ಪದ್ಯ ೧೮: ಭೀಮನು ಯಾವ ವ್ಯೂಹವನ್ನು ಭೇದಿಸಿದನು?

ಇದು ನಿಮಗೆ ವಂದನೆಯೆನುತ ನಿಜ
ಗದೆಯಲಾತನ ರಥವ ಹುಡಿಗು
ಟ್ಟಿದನು ಸುರಗಿಯನುಗಿಯಲಪ್ಪಳಿಸಿದನು ಮೋಹರವ
ಇದಿರಲಿರಲಳವಡದೆ ಗುರು ಹಿಂ
ಗಿದನು ಶಕಟವ್ಯೂಹವನು ಮ
ಧ್ಯದೊಳು ಥಟ್ಟುಗಿದುರವಣಿಸಿ ಪವಮಾನಸುತ ನಡೆದ (ದ್ರೋಣ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಗುರುಗಳೇ ಇದೇ ನಿಮಗೆ ನಮಸ್ಕಾರ ಎಂದು ದ್ರೋಣನ ರಥಾನ್ನು ಗದೆಯಿಂದ ಪುಡಿಮಾಡಿದನು. ದ್ರೋಣನು ಕತ್ತಿಯನ್ನು ಸೆಳೆಯಲು, ಅವನ ಸೈನ್ಯವನ್ನು ಅಪ್ಪಳಿಸಿದನು. ಇವನ ಎದುರಿನಲ್ಲಿ ನಿಲ್ಲಲು ಸಾಧ್ಯವಾಗದೆ, ದ್ರೋಣನು ಮರಳಿದನು. ಭೀಮನು ಶಕಟವ್ಯೂಹದ ಮಧ್ಯದಲ್ಲಿ ಹೊಕ್ಕು ಸಿಕ್ಕವರನ್ನೆಲ್ಲಾ ಗುಂಪುಗುಂಪಾಗಿ ಕೊಂದು ವೇಗವಾಗಿ ಮುಂದುವರೆದನು.

ಅರ್ಥ:
ವಂದನೆ: ನಮಸ್ಕಾರ; ನಿಜ: ತನ್ನ; ಗದೆ: ಮುದ್ಗರ; ರಥ: ಬಂಡಿ; ಹುಡಿ: ಹಿಟ್ಟು, ಪುಡಿ; ಸುರಗಿ: ಸಣ್ಣ ಕತ್ತಿ, ಚೂರಿ; ಉಗಿ: ಹೊರಹಾಕು; ಅಪ್ಪಳಿಸು: ತಟ್ಟು, ತಾಗು; ಮೋಹರ: ಯುದ್ಧ; ಇದಿರು: ಎದುರು; ಅಳವಡು: ಹೊಂದು, ಸೇರು, ಕೂಡು; ಗುರು: ಆಚಾರ್ಯ; ಹಿಂಗು: ಹಿಮ್ಮೆಟ್ಟು; ಮಧ್ಯ: ನಡುವೆ; ಥಟ್ಟು: ಗುಂಪು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಪವಮಾನ: ವಾಯು; ಸುತ: ಪುತ್ರ; ನಡೆ: ಚಲಿಸು;

ಪದವಿಂಗಡಣೆ:
ಇದು +ನಿಮಗೆ +ವಂದನೆ+ಎನುತ +ನಿಜ
ಗದೆಯಲ್+ಆತನ +ರಥವ +ಹುಡಿಗು
ಟ್ಟಿದನು +ಸುರಗಿಯನ್+ಉಗಿಯಲ್+ಅಪ್ಪಳಿಸಿದನು +ಮೋಹರವ
ಇದಿರಲ್+ಇರಲ್+ಅಳವಡದೆ+ ಗುರು+ ಹಿಂ
ಗಿದನು +ಶಕಟವ್ಯೂಹವನು +ಮ
ಧ್ಯದೊಳು +ಥಟ್ಟುಗಿದ್+ಉರವಣಿಸಿ +ಪವಮಾನಸುತ +ನಡೆದ

ಅಚ್ಚರಿ:
(೧) ಹಿಮ್ಮೆಟ್ಟು ಎಂದು ಹೇಳುವ ಪರಿ – ಇದಿರಲಿರಲಳವಡದೆ ಗುರು ಹಿಂಗಿದನು

ಪದ್ಯ ೪೧: ದ್ರೋಣರು ಹೇಗೆ ತೋರಿದರು?

