ಪದ್ಯ ೩೩: ಶಲ್ಯನು ಧರ್ಮಜನಿಗೆ ಏನುತ್ತರವ ನೀಡಿದನು?

ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಯಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ
ಜನಪ ಧರ್ಮದ ಹಿಂದೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಿನಗೆ ನಾವು ಸೋದರ ಮಾವಂದಿರಲ್ಲವೇ? ನಮ್ಮ ಮೇಲೆ ಸಿಟ್ಟಾಗು, ತಪ್ಪಲ್ಲ, ಆದರೆ ದುಶ್ಯಾಸನ ಜಯದ್ರಥರು ನಿನಗೆ ಸದ್ಯದ ಬಂಧುಗಳಲ್ಲವೇ? ನಿನಗೆ ಧರ್ಮ ನಿಷ್ಠೆಯ ಹಿಂದೆ ಮನಸ್ಸಿನ ಮಹಾಗರ್ವ ಬಂದಿದೆ. ಅದನ್ನಾಡಿ ಏನು ಪ್ರಯೋಜನ ಎಂದು ಶಲ್ಯನು ಬಾಣ ಪ್ರಯೋಗ ಮಾಡಿದನು.

ಅರ್ಥ:
ಮಾತುಳ: ಮಾವ; ಮಾಣು: ನಿಲ್ಲಿಸು, ಸುಮ್ಮನಿರು; ಮುನಿ: ಸಿಟ್ಟಾಗು, ಕೋಪಗೊಳ್ಳು; ಮೊರೆ: ಪ್ರಾರ್ಥನೆ; ಆಶ್ರಯ; ಸಂಬಂಧಿ: ಬಂಧು; ಜನಪ: ರಾಜ; ಸಾಕು: ನಿಲ್ಲು, ತಡೆ; ಮನ: ಮನಸ್ಸು; ಗರ್ವ: ಅಹಂಕಾರ; ಗಾಢ: ಹೆಚ್ಚಳ, ಅತಿಶಯ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನಿನಗೆ +ಮಾತುಳರ್+ಆವು+ ಮಾಣಲಿ
ಮುನಿ+ಎಮಗೆ +ಮೊರೆಯಲ್ಲ +ದುಶ್ಯಾ
ಸನ +ಜಯದ್ರಥರಲ್ಲಲಾ+ ಸಂಬಂಧಿಗಳು +ನಿನಗೆ
ಜನಪ +ಧರ್ಮದ +ಹಿಂದೆ +ಬಂದುದು
ನಿನಗೆ +ಸಾಕ್+ಅದನ್+ಆಡಲೇತಕೆ
ಮನದ +ಗರ್ವದ +ಗಾಢವೈಸೆನುತ್+ಎಚ್ಚನಾ +ಶಲ್ಯ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಾತುಳರಾವು ಮಾಣಲಿ ಮುನಿಯೆಮಗೆ ಮೊರೆಯಲ್ಲ

ಪದ್ಯ ೩೪: ಅರ್ಜುನನು ಕೋಪದಿಂದ ಏನು ಹೇಳಿದನು?

ಹೇಳು ಹೇಳಿನ್ನೇನು ಮಾರಿಯ
ಮೇಳವಾಡಿದನೇ ಜಯದ್ರಥ
ನಾಳುತನವನು ಬವರದಲಿ ತನ್ನೊಡನೆ ತೋರಿದನೆ
ನಾಳೆ ಬೈಗಿಂದೊಳಗೆ ರಿಪುವನು
ಸೀಳುವೆನು ಸೀಳದಿರೆ ಧರ್ಮಜ
ಕೇಳು ಭಾಷೆಯನೆಂದು ಮಿಗೆ ಗರ್ಜಿಸಿದನಾ ಪಾರ್ಥ (ದ್ರೋಣ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ರೌದ್ರಭಾವದಿಂದ, ಹೇಳು, ಇನ್ನೊಮ್ಮೆ ಹೇಳು, ಜಯದ್ರಥನು ಮಾರಿಯ ಮೇಳದಲ್ಲಾಡಿದನೇ? ನನ್ನೊಡನೆ ಯುದ್ಧದಲ್ಲಿ ಪರಾಕ್ರಮವನ್ನು ತೋರಿಸಿದನೇ? ನಾಳೆ ಸಂಜೆಯೊಳಗೆ ಅವನನ್ನು ಸೀಳಿಹಾಕುತ್ತೇನೆ. ಸೀಳದೆ ಇದ್ದರೆ ಏನು ಮಾಡುವೆನೆಂಬ ಪ್ರತಿಜ್ಞೆಯನ್ನು ಕೇಳು ಎಂದು ಗರ್ಜಿಸಿದನು.

