ಪದ್ಯ ೭೩: ಯುದ್ಧದಲ್ಲಿ ಯಾರು ಚಾತುರ್ಬಲವನ್ನು ಸಂಹರಿಸಿದರು?

ಸರಿಯಲೌ ಸುತಶೋಕ ನಮ್ಮಿ
ಬ್ಬರಿಗೆ ನಮ್ಮೊಳುವೆರೆಸಿ ವೈರೋ
ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ
ಎರಡು ಬಲದಲಿ ಸಕಲ ಭೂಮೀ
ಶ್ವರರ ಚಾತುರ್ಬಲವನುಪಸಂ
ಹರಿಸಿದಾತನು ತಾನೆ ಗದುಗಿನ ವೀರನಾರಯಣ (ಗದಾ ಪರ್ವ, ೧೧ ಸಂಧಿ, ೭೩ ಪದ್ಯ)

ತಾತ್ಪರ್ಯ:
ದ್ರೌಪದಿಯು ನುಡಿಯುತ್ತಾ, ನಮ್ಮಿಬ್ಬರಿಗೂ ಪುತ್ರಶೋಕವು ಒಂದೇ ರೀತಿಯಾಗಿದೆ. ಗದುಗಿನ ವೀರನಾರಾಯಣನು ನಮ್ಮಲ್ಲಿ ಸೇರಿ ವೈರತ್ವವನ್ನು ಬೆಳಸಿ, ಭಾರತಯುದ್ಧದಲ್ಲಿ ಎರಡೂ ಪಕ್ಷದ ಚತುರ್ಬಲವನ್ನು ಸಂಹರಿಸಿದನಲ್ಲವೇ ಎಂದು ನುಡಿದಳು.

ಅರ್ಥ:
ಸರಿ: ಸಮ; ಸುತ: ಪುತ್ರ; ಶೋಕ: ದುಃಖ; ವೈರ: ಶತ್ರು; ಉತ್ಕರ: ರಾಶಿ, ಸಮೂಹ; ರಣ: ಯುದ್ಧ; ವಿಧಾನ: ರೀತಿ; ರಚಿಸು: ನಿರ್ಮಿಸು; ಬಲ: ಸೈನ್ಯ; ಸಕಲ: ಎಲ್ಲಾ; ಭೂಮೀಶ್ವರ: ರಾಜ; ಚಾತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಉಪಸಂಹರಿಸು: ನಾಶಮಾಡು;

ಪದವಿಂಗಡಣೆ:
ಸರಿಯಲೌ +ಸುತ+ಶೋಕ +ನಮ್ಮಿ
ಬ್ಬರಿಗೆ+ ನಮ್ಮೊಳುವ್+ಎರೆಸಿ +ವೈರೋ
ತ್ಕರವಿ+ಸಂಸ್ಥುಳ+ರಣ+ವಿಧಾನವ +ನಮ್ಮೊಳಗೆ +ರಚಿಸಿ
ಎರಡು +ಬಲದಲಿ +ಸಕಲ+ ಭೂಮೀ
ಶ್ವರರ+ ಚಾತುರ್ಬಲವನ್+ಉಪಸಂ
ಹರಿಸಿದಾತನು +ತಾನೆ +ಗದುಗಿನ +ವೀರನಾರಯಣ

ಅಚ್ಚರಿ:
(೧) ನಮ್ಮೊಳುವೆರೆಸಿ, ನಮ್ಮೊಳಗೆ ರಚಿಸಿ – ಪದದ ರಚನೆ

ಪದ್ಯ ೭೨: ಗಾಂಧಾರಿಯು ದ್ರೌಪದಿಯನ್ನು ಹೇಗೆ ಸಂತೈಸಿದಳು?

ಕರೆದು ತಂದರು ವಿಗತಲೋಚನ
ನರಸಿಯನು ಕಾಣಿಸಿದರತ್ತೆಯ
ಚರಣಯುಗಳದೊಳೆರಗೆ ಹಿಡಿದೆತ್ತಿದಳು ಗಾಂಧಾರಿ
ಮರುಳು ಮಗಳೆ ಕುಮಾರ ವರ್ಗದ
ಮರಣ ಸೊಸೆಯತ್ತೆಯರಿಗೊಂದೇ
ಪರಿ ವೃಥಾಯೇಕೆನುತ ಸಂತೈಸಿದಳು ಸತಿಯ (ಗದಾ ಪರ್ವ, ೧೧ ಸಂಧಿ, ೭೨ ಪದ್ಯ)

ತಾತ್ಪರ್ಯ:
ಪಾಂಡವರು ದ್ರೌಪದಿಯನ್ನು ಗಾಂಧಾರಿಯ ಬಳಿಗೆ ಕರೆದುಕೊಂಡು ಹೋದರು. ದ್ರೌಪದಿಯು ಗಾಂಧಾರಿಯ ಪಾದಗಳಿಗೆ ನಮಸ್ಕರಿಸಲು, ಗಾಂಧಾರಿಯು ಅವಳನ್ನು ಮೇಲಕ್ಕೆತ್ತಿದಳು, ಮಗಳೇ ನಿನಗೆಲ್ಲೋ ಮರುಳು. ಪುತ್ರಶೋಕವು ಅತ್ತೆಗೂ ಸೊಸೆಗೂ ಒಂದೇ ಸಮನಾಗಿ ಬಂದಿದೆ, ವೃಥಾ ವ್ಯಥೆಪಡಬೇಡ ಎಂದು ಸಂತೈಸಿದಳು.

