ಪದ್ಯ ೪೨: ಯುದ್ಧದಲ್ಲಿ ಮಡಿದವರ ದೃಶ್ಯ ಹೇಗಿತ್ತು?

ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತಧಾರೆಗಳು (ವಿರಾಟ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಒಟ್ಟಾಗಿ ಬಂದ ರಾಜರು ಮುರಿದು ಬಿದ್ದರು. ಯೋಧರ ಗುಂಪಿನಲ್ಲಿ ಬಂದ ಹೆಸರಾಂತ ವೀರರು ದೇಹವನ್ನು ಬಿಟ್ಟು ಹೋದರು. ಅತಿರಥರು ಚೂರು ಚೂರಾದರು, ಆನೆಯ ಹಿಂಡುಗಳು ಪೆಟ್ಟು ತಿಂದು ಯಮನ ಪಾತ್ರೆಯನ್ನು ತುಂಬಿಸುವಂತೆ ರಕ್ತಧಾರೆಯನ್ನು ಸುರಿಸಿದವು.

ಅರ್ಥ:
ಒಗ್ಗೊಡೆ: ಜೊತೆ, ಒಗ್ಗಟ್ಟು; ಔಕು: ಅದುಮು, ಒತ್ತು; ಮಹೀಶ: ರಾಜ; ಮುಗ್ಗು: ಬಾಗು, ಮಣಿ; ಮುನ್ನಾಳು: ಹೆಸರಾಂತ ಪರಾಕ್ರಮಿ; ಮೇಳ: ಗುಂಪು; ಮುಂಕೊಂಡು: ಮುಂದೆ ಬಂದ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿರಿ: ಸೀಳು; ಬಿಸುಟು: ಹೊರಹಾಕು; ಒಡಲು: ದೇಹ; ನುಗ್ಗು: ತಳ್ಳು; ನುಗ್ಗುನುಸಿ: ನುಚ್ಚುನೂರು; ಅತಿರಥ: ಮಹಾ ಪರಾಕ್ರಮಿ; ಗಜ: ಆನೆ; ಮೊಗ್ಗರ: ಗುಂಪು, ಸಮೂಹ, ಸೈನ್ಯ; ಮೊನೆ: ಯುದ್ಧ, ಮುಂಭಾಗ; ಮುರಿ: ಸೀಳು; ಕಾಲ: ಯಮನ; ಸಗ್ಗಳೆ: ಚೊಂಬು; ಸೆಳೆ: ಆಕರ್ಷಿಸು,ಎಳೆತ, ಸೆಳೆತ; ಸುರಿ: ಹರಿ; ರಕ್ತ: ನೆತ್ತರು; ಧಾರೆ: ವರ್ಷ, ಪ್ರವಾಹ;

ಪದವಿಂಗಡಣೆ:
ಒಗ್ಗೊಡೆಯದ್+ಔಕಿದ+ ಮಹೀಶರು
ಮುಗ್ಗಿದರು+ ಮುನ್ನಾಳ +ಮೇಳದವ್
ಒಗ್ಗಿನಲಿ +ಮುಂಕೊಂಡು +ಬಿರುದರು+ ಬಿಸುಟರ್+ಒಡಲುಗಳ
ನುಗ್ಗುನುಸಿಯಾಯ್ತ್+ಅತಿರಥರು +ಗಜ
ಮೊಗ್ಗರದ +ಮೊನೆ +ಮುರಿದು +ಕಾಲನ
ಸಗ್ಗಳೆಯ+ ಸೆಳೆದಂತೆ+ ಸುರಿದವು+ ರಕ್ತಧಾರೆಗಳು

ಅಚ್ಚರಿ:
(೧) ಮ ಕಾರದ ಸಾಲು ಪದ – ಮಹೀಶರು ಮುಗ್ಗಿದರು ಮುನ್ನಾಳ ಮೇಳದವೊಗ್ಗಿನಲಿ ಮುಂಕೊಂಡು
(೨) ಸ ಕಾರದ ತ್ರಿವಳಿ ಪದ – ಸಗ್ಗಳೆಯ ಸೆಳೆದಂತೆ ಸುರಿದವು

ಪದ್ಯ ೪೧: ಬಾಣಗಳು ಯಾರಿಗೆ ಸತ್ರವನ್ನಿಟ್ಟವು?

ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಕುಲಕೆ ಸತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು (ವಿರಾಟ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳು ಕುದುರೆಯ ಸೈನ್ಯದಲ್ಲಿದ್ದ ಯೋಧರನ್ನು ಆರಿಸಿ ಕೊಂದವು. ಸುಭಟರು ಗುಂಪುಗುಂಪಾಗಿ ಬಿದ್ದರು. ಆನೆಗಳ ಸಾಲನ್ನು ಹೊಕ್ಕು ಬಾಣಗಳು ನಟ್ಟವು. ರಕ್ತಸಿಂಚಿತವಾದ ತುದಿಗಳಿಂದ ಎದುರಿಸಿ ನಿಂತವರನ್ನು ಮುಕ್ಕಿ ಬಿಟ್ಟವು. ರಣದೇವತೆಗಳಿಗೆ ಮಾಂಸವನ್ನು ಬಲಿಕೊಟ್ಟವು. ದಿಗಂತಕ್ಕೆ ಹಾರಿ ಅಲ್ಲಿ ಛತ್ರವನ್ನಿಟ್ಟವು.

