ಪದ್ಯ ೩೨: ಘೋಷಯಾತ್ರೆಗೆ ಯಾರು ಹೊರಟರು?

ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ (ಅರಣ್ಯ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ವಂದಿಮಾಗಧರು, ಕವಿಗಳು, ವಿದ್ವಾಂಸರು, ಆನೆ ಕುದುರೆಗಳ ಆಹಾರವನ್ನು ಸಿದ್ಧಪದಿಸುವವರು, ನರ್ತಕರು, ಕಥೆಗಾರರು, ವಿದೂಷಕರು, ಸ್ತುತಿಪಾಥಕರು, ಆಳುಗಳು, ಜಟ್ಟಿಗಳು, ಬೇಟೆಗಾರರು, ಮೊದಲಾದ ಪರಿಜನರೊಡನೆ ದುರ್ಯೋಧನನು ಪಯಣದ ಮೇಲೆ ಪಯಣ ಮಾಡುತ್ತಾ ಬಂದನು.

ಅರ್ಥ:
ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ಅಗಣಿತ: ಅಸಂಖ್ಯಾತ; ವಂದಿ: ಹೊಗಳುಭಟ್ಟ; ಕವಿ: ಕಬ್ಬಿಗ, ಕಾವ್ಯವನ್ನು ರಚಿಸುವವನು; ವಿದ್ವಾಂಸ: ಜ್ಞಾನಿ, ಪಂಡಿತ; ವಿಧಾವಂತ: ಧಾರ್ಮಿಕ ರೀತಿಗಳನ್ನು ಬಲ್ಲವ; ನರ್ತಕ: ನೃತ್ಯಮಾಡುವವ; ಕಥಕ: ಕತೆಗಾರ; ಪರಿಹಾಸ: ವಿನೋದ, ಸರಸ; ಪಾಠಕ: ಸ್ತುತಿ ಪಾಠಕ; ಭಟ್ಟಂಗಿ, ಹೊಗಳುಭಟ್ಟ; ಚರ: ದೂತ; ಮಲ್ಲ: ಕುಸ್ತಿಪಟು, ಜಟ್ಟಿ; ಬೇಂಟೆಗಾರ: ಶಬರ, ಬೇಡ, ಕಿರಾತ; ಪರಿಜನ: ಸುತ್ತಲಿನ ಜನ, ಪರಿವಾರ; ಆವಳಿ: ಗುಂಪು; ಸಹಿತ: ಜೊತೆ; ನಗರ: ಊರು; ಪಯಣ: ಪ್ರಯಾಣ; ಐತಂದ: ಬಂದು ಸೇರು;

ಪದವಿಂಗಡಣೆ:
ನೆರೆದುದ್+ಅಗಣಿತ +ವಂದಿಗಳು +ಕವಿ
ವರರು +ವಿದ್ವಾಂಸರು +ವಿಧಾವಂ
ತರು +ಸುನರ್ತಕ +ಕಥಕ +ಪರಿಹಾಸಕರು +ಪಾಠಕರು
ಚರರು +ಮಲ್ಲರು +ಬೇಂಟೆಗಾರರು
ಪರಿಜನಾವಳಿ +ಸಹಿತ +ನಗರಾಂ
ತರದ +ಪಯಣದ +ಮೇಲೆ +ಪಯಣದಲ್+ಅರಸನ್+ಐತಂದ

ಅಚ್ಚರಿ:
(೧) ವಂದಿ, ವಿದ್ವಾಂಸ, ವಿಧಾವಂತ – ವ ಕಾರದ ಪದಗಳ ಬಳಕೆ

ಪದ್ಯ ೪೫: ವಿದ್ವಾಂಸನ ಲಕ್ಷಣವೇನು?