ಅರ್ಥ:
ಕರೆದು: ಬರೆಮಾಡು; ವಿಗತ: ಕಳೆದ; ಲೋಚನ: ನಯನ; ಅರಸಿ: ರಾಣಿ; ಕಾಣಿಸು: ತೋರು; ಚರಣ: ಪಾದ; ಯುಗಳು: ಎರದು; ಎರಗು: ನಮಸ್ಕರಿಸು; ಹಿಡಿದು: ಗ್ರಹಿಸು; ಎತ್ತು: ಮೇಲೇಳು; ಮರುಳು: ಮೂಢ; ಮಗಳು: ಪುತ್ರಿ; ಕುಮಾರ: ಪುತ್ರ; ವರ್ಗ: ಗುಂಪು; ಮರಣ: ಸವು; ಸೊಸೆ: ಮಗನ ಹೆಂಡತಿ; ಅತ್ತೆ: ಗಂಡನ ತಾಯಿ; ಪರಿ: ರೀತಿ; ವೃಥ: ಸುಮ್ಮನೆ; ಸಂತೈಸು: ಸಮಾಧಾನ ಪಡಿಸು; ಸತಿ: ಹೆಂಡತಿ;

ಪದವಿಂಗಡಣೆ:
ಕರೆದು +ತಂದರು +ವಿಗತ+ಲೋಚನನ್
ಅರಸಿಯನು +ಕಾಣಿಸಿದರ್+ಅತ್ತೆಯ
ಚರಣಯುಗಳದೊಳ್+ಎರಗೆ +ಹಿಡಿದೆತ್ತಿದಳು +ಗಾಂಧಾರಿ
ಮರುಳು +ಮಗಳೆ+ ಕುಮಾರ +ವರ್ಗದ
ಮರಣ +ಸೊಸೆ+ಅತ್ತೆಯರಿಗ್+ಒಂದೇ
ಪರಿ +ವೃಥಾಯೇಕೆನುತ +ಸಂತೈಸಿದಳು +ಸತಿಯ

ಅಚ್ಚರಿ:
(೧) ಗಾಂಧಾರಿ ಎಂದು ಹೇಳುವ ಪರಿ – ವಿಗತಲೋಚನನರಸಿ
(೨) ದುಃಖವನ್ನು ಹೇಳುವ ಪರಿ – ಕುಮಾರ ವರ್ಗದ ಮರಣ ಸೊಸೆಯತ್ತೆಯರಿಗೊಂದೇ ಪರಿ

ಪದ್ಯ ೭೧: ಕುಂತಿಯು ಧರ್ಮಜನಿಗೆ ಏನು ಮಾಡಲು ಹೇಳಿದಳು?

ಏಳು ಧರ್ಮಜ ಪುತ್ರಶೋಕ
ವ್ಯಾಳವಿಷಮೂರ್ಛಿತೆಯಲಾ ಪಾಂ
ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ
ಬಾಲೆಯರನಾ ಭಾನುಮತಿಯ ಛ
ಡಾಳದುಃಖವನಪಹರಿಸು ಪಡಿ
ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ (ಗದಾ ಪರ್ವ, ೧೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಮಕ್ಕಳನ್ನು ಸಂತೈಸುತ್ತಾ, ಧರ್ಮಜ, ದ್ರೌಪದಿಯು ಪುತ್ರಶೋಕ ಸರ್ಪವಿಷದಿಂದ ಮೂರ್ಛಿತಳಾಗಿದ್ದಾಳೆ. ಅವಳನ್ನು ಸಂತೈಸು. ಗಾಂಧಾರಿಯನ್ನು ಭೇಟಿ ಮಾಡಿಸು. ಭಾನುಮತಿಯ ಮಹಾದುಃಖವನ್ನು ಪರಿಹರಿಸು, ತಡಮಾಡುವುದು ಬೇಡ ಎಂದು ಹೇಳಲು ಪಾಂಡವರು ದ್ರೌಪದಿಯ ಬಳಿಗೆ ಬಂದರು.

ಅರ್ಥ:
ಏಳು: ಮೇಲೇರು, ಹತ್ತು; ಪುತ್ರ: ಸುತ; ಶೋಕ: ದುಃಖ; ವ್ಯಾಳ: ಸರ್ಪ; ವಿಷ: ಗರಳ; ಮುರ್ಛಿತ: ಜ್ಞಾನತಪ್ಪು; ಸುತೆ: ಮಗಳು; ತಿಳುಹಿ: ತಿಳಿದು, ಅರಿ; ಕಾಣು: ತೋರು; ನಂದನೆ: ಮಗಳು; ಬಾಲೆ: ಅಬಲೆ, ಹೆಣ್ಣು; ಛಡಾಳ:ಹೆಚ್ಚಳ, ಆಧಿಕ್ಯ; ದುಃಖ: ದುಗುಡ; ಅಪಹರಿಸು: ದೂರಮಾಡು, ಪರಿಹರಿಸು; ಪಡಿ: ಪ್ರತಿಯಾದುದು, ಬದಲು; ತಾಳು: ನಿಲ್ಲು; ಬೇಡ: ಸಲ್ಲದು; ಬಂದರು: ಆಗಮಿಸು; ನಿಂದರು: ನಿಲ್ಲು; ಹೊರೆ: ಬಳಿ, ಹತ್ತಿರ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಏಳು +ಧರ್ಮಜ +ಪುತ್ರ+ಶೋಕ
ವ್ಯಾಳ+ವಿಷ+ಮೂರ್ಛಿತೆಯಲ್+ಆ+ ಪಾಂ
ಚಾಲಸುತೆಯನು +ತಿಳುಹಿ +ಕಾಣಿಸು +ಸುಬಲ+ನಂದನೆಯ
ಬಾಲೆಯರನ್+ಆ+ ಭಾನುಮತಿಯ +ಛ
ಡಾಳ+ದುಃಖವನ್+ಅಪಹರಿಸು +ಪಡಿ
ತಾಳ +ಬೇಡೆನೆ +ಬಂದರ್+ಅನಿಬರು +ದ್ರೌಪದಿಯ +ಹೊರೆಗೆ