ಅರ್ಥ:
ಹಿಕ್ಕು: ಬಿಡಿಸು, ಬೇರ್ಪಡಿಸು; ಹಯ: ಕುದುರೆ; ಬಲ: ಶಕ್ತಿ; ಸುಭಟ: ಶೂರ; ಒಕ್ಕು: ಹರಿ, ಪ್ರವಹಿಸು; ತೂರು: ಹೊರಕ್ಕೆ ಚಾಚು; ಆನೆ: ಗಜ; ಸಾಲು: ಆವಳಿ; ನಟ್ಟು: ಸೇರು; ಬಹಳ: ತುಂಬ; ರಕ್ತ: ನೆತ್ತರು; ಕೆಸರು: ರಾಡಿ, ಪಂಕ; ಕೈ: ಹಸ್ತ; ಮುಕ್ಕು: ನಾಶಮಾಡು; ಮಲೆ:ಎದುರಿಸು; ಮಾಂಸ: ಅಡಗು; ಇಕ್ಕು: ಇರಿಸು, ಇಡು; ದ್ವಿಜ: ಬ್ರಾಹ್ಮಣ; ಕುಲ: ವಂಶ; ಸತ್ರ: ಛತ್ರ; ಕೂಟ; ದಿಗುವಳೆ: ದಿಗಂತ; ರಣಧೀರ: ಪರಾಕ್ರಮಿ; ಅಂಬು: ಬಾಣ;

ಪದವಿಂಗಡಣೆ:
ಹಿಕ್ಕಿದವು +ಹಯ+ಬಲದ +ಸುಭಟರನ್
ಒಕ್ಕಿ +ತೂರಿದವ್+ಆನೆಗಳ +ಸಾ
ಲಿಕ್ಕಿ +ನಟ್ಟವು +ಬಹಳ +ರಕ್ತದ +ಕೆಸರ +ಕೈಗಳಲಿ
ಮುಕ್ಕಿದವು +ಮಲೆತವರ+ ಮಾಂಸವನ್
ಇಕ್ಕಿದವು +ದ್ವಿಜಕುಲಕೆ +ಸತ್ರವನ್
ಇಕ್ಕಿದವು +ದಿಗುವಳೆಯದಲಿ +ರಣಧೀರನ್+ಅಂಬುಗಳು

ಅಚ್ಚರಿ:
(೧) ಬಾಣಗಳನ್ನು ಚಿತ್ರಿಸಿರುವ ಪರಿ – ಹಿಕ್ಕಿದವು ಹಯಬಲದ ಸುಭಟರನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ

ಪದ್ಯ ೪೦: ಮಂತ್ರಾಸ್ತ್ರಗಳು ಏನೆಂದು ಬೇಡಿದವು?

ಮುಂದೆ ಕವಿದಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ (ವಿರಾಟ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಮುಂದೆ ಹೋದ ಬಾಣಗಳು ಸೈನ್ಯದ ಭಟರನ್ನು ಕೊಂದವು. ಅದರ ಹಿಂದೆ ಬಂದ ಬಾಣಗಳಿಗೆ ಯಾವು ಗುರಿಯೂ ಇಲ್ಲ. ಒಂದು ಗುರಿಗೆ ಎರಡು ಬಾಣಗಳನ್ನು ಬಿಡಬೇಡೆಂದು ಮಂತ್ರಾಸ್ತ್ರಗಳು ಅರ್ಜುನನನ್ನು ಬೇಡಿದವು.

ಅರ್ಥ:
ಮುಂದೆ: ಎದುರು; ಕವಿ: ಆವರಿಸು; ಅಂಬು: ಬಾಣ; ಸುಭಟ: ಶೂರ; ಕೊಂದು: ಸಾಯಿಸು; ಬಿದ್ದು: ಬೀಳು; ಮತ್ತೆ: ಪುನಃ; ಬಳಿ: ಹತ್ತಿರ; ಬಂದು: ಆಗಮಿಸು; ಗುರಿ: ಲಕ್ಷ್ಯ; ತೊಡು: ಧರಿಸು; ಬೇಡು: ಕೋರು; ಸಂದ: ಕಳೆದ; ಅಸ್ತ್ರ: ಶಸ್ತ್ರ; ಸಂಗ: ಒಡನಾಟ; ಕ್ಷಿತಿಪ: ರಾಜ;