ಅರುಣಮಯ ರಥವಾಜಿಗಳ ವಿ
ಸ್ತರದ ಹೇಮದ ಕಳಶ ಸಿಂಧದ
ಸರಳು ತೀವಿದ ಬಂಡಿ ಬಳಿಯಲಿ ಲಕ್ಷಸಂಖ್ಯೆಗಳ
ತರಣಿಯನು ಸೋಲಿಸುವ ರತ್ನಾ
ಭರಣಕಾಂತಿಯ ರಾಯಕಟಕದ
ಗುರುವ ಕಂಡನು ಪಾರ್ಥ ಶಕಟ ವ್ಯೂಹದಗ್ರದಲಿ (ದ್ರೋಣ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನು ಶಕಟ ವ್ಯೂಹದ ಮುಂದೆ ಉಭಯ ರಾಜರ ಗುರುವಾದ ದ್ರೋಣನನ್ನು ಕಂಡನು. ಅವನ ರಥಕ್ಕೆ ಕೆಂಪು ಬಣ್ಣದ ಕುದುರೆಗಳನ್ನು ಕಟ್ಟಿತ್ತು. ಬಂಗಾರದ ಕಳಶವು ಅವನ ಧ್ವಜದಲ್ಲಿ ವಿರಾಜಿಸುತ್ತಿತ್ತು. ಅವನು ಧರಿಸುವ ಆಭರನಗಳ ಕಾಂತಿ ಸೂರ್ಯನ ಪ್ರಭೆಯನ್ನು ಸೋಲಿಸುತ್ತಿತ್ತು.

ಅರ್ಥ:
ಅರುಣ: ಕೆಂಪು ಬಣ್ಣ; ರಥ: ಬಂಡಿ; ವಾಜಿ: ಕುದುರೆ; ವಿಸ್ತರ: ವಿಶಾಲ; ಹೇಮ: ಚಿನ್ನ; ಕಳಶ: ಕುಂಭ; ಸಿಂಧ:ಒಂದು ಬಗೆ ಪತಾಕೆ, ಬಾವುಟ; ಸರಳು: ಬಾಣ; ತೀವಿ: ಚುಚ್ಚು; ಬಂಡಿ: ರಥ; ಬಳಿ: ಹತ್ತಿರ; ಲಕ್ಷ: ಅಸಂಖ್ಯಾತ; ಸಂಖ್ಯೆ: ಎಣಿಕೆ; ತರಣಿ: ಸೂರ್ಯ; ಸೋಲಿಸು: ಪರಾಭವ; ಆಭರಣ: ಒಡವೆ; ಕಾಂತಿ: ಪ್ರಕಾಶ; ಕಟಕ: ಯುದ್ಧ; ರಾಯ: ರಾಜ; ಗುರು: ಆಚಾರ್ಯ; ಕಂಡು: ನೋಡು; ಶಕಟ: ರಥ, ಬಂಡಿ, ಗಾಡಿ; ಅಗ್ರ: ತುದಿ, ಮೊದಲು;

ಪದವಿಂಗಡಣೆ:
ಅರುಣಮಯ +ರಥ+ವಾಜಿಗಳ +ವಿ
ಸ್ತರದ +ಹೇಮದ +ಕಳಶ +ಸಿಂಧದ
ಸರಳು +ತೀವಿದ +ಬಂಡಿ +ಬಳಿಯಲಿ +ಲಕ್ಷ+ಸಂಖ್ಯೆಗಳ
ತರಣಿಯನು +ಸೋಲಿಸುವ +ರತ್ನಾ
ಭರಣ+ಕಾಂತಿಯ +ರಾಯ+ಕಟಕದ
ಗುರುವ +ಕಂಡನು +ಪಾರ್ಥ +ಶಕಟ+ ವ್ಯೂಹದ್+ಅಗ್ರದಲಿ

ಅಚ್ಚರಿ:
(೧) ದ್ರೋಣನು ಕಂಡ ಪರಿ: ತರಣಿಯನು ಸೋಲಿಸುವ ರತ್ನಾಭರಣಕಾಂತಿಯ ರಾಯಕಟಕದ ಗುರುವ ಕಂಡನು

ಪದ್ಯ ೨೮: ದ್ರೋಣನು ಭಟ್ಟರನ್ನು ಯಾರ ಪಾಳೆಯಕ್ಕೆ ಕಳುಹಿಸಿದನು?