ಅಚ್ಚರಿ:
(೧) ದುಃಖವನ್ನು ವಿವರಿಸುವ ಪರಿ – ಪುತ್ರಶೋಕವ್ಯಾಳವಿಷಮೂರ್ಛಿತೆಯಲಾ ಪಾಂಚಾಲಸುತೆ

ಪದ್ಯ ೭೦: ಕುಂತಿಯು ತನ್ನ ಮಕ್ಕಳನ್ನು ಹೇಗೆ ಸಂತೈಸಿದಳು?

ಅನುನಯವ ರಚಿಸಿದಳು ಕೌರವ
ಜನನಿ ಲೇಸಾಯ್ತೆನುತ ಬಂದರು
ವಿನಯದಲಿ ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ
ನನೆದಳಕ್ಷಿಪಯಃಪ್ರವಾಹದೊ
ಳನಿಬರನು ತೆಗೆದಪ್ಪಿ ಕುಂತೀ
ವನಿತೆ ಸಂತೈಸಿದಳು ನಯದಲಿ ತನ್ನ ನಂದನರ (ಗದಾ ಪರ್ವ, ೧೧ ಸಂಧಿ, ೭೦ ಪದ್ಯ)

ತಾತ್ಪರ್ಯ:
ಕೌರವರ ತಾಯಿಯು ಪ್ರೀತಿಯಿಂದ ಸರಿಯಾಗಿ ಮಾತಾಡಿದುದು ಒಳ್ಳೆಯದಾಯಿತೆಂದುಕೊಂಡು ಪಾಂಡವರು ಕುಂತೀದೇವಿಯ ಬಳಿಗೆ ಹೋಗಿ ವಿನಯದಿಂದ ನಮಸ್ಕರಿಸಿದರು. ಕುಂತಿಯು ಕಣ್ಣೀರಿನ ಪ್ರವಾಹದಿಂದ ನನೆದು ಅವರನ್ನು ಅಪ್ಪಿಕೊಂಡು ಸಂತೈಸಿದಳು.

ಅರ್ಥ:
ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ರಚಿಸು: ನಿರ್ಮಿಸು; ಜನನಿ: ಮಾತೆ; ಲೇಸು: ಒಳಿತು; ಬಂದು: ಆಗಮಿಸು; ವಿನಯ: ಒಳ್ಳೆಯತನ, ಸೌಜನ್ಯ; ಮೆಯ್ಯಿಕ್ಕು: ನಮಸ್ಕರಿಸು; ನಿಜ: ದಿಟ; ಮಾತೆ: ತಾಯಿ; ಅಂಘ್ರಿ: ಪಾದ; ನನೆ: ತೋಯು, ಒದ್ದೆಯಾಗು; ಅಕ್ಷಿ: ಕಣ್ಣು; ಪಯಃ: ನೀರು; ಪ್ರವಾಹ: ರಭಸ; ಅನಿಬರು: ಅಷ್ಟುಜನ; ಅಪ್ಪು: ಆಲಂಗಿಸು; ವನಿತೆ: ಹೆಣ್ಣು; ಸಂತೈಸು: ಸಮಾಧಾನ ಪಡಿಸು; ನಯ: ಪ್ರೀತಿ; ನಂದನ: ಮಕ್ಕಳು;

ಪದವಿಂಗಡಣೆ:
ಅನುನಯವ+ ರಚಿಸಿದಳು +ಕೌರವ
ಜನನಿ +ಲೇಸಾಯ್ತೆನುತ +ಬಂದರು
ವಿನಯದಲಿ +ಮೆಯ್ಯಿಕ್ಕಿದರು +ನಿಜ +ಮಾತೆ+ಅಂಘ್ರಿಯಲಿ
ನನೆದಳ್+ಅಕ್ಷಿ+ಪಯಃ+ಪ್ರವಾಹದೊಳ್
ಅನಿಬರನು +ತೆಗೆದಪ್ಪಿ+ ಕುಂತೀ
ವನಿತೆ +ಸಂತೈಸಿದಳು +ನಯದಲಿ +ತನ್ನ+ ನಂದನರ

ಅಚ್ಚರಿ:
(೧) ಕಣ್ಣೀರು ಎಂದು ಹೇಳಲು – ಅಕ್ಷಿಪಯಃ
(೨) ಜನನಿ, ಮಾತೆ – ಸಮಾನಾರ್ಥಕ ಪದ
(೩) ನಮಸ್ಕರಿಸಿದರು ಎಂದು ಹೇಳಲು – ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ

ಪದ್ಯ ೬೯: ಗಾಂಧಾರಿಯು ಧರ್ಮಜನಿಗೆ ಏನು ಹೇಳಿದಳು?

