ಪದ್ಯ ೩೮: ರಣರಂಗದ ಚಿತ್ರಣ ಹೇಗಾಗಿತ್ತು?

ಉಡಿಯೆ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡಿಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ (ಗದಾ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮುಖದ ಕವಚವು ಮುರಿಯಲು, ಆನೆಗಳು ಜೋದರನ್ನು ಕೆಳಕ್ಕೆ ಕೆಡವಿ ಓಡಿದವು. ಗೊರಸುಗಳು ಕತ್ತರಿಸಿದಾಗ ಕುದುರೆಗಳು ರಾವುತರನ್ನು ಕೆಡವಿ ಹೋದವು. ಸಾರಥಿಯು ಸಾಯಲು, ರಥಗಳು ನಿಂತವು. ಮಹಾರಥರು ಸತ್ತು ಮೆದೆಯಂತೆ ಬಿದ್ದರು. ಪದಾತಿಗಳೆಷ್ಟು ಮಂದಿ ಬಿದ್ದರೆಂದು ನಾನರಿಯೆ.

ಅರ್ಥ:
ಉಡಿ:ಸೊಂಟ; ಮೋರೆ: ಮುಖ; ಜೋಡು: ಜೊತೆ, ಜೋಡಿ; ಜೋದ: ಆನೆಮೇಲೆ ಕೂತು ಯುದ್ಧಮಾಡುವವ; ಕೊಡಹಿ: ಕೆಡವಿ; ಹಾಯ್ದು: ಹೊಡೆ; ದಂತಿಘಟೆ: ಆನೆಗಳ ಗುಂಪು; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಕದಿ: ಸೀಳು; ಕುದುರೆ: ಅಶ್ವ; ಹಾಯ್ದು: ಮೇಲೆಬೀಳು; ಹಾಯಿಕು: ಹಾಕು; ರಾವುತ: ಕುದುರೆಸವಾರ; ಮಡಿ: ಸಾವು; ಸಾರಥಿ: ಸೂತ; ಮಗ್ಗು: ಕುಂದು, ಕುಗ್ಗು; ರಥ: ಬಂಡಿ; ನಡೆ: ಚಲಿಸು; ಕಾದು: ಹೋರಾಡು; ಮಹಾರಥ: ಪರಾಕ್ರಮಿ; ಮೆದೆ: ಒಡ್ಡು, ಗುಂಪು; ಕೆಡೆ: ಬೀಳು, ಕುಸಿ; ಉಳಿದ: ಮಿಕ್ಕ; ಪದಾತಿ: ಕಾಲಾಳು; ಪತನ: ಬೀಳು; ಅರಿ: ತಿಳಿ;

ಪದವಿಂಗಡಣೆ:
ಉಡಿಯೆ+ ಮೋರೆಯ +ಜೋಡು +ಜೋದರ
ಕೊಡಹಿ +ಹಾಯ್ದವು +ದಂತಿಘಟೆ +ಖುರ
ಕಡಿವಡಿಯೆ +ಕುದುರೆಗಳು +ಹಾಯ್ದವು +ಹಾಯ್ಕಿ +ರಾವುತರ
ಮಡಿಯೆ +ಸಾರಥಿ +ಮಗ್ಗಿದವು +ರಥ
ನಡೆದು +ಕಾದಿ +ಮಹಾರಥರು +ಮೆದೆ
ಕೆಡೆದುದ್+ಉಳಿದ +ಪದಾತಿ+ಪತನವನ್+ಅರಿಯೆ +ನಾನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ನಡೆದು ಕಾದಿ ಮಹಾರಥರು ಮೆದೆಗೆಡೆದುದುಳಿದ ಪದಾತಿ

ಪದ್ಯ ೧೬: ಕೌರವರ ಪರಾಭವ ಹೇಗೆ ಕಂಡಿತು?

ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇಳಿದ ಕುದುರೆಗಳಿಗೆ, ಬಿಟ್ಟೋಡಿದ ರಥಗಳಿಗೆ, ಕೆಳಗಿಳಿಸಿದ ಧ್ವಜಗಳಿಗೆ, ಕೈಯಿಂದ ಕೆಳಬಿದ್ದ ಆಯುಧಗಳಿಗೆ, ಸರಿಸಿ ಹಾಕಿದ ಕವಚ, ಸೀಸಕಗಳಿಗೆ, ಕಳಚಿಹಾಕಿದ ಆಭರನಗಳಿಗೆ, ಎಸೆದ ಕೊಡೆಗಳಿಗೆ ಲೆಕ್ಕವೇ ಇಲ್ಲ. ನಿನ್ನ ವೀರರು ಇಷ್ಟೊಂದು ಕೊಲೆಗೆ ಅಪಮಾನಕ್ಕೆ ಎಂದೂ ಸಿಕ್ಕಿರಲಿಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಕುದುರೆ: ಅಶ್ವ; ಬಿಸುಟು: ಹೊರಹಾಕು; ರಥ: ಬಂಡಿ; ಸಂಕುಳ: ಗುಂಪು; ಹಾಯ್ಕು: ಇಡು, ಇರಿಸು; ಟೆಕ್ಕೆ: ಬಾವುಟ, ಧ್ವಜ; ಕೈ: ಹಸ್ತ; ಆಯುಧ: ಶಸ್ತ್ರ; ತತಿ: ಗುಂಪು; ನೂಕು: ತಳ್ಳು; ಜೋಡು: ಜೊತೆ; ಸೀಸಕ: ಶಿರಸ್ತ್ರಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಆಭರಣ: ಒಡವೆ; ಆತಪತ್ರ: ಕೊಡೆ, ಛತ್ರಿ; ಆವಳಿ: ಗುಂಪು; ಕಾಣು: ತೋರು; ಪರಿ: ರೀತಿ; ಕೊಲೆ:ಸಾವು; ಭಂಗ: ಮುರಿಯುವಿಕೆ; ಬಿರುದರು: ವೀರರು;

