ಪದ್ಯ ೪೪: ದುರ್ಯೋಧನನೇಕೆ ಆಶ್ಚರ್ಯಗೊಂಡ?

ಮುರಿದು ಬರುತಿದೆ ಜೀಯ ನಾಯಕ
ರುರಿವವರ ಬಲುಗಾಯದಲಿ ಕು
ಕ್ಕುರಿಸಿದರು ಗಂಧರ್ವರಿಗೆ ಕಡೆವನದ ಕಾಹಿನಲಿ
ಮರಳಿ ಪಾಳೆಯ ಬಿಡಲಿ ಮೇಣ್ ಹಗೆ
ಯಿರಿತಕಂಗೈಸುವರು ಬಿಡು ಕೈ
ಮರೆಯಬೇಡೆನೆ ಬೆರಳ ಮೂಗಿನಲರಸ ಬೆರಗಾದ (ಅರಣ್ಯ ಪರ್ವ, ೧೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ದೂತರು, ಜೀಯ ನಮ್ಮವರು ಸೋತು ಹಿಮ್ಮೆಟ್ಟಿ ಬರುತ್ತಿದ್ದಾರೆ. ಗಂಧರ್ವರು ವನದ ಅಂಚಿನಲ್ಲಿ ಸಜ್ಜಾಗಿ ನಿಂತಿದ್ದಾರೆ. ನಮ್ಮವರು ಹೊಡೆತ ತಿಂದು ಕುಕ್ಕುರಿಸಿದ್ದಾರೆ. ಪಾಳೆಯ ಮರಳಲಿ ಅಥವಾ
ಶತ್ರುಗಳ ಹೊಡೆತವನ್ನು ಸೈರಿಸಿ ಗೆಲ್ಲಬಲ್ಲವರನ್ನು ಕಳಿಸು ಎಂದು ಭಟರು ಹೇಳಲು ಆಶ್ಚರ್ಯಚಕಿತನಾದ ದುರ್ಯೋಧನನು ತನ್ನ ಮೂಗಿನ ಮೇಲೆ ಬೆರಳಿಟ್ಟು ಕೊಂಡನು.

ಅರ್ಥ:
ಮುರಿ: ಸೀಳು; ಬರುತಿದೆ: ಆಗಮನ; ಜೀಯ: ಒಡೆಯ, ನಾಯಕ; ಬಲು: ತುಂಬ; ಗಾಯ: ಪೆಟ್ಟು; ಕುಕ್ಕುರಿಸು: ಬೀಳು, ಕೂತುಕೋ; ಕಡೆ: ಕೊನೆ; ವನ: ಕಾಡು; ಕಾಹಿ: ಕಾಯುವವ; ಮರಳಿ: ಪುನಃ; ಪಾಳೆ: ಪಾಳೆಯ, ಸೀಮೆ; ಬಿಡು: ತೊರೆ; ಮೇಣ್: ಅಥವಾ; ಹಗೆ: ವೈರತ್ವ; ತಿವಿ: ಚುಚ್ಚು; ಅಂಗೈಸು: ಸ್ವೀಕರಿಸು; ಬಿಡು: ತೊರೆ; ಕೈಮರೆ: ಕೈ ಅಡ್ಡವಾಗಿಡು; ಬೆರಳು: ಅಂಗುಲಿ; ಮೂಗು: ನಾಸಿಕ; ಅರಸ: ರಾಜ; ಬೆರಗು: ವಿಸ್ಮಯ, ಸೋಜಿಗ;

ಪದವಿಂಗಡಣೆ:
ಮುರಿದು +ಬರುತಿದೆ +ಜೀಯ +ನಾಯಕ
ರುರಿವವರ +ಬಲು+ಗಾಯದಲಿ+ ಕು
ಕ್ಕುರಿಸಿದರು+ ಗಂಧರ್ವರಿಗೆ +ಕಡೆ+ವನದ +ಕಾಹಿನಲಿ
ಮರಳಿ +ಪಾಳೆಯ +ಬಿಡಲಿ+ ಮೇಣ್ +ಹಗೆ
ಯಿರಿತಕ್+ ಅಂಗೈಸುವರು +ಬಿಡು +ಕೈ
ಮರೆಯಬೇಡ್+ಎನೆ +ಬೆರಳ+ ಮೂಗಿನಲ್+ಅರಸ +ಬೆರಗಾದ

ಅಚ್ಚರಿ:
(೧) ಆಶ್ಚರ್ಯವನ್ನು ಚಿತ್ರಿಸುವ ಪರಿ – ಬೆರಳ ಮೂಗಿನಲರಸ ಬೆರಗಾದ

ಪದ್ಯ ೪೩: ಕೌರವನ ಬಾಗಿಲಲ್ಲಿ ಯಾರು ಬಂದು ನಿಂತರು?