ಒರ್ವನಹನೈ ಶೂರನೂರ
ಕ್ಕೊರ್ವನಹ ಸಾವಿರಕೆ ಪಂಡಿತ
ನೊರನಹನೈ ವಕ್ತ ಶತಸಾವಿರಕೆ ಲೋಕದೊಳು
ಒರ್ವದಾನಿಯ ಕಾಣೆನೈ ತಾ
ನೊರ್ವರೊರ್ವರಿಗೊಂದೆ ಗುಣವದು
ಸರ್ವಗುಣಸಂಪನ್ನರೈ ವಿದ್ವಾಂಸರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಜಗತ್ತಿನಲ್ಲಿ ನೂರಕ್ಕೆ ಒಬ್ಬ ಶೂರನಿರುತ್ತಾನೆ, ಸಾವಿರ ಜನರಲ್ಲಿ ಒಬ್ಬ ಪಂಡಿತನಿರುತ್ತಾನೆ, ಒಳ್ಳೆಯ ಮಾತುಗಾರನು ಲಕ್ಷಕ್ಕೆ ಒಬ್ಬನಿರುತ್ತಾನೆ, ಆದರೆ ಒಬ್ಬ ದಾನಿಯನ್ನು ನಾನು ಕಾಣೆ. ಒಬ್ಬೊಬ್ಬರಿಗೆ ಒಂದೇ ಗುಣವಿರುತ್ತದೆ ಆದರೆ ಎಲ್ಲಾ ಗುಣಗಳ ಸಂಪನ್ನನೇ ವಿದ್ವಾಂಸನೆಂದು ಕರೆಸಿಕೊಳ್ಳುತ್ತಾನೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಒರ್ವ: ಒಬ್ಬನೆ; ಶೂರ: ಧೀರ; ನೂರು: ಶತ; ಸಾವಿರ: ಸಹಸ್ರ; ಪಂಡಿತ: ಕೋವಿದ; ವಕ್ತ: ವಕ್ತಾರ; ಶತಸಾವಿರ: ಲಕ್ಷ; ಲೋಕ: ಜಗತ್ತು; ದಾನಿ: ದಾನ ಮಾಡುವವನು; ಕಾಣೆ: ನೋಡಲು ಸಿಗದು; ಗುಣ: ನಡತೆ, ಸ್ವಭಾವ; ಸರ್ವ: ಎಲ್ಲಾ; ಸಂಪನ್ನ: ಸಜ್ಜನ, ಸತ್ಪುರುಷ, ಹೊಂದಿದವನು; ವಿದ್ವಾಂಸ: ಜ್ಞಾನಿ, ಪಂಡಿತ;

ಪದವಿಂಗಡಣೆ:
ಒರ್ವನಹನೈ +ಶೂರ+ ನೂರಕ್
ಒರ್ವನಹ +ಸಾವಿರಕೆ+ ಪಂಡಿತನ್
ಒರನಹನೈ+ ವಕ್ತ +ಶತಸಾವಿರಕೆ+ ಲೋಕದೊಳು
ಒರ್ವದಾನಿಯ +ಕಾಣೆನೈ +ತಾನ್
ಒರ್ವರ್+ಒರ್ವರಿಗ್+ಒಂದೆ +ಗುಣವದು
ಸರ್ವಗುಣ+ಸಂಪನ್ನರೈ +ವಿದ್ವಾಂಸರುಗಳೆಂದ

ಅಚ್ಚರಿ:
(೧) ಒರ್ವ – ೧-೫ ಸಾಲಿನ ಮೊದಲ ಪದ
(೨) ನೂರು, ಸಾವಿರ, ಶತಸಾವಿರ – ಸಂಖ್ಯೆಗಳ ಬಳಕೆ
(೩) ಶೂರ, ಪಂಡಿತ, ವಕ್ತಾರ, ದಾನಿ, ವಿದ್ವಾಂಸ ರ ಬಗ್ಗೆ ತಿಳಿಸುವ ಪದ್ಯ

ಪದ್ಯ ೪೪: ವಿದ್ವಾಂಸರ ಮಹತ್ವವೇನು?