ಭೀತಿ ಬೇಡೆಲೆ ಮಕ್ಕಳಿರ ನಿ
ರ್ಧೂತ ಧರ್ಮಸ್ಥಿತಿಗಳನ್ವಯ
ಘಾತಕರು ತಮ್ಮಿಂದ ತಾವಳಿದರು ರಣಾಗ್ರದಲಿ
ನೀತಿಯಲಿ ನೀವಿನ್ನು ಪಾಲಿಸಿ
ಭೂತಳವನುರೆ ಕಳಿದ ಬಂಧು
ವ್ರಾತಕುದಕವನೀವುದೆಂದಳು ನೃಪಗೆ ಗಾಂಧಾರಿ (ಗದಾ ಪರ್ವ, ೧೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಗಾಂಧಾರಿಯು ಸಮಾಧಾನಗೊಂಡು, ಮಕ್ಕಳೇ ನಿಮಗೆ ಇನ್ನು ನನ್ನ ಭೀತಿ ಬೇಡ. ಧರ್ಮ ಮಾಗ್ರವನ್ನು ಬಿಟ್ಟು ವಂಶಘಾತಕರು ಯುದ್ಧದಲ್ಲಿ ತಮ್ಮಿಂದ ಆವೇ ನಾಶವಾದರು. ಇನ್ನು ನೀವು ಭೂಮಿಯನ್ನು ಪಾಲಿಸಿರಿ, ಮರಣ ಹೊಂದಿದ ಬಂಧುಗಳಿಗೆ ಇನ್ನು ತರ್ಪಣಾದಿಗಳನ್ನು ನೀಡಿರಿ ಎಂದು ಹೇಳಿದಳು.

ಅರ್ಥ:
ಭೀತಿ: ಭಯ; ಬೇಡ: ತ್ಯಜಿಸು; ಮಕ್ಕಳು: ಸುತರು; ನಿರ್ಧೂತ: ತೊಡೆದು ಹಾಕುವುದು; ಧರ್ಮ: ಧಾರಣೆ ಮಾಡಿದುದು; ಅನ್ವಯ: ವಂಶ; ಘಾತಕ: ಕೊಲೆಗೆಡುಕ, ದುಷ್ಟ; ಅಳಿ: ನಾಶ; ರಣಾಗ್ರ: ಯುದ್ಧರಂಗ; ನೀತಿ: ಮಾರ್ಗ ದರ್ಶನ, ಶಿಷ್ಟಾಚಾರ; ಪಾಲಿಸು: ರಕ್ಷಿಸು, ಕಾಪಾಡು; ಭೂತಳ: ಭೂಮಿ; ಉರೆ: ಹೆಚ್ಚು; ಕಳಿದ: ನಾಶವಾದ; ಬಂಧು: ಸಂಬಂಧಿಕ; ವ್ರಾತ: ಗುಂಪು; ಉದಕ: ನೀರು; ಈವುದು: ನೀಡುವುದು; ನೃಪ: ರಾಜ;

ಪದವಿಂಗಡಣೆ:
ಭೀತಿ+ ಬೇಡೆಲೆ +ಮಕ್ಕಳಿರ+ ನಿ
ರ್ಧೂತ +ಧರ್ಮ+ಸ್ಥಿತಿಗಳ್+ಅನ್ವಯ
ಘಾತಕರು +ತಮ್ಮಿಂದ +ತಾವಳಿದರು+ ರಣಾಗ್ರದಲಿ
ನೀತಿಯಲಿ +ನೀವಿನ್ನು +ಪಾಲಿಸಿ
ಭೂತಳವನ್+ಉರೆ +ಕಳಿದ +ಬಂಧು
ವ್ರಾತಕ್+ಉದಕವನ್+ಈವುದೆಂದಳು +ನೃಪಗೆ +ಗಾಂಧಾರಿ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಬಂಧುವ್ರಾತಕುದಕವನೀವುದೆಂದಳು

ಪದ್ಯ ೬೮: ಶ್ರೀಕೃಷ್ಣನು ಧರ್ಮಜನನ್ನು ಹೇಗೆ ಸಂತೈಸಿದನು?

ಕೃತಕ ಭೀಮನ ಕೊಂಡು ಮುಳುಗಿತು
ಕ್ಷಿತಿಪತಿಯ ರೋಷಾಗ್ನಿಯಾತನ
ಸತಿಯ ಖತಿ ಮಗ್ಗಿತು ಮಹೀಶನ ನಖಮರೀಚಿಯಲಿ
ಜಿತವಿರೋಧವ್ಯಾಪ್ತಿ ಬಹಳ
ವ್ಯತಿಕರದೊಳಾಯ್ತೆಂದು ಲಕ್ಷ್ಮೀ
ಪತಿ ನರೇಂದ್ರನ ಸಂತವಿಟ್ಟನು ಸಾರವಚನದಲಿ (ಗದಾ ಪರ್ವ, ೧೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ಸಮಾಧಾನ ಪಡಿಸುತ್ತಾ, ಕೃತಕ ಭೀಮನನ್ನು ಮುರಿದು ಧೃತರಾಷ್ಟ್ರನ ಕೋಪವು ಮುಳುಗಿಹೋಯಿತು. ಧರ್ಮಜನ ಉಗುರುಗಳನ್ನು ನೋಡಿ ಸುಟ್ಟಿದುದರಿಂದ ಗಾಂಧಾರಿಯ ಕೋಪವು ಇಂಗಿತು. ಇವರಿಬ್ಬರು ಹೊಂದಿದ್ದ ವೈರತ್ವವನ್ನೀಗ ಗೆದ್ದಂತಾಯಿತು ಎಂದು ಶ್ರೀಕೃಷ್ಣನು ಧರ್ಮಜನನ್ನು ಸಂತೈಸಿದನು.

