ಪದ್ಯ ೭೩: ಯುದ್ಧದಲ್ಲಿ ಯಾರು ಚಾತುರ್ಬಲವನ್ನು ಸಂಹರಿಸಿದರು?

ಸರಿಯಲೌ ಸುತಶೋಕ ನಮ್ಮಿ
ಬ್ಬರಿಗೆ ನಮ್ಮೊಳುವೆರೆಸಿ ವೈರೋ
ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ
ಎರಡು ಬಲದಲಿ ಸಕಲ ಭೂಮೀ
ಶ್ವರರ ಚಾತುರ್ಬಲವನುಪಸಂ
ಹರಿಸಿದಾತನು ತಾನೆ ಗದುಗಿನ ವೀರನಾರಯಣ (ಗದಾ ಪರ್ವ, ೧೧ ಸಂಧಿ, ೭೩ ಪದ್ಯ)

ತಾತ್ಪರ್ಯ:
ದ್ರೌಪದಿಯು ನುಡಿಯುತ್ತಾ, ನಮ್ಮಿಬ್ಬರಿಗೂ ಪುತ್ರಶೋಕವು ಒಂದೇ ರೀತಿಯಾಗಿದೆ. ಗದುಗಿನ ವೀರನಾರಾಯಣನು ನಮ್ಮಲ್ಲಿ ಸೇರಿ ವೈರತ್ವವನ್ನು ಬೆಳಸಿ, ಭಾರತಯುದ್ಧದಲ್ಲಿ ಎರಡೂ ಪಕ್ಷದ ಚತುರ್ಬಲವನ್ನು ಸಂಹರಿಸಿದನಲ್ಲವೇ ಎಂದು ನುಡಿದಳು.

ಅರ್ಥ:
ಸರಿ: ಸಮ; ಸುತ: ಪುತ್ರ; ಶೋಕ: ದುಃಖ; ವೈರ: ಶತ್ರು; ಉತ್ಕರ: ರಾಶಿ, ಸಮೂಹ; ರಣ: ಯುದ್ಧ; ವಿಧಾನ: ರೀತಿ; ರಚಿಸು: ನಿರ್ಮಿಸು; ಬಲ: ಸೈನ್ಯ; ಸಕಲ: ಎಲ್ಲಾ; ಭೂಮೀಶ್ವರ: ರಾಜ; ಚಾತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಉಪಸಂಹರಿಸು: ನಾಶಮಾಡು;

ಪದವಿಂಗಡಣೆ:
ಸರಿಯಲೌ +ಸುತ+ಶೋಕ +ನಮ್ಮಿ
ಬ್ಬರಿಗೆ+ ನಮ್ಮೊಳುವ್+ಎರೆಸಿ +ವೈರೋ
ತ್ಕರವಿ+ಸಂಸ್ಥುಳ+ರಣ+ವಿಧಾನವ +ನಮ್ಮೊಳಗೆ +ರಚಿಸಿ
ಎರಡು +ಬಲದಲಿ +ಸಕಲ+ ಭೂಮೀ
ಶ್ವರರ+ ಚಾತುರ್ಬಲವನ್+ಉಪಸಂ
ಹರಿಸಿದಾತನು +ತಾನೆ +ಗದುಗಿನ +ವೀರನಾರಯಣ

ಅಚ್ಚರಿ:
(೧) ನಮ್ಮೊಳುವೆರೆಸಿ, ನಮ್ಮೊಳಗೆ ರಚಿಸಿ – ಪದದ ರಚನೆ

ಪದ್ಯ ೭೭: ಕೃಷ್ಣನು ಅರ್ಜುನನಿಗೆ ಯಾವ ಅಸ್ತ್ರವನ್ನು ಹೂಡಲು ಹೇಳಿದನು?

ಕೆದರುತದೆ ನಮ್ಮವರ ದಳ ದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ (ಶಲ್ಯ ಪರ್ವ, ೩ ಸಂಧಿ, ೭೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಪರಾಕ್ರಮವನ್ನು ಕಂಡು ಶ್ರೀಕೃಷ್ಣನು ಪಾರ್ಥನಲ್ಲಿ ನುಡಿದನು, ಅರ್ಜುನಾ ಈಗ ನಮ್ಮ ಸೈನ್ಯ ಚದುರುತ್ತಿದೆ. ಧರ್ಮಜನ ಪರಾಕ್ರಮ ಕುಗ್ಗಿದೆ ದುರ್ಯೋಧನನೊಬ್ಬನೇ ನಮ್ಮ ಮಹಾರಥರನ್ನು ಸೋಲಿಸಿದನು. ಸೈನ್ಯದ ಗುಂಪು ಚೆಲ್ಲಿಹೋಯಿತು. ರಣವಾದ್ಯಗಳು ಮೌನವಾಗಿವೆ, ಈಗ ದಿವ್ಯಾಸ್ತ್ರಗಳನ್ನು ಪ್ರಯೋಗಿಸು ಎಂದು ಕೃಷ್ಣನು ಅಪ್ಪಣೆ ಮಾಡಿದನು.