ಮುಂದೆ ಶಕಟವ್ಯೂಹದಲಿ ನಡೆ
ತಂದು ನಿಮ್ದನು ದ್ರೋಣ ನಿಜಬಲ
ದಂದವನು ನೆರೆನೋಡಿ ನೋಡಿ ಕಿರೀಟವನು ತೂಗಿ
ಇಂದು ಗೆಲಿದರೆ ಧರ್ಮಸುತನವ
ರಿಂದುಕುಲದಗ್ಗಳರು ಬರಹೇ
ಳೆಂದು ಭಟ್ಟರನಟ್ಟಿದನು ಪಾಂಡವರ ಪಾಳಯಕೆ (ದ್ರೋಣ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ತಾನು ರಚಿಸಿದ ಸೇನೆಯ ಸಂಕೀರ್ಣ ವ್ಯೂಹಗಳ ಮುಂಭಾಗದಲ್ಲಿದ್ದ ಶಕಟವ್ಯೂಹದ ಮುಂದೆ ಬಮ್ದು ಸೈನ್ಯದ ಅಂದವನ್ನು ನೋಡಿ ತೃಪ್ತನಾಗಿ ದ್ರೋಣನು ತಲೆದೂಗಿದನು. ಭಟ್ಟರನ್ನು ಕರೆದು, ಇಂದು ಯುದ್ಧದಲ್ಲಿ ಗೆದ್ದರೆ ಪಾಂಡವರೇ ಚಂದ್ರವಂಶದಲ್ಲಿ ಅಗ್ರಗಣ್ಯರು. ಯುದ್ಧಕ್ಕೆ ಬರಹೇಳಿ ಎಂದು ಪಾಂಡವರ ಪಾಳೆಯಕ್ಕೆ ಕಳಿಸಿದನು.

ಅರ್ಥ:
ಮುಂದೆ: ಎದುರು; ಶಕಟ: ರಥ, ಬಂಡಿ; ವ್ಯೂಹ: ಗುಂಪು; ನಡೆ: ಚಲಿಸು; ನಿಂದು: ಸ್ಥಿರವಾಗಿರು; ಬಲ: ಶಕ್ತಿ; ಅಂದ: ಸೊಗಸು; ನೆರೆ: ಗುಂಪು; ನೋಡು: ವೀಕ್ಷಿಸು; ಕಿರೀಟ: ಮುಕುಟ; ತೂಗು: ಅಲ್ಲಾಡಿಸು; ಗೆಲಿ: ಜಯಿಸು; ಸುತ: ಮಗ; ಇಂದು: ಚಂದ್ರ; ಕುಲ: ವಂಶ; ಅಗ್ಗಳ: ಶ್ರೇಷ್ಠ; ಬರಹೇಳು: ಕರೆ; ಭಟ್ಟ: ಸೈನಿಕ; ಅಟ್ಟು: ಧಾವಿಸು; ಪಾಳಯ: ಬಿಡಾರ;

ಪದವಿಂಗಡಣೆ:
ಮುಂದೆ +ಶಕಟವ್ಯೂಹದಲಿ +ನಡೆ
ತಂದು +ನಿಂದನು +ದ್ರೋಣ +ನಿಜಬಲದ್
ಅಂದವನು +ನೆರೆ+ನೋಡಿ +ನೋಡಿ +ಕಿರೀಟವನು +ತೂಗಿ
ಇಂದು +ಗೆಲಿದರೆ +ಧರ್ಮಸುತನ್+ಅವರ್
ಇಂದುಕುಲದ್+ಅಗ್ಗಳರು +ಬರಹೇ
ಳೆಂದು +ಭಟ್ಟರನ್+ಅಟ್ಟಿದನು +ಪಾಂಡವರ +ಪಾಳಯಕೆ