ಪದವಿಂಗಡಣೆ:
ಮುಂದೆ +ಕವಿದ್+ಅಂಬುಗಳು +ಸುಭಟರ
ಕೊಂದು +ಬಿದ್ದವು +ಮತ್ತೆ +ಬಳಿಯಲಿ
ಬಂದವಕೆ+ ಗುರಿಯಿಲ್ಲ +ಹೇಳುವೆನೇನ್+ಅದ್ಭುತವ
ಒಂದು +ಗುರಿಗ್+ಎರಡ್+ಅಂಬ +ತೊಡಬೇ
ಡೆಂದು +ಪಾರ್ಥನ +ಬೇಡಿಕೊಂಡವು
ಸಂದ +ಮಂತ್ರಾಸ್ತ್ರಂಗಳ್+ಎಲೆ +ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ಅಸ್ತ್ರಗಳ ಬೇಡಿಕೆ: ಒಂದು ಗುರಿಗೆರಡಂಬ ತೊಡಬೇಡೆಂದು ಪಾರ್ಥನ ಬೇಡಿಕೊಂಡವು

ಪದ್ಯ ೩೯: ಸತ್ತ ಸೈನಿಕರ ಸ್ಥಿತಿ ಹೇಗಿತ್ತು?

ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟಿಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರ ಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಕಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ (ವಿರಾಟ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಗುರಾಣಿ ಕತ್ತರಿಸಿ ಬಿದ್ದು, ಕವಚ ಶಿರಸ್ತ್ರಾಣಗಳು ಕಡಿದು, ತೋಳು ಕತ್ತರಿಸಿ, ಕತ್ತು ಅರ್ಧ ಕತ್ತರಿಸಿ, ಎಲುಬುಗಳು ಮುರಿದು, ತೊಡೆಗಳು ಅರೆಕತ್ತರಿಸಿ, ನರಗಳು ಹರಿದು, ಕರುಳು ಪಿತ್ತಕೋಶ ಗುಲ್ಮಗಳು ಹೊರ ಬಂದು, ಚರ್ಮಹರಿದು, ರಕ್ತಸುರಿದು ಕಾಲಾಳುಗಳು ಬಿದ್ದರು.

ಅರ್ಥ:
ಹರಿ: ಕಡಿ, ಕತ್ತರಿಸು; ಖಂಡಿಸು: ಕಡಿ, ಕತ್ತರಿಸು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಜರಿ: ಬೀಳು; ತೋಳು: ಭುಜ; ಗೋಣು: ಕುತ್ತಿಗೆ, ಗಳ; ನಿಟಿಲ: ಭಾಳ, ಹಣೆ; ಮುರಿ: ಸೀಳು; ತೊಡೆ: ಊರು; ಕಡಿ: ಕತ್ತರಿಸು; ತಲೆ: ಶಿರ; ಒಡೆ: ಸೀಳು; ನರ: ಅವಯವಗಳಿಂದ ಸಂವೇದನೆಗಳನ್ನೂ, ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ – ತಂತು, ಶಕ್ತಿ; ಕರುಳು: ಪಚನಾಂಗ; ನೆಣ: ಕೊಬ್ಬು, ಮೇದಸ್ಸು; ಉಬ್ಬರ: ಅತಿಶಯ; ಕಾಳಿಜ: ಪಿತ್ತಾಶಯ; ಕಾಯ್ದು:ಬಿಸಿಯಾದ; ನೆತ್ತರು: ರಕ್ತ; ಸುರಿ: ಹೊರಹೊಮ್ಮು; ಹರಿ: ಪ್ರವಹಿಸು; ತೊಗಲು: ಚರ್ಮ, ತ್ವಕ್ಕು; ಹೊರಳು: ಜಾರು; ಪಾಯದಳ: ಸೈನಿಕ; ಉಡಿ: ಸೊಂಟ;

ಪದವಿಂಗಡಣೆ:
ಹರಿಗೆ +ಖಂಡಿಸಿ +ಜೋಡು +ಸೀಸಕ
ಜರಿದು +ಬಲು+ತೋಳ್+ಉಡಿದು+ ಗೋಣರೆ
ಹರಿದು +ನಿಟ್ಟಿಲು +ಮುರಿದು +ತೊಡೆ+ಅರೆಕಡಿದು+ ತಲೆ+ಒಡೆದು
ನರ +ಹರಿದು +ಕರುಳೊಕ್ಕು +ನೆಣನ್
ಉಬ್ಬರಿಸಿ +ಕಾಳಿಜ +ಕಾಯ್ದು +ನೆತ್ತರು
ಸುರಿದು+ ಹರಿ+ತೊಗಲಿನಲಿ+ ಹೊರಳಿತು +ವೈರಿ +ಪಾಯದಳ

ಅಚ್ಚರಿ:
(೧) ಹರಿ, ಜರಿ, ಸುರಿ, ಮುರಿ – ಪ್ರಾಸ ಪದಗಳು

ಪದ್ಯ ೩೮: ರಣರಂಗವು ಹೇಗೆ ತೋರಿತು?

ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮ ಸೀಳಾಗಿ ಬಿದ್ದವು ಗಜದ ಹೋಳುಗಳು
ಕೊರಳು ಹರಿದೊರತೆಯಲಿ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರಗ ರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು (ವಿರಾಟ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕಾಲಾಳುಗಳು ಕರುಳನ್ನು ಕಾರಿಕೊಂಡು ಬಿದ್ದರು. ಬೋಳೆ ಅಂಬುಗಳು ಆನೆಗಳನ್ನು ಸಮವಾಗಿ ಸೀಳಿದವು. ಸೈನಿಕರ, ಆನೆ ಕುದುರೆಗಳ ತಲೆ ಹಾರಿ ಚಿಮ್ಮಿ ಒರತೆಯಾಗಿ ಹರಿದು ತೊರೆಯಾದ ರಕ್ತದಲ್ಲಿ ಕುದುರೆಗಳು, ರಥಗಳು ಮುಳುಗಿ ಹೋದವು. ಹೊಸದಾಗಿ ಕಡಿದ ಕಾಡಿನಂತೆ ರಣರಂಗವು ತೋರಿತು.

ಅರ್ಥ:
ಕರುಳು: ಪಚನಾಂಗ; ಕಾರಿ: ಜವುಗು ಭೂಮಿ, ಚೌಳು ನೆಲ; ಕಾಲಾಳು: ಸೈನಿಕರು; ಕೆಡೆ: ಬೀಳು, ಕುಸಿ; ಬೋಳೆ: ಒಂದು ಬಗೆಯ ಹರಿತವಾದ ಬಾಣ; ಅಂಬು: ಬಾಣ; ಸಮ: ಸರಿಸಮಾನವಾದುದು; ಸೀಳು: ಚೂರು, ತುಂಡು; ಬೀಳು: ಕುಸಿ; ಗಜ: ಕರಿ; ಹೋಳು: ಚೂರು, ತುಂಡು; ಕೊರಳು: ಗಂಟಲು; ಹರಿ: ಕಡಿ, ಕತ್ತರಿಸು; ಒರತೆ: ನೀರು ಜಿನುಗುವ ತಗ್ಗು; ರಕುತ: ನೆತ್ತರು; ಹೊರಳಿ: ಗುಂಪು, ಸಮೂಹ; ಹೊನಲು: ನೀರೋಟ; ಮುಳುಗು: ನೀರಿನಲ್ಲಿ ಮೀಯು; ತುರಗ: ಅಶ್ವ; ರಥ: ಬಂಡಿ; ಕುಮ್ಮರಿ: ಕಾಡನ್ನು ಕಡಿದು ಸಾಗುವಳಿ ಮಾಡಿದ ಪ್ರದೇಶ; ಹೊಸ: ನವೀನ; ಹೋಲು: ಸದೃಶವಾಗು; ರಾಜಿ: ಪಂಕ್ತಿ; ದಳ: ಸೈನ್ಯ, ಪಡೆ;

ಪದವಿಂಗಡಣೆ:
ಕರುಳ +ಬಾಯಲಿ +ಕಾರಿ +ಕಾಲಾಳ್
ಒರಳಿ +ಕೆಡೆದುದು +ಬೋಳೆ+ಅಂಬುಗಳ್
ಅರಿಯೆ +ಸಮ +ಸೀಳಾಗಿ +ಬಿದ್ದವು +ಗಜದ +ಹೋಳುಗಳು
ಕೊರಳು +ಹರಿದ್+ಒರತೆಯಲಿ+ ರಕುತದ
ಹೊರಳಿಗಳ+ ಹೊನಲಿನಲಿ +ಮುಳುಗಿತು
ತುರಗ+ ರಥದಳ+ರಾಜಿ+ ಹೊಸ+ ಕುಮ್ಮರಿಯ +ಹೋಲಿಸಿತು

ಅಚ್ಚರಿ:
(೧) ರಣರಂಗವನ್ನು ಹೋಲಿಸುವ ಪರಿ – ರಕುತದ ಹೊರಳಿಗಳ ಹೊನಲಿನಲಿ ಮುಳುಗಿತು ತುರಗ ರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು

ಪದ್ಯ ೩೭: ಅರ್ಜುನನ ಬಾಣದ ತೀವ್ರತೆ ಹೇಗಿತ್ತು?

