ಪದ್ಯ ೩೮: ಸರೋವರವು ಹೇಗೆ ಕಂಗೊಳಿಸಿತು?

ಉಲಿವ ಕೋಕಿಲ ಪಾಥಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ (ಗದಾ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕೋಗಿಲೆಗಳು ಪಾಠಕರು, ದುಂಬಿಗಳು ಗಾಯಕರು, ಹಂಸಗಳೇ ಸುಭಟರು, ಕೊಳರ್ವಕ್ಕಿಗಳೇ ದ್ವಾರಪಾಲಕರು, ಅರಳಿದ ಪರಿಮಳ ಭರಿತ ಹೊಂದಾವರೆಯೇ ಸಿಂಹಾಸನ, ಹೀಗೆ ಲಕ್ಷ್ಮೀದೇವಿಯ ಓಲಗಶಾಲೆಯಂತೆ ಸರೋವರವು ಕಂಗೊಳಿಸಿತು.

ಅರ್ಥ:
ಉಲಿ: ಶಬ್ದ; ಕೋಕಿಲ: ಕೋಗಿಲೆ; ಪಾಠಕ: ವಾಚಕ, ಭಟ್ಟಂಗಿ; ಮೊರೆ: ದುಂಬಿಯ ಧ್ವನಿ; ಝೇಂಕಾರ; ಅಳಿಕುಲ: ದುಂಬಿಯ ವಂಶ; ಗಾಯಕ: ಹಾಡುವವ; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ಆವಳಿ: ಗುಂಪು; ಸುಭಟ: ಪರಾಕ್ರಮಿ; ಜಡಿ: ಬೆದರಿಕೆ, ಹೆದರಿಕೆ; ಕೊಳ: ಸರೋವರ; ಪಡಿ: ಎಣೆ, ಸಾಟಿ; ಅಲರ್: ಹೂವು; ಹೊಂದಾವರೆ: ಕಮಲ; ನವ: ಹೊಸ; ಪರಿಮಳ: ಸುಗಂಧ; ಸಿಂಹಾಸನ: ಪೀಠ; ಲಲನೆ: ಹೆಣ್ಣು; ಓಲಗ: ದರ್ಬಾರು; ಶಾಲೆ: ನೆಲೆ, ಆಲಯ; ಮೆರೆ: ಹೊಳೆ; ಸರಸಿ: ಸರೋವರ;

ಪದವಿಂಗಡಣೆ:
ಉಲಿವ +ಕೋಕಿಲ +ಪಾಠಕರ +ಮೊರೆವ್
ಅಳಿಕುಳದ +ಗಾಯಕರ+ ಹಂಸಾ
ವಳಿಯ +ಸುಭಟರ +ಜಡಿವ +ಕೊಳರ್ವಕ್ಕಿಗಳ +ಪಡಿಯರರ
ಅಲರ್ದ +ಹೊಂದಾವರೆಯ +ನವ+ಪರಿ
ಮಳದ +ಸಿಂಹಾಸನದಿ+ ಲಕ್ಷ್ಮೀ
ಲಲನೆ+ಓಲಗ+ಶಾಲೆಯಂತಿರೆ+ ಮೆರೆದುದಾ +ಸರಸಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲಕ್ಷ್ಮೀ ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ
(೨) ಸಿಂಹಾಸನವನ್ನು ಕಮಲದಲ್ಲಿ ಕಂಡ ಪರಿ – ಅಲರ್ದ ಹೊಂದಾವರೆಯ ನವಪರಿಮಳದ ಸಿಂಹಾಸನದಿ

ಪದ್ಯ ೪೦: ಯುದ್ಧದ ಅಂತ್ಯದಲ್ಲಿ ಯಾರು ಉಳಿದಿದ್ದರು?

ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿಧಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು (ಗದಾ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವನಿದಿರಿನಲ್ಲಿ ಛತ್ರ, ಚಾಮರಗಳನ್ನು ಹಿಡಿಯುವವರು, ತಾಂಬೂಲದ ಹಡಪವನ್ನು ಹಿಡಿದವರು, ಬಿರುದಾವಳಿಯವರು, ಪಾಠಕರು, ವಾದ್ಯ ವಾದಕರು, ಗಾಯಕರು, ನೀರು ತಿಂಡಿಗಳನ್ನು ಕೊಡುವವರು, ಆನೆ ಕುದುರೆಗಳ ಗಾಯಗಳನ್ನು ಚಿಕಿತ್ಸೆ ಮಾಡುವವರು, ರಥದ ಗಾಲಿಗಳನ್ನು ದಬ್ಬುವವರು, ಬಿಲ್ಲು ಬಾಣಗಳನ್ನು ಕೊಡುವವರು ಮಾತ್ರ ಇದ್ದರು.