ಮುರಿದುದಿದು ಗಂಧರ್ವ ಬಲ ಮಿ
ಕ್ಕುರುಬಿಕೊಂಡೇ ಬಂದುದಗ್ಗದ
ಗರುವರಳಿದುದು ಬರಿಯ ದುರ್ಯಶವುಳಿದುದರಸಂಗೆ
ಕರಿತುರಗ ರಥಪಾಯದಳ ಹೆಣ
ಹೊರಳಿಗಟ್ಟಿತು ಪಾಳೆಯದ ಗೋ
ಪುರದ ಹೊರ ಬಾಹೆಯಲಿ ನಿಂದುದು ಬಲಕೆ ಬೇಹವರು (ಅರಣ್ಯ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೌರವರ ಸೈನ್ಯ ಮುರಿಯಿತು. ಗಂಧರ್ವರು ಇವರನ್ನು ಅಟ್ಟಿಸಿಕೊಂಡು ಬಂದರು. ಸೈನ್ಯದಲ್ಲಿದ್ದ ಬಲಶಾಲಿಗಳು ಮಡಿದರು, ದುರ್ಯೋಧನನಿಗೆ ದುರ್ಯಶ ಬಂದಿತು, ಕೌರವರ ಚತುರಂಗ ಸೈನ್ಯದಲ್ಲಿದ್ದವರ ಹೆಣಗಳುರುಳಿದವು. ಕೌರವನ ಪಾಳೆಯದ ಮಹಾದ್ವಾರದ ಬಳಿ ಅಳಿದುಳಿದ ಸೈನ್ಯವು ಬಂದು ನಿಂತಿತು.

ಅರ್ಥ:
ಮುರಿ: ಸೀಳು; ಗಂಧರ್ವ: ದೇವತೆಗಳ ಒಂದು ಗುಂಪು; ಬಲ: ಶಕ್ತಿ; ಮಿಕ್ಕ: ಉಳಿದ; ಉರುಬು: ಅತಿಶಯವಾದ ವೇಗ, ಮೇಲೆಬೀಳು; ಬಂದು: ಆಗಮನ; ಅಗ್ಗ: ಶ್ರೇಷ್ಠ; ಗರುವ: ಗರ್ವ, ಸೊಕ್ಕು; ಅಳಿ: ನಾಶಾಅಗು; ಬರಿ: ಕೇವಲ; ಯಶ: ಯಶಸ್ಸು, ಸಾಧನೆ; ಉಳಿ: ಮಿಕ್ಕು; ಅರಸ: ರಾಜ; ಕರಿ: ಆನೆ; ತುರಗ: ಕುದುರೆ; ರಥ; ಬಂಡಿ, ತೇರು; ಪಾಯದಳ: ಕಾಲಾಳು, ಸೈನ್ಯ; ಹೆಣ: ಸತ್ತ ದೇಹ; ಹೊರಳು: ಉರುಳಾಡು; ಪಾಳೆ: ಪಾಳೆಯ, ಸೀಮೆ; ಗೋಪುರ: ಮಹಾದ್ವಾರ; ಹೊರ: ಆಚೆ; ಬಾಹೆ: ಬದಿ, ಹೊರಭಾಗ; ನಿಂದು: ನಿಲ್ಲು; ಬೇಹು: ಗೂಢಚರ್ಯೆ;

ಪದವಿಂಗಡಣೆ:
ಮುರಿದುದ್+ಇದು +ಗಂಧರ್ವ +ಬಲ +ಮಿಕ್ಕ್
ಉರುಬಿಕೊಂಡೇ +ಬಂದುದ್+ಅಗ್ಗದ
ಗರುವರ್+ಅಳಿದುದು +ಬರಿಯ +ದುರ್ಯಶವ್+ಉಳಿದುದ್+ಅರಸಂಗೆ
ಕರಿ+ತುರಗ+ ರಥ+ಪಾಯದಳ +ಹೆಣ
ಹೊರಳಿಗಟ್ಟಿತು +ಪಾಳೆಯದ +ಗೋ
ಪುರದ +ಹೊರ +ಬಾಹೆಯಲಿ +ನಿಂದುದು +ಬಲಕೆ +ಬೇಹವರು

ಅಚ್ಚರಿ:
(೧) ದುರ್ಯೋಧನನ ಅಪದಶೆಯನ್ನು ಹೇಳುವ ಪರಿ – ಅಗ್ಗದ ಗರುವರಳಿದುದು ಬರಿಯ ದುರ್ಯಶವುಳಿದುದರಸಂಗೆ

ಪದ್ಯ ೪೨: ದೇವತೆಗಳ ಪರಾಕ್ರಮ ಹೇಗಿತ್ತು?

ಆರು ನಿಲುವರು ದೇವಲೋಕದ
ವೀರರಲ್ಲಾ ವಿಗಡರೆಸುಗೆಯ
ಭೂರಿ ಬಾಣದ ಹಿಂಡು ತರಿದವು ಹೊಗುವ ಗಂಡಿಗರ
ವಾರುವವ ಮುಖದಿರುಹಿದವು ಮದ
ವಾರಣಂಗಳ ಕೊಡಹಿದವು ಹೊಂ
ದೇರು ಮುಗ್ಗಿದವೊಗ್ಗು ಮುರಿದುದು ಮಿಗುವ ಕಾಲಾಳ (ಅರಣ್ಯ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಯಾರು ತಾನೆ ದೇವಲೋಕದ ವೀರರೆದುರು ನಿಲ್ಲಲು ಸಾಧ್ಯ? ದೇವತೆಗಳು ಬಿಟ್ಟ ಬಾಣಗಳು ಯುದ್ಧಕ್ಕೆ ಬಂದ ವೀರರನ್ನು ಕತ್ತರಿಸಿ ಹಾಕಿದವು. ಕುದುರೆಗಳು ಹಿಂದಕ್ಕೆ ಸರಿದವು, ಮದಗಜಗಳನ್ನು ಕೊಡವಿ ಹಾಕಿದವು, ಚಿನ್ನದ ರಥಗಳು ಮುಗ್ಗುರಿಸಿದವು, ನುಗ್ಗುವ ಕಾಲಾಳುಗಳ ಗುಂಪು ಛಿದ್ರಗೊಂಡವು.

