು

ಪದ್ಯ ೪೫: ಅಭಿಮನ್ಯುವಿನ ಶೌರ್ಯವು ಹೇಗಿತ್ತು?

ಅಟ್ಟಿ ಹೊಯ್ದನು ದಂತಿಗಳ ಹುಡಿ
ಗುಟ್ಟಿದನು ವಾಜಿಗಳ ತೇರಿನ
ಥಟ್ಟುಗಳ ಸೀಳಿದನು ಮಿಗೆ ಕಾಲಾಳನಸಿಯರೆದ
ಕೆಟ್ಟು ಬಿಟ್ಟೋಡಿದುದು ಭಟನರೆ
ಯಟ್ಟಿದನು ರಣದೊಳಗೆ ರಾಯ ಘ
ರಟ್ಟ ಪಾರ್ಥನ ತನಯ ಕೊಂದನು ಖಡ್ಗ ಮನ ದಣಿಯೆ (ದ್ರೋಣ ಪರ್ವ, ೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಆನೆಗಳನ್ನು ಅಟ್ಟಿಸಿಕೊಂಡು ಹೋಗಿ ಹೊಡೆದನು, ಕುದುರೆಗಳನ್ನು ಪುಡಿಮಾಡಿದನು. ರಥಗಳ ಸೈನ್ಯವನ್ನು ಸೀಳಿದನು. ಕಾಲಾಳುಗಳನ್ನು ಕತ್ತಿಯಿಂದ ಅರೆದು ಹಾಕಿದನು. ಸೈನಿಕರು ತಾವಿದ್ದ ಸ್ಥಳವನ್ನು ಬಿಟ್ಟು ಕೆಟ್ಟೆವೆಂದು ಓಡಿದರು. ಅಭಿಮನ್ಯುವು ಅಟ್ಟಿಸಿಕೊಂಡು ಹೋಗಿ ಅವರನ್ನಪ್ಪಳಿಸಿದನು. ಅವರ ಖಡ್ಗದ ಮನಸ್ಸು ತಣಿದು ಬಿಟ್ಟಿತು.

ಅರ್ಥ:
ಅಟ್ಟು: ಬೆನ್ನುಹತ್ತಿ ಹೋಗು; ಹೊಯ್ದು: ಹೊಡೆ; ದಂತಿ: ಆನೆ; ಹುಡಿ: ಪುಡಿ; ಕುಟ್ಟು: ಹೊಡೆತ, ಪೆಟ್ಟು; ವಾಜಿ: ಕುದುರೆ; ತೇರು: ಬಂಡಿ; ಥಟ್ಟು: ಗುಂಪು; ಸೀಳು: ಚೂರು, ತುಂಡು; ಮಿಗೆ: ಅಧಿಕ; ಕಾಲಾಳು: ಸೈನಿಕ; ಅಸಿ:ಕತ್ತಿ; ಅರಿ: ನಾಶಮಾಡು; ಕೆಟ್ಟು: ಹಾಳು; ಓಡು: ಧಾವಿಸು; ಭಟ: ಸೈನಿಕ; ರಣ: ಯುದ್ಧ; ರಾಯ: ರಾಜ; ಘರಟ್ಟ: ಬೀಸುವ ಕಲ್ಲು, ರಾಗಿಕಲ್ಲು; ತನಯ: ಮಗ; ಕೊಂದು: ಕೊಲ್ಲು; ಖಡ್ಗ: ಕತ್ತಿ; ಮನ: ಮನಸ್ಸು; ದಣಿ: ಆಯಾಸ;

ಪದವಿಂಗಡಣೆ:
ಅಟ್ಟಿ +ಹೊಯ್ದನು +ದಂತಿಗಳ+ ಹುಡಿ
ಕುಟ್ಟಿದನು +ವಾಜಿಗಳ +ತೇರಿನ
ಥಟ್ಟುಗಳ +ಸೀಳಿದನು +ಮಿಗೆ +ಕಾಲಾಳನ್+ಅಸಿ+ಅರೆದ
ಕೆಟ್ಟು +ಬಿಟ್ಟೋಡಿದುದು+ ಭಟನ್+ಅರೆ
ಅಟ್ಟಿದನು +ರಣದೊಳಗೆ +ರಾಯ +ಘ
ರಟ್ಟ +ಪಾರ್ಥನ +ತನಯ+ ಕೊಂದನು +ಖಡ್ಗ +ಮನ +ದಣಿಯೆ

