ಪದ್ಯ ೬೮: ಅರ್ಜುನನು ಉತ್ತರನಿಗೆ ಯಾವ ಅಭಯವನ್ನು ನೀಡಿದನು?

ಖೇಡನಾಗದಿರದ್ಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತೆ ಸಂತೈಸಿ
ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ (ವಿರಾಟ ಪರ್ವ, ೭ ಸಂಧಿ, ೬೮ ಪದ್ಯ)

ತಾತ್ಪರ್ಯ:
ಉತ್ತರನ ಭಯವನ್ನು ಕಂಡ ಅರ್ಜುನನು, ಎಲೈ ಉತ್ತರ ಹೆದರಬೇಡ, ನಾನು ಮಹಾ ಧ್ವನಿಯನ್ನು ಮಾಡುವುದಿಲ್ಲ, ಧೈರ್ಯ ತಂದುಕೊಂಡು ಈ ರಥವನ್ನು ನಡೆಸೆಂದು ಹೇಳಿ, ಅರ್ಜುನನು ಬತ್ತಳಿಕೆಯಿಂದ ಬಾಣವನ್ನು ತೆಗೆದು ಬಿಲ್ಲಿಗೆ ಹೂಡಿದನು. ಈ ಯುದ್ಧವನ್ನು ನೋಡಲು ದೇವತೆಗಳು ಆಕಾಶದಲ್ಲಿ ಸೇರಿದರು.

ಅರ್ಥ:
ಖೇಡ: ಭಯಗ್ರಸ್ತ; ಅದ್ಭುತ: ಅತ್ಯಾಶ್ಚರ್ಯಕರವಾದ ವಸ್ತು; ಧ್ವನಿ: ಶಬ್ದ; ಮಾಡೆ: ಮಾಡುವುದಿಲ್ಲ; ಅಂಜು: ಹೆದರು; ಧೃತಿ: ಧೈರ್ಯ, ಧೀರತನ; ರಥ: ಬಂಡಿ; ಜೋಡಿಸು: ಕೂಡಿಸು; ಸಂತೈಸು: ಸಾಂತ್ವನಗೊಳಿಸು; ಮೂಡಿಗೆ:ಬತ್ತಳಿಕೆ; ಅಂಬು: ಬಾಣ; ತಿರುವು: ತಿರುಗು, ಬಾಗು; ಹೂಡು: ನೊಗಹೇರು; ಕದನ: ಯುದ್ಧ; ನೋಡು: ವೀಕ್ಷಿಸು; ಅಮರ: ದೇವತೆ; ಶ್ರೇಣಿ: ಗುಂಪು; ಮೇಳೈಸು: ಸೇರು, ಜೊತೆಯಾಗು; ಗಗನ: ಆಗಸ;

ಪದವಿಂಗಡಣೆ:
ಖೇಡನಾಗದಿರ್+ಅದ್ಭುತ +ಧ್ವನಿ
ಮಾಡೆನ್+ಅಂಜದಿರ್+ಅಂಜದಿರು+ ಧೃತಿ
ಮಾಡಿಕೊಂಡ್+ಈ+ ರಥವ+ ಜೋಡಿಸ್+ಎನುತ್ತೆ+ ಸಂತೈಸಿ
ಮೂಡಿಗೆಯೊಳ್+ಅಂಬುಗಿದು+ ತಿರುವಿಗೆ
ಹೂಡಿದನು +ಫಲುಗುಣನ+ ಕದನವ
ನೋಡಲ್+ಅಮರಶ್ರೇಣಿ +ಮೇಳೈಸಿತ್ತು +ಗಗನದಲಿ

ಅಚ್ಚರಿ:
(೧) ಅಭಯವನ್ನು ನೀಡುವ ಪರಿ – ಖೇಡನಾಗದಿರದ್ಭುತ ಧ್ವನಿಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತೆ ಸಂತೈಸಿ

ಪದ್ಯ ೬೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಏನು ಮತ್ಸ್ಯಕುಮಾರ ಬವಣಿಯಿ
ದೇನು ನಿನಗೆಂದೆನಲು ಜಗದವ
ಸಾನದಂದದ ಸಿಡಿಲು ಸುಳಿಯಲು ಬೆಂದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನಕಳುಹು ಮ
ಹಾನಿಧಾನವ ಮಾಣುಮಾಣೆನೆ ಪಾರ್ಥನಿಂತೆಂದ (ವಿರಾಟ ಪರ್ವ, ೭ ಸಂಧಿ, ೬೭ ಪದ್ಯ)

ತಾತ್ಪರ್ಯ:
ಏನು ಉತ್ತರ, ನಿನ್ನ ಬವಣೆ ಇದೇನೆಂದು ಅರ್ಜುನ ಕೇಳಲು, ಎಲೈ ಅರ್ಜುನ ಪ್ರಳಯ ಕಾಲದ ಸಿಡಿಲು ಹೊಡೆದು ನನ್ನ ಮೈ ಸುಟ್ಟು ಹೋಯಿತು. ನಿನ್ನ ಈ ಮಹಾ ಶಬ್ದವನ್ನು ನಾನು ತಡೆಯಲಾರೆ, ನಿನ್ನ ಈ ರೀತಿಯನ್ನು ಬಿಟ್ಟು ನನ್ನನ್ನು ಊರಿಗೆ ಕಳುಹಿಸು ಎಂದು ಹೇಳಲು ಅರ್ಜುನನು ಈ ರೀತಿ ಉತ್ತರಿಸಿದನು.

