ಪದ್ಯ ೧೦: ಮಾವುತರು ಎಲ್ಲಿ ನಿದ್ರಿಸಿದರು?

ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿವೆ
ಗ್ಗಳ ಗಜರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು (ದ್ರೋಣ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪ್ರೀತಿಯ ಪತ್ನಿಯೊಡನೆ ಮನ್ಮಥ ಕಲಹದಲ್ಲಿ ಬೆಂಡಾಗಿರುವ ಪತಿಯು ಕಳಶ ಕುಚಗಳ ಮಧ್ಯದಲ್ಲಿ ತಲೆಯಿಟ್ಟು ಮಲಗುವಂತೆ, ಯುದ್ಧ ಶ್ರಮದಿಂದ ಬೆಂಡಾದ ಮಾವುತರು ಆನೆಗಳ ಕುಂಭ ಸ್ಥಳಗಳ ಮೇಲೆ ಮಲಗೆ ಕಣ್ಣು ಮುಚ್ಚಿ ನಿದ್ರಿಸಿದರು.

ಅರ್ಥ:
ಒಲಿದ: ಪ್ರೀತಿಯ; ಕಾಂತೆ: ಪ್ರಿಯತಮೆ; ಕೂಡು: ಜೊತೆ; ಮನುಮಥ: ಮನ್ಮಥ, ಕಾಮದೇವ; ಕಲಹ: ಜಗಳ; ಬೆಂಡು: ತಿರುಳಿಲ್ಲದುದು; ಕಾಂತ: ಪ್ರಿಯತಮ; ಕಳಶ: ಕೊಡ; ಕುಚ: ಮೊಲೆ, ಸ್ತನ; ಮಧ್ಯ: ನಡುವೆ; ಮಲಗು: ನಿದ್ರಿಸು; ರಜನಿ: ರಾತ್ರಿ; ಸಮರ: ಯುದ್ಧ; ಶ್ರಮ: ದಣಿವು; ವೆಗ್ಗಳ: ಶ್ರೇಷ್ಠ; ಗಜ: ಆನೆ; ಗಜರೋಹಕ: ಮಾವುತ; ಕುಂಭ: ಕೊಡ, ಕಲಶ; ಸ್ಥಳ: ಜಾಗ; ಒರಗು: ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ನಿದ್ರೆ: ಶಯನ; ಈಕ್ಷಣ: ಕಣ್ಣು, ನೋಟ; ಮುದ್ರಿತ: ಗುರುತು;

ಪದವಿಂಗಡಣೆ:
ಒಲಿದ +ಕಾಂತೆಯ +ಕೂಡೆ +ಮನುಮಥ
ಕಲಹದಲಿ +ಬೆಂಡಾದ +ಕಾಂತನು
ಕಳಶ+ಕುಚ +ಮಧ್ಯದಲಿ+ ಮಲಗುವವೋಲು +ರಜನಿಯಲಿ
ಒಲಿದ +ಸಮರ+ಶ್ರಮದಲ್+ಅತಿ+ವೆ
ಗ್ಗಳ+ ಗಜರೋಹಕರು+ ಕುಂಭ
ಸ್ಥಳದ +ಮೇಲೊರಗಿದರು +ನಿದ್ರಾ +ಮುದ್ರಿತ+ಈಕ್ಷಣರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಲಿದ ಕಾಂತೆಯ ಕೂಡೆ ಮನುಮಥ ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು

ಪದ್ಯ ೪೧: ದ್ರೋಣರು ಹೇಗೆ ತೋರಿದರು?

