ಪದ್ಯ ೬೫: ಕೌರವ ಸೈನ್ಯವು ಯಾವ ಶಬ್ದವನ್ನು ಕೇಳಿ ಹಿಂದೆ ಸರಿಯಿತು?

ತುರಗ ಗರ್ಜನೆ ರಥದ ಚೀತ್ಕೃತಿ
ವರಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆನಿಷ್ಠುರ ದೇವದತ್ತರವ
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕೆ
ಸುರಿಯೆ ಸುರಕುಲ ನೆರೆಯೆ ಭೀತಿಯೊಳಹಿತ ಬಲ ಹರಿಯೆ (ವಿರಾಟ ಪರ್ವ, ೭ ಸಂಧಿ, ೬೫ ಪದ್ಯ)

ತಾತ್ಪರ್ಯ:
ಕುದುರೆಗಳ ಹೇಷಾರವ, ರಥದ ಚೀತ್ಕಾರ, ಅರ್ಜುನನ ಸಿಂಹನಾದ, ಗಾಂಡಿವದ ಟಂಕಾರ, ಹನುಮಂತನ ಅಬ್ಬರ, ದೇವದತ್ತನ ಘೋಷಗಳು ಇವೆಲ್ಲವೂ ಒಟ್ಟಾಗಿ ಮೊಳಗಲು, ಈ ಶಬ್ದಕ್ಕೆ ಬೆಟ್ಟಗಳು ಬಿರಿದವು. ಸಮುದ್ರವು ಹಿಂದಕ್ಕೆ ಹೋಯಿತು, ನಕ್ಷತ್ರಗಳು ಕೆಳಗೆ ಬಿದ್ದವು, ನೋಡಲು ದೇವತೆಗಳು ಸೇರಿದಉ. ಕೌರವ ಸೈನ್ಯ ಭೀತಿಗೊಂಡು ಹಿಂದಕ್ಕೆ ಹೋಯಿತು.

ಅರ್ಥ:
ತುರಗ: ಅಶ್ವ; ಗರ್ಜನೆ: ಕೂಗು, ಆರ್ಭಟ; ರಥ: ಬಂಡಿ; ಚೀತ್ಕೃತಿ: ಚೀತ್ಕಾರ, ಜೋರಾದ ಕೂಗು; ವರ: ಶ್ರೇಷ್ಠ; ಧನು: ಬಿಲ್ಲು; ಟಂಕಾರ: ಬಿಲ್ಲಿನ ಶಬ್ದ; ಕಪಿ: ಹನುಮಂತ; ಅಬ್ಬರ: ಆರ್ಭಟ; ಬೊಬ್ಬೆ: ಕೂಗು; ನಿಷ್ಠುರ: ಕಠಿಣವಾದುದು, ಒರಟಾದುದು; ರವ: ಶಬ್ದ; ಹೊದರು: ಗುಂಪು, ಸಮೂಹ; ಗಿರಿ: ಬೆಟ್ಟ; ವ್ರಜ: ಗುಂಪು; ಬಿರಿ: ಬಿರುಕು, ಸೀಳು; ಜಲನಿಧಿ: ಸಾಗರ; ಜರಿ:ಅಳುಕು, ಹಿಂಜರಿ, ಪತನವಾಗು; ತಾರ: ನಕ್ಷತ್ರ; ಸುರಿ: ಮೇಲಿನಿಂದ ಬೀಳು; ಸುರಕುಲ: ದೇವತೆಗಳು; ನೆರೆ: ಗುಂಪು; ಭೀತಿ: ಭಯ; ಅಹಿತ: ಶತ್ರು; ಬಲ: ಸೈನ್ಯ; ಹರಿ: ದಾಳಿ ಮಾಡು;

ಪದವಿಂಗಡಣೆ:
ತುರಗ+ ಗರ್ಜನೆ +ರಥದ +ಚೀತ್ಕೃತಿ
ವರ+ಧನುಷ್ಟಂಕಾರ +ಕಪಿ
ಅಬ್ಬರಣೆ +ಪಾರ್ಥನ +ಬೊಬ್ಬೆ+ನಿಷ್ಠುರ+ ದೇವದತ್ತ+ರವ
ಅರರೆ +ಹೊದರೆದ್ದವು +ಗಿರಿವ್ರಜ
ಬಿರಿಯೆ+ ಜಲನಿಧಿ +ಜರಿಯೆ +ತಾರಕೆ
ಸುರಿಯೆ +ಸುರಕುಲ+ ನೆರೆಯೆ+ ಭೀತಿಯೊಳ್+ಅಹಿತ +ಬಲ +ಹರಿಯೆ

ಅಚ್ಚರಿ:
(೧) ಗರ್ಜನೆ, ಚೀತ್ಕೃತಿ, ಟಂಕಾರ, ಅಬ್ಬರ, ಬೊಬ್ಬೆ, ರವ – ಶಬ್ದವನ್ನು ವಿವರಿಸುವ ಪದಗಳು
(೨) ಉಪಮಾನದ ಪ್ರಯೋಗ – ಹೊದರೆದ್ದವು ಗಿರಿವ್ರಜ,ಬಿರಿಯೆ ಜಲನಿಧಿ, ಜರಿಯೆ ತಾರಕೆ ಸುರಿಯೆ

ನಿಮ್ಮ ಟಿಪ್ಪಣಿ ಬರೆಯಿರಿ