ಅರ್ಥ:
ಬವಣೆ: ದಿಗ್ಭ್ರಮೆ, ತೊಂದರೆ; ಜಗ: ಜಗತ್ತು; ಅವಸಾನ: ಅಳಿವು, ನಾಶ; ಸಿಡಿಲು: ಅಶನಿ; ಸುಳಿ: ಬೀಸು; ಬೆಂದು: ಸುಡು, ದಹಿಸು; ಒಡಲು: ದೇಹ; ಬಹಳ: ತುಂಬ; ಅಧ್ವಾನ: ಅಸ್ತವ್ಯಸ್ತತೆ, ಹದಗೆಟ್ಟ ಸ್ಥಿತಿ; ಸಾಕು: ನಿಲ್ಲಿಸು; ಕಳುಹು: ಕಳಿಸು,ಹಿಂದಿರುಗು; ಮಾಣು: ನಿಲ್ಲಿಸು; ಆನು: ಎದುರಿಸು;

ಪದವಿಂಗಡಣೆ:
ಏನು+ ಮತ್ಸ್ಯಕುಮಾರ+ ಬವಣಿ+
ಇದೇನು +ನಿನಗೆಂದೆನಲು+ ಜಗದ್+ಅವ
ಸಾನದಂದದ +ಸಿಡಿಲು +ಸುಳಿಯಲು +ಬೆಂದುದ್+ಎನ್ನೊಡಲು
ಆನಲಾಪೆನೆ +ನಿನ್ನ +ಬಹಳ್
ಅಧ್ವಾನವನು +ಸಾಕ್+ಎನ್ನ+ಕಳುಹು +ಮ
ಹಾ+ನಿಧಾನವ+ ಮಾಣುಮಾಣ್+ಎನೆ+ ಪಾರ್ಥನಿಂತೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಗದವಸಾನದಂದದ ಸಿಡಿಲು ಸುಳಿಯಲು ಬೆಂದುದೆನ್ನೊಡಲು

ಪದ್ಯ ೬೬: ಉತ್ತರನೇಕೆ ಮೂರ್ಛೆ ಹೋದನು?

ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣವಾರಿಗಳ
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ (ವಿರಾಟ ಪರ್ವ, ೭ ಸಂಧಿ, ೬೬ ಪದ್ಯ)

ತಾತ್ಪರ್ಯ:
ಈ ಸದ್ದಿನಿಂದ ನೆತ್ತಿಗೆ ಸಿಡಿಲು ಬಡಿದವನಂತೆ ಉತ್ತರನು ರಥದಲ್ಲಿ ಬಿದ್ದು ಮೂರ್ಛೆ ಹೋದನು. ಅವನ ಕಣ್ಣುಗುಡ್ಡೆಗಳು ನೆಟ್ಟುಗೊಂಡವು, ಅರ್ಜುನನು ಅದನ್ನು ನೋಡಿ, ಎಲಾ ಪಾಪಿ, ಇಷ್ಟು ಶಬ್ದವನ್ನೂ ಸಹಿಸಲಾರ? ಏನು ಮಾಡಲಿ ಎಂದು ಹೇಳುರತ್ತಾ ತನ್ನ ಉತ್ತರೀಯದ ಸೆರಗಿನಿಂದ ಗಾಳಿ ಬೀಸಿ ರಥದಲ್ಲಿ ಸರಿಯಾಗಿ ಕೂಡಿಸಿದನು.

ಅರ್ಥ:
ಶಿರ: ತಲೆ; ಸಿಡಿಲು: ಅಶನಿ; ಎರಗು: ಬೀಳು; ತಿರುಗು: ಮಗ್ಗುಲಾಗು; ಮೂರ್ಛೆ: ಮೈಮರೆ; ಹೊಡೆ: ಹೊಡೆತ; ಮರಳು: ಹಿಂತಿರುಗು; ಕಣ್ಣು: ನಯನ; ಕಣ್ಣಾಲಿ: ಕಣ್ಣುಗುಡ್ಡೆ; ಅರುಣ: ಕೆಂಪು ಬಣ್ಣ; ವಾರಿ: ಜಲ; ಹೊರಳು: ತಿರುವು, ಬಾಗು: ಪಾಪಿ: ದುಷ್ಟ; ಸೈರಿಸು: ತಾಳು, ಸಹಿಸು; ಅರಿ: ತಿಳಿ; ಸೆರಗು: ಉತ್ತರೀಯ; ಬೀಸು: ತೂಗುವಿಕೆ; ಕುಳ್ಳಿರಿಸು: ಕೂಡು, ಆಸೀನನಾಗು; ರಥ: ಬಂಡಿ;

