ಪದ್ಯ ೨೩: ಧರ್ಮಜನು ಯಾವ ಅಪ್ಪಣೆಯನ್ನು ನೀಡಿದನು?

ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶಲ್ಯನು ಬಂಗಾರದ ರಥವನ್ನು ತರಿಸಿ ಸಜ್ಜು ಮಾಡಿಸಿ, ಧ್ವಜವನ್ನು ಮೇಲೆ ಹಾರಿಸಿದನು. ಬಾಣಗಳು ತುಮ್ಬಿದ ಬಂಡಿಗಳನ್ನು ರಥದ ಮಗ್ಗುಲಿಗೆ ಒಪ್ಪ್ವಾಗಿ ಜೋಡಿಸಿದನು. ಬಿರುದನ್ನು ಹೊಗಳುವ ಪಾಠಕರಿಗೆ ರತ್ನಗಳನ್ನೂ, ಬಂಗಾರವನ್ನೂ ಕೊಟ್ಟು ಉತ್ಸಾಹದಿಂದುಬ್ಬಿ, ಧರ್ಮಜನನ್ನು ಯುದ್ಧಕ್ಕೆ ಕರೆಯಿರಿ ಎಂದಪ್ಪಣೆ ನೀಡಿದನು.

ಅರ್ಥ:
ತರಿಸು: ಬರೆಮಾಡು; ಕಾಂಚನ: ಹೊನ್ನು, ಚಿನ್ನ; ರಥ: ಬಂಡಿ; ಸಂವರಿಸು: ಸಂಗ್ರಹಿಸು; ಟೆಕ್ಕೆ:ಬಾವುಟ, ಧ್ವಜ; ಸರಳ: ಬಾಣ; ತುಂಬು: ಪೂರ್ಣವಾದ; ಬಂಡಿ: ರಥ; ಕೆಲಬಲ: ಅಕ್ಕಪಕ್ಕ; ಜೋಡಿಸು: ಕೂಡಿಸು; ಬಿರುದು: ಗೌರವ ಸೂಚಕ ಪದ; ಒದರು: ಹೊರಹಾಕು, ಹೇಳು; ಪಾಠಕ: ಹೊಗಳುಭಟ್ಟ; ಮೋಹರ: ಯುದ್ಧ; ಮಣಿ: ಬೆಲೆಬಾಳುವ ರತ್ನ; ಮೊಗೆ: ಹೊರಹಾಕು, ಹೊರಹೊಮ್ಮಿಸು; ಅರರೆ: ಅಶ್ಚರ್ಯ ಸೂಚಕ ಪದ; ಕರೆ: ಬರೆಮಾಡು; ಉಬ್ಬು: ಹಿಗ್ಗು, ಗರ್ವಿಸು;

ಪದವಿಂಗಡಣೆ:
ತರಿಸಿ +ಕಾಂಚನಮಯ +ರಥವ+ ಸಂ
ವರಿಸಿದನು +ಟೆಕ್ಕೆಯವನ್+ಎತ್ತಿಸಿ
ಸರಳ+ ತುಂಬಿದ +ಬಂಡಿಗಳ +ಕೆಲಬಲಕೆ +ಜೋಡಿಸಿದ
ಬಿರುದನ್+ಒದರುವ +ಪಾಠಕರ+ ಮೋ
ಹರಕೆ+ ಮಣಿ+ಕಾಂಚನವ +ಮೊಗೆದಿತ್ತ್
ಅರರೆ +ಕರೆಯೋ +ಧರ್ಮಜನನ್+ಎಂದುಬ್ಬಿದನು+ ಶಲ್ಯ

ಅಚ್ಚರಿ:
(೧) ಹೊಗಳುಭಟ್ಟರ ಕೆಲಸವನ್ನು ಹೇಳುವ ಪರಿ – ಬಿರುದನೊದರುವ ಪಾಠಕರ

ಪದ್ಯ ೧೬: ಕೌರವರ ಪರಾಭವ ಹೇಗೆ ಕಂಡಿತು?

ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇಳಿದ ಕುದುರೆಗಳಿಗೆ, ಬಿಟ್ಟೋಡಿದ ರಥಗಳಿಗೆ, ಕೆಳಗಿಳಿಸಿದ ಧ್ವಜಗಳಿಗೆ, ಕೈಯಿಂದ ಕೆಳಬಿದ್ದ ಆಯುಧಗಳಿಗೆ, ಸರಿಸಿ ಹಾಕಿದ ಕವಚ, ಸೀಸಕಗಳಿಗೆ, ಕಳಚಿಹಾಕಿದ ಆಭರನಗಳಿಗೆ, ಎಸೆದ ಕೊಡೆಗಳಿಗೆ ಲೆಕ್ಕವೇ ಇಲ್ಲ. ನಿನ್ನ ವೀರರು ಇಷ್ಟೊಂದು ಕೊಲೆಗೆ ಅಪಮಾನಕ್ಕೆ ಎಂದೂ ಸಿಕ್ಕಿರಲಿಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಕುದುರೆ: ಅಶ್ವ; ಬಿಸುಟು: ಹೊರಹಾಕು; ರಥ: ಬಂಡಿ; ಸಂಕುಳ: ಗುಂಪು; ಹಾಯ್ಕು: ಇಡು, ಇರಿಸು; ಟೆಕ್ಕೆ: ಬಾವುಟ, ಧ್ವಜ; ಕೈ: ಹಸ್ತ; ಆಯುಧ: ಶಸ್ತ್ರ; ತತಿ: ಗುಂಪು; ನೂಕು: ತಳ್ಳು; ಜೋಡು: ಜೊತೆ; ಸೀಸಕ: ಶಿರಸ್ತ್ರಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಆಭರಣ: ಒಡವೆ; ಆತಪತ್ರ: ಕೊಡೆ, ಛತ್ರಿ; ಆವಳಿ: ಗುಂಪು; ಕಾಣು: ತೋರು; ಪರಿ: ರೀತಿ; ಕೊಲೆ:ಸಾವು; ಭಂಗ: ಮುರಿಯುವಿಕೆ; ಬಿರುದರು: ವೀರರು;