ಅರ್ಥ:
ಹೇಳು: ತಿಳಿಸು; ಮಾರಿ: ಕ್ಷುದ್ರ ದೇವತೆ; ಮೇಳ: ಗುಂಪು; ಆಳುತನ: ಪರಾಕ್ರಮ; ಬವರ: ಯುದ್ಧ; ತೋರು: ಪ್ರದರ್ಶಿಸು; ಬೈಗಿಂದು: ಸಂಜೆ; ರಿಪು: ವೈರಿ; ಸೀಳು: ಚೂರು, ತುಂಡು; ಭಾಷೆ: ನುಡಿ; ಮಿಗೆ: ಮತ್ತು; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಹೇಳು +ಹೇಳಿನ್ನೇನು+ ಮಾರಿಯ
ಮೇಳವಾಡಿದನೇ+ ಜಯದ್ರಥನ್
ಆಳುತನವನು +ಬವರದಲಿ+ ತನ್ನೊಡನೆ +ತೋರಿದನೆ
ನಾಳೆ +ಬೈಗಿಂದೊಳಗೆ +ರಿಪುವನು
ಸೀಳುವೆನು +ಸೀಳದಿರೆ+ ಧರ್ಮಜ
ಕೇಳು +ಭಾಷೆಯನೆಂದು +ಮಿಗೆ +ಗರ್ಜಿಸಿದನಾ+ ಪಾರ್ಥ

ಅಚ್ಚರಿ:
(೧) ಅರ್ಜುನನ ಪರಾಕ್ರಮದ ಮಾತು – ನಾಳೆ ಬೈಗಿಂದೊಳಗೆ ರಿಪುವನು ಸೀಳುವೆನು

ಪದ್ಯ ೬೫: ಜಯದ್ರಥನು ಯಾರನ್ನು ಸೋಲಿಸಿದನು?

ಬವರದಲಿ ಕಲಿ ಪಾರ್ಥನಲ್ಲದೆ
ಪವನತನಯಾದಿಗಳ ಗೆಲುವರೆ
ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು
ಕವಲುಗೋಲಲಿ ಭೀಮನನು ಪರಿ
ಭವಿಸಿದನು ಸಹದೇವ ನಕುಳರ
ತಿವಿದು ಧೃಷ್ಟದ್ಯುಮ್ನ ಮೊದಲಾದಗನಿತರ ಗೆಲಿದ (ದ್ರೋಣ ಪರ್ವ, ೫ ಸಂಧಿ, ೬೫ ಪದ್ಯ
)

ತಾತ್ಪರ್ಯ:
ಅರ್ಜುನನೊಬ್ಬನನ್ನು ಬಿಟ್ಟು ಭೀಮನೇ ಮೊದಲಾದವರನ್ನು ಗೆಲ್ಲಲ್ಲು ಶಿವನೇ ಒಂದು ದಿನದ ಮಟ್ಟಿಗೆ ನನಗೆ ವರವನ್ನು ನೀಡಿದ್ದಾನೆ ಎನ್ನುತ್ತಾ ಜಯದ್ರಥನು ಭೀಮನನ್ನು ಸೋಲಿಸಿ, ಸಹದೇವ ನಕುಲರನ್ನು ಹೊಡೆದು ಧೃಷ್ಟದ್ಯುಮ್ನನೇ ಮೊದಲಾದ ಅಸಂಖ್ಯ ವೀರರನ್ನು ಗೆದ್ದನು.

ಅರ್ಥ:
ಬವರ: ಕಾಳಗ, ಯುದ್ಧ; ಕಲಿ: ಶೂರ; ಪವನ: ವಾಯು; ತನಯ: ಮಗ; ಆದಿ: ಮುಂತಾದ; ಗೆಲುವು: ಜಯ; ಕೃಪೆ: ದಯೆ; ಮುನ್ನ: ಮುಂಚೆ; ಕವಲು: ಭಿನ್ನತೆ; ಕವಲುಗೋಲು: ಅರ್ಧಚಂದ್ರಾಕೃತಿಯ ಬಾಣ; ಪರಿಭವಿಸು: ಸೋಲಿಸು; ತಿವಿ: ಚುಚ್ಚು; ಅಗಣಿತ: ಅಸಂಖ್ಯಾತ; ಗೆಲಿದ: ಜಯಿಸಿದ;

ಪದವಿಂಗಡಣೆ:
ಬವರದಲಿ+ ಕಲಿ +ಪಾರ್ಥನಲ್ಲದೆ
ಪವನತನಯಾದಿಗಳ+ ಗೆಲುವರೆ
ಶಿವನ +ಕೃಪೆ+ಎನಗುಂಟು +ಮುನ್ನೆನುತಾ +ಜಯದ್ರಥನು
ಕವಲುಗೋಲಲಿ +ಭೀಮನನು +ಪರಿ
ಭವಿಸಿದನು +ಸಹದೇವ +ನಕುಳರ
ತಿವಿದು +ಧೃಷ್ಟದ್ಯುಮ್ನ +ಮೊದಲಾದ್+ಅಗಣಿತರ +ಗೆಲಿದ

ಅಚ್ಚರಿ:
(೧) ಜಯದ್ರಥನಿಗೆ ಶಿವನ ವರ – ಬವರದಲಿ ಕಲಿ ಪಾರ್ಥನಲ್ಲದೆ ಪವನತನಯಾದಿಗಳ ಗೆಲುವರೆ
ಶಿವನ ಕೃಪೆಯೆನಗುಂಟು

ಪದ್ಯ ೬೩: ಭೀಮಸೇನನನ್ನು ಯಾರು ತಡೆದರು?