ತನ್ನ ಮನೆಯೊಳು ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕನೈ ಗ್ರಾಮದೊಳು ಧನಿ ಪೂಜ್ಯ
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯರೆನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಮೂರ್ಖನಾಗಿದ್ದರೂ ಮನೆಯಲ್ಲಿ ಪೂಜಿಸಲ್ಪಡುತ್ತಾನೆ, ರಾಜನು ತನ್ನ ದೇಶದಲ್ಲಿ ಪ್ರಮುಖ, ಗ್ರಾಮದಲ್ಲಿ ಹಣವಂತನೇ ಶ್ರೇಷ್ಠ, ಆದರೆ ವಿದ್ವಾಂಸನು ವಿಶ್ವದಲ್ಲಿ ಎಲ್ಲಿ ಹೋದರೂ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ವಿದ್ವಾಂಸರ ಮಹತ್ವವನ್ನು ಸನತ್ಸುಜಾತರು ತಿಳಿಸಿದರು.

ಅರ್ಥ:
ತನ್ನ: ಅವನ; ಮನೆ: ಆಲಯ, ಗೃಹ; ಮೂರ್ಖ: ಮೂಢ; ಸಂಪನ್ನ: ಶ್ರೇಷ್ಠವಾದ, ಅರ್ಹವಾದ; ಪೂಜ್ಯ: ಗೌರವಾನ್ವಿತ; ಭೂಮಿ: ಇಳೆ; ಭೂಮಿಪಾಲನು: ರಾಜ; ದೇಶ: ರಾಷ್ಟ್ರ; ಅಧಿಕ: ಹೆಚ್ಚು; ಗ್ರಾಮ: ಹಳ್ಳಿ, ಊರು; ಧನಿ: ಧನಿಕ, ಸಾಹುಕಾರ; ಭಿನ್ನ: ಚೂರು, ತುಂಡು, ವ್ಯತ್ಯಾಸ, ಭೇದ; ಠಾವು: ಎಡೆ, ಸ್ಥಳ, ತಾಣ; ಅನ್ಯರು: ಬೇರೆ; ವಿಶ್ವ: ಜಗತ್ತು; ಪಾತ್ರರು: ಭಾಗಿಯಾಗಿರುವಿಕೆ, ಸಕ್ರಿಯವಾಗಿರುವಿಕೆ; ವಿದ್ವಾಂಸ: ಕೋವಿದ;

ಪದವಿಂಗಡಣೆ:
ತನ್ನ +ಮನೆಯೊಳು +ಮೂರ್ಖನ್+ಅತಿ +ಸಂ
ಪನ್ನ +ಪೂಜ್ಯನು +ಭೂಮಿಪಾಲನು
ತನ್ನ +ದೇಶದೊಳ್+ಅಧಿಕನೈ +ಗ್ರಾಮದೊಳು +ಧನಿ +ಪೂಜ್ಯ
ಭಿನ್ನವಿಲ್ಲದೆ +ಹೋದ +ಠಾವಿನೊಳ್
ಅನ್ಯರ್+ಎನಿಸದೆ+ ವಿಶ್ವದೊಳು +ಸಂ
ಪನ್ನ +ಪೂಜಾಪಾತ್ರರೈ +ವಿದ್ವಾಂಸರುಗಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತನ್ನ ಮನೆಯೊಳು ಮೂರ್ಖನತಿ ಸಂಪನ್ನ ಪೂಜ್ಯನು; ಭೂಮಿಪಾಲನು ತನ್ನ ದೇಶದೊಳಧಿಕನೈ; ಗ್ರಾಮದೊಳು ಧನಿ ಪೂಜ್ಯ;
(೨) ತನ್ನ, ಸಂಪನ್ನ, ಭಿನ್ನ – ಪ್ರಾಸ ಪದ
(೩) ಸಂಪನ್ನ – ೧, ೫ ಸಾಲಿನ ಕೊನೆಯ ಪದ