ಪದವಿಂಗಡಣೆ:
ಇಳಿದ +ಕುದುರೆಗೆ +ಬಿಸುಟ +ರಥ+ಸಂ
ಕುಳಕೆ +ಹಾಯ್ಕಿದ +ಟೆಕ್ಕೆಯಕೆ +ಕೈ
ಬಳಿಚಿದ್+ಆಯುಧ+ತತಿಗೆ +ನೂಕಿದ +ಜೋಡು +ಸೀಸಕಕೆ
ಕಳಚಿದ್+ಆಭರಣ+ಆತಪತ್ರ
ಆವಳಿಗೆ +ಕಾಣೆನು +ಕಡೆಯನೀ +ಪರಿ
ಕೊಲೆಗೆ +ಭಂಗಕೆ +ನಿನ್ನ +ಬಿರುದರು+ ಬಂದುದಿಲ್ಲೆಂದ

ಅಚ್ಚರಿ:
(೧) ವೀರರು ಎಂದು ಹೇಳಲು – ಬಿರುದರು ಪದದ ಬಳಕೆ
(೨) ಸಂಕುಳ, ತತಿ – ಸಾಮ್ಯಾರ್ಥ ಪದ

ಪದ್ಯ ೫೭: ಘಟೋತ್ಕಚನು ಹೇಗೆ ಯುದ್ಧವನ್ನು ಮಾಡಿದನು?

ಎಸುತ ಹೊಕ್ಕನು ದಳ್ಳಿಸುವ ಹೊಸ
ಮಸೆಯ ಕಣೆ ಮುಕ್ಕುರುಕಿದವು ನಿ
ಪ್ಪಸರದಲಿ ನೃಪನೆಚ್ಚು ಕಾಣನು ಹರಿವನಾ ಕಣೆಗೆ
ಕುಸುರಿದರಿದವು ಜೋಡು ಸೀಸಕ
ಬೆಸುಗೆಯೊಡೆದುದು ಘಾಯದಲಿ ಮೈ
ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ (ದ್ರೋಣ ಪರ್ವ, ೧೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಬಾಣವನ್ನು ಬಿಡುತ್ತಾ ಘಟೋತ್ಕಚನು ಕೌರವ ಸೈನ್ಯವನ್ನು ಹೊಕ್ಕನು. ಅವನ ಕೂರಂಬುಗಳು ಉರಿಯನ್ನುಗುಳುತ್ತಿದ್ದವು. ದುರ್ಯೋಧನನು ಅತಿಶಯವಾಗಿ ಬಾಣಗಳನ್ನು ಬಿಟ್ಟರೂ ಆ ಬಾಣಗಳು ತುಂಡಾಗಲಿಲ್ಲ. ದುರ್ಯೋಧನನ ಕವಚ ಶಿರಸ್ತ್ರಾಣಗಳ ಬೆಸುಗೆ ಬಿಚ್ಚಿತು. ಘಟೋತ್ಕಚನ ಬಾಣಗಳಿಂದ ಮೈಯಲ್ಲಿ ಗಾಯವಾಗಿ ರಕ್ತ ಬಸಿಯುತ್ತಿತ್ತು. ದುರ್ಯೋಧನನ ಶೌರ್ಯ ಛಿದ್ರವಾಯಿತು. ಭೀತಿ ಆವರಿಸಿತು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಹೊಕ್ಕು: ಸೇರು; ದಳ್ಳಿಸು: ಧಗ್ ಎಂದು ಉರಿ; ಹೊಸ: ನವೀನ; ಮಸೆ: ಚೂಪಾದ; ಕಣೆ: ಬಾಣ; ಮುಕ್ಕುರು: ಆವರಿಸು; ನಿಪ್ಪಸರ: ಅತಿಶಯ, ಹೆಚ್ಚಳ; ನೃಪ: ರಾಜ; ಎಚ್ಚು: ಬಾಣ ಪ್ರಯೋಗ ಮಾಡು; ಕಾಣು: ತೋರು; ಹರಿ: ಚಲಿಸು; ಕುಸುರಿ: ತುಂಡು; ಅರಿ: ಸೀಳು; ಜೋಡು: ಕವಚ; ಸೀಸಕ: ಶಿರಸ್ತ್ರಾಣ; ಬೆಸುಗೆ: ಪ್ರೀತಿ, ಜೋತೆ; ಒಡೆ: ಸೀಳು; ಘಾಯ: ಪೆಟ್ಟು; ಬಸಿ: ಒಸರು, ಸ್ರವಿಸು; ಶೌರ್ಯ: ಪರಾಕ್ರಮ; ಬಿಗಿ: ಭದ್ರವಾಗಿರುವುದು; ಭೀತಿ: ಭಯ; ಭೂಪತಿ: ರಾಜ;