ಗದೆಯ ತಿರುಹುತ ಸಿಂಹನಾದದ
ಲೊದರಿ ಮಗನಾವೆಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ
ಅದಟನೈತರೆ ಹೋಗಲೀಯದೆ
ಮೊದಲ ಬಾಗಿಲ ಕಟ್ಟಿಕೊಂಡ
ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ (ದ್ರೋಣ ಪರ್ವ, ೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೀಮನು ಗದೆಯನ್ನು ತಿರುಹಿಕೊಂಡು ಗರ್ಜಿಸುತ್ತಾ ಯುದ್ಧಕ್ಕೆ ಮುನ್ನುಗ್ಗಿ, ಚಾಮರದಿಂದ ಸನ್ನೆಮಾಡುತ್ತಾ ಅಭಿಮನ್ಯುವೆಲ್ಲಿ ಎಂದು ಕೂಗುತ್ತಾ ರಥವನ್ನು ಹರಸಿ ಪದ್ಮವ್ಯೂಹದ ಬಾಗಿಲಿಗೆ ಬಂದನು. ಮೊದಲ ಬಾಗಿಲಿನಲ್ಲಿದ್ದ ಜಯದ್ರಥನು ಭೀಮನನ್ನೆದುರಿಸಿ ಕಾಳಗಕ್ಕೆ ನಿಂತನು.

ಅರ್ಥ:
ಗದೆ: ಮುದ್ಗರ; ತಿರುಹು: ತಿರುಗಿಸು; ಸಿಂಹನಾದ: ಗರ್ಜನೆ; ಒದರು: ಹೊರಹಾಕು; ಮಗ: ಪುತ್ರ; ಆವೆಡೆ: ಯಾವ ಪಕ್ಕ, ಭಾಗ; ನೂಕು: ತಳ್ಳು; ರಥ: ಬಂಡಿ; ಸೇನೆ: ಸೈನ್ಯ; ಸೀಗುರಿ: ಚಾಮರ; ಬೀಸು: ತೂಗುವಿಕೆ, ಓಟ; ಅದಟ: ಶೂರ, ಪರಾಕ್ರಮಿ; ಐತರು: ಬಂದು ಸೇರು; ಹೋಗಲು: ತೆರಳು; ಮೊದಲು: ಮುಂಚೆ; ಬಾಗಿಲು: ಕದ; ಕಟ್ಟು: ಬಂಧಿಸು; ಅಗ್ಗ: ಶ್ರೇಷ್ಠ; ಬಲು: ಜೋರಾದ, ದೊಡ್ಡ; ಕಾಳೆಗ: ಯುದ್ಧ; ಹಿಡಿ: ಗ್ರಹಿಸು;

ಪದವಿಂಗಡಣೆ:
ಗದೆಯ+ ತಿರುಹುತ + ಸಿಂಹನಾದದಲ್
ಒದರಿ +ಮಗನ್+ಆವೆಡೆ+ಎನುತ +ನೂ
ಕಿದನು +ರಥವನು +ತನ್ನ +ಸೇನೆಗೆ +ಸೀಗುರಿಯ +ಬೀಸಿ
ಅದಟನ್+ಐತರೆ +ಹೋಗಲ್+ಈಯದೆ
ಮೊದಲ +ಬಾಗಿಲ +ಕಟ್ಟಿಕೊಂಡ್
ಅಗ್ಗದ +ಜಯದ್ರಥ +ಭೀಮನೊಳು +ಬಲು+ಕಾಳೆಗವ +ಹಿಡಿದ

ಅಚ್ಚರಿ:
(೧) ಭೀಮನು ಬಂದ ರೀತಿ – ಗದೆಯ ತಿರುಹುತ ಸಿಂಹನಾದದಲೊದರಿ ಮಗನಾವೆಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ

ಪದ್ಯ ೧೬: ಭೀಷ್ಮರನ್ನು ನೋಡಲು ಯಾರು ಬಂದರು?

