ಪದ್ಯ ೫೨: ಅರ್ಜುನನು ವೈರಿಪಡೆಗೆ ಏನು ಹೇಳಿದ?

ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುನಿಂದರು ಮತ್ತೆ ಕಾಳಗಕೆ
ಅರಸು ಮೋಹರ ಮುರಿದ ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ (ವಿರಾಟ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೆಂದೂಳಿನ್ನೆಬ್ಬಿಸುತ್ತಾ ವಿರಾಟನ ತುರುಗಳು ಊರಿಗೆ ಓಡುತ್ತಾ ಹೋದವು. ಉತ್ತರ ಅರ್ಜುನರಿಬ್ಬರೂ ಯುದ್ಧಕ್ಕೆ ಸಿದ್ಧರಾಗಿ ನಿಂತರು. ರಾಜನ ಸೈನ್ಯವು ಸೋತು ಹೋಯಿತು, ಈ ಅಪಮಾನವನ್ನು ತೊಡೆದು ಹಾಕಬಲ್ಲ ವೀರರನ್ನು ಯುದ್ಧಕ್ಕೆ ಬರಲು ಹೇಳು ಎಂದು ಅರ್ಜುನನು ಬಾಣವನ್ನು ತೂಗುತ್ತಾ ನಿಂತನು.

ಅರ್ಥ:
ತಿರುಗು: ಹಿಂದಿರುಗು; ಕೆಂದೂಳಿ: ಕೆಂಪಾದ ಧೂಳು; ತುರು: ಹಸು; ಪುರ: ಊರು; ಹಾಯ್ದು: ಚಲಿಸು; ನಲವು: ಸಂತೋಷ; ಕಾಳಗ: ಯುದ್ಧ; ಅರಸು: ರಾಜ; ಮೋಹರ: ಯುದ್ಧ; ಮುರಿ: ಸೀಳು; ಹರಿಬ: ಕೆಲಸ, ಕಾರ್ಯ; ಮರಳು: ಹಿಂದಕ್ಕೆ ಬರು; ಬಾಣ: ಶರ; ತೂಗು: ಅಲ್ಲಾಡಿಸು, ತೂಗಾಡಿಸು;

ಪದವಿಂಗಡಣೆ:
ತಿರುಗಿ +ಕೆಂದೂಳಿಡುತ +ತುರುಗಳು
ಪುರಕೆ+ ಹಾಯ್ದವು +ನಲವು +ಮಿಗಲ್
ಉತ್ತರ+ ಕಿರೀಟಿಗಳಾಂತು+ನಿಂದರು+ ಮತ್ತೆ +ಕಾಳಗಕೆ
ಅರಸು+ ಮೋಹರ +ಮುರಿದ +ಹರಿಬವ
ಮರಳಿಚುವ +ಮಿಡುಕುಳ್ಳ+ ವೀರರ
ಧುರಕೆ +ಬರಹೇಳೆನುತ +ಬಾಣವ +ತೂಗಿದನು +ಪಾರ್ಥ

ಅಚ್ಚರಿ:
(೧) ಯುದ್ಧಕ್ಕೆ ಆಹ್ವಾನವನ್ನು ನೀಡುವ ಪರಿ – ಅರಸು ಮೋಹರ ಮುರಿದ ಹರಿಬವ ಮರಳಿಚುವ ಮಿಡುಕುಳ್ಳ ವೀರರ ಧುರಕೆ ಬರಹೇಳೆನುತ

ಪದ್ಯ ೫೧: ಹೋರಿಗಳ ಚಲನವು ಹೇಗಿತ್ತು?

ಕೆಲವು ಕಡೆಗಂದಿಗಳ ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿಹರಿದು
ಮಲೆತು ಕಾಲಲಿ ನೆಲನ ಕರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗ ನೀಡಿರಿದಾಡುತಿರ್ದುದು ಹಿಂಡು ಹಿಂಡಿನಲಿ (ವಿರಾಟ ಪರ್ವ, ೮ ಸಂಧಿ, ೫೧ ಪದ್ಯ)

ತಾತ್ಪರ್ಯ:
ಆ ಗೋವುಗಳ ಹಿಂಡಿನಲ್ಲಿ ಗೂಳಿಗಳು ಕಡೆಗಂದಿ ಹಸುಗಳ ಬಾಲದ ಬಳಿ ಮೂಗಿಟ್ಟು ನೋಡುತ್ತಾ ಸಂತೋಷದಿಂದ ಮುಖವನ್ನೆತ್ತಿ, ಸುಕ್ಕಿಸಿ, ಮದದಿಂದ ಗೊರಸುಗಳಿಂದ ನೆಲವನ್ನು ಕೆರೆದು, ಬೇರೊಂದು ಹೋರಿ ಬರಲು ಅದರೊಡನೆ ಇರಿದಾಡುತ್ತಿದ್ದವು.