ಪದವಿಂಗಡಣೆ:
ಇಳಿದ +ಕುದುರೆಗೆ +ಬಿಸುಟ +ರಥ+ಸಂ
ಕುಳಕೆ +ಹಾಯ್ಕಿದ +ಟೆಕ್ಕೆಯಕೆ +ಕೈ
ಬಳಿಚಿದ್+ಆಯುಧ+ತತಿಗೆ +ನೂಕಿದ +ಜೋಡು +ಸೀಸಕಕೆ
ಕಳಚಿದ್+ಆಭರಣ+ಆತಪತ್ರ
ಆವಳಿಗೆ +ಕಾಣೆನು +ಕಡೆಯನೀ +ಪರಿ
ಕೊಲೆಗೆ +ಭಂಗಕೆ +ನಿನ್ನ +ಬಿರುದರು+ ಬಂದುದಿಲ್ಲೆಂದ

ಅಚ್ಚರಿ:
(೧) ವೀರರು ಎಂದು ಹೇಳಲು – ಬಿರುದರು ಪದದ ಬಳಕೆ
(೨) ಸಂಕುಳ, ತತಿ – ಸಾಮ್ಯಾರ್ಥ ಪದ

ಪದ್ಯ ೮: ದುರ್ಯೋಧನನ ಬಗ್ಗೆ ಕೃಪಾಚಾರ್ಯರು ಹೇಗೆ ನುಡಿದರು?

ಗರುವರನು ಮಾನ್ಯರನು ರಣಧೀ
ರರನು ದೂರದಲಿರಿಸುವರು ಹ
ತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು
ಅರಸುಗಳು ದುಶ್ಶೀಲರೆಂಬುದ
ನರಿಯದೇ ಜಗವಕಟ ಟೆಕ್ಕೆಯ
ಹರಳು ಗಡ ಕೌಸ್ತುಭಕೆ ಸರಿಯೆಂದನು ಕೃಪಾಚಾರ್ಯ (ದ್ರೋಣ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಸ್ವಾಭಿಮಾನಿಗಳು, ಮನ್ನಣೆಗೆ ಅರ್ಹರಾದವರು, ರಣಧೀರರನ್ನು ದೂರವಿಟ್ಟು ಬಾಯಿಬಡುಕರನ್ನು ಜಗಭಂಡರನ್ನು ಹತ್ತಿರಕ್ಕೆ ಕರೆಯುವ ದುಶ್ಶೀಲರು ರಾಜರು, ಇದು ಲೋಕಕ್ಕೆ ಗೊತ್ತು. ಗಾಜಿನ ಹರಳು ಕೌಸ್ತುಭಮಣಿಗೆ ಸಮ ಎನ್ನುವುದು ರಾಜರ ಚಾಳಿ ಎಂದು ಕೃಪಾಚಾರ್ಯರು ಹಂಗಿಸಿದರು.

ಅರ್ಥ:
ಗರುವು: ಶ್ರೇಷ್ಠತೆ; ಮಾನ್ಯ: ಗೌರವ; ರಣಧೀರ: ಶೂರ, ಪರಾಕ್ರಮಿ; ದೂರ: ಅಂತರ; ಹತ್ತಿರ: ಸಮೀಪ; ಕರೆ: ಬರೆಮಾಡು; ಬಾಯಿಬಡಿಕ: ತಲೆಹರಟೆ; ಜಗ: ಪ್ರಪಂಚ; ಭಂಡ: ನಾಚಿಕೆ ಇಲ್ಲದವನು; ಅರಸು: ರಾಜ; ದುಶ್ಶೀಲ: ಕೆಟ್ಟ ನಡತೆ; ಅರಿ: ತಿಳಿ; ಅಕಟ: ಅಯ್ಯೋ; ಟೆಕ್ಕೆಯ ಹರಳು: ಗಾಜಿನ ಮಣಿ; ಗಡ: ಅಲ್ಲವೆ; ಕೌಸ್ತುಭ: ಬೆಲೆಬಾಳುವ ಮಣಿ; ಸರಿ: ಸಮ;