ಅರುಣಮಯ ರಥವಾಜಿಗಳ ವಿ
ಸ್ತರದ ಹೇಮದ ಕಳಶ ಸಿಂಧದ
ಸರಳು ತೀವಿದ ಬಂಡಿ ಬಳಿಯಲಿ ಲಕ್ಷಸಂಖ್ಯೆಗಳ
ತರಣಿಯನು ಸೋಲಿಸುವ ರತ್ನಾ
ಭರಣಕಾಂತಿಯ ರಾಯಕಟಕದ
ಗುರುವ ಕಂಡನು ಪಾರ್ಥ ಶಕಟ ವ್ಯೂಹದಗ್ರದಲಿ (ದ್ರೋಣ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನು ಶಕಟ ವ್ಯೂಹದ ಮುಂದೆ ಉಭಯ ರಾಜರ ಗುರುವಾದ ದ್ರೋಣನನ್ನು ಕಂಡನು. ಅವನ ರಥಕ್ಕೆ ಕೆಂಪು ಬಣ್ಣದ ಕುದುರೆಗಳನ್ನು ಕಟ್ಟಿತ್ತು. ಬಂಗಾರದ ಕಳಶವು ಅವನ ಧ್ವಜದಲ್ಲಿ ವಿರಾಜಿಸುತ್ತಿತ್ತು. ಅವನು ಧರಿಸುವ ಆಭರನಗಳ ಕಾಂತಿ ಸೂರ್ಯನ ಪ್ರಭೆಯನ್ನು ಸೋಲಿಸುತ್ತಿತ್ತು.

ಅರ್ಥ:
ಅರುಣ: ಕೆಂಪು ಬಣ್ಣ; ರಥ: ಬಂಡಿ; ವಾಜಿ: ಕುದುರೆ; ವಿಸ್ತರ: ವಿಶಾಲ; ಹೇಮ: ಚಿನ್ನ; ಕಳಶ: ಕುಂಭ; ಸಿಂಧ:ಒಂದು ಬಗೆ ಪತಾಕೆ, ಬಾವುಟ; ಸರಳು: ಬಾಣ; ತೀವಿ: ಚುಚ್ಚು; ಬಂಡಿ: ರಥ; ಬಳಿ: ಹತ್ತಿರ; ಲಕ್ಷ: ಅಸಂಖ್ಯಾತ; ಸಂಖ್ಯೆ: ಎಣಿಕೆ; ತರಣಿ: ಸೂರ್ಯ; ಸೋಲಿಸು: ಪರಾಭವ; ಆಭರಣ: ಒಡವೆ; ಕಾಂತಿ: ಪ್ರಕಾಶ; ಕಟಕ: ಯುದ್ಧ; ರಾಯ: ರಾಜ; ಗುರು: ಆಚಾರ್ಯ; ಕಂಡು: ನೋಡು; ಶಕಟ: ರಥ, ಬಂಡಿ, ಗಾಡಿ; ಅಗ್ರ: ತುದಿ, ಮೊದಲು;

ಪದವಿಂಗಡಣೆ:
ಅರುಣಮಯ +ರಥ+ವಾಜಿಗಳ +ವಿ
ಸ್ತರದ +ಹೇಮದ +ಕಳಶ +ಸಿಂಧದ
ಸರಳು +ತೀವಿದ +ಬಂಡಿ +ಬಳಿಯಲಿ +ಲಕ್ಷ+ಸಂಖ್ಯೆಗಳ
ತರಣಿಯನು +ಸೋಲಿಸುವ +ರತ್ನಾ
ಭರಣ+ಕಾಂತಿಯ +ರಾಯ+ಕಟಕದ
ಗುರುವ +ಕಂಡನು +ಪಾರ್ಥ +ಶಕಟ+ ವ್ಯೂಹದ್+ಅಗ್ರದಲಿ

ಅಚ್ಚರಿ:
(೧) ದ್ರೋಣನು ಕಂಡ ಪರಿ: ತರಣಿಯನು ಸೋಲಿಸುವ ರತ್ನಾಭರಣಕಾಂತಿಯ ರಾಯಕಟಕದ ಗುರುವ ಕಂಡನು

ಪದ್ಯ ೧೩: ಕೃಷ್ಣನು ಅಶ್ವತ್ಥಾಮನನ್ನು ಹೇಗೆ ವರ್ಣಿಸಿದನು?