ಅರ್ಥ:
ಕಡೆಗಂದಿ: ಕಡೆಯ ಕರುವನ್ನು ಪಡೆದ ಹಸು; ಬಾಲ: ಪುಚ್ಛ; ಬಳಿ: ಹತ್ತಿರ; ಮೂಗು: ನಾಸಿಕ; ಅಡಿಗಡಿಗೆ: ಮತ್ತೆ ಮತ್ತೆ; ಮನ: ಮನಸ್ಸು; ನಲಿ: ಹರ್ಷಿಸು; ಮೋರೆ: ಮುಖ; ಎತ್ತು: ಮೇಲೆ ಬಂದು; ಹರಿ: ಓಡಾಡು; ಮಲೆ: ಸೊಕ್ಕು, ಗರ್ವ; ಕಾಲು: ಪಾದ; ನೆಲ: ಭೂಮಿ; ಕೆರೆ: ಉಗುರಿನಿಂದ ಗೀಚು; ಅವ್ವಳಿಸು: ಆರ್ಭಟಿಸು; ಬಲು: ದೊಡ್ಡ; ಸಲಗ: ಬಲಿಷ್ಠವಾದ ಹೋರಿ; ಹಿಂಡು: ಗುಂಪು; ಇರಿದಾಡು: ಹೊಡೆದಾಡು;

ಪದವಿಂಗಡಣೆ:
ಕೆಲವು +ಕಡೆಗಂದಿಗಳ+ ಬಾಲದ
ಬಳಿಗೆ +ಮೂಗಿಟ್ಟ್+ಅಡಿಗಡಿಗೆ +ಮನ
ನಲಿದು +ಮೋರೆಯನೆತ್ತಿ+ ಸುಕ್ಕಿಸಿ+ ಮತ್ತೆ +ಹರಿಹರಿದು
ಮಲೆತು +ಕಾಲಲಿ +ನೆಲನ +ಕರೆದ್
ಅವ್ವಳಿಸಿ+ ಮತ್ತೊಂದ್+ಇದಿರುವರೆ+ ಬಲು
ಸಲಗ +ನೀಡ್+ಇರಿದಾಡುತಿರ್ದುದು +ಹಿಂಡು +ಹಿಂಡಿನಲಿ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೂಗಿಟ್ಟಡಿಗಡಿಗೆ ಮನನಲಿದು ಮೋರೆಯನೆತ್ತಿ

ಪದ್ಯ ೫೦: ಗೋವುಗಳು ಊರತ್ತ ಹೇಗೆ ಹೋದವು?

ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ (ವಿರಾಟ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಹಾಲು ಕರೆಯದೆ ಬಿಗಿದ ಕೆಚ್ಚಲುಗಳಿಂದ ಹಾಲು ಹೊರ ಹೊಮ್ಮುತ್ತಿರಲು, ಮತ್ತೆ ಮತ್ತೆ ಬಾಲವನ್ನು ಮೇಲೆತ್ತಿ, ಮುಖವನ್ನು ಮೇಲೆತ್ತಿ, ದಿಕ್ಕು ದಿಕ್ಕುಗಳನ್ನು ನೋಡುತ್ತಾ, ಭಯದಿಂದ ಆಗಾಗ ನಡುಗುತ್ತ, ಸ್ವಲ್ಪ ಹೊತ್ತು ನಿಂತು, ಹೊಸಬರ ಮೈವಾಸನೆಯನ್ನು ಸಹಿಸದೆ ನಡುಗುತ್ತಾ, ಗೋವಳರು ತೋರಿಸಿದ ದಾರಿಯಲ್ಲಿ ಗೋವುಗಳು ಊರತ್ತ ಹೋದವು.

ಅರ್ಥ:
ಬಿಗಿ: ಭದ್ರ, ಕಟ್ಟು; ಕೆಚ್ಚಲು: ಹಸು, ಎಮ್ಮೆ ಪ್ರಾಣಿಗಳ ಮೊಲೆಯ ಮೇಲ್ಭಾಗ; ತೊರೆ: ಬಿಡು, ತ್ಯಜಿಸು; ಹಾಲು: ಕ್ಷೀರ; ಮಿಗೆ: ಮತ್ತು, ಅಧಿಕವಾಗಿ; ಸೂಳು: ಆವೃತ್ತಿ, ಬಾರಿ; ಬಾಲ: ಪುಚ್ಛ; ಬಿರು: ಬಿರುಸಾದುದು; ಅಗಿ: ಅಲುಗಾಡು, ಆವರಿಸು; ಸರಳು: ಬಾಣ; ನಿಲುವು: ಇರುವಿಕೆ, ಸ್ಥಿತಿ, ಅವಸ್ಥೆ; ಹೊಸ: ನವೀನ; ಸೊಗಡು: ಕಂಪು, ವಾಸನೆ; ಅವ್ವಳಿಸು: ಆರ್ಭಟಿಸು; ಪಥ: ದಾರಿ, ಮಾರ್ಗ; ತೆಕ್ಕೆ: ಆಲಿಂಗನ; ಹಿಂಡು: ಗುಂಪು;