ಅರ್ಥ:
ಕೆದರು: ಹರಡು; ದಳ: ಸೈನ್ಯ; ಅದಟು: ಪರಾಕ್ರಮ, ಶೌರ್ಯ; ಸುಕ್ಕು: ನಿರುತ್ಸಾಹ, ಮಂಕಾಗು; ರಾಯ: ರಾಜ; ಕದನ: ಯುದ್ಧ; ಕೈದೋರು: ಪ್ರದರ್ಶಿಸು; ಭಂಗಿಸು: ಅಪಮಾನ ಮಾಡು; ಮಹಾರಥ: ಪರಾಕ್ರಮಿ; ಹೊದರು: ಗುಂಪು, ಸಮೂಹ, ತೊಡಕು, ತೊಂದರೆ; ತಳಿತ: ಚಿಗುರು; ಲಗ್ಗೆ: ವಾದ್ಯಗಳಮೇಳ; ಮೋನ: ಮೌನ; ಮಗುಳು: ಹಿಂತಿರುಗು, ಪುನಃ; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ಕೈಮಾಡು: ತೊಡು, ಪ್ರಯೋಗಿಸು; ನುಡಿ: ಮಾತಾಡು;

ಪದವಿಂಗಡಣೆ:
ಕೆದರುತದೆ +ನಮ್ಮವರ +ದಳ +ದೊರೆ
ಅದಟು +ಸುಕ್ಕಿತು +ರಾಯನೊಬ್ಬನೆ
ಕದನದಲಿ +ಕೈದೋರಿ +ಭಂಗಿಸಿದನು+ ಮಹಾರಥರ
ಹೊದರು +ತಳಿತುದು +ಲಗ್ಗೆವರೆ+ ಮೋ
ನದಲಿ +ಮಗುಳ್ದುವು +ಪಾರ್ಥ +ದಿವ್ಯಾ
ಸ್ತ್ರದಲಿ +ಕೈಮಾಡೆಂದು +ನುಡಿದನು +ವೀರನಾರಯಣ

ಅಚ್ಚರಿ:
(೧) ದೊರೆ, ರಾಯ – ಸಮಾನಾರ್ಥಕ ಪದ
(೨) ಶಕ್ತಿ ಕಡಿಮೆಯಾಯಿತು ಎಂದು ಹೇಳಲು – ದೊರೆಯದಟು ಸುಕ್ಕಿತು
(೩) ವಾದ್ಯಗಳು ಸುಮ್ಮನಾದವು ಎಂದು ಹೇಳುವ ಪರಿ – ಲಗ್ಗೆವರೆ ಮೋನದಲಿ ಮಗುಳ್ದುವು

ಪದ್ಯ ೪೮: ಕರ್ಣಾದಿಗಳು ತಮ್ಮ ಪ್ರಾಣವನ್ನು ಯಾರಿಗೆ ಮಾರಿದ್ದರು?

ಮುನಿದು ಮಾಡುವುದೇನು ಕೃಷ್ಣನ
ನೆನಹು ಘನ ನಮ್ಮಸುವ ನಾವೀ
ಜನಪತಿಗೆ ಮಾರಿದೆವು ನಮಗೀ ಚಿಂತೆಯೇಕೆನುತ
ಇನಸುತಾದಿಗಳಿದ್ದರಿತ್ತಲು
ಮನದ ಹರುಷದ ಹರಹಿನಲಿ ಪಾ
ರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ (ದ್ರೋಣ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಾವು ಸಿಟ್ಟಾಗಿ ಏನುಮಾಡಲು ಸಾಧ್ಯ. ಕೃಷ್ಣನ ಸಂಕಲ್ಪವು ಅಭೇದ್ಯ, ನಾವೋ ನಮ್ಮ ಪ್ರಾಣಗಳನ್ನು ಕೌರವನಿಗೆ ಮಾರಿಕೊಂಡಿದ್ದೇವೆ. ಚಿಂತಿಸಿ ಏನು ಪ್ರಯೋಜನ ಎಂದು ಕರ್ಣನೇ ಮೊದಲಾದವರು ವಿಷಾದದ ಕಡಲಿನಲ್ಲಿದ್ದರು. ಇತ್ತ ಗದುಗಿನ ವೀರನಾರಯಣನು ಅರ್ಜುನನ ರಥವನ್ನು ಹಿಂದಿರುಗಿಸಿದನು.