ಪದವಿಂಗಡಣೆ:
ಗರುವರನು+ ಮಾನ್ಯರನು +ರಣಧೀ
ರರನು +ದೂರದಲ್+ಇರಿಸುವರು +ಹ
ತ್ತಿರಕೆ +ಕರೆವರು +ಬಾಯಿಬಡಿಕರ +ಜಗದ +ಭಂಡರನು
ಅರಸುಗಳು +ದುಶ್ಶೀಲರೆಂಬುದನ್
ಅರಿಯದೇ +ಜಗವ್+ಅಕಟ +ಟೆಕ್ಕೆಯ
ಹರಳು +ಗಡ +ಕೌಸ್ತುಭಕೆ +ಸರಿಯೆಂದನು +ಕೃಪಾಚಾರ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಟೆಕ್ಕೆಯಹರಳು ಗಡ ಕೌಸ್ತುಭಕೆ ಸರಿಯೆಂದನು
(೨) ದುರ್ಯೋಧನನ ವರ್ತನೆ – ಹತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು

ಪದ್ಯ ೯೪: ರಥದೊಳಗೆ ಏನನ್ನು ತುಂಬಿದರು?

ನೊಗನ ಬಿಗುಹಿನ ಕಂದದುರು ವಾ
ಜಿಗಳು ಕುಣಿದವು ಪಲ್ಲವದ ಸೆರ
ಗಗಿಯೆ ಟೆಕ್ಕೆಯವೆತ್ತಿದವು ಮುಮ್ಮೊನೆಯ ಸೂನಗೆಯ
ಹೊಗರುಗಳ ತೀಡಿದರು ಕೀಲ
ಚ್ಚುಗಳ ಮೇಳೈಸಿದರು ಬಲು ಕಂ
ಬುಗೆಯ ಬದ್ದರದೊಳಗೆ ತುಂಬಿದರಸ್ತ್ರ ಶಸ್ತ್ರಗಳ (ಭೀಷ್ಮ ಪರ್ವ, ೪ ಸಂಧಿ, ೯೪ ಪದ್ಯ)

ತಾತ್ಪರ್ಯ:
ರಥದ ನೊಗವನ್ನು ಹೂಡಿ ಕಟ್ಟಿದ್ದ ಕುದುರೆಗಳು ಕುಣಿದವು. ರಥದ ತೋರಣದ ಮೇಲೆ ಧ್ವಜಗಳನ್ನು ಎತ್ತಿ ಕಟ್ಟಿದರು. ಚೂಪಾದ ಸೂನಗೆಗಳನ್ನು ಹೊಳೆಯುವಂತೆ ತೇದರು. ರಥದ ಅಚ್ಚುಗಳಿಗೆ ಕೀಲನ್ನು ಹಾಕಿ ಕಂಬುಗೆಯೊಳಗೆ ಶಸ್ತ್ರಾಸ್ತ್ರಗಳನ್ನು ತುಂಬಿದರು.

ಅರ್ಥ:
ನೊಗ: ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಬಿಗುಹು: ಗಟ್ಟಿ; ಕಂದ: ಹೆಗಲು; ಉರು: ಅತಿದೊಡ್ಡ, ಹೆಚ್ಚಾದ; ವಾಜಿ: ಕುದುರೆ; ಕುಣಿ: ನರ್ತಿಸು; ಪಲ್ಲವ: ಚಿಗುರು, ಅಂಕುರ; ಟೆಕ್ಕೆ: ಬಾವುಟ, ಧ್ವಜ; ಎತ್ತು: ಮೇಲೆ ತರು; ಮುಮ್ಮೊನೆ: ಮುಂಬದಿ, ಮುಂಭಾಗ; ಸೂನ: ಹುಟ್ಟಿದ; ಹೊಗರು: ಕಾಂತಿ, ಪ್ರಕಾಶ; ತೀಡು: ಮುಟ್ಟು, ಸ್ಪರ್ಶಿಸು; ಕೀಲು: ತಿರುಗಣಿ, ಅಗುಳಿ; ಅಚ್ಚು: ಪಡಿಯಚ್ಚಿನಲ್ಲಿ ಎರಕಹೊಯ್ದು ತೆಗೆದ ಪ್ರತಿರೂಪ, ವಿಗ್ರಹ; ಮೇಳೈಸು: ಸೇರು, ಜೊತೆಯಾಗು; ಬಲು: ಬಹಳ; ಕಂಬುಗೆ: ರಥದ ಒಂದು ಭಾಗ; ಬದ್ಧ: ಕಟ್ಟಿದ, ಬಿಗಿದ; ತುಂಬು: ಪೂರ್ಣವಾಗಿರುವಿಕೆ; ಅಸ್ತ್ರ: ಬಾಣ, ಆಯುಧ; ಶಸ್ತ್ರ: ಆಯುಧ; ಸೆರಗು: ಸೀರೆಯ ಅಂಚು; ಅಗಿ: ಅಲುಗಾಡು, ಆವರಿಸು;