ತುಡುಕಿ ಖಂಡವ ಕಚ್ಚಿ ಹಾರುವ
ಗಿಡುಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳ ನಡೆ
ಗೆಡಹಿದವು ಗರಿಸಹಿತ ಹಾಯ್ದವು ಹಯದ ಹೊಟ್ಟೆಯಲಿ (ವಿರಾಟ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ಮಾಮ್ಸದ ತುಂಡನ್ನು ಕಚ್ಚಿ ಹಾರುವ ಗಿಡುಗದಂತೆ, ಸೈನಿಕರ ಗಂಟಲುಗಳನ್ನು ಕತ್ತರಿಸಿ ಪಕ್ಕದಲ್ಲಿ ಬಿದ್ದ ತಲೆಗಳ ರಾಶಿಯಲ್ಲಿ ನಟ್ಟವು. ಆನೆಗಳ ಎಲುಬುಗಳು ನಿರಿನಿಟಿಲೆನ್ನುವಂತೆ ಮಾಡಿ ಅವನ್ನು ಕೆಡವಿದವು. ಬಾಣಸಹಿತವಾಗಿ ಕುದುರೆಗಳ ಹೊಟ್ಟೆಯನ್ನು ಹೊಕ್ಕು ಆಚೆಗೆ ಬಂದವು.

ಅರ್ಥ:
ತುಡುಕು: ಮುನ್ನುಗ್ಗು; ಖಂಡ: ತುಂಡು, ಚೂರು; ಕಚ್ಚು: ಕತ್ತರಿಸು; ಹಾರು: ಜಿಗಿ; ಭಟ: ಸೈನಿಕ; ಗಂಟಲು: ಕೊರಳು; ಕಡಿ: ಸೀಳು; ಹಾಯಿ: ಮೇಲೆ ಬೀಳು, ಚಾಚು; ಅಂಬು: ನೀರು; ಬಳಿ: ಹತ್ತಿರ; ಕೊಂದು: ಸಾಯಿಸು; ತಲೆ: ಶಿರ; ಅಡಸು: ತುರುಕು, ಮುತ್ತು; ನಿರಿನಿಟಿಲು: ನಿರಿನಿರಿ ಎಂಬ ಶಬ್ದ; ಥಟ್ಟು: ಪಕ್ಕ, ಕಡೆ; ಆನೆ: ಕರಿ; ನಡೆ: ಚಲನೆ; ಕೆಡಹು: ಬೀಳಿಸು; ಗರಿ: ಬಾಣದ ಹಿಂಭಾಗ; ಸಹಿತ: ಜೊತೆ; ಹಯ: ಕುದುರೆ; ಹೊಟ್ಟೆ: ಉದರ; ಎಲುವು: ಮೂಳೆ;

ಪದವಿಂಗಡಣೆ:
ತುಡುಕಿ +ಖಂಡವ +ಕಚ್ಚಿ +ಹಾರುವ
ಗಿಡುಗನಂತಿರೆ +ಭಟರ +ಗಂಟಲ
ಕಡಿದು +ಹಾಯ್ದ್+ಅಂಬುಗಳು +ಬಳಿಯಲಿ +ಕೊಂದ +ತಲೆಗಳಲಿ
ಅಡಸಿದವು +ನಿರಿನಿಟಿಲುಗರೆದ್+ಎಲುವ್
ಒಡೆಯೆ +ಥಟ್ಟುಗಿದ್+ಆನೆಗಳ +ನಡೆ
ಕೆಡಹಿದವು +ಗರಿಸಹಿತ +ಹಾಯ್ದವು +ಹಯದ +ಹೊಟ್ಟೆಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಾಯ್ದವು ಹಯದ ಹೊಟ್ಟೆಯಲಿ
(೨) ಉಪಮಾನದ ಪ್ರಯೋಗ – ತುಡುಕಿ ಖಂಡವ ಕಚ್ಚಿ ಹಾರುವ ಗಿಡುಗನಂತಿರೆ

ಪದ್ಯ ೩೬: ಅರ್ಜುನ ಬಾಣಗಳ ಪ್ರಭಾವ ಹೇಗಿತ್ತು?

ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ (ವಿರಾಟ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ಗರ್ಜಿಸಿ ಬಿಟ್ಟ ಬಾಣಗಳು ಕಬ್ಬಕ್ಕಿಗಳಂತೆ ಕೌರಾ ಸೈನ್ಯವನ್ನು ಆವರಿಸಿ ಆಕಾಶವನ್ನು ತುಂಬಿದವು. ವೀರರನ್ನು ಕಡಿದು ಹಾಕಿ, ಆನೆಗಳ ಗುಂಪುಗಳನ್ನು ಕೊಂದು ಮೆದೆಮಾಡಿ, ಗಾಂಡಿವದ್ದ ಹೆದೆಯಿಂದ ಚಿಮ್ಮಿ ಆಕಾಶವನ್ನಾವರಿಸಿದವು.