ಅರ್ಥ:
ಕೃತಕ: ಕಪಟ, ಅಸಹಜ; ಕೊಂಡು: ಪಡೆದು; ಮುಳುಗು: ನೀರಿನಲ್ಲಿ ಮೀಯು; ಕ್ಷಿತಿಪತಿ: ರಾಜ; ಪತಿ: ಒಡೆಯ; ಕ್ಷಿತಿ: ಭೂಮಿ; ರೋಷಗ್ನಿ: ಕೋಪಜ್ವಾಲೆ; ಸತಿ: ಹೆಂಡತಿ; ಖತಿ: ಕೋಪ; ಮಗ್ಗು: ಕಡಿಮೆಯಾಗು; ಮಹೀಶ: ರಾಜ; ನಖ: ಉಗುರು; ಮರೀಚಿ: ಕಿರಣ, ರಶ್ಮಿ, ಕಾಂತಿ; ಜಿತ: ಗೆದ್ದದ್ದು; ವಿರೋಧ: ತಡೆ, ಅಡ್ಡಿ, ವೈರತ್ವ; ವ್ಯಾಪ್ತಿ: ಹರಡು; ಬಹಳ: ತುಂಬ; ವ್ಯತಿಕರ: ಪರಸ್ಪರ ಕೊಡುಕೊಳ್ಳುವುದು; ಲಕ್ಷ್ಮೀಪತಿ: ಕೃಷ್ಣ; ನರೇಂದ್ರ: ರಾಜ; ಸಂತವಿಡು: ಸಂತೈಸು, ಸಮಾಧಾನ ಪಡಿಸು; ಸಾರ: ಗುಣ, ಸತ್ಯ; ವಚನ: ಮಾತು;

ಪದವಿಂಗಡಣೆ:
ಕೃತಕ +ಭೀಮನ +ಕೊಂಡು +ಮುಳುಗಿತು
ಕ್ಷಿತಿಪತಿಯ +ರೋಷಾಗ್ನಿ+ಆತನ
ಸತಿಯ +ಖತಿ +ಮಗ್ಗಿತು+ ಮಹೀಶನ +ನಖ+ಮರೀಚಿಯಲಿ
ಜಿತ+ವಿರೋಧವ್ಯಾಪ್ತಿ+ ಬಹಳ
ವ್ಯತಿಕರದೊಳಾಯ್ತೆಂದು+ ಲಕ್ಷ್ಮೀ
ಪತಿ +ನರೇಂದ್ರನ +ಸಂತವಿಟ್ಟನು +ಸಾರವಚನದಲಿ

ಅಚ್ಚರಿ:
(೧) ಕ್ಷಿತಿಪತಿ, ನರೇಂದ್ರ, ಮಹೀಶ – ಸಮಾನಾರ್ಥಕ ಪದ
(೨) ಕ್ಷಿತಿಪತಿ, ಲಕ್ಷ್ಮೀಪತಿ – ಪ್ರಾಸ ಪದಗಳು

ಪದ್ಯ ೬೭: ಶ್ರೀಕೃಷ್ಣನು ಪಾಂಡವರಿಗೆ ಹೇಗೆ ಅಭಯವನ್ನಿತ್ತನು?

ಉರಿದವರಸನ ನಖನಿಕರ ಹೊಗೆ
ವೆರಸಿ ಕೌರಿಡಲೋಡಿ ಹೊಕ್ಕರು
ನರವೃಕೋದರರಸುರರಿಪುವಿನ ಪಶ್ಚಿಮಾಂಗದಲಿ
ಹರಿಯಭಯಕರವೆತ್ತಿ ಯಮಜಾ
ದ್ಯರನು ಸಂತೈಸಿದನು ರೋಷ
ಸ್ಫುರಣವಡಗಿತು ಸುಬಲಸುತೆಗಿನ್ನಂಜಬೇಡೆಂದ (ಗದಾ ಪರ್ವ, ೧೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧರ್ಮಜನ ಉಗುರುಗಳು ಉರಿದುಹೋದವು. ದುರ್ವಾಸನೆ ಹೊಗೆಗಳು ಹಬ್ಬಲು ಭೀಮಾರ್ಜುನರು ಶ್ರೀಕೃಷ್ಣನ ಹಿಂದೆ ಹೋಗಿ ಅವಿತುಕೊಂಡರು. ಆಗ ಶ್ರೀಕೃಷ್ಣನು ಅಭಯಕರವನ್ನೆತ್ತಿ ಪಾಂಡವರನ್ನು ಸಂತೈಸಿ ಗಾಂಧಾರಿಯ ಕೋಪವು ಅಡಗಿತು, ಇನ್ನು ನೀವೆಲ್ಲಾ ಅಂಜದಿರಿ ಎಂದು ಹೇಳಿದನು.