ಪದವಿಂಗಡಣೆ:
ನೊಗನ +ಬಿಗುಹಿನ+ ಕಂದದ್+ ಉರು +ವಾ
ಜಿಗಳು +ಕುಣಿದವು+ ಪಲ್ಲವದ+ ಸೆರಗ್
ಅಗಿಯೆ +ಟೆಕ್ಕೆಯವ್+ಎತ್ತಿದವು +ಮುಮ್ಮೊನೆಯ +ಸೂನಗೆಯ
ಹೊಗರುಗಳ+ ತೀಡಿದರು +ಕೀಲ್
ಅಚ್ಚುಗಳ +ಮೇಳೈಸಿದರು+ ಬಲು +ಕಂ
ಬುಗೆಯ +ಬದ್ದರದೊಳಗೆ +ತುಂಬಿದರ್+ಅಸ್ತ್ರ +ಶಸ್ತ್ರಗಳ

ಅಚ್ಚರಿ:
(೧) ಕುದುರೆಗಳು ಸಿದ್ಧರಾದವು ಎಂದು ಹೇಳಲು – ನೊಗನ ಬಿಗುಹಿನ ಕಂದದುರು ವಾಜಿಗಳು ಕುಣಿದವು

ಪದ್ಯ ೬೧: ದುರ್ಯೋಧನನ ರಥವು ಹೇಗಿತ್ತು?

ಅಗಿವ ಹಾವಿನ ಹಳವಿಗೆಯ ಕೈ
ನೆಗಹಿ ಮುಸುಕಿದ ಝಲ್ಲರಿಯ ಮಿಗೆ
ಗಗನತಳದೊಳು ಮೆರೆವ ಸೀಗುರಿಗಳ ಪತಾಕೆಗಳ
ನೆಗಹಿ ನಿಮಿರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ (ವಿರಾಟ ಪರ್ವ, ೭ ಸಂಧಿ, ೬೧ ಪದ್ಯ)

ತಾತ್ಪರ್ಯ:
ಹೆಡೆಯೆತ್ತಿದ ಹಾವಿನ ಧ್ವಜ, ಸುತ್ತಲೂ ಕಟ್ಟಿದ ಜಾಲರಗಳು, ಆಕಾಶದತ್ತ ಏರಿರುವ ಚಾಮರ ಧ್ವಜಗಳು, ನೇರವಾಗಿ ನಿಂತಿರುವ ಧ್ವಜ ದಂಡದ ಮೇಲಿರುವ ಧ್ವಜ, ಸುತ್ತಲೂ ಮದದಾನೆಗಳ ನಡುವೆ ಇರುವವನು ಜೂಜಾಟದಲ್ಲಿ ಕಪಟ ಜಾಣತನವನ್ನು ಪ್ರದರ್ಶಿಸಿದ ದುರ್ಯೋಧನನ ರಥವನ್ನು ನೋಡೆಂದು ಅರ್ಜುನನು ಉತ್ತರನಿಗೆ ತೋರಿಸಿದನು.

ಅರ್ಥ:
ಅಗಿ: ಕಚ್ಚು, ಹೆಡೆಯೆತ್ತು; ಹಾವು: ಉರಗ; ಹಳವಿಗೆ: ಬಾವುಟ; ಕೈ: ಹಸ್ತ; ನೆಗಹು: ಮೇಲೆತ್ತು; ಕೈನಗಹಿ:
ಮೇಲೆತ್ತು; ಮುಸುಕು: ಆವರಿಸು; ಝಲ್ಲರಿ: ಕುಚ್ಚು, ಗೊಂಡೆ; ಮಿಗೆ: ಅಧಿಕ; ಗಗನ: ಆಕಾಶ; ಮೆರೆ: ಹೊಳೆ; ಸೀಗುರಿ: ಚಾಮರ; ಪತಾಕೆ: ಬಾವುಟ; ನೆಗಹು: ಮೇಲೆತ್ತು; ನಿಮಿರು: ಎದ್ದುನಿಲ್ಲು, ನೆಟ್ಟಗಾಗು; ಟೆಕ್ಕೆ: ಬಾವುಟ, ಧ್ವಜ; ಮದ: ಅಮಲು, ಗರ್ವ; ಕರಿ: ಆನೆ; ಮಧ್ಯ: ನಡುವೆ; ಅಗಡು:ತುಂಟತನ; ಜೂಜು: ಸಟ್ಟ, ಜುಗಾರಿ; ಜಾಣ: ಬುದ್ಧಿವಂತ;

ಪದವಿಂಗಡಣೆ:
ಅಗಿವ +ಹಾವಿನ +ಹಳವಿಗೆಯ +ಕೈ
ನೆಗಹಿ +ಮುಸುಕಿದ +ಝಲ್ಲರಿಯ +ಮಿಗೆ
ಗಗನತಳದೊಳು +ಮೆರೆವ +ಸೀಗುರಿಗಳ +ಪತಾಕೆಗಳ
ನೆಗಹಿ +ನಿಮಿರುವ +ಟೆಕ್ಕೆಯದ +ಮದ
ವೊಗುವ +ಕರಿಗಳ+ಮಧ್ಯದಲಿ +ತಾನ್
ಅಗಡು +ದುರಿಯೋಧನನು +ಜೂಜಿನ +ಜಾಣನವನೆಂದ

ಅಚ್ಚರಿ:
(೧) ದುರ್ಯೋಧನನ ರಥದ ವರ್ಣನೆ – ಅಗಿವ ಹಾವಿನ ಹಳವಿಗೆಯ ಕೈನೆಗಹಿ ಮುಸುಕಿದ ಝಲ್ಲರಿಯ ಮಿಗೆ
ಗಗನತಳದೊಳು ಮೆರೆವ ಸೀಗುರಿಗಳ ಪತಾಕೆಗಳ

ಪದ್ಯ ೪: ಉತ್ತರನಿಗೆ ಕೌರವ ಸೇನೆಯು ಹೇಗೆ ಕಂಡಿತು?