ಅರ್ಥ:
ನಿಲು: ಎದುರಿಸು, ತಡೆ; ದೇವಲೊಕ: ಸ್ವರ್ಗ; ಲೋಕ: ಜಗತ್ತು; ದೇವತೆ: ಸುರರು; ವೀರ: ಶೂರ, ಪರಾಕ್ರಮಿ; ವಿಗಡ: ಶೌರ್ಯ, ಪರಾಕ್ರಮ; ಎಸುಗೆ: ಬಾಣದ ಹೊಡೆತ; ಭೂರಿ: ಹೆಚ್ಚು, ಅಧಿಕ; ಬಾಣ: ಅಂಬು; ಹಿಂಡು: ಗುಂಪು; ತರಿ:ಕಡಿ, ಕತ್ತರಿಸು; ಹೊಗು: ಒಳಸೇರು, ಪ್ರವೇಶಿಸು; ಗಂಡಿಗ: ಶೂರ; ವಾರುವ: ಕುದುರೆ, ಅಶ್ವ; ಮುಖ: ಆನನ; ಮುಖದಿರುಹು: ಒಪ್ಪಿಗೆಯಾಗದೆ ತೆರಳು; ಮದ: ಮತ್ತು, ಅಮಲು; ವಾರಣ: ಆನೆ; ಕೊಡಹು: ಹೊಡೆದು ಹಾಕು; ಹೊಂದೇರು: ಚಿನ್ನದ ರಥ; ಮುಗ್ಗು: ಬೀಳು; ಮುರಿ: ಸೀಳು; ಮಿಗು: ಹೆಚ್ಚಾಗು, ಅಧಿಕವಾಗು; ಕಾಲಾಳ: ಸೈನ್ಯ;

ಪದವಿಂಗಡಣೆ:
ಆರು +ನಿಲುವರು +ದೇವ+ಲೋಕದ
ವೀರರಲ್ಲಾ+ ವಿಗಡರ್+ಎಸುಗೆಯ
ಭೂರಿ +ಬಾಣದ +ಹಿಂಡು +ತರಿದವು+ ಹೊಗುವ +ಗಂಡಿಗರ
ವಾರುವವ+ ಮುಖದಿರುಹಿದವು+ ಮದ
ವಾರಣಂಗಳ +ಕೊಡಹಿದವು +ಹೊಂ
ದೇರು +ಮುಗ್ಗಿದವ್+ಒಗ್ಗು +ಮುರಿದುದು +ಮಿಗುವ+ ಕಾಲಾಳ

ಅಚ್ಚರಿ:
(೧) ವಾರುವ, ವಾರಣ – ಪದಗಳ ಬಳಕೆ
(೨) ಸುರರ ಪರಾಕ್ರಮ – ವಿಗಡರೆಸುಗೆಯ ಭೂರಿ ಬಾಣದ ಹಿಂಡು ತರಿದವು ಹೊಗುವ ಗಂಡಿಗರ

ಪದ್ಯ ೪೧: ಗಂಧರ್ವರು ಏನು ಯೋಚಿಸಿ ಯುದ್ಧಕ್ಕೆ ನಿಂತರು?

ಆತುದಿದು ತೋಪಿನಲಿ ಗಂಧ
ರ್ವಾತಿರೇಕವ ಸೈರಿಸುತ ಪದ
ಘಾತ ಧೂಳೀಪಟಲ ಪರಿಚುಂಬಿಸಿದುದಂಬರವ
ಭೀತಿ ಬಿಟ್ಟುದೆ ಮನುಜರಿಗೆ ನ
ಮ್ಮಾತಗಳ ಕೂಡಹುದಲೈ ಕಾ
ಲಾತುದೇ ಕಲಿತನವೆನುತ ಕೈಕೊಂಡರವಗಡಿಸಿ (ಅರಣ್ಯ ಪರ್ವ, ೧೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಎದುರು ಬಂದ ಗಂಧರ್ವರ ದಳವನ್ನು ನಿಲ್ಲಿಸಿ, ಕೌರವರ ಸೈನ್ಯವು ಯುದ್ಧವನ್ನಾರಂಭಿಸಿದರು. ಕಾಲ್ತುಳಿತದ ಧೂಳು ಆಕಾಶವನ್ನು ಆವರಿಸಿತು, ಮನುಷ್ಯರಿಗೆ ನಮ್ಮಲ್ಲಿ ಭಯವಿಲ್ಲದಂತಾಯಿತೇ? ಹೌದು ಅವರಿಗೆ ಪರಾಕ್ರಮ ಬಂದಿದೆ, ಎನ್ನುತ್ತಾ ಯುದ್ಧಕ್ಕಾರಂಭಿಸಿದರು.

ಅರ್ಥ:
ಆತು: ಎದುರಿಸು; ತೋಪು: ಗುಂಪು; ಗಂಧರ್ವ: ದೇವತೆಗಳ ಗುಂಪು; ಅತಿರೇಕ: ಅತಿಶಯ; ಸೈರಿಸು: ತಾಳು, ಸಹನೆ; ಪದಘಾತ: ಕಾಲ್ತುಳಿತ; ಪದ: ಪಾದ, ಚರಣ; ಘಾತ: ಹೊಡೆತ, ಪೆಟ್ಟು; ಧೂಳು: ಮಣ್ಣಿನ ಪುಡಿ; ಪಟಲ: ಪರದೆ, ಸಮೂಹ; ಚುಂಬಿಸು: ಮುತ್ತುನೀಡು, ಮುಟ್ಟು; ಅಂಬರ: ಆಗಸ; ಭೀತಿ: ಭಯ; ಬಿಟ್ಟು: ತೊರೆ; ಮನುಜ: ಮಾನವ; ಕೂಡ: ಜೊತೆ; ಅವಗಡಿಸು: ವಿರೋಧಿಸು; ಕಲಿತು: ಅಭ್ಯಾಸಮಾಡು; ಕಾಲ: ಸಮಯ;

