ಪದ್ಯ ೪೩: ಕರ್ಣ ಮತ್ತು ದುರ್ಯೋಧನರ ಸ್ನೇಹ ಹೇಗಿತ್ತು?

ಬಂದು ಹಸ್ತಿನಪುರಿಗೆ ರಾಧಾ
ನಮ್ದನನು ದುರ್ಯೋಧನನೈ
ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ
ಅಂದು ಮೊದಲಾಗವರ ಸಖ್ಯಕೆ
ಸಂದ ಕಾಣೆನು ಕರ್ಣ ಕುರುಪತಿ
ಗೊಂದು ಜೀವನವೊಂದೆ ಮನ ಮತವೊಂದೆ ಕೇಳೆಂದ (ಆದಿ ಪರ್ವ, ೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಹಸ್ತಿನಾಪುರದಲ್ಲಿ ಕರ್ಣನು ದುರ್ಯೋಧನನನ್ನು ಕಂಡನು. ಆ ದಿನದಿಂದ ಅವರ ಸ್ನೇಹವು ಅಖಂಡವಾಗಿ ಬೆಳೆಯಿತು. ಅವರ ಜೀವನ ವಿಧಾನ, ಮನಸ್ಸು ಅಭಿಪ್ರಾಯಗಳು ಒಂದೆ ಆದವು.

ಅರ್ಥ:
ಬಂದು: ಆಗಮಿಸು; ನಂದನ: ಮಗ; ಐತಂದು: ಬಂದು ಸೇರು; ಕಂಡು: ನೋಡು; ಕಾಣಿಸು: ತೋರು; ಸಖ್ಯ: ಸ್ನೇಹ; ಸಂದ: ಕಳೆದ, ಹಿಂದಿನ; ಮನ: ಮನಸ್ಸು; ಮತ: ವಿಚಾರ; ಕೇಳು: ಆಲಿಸು; ಜೀವನ: ಬಾಳು;

ಪದವಿಂಗಡಣೆ:
ಬಂದು +ಹಸ್ತಿನಪುರಿಗೆ +ರಾಧಾ
ನಂದನನು +ದುರ್ಯೋಧನನೈ
ತಂದು +ಕಂಡನು +ಕೌರವೇಶ್ವರನ್+ಇವರ +ಕಾಣಿಸಿದ
ಅಂದು +ಮೊದಲಾಗ್+ಅವರ +ಸಖ್ಯಕೆ
ಸಂದ +ಕಾಣೆನು +ಕರ್ಣ+ ಕುರುಪತಿಗ್
ಒಂದು +ಜೀವನವೊಂದೆ+ ಮನ +ಮತವೊಂದೆ +ಕೇಳೆಂದ

ಅಚ್ಚರಿ:
(೧) ಬಂದು, ಅಂದು, ತಂದು, ಒಂದು – ಪ್ರಾಸ ಪದಗಳು
(೨) ಜೀವಗೆಳೆತನವನ್ನು ವಿವರಿಸುವ ಪರಿ – ಕರ್ಣ ಕುರುಪತಿಗೊಂದು ಜೀವನವೊಂದೆ ಮನ ಮತವೊಂದೆ

ಪದ್ಯ ೪೧: ದ್ರೋಣಾಚಾರ್ಯರ ಬಳಿ ಯಾರು ವಿದ್ಯಾರ್ಜನೆಗೆ ಬಂದರು?

ಗರುಡಿಪೂಜಾ ವಿಭವ ಸಮನಂ
ತರದಲನಿಬರು ಸಮವ ತೊಡಗಿದ
ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ
ಬರುತಲಿದ್ದರು ಕೂಡೆ ಹಸ್ತಿನ
ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ
ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ (ಆದಿ ಪರ್ವ, ೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಗರುಡಿಯ ಪೂಜೆಯ ನಮ್ತರ, ರಾಜಕುಮಾರರು ಶಸ್ತ್ರವಿದ್ಯಾಶ್ರಮದಲ್ಲಿ ನಿರತರಾದರು. ಈ ಸುದ್ಧಿಯು ಎಲ್ಲಾ ದಿಕ್ಕುಗಳಲ್ಲಿಯೂ ಹರಡಿ, ಅನೇಕ ಕ್ಷತ್ರಿಯಕುಮಾರರು ದ್ರೋಣಾಚಾರ್ಯರಲ್ಲಿಗೆ ಬಂದು ಶಸ್ತ್ರವಿದ್ಯೆಯನ್ನು ಕಲಿಯಲಾರಂಭಿಸಿದರು.