ಅರ್ಥ:
ಉಳಿದ: ಮಿಕ್ಕ; ಇದಿರು: ಎದುರು; ಛತ್ರ: ಕೊಡೆ; ಚಮರಾವಳಿ: ಚಾಮರ; ಹಡಪಿಗ: ಅಡಕೆ ಎಲೆಯ ಚೀಲವನ್ನು ಹಿಡಿದವ; ಬಿರುದಾವಳಿ: ಗೌರವ ಸೂಚಕದ ಹೆಸರು; ಪಾಠಕ: ಹೊಗಳುಭಟ್ಟ; ವಾದ್ಯ: ಸಂಗೀತದ ಸಾಧನ; ಮಲ್ಲಗಾಯಕ: ಸಂಗೀತದಲ್ಲಿ ನಿಪುಣನಾದವ; ಸಲಿಲ: ನೀರು; ಭಕ್ಷ್ಯ: ಊಟ; ವಿಧಾನ: ರೀತಿ; ಗಜ: ಆನೆ; ಹಯ: ಕುದುರೆ; ಕುಲ: ವಂಶ; ರಕ್ಷ: ರಕ್ಷಣೆ, ಕಾಪಾಡು; ವ್ರಣ: ಹುಣ್ಣು; ಚಿಕಿತ್ಸ: ರೋಗಕ್ಕೆ ಮದ್ದು ನೀಡುವವ; ರಥ: ಬಂಡಿ; ಚಾರಕ: ಓಡಿಸುವ; ಕಾರ್ಮುಕ: ಬಿಲ್ಲು; ಬಾಣ: ಶರ;

ಪದವಿಂಗಡಣೆ:
ಉಳಿದುದ್+ಇದಿರಲಿ +ಛತ್ರ+ ಚಮರಾ
ವಳಿಯವರು +ಹಡಪಿಗರು +ಬಿರುದಾ
ವಳಿಯವರು +ಪಾಠಕರು +ವಾದ್ಯದ +ಮಲ್ಲಗಾಯಕರು
ಸಲಿಲ +ಭಕ್ಷ್ಯ+ವಿಧಾನ+ಗಜ+ಹಯ
ಕುಲದ+ ರಕ್ಷ+ವ್ರಣ+ಚಿಕಿತ್ಸಕ
ದಳಿತ+ ರಥಚಾರಕರು +ಕಾರ್ಮುಕ+ಬಾಣದಾಯಕರು

ಅಚ್ಚರಿ:
(೧) ಯುದ್ಧದಲ್ಲಿ ಸಹಾಯ ಮಾಡುವವರು – ಚಮರಾವಳಿ, ಹಡಪಿಗ, ಬಿರುದಾವಳಿ, ಪಾಠಕ, ಮಲ್ಲಗಾಯಕ, ವ್ರಣಚಿಕಿತ್ಸಕ, ರಥಚಾರಕ, ಬಾಣದಾಯಕ

ಪದ್ಯ ೨೩: ಧರ್ಮಜನು ಯಾವ ಅಪ್ಪಣೆಯನ್ನು ನೀಡಿದನು?

ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶಲ್ಯನು ಬಂಗಾರದ ರಥವನ್ನು ತರಿಸಿ ಸಜ್ಜು ಮಾಡಿಸಿ, ಧ್ವಜವನ್ನು ಮೇಲೆ ಹಾರಿಸಿದನು. ಬಾಣಗಳು ತುಮ್ಬಿದ ಬಂಡಿಗಳನ್ನು ರಥದ ಮಗ್ಗುಲಿಗೆ ಒಪ್ಪ್ವಾಗಿ ಜೋಡಿಸಿದನು. ಬಿರುದನ್ನು ಹೊಗಳುವ ಪಾಠಕರಿಗೆ ರತ್ನಗಳನ್ನೂ, ಬಂಗಾರವನ್ನೂ ಕೊಟ್ಟು ಉತ್ಸಾಹದಿಂದುಬ್ಬಿ, ಧರ್ಮಜನನ್ನು ಯುದ್ಧಕ್ಕೆ ಕರೆಯಿರಿ ಎಂದಪ್ಪಣೆ ನೀಡಿದನು.