ಅಚ್ಚರಿ:
(೧) ತಂದು, ಇಂದು, ಎಂದು – ಪ್ರಾಸ ಪದಗಳು
(೨) ಇಂದು ಪದದ ಬಳಕೆ – ಇಂದು ಗೆಲಿದರೆ ಧರ್ಮಸುತನವರಿಂದುಕುಲದಗ್ಗಳರು

ಪದ್ಯ ೧೮: ಶಕಟವ್ಯೂಹದ ಹಿಂಭಾಗದಲ್ಲಿ ಯಾವ ವ್ಯೂಹವು ರಚನೆಯಾಯಿತು?

ಇದಿರೆ ಶಕಟವ್ಯೂಹವದರ
ಗ್ರದಲಿ ದುಶ್ಯಾಸನನು ಕೆಲಬಲ
ದೊದವಿನಲಿ ಬಾಹ್ಲಿಕನು ಸೌಬಲ ಸಿಂಧು ಮಾಗಧರು
ಇದರ ಹಿಂದಣ ಮೈಯೊಳೈಗಾ
ವುದದ ನೀಳದೊಳೆರಡುವರೆ ಗಾ
ವುದದ ವಿಸ್ತಾರದಲಿ ಮಕರವ್ಯೂಹವನು ಬಲಿದ (ದ್ರೋಣ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ವ್ಯೂಹಗಳ ಮುಂದೆ ಪಾಂಡವ ಸೇನೆಗೆ ಅಭಿಮುಖವಾಗಿ ಶಕಟವ್ಯೂಹ ಅದರ ಮುಮ್ದೆ ದುಶ್ಯಾಸನ, ಅವನ ಅಕ್ಕ ಪಕ್ಕಗಳಲ್ಲಿ ಬಾಹ್ಲಿಕ, ಶಕುನಿ, ಶಿಂಧೂ ದೇಶದ ಮಗಧ ದೇಶದ ನಾಯಕರು. ಇದರ ಹಿಂಭಾಗದಲ್ಲಿ ಐದೂ ಗಾವುದ ಉದ್ದ ಎರಡೂವರೆ ಗಾವುದದ ಅಗಲಕ್ಕೆ ಮಕರ ವ್ಯೂಹವನ್ನು ರಚಿಸಿದರು.

ಅರ್ಥ:
ಇದಿರು: ಎದುರು; ಅಗ್ರ: ಮುಂಭಾಗ; ಕೆಲಬಲ: ಅಕ್ಕಪಕ್ಕ, ಎಡಬಲ; ಒದಗು: ಉಂಟಾಗು; ಹಿಂದಣ; ಹಿಂಭಾಗ; ಮೈ: ತನು; ನೀಳ: ಉದ್ದ; ಗಾವು: ಅಳತೆಯ ಪ್ರಮಾಣ; ವಿಸ್ತಾರ: ಹರಡು; ಮಕರ: ಮೊಸಳೆ; ವ್ಯೂಹ: ಗುಂಪು, ಸಮೂಹ; ಬಲಿ: ಗಟ್ಟಿ, ದೃಢ;

ಪದವಿಂಗಡಣೆ:
ಇದಿರೆ +ಶಕಟವ್ಯೂಹವ್+ಅದರ್
ಅಗ್ರದಲಿ +ದುಶ್ಯಾಸನನು +ಕೆಲಬಲದ್
ಒದವಿನಲಿ +ಬಾಹ್ಲಿಕನು +ಸೌಬಲ+ ಸಿಂಧು+ ಮಾಗಧರು
ಇದರ+ ಹಿಂದಣ +ಮೈಯೊಳ್+ಐ+ಗಾ
ವುದದ +ನೀಳದೊಳ್+ಎರಡುವರೆ +ಗಾ
ವುದದ+ ವಿಸ್ತಾರದಲಿ +ಮಕರವ್ಯೂಹವನು +ಬಲಿದ

ಅಚ್ಚರಿ:
(೧) ಗಾವುದ – ಪದದ ಬಳಕೆ, ೪, ೫ ಸಾಲಿನ ಕೊನೆಯ ಪದ

ಪದ್ಯ ೧೭: ದ್ರೋಣನು ಯಾವ ವ್ಯೂಹವನ್ನು ರಚಿಸಿದನು?