ಪದವಿಂಗಡಣೆ:
ಶಿರವ +ಸಿಡಿಲ್+ಎರಗಿದವೊಲ್+ಉತ್ತರ
ತಿರುಗಿ +ಬಿದ್ದನು +ಮೂರ್ಛೆಯಲಿ +ಹೊಡೆ
ಮರಳಿದವು +ಕಣ್ಣಾಲಿ+ ಕಾರಿದವ್+ಅರುಣ+ವಾರಿಗಳ
ಹೊರಳುತಿರಲ್+ಎಲೆ +ಪಾಪಿ +ಸೈರಿಸಲ್
ಅರಿಯನ್+ಇನ್ನೇನ್+ಎನುತ +ಫಲುಗುಣ
ಸೆರಗಿನಲಿ+ ಬೀಸಿದನು+ ಕುಳ್ಳಿರಿಸಿದನು +ರಥದೊಳಗೆ

ಚ್ಚರಿ:
(೧) ಉಪಮಾನದ ಪ್ರಯೋಗ – ಶಿರವ ಸಿಡಿಲೆರಗಿದವೊಲ್
(೨) ಉತ್ತರನಿಗೆ ಶಬ್ದದಿಂದಾದ ಸ್ಥಿತಿ – ಬಿದ್ದನು ಮೂರ್ಛೆಯಲಿ ಹೊಡೆಮರಳಿದವು ಕಣ್ಣಾಲಿ ಕಾರಿದವರುಣವಾರಿಗಳ

ಪದ್ಯ ೬೫: ಕೌರವ ಸೈನ್ಯವು ಯಾವ ಶಬ್ದವನ್ನು ಕೇಳಿ ಹಿಂದೆ ಸರಿಯಿತು?

ತುರಗ ಗರ್ಜನೆ ರಥದ ಚೀತ್ಕೃತಿ
ವರಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆನಿಷ್ಠುರ ದೇವದತ್ತರವ
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕೆ
ಸುರಿಯೆ ಸುರಕುಲ ನೆರೆಯೆ ಭೀತಿಯೊಳಹಿತ ಬಲ ಹರಿಯೆ (ವಿರಾಟ ಪರ್ವ, ೭ ಸಂಧಿ, ೬೫ ಪದ್ಯ)

ತಾತ್ಪರ್ಯ:
ಕುದುರೆಗಳ ಹೇಷಾರವ, ರಥದ ಚೀತ್ಕಾರ, ಅರ್ಜುನನ ಸಿಂಹನಾದ, ಗಾಂಡಿವದ ಟಂಕಾರ, ಹನುಮಂತನ ಅಬ್ಬರ, ದೇವದತ್ತನ ಘೋಷಗಳು ಇವೆಲ್ಲವೂ ಒಟ್ಟಾಗಿ ಮೊಳಗಲು, ಈ ಶಬ್ದಕ್ಕೆ ಬೆಟ್ಟಗಳು ಬಿರಿದವು. ಸಮುದ್ರವು ಹಿಂದಕ್ಕೆ ಹೋಯಿತು, ನಕ್ಷತ್ರಗಳು ಕೆಳಗೆ ಬಿದ್ದವು, ನೋಡಲು ದೇವತೆಗಳು ಸೇರಿದಉ. ಕೌರವ ಸೈನ್ಯ ಭೀತಿಗೊಂಡು ಹಿಂದಕ್ಕೆ ಹೋಯಿತು.

ಅರ್ಥ:
ತುರಗ: ಅಶ್ವ; ಗರ್ಜನೆ: ಕೂಗು, ಆರ್ಭಟ; ರಥ: ಬಂಡಿ; ಚೀತ್ಕೃತಿ: ಚೀತ್ಕಾರ, ಜೋರಾದ ಕೂಗು; ವರ: ಶ್ರೇಷ್ಠ; ಧನು: ಬಿಲ್ಲು; ಟಂಕಾರ: ಬಿಲ್ಲಿನ ಶಬ್ದ; ಕಪಿ: ಹನುಮಂತ; ಅಬ್ಬರ: ಆರ್ಭಟ; ಬೊಬ್ಬೆ: ಕೂಗು; ನಿಷ್ಠುರ: ಕಠಿಣವಾದುದು, ಒರಟಾದುದು; ರವ: ಶಬ್ದ; ಹೊದರು: ಗುಂಪು, ಸಮೂಹ; ಗಿರಿ: ಬೆಟ್ಟ; ವ್ರಜ: ಗುಂಪು; ಬಿರಿ: ಬಿರುಕು, ಸೀಳು; ಜಲನಿಧಿ: ಸಾಗರ; ಜರಿ:ಅಳುಕು, ಹಿಂಜರಿ, ಪತನವಾಗು; ತಾರ: ನಕ್ಷತ್ರ; ಸುರಿ: ಮೇಲಿನಿಂದ ಬೀಳು; ಸುರಕುಲ: ದೇವತೆಗಳು; ನೆರೆ: ಗುಂಪು; ಭೀತಿ: ಭಯ; ಅಹಿತ: ಶತ್ರು; ಬಲ: ಸೈನ್ಯ; ಹರಿ: ದಾಳಿ ಮಾಡು;