ಅರ್ಥ:
ತರಿಸು: ಬರೆಮಾಡು; ಕಾಂಚನ: ಹೊನ್ನು, ಚಿನ್ನ; ರಥ: ಬಂಡಿ; ಸಂವರಿಸು: ಸಂಗ್ರಹಿಸು; ಟೆಕ್ಕೆ:ಬಾವುಟ, ಧ್ವಜ; ಸರಳ: ಬಾಣ; ತುಂಬು: ಪೂರ್ಣವಾದ; ಬಂಡಿ: ರಥ; ಕೆಲಬಲ: ಅಕ್ಕಪಕ್ಕ; ಜೋಡಿಸು: ಕೂಡಿಸು; ಬಿರುದು: ಗೌರವ ಸೂಚಕ ಪದ; ಒದರು: ಹೊರಹಾಕು, ಹೇಳು; ಪಾಠಕ: ಹೊಗಳುಭಟ್ಟ; ಮೋಹರ: ಯುದ್ಧ; ಮಣಿ: ಬೆಲೆಬಾಳುವ ರತ್ನ; ಮೊಗೆ: ಹೊರಹಾಕು, ಹೊರಹೊಮ್ಮಿಸು; ಅರರೆ: ಅಶ್ಚರ್ಯ ಸೂಚಕ ಪದ; ಕರೆ: ಬರೆಮಾಡು; ಉಬ್ಬು: ಹಿಗ್ಗು, ಗರ್ವಿಸು;

ಪದವಿಂಗಡಣೆ:
ತರಿಸಿ +ಕಾಂಚನಮಯ +ರಥವ+ ಸಂ
ವರಿಸಿದನು +ಟೆಕ್ಕೆಯವನ್+ಎತ್ತಿಸಿ
ಸರಳ+ ತುಂಬಿದ +ಬಂಡಿಗಳ +ಕೆಲಬಲಕೆ +ಜೋಡಿಸಿದ
ಬಿರುದನ್+ಒದರುವ +ಪಾಠಕರ+ ಮೋ
ಹರಕೆ+ ಮಣಿ+ಕಾಂಚನವ +ಮೊಗೆದಿತ್ತ್
ಅರರೆ +ಕರೆಯೋ +ಧರ್ಮಜನನ್+ಎಂದುಬ್ಬಿದನು+ ಶಲ್ಯ

ಅಚ್ಚರಿ:
(೧) ಹೊಗಳುಭಟ್ಟರ ಕೆಲಸವನ್ನು ಹೇಳುವ ಪರಿ – ಬಿರುದನೊದರುವ ಪಾಠಕರ

ಪದ್ಯ ೩೭: ಶಲ್ಯನ ದಾಳಿಯು ಹೇಗಿತ್ತು?

ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ (ದ್ರೋಣ ಪರ್ವ, ೨ ಸಂಧಿ ೩೭ ಪದ್ಯ)

ತಾತ್ಪರ್ಯ:
ಶಲ್ಯನ ದಾಳಿಯಿಂದ ಪಾಂಡವ ಸೇನೆ ಚದುರಿತು. ಕಲ್ಪಾಂತದ ಮೋಡದ ಹೊಲಿಗೆ ಹರಿದು ಬೀಳುವ ಮಳೆಯಂತೆ ಶಲ್ಯನ ಬಾಣಗಳು ಸುರಿದವು. ವೈರಿಸೇನೆಯು ಹೆದರ ಬೇಡಿ ಬದ್ದರದ ಬಂಡಿಗಳನ್ನು ನಡುವೆ ನಿಲ್ಲಿಸಿ, ಗುರಾಣಿಯನ್ನು ಹಿಡಿದವರು, ಪಾಠಕರು ದಳಪತಿಯ ಮುಂದೆ ನಿಲ್ಲಲಿ ಎಂದು ವೈರಿಸೇನೆ ಸಂಭ್ರಮಿಸಿತು.

ಅರ್ಥ:
ದಳಪತಿ: ಸೇನಾಧಿಪತಿ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಬಲ: ಸೈನ್ಯ; ಕೆದರು: ಹರಡು; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಮೇಘ: ಮೋಡ; ಹೊಲಿಗೆ: ಸಂಬಂಧ, ಹೊಂದಾಣಿಕೆ, ಹೊಲಿಯುವಿಕೆ; ಹರಿ: ಚೆದರು; ಶರ: ಬಾಣ; ಜಾಲ: ಗುಂಪು; ಅಳುಕು: ಹೆದರು; ಬದ್ಧರ: ಆತ್ಮರಕ್ಷಣಾರ್ಥವಾಗಿ ಬಳಸುತ್ತಿದ್ದ ಒಂದು ಬಗೆಯ ಉಪಕರಣ; ಬಂಡಿ: ರಥ; ನಿಲಿಸು: ತಡೆ; ಹರಿಗೆ: ತಲೆಪೆರಿಗೆ; ಪಾಠಕ: ಹೊಗಳುಭಟ್ಟ; ಮುಂದಣ: ಮುಂಚೆ; ನೆಲ: ಭೂಮಿ; ಉಬ್ಬು: ಅತಿಶಯ; ಅರಿ: ವೈರಿ;