ಅಚ್ಚರಿ:
(೧) ಹೊಯ್ದನು, ಸೀಳಿದನು, ಅಟ್ಟಿದನು, ಕೊಂದನು – ಹೋರಟವನ್ನು ವಿವರಿಸುವ ಪದಗಳು
(೨) ಅಟ್ಟಿ, ಕುಟ್ಟಿ; ಥಟ್ಟು, ಕೆಟ್ಟು – ಪ್ರಾಸ ಪದಗಳು

ಪದ್ಯ ೪೪: ಯುದ್ಧ ಭೂಮಿಯು ಹೇಗೆ ಕಂಗೊಳಿಸಿತು?

ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು (ದ್ರೋಣ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಿಸ್ಸಾಳಗಳು ಪರ್ವತಗಳ ತಲೆಸಿಡಿಯುವಂತೆ ಸದ್ದುಮಾಡಿದರು. ವಿವಿಧ ವಾದ್ಯಗಳು ಸಿಡಿಲಿನಂತೆ ಸದ್ದುಮಾಡಿದವು. ಕಾಲಾಳುಗಳು ಬಂದರು. ಭೂಮಿಕುಸಿಯುವಂತೆ ರಥಗಳು ನುಗ್ಗಿದವು. ಆನೆಗಳು ಸಾಲುಸಾಲಾಗಿ ನಿಂತವು. ಕುದುರೆಗಳು ಕುಣಿಯುತ್ತಿದ್ದವು.

ಅರ್ಥ:
ಸೂಳು: ಆರ್ಭಟ, ಬೊಬ್ಬೆ; ಬೊಬ್ಬಿರಿ: ಗರ್ಜನೆ; ನಿಸ್ಸಾಳ: ಚರ್ಮ ವಾದ್ಯ; ಚಯ: ಗುಂಪು; ಅದ್ರಿ: ಬೆಟ್ಟ; ಉರು: ಹೆಚ್ಚು; ಹೆಡತಲೆ: ತಲೆಯ ಹಿಂಭಾಗ; ಸೀಳು: ಚೂರು; ಸಿಡಿಲು: ಅಶನಿ; ಏಳಿಗೆ: ಹೆಚ್ಚಳ; ಎದ್ದು: ಮೇಲೆ ಹೋಗು; ವಿವಿಧ: ಹಲವಾರು; ವಾದ್ಯ; ಸಂಗೀತದ ಸಾಧನ; ಆಳು: ಸೈನಿಕ; ನೆರೆ:ಗುಂಪು; ನೆಲ: ಭೂಮಿ; ಕುಸಿ: ಜಾರು; ರಥ: ಬಂಡಿ; ಜಾಲ: ಗುಂಪು; ಜಡಿ: ಗದರಿಸು, ಬೆದರಿಸು; ಆನೆ: ಕರಿ; ಸಾಲು: ಗುಂಪು; ಮೆರೆ: ಹೊಳೆ; ಕುಣಿ: ನರ್ತಿಸು; ಕೂಡೆ: ಜೊತೆ; ವಾಜಿ: ಕುದುರೆ;

ಪದವಿಂಗಡಣೆ:
ಸೂಳವಿಸಿ +ಬೊಬ್ಬಿರಿದವ್+ಉರು +ನಿ
ಸ್ಸಾಳ+ಚಯವ್+ಅದ್ರಿಗಳ+ ಹೆಡತಲೆ
ಸೀಳೆ +ಸಿಡಿಲ್+ಏಳಿಗೆಯಲ್+ಎದ್ದವು +ವಿವಿಧ +ವಾದ್ಯ+ರವ
ಆಳು +ನೆರೆದುದು +ನೆಲ +ಕುಸಿಯೆ +ರಥ
ಜಾಲ +ಜಡಿದುದು +ಹಣ್ಣಿದ್+ಆನೆಯ
ಸಾಲು +ಮೆರೆದುವು +ಕುಣಿವುತಿದ್ದುವು+ ಕೂಡೆ +ವಾಜಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ನಿಸ್ಸಾಳಚಯವದ್ರಿಗಳ ಹೆಡತಲೆ ಸೀಳೆ

ಪದ್ಯ ೩: ಮಾಂಸಖಂಡಗಳು ಹೇಗೆ ಕಂಡವು?

ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹಯವನಡೆಗೆಡೆ
ವಾನೆಗಳ ಹೊದರೆದ್ದು ಮುಗ್ಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ
ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ (ಭೀಷ್ಮ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ಉಭಯ ಸೈನ್ಯಗಳಲ್ಲೂ ಕುದುರೆ, ಆನೆ, ರಥ, ಅಶ್ವ, ಯೋಧರು ಕಡಿದ ಪರಿಣಾಮವಾಗಿ ತುಂಡಾದ ಮಾಂಸ ರಕ್ತಗಳು ಬೆಟ್ಟ ಹೊಳೆಗಳಂತೆ ಕಾಣಿಸಿದವು.

ಅರ್ಥ:
ಹೇಳು: ತಿಳಿಸು; ಉಭಯ: ಎರಡು; ಬಲ: ಸೈನ್ಯ; ಲೂನ: ಕತ್ತರಿಸಿದ, ಕಡಿದ; ನಿವಹ: ಗುಂಪು; ಹಯ: ಕುದುರೆ; ಅಡೆ: ಅಡ್ಡ; ಕೆಡೆ: ಬೀಳು, ಕುಸಿ; ಆನೆ: ಕರಿ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ಮುಗ್ಗು: ಬಾಗು, ಮಣಿ; ರಥ: ಬಂಡಿ; ವಾಜಿ: ಕುದುರೆ; ಮಾನವ: ಮನುಷ್ಯ; ಕಡಿ: ಸೀಳು; ಖಂಡ: ತುಂಡು, ಚೂರು; ದೊಂಡೆ: ಗಂಟಲು, ಕಂಠ; ಹರಿ: ಸಾಗು; ರುಧಿರ: ರಕ್ತ; ಅಂಭೋನಿಧಿ: ಸಾಗರ; ಅಂಬು: ನೀರು; ಹರಹು: ವಿಸ್ತಾರ, ವೈಶಾಲ್ಯ; ಪೂರದ: ಪೂರ್ತಿ, ನೆರೆ; ವಿಗಡ: ಶೌರ್ಯ, ಪರಾಕ್ರಮ; ವಿಗ್ರಹ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಉಭಯ +ಬಲದಲಿ
ಲೂನ +ನಿವಹದ +ಹಯವನ್+ಅಡೆ+ಕೆಡೆವ್
ಆನೆಗಳ +ಹೊದರೆದ್ದು+ ಮುಗ್ಗಿದ+ ರಥದ+ ವಾಜಿಗಳ
ಮಾನವರ+ ಕಡಿ+ಖಂಡ +ದೊಂಡೆಯನ್
ಏನನೆಂಬೆನು+ ಹರಿವ+ ರುಧಿರ
ಅಂಭೋನಿಧಿಯ +ಹರಹುಗಳ+ ಪೂರದ+ ವಿಗಡ+ ವಿಗ್ರಹವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿವ ರುಧಿರಾಂಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ

ಪದ್ಯ ೨: ಸೈನ್ಯವು ಹೇಗೆ ಸನ್ನದ್ಧವಾಗಿತ್ತು?