ಅರ್ಥ:
ಮುನಿ: ಕೋಪ, ಸಿಟ್ಟು; ನೆನಹು: ನೆನಪು; ಘನ: ದೊಡ್ಡ; ಅಸು: ಪ್ರಾಣ; ಜನಪ: ರಾಜ; ಮಾರು: ವಿಕ್ರಯಿಸು; ಚಿಂತೆ: ಯೋಚನೆ; ಇನ: ಸೂರ್ಯ; ಸುತ: ಮಗ; ಆದಿ: ಮೊದಲಾದ; ಮನ: ಮನಸ್ಸು; ಹರುಷ: ಸಂತಸ; ಹರಹು: ವಿಸ್ತಾರ, ವೈಶಾಲ್ಯ; ತಿರುಹು: ಹಿಂದಿರುಗಿಸು;

ಪದವಿಂಗಡಣೆ:
ಮುನಿದು +ಮಾಡುವುದೇನು +ಕೃಷ್ಣನ
ನೆನಹು +ಘನ +ನಮ್ಮ್+ಅಸುವ +ನಾವ್+ಈ+
ಜನಪತಿಗೆ +ಮಾರಿದೆವು +ನಮಗೀ +ಚಿಂತೆ+ಏಕೆನುತ
ಇನಸುತಾದಿಗಳಿದ್ದರ್+ಇತ್ತಲು
ಮನದ +ಹರುಷದ +ಹರಹಿನಲಿ+ ಪಾ
ರ್ಥನ +ರಥವ +ತಿರುಹಿದನು+ ಗದುಗಿನ+ ವೀರನಾರಯಣ

ಅಚ್ಚರಿ:
(೧) ಕೃಷ್ಣನ ಸಂತಸ ಮತ್ತು ಕಾರ್ಯ – ಮನದ ಹರುಷದ ಹರಹಿನಲಿ ಪಾರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ

ಪದ್ಯ ೬೩: ಪಾಂಡವರು ಯಾರ ಪ್ರೀತಿಗೆ ಪಾತ್ರರಾಗಿದ್ದರು?

ದಾನವರು ಬಲುಗೈಗಳಪ್ರತಿ
ಮಾನರಹುದಾದಡೆಯು ಸಮರದೊ
ಳಾನಲಸದಳಮಸುರರಿಗೆ ಸುರರಿಗೆ ಜಯಾಭ್ಯುದಯ
ಏನ ಹೇಳುವುದಲ್ಲಿ ಸುಭಟ ನಿ
ಧಾನರಿದ್ದುದು ಪಾಂಡವರೊಳವ
ಧಾನಗುಂದನು ರಾಯ ಗದುಗಿನ ವೀರನಾರಯಣ (ದ್ರೋಣ ಪರ್ವ, ೧೦ ಸಂಧಿ, ೬೩ ಪದ್ಯ)

ತಾತ್ಪರ್ಯ:
ದಾನವರು ಮಹಾಬಲಶಾಲಿಗಳಾದರೂ, ಅಸಮಾನರಾದರೂ, ಯುದ್ಧದಲ್ಲಿ ದೇವತೆಗಳನ್ನು ಜಯಿಸಲಾರರು, ಜಯದ ಅಭ್ಯುದಯ ದೇವತೆಗಳಿಗೆ ಸೇರಿದ್ದು. ಅತ್ತ ಮಹಾ ಶೂರರಿದ್ದರೂ ಪಾಂಡವರಲ್ಲಿ ವೀರನಾರಾಯಣನ ಪ್ರೀತಿ ತಪ್ಪುವುದಿಲ್ಲ.

ಅರ್ಥ:
ದಾನವ: ರಾಕ್ಷಸ; ಬಲುಗೈ: ಬಲಶಾಲಿ; ಪ್ರತಿಮಾನ: ಅಸಮಾನ; ಸಮರ: ಯುದ್ಧ; ಅನಲ: ಬೆಂಕಿ; ಅಸುರ: ರಾಕ್ಷಸ; ಸುರ: ದೇವತೆ; ಜಯ: ಗೆಲುವು; ಅಭ್ಯುದಯ: ಏಳಿಗೆ; ಹೇಳು: ತಿಳಿಸು; ಸುಭಟ: ಪರಾಕ್ರಮಿ; ನಿಧಾನ: ವಿಳಂಬ, ಸಾವಕಾಶ; ಅವಧಾನ: ಏಕಚಿತ್ತತೆ; ಕುಂದು: ಕೊರತೆ; ರಾಯ: ಒಡೆಯ;