ಪದವಿಂಗಡಣೆ:
ಎಸುತ +ಹೊಕ್ಕನು +ದಳ್ಳಿಸುವ +ಹೊಸ
ಮಸೆಯ +ಕಣೆ +ಮುಕ್ಕುರುಕಿದವು +ನಿ
ಪ್ಪಸರದಲಿ+ ನೃಪನ್+ಎಚ್ಚು +ಕಾಣನು +ಹರಿವನಾ+ ಕಣೆಗೆ
ಕುಸುರಿದ್+ಅರಿದವು +ಜೋಡು +ಸೀಸಕ
ಬೆಸುಗೆ+ಒಡೆದುದು +ಘಾಯದಲಿ +ಮೈ
ಬಸಿಯೆ +ಬಿರಿದುದು +ಶೌರ್ಯ +ಬಿಗಿದುದು +ಭೀತಿ +ಭೂಪತಿಗೆ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಘಾಯದಲಿ ಮೈ ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ
(೨) ಕವಚ ಕಳಚಿತು ಎಂದು ಹೇಳುವ ಪರಿ – ಕುಸುರಿದರಿದವು ಜೋಡು ಸೀಸಕ ಬೆಸುಗೆಯೊಡೆದುದು

ಪದ್ಯ ೨೯: ಕೌರವ ಸೈನ್ಯವು ಅರ್ಜುನನನ್ನು ಹೇಗೆ ಮುತ್ತಿತು?

ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ (ದ್ರೋಣ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನ ದರ್ಪ ಅಹಂಕಾರಗಳನ್ನಿಷ್ಟು ನೋಡಿ, ಕುದುರೆಗಳಿಗಾಗಿ ಗುಳಿಯನ್ನು ತೋಡುತ್ತಿದ್ದಾನೆ. ಶೌರ್ಯದ ಗರ್ವ ಎಷ್ಟಿದ್ದೀತು, ಶಿವ ಶಿವಾ ಎನ್ನುತ್ತಾ ಕೌರವ ಸೈನ್ಯವು ಒಟ್ಟಾಗಿ, ದೇವತೆಗಳು ಕಡೆಯುತ್ತಿದ್ದ ಮಂದರ ಗಿರಿಯನ್ನು ಅಲೆಗಳು ಮುತ್ತಿದಂತೆ ಅರ್ಜುನನನ್ನು ಮುತ್ತಿತು.

ಅರ್ಥ:
ನೋಡು: ವೀಕ್ಷಿಸು; ನರ: ಅರ್ಜುನ; ಉದ್ದಂಡ: ದರ್ಪ, ಗರ್ವ; ತೋಡು: ಅಗೆದಿರುವ ಸ್ಥಳ, ಹಳ್ಳ; ಐದು: ಬಂದು ಸೇರು; ತುರಗ: ಅಶ್ವ; ಲೀಲೆ: ಆನಂದ, ಸಂತೋಷ; ಖೇಡ: ಹಳ್ಳಿ, ಗ್ರಾಮ; ಕುಳಿ: ಗುಂಡಿ, ಗುಣಿ, ಹಳ್ಳ; ಶೌರ್ಯ: ಪರಾಕ್ರಮ; ಗರ್ವ: ಅಹಂಕಾರ; ಮಸಗು: ಹರಡು; ಕೆರಳು; ತಿಕ್ಕು; ರಿಪು: ವೈರಿ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಜೋಡು: ಜೊತೆ; ಅಮರ: ದೇವತೆ; ಹೂಡು: ರಚಿಸು, ನಿರ್ಮಿಸು; ಅದ್ರಿ: ಬೆಟ್ಟ; ಅಂಬುಧಿ: ಸಾಗರ; ತೆರೆ: ತೆಗೆ, ಬಿಚ್ಚು; ಕವಿ: ಆವರಿಸು;

ಪದವಿಂಗಡಣೆ:
ನೋಡಿ +ನರನ್+ಉದ್ದಂಡತನವನು
ತೋಡುತ್+ಐದನೆ+ ತುರಗ +ಲೀಲೆಗೆ
ಖೇಡ+ಕುಳಿಯನು +ಶೌರ್ಯಗರ್ವಿತನೈ+ ಶಿವಾ +ಎನುತ
ಕೂಡೆ+ ಮಸಗಿತು +ರಿಪು+ಚತುರ್ಬಲ
ಜೋಡು +ಮಾಡಿತು +ಕಡಹದ್+ಅಮರರು
ಹೂಡಿದ್+ಅದ್ರಿಯನ್+ಅಂಬುಧಿಯ +ತೆರೆಮಾಲೆ +ಕವಿದಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಹದಮರರು ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ

ಪದ್ಯ ೨: ಅರ್ಜುನನು ಆಯುಧಗಳನ್ನು ಹೇಗೆ ಪೂಜಿಸಿದನು?