ಮಡದ ಸೋಂಕಿಂ ಮುನ್ನ ಗಗನವ
ತುಡುಕ ಬಗೆದವು ತೇಜಿಗಳು ನಸು
ಸಡಿಲ ಬಿಡೆ ವಾಘೆಯಲಿ ಚಿಗಿದುವು ರಥದ ವಾಜಿಗಳು
ತುಡುಕುವಂಕುಶದಿಂದ ಮುನ್ನಿಳೆ
ಯೊಡೆಯೆ ಗಜ ಗಾಡಿಸಿದವರಸರ
ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ (ಭೀಷ್ಮ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ರಾವುತರು, ಚಪ್ಪರಿಸುವ ಮೊದಲೇ ಕುದುರೆಗಳು ಆಕಾಶಕ್ಕೇಳಲು ತವಕಿಸುತ್ತಿದ್ದವು. ಲಗಾಮನ್ನು ಸ್ವಲ್ಪ ಸಡಿಲಬಿಟ್ಟರೂ, ರಥಕ್ಕೆ ಕಟ್ಟಿದ ಕುದುರೆಗಳು ನುಗ್ಗುತ್ತಿದ್ದವು. ಅಂಕುಶದಿಂದ ತಿವಿಯುವ ಮೊದಲೇ ಆನೆಗಲು ಮುನ್ನುಗ್ಗಲು ಸಿದ್ಧವಾಗುತ್ತಿದ್ದವು. ರಾಜರ ಸನ್ನೆಗೆ ಮೊದಲೇ ಕಾಳಗವನ್ನಾರಂಭಿಸಲು ಕಾಲಾಳುಗಳು ತವಕಿಸುತ್ತಿದ್ದರು.

ಅರ್ಥ:
ಮಡ: ರಥದ ಚೌಕಟ್ಟು; ಸೋಂಕು: ಮುಟ್ಟುವಿಕೆ, ಸ್ಪರ್ಶ; ಮುನ್ನ: ಮುಂಚೆ; ಗಗನ: ಆಗಸ; ತುಡುಕ: ಹೋರಾಡು, ಸೆಣಸು; ಬಗೆ: ಕ್ರಮ; ತೇಜಿ: ಕುದುರೆ; ನಸು: ಕೊಂಚ, ಸ್ವಲ್ಪ; ಸಡಿಲಿಸು: ಕಳಚು, ಬಿಚ್ಚು; ವಾಘೆ: ಲಗಾಮು; ಚಿಗಿ: ಬೆರಳುಗಳಿಂದ ಚಿಮ್ಮಿಸು, ಹಾರು; ರಥ: ಬಂಡಿ; ವಾಜಿ: ಕುದುರೆ; ತುಡುಕು: ಹೋರಾಡು, ಸೆಣಸು; ಅಂಕುಶ: ಒಂದು ಬಗೆಯ ಆಯುಧ, ಹಿಡಿತ, ಹತೋಟಿ; ಮುನ್ನ: ಮುಂಚೆ; ಇಳೆ: ಭೂಮಿ; ಒಡೆಯ: ರಾಜ; ಗಜ: ಆನೆ; ಗಾಡಿಸು: ವ್ಯಾಪಿಸು, ಹೊಡೆ; ಅರಸ: ರಾಜ; ಬಿಡುಹು: ಅವಕಾಶ; ತಡೆ: ನಿಲ್ಲು; ಬಗೆ: ಎಣಿಸು, ಯೋಚಿಸು; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಸೈನಿಕರು; ಎಡೆಗಲಸು: ವ್ಯಾಪಿಸು, ನಡುವೆ ಸೇರಿಸು;

ಪದವಿಂಗಡಣೆ:
ಮಡದ +ಸೋಂಕಿಂ +ಮುನ್ನ +ಗಗನವ
ತುಡುಕ +ಬಗೆದವು +ತೇಜಿಗಳು +ನಸು
ಸಡಿಲ +ಬಿಡೆ +ವಾಘೆಯಲಿ +ಚಿಗಿದುವು +ರಥದ +ವಾಜಿಗಳು
ತುಡುಕುವ್+ಅಂಕುಶದಿಂದ +ಮುನ್ನ್+ಇಳೆ
ಯೊಡೆಯೆ +ಗಜ+ ಗಾಡಿಸಿದವ್+ಅರಸರ
ಬಿಡುಹು+ ತಡೆದ್+ಎಡಗಲಸ+ಬಗೆದುವು +ವಿಗಡ+ ಪಾಯದಳ