ಪ್ರಳಯಮೇಘದ ಮಾಲೆಯೋ ಕರಿ
ಕುಲವೊ ಸಿಡಿಲಿನ ಗರುಡಿಯೋ ಕಳ
ಕಳವೊ ಕಲ್ಪಾನಳನ ಧೂಮಾವಳಿಯೊ ಕೈದುಗಳೊ
ನೆಲನದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ (ವಿರಾಟ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಇವೇನು ಆನೆಗಳೋ, ಪ್ರಳಯಕಾಲದ ಮೇಘಗಳ ಮಾಲೆಯೋ, ಇದೇನು ಸೈನ್ಯದ ಸಾದೋ, ಸಿಡಿಲುಗಳ ಗರಡಿ ಮನೆಯ ಸದ್ದೋ, ಕಲ್ಪಾಂತರದ ಅಗ್ನಿಯ ಹೊಗೆಯೋ ಆಯುಧಗಳೋ, ನಿಲದ ಮಾಳಿಗೆಅ ಮೇಲಿನ ಬೆಟ್ಟಗಳ ಗುಂಪೋ, ಧ್ವಜಗಳ ಗುಂಪೋ, ಜಗತ್ತನ್ನು ನಾಶಮಾಡಲು ಬಂದ ಸಮುದ್ರವೋ, ಸೈನ್ಯವೋ ನನಗೆ ತಿಳಿಯಲಿಲ್ಲ ಎಂದು ಉತ್ತರನು ಬೆದರಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಮಾಲೆ: ಸರ; ಕರಿ: ಆನೆ; ಕುಲ: ವಂಶ; ಸಿಡಿಲು: ಅಶನಿ; ಗರಡಿ: ವ್ಯಾಯಾಮ ಶಾಲೆ; ಕಳ: ರಣರಂಗ; ಕಲ್ಪಾನಳ: ಯುಗದ ಅಂತ್ಯದಲ್ಲಿನ ಬೆಂಕಿ; ಧೂಮ: ಹೊಗೆ; ಆವಳಿ: ಸಮೂಹ; ಕೈದು: ಕತ್ತಿ, ಆಯುಧ, ಶಸ್ತ್ರ; ನೆಲ: ಭೂಮಿ; ಬೆಟ್ಟ: ಗಿರಿ; ಅಡವಿ: ಕಾಡು; ತಳಿತ: ಚಿಗುರಿದ; ಟೆಕ್ಕೆ: ಬಾವುಟ, ಧ್ವಜ; ಜಗ: ಜಗತ್ತು: ಅಳಿವು: ನಾಶ; ಜಲಧಿ: ಸಾಗರ; ಸೇನೆ: ಸೈನ್ಯ; ಅರಿ: ತಿಳಿ;

ಪದವಿಂಗಡಣೆ:
ಪ್ರಳಯ+ಮೇಘದ+ ಮಾಲೆಯೋ+ ಕರಿ
ಕುಲವೊ +ಸಿಡಿಲಿನ +ಗರುಡಿಯೋ +ಕಳ
ಕಳವೊ+ ಕಲ್ಪಾನಳನ+ ಧೂಮಾವಳಿಯೊ +ಕೈದುಗಳೊ
ನೆಲನದಡ್ಡಿಯ +ಬೆಟ್ಟದ್+ಅಡವಿಯೊ
ತಳಿತ+ ಟೆಕ್ಕೆಯವೋ +ಜಗಂಗಳನ್
ಅಳಿವ+ ಜಲಧಿಯೊ+ ಸೇನೆಯೋ+ ನಾವರಿಯೆವ್+ಇದನೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ – ಪ್ರಳಯಮೇಘದ ಮಾಲೆಯೋ ಕರಿಕುಲವೊ; ಸಿಡಿಲಿನ ಗರುಡಿಯೋ ಕಳ
ಕಳವೊ; ಕಲ್ಪಾನಳನ ಧೂಮಾವಳಿಯೊ ಕೈದುಗಳೊ

ಪದ್ಯ ೪೧: ಭೀಮನು ಯಾವ ಕೋರಿಕೆಯನ್ನು ಹನುಮನಲ್ಲಿ ಬೇಡಿದನು?