ಎಡೆ ಮುರಿದುದೈಶ್ವರ್ಯವಿನ್ನೇ
ನೊಡೆಯ ಭಿತ್ತಿಯ ಚಿತ್ರವಾದನು
ಕಡೆಗೆ ಬಂದುದೆ ಕೌರವಾನ್ವಯ ಶಿವಶಿವಾ ಎನುತ
ಹಿಡಿದ ದುಗುಡದ ಕವಿದ ಮುಸುಕಿನ
ಗಡಣದಲಿ ಗುರು ಕೃಪ ಜಯದ್ರಥ
ರೊಡನೊಡನೆ ಬರುತಿರ್ದುದಖಿಲ ಮಹೀಶ ಪರಿವಾರ (ಭೀಷ್ಮ ಪರ್ವ, ೧೦ ಸಂಧಿ, ೧೬ ಪದ್ಯ
)

ತಾತ್ಪರ್ಯ:
ಐಶ್ವರ್ಯವು ಮಧ್ಯದಲ್ಲೇ ಮುರಿದು ಹೋಯಿತು. ದೊರೆಯು ಭಿತ್ತಿಯ ಮೇಲೆ ಬರೆದ ಚಿತ್ರದಂತಾದನು. ಕೌರವ ವಂಶಕ್ಕೆ ಶಿವ ಶಿವಾ ಕೊನೆ ಬಂದಿತೇ ಎನ್ನುತ್ತಾ ದುಃಖಿಸುತ್ತಾ ಮುಖಕ್ಕೆ ಮುಸುಕನ್ನು ಹಾಕಿಕೋಂಡು ದ್ರೋಣ, ಕೃಪ ಮೊದಲಾದವರೊಡನೆ ಕೌರವ ಪರಿವಾರವು ಬಂದಿತು.

ಅರ್ಥ:
ಎಡೆ: ಭೂಮಿ; ಮುರಿ: ಸೀಳು; ಐಶ್ವರ್ಯ: ಸಂಪತ್ತು; ಒಡೆ: ಸೀಳು, ಬಿರಿ; ಭಿತ್ತಿ: ಮುರಿಯುವುದು; ಚಿತ್ರ: ಪಟ; ಕಡೆ: ಕೊನೆ; ಬಂದು: ಆಗಮಿಸು; ಅನ್ವಯ: ವಂಶ; ಹಿಡಿ: ಗ್ರಹಿಸು; ದುಗುಡ: ದುಃಖ; ಕವಿ: ಆವರಿಸು; ಮುಸುಕು: ಹೊದಿಕೆ; ಗಡಣ: ಕೂಡಿಸುವಿಕೆ; ಗುರು: ಆಚಾರ್ಯ; ಒಡನೊಡನೆ: ಜೊತೆ; ಬರುತಿರ್ದು: ಆಗಮಿಸು; ಅಖಿಲ: ಎಲ್ಲಾ; ಮಹೀಶ: ರಾಜ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಎಡೆ +ಮುರಿದುದ್+ಐಶ್ವರ್ಯವ್+ಇನ್ನೇನ್
ಒಡೆಯ +ಭಿತ್ತಿಯ +ಚಿತ್ರವಾದನು
ಕಡೆಗೆ +ಬಂದುದೆ +ಕೌರವ+ಅನ್ವಯ +ಶಿವಶಿವಾ +ಎನುತ
ಹಿಡಿದ +ದುಗುಡದ +ಕವಿದ +ಮುಸುಕಿನ
ಗಡಣದಲಿ +ಗುರು +ಕೃಪ +ಜಯದ್ರಥರ್
ಒಡನೊಡನೆ +ಬರುತಿರ್ದುದ್+ಅಖಿಲ +ಮಹೀಶ +ಪರಿವಾರ

ಅಚ್ಚರಿ:
(೧) ಕೌರವನ ಸ್ಥಿತಿ – ಒಡೆಯ ಭಿತ್ತಿಯ ಚಿತ್ರವಾದನು
(೨) ದುಃಖಿತರಾದರು ಎಂದು ಹೇಳಲು – ಹಿಡಿದ ದುಗುಡದ ಕವಿದ ಮುಸುಕಿನ ಗಡಣದಲಿ

ಪದ್ಯ ೧೯: ಜಯದ್ರಥನು ಹೇಗೆ ಕಂಡನು?