ಪದವಿಂಗಡಣೆ:
ಆತುದಿದು +ತೋಪಿನಲಿ +ಗಂಧ
ರ್ವ+ಅತಿರೇಕವ+ ಸೈರಿಸುತ +ಪದ
ಘಾತ +ಧೂಳೀ+ಪಟಲ +ಪರಿ+ಚುಂಬಿಸಿದುದ್+ಅಂಬರವ
ಭೀತಿ +ಬಿಟ್ಟುದೆ +ಮನುಜರಿಗೆ+ ನ
ಮ್ಮಾತಗಳ+ ಕೂಡಹುದಲೈ +ಕಾ
ಲಾತುದೇ +ಕಲಿತನವೆನುತ+ ಕೈಕೊಂಡರ್+ಅವಗಡಿಸಿ

ಅಚ್ಚರಿ:
(೧) ಹೆಚ್ಚಿನ ಧೂಳು ಎಂದು ಹೇಳಲು – ಪದಘಾತ ಧೂಳೀಪಟಲ ಪರಿಚುಂಬಿಸಿದುದಂಬರವ
(೨) ಕ ಕಾರದ ಸಾಲು ಪದ – ಕೂಡಹುದಲೈ ಕಾಲಾತುದೇ ಕಲಿತನವೆನುತ ಕೈಕೊಂಡರವಗಡಿಸಿ

ಪದ್ಯ ೪೦: ಚಿತ್ರಸೇನನ ಸೈನ್ಯದವರು ಹೇಗೆ ಮುನ್ನಡೆದರು?

ಅವರು ಮರ್ತ್ಯರು ನಮ್ಮದಕಟಾ
ದಿವಿಜರೀ ವಿಧಿಯಾದುದೇ ಕವಿ
ಕವಿಯೆನುತ ಬೇಹವರಿಗಿತ್ತನು ರಣಕೆ ವೀಳೆಯವ
ಗವಿಯ ಗರುವರು ಗಾಢಿಸಿತು ಮಾ
ನವರ ಮುರುಕಕೆ ಮುರಿದುದೀ ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ (ಅರಣ್ಯ ಪರ್ವ, ೧೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅವರು ಮನುಷ್ಯರು, ನಾವು ದೇವತೆಗಳು, ಅಯ್ಯೋ ನಮಗೆ ಈ ದುರ್ಗತಿ ಬಂದಿತೇ! ಎಂದುಕೊಂಡು ತನ್ನ ಆಪ್ತರಿಗೆ ಹೋಗಿ ಶತ್ರುಗಳನ್ನು ಮುತ್ತಿರಿ, ಎಂದು ಚಿತ್ರಸೇನನು ಯುದ್ಧಕ್ಕೆ ವೀಳೆಯವನ್ನು ಕೊಟ್ಟನು. ಚಿತ್ರಸೇನನ ಕಡೆಯವರು, ಈ ಮನುಷ್ಯರ ಉಪಟಳ ಹೆಚ್ಚಿತು, ಮನುಷ್ಯರ ಬಲಕ್ಕೆ ದೇವತೆಗಳು ಸೋಲುವುದೇ? ಇದೆಂತಹ ದುರ್ವಿಧಿ! ಈ ಯುದ್ಧವನ್ನು ಸುಡಲಿ ಎಮ್ದು ವೇಗದಿಂದ ಯುದ್ಧಕ್ಕೆ ಹೊರಟರು.

ಅರ್ಥ:
ಮರ್ತ್ಯರು: ಮನುಷ್ಯ; ಅಕಟ: ಅಯ್ಯೋ; ದಿವಿಜ: ದೇವತೆ; ವಿಧಿ: ನಿಯಮ, ಬ್ರಹ್ಮ; ಕವಿ: ಆವರಿಸು; ಬೇಹು:ಗೂಢಚರ್ಯೆ; ರಣ: ಯುದ್ಧ; ವೀಳೆ: ಆಮಂತ್ರಣ; ಗವಿ: ಆಶ್ರಯಸ್ಥಾನ; ಗರುವ: ಶ್ರೇಷ್ಠ, ಶೂರ; ಗಾಢಿಸು: ತುಂಬು; ಮಾನವ: ಮನುಷ್ಯ; ಮುರುಕ: ಸೊಕ್ಕು, ಗರ್ವ; ಮುರಿ: ಸೀಳು; ಸುರ: ದೇವತೆ; ನಿವಹ: ಗುಂಪು; ಸುಡು: ದಹಿಸು; ಆಹವ: ಯುದ್ಧ; ಐದು: ಬಂದು ಸೇರು; ಸೂಟಿ: ವೇಗ, ರಭಸ;

ಪದವಿಂಗಡಣೆ:
ಅವರು +ಮರ್ತ್ಯರು +ನಮ್ಮದ್+ಅಕಟಾ
ದಿವಿಜರೀ+ ವಿಧಿಯಾದುದೇ +ಕವಿ
ಕವಿ+ಎನುತ +ಬೇಹವರಿಗಿತ್ತನು+ ರಣಕೆ +ವೀಳೆಯವ
ಗವಿಯ +ಗರುವರು +ಗಾಢಿಸಿತು+ ಮಾ
ನವರ+ ಮುರುಕಕೆ +ಮುರಿದುದೀ +ಸುರ
ನಿವಹ+ ಸುಡಲ್+ಆಹವವನ್+ಎನುತ್+ಐದಿದರು +ಸೂಟಿಯಲಿ

ಅಚ್ಚರಿ:
(೧) ತ್ರಿವಳಿ ಪದಗಳು – ಗವಿಯ ಗರುವರು ಗಾಢಿಸಿತು; ಮಾನವರ ಮುರುಕಕೆ ಮುರಿದುದೀ; ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ

ಪದ್ಯ ೩೯: ಚಿತ್ರಸೇನಂಗೆ ಕಾವಲುಗಾರರು ಏನು ಹೇಳಿದರು?