ಪದವಿಂಗಡಣೆ:
ಬಿಗಿದ +ಕೆಚ್ಚಲ +ತೊರೆದ್+ಒಗುವ +ಹಾ
ಲುಗಳ +ಮಿಗೆ +ಸೂಳೆದ್ದ +ಬಾಲವ
ಮೊಗ+ ನೆಗಹಿ +ದೆಸೆದೆಸೆಯ +ನೋಡುತ +ಬೆಚ್ಚಿ +ಬಿರುವರಿವ
ಅಗಿದು +ಸರಳಿಸಿ +ನಿಲುವ +ಹೊಸಬರ
ಸೊಗಡಿಗ್+ಅವ್ವಳಿಸುತ್ತ +ಗೋವರು
ತೆಗೆದ+ ಪಥದಲಿ +ತೆಕ್ಕೆವರಿದವು +ಹಿಂಡು +ಹಿಂಡಿನಲಿ

ಅಚ್ಚರಿ:
(೧) ಹಿಂಡು ಹಿಂಡಿನಲಿ, ದೆಸೆದೆಸೆ – ಪದಗಳ ಬಳಕೆ

ಪದ್ಯ ೪೯: ಉತ್ತರನು ಯಾವ ಪ್ರವಾಹದಲ್ಲಿ ಮುಳುಗಿದನು?

ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳು ಸಂಗರ ವಿಜಯಗರ್ವಿತರ
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ (ವಿರಾಟ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ವಿರಾಟನ ಗೋವುಗಳನ್ನು ಕೊಂಡೊಯ್ಯುತ್ತಿದ್ದ ಕೌರವನ ಗೋವಳರು ದಿಗ್ಭ್ರಮೆಗೊಂಡು ಓಡಿ ಹೋದರು. ಗೋವಳರ ಸೈನ್ಯವನ್ನು ಸೋಲಿಸಿ ಗೋಗ್ರಹಣ ಮಾಡಿದ ವಿಜಯದಿಂದ ಬೀಗುತ್ತಿದ್ದವರ ಮುಖಗಳು ಕರಕಲಾಗಿ ಬಾಡಿದವು. ವಿರಾಟನ ಗೋವಳರ ಸನ್ನೆಯಂತೆ ಗೋವುಗಳು ಮತ್ಸ್ಯನಗರದ ಕಡೆಗೆ ನಡೆದವು. ಉತ್ತರನು ಆನಂದ ಪ್ರವಾಹದಲ್ಲಿ ಮುಳುಗಿದನು.

ಅರ್ಥ:
ತುರು: ಆಕಳು; ಬಿಸುಟು: ಬಿಟ್ಟು, ಹೊರಹಾಕು; ರಾಯ: ರಾಜ; ತೆತ್ತಿಗ: ಸಂಬಂಧ, ಸೇವಕ; ತಲ್ಲಣ: ಅಂಜಿಕೆ, ಭಯ; ಹಾಯು: ನೆಗೆ, ಹಾರು; ಹೊತ್ತು: ಬೆಂದು ಹೋಗು, ಕರಿಕಾಗು; ಮುಸುಡು: ಮುಖ; ಸಂಗರ: ಯುದ್ಧ; ವಿಜಯ: ಗೆಲುವು; ಗರ್ವಿತ: ಅಹಂಕಾರ ಭರಿತ; ಸುತ್ತ: ಎಲ್ಲೆಡೆ; ಗೋವು: ಆಕಳು; ಸನ್ನೆ; ಗುರುತು; ಪುರ: ಊರು; ಮುಂದೆ: ಎದುರು; ಪಶು: ಪ್ರಾಣಿ, ಆಕಳು; ವ್ರಜ: ಗುಂಪು; ಮುಳುಗು: ಮುಚ್ಚಿಹೋಗು; ಪರಿತೋಷ: ಸಂತೋಷ; ಪ್ರವಾಹ: ಹರಿಯುವಿಕೆ;