ಲುಳಿಯ ಮಿಂಚಿನ ಮಂದೆ ಸುಗತಿಯ
ಝಳಕದನಿಲನ ಥಟ್ಟು ಬೀದಿಯ
ಬಳಿಗೆ ಪುರುಷಾಮೃಗದ ಗಾವಲಿಯೆನೆ ವಿಲಾಸದಲಿ
ಹೊಳೆವ ಚಮರಿಯ ಸುತ್ತು ಝಲ್ಲಿಯ
ನೆಲಕುಗಿವ ಜೋಡುಗಳ ತೇಜಿಯ
ದಳವ ನೋಡೈ ಪಾರ್ಥ ಬಳಸಿದೆ ಕಲಿಜಯದ್ರಥನ (ಭೀಷ್ಮ ಪರ್ವ, ೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕೃಷ್ಣನು ಮುಂದೆ ಜಯದ್ರಥನ ರಥವನ್ನು ತೋರಿಸಿದನು. ಅಲ್ಲಿ ನೋಡು ಅರ್ಜುನ ಜಯದ್ರಥನ ಸೈನ್ಯವ. ಅಪ್ಪಳಿಸುವ ಮಿಂಚಿನ ಮುಂದೆ ಬೀಸುವ ಬಿರುಗಾಳಿಯಂತೆ, ಬೀದಿಗಿಳಿದ ಪುರುಷಾಮೃಗಗಳ ಗುಂಪಿನಂತೆ, ಹೊಳೆಯುವ ಚಾಮರಗಳು, ನೆಲಕ್ಕೊರಗಿಸುವ ಝಲ್ಲರಿ ಎಂಬಂತೆ ಶೋಭಿಸುವ ಕೇಶರಾಶಿಯನ್ನುಳ್ಳ ಕುದುರೆಗಳ ದಳವು ಅವನ ಸುತ್ತಲೂ ನಿಂತಿವೆ.

ಅರ್ಥ:
ಲುಳಿ: ರಭಸ; ಮಿಂಚು: ವಿದ್ಯುತ್ತು, ಹೊಳಪು; ಮಂದೆ: ಗುಂಪು; ಸುಗತಿ: ಒಳ್ಳೆಯ ನಡಗೆ; ಝಳಕ: ಮೀಯುವುದು; ಅನಿಲ:ಗಾಳಿ; ಥಟ್ಟು: ಗುಂಪು; ಬೀದಿ: ಮಾರ್ಗ; ಬಳಿ: ಹತ್ತಿರ; ಪುರುಷಾಮೃಗ: ನಾಲ್ಕು ಕಾಲಿನ ಮನುಷ್ಯನ ಮುಖದ ಕಾಲ್ಪನಿಕ ಪ್ರಾಣಿ; ಆವಳಿ: ಗುಂಪು; ವಿಲಾಸ: ವಿಹಾರ, ಅಂದ, ಸೊಬಗು; ಹೊಳೆ: ಪ್ರಕಾಶ; ಚಮರಿ: ಚಾಮರ; ಸುತ್ತು: ಆವರಿಸು; ಝಲ್ಲಿ: ಕುಚ್ಚು, ಗೊಂಚಲು; ನೆಲ: ಭೂಮಿ; ಉಗಿ: ಹೊರಹಾಕು; ಜೋಡು: ಜೊತೆ; ತೇಜಿ: ಕುದುರೆ; ದಳ: ಸೈನ್ಯ; ನೋಡು: ವೀಕ್ಷಿಸು; ಬಳಸು: ಸುತ್ತುವರಿ; ಕಲಿ: ಶೂರ;

ಪದವಿಂಗಡನೆ:
ಲುಳಿಯ +ಮಿಂಚಿನ +ಮಂದೆ +ಸುಗತಿಯ
ಝಳಕದ್+ಅನಿಲನ +ಥಟ್ಟು +ಬೀದಿಯ
ಬಳಿಗೆ+ ಪುರುಷಾಮೃಗದ+ ಗಾವಲಿ+ಎನೆ +ವಿಲಾಸದಲಿ
ಹೊಳೆವ +ಚಮರಿಯ +ಸುತ್ತು +ಝಲ್ಲಿಯ
ನೆಲಕ್+ಉಗಿವ+ ಜೋಡುಗಳ +ತೇಜಿಯ
ದಳವ+ ನೋಡೈ +ಪಾರ್ಥ +ಬಳಸಿದೆ +ಕಲಿ+ಜಯದ್ರಥನ

ಅಚ್ಚರಿ:
(೧) ಜಯದ್ರಥನ ಬಳಗವನ್ನು ವಿವರಿಸುವ ಪರಿ – ಲುಳಿಯ ಮಿಂಚಿನ ಮಂದೆ ಸುಗತಿಯ ಝಳಕದನಿಲನ ಥಟ್ಟು ಬೀದಿಯಬಳಿಗೆ ಪುರುಷಾಮೃಗದ ಗಾವಲಿಯೆನೆ ವಿಲಾಸದಲಿ

ಪದ್ಯ ೩೪: ಕುರುಸೇನೆಯು ಏನೆಂದು ಮಾತಾಡಿತು?