ಕಳಶ ಸಿಂಧದ ಥಟ್ಟು ಸಮ್ಮುಖ
ದಳವಿಯಲಿ ವಿಕ್ರಮ ದವಾಗ್ನಿಯ
ಝಳದೊಳುರೆ ಕಾಹೇರಿದಾಲಿಯ ಬಿಗಿದ ಹುಬ್ಬುಗಳ
ಹಿಳುಕನವುಕಿದ ತುದಿವೆರಳ ನಡು
ಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ (ಭೀಷ್ಮ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕಲಶದ ಚಿಹ್ನೆಯುಳ್ಳ ಬಾವುಟಗಳನ್ನುಳ್ಳ, ಸೈನ್ಯ ಇದುರಿನಲ್ಲಿದೆ, ಅವನ ಪರಾಕ್ರಮವು ದಾವಾನಲದಂತಿದೆ, ಕಣ್ಣುಗಳು ಕಾದು ಕೆಂಪಾಗಿವೆ, ಹುಬ್ಬುಗಳು ಬಿಗಿದಿವೆ, ತುದಿ ಬೆರಳುಗಳು ಬಾಣವನ್ನು ಅವುಕಿ ಹಿಡಿದೆದೆ, ಹಣೆಗಣ್ಣನಾದ ಶಿವನಂತೆ ಮಹಾಭುಜನಾಗಿ, ಕೊರಳು ಕಪ್ಪಾಗಿರುವ ಅವನು ಮಹಾ ಪರಾಕ್ರಮಿ ಅಶ್ವತ್ಥಾಮನನ್ನು ನೋಡು ಎಂದು ಕೃಷ್ಣನು ತೋರಿಸಿದನು.

ಅರ್ಥ:
ಕಳಶ: ಕುಂಭ; ಸಿಂಧ: ಬಾವುಟ; ಥಟ್ಟು: ಪಕ್ಕ, ಕಡೆ, ಗುಂಪು; ಸಮ್ಮುಖ: ಎದುರು; ಅಳವಿ: ಯುದ್ಧ; ವಿಕ್ರಮ: ಶೂರ, ಸಾಹಸ; ದವಾಗ್ನಿ: ಜೋರಾದ ಬೆಂಕಿ; ಝಳ: ಪ್ರಕಾಶ, ಶಾಖ; ಉರೆ: ಹೆಚ್ಚು; ಕಾಹೇರು: ಉಷ್ಣತೆ ಹೆಚ್ಚಾಗು; ಆಲಿ: ಕಣ್ಣು; ಬಿಗಿ: ಕಟ್ಟು, ಬಂಧಿಸು; ಹುಬ್ಬು: ಕಣ್ಣಿನ ಮೇಲಿನ ರೋಮಾವಳಿ; ಹಿಳುಕು: ಬಾಣದ ಹಿಂಭಾಗ; ಅವುಕು: ನೂಕು, ಹಿಸುಕು; ತುದಿ: ಮುಂಭಾಗ; ವೆರಳು: ಬೆರಳು; ನಡು: ಮಧ್ಯ; ಗಳ: ಕಂಠ; ನೊಸಲು: ಹಣೆ; ನಯನ: ಕಣ್ಣು; ಬಲುಭುಜ: ಮಹಾಬಾಹು; ನೋಡು: ವೀಕ್ಷಿಸು; ನಿಸ್ಸೀಮ: ಅತಿಶೂರ, ಪರಾಕ್ರಮಿ;

ಪದವಿಂಗಡಣೆ:
ಕಳಶ +ಸಿಂಧದ +ಥಟ್ಟು +ಸಮ್ಮುಖದ್
ಅಳವಿಯಲಿ +ವಿಕ್ರಮ+ ದವಾಗ್ನಿಯ
ಝಳದೊಳ್+ಉರೆ+ ಕಾಹೇರಿದ್+ಆಲಿಯ +ಬಿಗಿದ+ ಹುಬ್ಬುಗಳ
ಹಿಳುಕನ್+ಅವುಕಿದ +ತುದಿವೆರಳ+ ನಡು
ಗಳದ +ಕಪ್ಪಿನ +ನೊಸಲ +ನಯನದ
ಬಲುಭುಜನ +ನೋಡ್+ಆತನ್+ಅಶ್ವತ್ಥಾಮ +ನಿಸ್ಸೀಮ

ಅಚ್ಚರಿ:
(೧) ಅಶ್ವತ್ಥಾಮನನ್ನು ಶಿವನಿಗೆ ಹೋಲಿಸುವ ಪರಿ – ನಡುಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ
(೨) ಆಲಿ, ನಯನ – ಸಮನಾರ್ಥಕ ಪದ

ಪದ್ಯ ೪೯: ಕೃಷ್ಣನನ್ನು ಯಾರು ಇದಿರುಗೊಂಡರು?