ಅಂಜದಿರು ನೀನಿನ್ನು ಮೆಚ್ಚಿದೆ
ನಂಜಲಿಸು ನಾ ಸಲಿಸುವೆನು ನ
ಮ್ಮಂಜನಾದೇವಿಯರು ಕುಂತೀದೇವಿಯಾದರಲೆ
ರಂಜಕರು ನಾವಲ್ಲ ಹೇಳು ಸ
ಮಂಜಸದಲೆನೆ ಭೀಮ ನಗುತ ಧ
ನಂಜಯನ ಟೆಕ್ಕೆಯಕೆ ಬಿಜಯಂಗೈಯ ಬೇಕೆಂದ (ಅರಣ್ಯ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಹನುಮನು ತನ್ನ ಮೊದಲಿನ ರೂಪವನ್ನು ತಾಳಿ, ಭೀಮನಿಗೆ, ನೀನಿನ್ನು ಹೆದರಬೇಡ, ನಿನಗೆ ನಾನು ಮೆಚ್ಚಿದ್ದೇನೆ. ಕೈಯೊಡ್ಡಿ ಬೇಡಿದುದನ್ನು ಕೊಡುತ್ತೇನೆ ನನ್ನ ತಾಯಿ ಅಂಜನಾದೇವಿಯೇ ಕುಂತಿದೇವಿಯಲ್ಲವೇ ಎಂದು ಹೇಳಿ, ನನಗೆ ರಂಜನೆಯ ಮಾತಾಡಿ ಗೊತ್ತಿಲ್ಲ, ಕೇಳಿದುದನ್ನು ಕೊಡುತ್ತೇನೆ ಎಂದೆನಲು, ಭೀಮನು ನೀನು ಅರ್ಜುನನ ಬಾವುಟದ ಮೇಲೆ ನೆಲೆಸು ಎಂದು ಬೇಡಿಕೊಂಡನು.

ಅರ್ಥ:
ಅಂಜು: ಹೆದರು; ಮೆಚ್ಚು: ಪ್ರಶಂಶಿಸು; ಅಂಜಲಿ: ಕೈಬೊಗಸೆ, ಜೋಡಿಸಿದ ಕೈಗಳು; ಸಲಿಸು: ಕೊಡುವೆ; ರಂಜಕ: ಆಕರ್ಷಕವಾದುದು; ಸಮಂಜಸ: ಯೋಗ್ಯವಾದುದು, ಸಮರ್ಪಕವಾದುದು; ನಗು: ಸಂತಸ; ಟೆಕ್ಕೆ: ಬಾವುಟ; ಬಿಜಯಂಗೈ: ನಡೆ, ದಯಮಾಡು;

ಪದವಿಂಗಡಣೆ:
ಅಂಜದಿರು +ನೀನ್+ಇನ್ನು +ಮೆಚ್ಚಿದೆನ್
ಅಂಜಲಿಸು +ನಾ +ಸಲಿಸುವೆನು +ನಮ್ಮ್
ಅಂಜನಾದೇವಿಯರು+ ಕುಂತೀದೇವಿಯಾದರಲೆ
ರಂಜಕರು +ನಾವಲ್ಲ +ಹೇಳು +ಸ
ಮಂಜಸದಲ್+ಎನೆ+ ಭೀಮ +ನಗುತ +ಧ
ನಂಜಯನ+ ಟೆಕ್ಕೆಯಕೆ +ಬಿಜಯಂಗೈಯ +ಬೇಕೆಂದ

ಅಚ್ಚರಿ:
(೧) ಅಂಜ – ಪದದ ಬಳಕೆ ೧-೩ ಸಾಲಿನ ಮೊದಲ ಪದ

ಪದ್ಯ ೧೫: ವೃಷಸೇನನು ನಕುಲನ ಮೇಲೆ ಹೇಗೆ ಬಾಣಪ್ರಯೋಗ ಮಾಡಿದನು?

ಮರಳಿ ನಕುಲನನೆಚ್ಚನಾತನ
ತುರಗವನು ಮುರಿಯೆಚ್ಚನಾತನ
ವರ ರಥವ ಸಾರಥಿಯನಾತನ ಟೆಕ್ಕೆಯವ ಧನುವ
ಉರುಳೆಗಡಿದನು ಮತ್ತೆ ಜೋಡಿಸಿ
ಪರಿತರಲು ಮುರಿಯೆಚ್ಚು ಪುನರಪಿ
ಹುರುಳುಗೆಡಿಸಿದನರಸಿ ಹರಿದನು ಮತ್ತೆ ಪವನಜನ (ಕರ್ಣ ಪರ್ವ, ೨೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ವೃಷಸೇನನು ಮತ್ತೆ ನಕುಲನ ಮೇಲೆ ಬಾಣಗಳನ್ನು ಬಿಟ್ಟು ಅವನ ರಥ, ಕುದುರೆಗಳು, ಸಾರಥಿ, ಧ್ವಜ, ಬಿಲ್ಲುಗಳನ್ನು ಕತ್ತರಿಸಿದನು. ನಕುಲನು ಮತ್ತೆ ಹೊಸ ರಥದಲ್ಲಿ ಬರಲು ಅದನ್ನೂ ಪುಡಿ ಮಾಡಿ ಭೀಮನನ್ನು ಹುಡುಕಿಕೊಂಡು ಹೋದನು.