ಅರ್ಥ:
ಉರಿ: ಬೆಂಕಿ; ಅರಸ: ರಾಜ; ನಖ: ಬೆರಳು; ನಿಕರ: ಗುಂಪು; ಹೊಗೆ: ಧೂಮ; ಕೌರು: ಸುಟ್ಟವಾಸನೆ, ಕೆಟ್ಟ ನಾತ; ಓಡು: ಧಾವಿಸು; ಹೊಕ್ಕು: ಸೇರು; ನರ: ಅರ್ಜುನ; ವೃಕೋದರ: ಭೀಮ; ಅಸುರರಿಪು: ಕೃಷ್ಣ; ಪಶ್ಚಿಮ: ಹಿಂದೆ; ಹರಿ: ವಿಷ್ಣು; ಅಭಯ:ರಕ್ಷಣೆ, ನಿರ್ಭಯತೆ; ಕರ: ಹಸ್ತ; ಯಮಜ: ಧರ್ಮಜ; ಆದಿ: ಮುಂತಾದ; ಸಂತೈಸು: ಸಮಾಧಾನ ಪಡಿಸು; ರೋಷ: ಕೋಪ; ಸ್ಫುರಣ: ನಡುಗುವುದು, ಕಂಪನ; ಅಡಗು: ಮರೆಮಾಡು, ಅವಿತುಕೋ; ಸುಬಲಸುತೆ: ಗಾಂಧಾರಿ; ಸುತೆ: ಮಗಳು; ಅಂಜು: ಹೆದರು; ಬೇಡ: ತ್ಯಜಿಸು;

ಪದವಿಂಗಡಣೆ:
ಉರಿದವ್+ಅರಸನ +ನಖ+ನಿಕರ +ಹೊಗೆವ್
ಎರಸಿ +ಕೌರಿಡಲ್+ಓಡಿ +ಹೊಕ್ಕರು
ನರ+ವೃಕೋದರರ್+ಅಸುರರಿಪುವಿನ +ಪಶ್ಚಿಮಾಂಗದಲಿ
ಹರಿ+ಅಭಯ+ಕರವ್+ ಎತ್ತಿ+ ಯಮಜಾ
ದ್ಯರನು +ಸಂತೈಸಿದನು +ರೋಷ
ಸ್ಫುರಣವ್+ಅಡಗಿತು +ಸುಬಲಸುತೆಗಿನ್ನ್+ಅಂಜಬೇಡೆಂದ

ಅಚ್ಚರಿ:
(೧) ಭೀಮಾರ್ಜುನರ ಭಯವನ್ನು ತೋರಿಸುವ ಪರಿ – ಹೊಕ್ಕರು ನರವೃಕೋದರರಸುರರಿಪುವಿನ ಪಶ್ಚಿಮಾಂಗದಲಿ
(೨) ಹರಿ, ಅಸುರರಿಪು – ಕೃಷ್ಣನನ್ನು ಕರೆದ ಪರಿ
(೩) ದ್ರೌಪದಿಯನ್ನು ಸುಬಲಸುತೆ ಎಂದು ಕರೆದಿರುವುದು

ಪದ್ಯ ೬೬: ಗಾಂಧಾರಿಯಲ್ಲಿ ಯಾವ ಝಳವು ಕುಗ್ಗಿತು?

ನನೆದುದಂತಃಕರಣ ಕರುಣಾ
ವಿನುತ ರಸದಲಿ ಖತಿಯ ಝಳ ಝೊ
ಮ್ಮಿನಲಿ ಜಡಿದುದು ಜಾರಿತಗ್ಗದ ಪುತ್ರಶತಶೋಕ
ಜನಪ ಕೇಳೈ ರಾಜಸದ ಸಂ
ಜನಿತ ತಾಮಸಬೀಜಶೇಷದ
ವನಜಮುಖಿ ನೋಡಿದಳು ನಖಪಂಕ್ತಿಗಳನವನಿಪನ (ಗದಾ ಪರ್ವ, ೧೧ ಸಂಧಿ, ೬೬ ಪದ್ಯ)

ತಾತ್ಪರ್ಯ:
ಗಾಂಧಾರಿಯ ಅಂತಃಕರಣವು ನನೆದುಹೋಯಿತು. ಕರುಣಾರಸದಿಂದ ಕೋಪದ ತಾಪ ಕುಗ್ಗಿತು. ರಾಜ ಜನಮೇಜಯ ಕೇಳು, ರಾಜಸಗುಣದಿಂದ ಜನಿಸಿದ ಕೋಪಶೇಷದಿಂದ (ತಾಮಸ ಬೀಜ) ಅವಳು ಧರ್ಮಜನ ಉಗುರುಗಳ ಸಾಲನ್ನು ನೋಡಿದಳು.