ಕಟ್ಟಿದವು ಗುಡಿ ಮನೆಗಳಲಿ ಮೇ
ಲ್ಕಟ್ಟು ಬಿಗಿದವು ಪುರದ ನಾರಿಯ
ರುಟ್ಟುತೊಟ್ಟರು ಕಳಶಕನ್ನಡಿ ಸಹಿತ ದೇಶಿಯಲಿ
ಇಟ್ಟಣಿಸಿ ಗಜ ವಾಜಿ ರಥ ಸಾ
ಲಿಟ್ಟು ಹೊರವಡೆ ದನುಜರಾಯ ಘ
ರಟ್ಟನನು ನಡೆದಿದಿರುಗೊಂಡರು ಪಾಂಡುನಂದನರು (ವಿರಾಟ ಪರ್ವ, ೧೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮನೆಗಳ ಮೇಲೆ ಪತಾಕೆಗಳನ್ನು ಕಟ್ಟಿದರು. ಮನೆಯಲ್ಲಿ ಮೇಲ್ಕಟ್ಟುಗಳನ್ನು ಕಟ್ಟಿದರು, ನಗರದ ಸ್ತ್ರೀಯರು ಉತ್ತಮ ವಸ್ತ್ರಗಳನ್ನುಟ್ಟು, ಆಭರಣಗಳನ್ನು ತೊಟ್ಟು ಆ ದೇಶದ ಪದ್ಧತಿಯಂತೆ ಕಳಶ ಕನ್ನಡಿಗಳನ್ನು ಹಿಡಿದು ನಿಂತರು. ಚತುರಂಗ ಸೈನ್ಯವು ಸಾಲಿಟ್ಟು ಹೊರಟಿತು. ರಾಕ್ಷಸರಾಜಮರ್ದನನನ್ನು ಪಾದಚಾರಿಗಳಾದ ಪಾಂಡವರು ಸಪರಿವಾರರಾಗಿ ಇದಿರುಗೊಳ್ಳಲು ಹೊರಟರು.

ಅರ್ಥ:
ಕಟ್ಟು: ನಿರ್ಮಿಸು; ಗುಡಿ: ಆಲಯ, ಮನೆ; ಮನೆ: ಗೃಹ; ಮೇಲ್ಕಟ್ಟು: ಮಂಟಪ ಮೊದಲಾದವುಗಳ ಮೇಲೆ ಕಟ್ಟುವ ಬಟ್ಟೆ, ವಿತಾನ; ಬಿಗಿ: ಕಟ್ಟು; ಪುರ: ಊರು; ನಾರಿ: ಹೆಣ್ಣು; ಉಟ್ಟು: ಧರಿಸು; ತೊಡು: ಧರಿಸು, ಹಾಕಿಕೊಳ್ಳು; ಕಳಶ: ಕುಂಭ; ಕನ್ನಡಿ: ಮುಕುರ; ಸಹಿತ: ಜೊತೆ; ದೇಶಿ: ಆಯಾ ದೇಶದಲ್ಲಿ ಮಾತ್ರ ವ್ಯವಹಾರದಲ್ಲಿರುವ ಉಡುಪು, ಅಲಂಕಾರ, ಆಚಾರ; ಇಟ್ಟಣ: ಮನೋಹರವಾದುದು; ಗಜ: ಆನೆ; ವಾಜಿ: ಕುದುರೆ; ರಥ: ಬಂಡಿ; ಸಾಲು: ಪಂಕ್ತಿ, ಓಲಿ; ಹೊರವೆಡೆ: ಆಚೆ; ದನುಜರಾಯ: ರಾಕ್ಷಸ ರಾಜ; ಘರಟ್ಟ: ಬೀಸುವ ಕಲ್ಲು, ರಾಗಿಕಲ್ಲು; ನಡೆ: ಚಲಿಸ್; ಇದಿರುಗೊಳ್ಳು: ಎದುರುನೋಡು; ನಂದನ: ಮಕ್ಕಳು;