ಪದವಿಂಗಡಣೆ:
ಇತ್ತ +ತುರುಗಳ+ ಬಿಸುಟು +ರಾಯನ
ತೆತ್ತಿಗರು +ತಲ್ಲಣಿಸಿ +ಹಾಯ್ದರು
ಹೊತ್ತಿದವು +ಮುಸುಡುಗಳು +ಸಂಗರ +ವಿಜಯ+ಗರ್ವಿತರ
ಸುತ್ತ +ಗೋವರ +ಸನ್ನೆಯಲಿ+ ಪುರ
ದತ್ತ +ಮುಂದಾದವು +ಪಶು+ವ್ರಜ
ಉತ್ತರನು +ಮುಳುಗಿದನು +ಪರಿತೋಷ +ಪ್ರವಾಹದಲಿ

ಅಚ್ಚರಿ:
(೧) ಉತ್ತರನು ಸಂತೋಷಪಟ್ಟನು ಎಂದು ಹೇಳುವ ಪರಿ – ಉತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ
(೨) ಮುಖಗಳು ಬಾಡಿದವು ಎಂದು ಹೇಳುವ ಪರಿ – ಹೊತ್ತಿದವು ಮುಸುಡುಗಳು ಸಂಗರ ವಿಜಯಗರ್ವಿತರ

ಪದ್ಯ ೪೮: ದುರ್ಯೋಧನನ ಸಹಾಯಕ್ಕೆ ಯಾರು ಸೇರಿದರು?

ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮದ್ರೋಣ ಕೃಪರೆನುತ
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು (ವಿರಾಟ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ದುರ್ಯೋಧನನಿಗೆ ಒದಗಿಬಂದ ಅಪಾಯವನ್ನು ಕಂಡು, ಕೌರವ ರಾಜನು ವೈರಿಗಳ ಮಧ್ಯೆ ಸಿಲುಕಿಕೊಂಡಿದ್ದಾನೆ, ಅವನನ್ನು ಕಾಪಾಡಬೇಕೆಂದಿದ್ದರೆ, ಕಿವಿವರೆಗೆ ಬಾಣಗಳನ್ನೆಳೆದಿರುವ ಬಿಲ್ಲಾಳುಗಳನ್ನು ಕರೆಯಿರಿ, ಭೀಷ್ಮ, ದ್ರೋಣ, ಕೃಪರು ಎಲ್ಲಿ ಹೋದರು, ಎಂದು ಮೊರೆಯಿಡಲು, ದ್ರೋಣ, ಭೀಷ್ಮ, ಶಕುನಿ, ವಿಕರ್ಣ, ಕೃಪ, ಕರ್ಣ, ಸೈಂಧವ (ಜಯದ್ರಥ), ಚಿತ್ರಸೇನ ಮೊದಲಾದವರು ಒಟ್ಟಾಗಿ ಬಂದರು.

ಅರ್ಥ:
ಕಾಯು: ಕಾಪಾಡು; ಕರೆ:ಬರೆಮಾಡು; ಕರ್ಣ: ಕಿವಿ; ಆಯತ: ಅಣಿಗೊಳಿಸು, ವಿಶಾಲ; ಅಸ್ತ್ರ: ಶಸ್ತ್ರ; ಅಕಟ: ಅಯ್ಯೋ; ರಾಯ: ರಾಜ; ಸಿಲುಕು: ಬಂಧನಕ್ಕೊಳಗಾದುದು; ಗುರು: ಆಚಾರ್ಯ; ಆದಿ: ಮೊದಲಾದ; ಜೋಡಿಸು: ಸೇರಿಸು;

ಪದವಿಂಗಡಣೆ:
ಕಾಯಲಾಪರೆ+ ಕರೆಯಿರ್+ಆ+ ಕರ್ಣ
ಆಯತ+ಅಸ್ತ್ರರನ್+ಅಕಟ+ ಕೌರವ
ರಾಯ +ಸಿಲುಕಿದನ್+ಎಲ್ಲಿ+ ಭೀಷ್ಮ+ದ್ರೋಣ +ಕೃಪರೆನುತ
ಬಾಯ +ಬಿಡೆ +ಕುರುಸೇನೆ+ ಗುರು+ ಗಾಂ
ಗೇಯ+ ಶಕುನಿ +ವಿಕರ್ಣ +ಕೃಪ +ರಾ
ಧೇಯ +ಸೈಂಧವ +ಚಿತ್ರಸೇನಾದಿಗಳು +ಜೋಡಿಸಿತು

ಅಚ್ಚರಿ:
(೧) ಪರಾಕ್ರಮಿಗಳು ಎಂದು ಹೇಳುವ ಪರಿ – ಕರೆಯಿರಾ ಕರ್ಣಾಯತಾಸ್ತ್ರರನ್

ಪದ್ಯ ೪೭: ಅರ್ಜುನನು ದುರ್ಯೋಧನನನ್ನು ಹೇಗೆ ಮೂದಲಿಸಿದನು?

ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ (ವಿರಾಟ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ಹಲವರು ಚೆಲ್ಲಾಪಿಲ್ಲಿಯಾಗಿ ಓಡಿದರು, ಇನ್ನು ಕೆಲವರು ಬಿಲ್ಲು ಬಾಣಗಳನ್ನು ಕೆಳಕ್ಕೆ ಕೈ ಬಿಟ್ಟರು. ಪಾರ್ಥನ ಬಾಣಗಳ ಗುರಿಗೆ ಹಲವರು ಒಟ್ಟೊಟ್ಟಾಗಿ ಬಿದ್ದರು. ದುರ್ಯೋಧನನು ಇಂತಹ ಸ್ಥಿತಿಯನ್ನೆದುರಿಸಲಾರದೆ ಮೆಲ್ಲನೆ ಜರಿಹೋಗಲು ಯತ್ನಿಸುವುದನ್ನು ಕಂಡು, ಅರ್ಜುನನು, ಎಲವೋ ಗೋವುಗಳ ಕಳ್ಳ, ಓಡಬೇಡ ನಿಲ್ಲು ಎಂದು ಹಂಗಿಸಿದನು.

ಅರ್ಥ:
ಚೆಲ್ಲು: ಹರಡು; ಕೆಲ: ಪಕ್ಕ; ಕೆಲಬರು: ಸ್ವಲ್ಪ ಜನ; ಬಿಲ್ಲು: ಚಾಪ; ಬಿರುಕು: ಸೀಳು; ಕೋಲು: ಬಾಣ; ಬಿಸುಟು: ಹೊರಹಾಕು; ಗಲ್ಲೆಗೆಡೆ: ರಾಶಿಯಾಗಿ ಬೀಳು; ತೋಹು: ಗುಂಪು; ಮೆಲ್ಲನೆ: ನಿಧಾನ; ಸರಿ: ಹೋಗು, ಗಮಿಸು; ಮಲ್ಲ: ಜಟ್ಟಿ; ಕಂಡು: ನೋಡು; ಅಟ್ಟು: ಬೆನ್ನುಹತ್ತಿ ಹೋಗು, ಓಡಿಸು; ತುರು: ಆಕಳು; ಕಳ್ಳ: ಚೋರ; ಹೋಗು: ತೆರಳು; ಮೂದಲಿಸು: ಹಂಗಿಸು; ಕಲಿ: ಶೂರ;

ಪದವಿಂಗಡಣೆ:
ಚೆಲ್ಲಿ +ಹೋಯಿತು +ಕೆಲಕೆ +ಕೆಲಬರು
ಬಿಲ್ಲ +ಬಿರು+ಕೋಲುಗಳ+ ಬಿಸುಟರು
ಗಲ್ಲೆಗೆಡೆದರು+ ಕೆಲರು+ ಪಾರ್ಥನ+ ಕೋಲ +ತೋಹಿನಲಿ
ಮೆಲ್ಲಮೆಲ್ಲನೆ+ ಸರಿವ +ಕೌರವ
ಮಲ್ಲನನು +ಕಂಡ್+ಅಟ್ಟಿದನು +ತುರು
ಕಳ್ಳ +ಹೋಗದಿರೆನುತ+ ಮೂದಲಿಸಿದನು+ ಕಲಿಪಾರ್ಥ

ಅಚ್ಚರಿ:
(೧) ದುರ್ಯೋಧನನನ್ನು ಕೌರವಮಲ್ಲ ಎಂದು ಕರೆದಿರುವುದು
(೨) ದುರ್ಯೋಧನನನ್ನು ಬಯ್ಯುವ ಪರಿ – ತುರುಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ

ಪದ್ಯ ೪೬: ಸೈನಿಕರ ಸ್ಥಿತಿ ಹೇಗಾಯಿತು?

ಏರುವಡೆದರು ಕೆಲರು ಕೆಲರಸು
ಸೂರೆಯೋದುದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನು ವೊಟ್ಟಿಗೆ ಕಾಲನರಮನೆಗೆ (ವಿರಾಟ ಪರ್ವ, ೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳು ಕೆಲ ಸೈನಿಕರ ಮೇಲೆ ಮಾರಣಾಂತಿಕ ಪೆಟ್ಟನ್ನು ಮಾಡಿದವು, ಕೆಅಲವರ ಪ್ರಾಣವೇ ಹೋಯಿತು, ಕೆಲವರ ಎದೆಗಳಲ್ಲಿ ದೊಡ್ಡ ಗುಂಡಿ ಬಿದ್ದು ಉಸುರಿನಲ್ಲೇ ರಕ್ತವನ್ನು ಕಾರಿಕೊಂಡರು. ಸ್ವರ್ಗಕ್ಕೆ ನಾ ಮೊದಲು ನೀ ಮೊದಲು ಎಂದು ನುಗ್ಗಿದರು, ತಲೆಗಳು ಗುಡ್ಡೆ ಬಿದ್ದವು. ಅವರ ಪ್ರಾಣಗಳನ್ನು ಯಮಲೋಕಕ್ಕೆ ಹೇರಿಕೊಂಡು ಹೋದರು.