ಅರ್ಥ:
ನನೆ: ತೋಯು, ಒದ್ದೆಯಾಗು; ಅಂತಃಕರಣ: ಒಳ ಮನಸ್ಸು; ಕರುಣೆ: ದಯೆ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ರಸ: ಸಾರ; ಖತಿ: ಕೋಪ; ಝಳ: ಪ್ರಕಾಶ; ಜಡಿ: ಅಲ್ಲಾಡು, ನಡುಗು, ಝಳಪಿಸು; ಜಾರು: ಕಡಿಮೆಯಾಗು, ಬೀಳು; ಅಗ್ಗ: ಶ್ರೇಷ್ಠ; ಪುತ್ರ: ಸುತ; ಶತ: ನೂರು; ಶೋಕ: ದುಃಖ; ಜನಪ: ರಾಜ; ಕೇಳು: ಆಲಿಸು; ರಾಜಸ: ಕಾಮ ಕ್ರೋಧಗಳಿಂದ ಕೂಡಿದ ಗುಣ, ರಜೋಗುಣ; ಸಂಜನಿತ: ಹುಟ್ಟಿದ; ತಾಮಸ: ಕತ್ತಲೆ, ಅಂಧಕಾರ; ಬೀಜ: ಮೂಲ, ಕಾರಣ; ವನಜಮುಖಿ: ಕಮಲದಂತ ಮುಖವುಳ್ಳವಳು; ನೋಡು: ವೀಕ್ಷಿಸು; ನಖ: ಉಗುರು; ಪಂಕ್ತಿ: ಸಾಲು; ಅವನಿಪ: ರಾಜ;

ಪದವಿಂಗಡಣೆ:
ನನೆದುದ್+ಅಂತಃಕರಣ +ಕರುಣಾ
ವಿನುತ +ರಸದಲಿ +ಖತಿಯ +ಝಳ +ಝೊ
ಮ್ಮಿನಲಿ +ಜಡಿದುದು +ಜಾರಿತ್+ಅಗ್ಗದ+ ಪುತ್ರ+ಶತ+ಶೋಕ
ಜನಪ +ಕೇಳೈ +ರಾಜಸದ +ಸಂ
ಜನಿತ +ತಾಮಸ+ಬೀಜ+ಶೇಷದ
ವನಜಮುಖಿ +ನೋಡಿದಳು +ನಖ+ಪಂಕ್ತಿಗಳನ್+ಅವನಿಪನ

ಅಚ್ಚರಿ:
(೧) ಗಾಂಧಾರಿಯ ಭಾವವನ್ನು ವಿವರಿಸುವ ಪರಿ – ರಾಜಸದ ಸಂಜನಿತ ತಾಮಸಬೀಜಶೇಷದ
ವನಜಮುಖಿ
(೨) ಜ ಕಾರದ ಸಾಲು ಪದ – ಝಳ ಝೊಮ್ಮಿನಲಿ ಜಡಿದುದು ಜಾರಿತಗ್ಗದ

ಪದ್ಯ ೬೫: ಧರ್ಮಜನು ಗಾಂಧಾರಿಯ ಬಳಿ ಏನೆಂದು ಬೇಡಿದನು?

ಶಾಪವನು ನೀ ಹೆಸರಿಸೌ ಸ
ರ್ವಾಪರಾಧಿಗಳಾವು ನಿಮ್ಮಯ
ಕೋಪ ತಿಳಿಯಲಿ ತಾಯೆ ಫಲಿಸಲಿ ಬಂಧುವಧೆ ನಮಗೆ
ನೀ ಪತಿವ್ರತೆ ನಿನ್ನ ಖತಿ ಜೀ
ವಾಪಹಾರವು ತಮಗೆ ನಿಮ್ಮನು
ತಾಪವಡಗಲಿ ತನ್ನನುರುಹೆಂದೆರಗಿದನು ಪದಕೆ (ಗದಾ ಪರ್ವ, ೧೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ತಾಯೇ, ನಾವು ಸರ್ವಾಪರಾಧಿಗಳು, ನೀನು ಹೇಗೆ ಶಪಿಸಬೇಕೆಂದಿರುವೆಯೋ ಹಾಗೆ ಶಪಿಸು. ಪತಿವ್ರತೆಯಾದ ನಿನ್ನ ಕೋಪವು ನಮ್ಮ ಜೀವನವನ್ನೇ ಅಪಹರಿಸುತ್ತದೆ. ನನ್ನನ್ನು ಸುಟ್ಟುಹಾಕು, ನಿನ್ನ ಶೋಕವಡಗಲಿ ಎಂದು ಗಾಂಧಾರಿಯ ಪಾದಕ್ಕೆ ನಮಸ್ಕರಿಸಿದನು.

ಅರ್ಥ:
ಶಾಪ: ನಿಷ್ಠುರದ ನುಡಿ; ಹೆಸರಿಸು: ಹೇಳು; ಸರ್ವ: ಎಲ್ಲಾ; ಅಪರಾಧಿ: ತಪ್ಪು ಮಾಡಿದವ; ಕೋಪ: ಖತಿ; ತಿಳಿ: ಅರಿವು; ತಾಯೆ: ಮಾತೆ; ಫಲ: ಪರಿಣಾಮ, ಫಲಿತಾಂಶ; ಬಂಧು: ಸಂಬಂಧಿಕ; ವಧೆ: ಕೊಲ್ಲು; ಪತಿವ್ರತೆ: ಸಾಧ್ವಿ, ಗರತಿ; ಖತಿ: ಕೋಪ; ಜೀವ: ಪ್ರಾಣ; ಅಪಹಾರ: ಹೋಗಲಾಡಿಸು; ತಾಪ: ಸಂಕಟ, ಕಷ್ಟ, ಬಿಸಿ; ಅಡಗು: ಕಡಿಮೆಯಾಗು, ಮರೆಯಾಗು; ಉರುಹು: ಸುಡು, ತಾಪಗೊಳಿಸು; ಎರಗು: ನಮಸ್ಕರಿಸು; ಪದ: ಚರಣ; ಅನುತಾಪ: ದುಃಖ;