ಪದವಿಂಗಡಣೆ:
ದಳಪತಿಯ+ ದುವ್ವಾಳಿ +ಪಾಂಡವ
ಬಲವ +ಕೆದರಿತು +ಕಲ್ಪ+ಮೇಘದ
ಹೊಲಿಗೆ +ಹರಿದವೊಲಾಯ್ತು +ಮಾದ್ರೇಶ್ವರನ+ ಶರಜಾಲ
ಅಳುಕದಿರಿ +ಬದ್ದರದ +ಬಂಡಿಯ
ನಿಲಿಸಿ +ಹರಿಗೆಯ +ಪಾಠಕರು +ಕೈ
ಕೊಳಲಿ +ಮುಂದಣ +ನೆಲನನ್+ಎನುತ್+ಉಬ್ಬರಿಸಿತ್+ಅರಿಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪಾಂಡವ ಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು

ಪದ್ಯ ೧೧: ಸೈನ್ಯವು ಹೇಗೆ ಯುದ್ಧಕ್ಕೆ ಬಂತು?

ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ
ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ (ಶಲ್ಯ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅವರ ಸೈನ್ಯವು ಹೋರಾಡಲು ಮುಂದೆ ಬಂತು. ಸೈನ್ಯದ ಮೂಂದೆ ವಂದಿಮಾಗಹರು, ಅವರನ್ನು ಕಾಪಾಡಲು ಹಿಮ್ದೆ ಬಿಲ್ಲಾಳುಗಳು, ಅವರ ಹಿಂದೆ ಸಬಳಗಳನ್ನು ಹಿಡಿದವರು, ಅವರ ಹಿಂದೆ ರಾವುತರು, ಅವರ ಹಿಂದೆ ಆನೆಗಳು ಮಣಿರಥಗಳನ್ನೇರಿದ ರಥಿಕರು ಗುಂಪಾಗಿ ಬಂದರು.

ಅರ್ಥ:
ಮೋಹರ: ಯುದ್ಧ; ಬಲ: ಶಕ್ತಿ; ಔಘ: ಗುಂಪು, ಸಮೂಹ; ಮುಂದೆ: ಎದುರು; ಪಾಠಕ: ಭಟ್ಟಂಗಿ, ಹೊಗಳುಭಟ್ಟ; ಕಾಹು: ಸಂರಕ್ಷಣೆ; ಬಿಲ್ಲಾಳ: ಬಿಲ್ಲುಗಾರ; ಸುಯ್ದಾನ: ರಕ್ಷಣೆ, ಕಾಪು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಹಿಂದೆ: ಹಿಂಭಾಗ; ತುರಗ: ಅಶ್ವ; ಸಮೂಹ: ಗುಂಪು; ಗಜಘಟೆ: ಆನೆಗಳ ಗುಂಪು; ಗಜ: ಆನೆ; ಬಳಿ: ಹತ್ತಿರ; ಸಂದಣೆ: ಗುಂಪು; ರಾಯ: ರಾಜ; ದಳ: ಸೈನ್ಯ; ಮಣಿರಥ: ರತ್ನದಿಂದ ಕೂಡಿದ ಬಂಡಿ; ನಿಕಾಯ: ಗುಂಪು;

ಪದವಿಂಗಡಣೆ:
ಬಂದುದ್+ಆ+ ಮೋಹರ +ಬಲೌಘದ
ಮುಂದೆ +ಪಾಠಕರ್+ಅವರ+ ಕಾಹಿಗೆ
ಹಿಂದೆ +ಬಿಲ್ಲಾಳ್+ಅವರ+ ಸುಯ್ದಾನದಲಿ +ಸಬಳಿಗರು
ಹಿಂದೆ +ತುರಗ +ಸಮೂಹವ್+ಅಲ್ಲಿಂ
ಹಿಂದೆ+ ಗಜಘಟೆ+ ಗಜದ +ಬಳಿಯಲಿ
ಸಂದಣಿಸಿದುದು +ರಾಯದಳ+ ಮಣಿರಥ +ನಿಕಾಯದಲಿ

ಅಚ್ಚರಿ:
(೧) ಔಘ, ನಿಕಾಯ, ಸಮೂಹ, ಘಟೆ, ಸಂದಣೆ – ಸಮಾನಾರ್ಥಕ ಪದ
(೨) ಪಾಠಕ, ಬಿಲ್ಲಾಳು, ಸಬಳಿಗ, ತುರಗ ಸಮೂಹ, ಗಜಘಟೆ, ರಾಯದಳ – ಸೈನ್ಯದಲ್ಲಿದ್ದ ಗುಂಪುಗಳು
(೩) ಹಿಂದೆ, ಮುಂದೆ – ವಿರುದ್ಧ ಪದ

ಪದ್ಯ ೪೨: ಕೌರವನು ಯಾರ ಬಳಿ ತೆರಳಿ ಬಿನ್ನಹ ಮಾಡಿದನು?