ಅರ್ಥ:
ಬೊಬ್ಬಿರಿದು: ಗರ್ಜಿಸು, ಆರ್ಭಟ; ನರ: ಅರ್ಜುನ; ಎಸೆ: ಬಾಣ ಬಿಡು; ಕಣೆ: ಬಾಣ; ಹಬ್ಬು: ಆವರಿಸು; ಹುರಿ: ಉತ್ಸಾಹ, ಹುರುಪು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಒಬ್ಬುಳಿ: ಗುಂಪು, ಸಮೂಹ; ಹರೆ: ವ್ಯಾಪಿಸು, ವಿಸ್ತರಿಸು, ಚದುರು; ಕಡಿ: ಸೀಳು; ಕರಿ: ಆನೆ; ಹೊದರು: ಪೊದೆ, ಹಿಂಡಲು; ಮೆದೆ: ಹುಲ್ಲಿನ ರಾಶಿ; ಕೆಡಹು: ಕಡಿ, ಸೀಳು; ತೆಬ್ಬು: ಬಿಲ್ಲಿನ ತಿರುವು; ಒದೆ: ನೂಕು; ಬಳಿಕ: ನಂತರ; ಗರಿ: ಬಾಣದ ಹಿಂಭಾಗ; ಮೊರೆ: ಗೋಳಾಟ, ಹುಯ್ಯಲು; ಅಬ್ಬರಿಸು: ಗರ್ಜಿಸು; ಕಬ್ಬಕ್ಕಿ: ಕರಿಯ ಹಕ್ಕಿ; ಗಗನ: ಆಗಸ; ಹಬ್ಬು: ಹರಡು, ಆವರಿಸು; ಮಸಗು: ಹರಡು; ಕೆರಳು; ತಿಕ್ಕು; ಶರ: ಬಾಣ; ಜಾಲ: ಗುಂಪು;

ಪದವಿಂಗಡಣೆ:
ಬೊಬ್ಬಿರಿದು+ ನರನ್+ಎಸಲು+ ಕಣೆಗಳು
ಹಬ್ಬಿದವು+ ಹುರಿಗೊಂಡು +ಹೂಣಿಗರ್
ಒಬ್ಬುಳಿಯ +ಹರೆ+ಕಡಿದು +ಕರಿಗಳ+ ಹೊದರ +ಮೆದೆ+ಕೆಡಹಿ
ತೆಬ್ಬನ್+ಒದೆದುರೆ +ಬಳಿಕ +ಗರಿ+ ಮೊರೆದ್
ಅಬ್ಬರಿಸಿ +ಕಬ್ಬಕ್ಕಿ +ಗಗನವ
ಹಬ್ಬಿದಂತಿರೆ +ಮಸಗಿದವು+ ಫಲುಗುಣನ +ಶರ+ಜಾಲ

ಅಚ್ಚರಿ:
(೧) ಹ ಕಾರದ ಸಾಲು ಪದಗಳು – ಹಬ್ಬಿದವು ಹುರಿಗೊಂಡು ಹೂಣಿಗರೊಬ್ಬುಳಿಯ ಹರೆಗಡಿದು
(೨) ಉಪಮಾನದ ಪ್ರಯೋಗ – ಕಬ್ಬಕ್ಕಿ ಗಗನವ ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ

ಪದ್ಯ ೩೫: ಕುರುಸೈನ್ಯವು ಏನೆಂದು ಅಬ್ಬರಿಸಿತು?

ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರುಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊಕ್ಕ ಹಗೆವನ
ಸರಳಿಗುಸಿರನು ತೆರದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟುದು ರಾಯನಿದಿರಿನೊಳು (ವಿರಾಟ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಅರ್ಜುನನ ಧಾಳಿಗೆ ಬೆದರಿ, ಗೋವುಗಳ ಹಿಂಡನ್ನು ಹಿಂದಕ್ಕೆ ಹೊಡೆಯಿರಿ, ಗೋಪಾಲಕರ ಹೆಡಗೈಕಟ್ಟುಗಳನ್ನು ಕತ್ತರಿಸಿ ಹಾಕಿರಿ, ನಮ್ಮ ರಾಜನು ನೀತಿಯನ್ನು ಬಿಟ್ಟು ಗೋವುಗಳನ್ನು ಸೆರೆಹಿಡಿದಿದ್ದಾನೆ, ಹೀಗೆ ರಾಜರು ಮಾಡಬಹುದೇ ನಮ್ಮ ಕೊರಳುಗಳನ್ನು ಕಡಿಯಲು ಬಂದ ಶತ್ರುವಿಗೆ ಪ್ರಾಣವನ್ನು ಕೊಡಬೇಡಿರಿ ಎಂದು ಬಾಯ್ಬಾಯಿ ಬಿಟ್ಟು ಕೂಗಿದರು.