ಸವಗ ಮೊಚ್ಚಯ ಜೋಡು ಸೀಸಕ
ಕವಚ ಬಾಹುರಿಕೆಗಳ ನಿಲಿಸಿದ
ನವಿರಳಾಕ್ಷತೆ ಗಂಧ ಪುಷ್ಪ ಸುಧೂಪ ದೀಪದಲಿ
ವಿವಿಧ ಸತ್ಕಾರದಲಿ ದುರ್ಗಾ
ಸ್ತವವ ಜಪಿಸಿದ ವರ ಘೃತೋದನ
ನವರುಧಿರ ಮಾಂಸೋಪಹಾರಂಗಳಲಿ ಪೂಜಿಸಿದ (ದ್ರೋಣ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಕವಚ, ಪಾದರಕ್ಷೆ, ಶಿರಸ್ತ್ರಾನ, ಬಾಹುರಕ್ಷೆಗಲನ್ನು ಸಾಲಾಗಿಟ್ಟನು. ಎಲ್ಲವನ್ನೂ ಅಕ್ಷತೆ, ಗಂಧ, ಪುಷ್ಪ, ಧೂಪ, ದೀಪಗಳಿಮ್ದ ಪೂಜಿಸಿದನು. ಅನೇಕ ಸತ್ಕಾರಗಳನ್ನು ಮಾಡಿದನು. ದುರ್ಗಾಸ್ತವವನ್ನು ಜಪಿಸಿದನು. ತುಪ್ಪದನ್ನ, ರಕ್ತ ಮಾಂಸೋಪಹಾರಗಳನ್ನು ನಿವೇದಿಸಿದನು.

ಅರ್ಥ:
ಸವಗ: ಕವಚ; ಮೊಚ್ಚೆ: ಪಾದರಕ್ಷೆ; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಕವಚ: ಉಕ್ಕಿನ ಅಂಗಿ; ಬಾಹುರಿಕೆ: ತೋಳರಕ್ಷೆ; ಅಕ್ಷತೆ: ಮಂತ್ರಿಸಿದ ಅಕ್ಕಿ; ಗಂಧ: ಚಂದನ; ಪುಷ್ಪ: ಹೂವು; ಧೂಪ: ಸುಗಂಧ ದ್ರವ್ಯ; ದೀಪ: ಹಣತೆ; ವಿವಿಧ: ಹಲವಾರು; ಸತ್ಕಾರ: ಗೌರವ, ಉಪಚಾರ; ದುರ್ಗಾಸ್ತವ: ದುರ್ಗೆಯನ್ನು ಆರಾಧಿಸುವ ಸ್ತುತಿ; ಜಪಿಸು: ಮಂತ್ರಿಸು; ವರ: ಶ್ರೇಷ್ಠ; ಘೃತ: ತುಪ್ಪ; ರುಧಿರ: ರಕ್ತ; ನವ: ಹೊಸ; ಮಾಂಸ: ಅಡಗು; ಆಹಾರ: ಊಟ; ಪೂಜಿಸು: ಆರಾಧಿಸು;

ಪದವಿಂಗಡಣೆ:
ಸವಗ +ಮೊಚ್ಚಯ +ಜೋಡು +ಸೀಸಕ
ಕವಚ +ಬಾಹುರಿಕೆಗಳ +ನಿಲಿಸಿದ
ನವಿರಳ+ಅಕ್ಷತೆ +ಗಂಧ +ಪುಷ್ಪ +ಸುಧೂಪ +ದೀಪದಲಿ
ವಿವಿಧ +ಸತ್ಕಾರದಲಿ +ದುರ್ಗಾ
ಸ್ತವವ +ಜಪಿಸಿದ +ವರ +ಘೃತೋದನ
ನವ+ರುಧಿರ +ಮಾಂಸ+ಉಪಹಾರಂಗಳಲಿ +ಪೂಜಿಸಿದ

ಅಚ್ಚರಿ:
(೧) ಅಂಗರಕ್ಷೆಗಳು – ಸವಗ, ಮೊಚ್ಚೆ, ಜೋಡು, ಸೀಸಕ, ಕವಚ, ಬಾಹುರಿಕೆ

ಪದ್ಯ ೨೭: ಷಡುರಥರ ಪರಿಸ್ಥಿತಿ ಹೇಗಾಯಿತು?