ತಳಿತುದರನೆಲೆ ರಾಯ ಥಟ್ಟಿನ
ಕಳವಳಿಗರುರವಣಿಸಿದರು ಮುರಿ
ದೊಳಸರಿವ ಮನ್ನೆಯರ ಹೊಯ್ದರು ಮುಂದೆ ಕಂಬಿಯಲಿ
ಉಲಿವ ಪಾಠಕರೋದುಗಳ ಕಳ
ಕಳಿಕೆಯಲಿ ನೃಪ ಬಂದು ಗುರುವಿನ
ದಳವ ಹೊಕ್ಕನು ನಮಿಸಿ ಬಿನ್ನಹಮಾಡಿದನು ನಗುತ (ದ್ರೋಣ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ದೊರೆಯ ಬೀಡಿನಲ್ಲಿ ಅಬ್ಬರವಾಯಿತು ಸೈನ್ಯದ ನಾಯಕರು ಮುನ್ನುಗ್ಗಿ ಹಿಮ್ಮೆಟ್ಟುತ್ತಿದ್ದ ಪಾಳೆಯಗಾರರನ್ನು ಅಡ್ಡಗಟ್ಟಿ ಕಂಬಿಯಿಂದ ಹೊಡೆದು ನಿಲ್ಲಿಸಿದರು. ಇತ್ತ ಕೌರವನು ಹೊಗಳುಭಟ್ಟರ ಗಲಬಿಲಿಯ ನಡುವೆ ದ್ರೋಣನ ಸೈನ್ಯವನ್ನು ಹೊಕ್ಕು ಗುರುವಿಗೆ ನಮಸ್ಕರಿಸಿ ಬಿನ್ನಹ ಮಾಡಿಕೊಂಡನು.

ಅರ್ಥ:
ತಳಿತ: ಚಿಗುರಿದ; ನೆಲೆ: ಭೂಮಿ; ರಾಯ: ರಾಜ; ಥಟ್ಟು: ಗುಂಪು; ಕಳವಳ: ಗೊಂದಲ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಮುರಿ: ಸೀಳು; ಮನ್ನೆಯ: ಮೆಚ್ಚಿನ; ಹೊಯ್ದು: ಹೊಡೆದು; ಕಂಬಿ: ಲೋಹದ ತಂತಿ; ಉಲಿ: ಶಬ್ದ; ಪಾಠಕ: ಓದುವವನು, ವಾಚಕ; ಓದು: ಹೇಳು, ಹಾಡು; ಕಳಕಳ: ಗೊಂದಲ; ನೃಪ: ರಾಜ; ಗುರು: ಆಚಾರ್ಯ; ದಳ: ಸೈನ್ಯ; ಹೊಕ್ಕು: ಸೇರು; ನಮಿಸು: ನಮಸ್ಕರಿಸು; ಬಿನ್ನಹ: ಕೋರಿಕೆ; ನಗು: ಸಂತಸ;

ಪದವಿಂಗಡಣೆ:
ತಳಿತುದರ+ನೆಲೆ +ರಾಯ +ಥಟ್ಟಿನ
ಕಳವಳಿಗರ್+ಉರವಣಿಸಿದರು +ಮುರಿದ್
ಒಳಸರಿವ +ಮನ್ನೆಯರ +ಹೊಯ್ದರು +ಮುಂದೆ +ಕಂಬಿಯಲಿ
ಉಲಿವ+ ಪಾಠಕರ್+ಓದುಗಳ +ಕಳ
ಕಳಿಕೆಯಲಿ +ನೃಪ +ಬಂದು +ಗುರುವಿನ
ದಳವ +ಹೊಕ್ಕನು +ನಮಿಸಿ +ಬಿನ್ನಹ+ಮಾಡಿದನು +ನಗುತ

ಅಚ್ಚರಿ:
(೧) ಕಳವಳ, ಕಳಕಳಿ – ಪದಗಳ ಬಳಕೆ

ಪದ್ಯ ೧೧: ಕೌರವರು ಹೇಗೆ ತಮ್ಮ ಪಾಳೆಯವನ್ನು ಸೇರಿದರು?

ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೊರೆಯ ಮಹೀಪತಿ ಹೊಕ್ಕನರಮನೆಯ (ದ್ರೋಣ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಾಣದ ಪಲ್ಲಂಗದಲ್ಲಿ ಮಲಗಿದ ಭೀಷ್ಮನನ್ನು ಬೀಳ್ಕೊಂಡು ಪಾಂಡವರು ತಮ್ಮ ಪಾಳಯಕ್ಕೆ ಹೋದರು, ಇತ್ತ ಕೌರವರೂ ತಮ್ಮ ಪಾಳೆಯಕ್ಕೆ ಬಂದರು. ಅವರು ಬರುವಾಗ ಯಾವ ವಾದ್ಯಗಳೂ ಮೊಳಗಲಿಲ್ಲ. ಪಾಠಕರು ಬಿರುದುಗಳನ್ನು ಹೊಗಳಲಿಲ್ಲ.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಮಲಗು: ಶಯನ; ಮುತ್ತಯ್ಯ: ತಾತ; ಬೀಳ್ಕೊಂಡು: ತೆರಳು; ಸರಿದರು: ಬಂದರು; ನಂದನ: ಮಕ್ಕಳು; ತಿರುಗು: ಸುತ್ತು; ಹೊತ್ತ: ಧರಿಸು; ಮೋನ: ಮಾತನಾಡದಿರುವಿಕೆ, ಮೌನ; ವಿವಿಧ: ಹಲವಾರು; ವಾದ್ಯ: ಸಂಗೀತದ ಸಾಧನ; ಕೆತ್ತು: ಅದಿರು, ನಡುಗು; ಪಾಠಕ: ಹೊಗಳುಭಟ್ಟ; ಹತ್ತುಗೆ: ಸೇರಿಕೊಂಡಿರುವಿಕೆ; ಮೋರೆ: ಮುಖ; ಮಹೀಪತಿ: ರಾಜ; ಹೊಕ್ಕು: ಸೇರು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಚಿತ್ತವಿಸು +ಧೃತರಾಷ್ಟ್ರ +ಮಲಗಿದ
ಮುತ್ತಯನ +ಬೀಳ್ಕೊಂಡು +ಕೌರವರ್
ಇತ್ತ+ ಸರಿದರು+ ಪಾಂಡುನಂದನರ್+ಅತ್ತ +ತಿರುಗಿದರು
ಹೊತ್ತ +ಮೋನದ +ವಿವಿಧ +ವಾದ್ಯದ
ಕೆತ್ತ +ಬಾಯ್ಗಳ +ಪಾಠಕರ +ಕೈ
ಹತ್ತುಗೆಯ +ಮೊರೆಯ +ಮಹೀಪತಿ+ ಹೊಕ್ಕನ್+ಅರಮನೆಯ

ಅಚ್ಚರಿ:
(೧) ಇತ್ತ ಅತ್ತ – ಪ್ರಾಸ ಪದಗಳು
(೨) ನೀರವತೆಯನ್ನು ವಿವರಿಸುವ ಪರಿ – ಹೊತ್ತ ಮೋನದ ವಿವಿಧ ವಾದ್ಯದಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೊರೆಯ

ಪದ್ಯ ೫೦: ಭೀಷ್ಮನನ್ನು ಪಾಠಕರು ಹೇಗೆ ಹೊಗಳಿದರು?

ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರುಸಾರೆನುತೆ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ (ವಿರಾಟ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಭೀಷ್ಮನ ಸುತ್ತಲಿದ್ದ ಮಹಾರಥರು ಅರ್ಜುನನಿಗೆ, ರಾಜ ಪಿತಾಮಹರಾದ ಭೀಷ್ಮನ ಕೋಪವು ಅತಿಶಯವಾದುದು, ನಿನ್ನನ್ನು ರಕ್ಷಿಸಲು ಹರಿಹರ್ರನ್ನೇ ಕರೆಸು, ನೀನಿನ್ನೂ ಕೂಸು, ಭೀಷ್ಮ ನನ್ನೆದುರಿಸಲು ನಿನ್ನಿಂದಾಗುವುದಿಲ್ಲ. ದೂರ ಹೋಗು ಎಂದು ಕೂಗುತ್ತಿದ್ದರು, ಕಹಳೆಗಳು ಮೊಳಗಿದವು, ಭೀಷ್ಮನ ಬಿರುದುಗಳನ್ನು ಪಾಠಕರು ಉಗ್ಗಡಿಸುತ್ತಿದ್ದರು.