ಪದವಿಂಗಡಣೆ:
ದಾನವರು+ ಬಲುಗೈಗಳ+ಪ್ರತಿ
ಮಾನರಹುದ್+ಆದಡೆಯು +ಸಮರದೊಳ್
ಅನಲ+ಸದಳಂ+ಅಸುರರಿಗೆ +ಸುರರಿಗೆ +ಜಯ+ಅಭ್ಯುದಯ
ಏನ+ ಹೇಳುವುದಲ್ಲಿ +ಸುಭಟ +ನಿ
ಧಾನರಿದ್ದುದು +ಪಾಂಡವರೊಳ್+ಅವ
ಧಾನಗುಂದನು +ರಾಯ +ಗದುಗಿನ+ ವೀರನಾರಯಣ

ಅಚ್ಚರಿ:
(೧) ಪಾಂಡವರ ಶಕ್ತಿ – ಪಾಂಡವರೊಳವಧಾನಗುಂದನು ರಾಯ ಗದುಗಿನ ವೀರನಾರಯಣ
(೨) ಅಸುರ, ಸುರ – ವಿರುದ್ಧ ಪದ
(೩) ದಾನವ, ಅಸುರ – ಸಮಾನಾರ್ಥಕ ಪದ

ಪದ್ಯ ೬೮: ದ್ರೋಣನ ರಚನೆಯನ್ನು ಕೃಷ್ಣನು ಯಾರಿಗೆ ಹೇಳಿದನು?

ಬೀಳುಕೊಂಡುದು ರಾಜಸಭೆ ತ
ಮ್ಮಾಲಯಕೆ ಸೈಂಧವನು ಚಿಂತಾ
ಲೋಲನಿರ್ದನು ಮರಣಜೀವನ ಜಾತ ಸಂಶಯನು
ಕೋಲಗುರುವಿನ ವಿವಿಧ ರಚನೆಯ
ಕೇಳಿದನು ನಸುನಗುತ ಪಾರ್ಥಗೆ
ಹೇಳಿದನು ಕರುಣದಲಿ ಗದುಗಿನ ವೀರನಾರಯಣ (ದ್ರೋಣ ಪರ್ವ, ೮ ಸಂಧಿ, ೬೮ ಪದ್ಯ
)

ತಾತ್ಪರ್ಯ:
ರಾಜಸಭೆಯು ವಿಸರ್ಜಿಸಿತು. ಸೈಂಧವನು ತನ್ನ ಅರಮನೆಗೆ ಬಂದು ನಾಳೆ ನಾನು ಸಾಯುತ್ತೇನೋ, ಬದುಕುವೆನೋ ಎಂಬ ಸಂಶಯವು ಅವನಲ್ಲಿ ಹುಟ್ಟಿತು. ಶ್ರೀಕೃಷ್ಣನು ತನ್ನ ಬೇಹುಗಾರರಿಂದ ದ್ರೋಣನ ವ್ಯೂಹ ರಚನೆಯನ್ನು ನಸುನಗುತ್ತಾ ಕೇಳಿ ಅರ್ಜುನನಿಗೆ ಅದನ್ನು ಕರುಣೆಯಿಮ್ದ ಹೇಳಿದನು.

ಅರ್ಥ:
ಬೀಳುಕೊಂಡು: ತೆರಳು; ರಾಜಸಭೆ: ಓಲಗ; ಆಲಯ: ಮನೆ; ಚಿಂತಾಲೋಲ: ಚಿಂತೆಯಲ್ಲಿ ಮಗ್ನನಾಗಿ; ಲೋಲ: ಪ್ರೀತಿ; ಮರಣ; ಸಾವು: ಜೀವನ: ಪ್ರಾಣ; ಜಾತ: ಹುಟ್ಟಿದ; ಸಂಶಯ: ಅನುಮಾನ; ಕೋಲ: ಬಾಣ; ಗುರು: ಆಚಾರ್ಯ; ವಿವಿಧ: ಹಲವಾರು; ರಚನೆ: ನಿರ್ಮಾಣ; ಕೇಳು: ಆಲಿಸು; ನಸುನಗು: ಹಸನ್ಮುಖ; ಹೇಳು: ತಿಳಿಸು; ಕರುಣೆ: ದಯೆ;

ಪದವಿಂಗಡಣೆ:
ಬೀಳುಕೊಂಡುದು +ರಾಜಸಭೆ +ತ
ಮ್ಮಾಲಯಕೆ +ಸೈಂಧವನು +ಚಿಂತಾ
ಲೋಲನಿರ್ದನು +ಮರಣ+ಜೀವನ +ಜಾತ +ಸಂಶಯನು
ಕೋಲಗುರುವಿನ +ವಿವಿಧ +ರಚನೆಯ
ಕೇಳಿದನು +ನಸುನಗುತ+ ಪಾರ್ಥಗೆ
ಹೇಳಿದನು +ಕರುಣದಲಿ +ಗದುಗಿನ+ ವೀರನಾರಯಣ