ಪದವಿಂಗಡಣೆ:
ಶಾಪವನು +ನೀ +ಹೆಸರಿಸೌ +ಸರ್ವ
ಅಪರಾಧಿಗಳಾವು +ನಿಮ್ಮಯ
ಕೋಪ +ತಿಳಿಯಲಿ +ತಾಯೆ +ಫಲಿಸಲಿ +ಬಂಧುವಧೆ +ನಮಗೆ
ನೀ +ಪತಿವ್ರತೆ+ ನಿನ್ನ+ ಖತಿ +ಜೀವ
ಅಪಹಾರವು +ತಮಗೆ +ನಿಮ್ಮ್
ಅನುತಾಪವ್+ಅಡಗಲಿ +ತನ್ನನ್+ಉರುಹೆಂದ್+ಎರಗಿದನು +ಪದಕೆ

ಅಚ್ಚರಿ:
(೧) ಅಡಗಲಿ, ತಿಳಿಯಲಿ – ಪ್ರಾಸ ಪದಗಳು
(೨) ಗಾಂಧಾರಿಯನ್ನು ಕರೆದ ಪರಿ – ಪತಿವ್ರತೆ, ತಾಯೆ
(೩) ಅಪರಾಧಿ, ಅಪಹಾರ, ಅನುತಾಪ – ಪದಗಳ ಬಳಕೆ

ಪದ್ಯ ೬೪: ಧರ್ಮಜನು ಗಾಂಧಾರಿಗೆ ತನ್ನನ್ನು ಶಪಿಸೆಂದು ಏಕೆ ಹೇಳಿದನು?

ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ (ಗದಾ ಪರ್ವ, ೧೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಗಾಂಧಾರಿಯ ನಿಷ್ಠುರದ ಮಾತುಗಳನ್ನು ಕೇಳಿ ಧರ್ಮಜನು ನಡನಡುಗಿ, ಕೈಮುಗಿದು ಅತಿಶಯ ವಿನಯದಿಂದ, ಗಾಂಧಾರಿ, ಕರುಣಿಸು, ನೀನು ಕುರುವಂಶದ ತಾಯಿ, ಕೋಪಗೊಂಡಿರುವೆ, ಶಾಪರ್ಹನಾದ ನನ್ನನ್ನು ಶಪಿಸು ಎಂದು ಬೇಡಿಕೊಂಡನು.

ಅರ್ಥ:
ಧರಣಿಪತಿ: ರಾಜ; ಕೇಳ್: ಆಲಿಸು; ಸುಬಲಜೆ: ಗಾಂಧಾರಿ; ನಿಷ್ಠುರ: ಕಠಿಣ, ಒರಟಾದ; ನುಡಿ: ಮಾತು; ನಡುಗು: ಕಂಪಿಸು, ಹೆದರು; ಭೂಪತಿ: ರಾಜ; ಕರ: ಕೈ, ಹಸ್ತ; ಮುಗಿದು: ನಮಸ್ಕರಿಸು; ವಿನಯ: ಒಳ್ಳೆಯತನ, ಸೌಜನ್ಯ; ಬಾಗಿ: ಎರಗು; ಭೀತಿ: ಭಯ; ಕರುಣೆ: ದಯೆ; ನಿರ್ಮಳ: ಶುದ್ಧ; ಅನ್ವಯ: ವಂಶ; ಕೋಪ: ಖತಿ; ಸ್ಫುರಣ: ನಡುಗುವುದು, ಕಂಪನ; ಶಪಿಸು: ನಿಷ್ಠುರದ ನುಡಿ; ಅರುಹ: ಅರ್ಹ;

ಪದವಿಂಗಡಣೆ:
ಧರಣಿಪತಿ+ ಕೇಳ್ +ಸುಬಲಜೆಯ +ನಿ
ಷ್ಠುರದ +ನುಡಿಯಲಿ +ನಡುಗಿ +ಭೂಪತಿ
ಕರವ+ ಮುಗಿದ್+ಅತಿ+ವಿನಯಭರದಲಿ +ಬಾಗಿ +ಭೀತಿಯಲಿ
ಕರುಣಿಸೌ +ಗಾಂಧಾರಿ +ನಿರ್ಮಳ
ಕುರುಕುಲ+ಅನ್ವಯ+ಜನನಿ +ಕೋಪ
ಸ್ಫುರಣದಲಿ+ ಶಪಿಸೆನಗೆ +ಶಾಪಾರುಹನು +ತಾನೆಂದ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಷ್ಠುರದ ನುಡಿಯಲಿ ನಡುಗಿ
(೨) ಗಾಂಧಾರಿಯನ್ನು ಕರೆದ ಪರಿ – ನಿರ್ಮಳ ಕುರುಕುಲಾನ್ವಯಜನನಿ, ಸುಬಲಜೆ