ತೋಟ ಹುಡುಹುಡಿಯಾಯ್ತು ಮುರಿದುದು
ತೋಟಿಯಲಿ ನಮ್ಮವರು ಹಗೆಗಳ
ಗಾಟವವರಾಚೆಯಲಿ ದುರ್ಬಲ ನಮ್ಮದೀಚೆಯಲಿ
ಆಟವಿಕದಳ ಹೊಯ್ದು ಮಿಂಡರ
ಮೀಟನೆತ್ತಿದರವರು ಕಾಹಿನ
ಕೋಟಲೆಗೆ ನಾವೋಲ್ಲೆವೆಂದರು ಚಿತ್ರಸೇನಂಗೆ (ಅರಣ್ಯ ಪರ್ವ, ೧೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ತೋಟ ಹಾಳಾಯಿತು, ಶತ್ರುಗಳು ಬಲಶಾಲಿಗಳು, ನಮ್ಮವರು ದುರ್ಬಲರು, ಅವರು ನಮ್ಮವರನ್ನು ಬಡಿದು ಹಾಕಿದರು, ನಮಗೆ ಈ ಕಾವಲು ಕಾಯುವ ಕೆಲಸವೇ ಬೇಡ ಎಂದು ಗಂಧರ್ವರು ಚಿತ್ರಸೇನನಿಗೆ ತಿಳಿಸಿದರು.

ಅರ್ಥ:
ತೋಟ: ಹಣ್ಣುಗಳನ್ನು ಬೆಳೆಯುವ ಭೂಮಿ; ಹುಡುಹುಡಿ: ಹಾಳಾಗು; ಮುರಿ: ಸೀಳು; ತೋಟಿ: ಕಲಹ, ಜಗಳ; ಹಗೆ: ವೈರಿ; ಗಾಟ: ದೊಡ್ಡಿತು; ಆಚೆ: ಹೊರಗಡೆ; ದುರ್ಬಲ: ನಿಶ್ಯಕ್ತ; ಈಚೆ: ಈಭಾಗ; ಆಟವಿಕ: ಆಟಗಾರ, ಧೂರ್ತ; ದಳ: ಸೈನ್ಯ; ಹೊಯ್ದು: ಹೊಡೆ; ಮಿಂಡ: ವೀರ, ಶೂರ; ಮೀಟನೆತ್ತು: ಸನ್ನೆಗೋಲಿನಿಂದ ಮೇಲಕೆತ್ತು; ಕಾಹಿ: ಕಾಯುವವ, ರಕ್ಷಿಸುವವ; ಕೋಟಲೆ: ತೊಂದರೆ, ಕಾಟ; ಒಲ್ಲೆ: ಸಮ್ಮತಿವಿಲ್ಲದ ಸ್ಥಿತಿ;

ಪದವಿಂಗಡಣೆ:
ತೋಟ +ಹುಡುಹುಡಿಯಾಯ್ತು +ಮುರಿದುದು
ತೋಟಿಯಲಿ +ನಮ್ಮವರು +ಹಗೆಗಳಗ್
ಆಟವವರ್+ಆಚೆಯಲಿ +ದುರ್ಬಲ +ನಮ್ಮದ್+ಈಚೆಯಲಿ
ಆಟವಿಕದಳ +ಹೊಯ್ದು +ಮಿಂಡರ
ಮೀಟನೆತ್ತಿದರ್+ಅವರು +ಕಾಹಿನ
ಕೋಟಲೆಗೆ +ನಾವೋಲ್ಲೆವೆಂದರು +ಚಿತ್ರಸೇನಂಗೆ

ಅಚ್ಚರಿ:
(೧) ತೋಟ, ತೋಟಿ – ಪ್ರಾಸ ಪದ
(೨) ಜೋಡಿ ಅಕ್ಷರದ ಪದಗಳು – ಕಾಹಿನ ಕೋಟಲೆಗೆ; ಮಿಂಡರ ಮೀಟನೆತ್ತಿದರವರು

ಪದ್ಯ ೩೮: ಹಣ್ಣಿನ ಗಿಡಗಳಿಗೆ ಬಂದ ದುಸ್ಥಿತಿ ಎಂತಹುದು?