ಪದವಿಂಗಡಣೆ:
ತುರಗ+ ಗರ್ಜನೆ +ರಥದ +ಚೀತ್ಕೃತಿ
ವರ+ಧನುಷ್ಟಂಕಾರ +ಕಪಿ
ಅಬ್ಬರಣೆ +ಪಾರ್ಥನ +ಬೊಬ್ಬೆ+ನಿಷ್ಠುರ+ ದೇವದತ್ತ+ರವ
ಅರರೆ +ಹೊದರೆದ್ದವು +ಗಿರಿವ್ರಜ
ಬಿರಿಯೆ+ ಜಲನಿಧಿ +ಜರಿಯೆ +ತಾರಕೆ
ಸುರಿಯೆ +ಸುರಕುಲ+ ನೆರೆಯೆ+ ಭೀತಿಯೊಳ್+ಅಹಿತ +ಬಲ +ಹರಿಯೆ

ಅಚ್ಚರಿ:
(೧) ಗರ್ಜನೆ, ಚೀತ್ಕೃತಿ, ಟಂಕಾರ, ಅಬ್ಬರ, ಬೊಬ್ಬೆ, ರವ – ಶಬ್ದವನ್ನು ವಿವರಿಸುವ ಪದಗಳು
(೨) ಉಪಮಾನದ ಪ್ರಯೋಗ – ಹೊದರೆದ್ದವು ಗಿರಿವ್ರಜ,ಬಿರಿಯೆ ಜಲನಿಧಿ, ಜರಿಯೆ ತಾರಕೆ ಸುರಿಯೆ

ಪದ್ಯ ೬೪: ಅರ್ಜುನನ ಕುದುರೆಗಳು ಹೇಗೆ ಓಡಿದವು?

ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದೂವಾಳಿಸುವಡಾಹವಕೆ
ಅರರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿಮಂಡಲವನಂಡಲೆಯ (ವಿರಾಟ ಪರ್ವ, ೭ ಸಂಧಿ, ೬೪ ಪದ್ಯ)

ತಾತ್ಪರ್ಯ:
ಗೊರಸಿನಿಂದ ಆಕಾಶದಲ್ಲಿ ಬರೆಯುವಂತೆ, ಸ್ಪರ್ಧೆಗೆ ಸೂರ್ಯನ ಕುದುರೆಗಳನ್ನು ಕರೆಯುವಂತೆ, ಅರ್ಜುನನ ರಥದ ಕುದುರೆಗಳು ಭಲೇ, ಎಂದು ಹೊಗಳಿ ಚಪ್ಪರಿಸಿದ ಕೂಡಲೇ ಮುನ್ನುಗ್ಗಿದವು. ಅವುಗಳ ಖುರಪುಟದಿಂದಾದ ಧೂಳು ಸೂರ್ಯಮಂಡಲವನ್ನು ಬೆನ್ನು ಹತ್ತಿ ಹೋಯಿತು.

ಅರ್ಥ:
ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಪುಟ: ಪುಟಿಗೆ, ನೆಗೆತ; ಆಕಾಶ: ಆಗಸ; ಭಿತ್ತಿ: ಮುರಿಯುವ, ಒಡೆಯುವ; ಬರೆ: ಲೇಖಿಸು; ಸೂರಿಯ: ಸೂರ್ಯ, ಭಾನು; ತುರಗ: ಅಶ್ವ; ಕರೆ: ಬರೆಮಾಡು; ಕೈಗಟ್ಟು: ಕೈಗೆ ಹಚ್ಚು, ಸೆಣಸು, ಹೊಡೆದಾಡು; ದೂವಾಳಿ: ವೇಗವಾಗಿ ಓಡು; ಆಹವ: ಯುದ್ಧ; ಪೂತು: ಭಲೇ, ಭೇಷ್; ಹಯ: ಕುದುರೆ; ಚಪ್ಪರಿಸು: ಸವಿ, ರುಚಿನೋಡು; ನಿಗುರು: ಹರಡು, ವ್ಯಾಪಿಸು; ಕೆಂದೂಳಿ: ಕೆಂಪಾದ ಧೂಳು; ನಭ: ಆಕಾಶ; ಉಪ್ಪರ: ಎತ್ತರ, ಉನ್ನತಿ; ರವಿ: ಭಾನು; ಮಂಡಲ: ಜಗತ್ತು, ನಾಡಿನ ಒಂದು ಭಾಗ; ಅಂಡಲೆ: ಕಾಡು, ಪೀಡಿಸು;