ಅರ್ಥ:
ಗರುಡಿ: ಶಸ್ತ್ರಾಭ್ಯಾಸದ ಆಲಯ; ವಿಭವ: ವೈಭವ; ಅನಿಬರು: ಅಷ್ಟುಜನ; ನಂತರ: ಆಮೇಲೆ; ಸಮ: ಸರಿಯಾದ; ತೊಡಗು: ಪ್ರಾರಂಭಿಸು; ಅರಸು: ರಾಜ; ಮಕ್ಕಳು: ಕುಮಾರ; ಕೇಳು: ಆಲಿಸು; ನಾನಾ: ಹಲವಾರು; ದಿಗಂತ: ದಿಕ್ಕಿನ ತುದಿ, ಅಂಚು; ಬರು: ಆಗಮಿಸು; ಕೂಡೆ: ಜೊತೆ; ಪಾರ್ಥಿವವರ: ರಾಜರ; ಕುಮಾರ: ಮಕ್ಕಳು; ಕಂಡು: ನೋಡು; ಶಸ್ತ್ರ: ಆಯುಧ; ಪಂಡಿತ: ಪಾಂಡಿತ್ಯ;

ಪದವಿಂಗಡಣೆ:
ಗರುಡಿ+ಪೂಜಾ +ವಿಭವ +ಸಮನಂ
ತರದಲ್+ಅನಿಬರು +ಸಮವ +ತೊಡಗಿದರ್
ಅರಸು+ ಮಕ್ಕಳು+ ಕೇಳಿದರು +ನಾನಾ +ದಿಗಂತದಲಿ
ಬರುತಲಿದ್ದರು +ಕೂಡೆ +ಹಸ್ತಿನ
ಪುರಿಗೆ +ವಿದ್ಯಾರ್ಥಿಗಳು +ಪಾರ್ಥಿವ
ವರ +ಕುಮಾರರು +ಬಂದು +ಕಂಡರು +ಶಸ್ತ್ರ+ ಪಂಡಿತನ

ಅಚ್ಚರಿ:
(೧) ರಾಜರ ಮಕ್ಕಳು ಎಂದು ಹೇಳಲು – ಪಾರ್ಥಿವವರ ಕುಮಾರರು ಪದದ ಬಳಕೆ

ಪದ್ಯ ೪೦: ಭೀಷ್ಮನು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಯಾರ ಬಳಿ ಸೇರಿಸಿದನು?

ವರ ಮುಹೂರ್ತದೊಳವರ ನೂರರು
ವರನು ಕೊಟ್ಟನು ಶಸ್ತ್ರವಿದ್ಯಾ
ಪರಿಣತರ ಮಾಡೆಂದು ದ್ರೋಣನ ಕೈಯಲಾ ಭೀಷ್ಮ
ಗರುಡಿ ಕಟ್ತಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ
ಕುರಿಯ ಹೊಯ್ದರು ಪೂಜಿಸಿದರಾ ಚದುರಚಂಡಿಕೆಯ (ಆದಿ ಪರ್ವ, ೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶುಭಮುಹೂರ್ತವನ್ನು ನಿಶ್ಚಯಿಸಿ ನೂರ ಆರು ಬಾಲಕರನ್ನು ದ್ರೋಣನಿಎ ಒಪ್ಪಿಸಿ, ಇವರನ್ನು ಶಸ್ತ್ರವಿದ್ಯೆಯಲ್ಲಿ ನಿಪುಣರನ್ನಾಗಿಸು ಎಮ್ದು ಭೀಷ್ಮನು ಕೇಳಿಕೊಂಡನು. ಶಸ್ತ್ರವಿದ್ಯಾಭ್ಯಾಸಕ್ಕಾಗಿ ನೂರು ಯೋಜನ ವಿಸ್ತಾರವಾದ ಗರುಡಿಯನ್ನು ಕಟ್ಟಿದರು. ಚಂಡಿಕಾದೇವೆಗೆ ಸಾವಿರ ಕುರಿಗಳನ್ನು ಬಲಿಕೊಟ್ಟು ಪೂಜಿಸಿದರು.

ಅರ್ಥ:
ವರ: ಶ್ರೇಷ್ಠ; ಮುಹೂರ್ತ: ಸಮಯ; ಕೊಡು: ನೀಡು; ಶಸ್ತ್ರ: ಆಯುಧ; ವಿದ್ಯೆ: ಜ್ಞಾನ; ಪರಿಣತ: ಪಂಡಿತ, ತಿಳಿದವ; ಗರುಡಿ: ಅಭ್ಯಾಸದ ಮನೆ; ಕಟ್ಟು: ನಿರ್ಮಿಸು; ನೂರು: ಶತ; ಯೋಜನ: ದೂರದ ಅಳತೆಯ ಒಂದು ಪ್ರಮಾಣ; ವಿಸ್ತಾರ: ಅಗಲ; ಸಾವಿರ: ಸಹಸ್ರ; ಕುರಿ: ಮೇಷ; ಹೊಯ್ದು: ಹೊಡೆ; ಪೂಜಿಸು: ಆರಾಧಿಸು;