ಅರ್ಥ:
ತೊಲಗು: ಹೊರಡು; ರಾಯ: ರಾಜ; ಪಿತಾಮಹ: ತಾತ; ಖತಿ: ಕೋಪ; ಬಲುಹು: ಹೆಚ್ಚು; ತೆತ್ತಿಗ: ಹೊಣೆಗಾರ, ರಕ್ಷಕ; ರುದ್ರ: ಶಿವನ ಅವತಾರ; ನಳಿನನಾಭ: ವಿಷ್ಣು; ಕರೆಸು: ಬರೆಮಾಡು; ಶಿಶು: ಮಗು; ಸಾರು: ಪ್ರಕಟಿಸು; ಉಲಿ: ಶಬ್ದ; ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ಕಳಕಳ: ವ್ಯಥೆ, ಉದ್ವಿಗ್ನತೆ; ಕಹಳೆ: ತುತ್ತೂರಿ; ಪಾಠಕ: ಹೊಗಳುಭಟ್ಟ; ಗಾವಳಿ: ಘೋಷಣೆ; ಬಿರುದು: ಹೊಗಳುವ ಮಾತು; ಬಹಳ:ತುಂಬ; ಐತಂದು: ಬರೆಮಾಡು;

ಪದವಿಂಗಡಣೆ:
ತೊಲಗು+ ರಾಯ +ಪಿತಾಮಹನ+ ಖತಿ
ಬಲುಹು +ತೆತ್ತಿಗರಹರೆ +ರುದ್ರನ
ನಳಿನನಾಭನ+ ಕರೆಸು +ನೀ +ಶಿಶು+ ಸಾರುಸಾರೆನುತೆ
ಉಲಿವ +ಬಳಿಯ +ಮಹಾರಥರ +ಕಳ
ಕಳದ +ಕಹಳೆಯ +ಪಾಠಕರ+ ಗಾ
ವಳಿಯ +ಬಿರುದಿನ+ ಬಹಳತೆಯಲ್+ಐತಂದನಾ +ಭೀಷ್ಮ

ಅಚ್ಚರಿ:
(೧) ಭೀಷ್ಮನನ್ನು ಹೊಗಳುವ ಪರಿ – ರಾಯಪಿತಾಮಹನ ಖತಿಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರುಸಾರೆನುತೆ

ಪದ್ಯ ೨೦: ಮಲ್ಲರು ಯಾರ ಆಸ್ಥಾನವನ್ನು ಪ್ರವೇಶಿಸಿದರು?

ಪರಿಪರಿಯ ಶೃಂಗಾರದಲಿ ಮ
ಲ್ಲರುಗಳೇಳಲು ಮುಂದೆ ನಾದಿಪ
ಬಿರುದು ಜಾಗಟೆ ಡೌಡೆ ಪಾಠಕನಿಕರದೊಗ್ಗಿನಲಿ
ಪುರವ ಹೊಕ್ಕರು ರಾಜಸಭೆಗೊಡ
ನಿರದೆ ನಡೆಯಲು ಮತ್ಸ್ಯಭೂಪತಿ
ಸಿರಿಯೊಳೋಲಗವಿತ್ತು ಕುಳ್ಳಿರ್ದನು ಸರಾಗದಲಿ (ವಿರಾಟ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಲ್ಲರೆಲ್ಲರೂ ಶೃಂಗಾರ ಮಾಡಿಕೊಂಡು ಸ್ತುತಿಪಾಠಕರು, ಜಾಗಟೆ, ನಗಾರಿ ವಾದ್ಯಗಳೊಡನೆ ಊರನ್ನು ಪ್ರವೇಶಿಸಿ ರಾಜ ಸಭೆಗೆ ಬಂದರು. ಅಲ್ಲಿ ವಿರಾಟರಾಜನು ಐಶ್ವರ್ಯಭರಿತನಾಗಿ ಓಲಗದಲ್ಲಿ ಸಂತೋಷದಿ ಆಸೀನನಾಗಿದ್ದನು.

ಅರ್ಥ:
ಪರಿಪರಿ: ಹಲವಾರು; ಶೃಂಗಾರ: ಅಲಂಕಾರ; ಮಲ್ಲ: ಜಟ್ಟಿ; ಏಳು: ಮೇಲೆ ಬಂದು; ನಾದು: ತೋಯಿಸು, ಲೇಪಿಸು; ಬಿರುದು: ಗೌರವಸೂಚಕ ಹೆಸರು; ಜಾಗಟೆ: ಒಂದು ಚರ್ಮವಾದ್ಯ; ಡೌಡೆ: ನಗಾರೈ; ಪಾಠಕ: ಸ್ತುತಿಮಾಡುವವ, ವಂದಿಮಾಗದ; ನಿಕರ: ಗುಂಪು; ಒಗ್ಗು: ಜೊತೆ; ಪುರ: ಊರು; ಹೊಕ್ಕು: ಸೇರು; ರಾಜಸಭೆ: ದರ್ಬಾರು; ನಡೆ: ಚಲಿಸು; ಭೂಪತಿ: ರಾಜ; ಸಿರಿ: ಐಶ್ವರ್ಯ; ಓಲಗ: ದರ್ಬಾರು; ಕುಳ್ಳಿರ್ದ: ಆಸೀನನಾಗು; ಸರಾಗ: ಪ್ರೀತಿ;