ಅರ್ಥ:
ಮರಳು: ಮತ್ತೆ; ಎಚ್ಚು: ಬಾಣಬಿಡು; ತುರಗ: ಅಶ್ವ; ಮುರಿ: ಸೀಳು; ವರ: ಶ್ರೇಷ್ಠ; ರಥ: ಬಂಡಿ; ಸಾರಥಿ: ಸೂತ; ಟೆಕ್ಕೆ: ಬಾವುಟ, ಧ್ವಜ; ಧನು: ಬಿಲ್ಲು; ಉರುಳು: ಕೆಳಕ್ಕೆ ಬೀಳು; ಮತ್ತೆ: ಪುನಃ; ಜೋಡಿಸು: ಸರಿಪಡಿಸು, ಕೂಡಿಸು; ಪರಿ:ಬಗೆ, ರೀತಿ, ಸ್ಥಿತಿ; ತರು: ಕೊಡು, ತೆಗೆದುಕೊಂಡು ಬರು; ಮುರಿ: ಸೀಳು; ಪುನರಪಿ: ಮತ್ತೆ; ಹುರುಳು: ಸಾಮರ್ಥ್ಯ; ಕೆಡಿಸು: ಹಾಳುಮಾಡು; ಅರಸಿ: ಹುಡುಕು; ಹರಿ: ಚಲಿಸು, ಸಾಗು; ಪವನಜ: ಭೀಮ;

ಪದವಿಂಗಡಣೆ:
ಮರಳಿ +ನಕುಲನನ್+ಎಚ್ಚನ್+ಆತನ
ತುರಗವನು +ಮುರಿ+ ಎಚ್ಚನ್+ಆತನ
ವರ+ ರಥವ +ಸಾರಥಿಯನ್+ಆತನ+ ಟೆಕ್ಕೆಯವ +ಧನುವ
ಉರುಳೆಗಡಿದನು +ಮತ್ತೆ +ಜೋಡಿಸಿ
ಪರಿ+ತರಲು+ ಮುರಿಯೆಚ್ಚು +ಪುನರಪಿ
ಹುರುಳು+ಗೆಡಿಸಿದನ್+ಅರಸಿ+ ಹರಿದನು+ ಮತ್ತೆ +ಪವನಜನ

ಅಚ್ಚರಿ:
(೧) ಎಚ್ಚನ್- ೩ ಬಾರಿ ಪ್ರಯೋಗ
(೨) ಮುರಿ, ಉರುಳೆಗಡಿ – ಸಾಮ್ಯಾರ್ಥ ಪದ

ಪದ್ಯ ೯: ಕೃಷ್ಣನು ಅರ್ಜುನನಿಗೆ ಏನು ಹೇಳಿದ?

ಆರ ರಥವಾ ಹೋಹುದದು ಹಿಂ
ದಾರವರು ಬಳಿವಳಿಯಲೊಗ್ಗಿನ
ಲೋರಣಿಸಿ ಮುಂಚುವರು ಟೆಕ್ಕೆಯವಾರ ತೇರಿನದು
ಆರದಳವದು ಧುರಪಲಾಯನ
ಚಾರು ದೀಕ್ಷಿತರಾಯ್ತು ಫಲುಗುಣ
ಧಾರುಣೀಪತಿಯಾಣೆ ಹೇಳೆಂದಸುರರಿಪು ನುಡಿದ (ಕರ್ಣ ಪರ್ವ, ೧೪ ಸಂಧಿ, ೯ ಪದ್ಯ)

ತಾತ್ಪರ್ಯ:
ಅಲ್ಲಿ ಹೋಗುತ್ತಿರುವುದು ಯಾರ ರಥ? ಅದರ ಹಿಂದೆಯೇ ಹೋಗುತ್ತಿರುವವರಾರು? ಆ ಧ್ವಜ ಯಾರ ತೇರಿನದು? ಯುದ್ಧದಿಂದ ಪಲಾಯನ ದೀಕ್ಷೆ ತೊಟ್ಟವರಾರು? ಅರ್ಜುನ, ಅರಸನಾಣೆ ಹೇಳು ಎಂದು ಶ್ರೀಕೃಷ್ಣನು ನುಡಿದ.

ಅರ್ಥ:
ರಥ: ಬಂಡಿ, ತೇರು; ಹೋಹುದು: ಹೋಗುವುದು; ಹಿಂದೆ: ಹಿಂಭಾಗ; ಬಳಿವಳಿ: ಹಿಂದೆ ಹಿಂದೆ, ಜೊತೆ ಜೊತೆಯಲಿ; ಒಗ್ಗು: ಒಟ್ಟುಗೂಡು, ಗುಂಪಾಗು; ಉರಣಿಸು: ಮುಂಚು: ಮುಂದೆ; ಟೆಕ್ಕೆ: ಧ್ವಜ; ತೇರು: ರಥ; ದಳ: ಸೈನ್ಯ; ಧುರ: ಯುದ್ಧ, ಕಾಳಗ; ಪಲಾಯನ: ಓಡುವಿಕೆ, ಪರಾರಿ; ಚಾರು: ಶ್ರೇಷ್ಠವಾದ; ದೀಕ್ಷೆ: ವ್ರತ, ನಿಯಮ; ಧಾರುಣೀಪತಿ: ರಾಜ; ಆಣೆ: ಪ್ರಮಾಣ; ಅಸುರರಿಪು: ದಾನವರ ವೈರಿ (ಕೃಷ್ಣ); ನುಡಿ: ಮಾತಾಡು;