ಹರಿದು ಬಿದ್ದವು ಜೋಡು ಮೆಯ್ಯಲಿ
ಮುರಿದವಗಣಿತ ಬಾಣದೇರಿನೊ
ಳೊರೆದ ರಕುತದ ಧಾರೆ ನಾದಿತು ರಥದ ಹಲಗೆಗಳ
ಅರಿವು ಮರೆದಪಕೀರ್ತಿನಾರಿಯ
ಸೆರಗ ಹಿಡಿದರು ಹೇಳಲೇನದ
ನರಿಯೆನೇಕಾಂತದಲಿ ಕರ್ಣನ ಕರೆದನಾ ದ್ರೋಣ (ದ್ರೋಣ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಆರು ರಥಿಕರ ಕವಚಗಳು ಹರಿದು ಕೆಳಕ್ಕೆ ಬಿದ್ದವು. ಬಾನಗಳು ಮೈಗೆನೆಟ್ತು ರಕ್ತ ಸುರಿದು ರಥದ ಹಲಗೆಗಳು ತೊಯ್ದವು. ಅಪಕೀರ್ತಿ ಎಂಬ ಹೆಂಗಸಿನ ಸೆರಗು ಹಿಡಿದರು. ರಾಜ ನಾನು ನಿಮಗೆ ಹೇಗೆ ಹೇಳಲೆಂದು ತಿಳಿಯುತ್ತಿಲ್ಲ, ದ್ರೋಣನು ಕರ್ಣನನ್ನು ಕರೆದು ಏಕಾಂತದಲ್ಲಿ ಹೀಗೆಂದು ಹೇಳಿದನು.

ಅರ್ಥ:
ಹರಿ: ಕತ್ತರಿಸು; ಬಿದ್ದು: ಬೀಳು; ಜೋಡು: ಜೊತೆ; ಮೆಯ್ಯಲಿ: ದೇಹದಲ್ಲಿ; ಮುರಿ:ಸೀಳು; ಅಗಣಿತ: ಎಣಿಕೆಗೆ ಮೀರಿದ; ಬಾಣ: ಸರಳು; ಏರು: ಹೆಚು; ಒರೆ: ಸವರು; ರಕುತ: ನೆತ್ತರು; ಧಾರೆ: ವರ್ಷ; ನಾದು: ಕಲಸು; ರಥ: ಬಂಡಿ; ಹಲಗೆ: ಮರಗಳ ಅಗಲವಾದ ಸೀಳು; ಅರಿ: ತಿಳಿ; ಮರೆ: ಜ್ಞಾಪಕದಿಂದ ದೂರವಾಗು; ಅಪಕೀರ್ತಿ: ಅಪಯಶಸ್ಸು; ನಾರಿ: ಹೆಣ್ಣು; ಸೆರಗು: ಉತ್ತರೀಯ; ಹಿಡಿ: ಗ್ರಹಿಸು; ಅರಿ: ತಿಳಿ; ಏಕಾಂತ: ಒಬ್ಬನೇ; ಕರೆ: ಬರೆಮಾಡು;

ಪದವಿಂಗಡಣೆ:
ಹರಿದು+ ಬಿದ್ದವು +ಜೋಡು +ಮೆಯ್ಯಲಿ
ಮುರಿದವ್+ಅಗಣಿತ +ಬಾಣದ್+ಏರಿನೊಳ್
ಒರೆದ +ರಕುತದ +ಧಾರೆ +ನಾದಿತು +ರಥದ +ಹಲಗೆಗಳ
ಅರಿವು +ಮರೆದ್+ಅಪಕೀರ್ತಿನಾರಿಯ
ಸೆರಗ+ ಹಿಡಿದರು +ಹೇಳಲೇನದನ್
ಅರಿಯೆನ್+ಏಕಾಂತದಲಿ +ಕರ್ಣನ +ಕರೆದನಾ +ದ್ರೋಣ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಅರಿವು ಮರೆದಪಕೀರ್ತಿನಾರಿಯಸೆರಗ ಹಿಡಿದರು

ಪದ್ಯ ೧೪: ಮುಂಜಾನೆ ಯುದ್ಧಕ್ಕೆ ಹೇಗೆ ತಯಾರಾದರು?

ಜೋಡು ಮಾಡಿತು ನೃಪರು ನಿಮಿಷಕೆ
ಹೂಡಿದವು ತೇರುಗಳು ಹಯತತಿ
ಕೂಡೆ ಹಲ್ಲಣಿಸಿದವು ಗುಳದಲಿ ಜಡಿದವಾನೆಗಳು
ಕೂಡೆ ಘುಮ್ಮಿಡೆ ದೆಸೆ ದೆಸೆಗಳ
ಲ್ಲಾಡಿದವು ಗಿರಿನಿಕರ ಬಿರುದನಿ
ಮಾಡಿದವು ನಿಸ್ಸಾಳತತಿ ಸೇನಾಸಮುದ್ರದಲಿ (ದ್ರೋಣ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬೆಳಗಾಗುವ ಮುನ್ನ ರಾಜರು ಯುದ್ಧಸನ್ನದ್ಧರಾದರು. ತೇರುಗಳನ್ನು ಹೂಡಿದರು. ಕುದುರೆಗಳಿಗೆ ತಡಿಯನ್ನು ಹಾಕಿದರು. ಆನೆಗಳಿಗೆ ಗುಳಗಳನ್ನು ಹಾಕಲು ಅವು ಮೊರೆದವು. ಪರ್ವತಗಳಲ್ಲಿ ಪ್ರತಿಧ್ವನಿಯನ್ನುಂಟುಮಾಡಿ ನಿಸ್ಸಾಳಗಳು ಬಡಿದವು.