ಕದಡಿದವು ಸರಸಿಗಳು ಕೆಡೆದವು
ಕದಳಿಗಳು ಗೊನೆಸಹಿತ ಮುಂಡಿಗೆ
ಮುದುಡಿ ನೆಲಕೊರಗಿದವು ಮಿರುಗುವ ನಾಗವಲ್ಲಿಗಳು
ತುದಿಗೊನೆಯ ಚೆಂದೆಂಗು ಖುರ್ಜೂ
ರದಲಿ ಕಾಣೆನು ಹುರುಳ ನಾರಂ
ಗದ ವಿರಾಮವನೇನನೆಂಬೆನು ನಿಮಿಷ ಮಾತ್ರದಲಿ (ಅರಣ್ಯ ಪರ್ವ, ೧೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸರೋವರಗಳು ಕದಡಿದವು, ಗೊನೆಸಹಿತ ಬಾಳೆ ಗಿಡಗಳು ಬಿದ್ದವು, ಕೇದಗೆ ನೆಲಕ್ಕೊರಗಿದವು, ಮಿರುಗುವ ವೀಳೆಯದೆಲೆಯ ಬಳ್ಳಿಗಳು, ಗೊನೆ ಬಿಟ್ಟ ಕೆಂಪು ತೆಂಗಿನ ಕಾಯಿ ಗೊನೆಗಳು, ಖರ್ಜೂರಗಳು ನಾಶವಾದವು. ಕಿತ್ತಲೆ ಗಿಡಗಳಿಗೆ ಬಂದ ದುಸ್ಥಿತಿಯನ್ನು ನಾನು ಏನೆಂದು ಹೇಳಲಿ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಕದಡು: ಬಗ್ಗಡ, ರಾಡಿ; ಸರಸಿ: ಸರೋವರ; ಕೆಡೆ: ಬೀಳು, ಕುಸಿ; ಕದಳಿ: ಬಾಳೆ; ಗೊನೆ: ತುದಿ, ಅಗ್ರಭಾಗ, ಗೊಂಚಲು; ಸಹಿತ: ಜೊತೆ; ಮುಂಡಿಗೆ: ಕಟ್ಟು, ಕಂತೆ; ಮುದುಡು: ಬಾಗು, ಕೊಂಕು; ನೆಲ: ಭೂಮಿ; ಒರಗು: ಮಲಗು, ಕೆಳಕ್ಕೆ ಬಾಗು; ಮಿರುಗು: ಕಾಂತಿ, ಹೊಳಪು; ನಾಗವಲ್ಲಿ: ವೀಳ್ಯದೆಲೆ; ತುದಿ: ಅಗ್ರಭಾಗ; ಚೆಂದೆಂಗು: ಚೆಲುವಾಗ ತೆಂಗು; ಕಾಣೆ: ತೋರು; ನಾರಂಗ: ಕಿತ್ತಲೆ; ವಿರಾಮ: ಬಿಡುವು; ನಿಮಿಷ: ಕ್ಷಣ;

ಪದವಿಂಗಡಣೆ:
ಕದಡಿದವು +ಸರಸಿಗಳು +ಕೆಡೆದವು
ಕದಳಿಗಳು +ಗೊನೆ+ಸಹಿತ+ ಮುಂಡಿಗೆ
ಮುದುಡಿ +ನೆಲಕೊರಗಿದವು+ ಮಿರುಗುವ +ನಾಗವಲ್ಲಿಗಳು
ತುದಿ+ಗೊನೆಯ +ಚೆಂದೆಂಗು +ಖುರ್ಜೂ
ರದಲಿ +ಕಾಣೆನು +ಹುರುಳ +ನಾರಂ
ಗದ +ವಿರಾಮವನ್+ಏನನೆಂಬೆನು +ನಿಮಿಷ +ಮಾತ್ರದಲಿ

ಅಚ್ಚರಿ:
(೧) ಕದಳಿ, ಮುಂಡಿಗೆ, ನಾಗವಲ್ಲಿ, ತೆಂಗು, ಖರ್ಜೂರ, ನಾರಂಗ – ಗಿಡಗಳ ಹೆಸರು

ಪದ್ಯ ೩೭: ಯಾವ ಮರಗಳು ಸೈನ್ಯರ ಕಾಲ್ತುಳಿತಕ್ಕೆ ಬಿದ್ದವು?

ಬಲದ ಪದಘಟ್ಟಣೆಗೆ ಹೆಮ್ಮರ
ನುಲಿದು ಬಿದ್ದವು ಸಾಲ ಪೂಗಾ
ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ
ಫಲ ಪಲಾಶ ರಸಾಲ ಶಮಿಗು
ಗ್ಗುಳ ಮಧೂಕಾಶೋಕ ಬಿಲ್ವಾ
ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ (ಅರಣ್ಯ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈನ್ಯದ ಕಾಲ್ತುಳಿತಕ್ಕೆ, ಹೆಮ್ಮರಗಳು ಸದ್ದು ಮಾಡುತ್ತಾ ಮುರಿದು ಬಿದ್ದವು. ನಿಮಿಷ ಮಾತ್ರದಲ್ಲಿ ಸಾಲ, ಅಡಕೆ, ಬೇಲ, ಲವಂಗ, ತುಂಬುರ, ನಿಮ್ಬೆ, ದಾಳಿಂಬೆ, ಮುತ್ತುಗ, ಮಾವು, ಬನ್ನಿ, ಗುಗ್ಗಳ, ಹಿಪ್ಪೆ, ಅಶೋಕ, ಬಿಲ್ವ, ನೆಲ್ಲಿ, ಕಂಚಿ ಮೊದಲಾದ ಮರಗಳು ಹಣ್ಣುಗಳೊಡನೆ ಬಿದ್ದವು.