ಪದವಿಂಗಡಣೆ:
ಪರಿಪರಿಯ +ಶೃಂಗಾರದಲಿ+ ಮ
ಲ್ಲರುಗಳ್+ಏಳಲು +ಮುಂದೆ +ನಾದಿಪ
ಬಿರುದು+ ಜಾಗಟೆ +ಡೌಡೆ +ಪಾಠಕ+ನಿಕರದ್+ಒಗ್ಗಿನಲಿ
ಪುರವ+ ಹೊಕ್ಕರು +ರಾಜಸಭೆಗೊಡ
ನಿರದೆ +ನಡೆಯಲು +ಮತ್ಸ್ಯ+ಭೂಪತಿ
ಸಿರಿಯೊಳ್+ಒಲಗವಿತ್ತು+ ಕುಳ್ಳಿರ್ದನು +ಸರಾಗದಲಿ

ಅಚ್ಚರಿ:
(೧) ಜಾಗಟೆ, ಡೌಡೆ – ವಾದ್ಯಗಳ ಹೆಸರು;

ಪದ್ಯ ೩೨: ಘೋಷಯಾತ್ರೆಗೆ ಯಾರು ಹೊರಟರು?

ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ (ಅರಣ್ಯ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ವಂದಿಮಾಗಧರು, ಕವಿಗಳು, ವಿದ್ವಾಂಸರು, ಆನೆ ಕುದುರೆಗಳ ಆಹಾರವನ್ನು ಸಿದ್ಧಪದಿಸುವವರು, ನರ್ತಕರು, ಕಥೆಗಾರರು, ವಿದೂಷಕರು, ಸ್ತುತಿಪಾಥಕರು, ಆಳುಗಳು, ಜಟ್ಟಿಗಳು, ಬೇಟೆಗಾರರು, ಮೊದಲಾದ ಪರಿಜನರೊಡನೆ ದುರ್ಯೋಧನನು ಪಯಣದ ಮೇಲೆ ಪಯಣ ಮಾಡುತ್ತಾ ಬಂದನು.

ಅರ್ಥ:
ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ಅಗಣಿತ: ಅಸಂಖ್ಯಾತ; ವಂದಿ: ಹೊಗಳುಭಟ್ಟ; ಕವಿ: ಕಬ್ಬಿಗ, ಕಾವ್ಯವನ್ನು ರಚಿಸುವವನು; ವಿದ್ವಾಂಸ: ಜ್ಞಾನಿ, ಪಂಡಿತ; ವಿಧಾವಂತ: ಧಾರ್ಮಿಕ ರೀತಿಗಳನ್ನು ಬಲ್ಲವ; ನರ್ತಕ: ನೃತ್ಯಮಾಡುವವ; ಕಥಕ: ಕತೆಗಾರ; ಪರಿಹಾಸ: ವಿನೋದ, ಸರಸ; ಪಾಠಕ: ಸ್ತುತಿ ಪಾಠಕ; ಭಟ್ಟಂಗಿ, ಹೊಗಳುಭಟ್ಟ; ಚರ: ದೂತ; ಮಲ್ಲ: ಕುಸ್ತಿಪಟು, ಜಟ್ಟಿ; ಬೇಂಟೆಗಾರ: ಶಬರ, ಬೇಡ, ಕಿರಾತ; ಪರಿಜನ: ಸುತ್ತಲಿನ ಜನ, ಪರಿವಾರ; ಆವಳಿ: ಗುಂಪು; ಸಹಿತ: ಜೊತೆ; ನಗರ: ಊರು; ಪಯಣ: ಪ್ರಯಾಣ; ಐತಂದ: ಬಂದು ಸೇರು;

ಪದವಿಂಗಡಣೆ:
ನೆರೆದುದ್+ಅಗಣಿತ +ವಂದಿಗಳು +ಕವಿ
ವರರು +ವಿದ್ವಾಂಸರು +ವಿಧಾವಂ
ತರು +ಸುನರ್ತಕ +ಕಥಕ +ಪರಿಹಾಸಕರು +ಪಾಠಕರು
ಚರರು +ಮಲ್ಲರು +ಬೇಂಟೆಗಾರರು
ಪರಿಜನಾವಳಿ +ಸಹಿತ +ನಗರಾಂ
ತರದ +ಪಯಣದ +ಮೇಲೆ +ಪಯಣದಲ್+ಅರಸನ್+ಐತಂದ

ಅಚ್ಚರಿ:
(೧) ವಂದಿ, ವಿದ್ವಾಂಸ, ವಿಧಾವಂತ – ವ ಕಾರದ ಪದಗಳ ಬಳಕೆ