ಅರ್ಥ:
ಜೋಡು: ಜೊತೆ, ಜೋಡಿ; ನೃಪ: ರಾಜ; ನಿಮಿಷ: ಕ್ಷಣಮಾತ್ರ; ಹೂಡು: ಅಣಿಗೊಳಿಸು; ತೇರು: ಬಂಡಿ; ಹಯ: ಕುದುರೆ; ತತಿ: ಸಮೂಹ, ಗುಂಪು; ಕೂಡೆ: ಸೇರು; ಹಲ್ಲಣಿಸು: ತಡಿಹಾಕು, ಧರಿಸು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಜಡಿ: ಬೆದರಿಕೆ, ಗದರಿಸು; ಆನೆ: ಗಜ; ಕೂಡು: ಜೊತೆ; ಘುಮ್ಮಿಡು: ಕೂಗು; ದೆಸೆ: ದಿಕ್ಕು; ಅಲ್ಲಾಡು: ತೂಗಾಡು; ಗಿರಿ: ಬೆಟ್ಟ; ನಿಕರ: ಗುಂಪು; ಬಿರುದನಿ: ಜೋರಾದ ಧ್ವನಿ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೇನೆ: ಸೈನ್ಯ; ಸಮುದ್ರ: ಸಾಗರ;

ಪದವಿಂಗಡಣೆ:
ಜೋಡು +ಮಾಡಿತು +ನೃಪರು +ನಿಮಿಷಕೆ
ಹೂಡಿದವು +ತೇರುಗಳು+ ಹಯತತಿ
ಕೂಡೆ +ಹಲ್ಲಣಿಸಿದವು +ಗುಳದಲಿ +ಜಡಿದವ್+ಆನೆಗಳು
ಕೂಡೆ +ಘುಮ್ಮಿಡೆ +ದೆಸೆ +ದೆಸೆಗಳ
ಲ್ಲಾಡಿದವು +ಗಿರಿನಿಕರ+ ಬಿರುದನಿ
ಮಾಡಿದವು +ನಿಸ್ಸಾಳತತಿ+ ಸೇನಾ+ಸಮುದ್ರದಲಿ

ಅಚ್ಚರಿ:
(೧) ಹಯತತಿ, ನಿಸ್ಸಾಳತತಿ – ತತಿ ಪದದ ಬಳಕೆ

ಪದ್ಯ ೬೮: ಅರ್ಜುನನು ಶತ್ರುರಾಜರನ್ನು ಹೇಗೆ ಕೊಂದನು?

ಜೋಡು ಜರಿಯದೆ ಹುರುಳುಗೆಡದೆ
ಚ್ಚಾಡಿದರು ಫಲುಗುಣನ ರಥದಲಿ
ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ
ನೋಡಿದನು ಸಾಕಿವದಿರನು ಕೊಂ
ಡಾಡಲೇಕೆನುತನಿಬರಸುಗಳ
ತೋಡಿದನು ಕೂರಂಬಿನಲಿನಾ ಸಾವಿರ ಮಹಾರಥರ (ದ್ರೋಣ ಪರ್ವ, ೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ಸರಿಸಮವಾಗಿ ಹಿಂಜರಿಯದೆ ಸಮಬಲವು ಕುಮ್ದದೆ ನಾಲ್ಕು ಸಾವಿರ ಮಹಾರಥರೂ, ಅರ್ಜುನನೂ ಹೋರಾಡಿದರು. ಅವರೆಲ್ಲರೂ ಅರ್ಜುನನ ರಥದೊಳಕ್ಕೆ ತಮ್ಮ ಬಾಣಗಳನ್ನು ನುಗ್ಗಿಸಿದರು. ಅರ್ಜುನನು ಅವರನ್ನು ನೋಡಿ ಇವರೊಡನೆ ಏತರ ಸರಸ ಎನ್ನುತ್ತಾ ಅವರೆಲ್ಲರ ಮೈಯಲ್ಲೂ ತನ್ನ ಬಾಣಗಳನ್ನು ನಾಟಿಸಿದನು.