ಅಚ್ಚರಿ:
(೧) ಕೇಳಿದನು, ಹೇಳಿದನು – ಪ್ರಾಸ ಪದ
(೨) ಸೈಂಧವನ ಸಂಶಯ – ಸೈಂಧವನು ಚಿಂತಾಲೋಲನಿರ್ದನು ಮರಣಜೀವನ ಜಾತ ಸಂಶಯನು

ಪದ್ಯ ೫೬: ವೀರನಾರಾಯಣನನ್ನು ಹೇಗೆ ಭಜಿಸಿದರು?

ಹರಿನಮೋ ಜಯ ಭಕ್ತರಘಸಂ
ಹರ ನಮೋ ಜಯ ಸಕಲ ಭುವನೇ
ಶ್ವರ ನಮೋ ಜಯ ಕೃಷ್ಣಕೇಶವ ವಿಷ್ಣುವಾಮನನೆ
ಪರಮ ಪುಣ್ಯ ಶ್ಲೋಕ ಜಯ ಜಗ
ಭರಿತ ನಿರ್ಮಳ ರೂಪ ಜಯ ಜಯ
ಕರುಣಿ ರಕ್ಷಿಸುವೊಲಿದು ಗದುಗಿನ ವೀರನಾರಯಣ (ಅರಣ್ಯ ಪರ್ವ, ೨೬ ಸಂಧಿ, ೫೬ ಪದ್ಯ)

ತಾತ್ಪರ್ಯ:
ಮನೋಹರನಾದ ಶ್ರೀಹರಿಯೇ ನಿನಗೆ ನಮ್ಮ ನಮಸ್ಕಾರಗಳು, ಭಕ್ತರ ಪಾಪ, ಕಷ್ಟಗಳನ್ನು ದೂರಮಾಡುವವನೇ ನಿನಗೆ ಜಯವಾಗಲಿ, ಸಕಲ ಲೋಕಗಳ ಒಡೆಯನೇ ನಿನಗೆ ನಮಸ್ಕಾರಗಳು, ಕೃಷ್ಣ, ಕೇಶವ, ವಿಷ್ಣು, ವಾಮನ ನಿನಗೆ ಜಯವಾಗಲಿ, ಸಮಸ್ತ ಜಗತ್ತನ್ನೂ ತುಂಬಿರುವ ಪರಮ ಪುಣ್ಯಶ್ಲೋಕನೇ ನಿನಗೆ ಜಯವಾಗಲಿ, ಗದುಗಿನ ವೀರನಾರಾಯಣನೇ ನಮ್ಮನ್ನು ರಕ್ಷಿಸು ಎನ್ನುತ್ತಾ ಪಾಂಡವರು ವರವಾಸವನ್ನು ಮುಗಿಸಿ ಅಜ್ಞಾತವಾಸಕ್ಕೆ ತಮ್ಮ ಪ್ರಯಾಣವನ್ನು ಮಾಡಿದರು.

ಅರ್ಥ:
ಹರಿ: ವಿಷ್ಣು; ಜಯ: ಉಘೇ; ಭಕ್ತ: ಆರಾಧಕ; ಅಘ: ದುಃಖ, ಕಷ್ಟ; ಸಂಹರ: ನಾಶ; ಸಕಲ: ಎಲ್ಲಾ; ಭುವನ: ಪ್ರಪಂಚ; ಈಶ್ವರ: ಒಡೆಯ; ಪರಮ: ಶ್ರೇಷ್ಠ; ಪುಣ್ಯ: ಸದಾಚಾರ; ಶ್ಲೋಕ: ಕೀರ್ತಿ, ಯಶಸ್ಸು; ಭರಿತ: ತುಂಬಿದ; ನಿರ್ಮಳ: ಶುದ್ಧವಾದ; ರೂಪ: ಆಕಾರ; ಕರುಣೆ: ದಯೆ; ರಕ್ಷಿಸು: ಕಾಪಾದು; ಒಲಿ: ಪ್ರೀತಿ;

ಪದವಿಂಗಡಣೆ:
ಹರಿನಮೋ +ಜಯ +ಭಕ್ತರ್+ಅಘ+ಸಂ
ಹರ +ನಮೋ +ಜಯ +ಸಕಲ+ ಭುವನೇ
ಶ್ವರ +ನಮೋ +ಜಯ +ಕೃಷ್ಣ+ಕೇಶವ+ ವಿಷ್ಣು+ವಾಮನನೆ
ಪರಮ +ಪುಣ್ಯ +ಶ್ಲೋಕ +ಜಯ +ಜಗ
ಭರಿತ+ ನಿರ್ಮಳ +ರೂಪ +ಜಯ+ ಜಯ
ಕರುಣಿ +ರಕ್ಷಿಸು+ಒಲಿದು +ಗದುಗಿನ+ ವೀರನಾರಯಣ