ಎಲೆಲೆ ನರನೋ ಸುಭಟಜೀವರ
ದಳದುಳಿಗನೋ ದಿಟ್ಟರಾಯರ
ದಳದ ವಹ್ನಿಯೊ ಪಾರ್ಥನೋ ಫಡ ಕಾಲಭೈರವನೋ
ಗೆಲುವರಾವೆಡೆ ಕರ್ಣಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ (ವಿರಾಟ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯದ ಯೋಧರು, ಎಲೋ ಸುಭಟರನ್ನು ಸದೆಬಡಿಯುವ, ಬಲಶಾಲಿ ರಾಜ್ರ ಸೈನ್ಯಕ್ಕೆ ಬೆಂಕಿಯಾದ ಅರ್ಜುನನು ಬಂದ, ಇವನು ಅರ್ಜುನನಲ್ಲ, ಕಾಲಭೈರವ, ಇವನೊಡನೆ ಕಾದಿ ಗೆಲ್ಲುವ ವೀರರೆಲ್ಲಿಗೆ ಹೋದರು? ಕರ್ಣ, ಕೃಪ, ಶಕುನಿ, ಜಯದ್ರಥರ ನಾಲಗೆ ಕತ್ತಿನ ಹಿಂದಕ್ಕೆ ಹೋಗಿದೆ ಎಂದು ಕೌರವಸೇನೆಯು ಮಾತಾಡಿಕೊಂಡಿತು.

ಅರ್ಥ:
ನರ: ಅರ್ಜುನ; ಸುಭಟ: ಪರಾಕ್ರಮಿ; ಜೀವ: ಪ್ರಾಣ; ದಳದುಳ: ಯುದ್ಧ; ದಿಟ್ಟ: ಧೈರ್ಯಶಾಲಿ, ಸಾಹಸಿ; ರಾಯ: ರಾಜ; ದಳ: ಸೈನ್ಯ; ವಹ್ನಿ: ಬೆಂಕಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ಗೆಲುವು: ಜಯ; ಹೆಡತಲೆ: ಹಿಂದಲೆ; ನಾಲಗೆ: ಜಿಹ್ವೆ; ಕೂಡೆ: ಜೊತೆ;

ಪದವಿಂಗಡಣೆ:
ಎಲೆಲೆ +ನರನೋ +ಸುಭಟ+ಜೀವರ
ದಳದುಳಿಗನೋ +ದಿಟ್ಟರಾಯರ
ದಳದ+ ವಹ್ನಿಯೊ +ಪಾರ್ಥನೋ +ಫಡ+ ಕಾಲಭೈರವನೋ
ಗೆಲುವರಾವೆಡೆ+ ಕರ್ಣ+ಕೃಪ+ ಸೌ
ಬಲ+ ಜಯದ್ರಥರೆಂಬವರ+ ಹೆಡ
ತಲೆಗೆ +ನಾಲಗೆ +ಹೋಯಿತೆಂದುದು +ಕೂಡೆ +ಕುರುಸೇನೆ

ಅಚ್ಚರಿ:
(೧) ಪಾರ್ಥನ ಪರಾಕ್ರಮವನ್ನು ಹೇಳುವ ಪರಿ – ಸುಭಟಜೀವರದಳದುಳಿಗನೋ ದಿಟ್ಟರಾಯರ ದಳದ ವಹ್ನಿಯೊ ಪಾರ್ಥನೋ ಫಡ ಕಾಲಭೈರವನೋ

ಪದ್ಯ ೬೨: ದುರ್ಯೊಧನನ ಪಕ್ಕದಲ್ಲಿ ಯಾವ ರಾಜರಿದ್ದರು?

ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಭಾರಿಯ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನನೊಸಲಂದದಲಿ ಮೆರೆವವ
ರವನಿಪಾಲರು ಮಕುಟವರ್ಧನರವರ ನೋಡೆಂದ (ವಿರಾಟ ಪರ್ವ, ೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಬಲಭಾಗದಲ್ಲಿ ಭೂರಿಶ್ರವ, ಎಡಭಾಗದಲ್ಲಿ ಜಯದ್ರಥರಿದ್ದಾರೆ, ಪರಾಕ್ರಮ ಶಾಲಿಗಳಾಗಿ ಶಿವನ ಹಣೆಗಣ್ಣಿನಂತೆ (ಅಗ್ನಿಯಷ್ಟು ಪ್ರಖರರಾದ) ಇರುವ ಅನೇಕ ರಾಜರು ಅಲ್ಲಿದ್ದಾರೆ ನೋಡು ಎಂದು ಅರ್ಜುನನು ಉತ್ತರನಿಗೆ ತೋರಿಸಿದನು.