ಅರ್ಥ:
ಜೋಡು: ಜೊತೆ, ಜೋಡಿ; ಜರಿ: ಬಯ್ಯು, ಹಿಂಜರಿ; ಹುರುಳು: ಶಕ್ತಿ, ಸಾಮರ್ಥ್ಯ; ಕೆಡು: ಹಾಳಾಗು; ಎಚ್ಚು: ಬಾಣ ಪ್ರಯೋಗ ಮಾಡು; ರಥ: ಬಂಡಿ; ಹೂಡು: ಅಣಿಗೊಳಿಸು; ಹೊಗರು: ಕಾಂತಿ, ಹೆಚ್ಚಳ, ಆಧಿಕ್ಯ; ಅಂಬು: ಬಾಣ; ಉಬ್ಬೆದ್ದು: ಹೆಚ್ಚಾಗು; ನೋಡು: ವೀಕ್ಷಿಸು; ಸಾಕು: ತಡೆ; ಇವದಿರು: ಇಷ್ಟು ಜನ; ಕೊಂಡಾಡು: ಹೊಗಳು; ಅನಿಬರು: ಅಷ್ಟು ಜನ; ಅಸು:ಪ್ರಾಣ; ತೋಡು: ಅಗೆ, ಹಳ್ಳ ಮಾಡು; ಕೂರಂಬು: ಹರಿತವಾದ ಬಾಣ; ಸಾವಿರ: ಸಹಸ್ರ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಜೋಡು +ಜರಿಯದೆ +ಹುರುಳು+ಕೆಡದ್
ಎಚ್ಚಾಡಿದರು +ಫಲುಗುಣನ +ರಥದಲಿ
ಹೂಡಿದರು +ಹೊಗರ್+ಅಂಬುಗಳನ್+ಉಬ್ಬೆದ್ದು +ತಮತಮಗೆ
ನೋಡಿದನು +ಸಾಕ್+ಇವದಿರನು +ಕೊಂ
ಡಾಡಲೇಕೆನುತ್+ಅನಿಬರ್+ಅಸುಗಳ
ತೋಡಿದನು +ಕೂರಂಬಿನಲಿನ್+ಆ+ ಸಾವಿರ+ ಮಹಾರಥರ

ಅಚ್ಚರಿ:
(೧) ಜೋಡು ಜರಿಯದೆ, ಹೂಡಿದರು ಹೊಗರಂಬು – ಜೋಡಿ ಅಕ್ಷರದ ಪದಗಳು
(೨) ಅಂಬು, ಕೂರಂಬು – ಸಾಮ್ಯಾರ್ಥ ಪದಗಳು

ಪದ್ಯ ೪೭: ಅರ್ಜುನನ ಬಾಣಗಳು ಶತ್ರು ಸೈನ್ಯವನ್ನು ಹೇಗೆ ನಾಶಮಾಡಿತು?

ಜೋಡನೊಡೆಹಾಯ್ದಂಬು ಧರಣಿಯೊ
ಳಾಡಿದವು ಗುಳ ಸರಿದ ಕರಿಗಳ
ತೋಡಿ ನೆಟ್ಟವು ಬದ್ದರಂಗಳ ಬಾದಣವ ಕೊರೆದು
ಈಡಿರಿದವರಿಸುಭಟರೊಡಲಿನ
ಜೋಡುಗಳ ಜರಿಯೊಡೆದು ತಳಪಟ
ಮಾಡಿದವು ಚತುರಂಗಬಲವನು ಪಾರ್ಥನಂಬುಗಳು (ಭೀಷ್ಮ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳು ಕವಚ, ದೇಹಗಳನ್ನು ಕೊರೆದು ಆಚೆಗೆ ನೆಲದಲ್ಲಿ ನೆಟ್ಟವು. ರಕ್ಷಾ ಕವಚಗಳನ್ನು ಕೊರೆದು ಆನೆಗಳ ದೇಹದಲ್ಲಿ ನೆಟ್ಟವು. ರಕ್ಷಣೆಗಾಗಿ ನಿಲ್ಲಿಸ್ದಿಅ, ಬದ್ಧರದ ಬಂಡಿಗಳನ್ನು ತೂತು ತೂತು ಮಾಡಿ ಶತ್ರು ಭಟರ ಕವಚಗಳನ್ನು ಮುರಿದು ಯೋಧರ ಮೈಗಳಲ್ಲಿ ರಕ್ತವೊಸರುವಂತೆ ಮಾಡಿದವು. ಶತ್ರು ಸೈನ್ಯಗಳಾಕ್ರಮಿಸಿದ ರಣರಂಗವನ್ನು ಸಮತಟ್ಟು ಮಾಡಿದವು.

ಅರ್ಥ:
ಜೋಡು: ಜೊತೆ; ಒಡೆ: ಹೊಡೆ, ಏಟು; ಹಾಯ್ದು: ಮೇಲೆಬಿದ್ದು; ಅಂಬು: ಬಾಣ; ಧರಣಿ: ಭೂಮಿ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಸರಿ: ಹೋಗು, ಗಮಿಸು; ಕರಿ: ಆನೆ; ತೋಡು: ಹೊರಕ್ಕೆ ಹೋಗು; ನೆಡು: ಹೂಳು, ನಿಲ್ಲಿಸು; ಬದ್ಧ: ಕಟ್ಟಿದ; ಬಾದಣ: ತೂತು; ಕೊರೆ: ತುಂಡು, ಚೂರು; ಇರಿ: ಚುಚ್ಚು; ಅರಿ: ಶತ್ರು; ಭಟ: ಸೈನಿಕ; ಒಡಲು: ದೇಹ; ಜೋಡು: ಜೊತೆ; ಜರಿ: ಇಳಿಬೀಳು; ತಳಪಟ: ಅಂಗಾತವಾಗಿ ಬೀಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಅಂಬು: ಬಾಣ;