ಅರ್ಥ:
ಏರು: ಮೇಲೆ ಹತ್ತು; ಕೆಲರು: ಸ್ವಲ್ಪಜನ; ಅಸು: ಪ್ರಾಣ; ಸೂರೆ: ಲೂಟಿ; ಎದೆ: ಹೃದಯ; ಡೋರುಗಳೆ: ತೂತುಮಾಡು; ಪೂರಾಯ: ಪರಿಪೂರ್ಣ; ಗಾಯ: ಪೆಟ್ಟು; ಉಸುರು: ಪ್ರಾಣ; ತೆಗೆ: ಹೊರತರು; ಕಾರು: ಕೆಸರು; ರಕ್ತ: ನೆತ್ತರು; ಸಗ್ಗ:ನಾಕ, ಸ್ವರ್ಗ; ಊರು: ನೆಲೆಸು; ತಲೆ: ಶಿರ; ಮಾರಾಡು: ನುಗ್ಗು; ಹೇರು: ಪೇರಿಸು, ಹೊರೆ, ಭಾರ; ಹರಣ: ಜೀವ, ಪ್ರಾಣ; ಒಟ್ಟಿಗೆ: ಜೊತೆಯಾಗಿ; ಕಾಲ: ಯಮ; ಅರಮನೆ: ರಾಜರ ವಾಸಸ್ಥಾನ;

ಪದವಿಂಗಡಣೆ:
ಏರುವಡೆದರು +ಕೆಲರು +ಕೆಲರ್+ಅಸು
ಸೂರೆಯೋದುದು+ ಮತ್ತೆ +ಕೆಲರ್+ಎದೆ
ಡೋರುಗಳ +ಪೂರಾಯ +ಗಾಯದಲ್+ಉಸುರ +ತೆಗೆಬಗೆಯ
ಕಾರಿದರು+ ರಕ್ತವನು +ಸಗ್ಗಕೆಗ್
ಊರು +ಮಾರಾಡಿದರು +ತಲೆಗಳ
ಹೇರಿದರು +ಹರಣವನು +ವೊಟ್ಟಿಗೆ +ಕಾಲನ್+ಅರಮನೆಗೆ

ಅಚ್ಚರಿ:
(೧) ಮಡಿದರು ಎಂದು ಹೇಳುವ ಪರಿ – ಸಗ್ಗಕೆಗೂರು ಮಾರಾಡಿದರು ತಲೆಗಳ ಹೇರಿದರು ಹರಣವನು ವೊಟ್ಟಿಗೆ ಕಾಲನರಮನೆಗೆ

ಪದ್ಯ ೪೫: ದೇವತೆಗಳೇಕೆ ಆಶ್ಚರ್ಯಗೊಂಡರು?

ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮರ್ತ್ಯರಾಲಿಗಳೆ
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯಿತ್ತು ಸುರಕಟಕ (ವಿರಾಟ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಪ್ರಯೋಗವನ್ನು ಕಂಡ ದೇವತೆಗಳು ಆಶ್ಚರ್ಯಗೊಂಡರು. ನಮಗೇನು ಮನುಷ್ಯರಂತೆ ರೆಪ್ಪೆಗಳಿವೆಯೇ? ಪರಮಾಣುಗಳನ್ನು ನಾವು ನೋಡಬಲ್ಲೆವು, ಆದರೆ ಅರ್ಜುನನು ಬಾಣವನ್ನು ಹೇಗೆ ಹೂಡಿದ, ಹೇಗೆ ಬಿಟ್ಟ ಎನ್ನುವುದು ನಮಗೆ ಕಾಣಿಸುತ್ತಿಲ್ಲ, ಇಂತಹ ಚಾಕಚಕ್ಯತೆಯು ಹರಿಹರರಿಗುಂಟು, ಇಂದ್ರನ ಪಾದದಾಣೆ ನಮ್ಮ ಈ ಮಾತು ಸುಳ್ಳಲ್ಲ ಎಂದು ದೇವತೆಗಳು ಆಶ್ಚರ್ಯಭರಿತರಾಗಿ ಹೇಳಿದರು.