ಪದವಿಂಗಡಣೆ:
ಖುರಪುಟದಲ್+ಆಕಾಶ +ಭಿತ್ತಿಯ
ಬರೆವವೋಲ್ +ಸೂರಿಯನ +ತುರಗವ
ಕರೆವವೋಲ್ +ಕೈಗಟ್ಟಿ +ದೂವಾಳಿಸುವಡ್+ಆಹವಕೆ
ಅರರೆ +ಪೂತುರೆ +ಹಯವೆನುತೆ +ಚ
ಪ್ಪರಿಸಲ್+ಒಡೆ +ನಿಗುರಿದವು +ಕೆಂದೂ
ಳಿರದೆ+ ನಭಕ್+ಉಪ್ಪರಿಸಿ +ರವಿಮಂಡಲವನ್+ಅಂಡಲೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಖುರಪುಟದಲಾಕಾಶ ಭಿತ್ತಿಯಬರೆವವೋಲ್; ಸೂರಿಯನ ತುರಗವ
ಕರೆವವೋಲ್
(೨) ಸೂರಿಯ, ರವಿ; ಆಕಾಶ, ನಭ – ಸಮನಾರ್ಥಕ ಪದ

ಪದ್ಯ ೬೩: ಕೌರವರ ಸೈನ್ಯದ ಬಲವು ಎಷ್ಟಿತ್ತು?

ಹೊಗಳಲನುಪಮ ಸೇನೆಯಿಂತಿದು
ದುಗುಣವಂಧಾಸುರನ ಸೇನೆಗೆ
ತಿಗುಣವಿದು ರಾವಣನ ಮೋಹರಕೆನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನೆರೆ
ಹೊಗಳಿ ತೋರಿದನುತ್ತರಗೆ ಮೊಳೆ
ನಗೆಯ ಮನದೊಳಗಾಗ ಸೈವೆರಗಾದ ಸುಕುಮಾರ (ವಿರಾಟ ಪರ್ವ, ೭ ಸಂಧಿ, ೬೩ ಪದ್ಯ)

ತಾತ್ಪರ್ಯ:
ಈ ಸೈನ್ಯವು ಅಂಧಕಾಸುರನ ಸೇನೆಯ ಎರಡರಷ್ಟಿದೆ, ರಾವಣನ ಸೈನ್ಯದ ಮೂರರಷ್ಟಿದೆ ಎಂದು ಅರ್ಜುನನು ನಸುನಗುತ್ತಾ ಶತ್ರುಸೈನ್ಯದ ಬಲವನ್ನು ಹೊಗಳಲು ಉತ್ತರನು ಈ ವಿಷಯವನ್ನು ಕೇಳಿ ಬೆರಗಾದನು.

ಅರ್ಥ:
ಹೊಗಳು: ಪ್ರಶಂಶಿಸು; ಅನುಪಮ: ಉತ್ಕೃಷ್ಟವಾದುದು; ಸೇನೆ: ಸೈನ್ಯ; ದುಗುಣ: ಎರಡು ಪಟ್ಟು; ಅಂಧ: ಕುರುಡ; ಅಸುರ: ರಾಕ್ಷಸ; ತಿಗುಣ: ಮೂರುಪಟ್ಟು; ಮೋಹರ: ಸೈನ್ಯ; ಹಗೆ: ವೈರಿ; ಭುಜ: ಬಾಹು; ಅಗ್ಗಳಿಕೆ: ಶ್ರೇಷ್ಠತೆ; ನೆರೆ: ಸಮೀಪ, ಹತ್ತಿರ; ಹೊಗಳು: ಪ್ರಶಂಶಿಸು; ತೋರು: ಪ್ರದರ್ಶಿಸು, ಕಾಣು; ಮೊಳೆನಗೆ: ಮಂದಸ್ಮಿತ; ಮನ: ಮನಸ್ಸು; ಸೈವೆರಗು: ಆತಿಯಾದ ತಳಮಳ; ಕುಮಾರ: ನಂದನ, ಮಗ;

ಪದವಿಂಗಡಣೆ:
ಹೊಗಳಲ್+ಅನುಪಮ+ ಸೇನೆಯಿಂತ್+ಇದು
ದುಗುಣವ್+ಅಂಧಾಸುರನ+ ಸೇನೆಗೆ
ತಿಗುಣವಿದು+ ರಾವಣನ +ಮೋಹರಕೆನುತ +ಫಲುಗುಣನು
ಹಗೆಯ+ ಭುಜ+ಅಗ್ಗಳಿಕೆಯನು +ನೆರೆ
ಹೊಗಳಿ +ತೋರಿದನ್+ಉತ್ತರಗೆ +ಮೊಳೆ
ನಗೆಯ +ಮನದೊಳಗ್+ಆಗ+ ಸೈವೆರಗಾದ +ಸುಕುಮಾರ

ಅಚ್ಚರಿ:
(೧) ದುಗುಣ, ತಿಗುಣ – ಪದಗಳ ಬಳಕೆ

ಪದ್ಯ ೬೨: ದುರ್ಯೊಧನನ ಪಕ್ಕದಲ್ಲಿ ಯಾವ ರಾಜರಿದ್ದರು?

ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಭಾರಿಯ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನನೊಸಲಂದದಲಿ ಮೆರೆವವ
ರವನಿಪಾಲರು ಮಕುಟವರ್ಧನರವರ ನೋಡೆಂದ (ವಿರಾಟ ಪರ್ವ, ೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಬಲಭಾಗದಲ್ಲಿ ಭೂರಿಶ್ರವ, ಎಡಭಾಗದಲ್ಲಿ ಜಯದ್ರಥರಿದ್ದಾರೆ, ಪರಾಕ್ರಮ ಶಾಲಿಗಳಾಗಿ ಶಿವನ ಹಣೆಗಣ್ಣಿನಂತೆ (ಅಗ್ನಿಯಷ್ಟು ಪ್ರಖರರಾದ) ಇರುವ ಅನೇಕ ರಾಜರು ಅಲ್ಲಿದ್ದಾರೆ ನೋಡು ಎಂದು ಅರ್ಜುನನು ಉತ್ತರನಿಗೆ ತೋರಿಸಿದನು.

ಅರ್ಥ:
ಬಲವಂಕ: ಬಲಭಾಗ; ನಿಂದವ: ನಿಂತಿರುವ; ಭಾರಿ: ದೊಡ್ಡ; ಭುವನಪತಿ: ರಾಜ; ಭುವನ: ಭೂಮಿ; ಎಡವಂಕ: ಎಡಭಾಗ; ಶಿವ: ಶಂಕರ; ನೊಸಲು: ಹಣೆ; ಮೆರೆ: ಪ್ರಕಾಶಿಸು, ಹೊಳೆ; ಅವನಿಪಾಲ: ರಾಜ; ಮಕುಟ: ಕಿರೀಟ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನ +ಬಲವಂಕದಲಿ +ನಿಂದವನ್
ಅವನು +ಭೂರಿಶ್ರವನು+ ಭಾರಿಯ
ಭುವನಪತಿ+ಎಡವಂಕದಲಿ +ನಿಂದವ +ಜಯದ್ರಥನು
ತವತವಗೆ +ಬಲುಗೈಗಳ್+ಎನಿಸುವ
ಶಿವನ+ನೊಸಲಂದದಲಿ +ಮೆರೆವವರ್
ಅವನಿಪಾಲರು +ಮಕುಟವರ್ಧನರ್+ಅವರ+ ನೋಡೆಂದ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೂರಿಶ್ರವನು ಭಾರಿಯ ಭುವನಪತಿ
(೨) ಉಪಮಾನದ ಪ್ರಯೋಗ – ಶಿವನನೊಸಲಂದದಲಿ ಮೆರೆವವರವನಿಪಾಲರು

ಪದ್ಯ ೬೧: ದುರ್ಯೋಧನನ ರಥವು ಹೇಗಿತ್ತು?

ಅಗಿವ ಹಾವಿನ ಹಳವಿಗೆಯ ಕೈ
ನೆಗಹಿ ಮುಸುಕಿದ ಝಲ್ಲರಿಯ ಮಿಗೆ
ಗಗನತಳದೊಳು ಮೆರೆವ ಸೀಗುರಿಗಳ ಪತಾಕೆಗಳ
ನೆಗಹಿ ನಿಮಿರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ (ವಿರಾಟ ಪರ್ವ, ೭ ಸಂಧಿ, ೬೧ ಪದ್ಯ)

ತಾತ್ಪರ್ಯ:
ಹೆಡೆಯೆತ್ತಿದ ಹಾವಿನ ಧ್ವಜ, ಸುತ್ತಲೂ ಕಟ್ಟಿದ ಜಾಲರಗಳು, ಆಕಾಶದತ್ತ ಏರಿರುವ ಚಾಮರ ಧ್ವಜಗಳು, ನೇರವಾಗಿ ನಿಂತಿರುವ ಧ್ವಜ ದಂಡದ ಮೇಲಿರುವ ಧ್ವಜ, ಸುತ್ತಲೂ ಮದದಾನೆಗಳ ನಡುವೆ ಇರುವವನು ಜೂಜಾಟದಲ್ಲಿ ಕಪಟ ಜಾಣತನವನ್ನು ಪ್ರದರ್ಶಿಸಿದ ದುರ್ಯೋಧನನ ರಥವನ್ನು ನೋಡೆಂದು ಅರ್ಜುನನು ಉತ್ತರನಿಗೆ ತೋರಿಸಿದನು.