ಅಚ್ಚರಿ:
(೧) ನಮೋ, ಜಯ – ೧-೩ ಸಾಲಿನ ೨,೩ ಪದಗಳು
(೨) ಹೊಗಳುವ ಪರಿ – ಪರಮ ಪುಣ್ಯ ಶ್ಲೋಕ ಜಯ, ಜಗಭರಿತ ನಿರ್ಮಳ ರೂಪ ಜಯ
(೩) ವಿಷ್ಣುವಿನ ಹಲವು ನಾಮಗಳು – ಹರಿ, ಅಘಸಂಹರ, ಕರುಣಿ, ವಿಷ್ಣು, ವಾಮನ, ಕೇಶವ, ಕೃಷ್ಣ, ವೀರನಾರಾಯಣ

ಪದ್ಯ ೪೧: ಚಿತ್ರಸೇನನು ಧರ್ಮಜನಿಗೇನು ಹೇಳಿದ?

ಸೋಲವೆಮ್ಮದು ನಿಮ್ಮ ತಮ್ಮನೆ
ಮೇಲುಗೈ ನಿಮ್ಮಡಿಗಳಾಜ್ಞಾ
ಪಾಲಕರು ಭೀಮಾರ್ಜುನರು ಮಾದ್ರೀಕುಮಾರಕರು
ಕಾಳಗದೊಳೆಮ್ಮಖಿಳ ಖಚರರ
ಧೂಳಿಪಟಮಾಡಿದನು ಲಕ್ಷ್ಮೀ
ಲೋಲ ನಿಮಗೊಲಿದಿಹನು ಗದುಗಿನ ವೀರನಾರಯಣ (ಅರಣ್ಯ ಪರ್ವ, ೨೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಧರ್ಮಜನ ಬಳಿ ಬಂದ ಚಿತ್ರಸೇನನು, ನಾವು ಸೋತೆವು, ನಿಮ್ಮ ತಮ್ಮನು ಶ್ರೇಷ್ಠ, ಯುದ್ಧದಲ್ಲಿ ಅವನದೇ ಮೇಲುಗೈಯಾಯಿತು, ಭೀಮಾರ್ಜುನರು, ನಕುಲ ಸಹದೇವರು ನಿಮ್ಮ ಆಜ್ಞೆಯನ್ನು ಪಾಲಿಸುತ್ತಾರೆ. ಅರ್ಜುನನು ಯುದ್ಧದಲ್ಲಿ ನಮ್ಮ ಗಂಧರ್ವ ಸೈನ್ಯವನ್ನು ನಾಶಮಾಡಿದ್ದಾನೆ. ಶ್ರೀಲಕ್ಷ್ಮೀರಮಣನಾದ ಗದುಗಿನ ವೀರನಾರಾಯಣನು ನಿಮಗೆ ಒಲಿದಿದ್ದಾನೆ ಎಂದು ಹೇಳಿದನು.

ಅರ್ಥ:
ಸೋಲು: ಪರಾಭವ; ತಮ್ಮ: ಅನುಜ; ಮೇಲುಗೈ: ಹೆಚ್ಚುಗಾರಿಕೆ; ಅಡಿ: ಪಾದ; ಆಜ್ಞೆ: ಅಪ್ಪಣೆ; ಪಾಲಕ: ರಕ್ಷಕ; ಕಾಳಗ: ಯುದ್ಧ; ಅಖಿಳ: ಎಲ್ಲಾ; ಧೂಳಿಪಟ: ನಾಶವಾಗುವಿಕೆ; ಲಕ್ಷ್ಮೀಲೋಲ: ಕೃಷ್ಣ; ಒಲಿ: ಪ್ರೀತಿಸು;

ಪದವಿಂಗಡಣೆ:
ಸೋಲವೆಮ್ಮದು +ನಿಮ್ಮ +ತಮ್ಮನೆ
ಮೇಲುಗೈ +ನಿಮ್ಮಡಿಗಳ್+ಆಜ್ಞಾ
ಪಾಲಕರು+ ಭೀಮಾರ್ಜುನರು +ಮಾದ್ರೀ+ಕುಮಾರಕರು
ಕಾಳಗದೊಳ್+ಎಮ್ಮ್+ಅಖಿಳ +ಖಚರರ
ಧೂಳಿಪಟ+ಮಾಡಿದನು +ಲಕ್ಷ್ಮೀ
ಲೋಲ +ನಿಮಗೊಲಿದಿಹನು +ಗದುಗಿನ+ ವೀರನಾರಯಣ

ಅಚ್ಚರಿ:
(೧) ಲಕ್ಷ್ಮೀಲೋಲ, ವೀರನಾರಯಣ – ಕೃಷ್ಣನನ್ನು ಕರೆದ ಪರಿ

ಪದ್ಯ ೪೬: ಶ್ರೀಕೃಷ್ಣನನ್ನು ಯಾರು ಬೀಳ್ಕೊಟ್ಟರು?