ಪದವಿಂಗಡಣೆ:
ವರ +ಮುಹೂರ್ತದೊಳ್+ಅವರ +ನೂರ್
ಅರುವರನು +ಕೊಟ್ಟನು+ ಶಸ್ತ್ರ+ವಿದ್ಯಾ
ಪರಿಣತರ +ಮಾಡೆಂದು +ದ್ರೋಣನ +ಕೈಯಲಾ +ಭೀಷ್ಮ
ಗರುಡಿ +ಕಟ್ಟಿತು +ನೂರು +ಯೋಜನ
ವರೆಯ +ವಿಸ್ತಾರದಲಿ +ಸಾವಿರ
ಕುರಿಯ+ ಹೊಯ್ದರು +ಪೂಜಿಸಿದರಾ +ಚದುರ+ಚಂಡಿಕೆಯ

ಅಚ್ಚರಿ:
(೧) ನೂರಾರು ಎಂದು ಹೇಳಲು – ನೂರರುವರು ಪದದ ಬಳಕೆ

ಪದ್ಯ ೩೯: ದ್ರೋಣನು ಹೇಗೆ ಮಹಾಧನಪತಿಯಾದನು?

ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ಕಂಡಲೆದುರ್ದೀ ಮುನಿಯನೀಗಲೆ ಸಂತವಿಡಿಯೆಂದು
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗ
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ (ಆದಿ ಪರ್ವ, ೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಈ ಚಾತುರ್ಯವನ್ನು ಕಂಡು ಬೆರಗಾದ ಕೌರವ ಪಾಂಡವರು ಭೀಶ್ಮನ ಬಳಿಗೆ ಬಂದು ದ್ರೋಣನನ್ನು ಸ್ವಾಗತಿಸಿ, ಅವನನ್ನು ಇಲ್ಲೇ ಇರುವಂತೆ ಮಾಡಿರೆಂದು ಬಹಳವಾಗಿ ಬೇಡಿಕೊಂಡರು. ಭೀಷ್ಮನು ದ್ರೋಣನನ್ನು ಕಂಡು ಅವನಿಗೆ ಅಪಾರವಾದ ಹಣವನ್ನೂ, ಸ್ಥಾನವನ್ನೂ ಕೊಟ್ಟನು. ದ್ರೋಣನು ಮಹಾಧನಪತಿಯಾದನು.

ಅರ್ಥ:
ಕಂಡು: ನೋಡು; ಬೆರಗು: ಆಶ್ಚರ್ಯ; ಕುಮಾರ: ಪುತ್ರ; ತಂಡ: ಗುಂಪು; ಐದು: ಬಂದು ಸೇರು; ಮುನಿ: ಋಷಿ; ಸಂತವಿಡು: ಸಮಾಧಾನಮಾಡು; ಚಂಡ: ಶೂರ, ಪರಾಕ್ರಮಿ; ಭುಜಬಲ: ಶೂರ; ಕಾಣಿಸು: ಭೇಟಿಯಾಗು; ಕೊಡು: ನೀಡು; ಅಖಂಡ: ಎಲ್ಲಾ; ವಿಭವ: ಸಿರಿ, ಸಂಪತ್ತು; ಅತುಳ: ಬಹಳ; ಧನಪತಿ: ಸಿರಿವಂತ;

ಪದವಿಂಗಡಣೆ:
ಕಂಡು +ಬೆರಗಾದುದು +ಕುಮಾರರ
ತಂಡ +ತನತನಗ್+ಐದಿ +ಭೀಷ್ಮನ
ಕಂಡಲೆದುರ್ದ್+ಈ+ ಮುನಿಯನ್+ಈಗಲೆ +ಸಂತವಿಡಿಯೆಂದು
ಚಂಡ +ಭುಜಬಲನ್+ಅವರ +ಕಾಣಿಸಿ
ಕೊಂಡು +ಕೊಟ್ಟನು+ ಭೀಷ್ಮನವರಿಗ್
ಅಖಂಡ +ವಿಭವವನ್+ಅತುಳ +ಧನಪತಿಯಾದನಾ +ದ್ರೋಣ

ಅಚ್ಚರಿ:
(೧) ತಂಡ, ಕಂಡ, ಚಂಡ, ಅಖಂಡ; ಕಂಡು, ಕೊಂಡು – ಪ್ರಾಸ ಪದಗಳು
(೨) ಭೀಷ್ಮನನ್ನು ಚಂಡಭುಜಬಲ ಎಂದು ಕರೆದಿರುವುದು

ಪದ್ಯ ೩೮: ಅಶ್ವತ್ಥಾಮನು ಉಂಗುರವನ್ನು ಹೇಗೆ ಮೇಲಕ್ಕೆತ್ತಿದನು?

ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಕೆಗೆಚ್ಚು ಹಿಳುಕಿನ
ಶಿರಕೆ ಶರವಾ ಹಿಳುಕಿನಲಿ ಕಣೆಯೆಚ್ಚು ಬಂಧದಲಿ
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಡೆಪನ ಹೆಡೆವಣಿಯನು
ದ್ಧರಿಸುವಂತಿರೆ ತೆಗೆದು ಬಿಸುಟನು ರತುನಮುದ್ರಿಕೆಯ (ಆದಿ ಪರ್ವ, ೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಬಿಲ್ಲಿನಲ್ಲಿ ಬಾಣವನ್ನು ಹೂಡಿ, ರತ್ನದುಂಗುರಕ್ಕೆ ಹೊಡೆದು, ಆ ಬಾಣದ ಮೇಲ್ಭಾಗಕ್ಕೆ ಇನ್ನೊಂದು ಬಾನವನ್ನು ಹೊಡೆದು ಬಂಧಿಸಿ, ಈ ರೀತಿಯಾಗಿ ಬಾಣಗಳನ್ನು ಹೊಡೆಯುತ್ತಾ ನಿಮಿಷಮಾತ್ರದಲ್ಲಿಯೇ ಮೇಲಿನ ಬಾಣವನ್ನು ಹಿದಿದು ಆದಿಶೇಷನ ಹೆಡೆಯ ಮಣಿಯನ್ನು ಮೇಲಕ್ಕೆ ತೆಗೆದನೋ ಎಂಬಂತೆ ರತ್ನದುಂಗುರವನ್ನು ಮೇಲಕ್ಕೆ ತೆಗೆದು ಹಾಕಿದನು.

ಅರ್ಥ:
ಸರಳ: ಬಾಣ; ತೊಡಚು: ಹೂಡು; ಮಣಿ: ರತ್ನ; ಬಂಧುರ: ಬಾಗಿರುವುದು; ಮುದ್ರಿಕೆ: ಮೊಹರು ಮಾಡಲು ಬಳಸುವ ಲೋಹದ ವಸ್ತು, ಮುದ್ರೆ; ಎಚ್ಚು: ಬಾಣ ಪ್ರಯೋಗ ಮಾಡು; ಹಿಳುಕು: ಬಾಣದ ಹಿಂಭಾಗ; ಶಿರ: ತಲೆ; ಶರ: ಬಾಣ; ಕಣೆ: ಬಾಣ; ಬಂಧ: ಕಟ್ಟು, ಬಂಧನ; ಸಂದರ್ಭ: ರಚನೆ, ನಿರ್ಮಾಣ; ನಿಮಿಷಾಂತರ: ಅರ್ಧ ನಿಮಿಷಕ್ಕೆ; ಅಂತರ: ದೂರ; ಫಡೆಪ: ಆದಿಶೇಷ; ಹೆಡೆ: ಶಿರ; ಉದ್ಧರಿಸು: ಹೆಚ್ಚಾಗು, ಮೇಲೇಳು; ತೆಗೆ: ಹೊರತರು; ಬಿಸುಟು: ಹೊರಹಾಕು; ರತುನ: ರತ್ನ, ಬೆಲೆಬಾಳುವ ಹರಳು;

ಪದವಿಂಗಡಣೆ:
ಸರಳ+ ತೊಡಚಿ +ತದೀಯ +ಮಣಿ +ಬಂ
ಧುರದ +ಮುದ್ರಿಕೆಗ್+ಎಚ್ಚು +ಹಿಳುಕಿನ
ಶಿರಕೆ +ಶರವಾ +ಹಿಳುಕಿನಲಿ +ಕಣೆ+ಎಚ್ಚು +ಬಂಧದಲಿ
ಸರಳ +ಸಂದರ್ಭದಲಿ +ನಿಮಿಷಾಂ
ತರಕೆ +ಫಡೆಪನ +ಹೆಡೆವಣಿಯನ್
ಉದ್ಧರಿಸುವಂತಿರೆ+ ತೆಗೆದು +ಬಿಸುಟನು +ರತುನ+ಮುದ್ರಿಕೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಫಡೆಪನ ಹೆಡೆವಣಿಯನುದ್ಧರಿಸುವಂತಿರೆ
(೨) ಸರಳ, ಶರ,ಕಣೆ – ಸಮಾನಾರ್ಥಕ ಪದಗಳು

ಪದ್ಯ ೩೭: ಮಕ್ಕಳು ಕೂಪದ ದಡದಲ್ಲೇಕೆ ನಿಂತರು?

ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಥಿರನೃಪನ ಹರಳುಂ
ಗುರು ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನಿಂದ್ರನೆಂದನು ಬೇಗೆ ತೆಗೆಯೆಂದು (ಆದಿ ಪರ್ವ, ೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆ ಬಾಲಕರ ಗುಂಪಿನೊಡನೆ ಸೇರಿಕೊಂಡು ನೋಡುತ್ತಿರುವಾಗ ಯುಧಿಷ್ಠಿರನ ವಜ್ರದುಂಗುರವು ಬೆರಳಿನಿಂದ ಜಾರಿ ಆಳವಾದ ಗುಂಡಿಯಲ್ಲಿ ಬಿದ್ದಿತು. ನೂರಾರು ಹುಡುಗರು ಗುಂಡಿಯ ದಡದಲ್ಲಿ ನಿಂತು ಕೆಳಕ್ಕೆ ನೋಡಿ ಉಂಗುರವನ್ನು ಮೇಲಕ್ಕೆ ತರಲು ಸಾಧ್ಯವಿಲ್ಲವೆಂದು ಮಾತನಾದುತ್ತಿರಲು, ದ್ರೋಣನು ಅದನ್ನುಬ್ ಏಗೆ ತೆಗೆಯೆಂದು ತನ್ನ ಮಗ ಅಶ್ವತ್ಥಾಮನಿಗೆ ಹೇಳಿದನು.

ಅರ್ಥ:
ಬೆರಸು: ಕೂಡಿಸು; ನೆರವಿ: ಗುಂಪು, ಸಮೂಹ; ನೋಡು: ವೀಕ್ಷಿಸು; ನೃಪ: ರಾಜ; ಹರಳು: ಬೆಲೆಬಾಳುವ ರತ್ನ; ಉಂಗುರ: ಬೆರಳಿಗೆ ಹಾಕುವ ಆಭರನ; ವಿಘಾತ: ಕೇಡು, ಹಾನಿ, ಬಿಡುವುದು; ಬಿದ್ದು: ಜಾರು; ಅಗಾಧ: ದೊಡ್ಡ; ಕೂಪ: ಬಾವಿ; ನೆರೆ: ಸೇರು; ತಡಿ: ದಡ; ನಿಂದು: ನಿಲ್ಲು; ನೂರು: ಶತ; ನಿರೀಕ್ಷಿಸಿ: ಕಾಯುವುದು; ಸಾಧ್ಯ: ಮಾಡಬೇಕಾದ; ಮಗ: ಪುತ್ರ; ಮುನಿ: ಋಷಿ; ಬೇಗ: ಶೀಘ್ರ; ತೆಗೆ: ಹೊರತರು;

ಪದವಿಂಗಡಣೆ:
ಬೆರಸಿದನು +ನೆರವಿಯನು +ನೋಡು
ತ್ತಿರೆ+ ಯುಧಿಷ್ಠಿರ+ನೃಪನ +ಹರಳುಂ
ಗುರು +ವಿಘಾತಿಯೊಳುಗಿದು+ ಬಿದ್ದುದ್+ ಅಗಾಧ +ಕೂಪದಲಿ
ನೆರೆದು +ತಡಿಯಲಿ +ನಿಂದು +ನೂರ್+ಅರು
ವರು +ನಿರೀಕ್ಷಿಸಿ+ ಸಾಧ್ಯವಲ್ಲೆನು
ತಿರೆ +ಮಗಂಗೆ +ಮುನೀಂದ್ರನ್+ಎಂದನು +ಬೇಗೆ +ತೆಗೆಯೆಂದು

ಅಚ್ಚರಿ:
(೧) ನೂರರುವರು – ನೂರ ಆರು ಮಕ್ಕಳು ಎಂದು ಹೇಳಲು ಬಳಸಿದ ಪದ

ಪದ್ಯ ೩೪: ದ್ರುಪದನು ದ್ರೋಣನ ಸ್ನೇಹವನ್ನು ಏಕೆ ಅಲ್ಲಗಳೆದನು?

ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ
ಧೀರರಿಗೆ ಹಂದೆಗಳಿಗೆತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ (ಆದಿ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ವಿದ್ವಾಂಸರಿಗೂ, ಮುರ್ಖರಿಗೂ, ಗಂಭೀರಾದವರಿಗೂ, ನಾಚಿಕೆಗೆಟ್ಟ ಭಂಡರಿಗೂ, ವೇದವಿಹಿತವಾದ ಆಚಾರವುಳ್ಳವರಿಗೂ, ಅನಾಚಾರದಲ್ಲಿ ಮುಳುಗಿರುವವರಿಗೂ, ಧೀರರಿಗೂ, ಹೇಡಿಗಳಿಗೂ, ಎಲ್ಲಿ ಹೊಂದಿಕೆಯಾಗುತ್ತದೆ? ರಾಜರಿಗೂ, ಬಡ ಬ್ರಾಹ್ಮಣರಿಗೂ ಎಲ್ಲಿಯ ಸ್ನೇಹ ಎಂದು ದ್ರುಪದನು ಕೇಳಿದನು.