ಅರ್ಥ:
ಬಲ: ಸೈನ್ಯ; ಪದ: ಕಾಲು; ಘಟ್ಟಣೆ: ಅಪ್ಪಳಿಸುವಿಕೆ, ಹೊಡೆತ; ಹೆಮ್ಮರ: ದೊಡ್ಡ ಮರ; ಉಲಿ: ಧ್ವನಿ; ಬಿದ್ದು: ಕೆಳಕ್ಕೆ ಉರುಳು; ಸಾಲ: ಮತ್ತಿಮರ, ಸರ್ಜ ವೃಕ್ಷ; ಪೂಗ: ಅಡಿಕೆಮರ; ಆವಳಿ: ಸಾಲು, ಗುಂಪು; ಕಪಿತ್ಥ: ಬೇಲದ ಮರ; ತುಂಬುರ: ಒಂದು ಬಗೆಯ ಮರ; ನಿಂಬ: ಮಂದಾರವೃಕ್ಷ, ನಿಂಬೆ; ಫಲ: ಹಣ್ಣು; ಪಲಾಶ: ಮುತ್ತುಗದ ಮರ; ರಸಾಲ: ಮಾವು; ಶಮಿ: ಬನ್ನಿಯ ಮರ; ಗುಗ್ಗುಳ: ಸಾಂಭ್ರಾಣಿ, ಒಂದು ಬಗೆಯ ಮರ; ಮಧೂಕ: ಒಂದು ಜಾತಿಯ ಗಿಡ; ಅಶೋಕ: ಒಂದು ಜಾತಿಯ ಮರ; ಅಮಲ: ನೆಲ್ಲಿ; ಜಂಬೀರ: ನಿಂಬೆಯ ಗಿಡ; ನುಗ್ಗು: ನೂಕಾಟ, ಪುಡಿ; ನಿಮಿಷ: ಕ್ಷಣ;

ಪದವಿಂಗಡಣೆ:
ಬಲದ +ಪದಘಟ್ಟಣೆಗೆ +ಹೆಮ್ಮರ
ನುಲಿದು +ಬಿದ್ದವು +ಸಾಲ+ ಪೂಗಾ
ವಳಿ +ಕಪಿತ್ಥ +ಲವಂಗ +ತುಂಬುರ +ನಿಂಬ+ ದಾಳಿಂಬ
ಫಲ+ ಪಲಾಶ+ ರಸಾಲ +ಶಮಿ+ಗು
ಗ್ಗುಳ +ಮಧೂಕ+ಅಶೋಕ +ಬಿಲ್ವಾ
ಮಲಕ+ ಜಂಬೀರಾದಿಗಳು+ ನುಗ್ಗಾಯ್ತು +ನಿಮಿಷದಲಿ

ಅಚ್ಚರಿ:
(೧) ಮರಗಳ ಹೆಸರು – ಸಾಲ, ಪೂಗ, ಕಪಿತ್ಥ, ಲವಂಗ, ತುಂಬುರ, ನಿಂಬ, ದಾಳಿಂಬ,
ಫಲ, ಪಲಾಶ, ರಸಾಲ, ಶಮಿ, ಗುಗ್ಗುಳ, ಮಧೂಕ,ಅಶೋಕ, ಬಿಲ್ವ, ಅಮಲ, ಜಂಬೀರ

ಪದ್ಯ ೩೬: ಕೌರವನ ಸೈನ್ಯದ ಪ್ರತ್ಯುತ್ತರ ಹೇಗಿತ್ತು?

ಹಲ್ಲಣಿಸಿದುದು ಚಾತುರಂಗವ
ದೆಲ್ಲ ಕವಿದುದು ಹೊಕ್ಕು ದಿವಿಜರ
ಚೆಲ್ಲ ಬಡಿದರು ಚಾಚಿದರು ತೋಪಿನ ಕವಾಟದಲಿ
ನಿಲ್ಲದೌಕಿದರಂತಕನ ಪುರ
ದೆಲ್ಲೆಯಲಿ ಹೆಕ್ಕಳದ ಖಡುಗದ
ಘಲ್ಲಣಿಯ ಖಣಿಖಟಿಲ ಗಾಢಿಕೆ ಘಲ್ಲಿಸಿತು ನಭವ (ಅರಣ್ಯ ಪರ್ವ, ೧೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವನ ಚತುರಂಗದ ಸೈನ್ಯವು ಸಿದ್ಧವಾಗಿ ಗಂಧರ್ವರ ಮೇಲೆ ಬಿದ್ದು ಅವರನ್ನು ಹೊಡೆದೋಡಿಸಿತು. ಹಲವರನ್ನು ಕೊಂದು ತೋಪಿನ ಬಾಗಿಲಿನಲ್ಲಿ ನೂಕಿತು. ನಿರ್ದಯದಿಂದ ಯಮಪುರಕ್ಕಟ್ಟಿತು. ಖಡ್ಗ ಯುದ್ಧದ ಖಣಿ ಖಟಿಲೆಂಬ ಧ್ವನಿ ಆಕಾಶಕ್ಕೇರಿತು.

ಅರ್ಥ:
ಹಲ್ಲಣಿಸು: ತಡಿಹಾಕು, ಧರಿಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಕವಿ: ಆವರಿಸು; ಹೊಕ್ಕು: ಸೇರು; ದಿವಿಜ: ದೇವತೆ; ಬಡಿ: ಹೊಡೆ, ತಾಡಿಸು; ಚಾಚು: ಹರಡು; ತೋಪು: ಗುಂಪು; ಕವಾಟ: ಬಾಗಿಲು, ಕದ; ನಿಲ್ಲು: ತಡೆ; ಔಕು: ನೂಕು; ಅಂತಕ: ಯಮ; ಪುರ: ಊರು; ಎಲ್ಲೆ: ಸೀಮೆ; ಹೆಕ್ಕಳ: ಹೆಚ್ಚಳ, ಅತಿಶಯ; ಖಡುಗ: ಕತ್ತಿ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಖಣಿಖಟಿಲ: ಶಬ್ದವನ್ನು ವಿವರಿಸುವ ಪದ; ಗಾಢಿಸು: ತುಂಬು; ಘಲ್ಲಿಸು: ಪೀಡಿಸು; ನಭ: ಆಗಸ;