ಅಚ್ಚರಿ:
(೧) ಸೇನೆಯ ನಾಲ್ಕು ಭಾಗ (ಕುದುರೆ, ರಥ, ಆನೆ, ಪಾಯದಳ) ಹೇಗೆ ಸಿದ್ಧರಾಗಿದ್ದರು ಎಂದು ವಿವರಿಸುವ ಪದ್ಯ
(೨) ಅರಸ, ಇಳೆಯೊಡೆಯ – ಸಮನಾರ್ಥಕ ಪದ

ಪದ್ಯ ೪೬: ಕೃಪಾಚಾರ್ಯರನ್ನು ಅರ್ಜುನನು ಹೇಗೆ ಸೋಲಿಸಿದನು?

ತರಹರಿಸಿ ಶರವೈದರಲಿ ಸಂ
ಹರಿಸಿಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು
ಕೆರಳಿ ಫಲುಗುಣನರ್ಧಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ (ವಿರಾಟ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ರಥಕ್ಕೆ ಬಿದ್ದ ಹೊಡೆತವನ್ನು ಸುಧಾರಿಸಿಕೊಂಡು, ಕೃಪನು ಐದು ಬಾಣಗಳನ್ನು ಉಳಿದುಕೋ ಎಂದು ಹೇಳುತ್ತಾ ಅರ್ಜುನನ ಬಳಿ ಬಿಟ್ಟನು. ಅರ್ಜುನನ ರಥದ ಕುದುರೆಗಳಿಗೆ ಪೆಟ್ಟು ಬಿದ್ದಿತು, ಕೋಪಗೊಂಡ ಅರ್ಜುನನು ಅರ್ಧಚಂದ್ರ ಬಾಣದಿಂದ ಕೃಪನ ಸಾರಥಿ, ಕುದುರೆಗಳನ್ನು, ಕೃಪನು ಹಿಡಿದ ಬಿಲ್ಲನ್ನು ಕತ್ತರಿಸಿ ಹಾಕಲು ಕೃಪಾಚಾರ್ಯನು ತೊಲಗಿ ಹೋದನು.

ಅರ್ಥ:
ತರಹರಿಸು: ತಡಮಾಡು; ಶರ: ಬಾಣ; ಐದು: ಬಂದು ಸೇರು; ಸಂಹರಿಸು: ನಾಶಮಾಡು; ಎಚ್ಚು: ಬಾಣಬಿಡು; ತುರಗ: ಕುದುರೆ; ತಾಗು: ಮುಟ್ಟು; ನೊಂದವು: ಪೆಟ್ಟು; ರಥ: ಬಂಡಿ; ವಾಜಿ: ಕುದುರೆ; ಕೆರಳು: ಕೋಪಗೊಳ್ಳು; ಸರಳು: ಬಾಣ; ಸಾರಥಿ: ಸೂತ; ಕರ: ಕೈ; ಬಿಲ್ಲು: ಚಾಪ; ಕಡಿ: ಸೀಳು; ತೊಲಗು: ದೂರ ಸರಿ;

ಪದವಿಂಗಡಣೆ:
ತರಹರಿಸಿ +ಶರವ್+ಐದರಲಿ+ ಸಂ
ಹರಿಸಿಕೊಳ್ಳೆಂದ್+ಎಚ್ಚೊಡ್+ಈತನ
ತುರಗವನು+ ತಾಗಿದವು +ನೊಂದವು +ರಥದ +ವಾಜಿಗಳು
ಕೆರಳಿ+ ಫಲುಗುಣನ್+ಅರ್ಧಚಂದ್ರದ
ಸರಳಿನಲಿ+ ಸಾರಥಿಯ+ ತುರಗವ
ಕರದ +ಬಿಲ್ಲನು +ಕಡಿಯೆ +ತೊಲಗಿದನಾ +ಕೃಪಾಚಾರ್ಯ

ಅಚ್ಚರಿ:
(೧) ತುರಗ, ವಾಜಿ; ಸರಳು, ಶರ – ಸಮನಾರ್ಥಕ ಪದ

ಪದ್ಯ ೨೧: ಜಯದ್ರಥನು ಯಾರ ಜೊತೆ ರಥವನ್ನು ಏರಿದನು?