ಅರ್ಥ:
ಸೂರಿ: ವಿದ್ವಾಂಸ; ಅತಿ: ಬಹಳ; ಮೂರ್ಖ: ಮೂಢ; ಗಂಭೀರ: ಘನವಾದ; ಭಂಡ: ನಾಚಿಕೆ ಇಲ್ಲದವನು; ವೇದಾಚಾರ: ವೇದವಿಹಿತವಾದ ಆಚಾರವುಳ್ಳವ; ಪ್ರಸಕ್ತ: ಸದ್ಯದ, ತೊಡಗಿದ; ಧೀರ: ಶೂರ; ಹಂದೆ: ಅಂಜುಬುರುಕ, ಹೇಡಿ; ಸೇರು: ಜೋಡಿ; ಭೂಪ: ರಾಜ; ಬಡ: ದಾರಿದ್ರ; ಹಾರುವ: ಬ್ರಾಹ್ಮಣ; ಎತ್ತಣ: ಎಲ್ಲಿಯ; ಸಖತನ: ಮೈತ್ರಿ;

ಪದವಿಂಗಡಣೆ:
ಸೂರಿಗಳಿಗ್+ಅತಿ +ಮೂರ್ಖರಿಗೆ+ ಗಂ
ಭೀರರಿಗೆ +ಭಂಡರಿಗೆ +ವೇದಾ
ಚಾರ +ಸಂಯುಕ್ತರಿಗ್+ಅನಾಚಾರ +ಪ್ರಸಕ್ತರಿಗೆ
ಧೀರರಿಗೆ+ ಹಂದೆಗಳಿಗ್+ಎತ್ತಣ
ಸೇರುವೆಗಳೈ+ ಭೂಪರಿಗೆ+ ಬಡ
ಹಾರುವರಿಗ್+ಎತ್ತಣದು+ ಸಖತನವ್+ಎಂದನಾ +ದ್ರುಪದ

ಅಚ್ಚರಿ:
(೧) ವೈರುದ್ಯ ಪದಗಳ ಬಳಕೆ – ಸೂರಿ, ಮೂರ್ಖ; ಗಂಭೀರ, ಭಂಡ, ವೇದಾಚಾರ, ಅನಾಚಾರ; ಧೀರ, ಹಂದೆ;

ಪದ್ಯ ೩೩: ದ್ರೋಣನು ಪಾಂಚಾಲನಿಗೆ ಏನು ಹೇಳಿದನು?

ಏನೆಲವೊ ಪಾಂಚಾಲ ಚಿಕ್ಕಂ
ದಾನು ನೀನೊಂದಾಗಿ ತಂದೆಯೊ
ಳೇನನರಿತೆವು ಮರೆದು ಕಳೆದಾ ಹಾ ಮಹಾದೇವ
ಏನು ಬಂದಿರಿಯೆಂಬ ಗುಣ ವಚ
ನಾನುರಾಗವು ಸಾಲದೇ ಧನ
ವೇನು ಫಲ ಕಕ್ಕುಲಿತೆಯೆಮಗಿಲ್ಲೆಂದನಾ ದ್ರೋಣ (ಆದಿ ಪರ್ವ, ೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲವೋ ಪಾಮ್ಚಾಲ ಏನೆಮ್ದು ತಿಳಿದೆ, ಚಿಕ್ಕಂದಿನಲ್ಲಿ ನಾನೂ ನೀನೂ ಒಂದಾಗಿ ನನ್ನ ತಂದೆಯ ಹತ್ತಿರ ಏನನ್ನು ಕಲಿತೆವೆಂಬುದನ್ನು ಮರೆತುಬಿಟ್ಟೆಯಾ? ಶಿವ ಶಿವಾ? ಏನು ಬಂದಿರಿ ಎಂಬ ಪ್ರೀತಿಯ ಮಾತನ್ನು ಆಡಿದರೆ ಸಾಲದ್? ಧನದಿಂದ ಏನು? ಆ ಕಕ್ಕುಲಾತಿ ನನಗಿಲ್ಲ ಎಂದು ದ್ರೋಣನು ಹೇಳಿದನು.