ಅರ್ಥ:
ಮರಳಿ: ಮತ್ತೆ; ಹೊಡೆ: ಏಟು, ಹೊಡೆತ; ಹಿಂಡು: ಗುಂಪು; ಆಕಳ: ಹಸು; ಗೋವರ: ಆಕಳು, ಗೋವು; ಬಿಡು: ತೊರೆ; ಹೆಡಗೈ: ಕೈ ಹಿಂಭಾಗ; ಕೊಯ್: ಸೀಳೂ; ಅರಸ: ರಾಜ; ನಯ: ಶಾಸ್ತ್ರ ರಾಜನೀತಿ; ತುರು: ಆಕಳು; ಸೆರೆ: ಬಂಧನ; ನೃಪ: ರಾಜ; ಕೊರಳು: ಗಂಟಲು; ಕಡಿತ: ಕತ್ತರಿಸು; ಹೊಕ್ಕು: ಸೇರು; ಹಗೆ: ವೈರತನ; ಸರಳ: ಬಾನ: ಉಸಿರು: ಜೀವ; ತೆರದಿರಿ: ಕೊಡಬೇಡಿರಿ; ಅಬ್ಬರಿಸು: ಗರ್ಜಿಸು; ಕುರುಬಲ: ಕುರು ಸೈನ್ಯ; ಇದಿರು: ಎದುರು;

ಪದವಿಂಗಡಣೆ:
ಮರಳಿ +ಹೊಡೆ +ಹಿಂಡ್+ಆಕಳನು +ಗೋ
ವರನು +ಬಿಡು +ಹೆಡಗೈಯ +ಕೊಯ್ +ನ
ಮ್ಮರಸ +ನಯದಪ್ಪಿದನು +ತುರು+ಸೆರೆವಿಡಿವರೇ+ ನೃಪರು
ಕೊರಳ+ ಕಡಿತಕೆ +ಹೊಕ್ಕ +ಹಗೆವನ
ಸರಳಿಗ್+ಉಸಿರನು +ತೆರದಿರೆಂದ್
ಅಬ್ಬರಿಸಿ +ಕುರುಬಲ+ ಬಾಯಬಿಟ್ಟುದು+ ರಾಯನ್+ಇದಿರಿನೊಳು

ಅಚ್ಚರಿ:
(೧) ಗೋ, ತುರು, ಆಕಳು; ರಾಯ, ಅರಸ, ನೃಪ – ಸಮನಾರ್ಥಕ ಪದಗಳು

ಪದ್ಯ ೩೪: ಕುರುಸೇನೆಯು ಏನೆಂದು ಮಾತಾಡಿತು?

ಎಲೆಲೆ ನರನೋ ಸುಭಟಜೀವರ
ದಳದುಳಿಗನೋ ದಿಟ್ಟರಾಯರ
ದಳದ ವಹ್ನಿಯೊ ಪಾರ್ಥನೋ ಫಡ ಕಾಲಭೈರವನೋ
ಗೆಲುವರಾವೆಡೆ ಕರ್ಣಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ (ವಿರಾಟ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯದ ಯೋಧರು, ಎಲೋ ಸುಭಟರನ್ನು ಸದೆಬಡಿಯುವ, ಬಲಶಾಲಿ ರಾಜ್ರ ಸೈನ್ಯಕ್ಕೆ ಬೆಂಕಿಯಾದ ಅರ್ಜುನನು ಬಂದ, ಇವನು ಅರ್ಜುನನಲ್ಲ, ಕಾಲಭೈರವ, ಇವನೊಡನೆ ಕಾದಿ ಗೆಲ್ಲುವ ವೀರರೆಲ್ಲಿಗೆ ಹೋದರು? ಕರ್ಣ, ಕೃಪ, ಶಕುನಿ, ಜಯದ್ರಥರ ನಾಲಗೆ ಕತ್ತಿನ ಹಿಂದಕ್ಕೆ ಹೋಗಿದೆ ಎಂದು ಕೌರವಸೇನೆಯು ಮಾತಾಡಿಕೊಂಡಿತು.

ಅರ್ಥ:
ನರ: ಅರ್ಜುನ; ಸುಭಟ: ಪರಾಕ್ರಮಿ; ಜೀವ: ಪ್ರಾಣ; ದಳದುಳ: ಯುದ್ಧ; ದಿಟ್ಟ: ಧೈರ್ಯಶಾಲಿ, ಸಾಹಸಿ; ರಾಯ: ರಾಜ; ದಳ: ಸೈನ್ಯ; ವಹ್ನಿ: ಬೆಂಕಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ಗೆಲುವು: ಜಯ; ಹೆಡತಲೆ: ಹಿಂದಲೆ; ನಾಲಗೆ: ಜಿಹ್ವೆ; ಕೂಡೆ: ಜೊತೆ;

ಪದವಿಂಗಡಣೆ:
ಎಲೆಲೆ +ನರನೋ +ಸುಭಟ+ಜೀವರ
ದಳದುಳಿಗನೋ +ದಿಟ್ಟರಾಯರ
ದಳದ+ ವಹ್ನಿಯೊ +ಪಾರ್ಥನೋ +ಫಡ+ ಕಾಲಭೈರವನೋ
ಗೆಲುವರಾವೆಡೆ+ ಕರ್ಣ+ಕೃಪ+ ಸೌ
ಬಲ+ ಜಯದ್ರಥರೆಂಬವರ+ ಹೆಡ
ತಲೆಗೆ +ನಾಲಗೆ +ಹೋಯಿತೆಂದುದು +ಕೂಡೆ +ಕುರುಸೇನೆ