ಅರ್ಥ:
ಕಾಣು: ತೋರು; ಬಿಡು: ತೊರೆ; ಹೂಡು: ತೊಡು; ಕೇಣ:ಮತ್ಸರ, ಕೋಪ, ದ್ವೇಷ; ಪರಮಾಣು: ಅತ್ಯಂತ ಸೂಕ್ಷ್ಮಕಣ; ಪುಂಜ: ಸಮೂಹ, ಗುಂಪು; ಕಣ್ಣು: ನಯನ; ಮರ್ತ್ಯ: ಮನುಷ್ಯ; ಆಲಿ: ಕಣ್ಣು; ಜಾಣ: ಬುದ್ಧಿವಂತ; ಪಣ: ಪಂದ್ಯ; ಪಾಣಿ: ಹಸ್ತ; ಅಮರಪತಿ: ಇಂದ್ರ; ಪದ: ಚರಣ; ಆಣೆ: ಪ್ರಮಾಣ; ಹುಸಿ: ಸುಳ್ಳು; ಬೆರಗು: ಆಶ್ಚರ್ಯ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಕಾಣಬಾರದು+ ಬಿಡುವ +ಹೂಡುವ
ಕೇಣವನು +ಪರಮಾಣು +ಪುಂಜವ
ಕಾಣವೇ +ಕಣ್ಣುಗಳು+ ನಮ್ಮವು+ ಮರ್ತ್ಯರ್+ಆಲಿಗಳೆ
ಜಾಣಪಣವಿದು+ ಶಿವ+ ಸುದರ್ಶನ
ಪಾಣಿಗಳಿಗ್+ಅಹುದ್+ಅಮರಪತಿ+ ಪದದ್
ಆಣೆ+ಹುಸಿಯಲ್ಲೆನುತ +ಬೆರಗಾಯಿತ್ತು +ಸುರ+ಕಟಕ

ಅಚ್ಚರಿ:
(೧) ಪರಮಾಣುವನ್ನು ಕಾಣುವ ಕಣ್ಣುಗಳು ಬಾಣವನ್ನು ಕಾಣಲಾಗಲಿಲ್ಲ ಎಂದು ಹೇಳುವ ಮೂಲಕ ಅರ್ಜುನನ ಚಾಣಾಕ್ಷತೆಯನ್ನು ವಿವರಿಸಲಾಗಿದೆ.

ಪದ್ಯ ೪೪: ಹನುಮನು ಅರ್ಜುನನನ್ನು ಹೇಗೆ ಹೊಗಳಿದನು?

ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರಸಂಧಾನವಾವ ವಿಹಾರವಾವ ಪರಿ
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಶ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ (ವಿರಾಟ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣವಿದ್ಯಾ ಪ್ರಾವೀಣ್ಯವನ್ನು ನೋಡಿ, ಎಂತಹ ಬಿಲ್ಲುಗಾರ, ಎಂತಹ ಬಿಲ್ಲಿನ ಮೇಲೆ ಹಿಡಿತ, ಏನು ಗಾಂಭೀರ್ಯ, ಎಂತಹ ವೈಖರಿ, ಏನು ಕೈಚಳಕ, ಬಾಣವನ್ನು ಹೂಡುವ ರೀತಿ, ಭಾಣಗಳನ್ನು ಹಾರಿಸುವ ಪರಿ, ಅವುಗಳ ರೀತಿ ಎಂತಹದು! ರಾವಣ, ಇಂದ್ರಜಿತ್, ರಾಮ ಲಕ್ಷ್ಮಣರಲ್ಲೂ ಇಂತಹ ಬಾಣ ವಿದ್ಯೆಯನ್ನು ನಾನು ನೋಡಲಿಲ್ಲ, ಭಲೆ ಭಲೇ ಎಂದು ಹನುಮಂತನು ಅರ್ಜುನನ ಬಿಲ್ಲು ವಿದ್ಯೆಯ ಚಳಕವನ್ನು ಕೊಂಡಾಡಿದನು.

ಅರ್ಥ:
ಬಿಲ್ಲಾಳು: ಬಿಲ್ಲುಗಾರ; ಲಾಘವ: ಕೌಶಲ, ಚಳಕ; ಗಾಡಿ: ಸೌಂದರ್ಯ, ಅಂದ; ಚಳಕ: ಚಾತುರ್ಯ, ಚಮತ್ಕಾರ; ಶರ: ಬಾಣ; ಸಂಧಾನ: ಬಾಣವನ್ನು ಹೂಡುವಂಥದು; ವಿಹಾರ: ತಿರುಗಾಡುವುದು; ಪರಿ: ರೀತಿ; ಅರಿ: ವೈರಿ; ರಾಘವ: ರಾಮ; ಕಾಣು: ನೋಡು; ಧನು: ಬಿಲ್ಲು; ಮಝ: ಭಲೆ;