ಪದವಿಂಗಡಣೆ:
ಕಟ್ಟಿದವು +ಗುಡಿ +ಮನೆಗಳಲಿ +ಮೇ
ಲ್ಕಟ್ಟು +ಬಿಗಿದವು +ಪುರದ +ನಾರಿಯರ್
ಉಟ್ಟು+ತೊಟ್ಟರು +ಕಳಶ+ಕನ್ನಡಿ +ಸಹಿತ +ದೇಶಿಯಲಿ
ಇಟ್ಟಣಿಸಿ +ಗಜ +ವಾಜಿ +ರಥ +ಸಾ
ಲಿಟ್ಟು +ಹೊರವಡೆ +ದನುಜರಾಯ +ಘ
ರಟ್ಟನನು+ ನಡೆದ್+ಇದಿರುಗೊಂಡರು+ ಪಾಂಡು+ನಂದನರು

ಅಚ್ಚರಿ:
(೧) ಕೃಷ್ಣನನ್ನು ದನುಜರಾಯ ಘರಟ್ಟನನು ಎಂದು ಕರೆದಿರುವುದು

ಪದ್ಯ ೨೫: ಶ್ರೀಕೃಷ್ಣನು ಯಾವ ನಗರವನ್ನು ಮುತ್ತಿದನು?

ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ದುದು
ಗೆಲುವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ (ಅರಣ್ಯ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಾಲ್ವನು ಬಲರಾಮಾದಿಗಳ ಯುದ್ಧಕ್ಕೆ ಹೆದರಿದನು, ಅವನ ಸೈನ್ಯವು ಭಂಗಗೊಂಡಿತು, ಅವನು ಮತ್ತೆ ತನ್ನ ಊರಿಗೆ ಹಿಂದಿರುಗಿದನು. ಇತ್ತ ನಾನು ರಾಜಸೂಯ ಯಾಗವನ್ನು ಸಮಾಪ್ತಿಗೊಂಡ ಮೇಲೆ ದ್ವಾರಕೆಗೆ ಹಿಂದಿರುಗಿ ಸಾಲ್ವನ ಮುತ್ತಿಗೆಯ ವಿಷಯವನ್ನು ತಿಳಿದು, ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ನಿಶ್ಚಯಿಸಿ ಸಾಲ್ವನಗರವನ್ನು ಮುತ್ತಿದೆನು ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಅಳುಕು: ಹೆದರು; ಮುತ್ತಿಗೆ: ಆವರಿಸುವಿಕೆ; ದಳ: ಸೈನ್ಯ; ಮುರಿ: ಸೀಳು; ನಿಜಪುರ: ತನ್ನಯ ಊರು; ಹಾಯ್ದು: ಹೊರಡು; ಗೆಲುವು: ಜಯ; ವಶ: ಅಧೀನ; ಬಳಿಕ: ನಂತರ; ಕಳಶ: ಶ್ರೇಷ್ಠ; ಮದೀಯ: ನಮ್ಮ; ನಗರ: ಊರು; ಕಳವಳ: ಗೊಂದಲ; ಸಂತೈಸು: ಸಮಾಧಾನ ಪಡಿಸು; ಪಟ್ಟಣ: ನಗರ;

ಪದವಿಂಗಡಣೆ:
ಅಳುಕಿ +ಮುತ್ತಿಗೆದ್+ಎಗೆದು +ಸಾಲ್ವನ
ದಳ +ಮುರಿದು +ನಿಜಪುರಕೆ+ ಹಾಯ್ದುದು
ಗೆಲುವು +ಸಾತ್ಯಕಿ +ರಾಮಕಾಮಾದಿಗಳ+ ವಶವಾಯ್ತು
ಬಳಿಕ+ ನಿಮ್ಮಯ +ರಾಜಸೂಯಕೆ
ಕಳಶವಿಟ್ಟು +ಮದೀಯ +ನಗರಿಯ
ಕಳವಳವ +ಸಂತೈಸಿ +ನಡೆದೆವು +ಸಾಲ್ವ +ಪಟ್ಟಣಕೆ

ಅಚ್ಚರಿ:
(೧) ಕಳಶವಿಟ್ಟು, ಕಳವಳ – ಕಳ ಪದದ ಬಳಕೆ