ಅರ್ಥ:
ಅಗಿ: ಕಚ್ಚು, ಹೆಡೆಯೆತ್ತು; ಹಾವು: ಉರಗ; ಹಳವಿಗೆ: ಬಾವುಟ; ಕೈ: ಹಸ್ತ; ನೆಗಹು: ಮೇಲೆತ್ತು; ಕೈನಗಹಿ:
ಮೇಲೆತ್ತು; ಮುಸುಕು: ಆವರಿಸು; ಝಲ್ಲರಿ: ಕುಚ್ಚು, ಗೊಂಡೆ; ಮಿಗೆ: ಅಧಿಕ; ಗಗನ: ಆಕಾಶ; ಮೆರೆ: ಹೊಳೆ; ಸೀಗುರಿ: ಚಾಮರ; ಪತಾಕೆ: ಬಾವುಟ; ನೆಗಹು: ಮೇಲೆತ್ತು; ನಿಮಿರು: ಎದ್ದುನಿಲ್ಲು, ನೆಟ್ಟಗಾಗು; ಟೆಕ್ಕೆ: ಬಾವುಟ, ಧ್ವಜ; ಮದ: ಅಮಲು, ಗರ್ವ; ಕರಿ: ಆನೆ; ಮಧ್ಯ: ನಡುವೆ; ಅಗಡು:ತುಂಟತನ; ಜೂಜು: ಸಟ್ಟ, ಜುಗಾರಿ; ಜಾಣ: ಬುದ್ಧಿವಂತ;

ಪದವಿಂಗಡಣೆ:
ಅಗಿವ +ಹಾವಿನ +ಹಳವಿಗೆಯ +ಕೈ
ನೆಗಹಿ +ಮುಸುಕಿದ +ಝಲ್ಲರಿಯ +ಮಿಗೆ
ಗಗನತಳದೊಳು +ಮೆರೆವ +ಸೀಗುರಿಗಳ +ಪತಾಕೆಗಳ
ನೆಗಹಿ +ನಿಮಿರುವ +ಟೆಕ್ಕೆಯದ +ಮದ
ವೊಗುವ +ಕರಿಗಳ+ಮಧ್ಯದಲಿ +ತಾನ್
ಅಗಡು +ದುರಿಯೋಧನನು +ಜೂಜಿನ +ಜಾಣನವನೆಂದ

ಅಚ್ಚರಿ:
(೧) ದುರ್ಯೋಧನನ ರಥದ ವರ್ಣನೆ – ಅಗಿವ ಹಾವಿನ ಹಳವಿಗೆಯ ಕೈನೆಗಹಿ ಮುಸುಕಿದ ಝಲ್ಲರಿಯ ಮಿಗೆ
ಗಗನತಳದೊಳು ಮೆರೆವ ಸೀಗುರಿಗಳ ಪತಾಕೆಗಳ

ಪದ್ಯ ೬೦: ಭೀಷ್ಮರ ರಥವು ಹೇಗಿತ್ತು?

ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರಗಂಗಾಸುತನು ನೋಡೆಂದ (ವಿರಾಟ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ಅಲ್ಲಿ ನೋಡು ಸೈನ್ಯದ ಮಧ್ಯದಲ್ಲಿ, ನಮಗೂ ಕೌರವರಿಗೂ ಪಿತಾಮಹರಾದ, ಬಿಳಿಯ ಕುದುರೆಗಳ ರಥದಲ್ಲಿರುವವರು ಗಂಗಾಸುತರಾದ ಭೀಷ್ಮರು. ಇವರ ರಥದ ಧ್ವಜದಲ್ಲಿ ಚಿನ್ನವರ್ಣದ ತಾಳದ ಚಿಹ್ನೆಯನ್ನು ನೋಡು. ಇವರು ವೈರಿಗಳ ಪಡೆಗೆ ಮೃತ್ಯುವೆನಿಸಿದ್ದಾರೆ.

ಅರ್ಥ:
ಐದು: ಬಂದು ಸೇರು; ಬಹಳ: ತುಂಬ; ಬಲ: ಸೈನ್ಯ; ಒತ್ತು: ಗುಂಪು, ದಟ್ಟಣೆ; ಉಭಯ: ಎರಡು; ರಾಯ: ರಾಜ; ಮುತ್ತ: ವಯಸ್ಸಾದವನು, ಮುದುಕ; ಹೂಡು: ಅಣಿಗೊಳಿಸು; ಬಿಳಿ: ಶ್ವೇತ; ತೇಜಿ: ಕುದುರೆ; ತೆತ್ತಿಸು: ಜೋಡಿಸು; ಹೊಂದಾಳ: ಚಿನ್ನ ವರ್ಣದ ತಾಳ; ಸಿಂಧ: ಬಾವುಟ; ಸತ್ತಿಗೆ: ಕೊಡೆ, ಛತ್ರಿ; ಸಾಲು: ಗುಂಪು; ರಿಪು: ವೈರಿ; ಕುಲ: ವಂಶ; ಮೃತ್ಯು: ಸಾವು; ವೀರ: ಪರಾಕ್ರಮಿ; ಸುತ: ಮಗ; ನೋಡು: ವೀಕ್ಷಿಸು;