ಅರ್ಥ:
ಬಲವಂಕ: ಬಲಭಾಗ; ನಿಂದವ: ನಿಂತಿರುವ; ಭಾರಿ: ದೊಡ್ಡ; ಭುವನಪತಿ: ರಾಜ; ಭುವನ: ಭೂಮಿ; ಎಡವಂಕ: ಎಡಭಾಗ; ಶಿವ: ಶಂಕರ; ನೊಸಲು: ಹಣೆ; ಮೆರೆ: ಪ್ರಕಾಶಿಸು, ಹೊಳೆ; ಅವನಿಪಾಲ: ರಾಜ; ಮಕುಟ: ಕಿರೀಟ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನ +ಬಲವಂಕದಲಿ +ನಿಂದವನ್
ಅವನು +ಭೂರಿಶ್ರವನು+ ಭಾರಿಯ
ಭುವನಪತಿ+ಎಡವಂಕದಲಿ +ನಿಂದವ +ಜಯದ್ರಥನು
ತವತವಗೆ +ಬಲುಗೈಗಳ್+ಎನಿಸುವ
ಶಿವನ+ನೊಸಲಂದದಲಿ +ಮೆರೆವವರ್
ಅವನಿಪಾಲರು +ಮಕುಟವರ್ಧನರ್+ಅವರ+ ನೋಡೆಂದ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೂರಿಶ್ರವನು ಭಾರಿಯ ಭುವನಪತಿ
(೨) ಉಪಮಾನದ ಪ್ರಯೋಗ – ಶಿವನನೊಸಲಂದದಲಿ ಮೆರೆವವರವನಿಪಾಲರು

ಪದ್ಯ ೪೨: ಜಯದ್ರಥನು ಏನೆಂದು ಯೋಚಿಸಿದನು?

ಬಿಟ್ಟರೀತನ ತೋಳ ಹಿಂಗೈ
ಗಟ್ಟುಗಳ ನೆಲೆ ಕುನ್ನಿ ಹೋಗೆನೆ
ಕೆಟ್ಟಕೇಡದನೇನ ಹೇಳುವೆನಾ ಜಯದ್ರಥನ
ಬೆಟ್ಟದಿಂದುರುಳುವೆನೊ ಹಾಸರೆ
ಗಟ್ಟಿಹೊಗುವೆನೊ ಮಡುವನೆನುತಡಿ
ಯಿಟ್ಟನಂತಃಕಲುಷ ಚಿತ್ತ ದುರಂತ ಚಿಂತೆಯಲಿ (ಅರಣ್ಯ ಪರ್ವ, ೨೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಜಯದ್ರಥನ ಕೈಗಳನ್ನು ಕಟ್ಟಿದ್ದ ಬಂಧವನ್ನು ಬಿಡಿಸಲಾಯಿತು, ಎಲವೋ ಕುನ್ನಿ ಹೋಗು ಎಂದರು, ಅವನ ಕೆಟ್ಟ ಪರಿಸ್ಥಿತಿಯನ್ನು ನಾನೇನೆಂದು ಹೇಳಲಿ, ಬೆಟ್ಟ ಹತ್ತಿ ಬೀಳಲೋ, ಕಲ್ಲು
ಬಂಡೆಯನ್ನು ಕಟ್ಟಿ ಸುಳಿಯಲ್ಲಿ ಬೀಳಲೋ, ಹೇಗಾದರೂ ಸಾಯಬೇಕೆಂದು ಅಪಮಾನದಿಂದ ನೊಂದ ಜಯದ್ರಥನು ಚಿಂತಿಸಿದನು.

ಅರ್ಥ:
ಬಿಡು: ತೊರೆ; ತೋಳು: ಬಾಹು; ಕಟ್ಟು: ಬಂಧಿಸು; ನೆಲೆ: ಸ್ಥಾನ; ಕುನ್ನಿ: ನಾಯಿ; ಹೋಗು: ತೆರಳು; ಕೆಟ್ಟ: ಹಾಳು; ಕೇಡು: ಆಪತ್ತು, ಕೆಡಕು; ಹೇಳು: ತಿಳಿಸು; ಬೆಟ್ಟ: ಗಿರಿ; ಉರುಳು: ಕೆಳಕ್ಕೆ ಬೀಳು; ಹಾಸರೆ: ಕಲ್ಲು ಬಂಡೆ; ಹೊಗು:ಪ್ರವೇಶಿಸು; ಮಡು: ಸುಳಿ; ಅಡಿ: ತಳ; ಕಲುಷ: ಕಳಂಕ; ಚಿತ್ತ: ಮನಸ್ಸು; ದುರಂತ: ದುರ್ಘಟನೆ, ಅಪಘಾತ; ಚಿಂತೆ: ಯೋಚನೆ;

ಪದವಿಂಗಡಣೆ:
ಬಿಟ್ಟಗ್+ಈತನ +ತೋಳ +ಹಿಂಗೈ
ಕಟ್ಟುಗಳ +ನೆಲೆ +ಕುನ್ನಿ +ಹೋಗ್+ಎನೆ
ಕೆಟ್ಟ+ಕೇಡದನ್+ಏನ +ಹೇಳುವೆನ್+ಆ+ ಜಯದ್ರಥನ
ಬೆಟ್ಟದಿಂದ್+ಉರುಳುವೆನೊ+ ಹಾಸರೆ
ಕಟ್ಟಿಹೊಗುವೆನೊ +ಮಡುವನ್+ಎನುತ್+ಅಡಿ
ಯಿಟ್ಟನ್+ಅಂತಃಕಲುಷ+ ಚಿತ್ತ +ದುರಂತ +ಚಿಂತೆಯಲಿ