ಪದವಿಂಗಡಣೆ:
ಜೋಡನ್+ಒಡೆಹಾಯ್ದ್+ಅಂಬು+ ಧರಣಿಯೊಳ್
ಆಡಿದವು +ಗುಳ +ಸರಿದ +ಕರಿಗಳ
ತೋಡಿ +ನೆಟ್ಟವು +ಬದ್ದರಂಗಳ +ಬಾದಣವ +ಕೊರೆದು
ಈಡಿರಿದವ್+ಅರಿ+ಸುಭಟರ್+ಒಡಲಿನ
ಜೋಡುಗಳ +ಜರಿಯೊಡೆದು+ ತಳಪಟ
ಮಾಡಿದವು +ಚತುರಂಗ+ಬಲವನು+ ಪಾರ್ಥನ್+ ಅಂಬುಗಳು

ಅಚ್ಚರಿ:
(೧) ಬಾಣದ ಪ್ರಭಾವ – ಈಡಿರಿದವರಿಸುಭಟರೊಡಲಿನ ಜೋಡುಗಳ ಜರಿಯೊಡೆದು; ತಳಪಟ
ಮಾಡಿದವು ಚತುರಂಗಬಲವನು

ಪದ್ಯ ೪೩: ಯಾರು ಬಹಳ ಬಲಶಾಲಿಗಳು?

ದೇವ ನೀ ದಿಟ ಕೊಲುವಡೆಯು ನಾ
ಸಾವೆನೇ ತಾನಾವನೆಂಬುದ
ದೇವರರಿಯಿರಲೈ ವೃಥಾ ಸಂಭಿನ್ನ ರೋಷದಲಿ
ದೇವನಾಮದ ಜೋಡು ನಮ್ಮನು
ಕಾವುದೈ ನೀ ಮುನಿದಡೆಯು ನಿಮ
ಗಾವು ಹೆದರೆವು ನಾಮಧಾರಿಗಳತುಳ ಬಲರೆಂದ (ಭೀಷ್ಮ ಪರ್ವ, ೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ದೇವ ನೀನು ಕೊಲ್ಲುವೆನೆಂದರೂ ನಾನು ಸಾಯುತ್ತೇನೆಯೇ? ದೇವ ನಾನು ಯಾರೆಂಬುದನ್ನು ನೀನರಿತಿಲ್ಲವೇ? ನಿನ್ನ ನಾಮದ ಕವಚವು ನನ್ನನ್ನು ಕಾಪಾಡುತ್ತದೆ. ನೀನು ಸಿಟ್ಟಾದರೂ ನಾನು ಹೆದರುವುದಿಲ್ಲ, ನಿನ್ನ ನಾಮವನ್ನು ಧರಿಸಿರುವ ನಾವು ಮಹಾಬಲಶಾಲಿಗಳು ಎಂದು ಭೀಷ್ಮನು ಹೇಳಿದನು.

ಅರ್ಥ:
ದೇವ: ಭಗವಂತ; ದಿಟ: ಸತ್ಯ; ಕೊಲು: ಸಾವು; ಅರಿ: ತಿಳಿ; ವೃಥಾ: ಸುಮ್ಮನೆ; ಸಂಭಿನ್ನ: ಬಿರಿದ, ಸೀಳಿದ; ರೋಷ: ಕೋಪ; ನಾಮ: ಹೆಸರು; ಜೋಡು: ಜೊತೆ; ಕಾವುದು: ರಕ್ಷಿಸು; ಮುನಿ: ಕೋಪ; ಹೆದರು: ಭಯಗೊಳ್ಳು; ನಾಮಧಾರಿ: ನಾಮವನ್ನು ಧರಿಸಿದವ; ಬಲ: ಶಕ್ತಿ; ಅತುಳ: ಬಹಳ;

ಪದವಿಂಗಡಣೆ:
ದೇವ +ನೀ +ದಿಟ +ಕೊಲುವಡೆಯು +ನಾ
ಸಾವೆನೇ +ತಾನ್+ಆವನ್+ಎಂಬುದ
ದೇವರ್+ಅರಿಯಿರಲೈ +ವೃಥಾ +ಸಂಭಿನ್ನ +ರೋಷದಲಿ
ದೇವನಾಮದ+ ಜೋಡು +ನಮ್ಮನು
ಕಾವುದೈ+ ನೀ +ಮುನಿದಡೆಯು +ನಿಮ
ಗಾವು +ಹೆದರೆವು+ ನಾಮಧಾರಿಗಳ್+ಅತುಳ +ಬಲರೆಂದ

ಅಚ್ಚರಿ:
(೧) ಯಾವುದು ರಕ್ಷಿಸುವುದು – ದೇವನಾಮದ ಜೋಡು ನಮ್ಮನುಕಾವುದೈ