ಒಡನೆ ಬಂದನು ಧೌಮ್ಯಮುನಿ ಮೊರೆ
ಯಿಡುತ ಘನ ರಕ್ಷೋಘ್ನಸೂಕ್ತವ
ನಡಿಗಡಿಗೆ ಜಪಿಸುತ ಜಯದ್ರಥ ಬೇಡಬೇಡೆನುತ
ಮಿಡುಕದೈತರಲೌಕಿ ಹೊಕ್ಕನು
ಪಡೆಯ ಮಧ್ಯದ ರಥವನೇರಿಸಿ
ನಡೆದನವ ಸೂಟಿಯಲಿ ತಾಟಿಸಿ ರಥದ ವಾಜಿಗಳ (ಅರಣ್ಯ ಪರ್ವ, ೨೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಆಗ ಧೌಮ್ಯನು ರಕ್ಷೋಘ್ನ ಸೂಕ್ತವನ್ನು ಜಪಿಸುತ್ತಾ ಬೆದರದ ಸೈಂಧವನ ಹಿಂದೆ ಬೇಡ ಬೇಡ ಎನ್ನುತ್ತಾ ಬರಲು, ಸೈಂಧವನು ಸೈನ್ಯದ ಮಧ್ಯದಲ್ಲಿದ್ದ ತನ್ನ ರಥವನ್ನು ಹೊಕ್ಕು ಕುದುರೆಗಳಿಗೆ ಹೊಡೆದು ವೇಗವಾಗಿ ರಥವನ್ನೊಡಿಸಿದನು.

ಅರ್ಥ:
ಒಡನೆ: ಕೂಡಲೆ; ಬಂದು: ಆಗಮಿಸು; ಮುನಿ: ಋಷಿ; ಮೊರೆ: ಕೂಗು; ಘನ: ಶ್ರೇಷ್ಠ; ಸೂಕ್ತ: ವೇದದಲ್ಲಿಯ ಸ್ತೋತ್ರ ಭಾಗ; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಜಪಿಸು: ಪಠಿಸು; ಬೇಡ: ಸಲ್ಲದು; ಮಿಡುಕು:ನಡುಕ, ಕಂಪನ; ಔಕು: ನೂಕು, ತಳ್ಳು; ಹೊಕ್ಕು: ಸೇರು; ಪಡೆ: ಸೈನ್ಯ; ಮಧ್ಯ: ನಡುವೆ; ರಥ: ಬಂಡಿ; ಏರು: ಮೇಲೆ ಹತ್ತು; ನಡೆ: ಚಲಿಸು; ಸೂಟಿ: ವೇಗ; ತಾಟಿಸು: ಹೊಡೆ, ಬಡಿ; ವಾಜಿ: ಕುದುರೆ;

ಪದವಿಂಗಡಣೆ:
ಒಡನೆ +ಬಂದನು +ಧೌಮ್ಯಮುನಿ+ ಮೊರೆ
ಯಿಡುತ +ಘನ +ರಕ್ಷೋಘ್ನ+ಸೂಕ್ತವನ್
ಅಡಿಗಡಿಗೆ +ಜಪಿಸುತ +ಜಯದ್ರಥ +ಬೇಡ+ಬೇಡೆನುತ
ಮಿಡುಕದೈತರಲ್+ಔಕಿ +ಹೊಕ್ಕನು
ಪಡೆಯ +ಮಧ್ಯದ +ರಥವನೇರಿಸಿ
ನಡೆದನವ+ ಸೂಟಿಯಲಿ+ ತಾಟಿಸಿ +ರಥದ +ವಾಜಿಗಳ

ಅಚ್ಚರಿ:
(೧) ಜಯದ್ರಥನು ಹೋದ ಪರಿ – ಹೊಕ್ಕನು ಪಡೆಯ ಮಧ್ಯದ ರಥವನೇರಿಸಿ ನಡೆದನವ ಸೂಟಿಯಲಿ ತಾಟಿಸಿ ರಥದ ವಾಜಿಗಳ

ಪದ್ಯ ೧೮: ಮಾತಲಿಯು ರಥವನ್ನು ಹೇಗೆ ಮುನ್ನಡೆಸಿದನು?