ನೆಗಹಿ ಬೀಸುವ ಚೌರಿಗಳ ಸ
ನ್ನೆಗೆ ಚತುರ್ಬಲವೆಲ್ಲ ದ್ರೋಣನ
ದೃಗುಪಥಕೆ ತೋರಿದರು ತಂತಮ್ಮಾಳು ಕುದುರೆಗಳ
ತೆಗೆದು ಯೋಜನವಾರಲಿ ಕಾ
ಳೆಗಕೆ ಶಕಟವ್ಯೂಹವನು ಹೂ
ಣಿಗರ ಬಲಿದನು ಕೌರವೇಂದ್ರಾನುಜರ ಗಡಣದಲಿ (ದ್ರೋಣ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಚೌರಿಗಳನ್ನು ಎತ್ತಿ ಬೀಸಿ ಸನ್ನೆಯನ್ನು ಕೊಡಲು ಎಲ್ಲಾ ಸೇನಾನಾಯಕರೂ ದ್ರೋಣನ ಸಮಕ್ಷಮಕ್ಕೆ ಬಂದು ತಮ್ಮ ಸೈನ್ಯಗಳನ್ನು ತೋರಿಸಿದರು. ಆಗ ದ್ರೋಣನು ಆರು ಯೋಜನ ಅಗಲಕ್ಕೆ ಶಕಟವ್ಯೂಹವನ್ನು ರಚಿಸಿ, ಕೌರವನ ತಮ್ಮಂದಿರನ್ನು ಅದರಲ್ಲಿ ನಿಲಿಸಿದನು.

ಅರ್ಥ:
ನೆಗಹು: ಮೇಲೆತ್ತು; ಬೀಸು: ಒಗೆ, ಎಸೆ; ಚೌರಿ: ಚೌರಿಯ ಕೂದಲು, ಗಂಗಾವನ; ಸನ್ನೆ: ಗುರುತು, ಚಿಹ್ನೆ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ದೃಗು: ಕಣ್ಣು, ನೇತ್ರ; ಪಥ: ದಾರಿ; ತೋರು: ಕಾಣಿಸು; ಆಳು: ಸೈನಿಕ; ಕುದುರೆ: ಅಶ್ವ; ತೆಗೆ: ಹೊರತರು; ಯೋಜನ: ಹೊಂದಿಸುವುದು; ಕಾಳೆಗ: ಯುದ್ಧ; ಶಕಟ: ರಥ, ಬಂಡಿ; ವ್ಯೂಹ: ಗುಂಪು; ಹೂಣಿಗ: ಬಿಲ್ಲುಗಾರ; ಬಲಿ: ಗಟ್ಟಿ, ದೃಢ; ಅನುಜ: ತಮ್ಮ; ಗಡಣ: ಕೂಡಿಸುವಿಕೆ;

ಪದವಿಂಗಡಣೆ:
ನೆಗಹಿ +ಬೀಸುವ +ಚೌರಿಗಳ +ಸ
ನ್ನೆಗೆ +ಚತುರ್ಬಲವೆಲ್ಲ+ ದ್ರೋಣನ
ದೃಗುಪಥಕೆ +ತೋರಿದರು +ತಂತಮ್ಮಾಳು+ ಕುದುರೆಗಳ
ತೆಗೆದು+ ಯೋಜನವ್+ಆರಲಿ +ಕಾ
ಳೆಗಕೆ +ಶಕಟವ್ಯೂಹವನು +ಹೂ
ಣಿಗರ +ಬಲಿದನು +ಕೌರವೇಂದ್ರ+ಅನುಜರ +ಗಡಣದಲಿ

ಅಚ್ಚರಿ:
(೧) ದ, ತ ಅಕ್ಷರದ ಜೋಡಿ ಪದ – ದ್ರೋಣನ ದೃಗುಪಥಕೆ; ತೋರಿದರು ತಂತಮ್ಮಾಳು