ಪದವಿಂಗಡಣೆ:
ಅತ್ತಲ್+ಐದನೆ +ಬಹಳ+ ಬಲದ್
ಒತ್ತೊತ್ತೆಯಲಿ +ನಮ್ಮುಭಯ +ರಾಯರ
ಮುತ್ತಯನು +ತಾನೆನಿಸಿ +ಹೂಡಿದ +ಬಳಿಯ +ತೇಜಿಗಳ
ತೆತ್ತಿಸಿದ +ಹೊಂದಾಳ +ಸಿಂಧದ
ಸತ್ತಿಗೆಯ +ಸಾಲಿನಲಿ +ರಿಪುಕುಲ
ಮೃತ್ಯುವಾತನು +ವೀರ+ಗಂಗಾಸುತನು +ನೋಡೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಿಂಧದ ಸತ್ತಿಗೆಯ ಸಾಲಿನಲಿ

ಪದ್ಯ ೫೯: ಕರ್ಣನ ರಥವು ಹೇಗಿತ್ತು?

ಲಲಿತ ರತ್ನ ಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಲುಝೇಂಕಾರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು (ವಿರಾಟ ಪರ್ವ, ೭ ಸಂಧಿ, ೫೯ ಪದ್ಯ)

ತಾತ್ಪರ್ಯ:
ಸುಂದರವಾದ ರತ್ನಪ್ರಭೆಯಿಂದ ಬೆಳಗುವ ತೇರು, ಸುತ್ತಲೂ ಹಲವು ವಾದ್ಯಗಳ ನಿನಾದ, ದರ್ಪದಿಂದಿರುವ ಕುದುರೆಗಳು, ಯುದ್ಧದಲ್ಲಿ ಉತ್ಸಾಹಿಸಿ, ಬಿಲ್ಲನ್ನು ಜೀವಡೆಯುತ್ತಿರುವ ಪರಾಕ್ರಮದಿಂದ ಬೆಂಕಿಯಂತೆ ಪ್ರಜ್ವಲಿಸುವವನಾದ ಕರ್ಣನನ್ನು ನೋಡು ಎಂದು ತೋರಿಸಿದನು.

ಅರ್ಥ:
ಲಲಿತ: ಚೆಲುವು, ಸೌಂದರ್ಯ; ರತ್ನ: ಮಣಿ; ಪ್ರಭೆ: ಕಾಂತಿ; ತೇರು: ರಥ; ಉಲಿ:ಧ್ವನಿಮಾಡು; ಬಹುವಿಧ: ಬಹಳ ಪ್ರಕಾರದ; ವಾದ್ಯ: ಸಂಗೀತದ ಸಾಧನ; ರಭಸ: ವೇಗ; ಕಳಕಳ:ಉದ್ವಿಗ್ನತೆ; ಕಡು: ವಿಶೇಷ, ಅಧಿಕ; ದರ್ಪ: ಅಹಂಕಾರ; ಅಳ್ಳಿರಿ: ನಡುಗಿಸು, ಚುಚ್ಚು; ತೇಜಿ: ಕುದುರೆ; ಲಳಿ: ರಭಸ, ಆವೇಶ; ಲಹರಿ: ರಭಸ, ಆವೇಗ; ಲಗ್ಗೆ: ಮುತ್ತಿಗೆ, ಆಕ್ರಮಣ; ಮೋಹ: ಸೆಳೆತ, ಪ್ರೀತಿ; ಬಿಲು: ಬಿಲ್ಲು; ಝೇಂಕಾರ: ಗರ್ಜಿಸು, ಆರ್ಭಟ; ಕಲಿ: ಶೂರ; ಅತುಳ: ಬಹಳ; ಪರಾಕ್ರಮ: ಬಲಶಾಲಿ; ಅನಲ: ಬೆಂಕಿ;

ಪದವಿಂಗಡಣೆ:
ಲಲಿತ +ರತ್ನ +ಪ್ರಭೆಯ +ತೇರಿನಲ್
ಉಲಿವ +ಬಹುವಿಧ+ ವಾದ್ಯ+ರಭಸದ
ಕಳಕಳದ +ಕಡು+ ದರ್ಪದಿಂದ್+ಅಳ್ಳಿರಿವ +ತೇಜಿಗಳ
ಲಳಿಯ +ಲಹರಿಯ +ಲಗ್ಗೆಗಳ +ಮೋ
ಹಳಿಸಿ +ಬಲು+ಝೇಂಕಾರವದಿಂದ್
ಉಲಿವವನು +ಕಲಿ+ಕರ್ಣನ್+ಅತುಳ +ಪರಾಕ್ರಮ +ಅನಲನು

ಅಚ್ಚರಿ:
(೧) ಲ ಕಾರದ ತ್ರಿವಳಿ ಪದ – ಲಳಿಯ ಲಹರಿಯ ಲಗ್ಗೆಗಳ
(೨) ಕರ್ಣನ ರಥದ ವಿವರಣೆ – ಲಲಿತ ರತ್ನ ಪ್ರಭೆಯ ತೇರಿನಲುಲಿವ ಬಹುವಿಧ ವಾದ್ಯರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