ಎಂದು ರಥವೇರಿದನು ಪಾರ್ಥ ಪು
ರಂದರನ ಸಾರಥಿ ಗುಣೌಘವ
ನೊಂದು ನಾಲಿಗೆಯಿಂದ ಹೊಗಳಿದನಾ ಧನಂಜಯನ
ಗೊಂದಣದ ವಾಘೆಗಳನೆಲವ
ನೊಂದುಗೂಡಿ ಕಿರೀಟಿ ದೃಢವಾ
ಗೆಂದು ಮಾತಲಿ ಚಪ್ಪರಿಸಿದನು ಚಪಲವಾಜಿಗಳ (ಅರಣ್ಯ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಬಳಿಕ ಅರ್ಜುನನು ರಥವನೇಏರಿದನು. ಮಾತಲಿಯು ಅರ್ಜುನನ ಗುಣಗಳನ್ನು ತನ್ನ ನಾಲಿಗೆಯಲ್ಲಿ ಮನಸಾರೆ ಹೊಗಳಿದನು, ನಂತರ ಕುದುರೆಗಳ ಲಗಾಮುಗಳನ್ನೆಲ್ಲಾ ಸರಿಯಾಗಿ ಜೋಡಿಸಿ ಹಿಡಿದು, ಅರ್ಜುನಾ ಗಟ್ಟಿಯಾಗಿ ಕುಳಿತುಕೋ ಎಂದೆಚ್ಚರಿಸಿ ರಥದ ಕುದುರೆಗಳನ್ನು ಹೊಡೆದನು.

ಅರ್ಥ:
ರಥ: ಬಂಡಿ; ಏರು: ಮೇಲೆ ಹತ್ತು; ಪುರಂದರ: ಇಂದ್ರ; ಸಾರಥಿ: ರಥವನ್ನು ಓಡಿಸುವವ; ಗುಣ: ನಡತೆ, ಸ್ವಭಾವ; ಔಘ: ಗುಂಪು, ಸಮೂಹ; ಒಂದು: ಏಕ; ನಾಲಿಗೆ: ಜಿಹ್ವೆ; ಹೊಗಳು: ಪ್ರಶಂಶಿಸು; ಗೊಂದಣ: ಗುಂಪು; ವಾಘೆ: ಲಗಾಮು; ಒಂದುಗೂಡು: ಒಟ್ಟಾಗಿಸು; ಕಿರೀಟಿ: ಅರ್ಜುನ; ದೃಢ: ಗಟ್ಟಿ; ಚಪ್ಪರಿಸು: ಅಪ್ಪಳಿಸು, ಹೊಡೆ; ಚಪಲ: ಚಂಚಲ; ವಾಜಿ: ಕುದುರೆ;

ಪದವಿಂಗಡಣೆ:
ಎಂದು+ ರಥವೇರಿದನು+ ಪಾರ್ಥ +ಪು
ರಂದರನ +ಸಾರಥಿ +ಗುಣೌಘವನ್
ಒಂದು +ನಾಲಿಗೆಯಿಂದ +ಹೊಗಳಿದನ್+ಆ+ ಧನಂಜಯನ
ಗೊಂದಣದ +ವಾಘೆಗಳನೆಲ್ಲವನ್
ಒಂದುಗೂಡಿ +ಕಿರೀಟಿ +ದೃಢವಾ
ಗೆಂದು +ಮಾತಲಿ +ಚಪ್ಪರಿಸಿದನು +ಚಪಲ+ವಾಜಿಗಳ

ಅಚ್ಚರಿ:
(೧) ಪುರಂದರನ ಸಾರಥಿ, ಮಾತಲಿ – ಪದಗಳ ಬಳಕೆ
(೨) ಕಿರೀಟಿ, ಧನಂಜಯ, ಪಾರ್ಥ – ಅರ್ಜುನನನ್ನು ಕರೆದ ಬಗೆ