ಅಚ್ಚರಿ:
(೧) ಪಾರ್ಥನ ಪರಾಕ್ರಮವನ್ನು ಹೇಳುವ ಪರಿ – ಸುಭಟಜೀವರದಳದುಳಿಗನೋ ದಿಟ್ಟರಾಯರ ದಳದ ವಹ್ನಿಯೊ ಪಾರ್ಥನೋ ಫಡ ಕಾಲಭೈರವನೋ

ಪದ್ಯ ೩೩: ಕೌರವರ ಸೈನ್ಯದ ಸ್ಥಿತಿ ಹೇಗಾಯಿತು?

ಬಿರಿದುವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಢ ಗರ್ಜನೆಗೆ
ಶಿರವೊಡೆದು ಸಿಡಿಯಿತು ಪದಾತಿಯ
ನರನ ಶಂಖಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿಬಿದ್ದುದು ಹೆದರಿ ಹೆಮ್ಮೈಸಿ (ವಿರಾಟ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನ ಧನುಷ್ಟಂಕಾರಕ್ಕೆ ಆನೆಗಳ ತಲೆ ಬಿರಿಯಿತು. ಹನುಮಂತನ ಅದ್ಭುತ ಗರ್ಜನೆಗೆ ಅತಿರಥರ ಬಾಯಲ್ಲಿ ಗುಲ್ಮವು ಹೊರಬಂತು. ದೇವದತ್ತದ (ಶಂಖದ ಹೆಸರು) ಧ್ವನಿಗೆ ಪದಾತಿಗಳ ತಲೆಗಳು ಒಡೆದು ಸಿಡಿದವು, ಕೌರವ ಸೈನ್ಯವು ಹೆದರಿ ಗೋಳಾಡುತ್ತಾ ಚೆಲಾಪಿಲ್ಲಿಯಾಗಿ ಓಡಿತು.

ಅರ್ಥ:
ಬಿರಿ: ಬಿರುಕು, ಸೀಳು; ಆನೆ: ಕರಿ, ಗಜ; ಬಿಲು: ಬಿಲ್ಲು; ಅಬ್ಬರ: ಗರ್ಜನೆ; ಅತಿರಥ: ಪರಾಕ್ರಮ; ಒರಳು: ಒರಳುಕಲ್ಲು; ಬಾಯ್ದೊರಳು: ಹಲ್ಲು; ಹಾಯು: ನೆಗೆ, ಹಾರು; ವೀರ: ಪರಾಕ್ರಮ; ಗಾಢ: ಹೆಚ್ಚಳ, ಅತಿಶಯ; ಗರ್ಜನೆ: ಬೊಬ್ಬೆ; ಶಿರ: ತಲೆ; ಒಡೆ: ಸೀಳು; ಸಿಡಿ: ಚಿಮ್ಮು; ಪದಾತಿ: ಕಾಲಾಳು; ನರ: ಅರ್ಜುನ; ಶಂಖ: ಕಂಬು; ಧ್ವನಿ: ರವ; ಹೊರಳಿ: ಗುಂಪು, ಸಮೂಹ; ಹಾರು: ಜಿಗಿ; ಹೆದರು: ಅಂಜು; ಹಮ್ಮೈಸು: ಗರ್ವಪಡು;

ಪದವಿಂಗಡಣೆ:
ಬಿರಿದುವ್+ಆನೆಗಳ್+ಅರ್ಜುನನ +ಬಿಲು
ದಿರುವಿನ್+ಅಬ್ಬರಕ್+ಅತಿರಥರ +ಬಾ
ಯ್ದೊರಳೆ +ಹಾಯ್ದವು +ವೀರ +ಹನುಮನ +ಗಾಢ +ಗರ್ಜನೆಗೆ
ಶಿರವೊಡೆದು +ಸಿಡಿಯಿತು +ಪದಾತಿಯ
ನರನ+ ಶಂಖಧ್ವನಿಗೆ +ಕುರುಬಲ
ಹೊರಳಿಯೊಡೆದುದು+ ಹಾರಿಬಿದ್ದುದು +ಹೆದರಿ+ ಹೆಮ್ಮೈಸಿ

ಅಚ್ಚರಿ:
(೧) ಹ ಕಾರದ ಸಾಲು ಪದ – ಹೊರಳಿಯೊಡೆದುದು ಹಾರಿಬಿದ್ದುದು ಹೆದರಿ ಹೆಮ್ಮೈಸಿ
(೨) ಹಲ್ಲು ಎಂದು ಹೇಳಲು – ಬಾಯ್ದೊರಳೆ