ಪದ್ಯ ೩೫: ಕೌರವನೇಕೆ ಕುಪಿತನಾದನು?

ಮುರಿಯಿಸುತ ಗಂಧರ್ವ ಬಲ ಮು
ಕ್ಕುರಿಕಿ ಕೌರವ ಬಲವ ತತ್ತರ
ದರಿದು ತರಹರವಿಲ್ಲೆನಿಸಿ ಹೊಗಿಸಿದರು ಪಾಳೆಯವ
ಹೊರಗುಡಿಯ ಹೊರಪಾಳೆಯದ ಭಟ
ರರುಹಿದರು ಕುರುಪತಿಗೆ ಖತಿಯಲಿ
ಜರಿದು ಜೋಡಿಸಿ ಬಿಟ್ಟನಕ್ಷೋಹಿಣಿಯ ನಾಯಕರ (ಅರಣ್ಯ ಪರ್ವ, ೧೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಗಂಧರ್ವರು ಕೌರವ ಬಲವನ್ನು ಮುರಿದರು. ತಮ್ಮ ಬಾಣಗಳಿಂದ ಕತ್ತರಿಸಿ ಅವರೆಲ್ಲರೂ ತಮ್ಮ ಪಾಳೆಯಕ್ಕೆ ಹೋಗುವಂತೆ ಹೊಡೆದೋಡಿಸಿದರು. ಪಾಳೆಯದ ಹೊರಗಿದ್ದವರು ಕೌರವನಿಗೆ ಸೋಲಿನ ಸುದ್ದಿಯನ್ನು ತಿಳಿಸಲು, ಕೌರವನು ಅವರನ್ನು ಜರೆದು ಅಕ್ಷೋಹಿಣಿಯ ಅಧಿಪತಿಗಳನ್ನು ಕಾಳಗಕ್ಕೆ ಕಳುಹಿಸಿದನು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಮುಕ್ಕುರಿಸು: ಆತುರಪಡು, ಶ್ರಮಿಸು; ತತ್ತರ: ನಡುಕ, ಕಂಪನ; ಅರಿ: ಕತ್ತರಿಸು; ತರಹರ: ತಂಗುವಿಕೆ, ನಿಲ್ಲುವಿಕೆ; ಹೊಗಿಸು: ಒಳಹೋಗಿಸು; ಪಾಳೆ: ಸೀಮೆ; ಹೊರಗುಡಿ: ಹೊರಗಿನ ಧ್ವಜ; ಹೊರ: ಆಚೆ; ಪಾಳೆಯ: ಬೀಡು, ಶಿಬಿರ; ಭಟ: ಸೈನಿಕ; ಅರುಹು: ತಿಳಿಸು; ಖತಿ: ಕೋಪ; ಜರಿ: ಬಯ್ದು; ಜೋಡಿಸು: ಕೂಡಿಸು; ಬಿಡು: ಹೊರತರು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನಾಯಕ: ಒಡೆಯ;

ಪದವಿಂಗಡಣೆ:
ಮುರಿಯಿಸುತ +ಗಂಧರ್ವ +ಬಲ +ಮು
ಕ್ಕುರಿಕಿ +ಕೌರವ +ಬಲವ +ತತ್ತರದ್
ಅರಿದು+ ತರಹರವಿಲ್ಲೆನಿಸಿ +ಹೊಗಿಸಿದರು +ಪಾಳೆಯವ
ಹೊರಗುಡಿಯ +ಹೊರಪಾಳೆಯದ +ಭಟರ್
ಅರುಹಿದರು +ಕುರುಪತಿಗೆ +ಖತಿಯಲಿ
ಜರಿದು +ಜೋಡಿಸಿ +ಬಿಟ್ಟನ್+ಅಕ್ಷೋಹಿಣಿಯ +ನಾಯಕರ

ಅಚ್ಚರಿ:
(೧) ಮು – ೧ ಸಾಲಿನ ಮೊದಲ ಹಾಗು ಕೊನೆ ಪದ
(೨) ಹೊರ ಪದದ ಬಳಕೆ – ಹೊರಗುಡಿಯ ಹೊರಪಾಳೆಯದ