ಪದವಿಂಗಡಣೆ:
ಆರ+ ರಥವಾ+ ಹೋಹುದದು +ಹಿಂದ್
ಆರವರು +ಬಳಿವಳಿಯಲ್+ಒಗ್ಗಿನಲ್
ಉರಣಿಸಿ+ ಮುಂಚುವರು +ಟೆಕ್ಕೆಯವಾರ +ತೇರಿನದು
ಆರ+ದಳವದು +ಧುರಪಲಾಯನ
ಚಾರು +ದೀಕ್ಷಿತರಾಯ್ತು +ಫಲುಗುಣ
ಧಾರುಣೀಪತಿಯಾಣೆ+ ಹೇಳೆಂದ್+ಅಸುರರಿಪು+ ನುಡಿದ

ಅಚ್ಚರಿ:
(೧) ಆರ – ೧, ೨, ೪ ಸಾಲಿನ ಮೊದಲ ಪದ

ಪದ್ಯ ೨೯: ಕರ್ಣನು ಯುಧಿಷ್ಥಿರನ ಮೇಲೆ ಹೇಗೆ ದಾಳಿ ಮಾಡಿದನು?

ಎಚ್ಚನರಸನ ಭುಜವ ಕೆಲಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ (ಕರ್ಣ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕರ್ಣನು ಯುಧಿಷ್ಠಿರನೆದುರು ಯುದ್ಧಕ್ಕೆ ನಿಂದು ಅವನ ಭುಜಕ್ಕೆ ತನ್ನ ಬಾಣಗಳನ್ನು ಹೊಡೆದನು, ಪಕ್ಕಕ್ಕೆ ಸರಿದು ಸಾರಥಿಯ ಮೇಲೆ ಬಾಣ ಪ್ರಯೋಗದಿಂದ ನೋವನ್ನುಂಟು ಮಾಡಿ, ರಥದ ಅಚ್ಚನ್ನೂ, ಧ್ವಜವನ್ನೂ ಬಾಣದಿಂದ ಹೊಡೆದು ಅವನನ್ನು ಮೂದಲಿಸಿದನು. ಮತ್ತೆ ಹೊಡೆದು ಮರ್ಮಾಘಾತವಾಗುವಂತೆ ಚುಚ್ಚು ಮಾತುಗಳನ್ನಾಡಿ ಯುಧಿಷ್ಠಿರನಿಗೆ ಘಾಸಿಮಾಡಿದನು.

ಅರ್ಥ:
ಎಚ್ಚು: ಸವರು, ಬಾಣಬಿಡು; ಅರಸ: ರಾಜ; ಭುಜ: ತೋಲು; ಸಾರು: ಬಳಿ, ಲೇಪಿಸು; ಕೆಲ: ಸ್ವಲ್ಪ; ಸಾರಥಿ: ಸೂತ, ರಥವನ್ನು ಓಡಿಸುವ; ರಥ: ಬಂಡಿ; ಅಚ್ಚು: ನಡುಗೂಟ, ಕೀಲು, ಚಕ್ರ; ಹಯ: ಕುದುರೆ; ಅವನೀಪತಿ: ರಾಜ; ಟೆಕ್ಕೆ: ಧ್ವಜ; ಮೂದಲಿಸು: ಹಂಗಿಸು; ಪುನರಪಿ: ಪುನಃ, ಮತ್ತೆ; ಭಂಗ: ತುಂಡು, ಚೂರು; ನೃಪ: ರಾಜ; ಮರ್ಮ: ದೇಹದ ಆಯಕಟ್ಟಿನ ಸ್ಥಳ; ಚುಚ್ಚು: ಇರಿ; ನುಡಿ: ಮಾತಾಡು; ಘಾಸಿ: ಹಿಂಸೆ, ಕಷ್ಟ; ನೃಪಾಲಕ: ರಾಜ;

ಪದವಿಂಗಡಣೆ:
ಎಚ್ಚನ್+ಅರಸನ+ ಭುಜವ +ಕೆಲ+ಸಾರ್ದ್
ಎಚ್ಚನ್+ಆತನ +ಸಾರಥಿಯ +ರಥದ್
ಅಚ್ಚನ್+ಆತನ +ಹಯವನ್+ಅವನೀಪತಿಯ +ಟೆಕ್ಕೆಯವ
ಎಚ್ಚು +ಮೂದಲಿಸಿದನು +ಪುನರಪಿ
ಯೆಚ್ಚು+ ಭಂಗಿಸಿ+ ನೃಪನ+ ಮರ್ಮವ
ಚುಚ್ಚಿ+ ನುಡಿದನು +ಘಾಸಿ +ಮಾಡಿದನಾ +ನೃಪಾಲಕನ

ಅಚ್ಚರಿ:
(೧) ಅರಸ, ನೃಪಾಲಕ, ಅವನೀಪತಿ – ಸಮನಾರ್ಥಕ ಪದಗಳು
(೨) ಮೂದಲಿಸು, ಘಾಸಿ ಮಾಡು, ಚುಚ್ಚು ನುಡಿ – ನೋವನ್ನುಂಟು ಮಾಡಿದ ಎಂದು ಹೇಳುವ ಪದಗಳು