ಅಚ್ಚರಿ:
(೧) ಜಯದ್ರಥನು ಚಿಂತಿಸಿದ ಪರಿ – ಬೆಟ್ಟದಿಂದುರುಳುವೆನೊ ಹಾಸರೆಗಟ್ಟಿಹೊಗುವೆನೊ ಮಡುವನೆನುತಡಿಯಿಟ್ಟನಂತಃಕಲುಷ ಚಿತ್ತ ದುರಂತ ಚಿಂತೆಯಲಿ
(೨) ಜಯದ್ರಥನನ್ನು ಬಯ್ಯುವ ಪರಿ – ಕುನ್ನಿ ಹೋಗ್

ಪದ್ಯ ೨೬: ಭೀಮಾರ್ಜುನರ ಜಯದ್ರಥನ ಭೇಟಿ ಹೇಗಾಯಿತು?

ಕಂಡರಡವಿಯಲವನನೆಲವೋ
ಭಂಡ ಫಡ ಹೋಗದಿರೆನುತ ಕೈ
ಗೊಂಡು ಸುರಿದರು ಸರಳನಾ ಪಿಂಗಳಿಯ ಸೇನೆಯಲಿ
ಭಂಡರಿವದಿರು ತಾವು ಕಡುಹಿನ
ಖಂಡೆಯದ ಸಿರಿವಂತರಿವರು
ದ್ದಂಡ ಭಟರೆನುತಾ ಜಯದ್ರಥ ನಿಲಿಸಿದನು ಬಲವ (ಅರಣ್ಯ ಪರ್ವ, ೨೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕಾಡಿನಲ್ಲಿ ಹೋಗುತ್ತಿದ್ದ ಜಯದ್ರಥನನ್ನು ಕಂಡು, ಎಲವೋ ನಾಚಿಕೆಗೆಟ್ಟವನೇ ನಿಲ್ಲು ಹೋಗಬೇಡ ಎಂದು ಗರ್ಜಿಸಿ ಜಯದ್ರಥನ ಸೇನೆಯ ಮೇಲೆ ಬಾಣಗಳನ್ನು ಬಿಟ್ಟರು. ಅವನು ಇವರೇ ಬಂಡರು ತಾವು ಶಸ್ತ್ರ ಪ್ರವೀಣರು, ಮಹಾಯೋಧರೆಂದು ಕೊಳ್ಳುತ್ತಾರೆ ಎಂದು ತನ್ನ ಸೈನ್ಯವನ್ನು ನಿಲ್ಲಿಸಿದನು.

ಅರ್ಥ:
ಕಂಡು: ನೋಡು; ಅಡವಿ: ಕಾಡು; ಭಂಡ: ನಾಚಿಕೆ ಇಲ್ಲದವನು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಹೋಗು: ತೆರಳು; ಕೈಗೊಂಡು: ಹಿಡಿ; ಸುರಿ: ವರ್ಷಿಸು; ಸರಳ: ಬಾಣ; ಪಿಂಗಳ: ಹಿಂದುಗಡೆ; ಸೇನೆ: ಸೈನ್ಯ; ಇವದಿರು: ಇವರು; ಕಡು: ವಿಶೇಷ, ಅಧಿಕ; ಖಂಡೆಯ: ಕತ್ತಿ; ಸಿರಿ: ಐಶ್ವರ್ಯ; ಉದ್ದಂಡ:ದರ್ಪ, ಗರ್ವ; ಭಟ: ಶೂರ; ನಿಲಿಸು: ತಡೆ; ಬಲ: ಸೈನ್ಯ;

ಪದವಿಂಗಡಣೆ:
ಕಂಡರ್+ ಅಡವಿಯಲ್+ಅವನನ್+ಎಲವೋ
ಭಂಡ +ಫಡ+ ಹೋಗದಿರ್+ಎನುತ +ಕೈ
ಗೊಂಡು +ಸುರಿದರು+ ಸರಳನ್+ಆ+ ಪಿಂಗಳಿಯ +ಸೇನೆಯಲಿ
ಭಂಡರ್+ಇವದಿರು +ತಾವು +ಕಡುಹಿನ
ಖಂಡೆಯದ +ಸಿರಿವಂತರ್+ಇವರ್
ಉದ್ದಂಡ +ಭಟರೆನುತಾ +ಜಯದ್ರಥ+ ನಿಲಿಸಿದನು+ ಬಲವ

ಅಚ್ಚರಿ:
(೧) ಜಯದ್ರಥನನ್ನು ನಿಲ್ಲಿಸುವ ಪರಿ – ಎಲವೋ ಭಂಡ ಫಡ ಹೋಗದಿರು