ಪದವಿಂಗಡಣೆ:
ಹಲ್ಲಣಿಸಿದುದು +ಚಾತುರಂಗವ
ದೆಲ್ಲ+ ಕವಿದುದು +ಹೊಕ್ಕು +ದಿವಿಜರ
ಚೆಲ್ಲ +ಬಡಿದರು +ಚಾಚಿದರು +ತೋಪಿನ +ಕವಾಟದಲಿ
ನಿಲ್ಲದ್+ಔಕಿದರ್+ಅಂತಕನ+ ಪುರದ್
ಎಲ್ಲೆಯಲಿ+ ಹೆಕ್ಕಳದ +ಖಡುಗದ
ಘಲ್ಲಣಿಯ +ಖಣಿಖಟಿಲ +ಗಾಢಿಕೆ +ಘಲ್ಲಿಸಿತು +ನಭವ

ಅಚ್ಚರಿ:
(೧) ಹಲ್ಲಣಿ, ಘಲ್ಲಣಿ – ಪ್ರಾಸ ಪದ
(೨) ಸಾಯಿಸು ಎಂದು ಹೇಳಲು – ಔಕಿದರಂತಕನ ಪುರದೆಲ್ಲೆಯಲಿ

ಪದ್ಯ ೩೫: ಕೌರವನೇಕೆ ಕುಪಿತನಾದನು?

ಮುರಿಯಿಸುತ ಗಂಧರ್ವ ಬಲ ಮು
ಕ್ಕುರಿಕಿ ಕೌರವ ಬಲವ ತತ್ತರ
ದರಿದು ತರಹರವಿಲ್ಲೆನಿಸಿ ಹೊಗಿಸಿದರು ಪಾಳೆಯವ
ಹೊರಗುಡಿಯ ಹೊರಪಾಳೆಯದ ಭಟ
ರರುಹಿದರು ಕುರುಪತಿಗೆ ಖತಿಯಲಿ
ಜರಿದು ಜೋಡಿಸಿ ಬಿಟ್ಟನಕ್ಷೋಹಿಣಿಯ ನಾಯಕರ (ಅರಣ್ಯ ಪರ್ವ, ೧೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಗಂಧರ್ವರು ಕೌರವ ಬಲವನ್ನು ಮುರಿದರು. ತಮ್ಮ ಬಾಣಗಳಿಂದ ಕತ್ತರಿಸಿ ಅವರೆಲ್ಲರೂ ತಮ್ಮ ಪಾಳೆಯಕ್ಕೆ ಹೋಗುವಂತೆ ಹೊಡೆದೋಡಿಸಿದರು. ಪಾಳೆಯದ ಹೊರಗಿದ್ದವರು ಕೌರವನಿಗೆ ಸೋಲಿನ ಸುದ್ದಿಯನ್ನು ತಿಳಿಸಲು, ಕೌರವನು ಅವರನ್ನು ಜರೆದು ಅಕ್ಷೋಹಿಣಿಯ ಅಧಿಪತಿಗಳನ್ನು ಕಾಳಗಕ್ಕೆ ಕಳುಹಿಸಿದನು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಮುಕ್ಕುರಿಸು: ಆತುರಪಡು, ಶ್ರಮಿಸು; ತತ್ತರ: ನಡುಕ, ಕಂಪನ; ಅರಿ: ಕತ್ತರಿಸು; ತರಹರ: ತಂಗುವಿಕೆ, ನಿಲ್ಲುವಿಕೆ; ಹೊಗಿಸು: ಒಳಹೋಗಿಸು; ಪಾಳೆ: ಸೀಮೆ; ಹೊರಗುಡಿ: ಹೊರಗಿನ ಧ್ವಜ; ಹೊರ: ಆಚೆ; ಪಾಳೆಯ: ಬೀಡು, ಶಿಬಿರ; ಭಟ: ಸೈನಿಕ; ಅರುಹು: ತಿಳಿಸು; ಖತಿ: ಕೋಪ; ಜರಿ: ಬಯ್ದು; ಜೋಡಿಸು: ಕೂಡಿಸು; ಬಿಡು: ಹೊರತರು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನಾಯಕ: ಒಡೆಯ;

ಪದವಿಂಗಡಣೆ:
ಮುರಿಯಿಸುತ +ಗಂಧರ್ವ +ಬಲ +ಮು
ಕ್ಕುರಿಕಿ +ಕೌರವ +ಬಲವ +ತತ್ತರದ್
ಅರಿದು+ ತರಹರವಿಲ್ಲೆನಿಸಿ +ಹೊಗಿಸಿದರು +ಪಾಳೆಯವ
ಹೊರಗುಡಿಯ +ಹೊರಪಾಳೆಯದ +ಭಟರ್
ಅರುಹಿದರು +ಕುರುಪತಿಗೆ +ಖತಿಯಲಿ
ಜರಿದು +ಜೋಡಿಸಿ +ಬಿಟ್ಟನ್+ಅಕ್ಷೋಹಿಣಿಯ +ನಾಯಕರ

ಅಚ್ಚರಿ:
(೧) ಮು – ೧ ಸಾಲಿನ ಮೊದಲ ಹಾಗು ಕೊನೆ ಪದ
(೨) ಹೊರ ಪದದ ಬಳಕೆ – ಹೊರಗುಡಿಯ ಹೊರಪಾಳೆಯದ