ಪದವಿಂಗಡಣೆ:
ಆವ +ಬಿಲ್ಲಾಳ್+ಆವ +ಲಾಘವದ್
ಆವ+ ಗಾಡಿಕೆ+ ಆವ+ ಚಳಕವದ್
ಆವ +ಶರಸಂಧಾನವ್+ಆವ+ ವಿಹಾರವ್+ಆವ+ ಪರಿ
ರಾವಣನೊಳ್+ಇಂದ್ರ+ಅರಿ+ ರಾಘವ
ದೇವ +ಲಕ್ಶ್ಮಣರಲ್ಲಿ+ ಕಾಣೆನ್
ಇದಾವ +ಧನು+ ಶರವಿದ್ಯೆ+ ಮಝ +ಭಾಪೆಂದನಾ +ಹನುಮ

ಅಚ್ಚರಿ:
(೧) ಆವ – ೭ ಬಾರಿ ಪ್ರಯೋಗ
(೨) ಹೋಲಿಸುವ ಪರಿ – ರಾವಣನೊಳಿಂದ್ರಾರಿ ರಾಘವದೇವ ಲಕ್ಶ್ಮಣರಲ್ಲಿ ಕಾಣೆನ್

ಪದ್ಯ ೪೩: ಕೌರವ ಸೈನ್ಯವು ಹೇಗೆ ನಾಶವಾಯಿತು?

ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥಪಾವಕನುರುಹಿದನು ಮುಳಿದು (ವಿರಾಟ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪ್ರಳಯ ಕಾಲದಲ್ಲಿ ಸಾವಿಗೆ ಸಿದ್ಧವಾದ ಪ್ರಾಣಿಗಳನ್ನೂ, ಸ್ಥಾವರ ವಸ್ತುಗಳನ್ನೂ, ಕಾಲಾಗ್ನಿಯು ಹುಡುಕಿ ಹುಡುಕಿ ಸುಡುವಂತೆ, ಅರ್ಜುನನೆಂಬ ಅಗ್ನಿಯು ಮೇಲೆ ಮೇಲೆ ಬಿಟ್ಟ ಬಾಣಗಳ ಜ್ವಾಲೆಗಳಿಂದ ಕೌರವ ಸೈನ್ಯವೆಂಬ ಕಾಡನ್ನು ಸುಟ್ಟನು.

ಅರ್ಥ:
ಕಾಲ: ಸಮಯ, ಪ್ರಳಯ; ಪರಿಪಕ್ವ: ಹದವಾಗಿ ಬೇಯಿಸಿರುವುದು, ಪ್ರೌಢವಾದ; ವಿಶಾಲ: ಅಗಲ, ವಿಸ್ತಾರ; ಸ್ಥಾವರ: ಸ್ಥಿರ, ಚಲಿಸದ; ಜಂಗಮ: ಚಲಿಸುವ; ಜಾಲ: ಸಮೂಹ; ಕಪಟ; ಕಾಲಾಗ್ನಿ: ಪ್ರಳಯಕಾಲದ ಬೆಂಕಿ; ಕವಿ:ಆವರಿಸು; ಸುಡು: ದಹಿಸು; ಮೇಲು ಮೇಲು: ಮತ್ತೆ ಮತ್ತೆ; ಕವಿ: ಆವರಿಸು; ಬಾಣ: ಶರ; ಜ್ವಾಲೆ: ಬಂಕಿ; ಸೈನ್ಯ: ಸೇನೆ; ಕಾನನ: ಕಾಡು; ಮಾಲೆ: ಹಾರ; ಕಲಿ: ಶೂರ; ಪಾವಕ: ಅಗ್ನಿ; ಉರುಹು: ಸುಡು; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ಕಾಲದಲಿ +ಪರಿಪಕ್ವವಾದ +ವಿ
ಶಾಲಿತ +ಸ್ಥಾವರದ +ಜಂಗಮ
ಜಾಲವನು+ ಕಾಲಾಗ್ನಿ +ಕವಿಕವಿದಟ್ಟಿ+ ಸುಡುವಂತೆ
ಮೇಲು +ಮೇಲೊಡ+ಕವಿವ +ಬಾಣ
ಜ್ವಾಲೆಯಲಿ+ ಕುರುಸೈನ್ಯ +ಕಾನನ
ಮಾಲೆಯನು +ಕಲಿ+ಪಾರ್ಥ+ಪಾವಕನ್+ಉರುಹಿದನು+ ಮುಳಿದು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಾಣಜ್ವಾಲೆಯಲಿ ಕುರುಸೈನ್ಯ ಕಾನನಮಾಲೆಯನು ಕಲಿಪಾರ್ಥಪಾವಕನುರುಹಿದನು ಮುಳಿದು