ಅರ್ಥ:
ಚಿಕ್ಕಂದ: ಚಿಕ್ಕವರಿದ್ದಾಗ; ತಂದೆ: ಪಿತ; ಅರಿ: ತಿಳಿ; ಮರೆ: ಜ್ಞಾಪಕವಿಲ್ಲದ ಸ್ಥಿತಿ; ಕಳೆದಾ: ಗತಿಸಿದ; ಬಂದಿರಿ: ಆಗಮಿಸಿದಿರಿ; ಗುಣ: ನಡತೆ; ವಚನ: ಮಾತು; ಅನುರಾಗ: ಪ್ರೀತಿ; ಸಾಲದೇ: ಸಾಕಾಗು; ಧನ: ದುಡ್ಡು; ಫಲ: ಪ್ರಯೋಜನ; ಕಕ್ಕುಲಿತೆ: ಚಿಂತೆ, ಸಂಶಯ;

ಪದವಿಂಗಡಣೆ:
ಏನೆಲವೊ +ಪಾಂಚಾಲ +ಚಿಕ್ಕಂದ್
ಆನು +ನೀನ್+ಒಂದಾಗಿ +ತಂದೆಯೊಳ್
ಏನನ್+ಅರಿತೆವು +ಮರೆದು +ಕಳೆದಾ +ಹಾ +ಮಹಾದೇವ
ಏನು +ಬಂದಿರಿ+ಎಂಬ +ಗುಣ +ವಚನ
ಅನುರಾಗವು +ಸಾಲದೇ +ಧನವ್
ಏನು +ಫಲ +ಕಕ್ಕುಲಿತೆ+ಎಮಗಿಲ್ಲೆಂದನಾ +ದ್ರೋಣ

ಅಚ್ಚರಿ:
(೧) ಪ್ರೀತಿಯನ್ನು ತೋರಿಸುವ ರೀತಿ – ಏನು ಬಂದಿರಿಯೆಂಬ ಗುಣ ವಚನಾನುರಾಗವು ಸಾಲದೇ
(೧) ಏನೆಲವೋ, ಏನನ್, ಏನು – ಪದದ ಬಳಕೆ

ಪದ್ಯ ೩೧: ದ್ರುಪದನೇಕೆ ದ್ರೋಣನನ್ನು ಭೇಟಿಯಾಗಲಿಲ್ಲ?

ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿವರ್ಗ
ತಿರಿವ ಹಾರುವರೊಡನೆ ಭೂಮೀ
ಶ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯಬೇಡೆನೆ ಬಂದು ಬಾಗಿಲಲವ ನಿವಾರಿಸಿದ (ಆದಿ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಧನಮದ ಅಧಿಕವಾದ ಪ್ರತಾಪದ ಮದ ಮೊದಲಾದವು ದ್ರುಪದನ ಮನಸ್ಸಿನಲ್ಲಿ ಹೊಕ್ಕು ಅವುಗಳ ಪಾದಧೂಳಿಯಿಂದ ಮನಸ್ಸಿನ ಸ್ವಚ್ಛತೆಯು ಮಾಸಿಹೋಯಿತು. ದ್ರುಪದನು ದ್ವಾರಪಾಲಕನಿಗೆ ತಿರುಗಾಡುವ ಬ್ರಾಹ್ಮನನೊಡನೆ ರಾಜನಿಗೆ ಎಲ್ಲಿಯ ಸ್ನೇಹ? ಅವನನ್ನು ಕರೆಯಬೇಡ, ಹೋಗಿಬಿಡಲಿ ಎಂದು ಹೇಳಿದನು. ದ್ವಾರಪಾಲಕನು ಬಂದು ದೊರೆಯ ಮಾತನ್ನು ಹೇಳಿ ದ್ರೋಣನನ್ನು ತಡೆದನು.

ಅರ್ಥ:
ಸಿರಿ: ಐಶ್ವರ್ಯ; ಮದ: ಅಹಂಕಾರ; ಅಧಿಕ: ಹೆಚ್ಚು; ಪ್ರತಾಪ: ಪರಾಕ್ರಮ; ಉತ್ಕರ: ಹೆಚ್ಚು; ಮೊದಲಾದ: ಮುಂತಾದ; ಸಂಚರಣ: ಸಂಚಾರ; ರಜ: ಧೂಳು, ಹುಡಿ, ಅಂಧಕಾರ; ಮಾಸು: ಮಲಿನವಾಗು, ಕೊಳೆಯಾಗು; ಮನ: ಮನಸ್ಸು; ಮಡಿ: ಸ್ವಚ್ಛ; ವರ್ಗ: ಗುಂಪು; ತಿರಿ: ಸುತ್ತಾಡು; ಹಾರುವ: ಬ್ರಾಹ್ಮಣ; ಭೂಮೀಶ್ವರ: ರಾಜ; ಎತ್ತಣ: ಎಲ್ಲಿಯ; ಮೈತ್ರಿ: ಸ್ನೇಹ; ಹೋಗು: ತೆರಳು; ಕರೆ: ಬರೆಮಾಡು; ಬಾಗಿಲಲವ: ಕಾವಲುಗಾರ; ನಿವಾರಿಸು: ಹೋಗಲಾಡಿಸು;

ಪದವಿಂಗಡಣೆ:
ಸಿರಿಯ +ಮದವಧಿಕ +ಪ್ರತಾಪ
ಉತ್ಕರದ +ಮದ +ಮೊದಲಾದ +ಮದ +ಸಂ
ಚರಣ+ ರಜದಲಿ +ಮಾಸಿತ್+ಈತನ +ಮನದ+ ಮಡಿವರ್ಗ
ತಿರಿವ+ ಹಾರುವರೊಡನೆ+ ಭೂಮೀ
ಶ್ವರರಿಗ್+ಎತ್ತಣ +ಮೈತ್ರಿ +ಹೋಗಲಿ
ಕರೆಯಬೇಡ್+ಎನೆ +ಬಂದು +ಬಾಗಿಲಲವ +ನಿವಾರಿಸಿದ

ಅಚ್ಚರಿ:
(೧) ಅಹಂಕಾರದ ಮಾತು: ತಿರಿವ ಹಾರುವರೊಡನೆ ಭೂಮೀಶ್ವರರಿಗೆತ್ತಣ ಮೈತ್ರಿ
(೨) ಮದ ಪದದ ಬಳಕೆ – ಸಿರಿಯ ಮದವಧಿಕ ಪ್ರತಾಪೋತ್ಕರದ ಮದ ಮೊದಲಾದ ಮದ
(೩) ರೂಪಕದ ಬಳಕೆ – ಮದ ಸಂಚರಣ ರಜದಲಿ ಮಾಸಿತೀತನ ಮನದ ಮಡಿವರ್ಗ

ಪದ್ಯ ೩೦: ದ್ರೋಣನು ತನ್ನ ಪರಿಚಯವನ್ನು ದ್ವಾರಪಾಲಕನಿಗೆ ಹೇಗೆ ಮಾಡಿದನು?

ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿದಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ (ಆದಿ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೋಣನು ದ್ರುಪದರಾಜನ ಅರಮನೆಗೆ ಬಮ್ದು, ಬಾಗಿಲು ಕಾಯುತ್ತಿದ್ದವನಿಗೆ ಎಲವೋ, ನಾವು ನಿಮ್ಮ ರಾಜನಿಗೆ ಪೂರ್ವ ಕಾಲದ ಸ್ನೇಹಿತರು ಅವನ ಆಪ್ತ ಮಿತ್ರರು. ದ್ರೋಣನೆನ್ನುವುದು ನನ್ನ ಹೆಸರು, ನಿಮ್ಮ ರಾಜನಿಗೆ ಹೇಳು ಎನ್ನಲು, ದೂತನು ಬಂದು ದ್ರುಪದನಿಗೆ ದ್ರೋಣನ ಮಾತುಗಳನ್ನು ತಿಳಿಸಿದನು.

ಅರ್ಥ:
ಬಂದು: ಆಗಮಿಸು; ರಾಯ: ರಾಜ; ಮಂದಿರ: ಆಲಯ; ಬಾಗಿಲು: ಕದ; ಅರಸ: ರಾಜ; ಪೂರ್ವ: ಹಿಂದೆ; ಮಿತ್ರ: ಸ್ನೇಹಿತ; ಮುನಿ: ಋಷಿ; ಅಭಿದಾನ: ಹೆಸರು; ಹೇಳು: ತಿಳಿಸು; ಕಳುಹು: ತೆರಳು; ಬಿನ್ನಹ: ಕೋರಿಕೆ; ಹದ: ಸ್ಥಿತಿ;

ಪದವಿಂಗಡಣೆ:
ಬಂದನ್+ಈತನು +ದ್ರುಪದ +ರಾಯನ
ಮಂದಿರಕೆ+ಆ+ ಬಾಗಿಲವನೊಡನ್
ಎಂದನ್+ಎಲವೋ +ನಾವು +ನಿಮ್ಮರಸಂಗೆ +ಪೂರ್ವದಲಿ
ಸಂದ +ಮಿತ್ರರು+ ದ್ರೋಣ+ಮುನಿಪತಿ
ಎಂದು +ನಮ್ಮಭಿದಾನ +ನೀ +ಹೇ
ಳೆಂದು +ಕಳುಹಲು+ ಬಂದು+ ಬಿನ್ನಹ +ಮಾಡಿದನು +ಹದನ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