ಬಂದನಾ ಭೂಪತಿ ಮುರಾಂತಕ
ನಂದಣದ ಬಲ ದೆಸೆಯಲನಿಲಜ
ಮುಂದೆ ವಾಮದಿ ಪಾರ್ಥಯಮಳ ದ್ರೌಪದಾದೇವಿ
ಹಿಂದೆ ಬರೆ ಕಿರಿದೆಡೆಯಲಲ್ಲಿಯೆ
ನಿಂದು ಕಳುಹಿದನೆಲ್ಲರನು ಗೋ
ವಿಂದನೇರಿದ ರಥವ ಗದುಗಿನ ವೀರನಾರಯಣ (ಅರಣ್ಯ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಊರಿಗೆ ಹೊರಡಲು ಸಿದ್ಧನಾದನು. ಧರ್ಮರಾಯನು ಕೃಷ್ಣನ ಪಲ್ಲಕ್ಕಿಯ ಬಲಭಾಗದಲ್ಲಿಯೂ, ಅರ್ಜುನನು ಎಡಭಾಗದಲ್ಲಿಯೂ ಭೀಮನು ಮುಂಭಾಗದಲ್ಲಿ, ನಕುಲ ಸಹದೇವ ದ್ರೌಪದಿಯರು ಹಿಂಭಾಗದಲ್ಲಿ ನಡೆದು ಬಂದರು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಶ್ರೀಕೃಷ್ಣನು ನಿಂತು ಅವರೆಲ್ಲರನ್ನೂ ಹಿಂದಿರುಗಿಸಿ ತಾನು ದ್ವಾರಕೆಗೆ ಪ್ರಯಾಣ ಮುಂದುವರೆಸಿದನು.

ಅರ್ಥ:
ಬಂದು: ಆಗಮಿಸು; ಭೂಪತಿ: ರಾಜ; ಮುರಾಂತಕ: ಕೃಷ್ಣ; ಅಂದಣ: ಪಲ್ಲಕ್ಕಿ, ಮೇನೆ; ಬಲ: ದಕ್ಷಿಣ ಪಾರ್ಶ್ವ; ದೆಸೆ: ದಿಕ್ಕು; ಅನಿಲಜ: ಭೀಮ; ಅನಿಲ: ವಾಯು; ಮುಂದೆ: ಎದುರು; ವಾಮ: ಎಡಭಾಗ; ಹಿಂದೆ: ಹಿಂಬದಿ; ಬರೆ: ನಡೆ, ಚಲಿಸು; ಕಿರಿ: ಸ್ವಲ್ಪ, ಚಿಕ್ಕ; ನಿಂದು: ನಿಲ್ಲು; ಕಳುಹಿಸು: ಹಿಂದಿರುಗು; ಏರು: ಹತ್ತು; ರಥ: ಬಂಡಿ;

ಪದವಿಂಗಡಣೆ:
ಬಂದನಾ +ಭೂಪತಿ +ಮುರಾಂತಕನ್
ಅಂದಣದ +ಬಲ +ದೆಸೆಯಲ್+ಅನಿಲಜ
ಮುಂದೆ +ವಾಮದಿ+ ಪಾರ್ಥ+ಯಮಳ+ ದ್ರೌಪದಾದೇವಿ
ಹಿಂದೆ +ಬರೆ +ಕಿರಿದೆಡೆಯಲ್+ಅಲ್ಲಿಯೆ
ನಿಂದು +ಕಳುಹಿದನ್+ಎಲ್ಲರನು +ಗೋ
ವಿಂದನ್+ಏರಿದ +ರಥವ +ಗದುಗಿನ+ ವೀರನಾರಯಣ

ಅಚ್ಚರಿ:
(೧) ಮುರಾಂತಕ, ಗೋವಿಂದ, ವೀರನಾರಯಣ – ಕೃಷ್ಣನಿಗೆ ಬಳಸಿದ ಹೆಸರುಗಳು
(೨) ಬಲ, ವಾಮ – ವಿರುದ್ಧ ಪದ

ಪದ್ಯ ೮೧: ಕೃಷ್ಣನು ಯಾರಿಗೆ ಪಟ್ಟವನ್ನು ಕಟ್ಟಿದನು?

ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲು ಪೋಗಿನ ವಿಧಿವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ (ಸಭಾ ಪರ್ವ, ೧೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ಶಿಶುಪಾಲನ ಸಾವಿನ ಬಳಿಕ ಅವನ ಮಕ್ಕಳು ಅಳುತ್ತಾ ಕೃಷ್ಣನ ಬಳಿಗೆ ಬಂದು ಅವನ ಪಾದಗಳಿಗೆ ನಮಸ್ಕರಿಸಿದರು. ಕೃಷ್ಣನು ಅವರನ್ನು ಪ್ರೀತಿಯಿಂದ ಪೋಷಿಸಿ ಅವರ ಮೊರೆಯನ್ನು ಕೇಳಿ ಸಮಾಧಾನ ಪಡಿಸಿ, ಶಿಶುಪಾಲನ ಅಂತ್ಯಕ್ರಿಯೆಗಳನ್ನು ಮಾಡಿಸಿ ಅವನ ಮಗನಿಗೆ ಪಟ್ಟಾಭಿಷೇಕವನ್ನು ಮಾಡಿಸಿದನು.

ಅರ್ಥ:
ಗೋಳು: ಅಳು, ದುಃಖ; ಬಂದು: ಆಗಮಿಸು; ಎರಗು: ಬಾಗು, ನಮಸ್ಕರಿಸು; ತನುಜ: ಮಕ್ಕಳು; ಅಂಘ್ರಿ: ಪಾದ; ಲಾಲಿಸು: ಅಕ್ಕರೆಯನ್ನು ತೋರಿಸು; ಅನಿಬರು: ಅಷ್ಟುಜನ; ಸಂತೈಸು: ಸಮಾಧಾನ ಪಡಿಸು; ಕರುಣ: ದಯೆ; ಪೋಗು: ಹೋಗು, ಗಮಿಸು; ವಿಧಿ: ಆಜ್ಞೆ, ಆದೇಶ, ನಿಯಮ; ವಿಹಿತ: ಯೋಗ್ಯ, ಹೊಂದಿಸಿದ; ಕರ್ಮ: ಕಾರ್ಯದ ಫಲ; ಧರ್ಮ; ಆಳಿ: ಗುಂಪು, ಸಾಲು; ಮಾಳ್ದು: ಮಾಡಿ, ಆಚರಿಸಿ; ಮಗ: ಸುತ; ಕೃಪಾಳು: ಕರುಣಿ; ಪಟ್ಟ: ಸ್ಥಾನ; ಸೇಸೆ: ಮಂಗಳಾಕ್ಷತೆ; ನಾರಯಣ: ಕೃಷ್ಣ;

ಪದವಿಂಗಡಣೆ:
ಗೋಳಿಡುತ+ ಬಂದ್+ಎರಗಿದರು +ಶಿಶು
ಪಾಲ +ತನುಜರು +ಕೃಷ್ಣನ್+ಅಂಘ್ರಿಗೆ
ಲಾಲಿಸಿದನ್+ಅನಿಬರನು +ಸಂತೈಸಿದನು +ಕರುಣದಲಿ
ಮೇಲು +ಪೋಗಿನ +ವಿಧಿವಿಹಿತ +ಕ
ರ್ಮಾಳಿಗಳ +ಮಾಳ್ದವನ +ಮಗಗೆ +ಕೃ
ಪಾಳು +ಪಟ್ಟದ +ಸೇಸೆದಳಿದನು +ವೀರನಾರಯಣ

ಅಚ್ಚರಿ:
(೧) ತನುಜ, ಮಗ – ಸಮನಾರ್ಥಕ ಪದ
(೨) ಕೃಷ್ಣನ ಪ್ರೇಮ – ಲಾಲಿಸಿದನನಿಬರನು ಸಂತೈಸಿದನು ಕರುಣದಲಿ; ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ

ಪದ್ಯ ೨೨: ದುರ್ಯೋಧನನು ಹೇಗೆ ತನ್ನ ನಿರ್ಧಾರವನ್ನು ಹೇಳಿದನು?

ಕಾವನಾತನು ಕೊಲುವನಾತನು
ಸಾವೆನಾತನ ಕೈಯಬಾಯಲಿ
ನೀವು ಪಾಂಡವರೊಡನೆ ಸುಖದಲಿ ರಾಜ್ಯವಾಳುವುದು
ಸಾವ ನಾನಂಜದೊಡೆ ಬದುಕುವ
ನೀವು ಚಿಂತಿಸಲೇಕೆ ನಿಮ್ಮನು
ಕಾವನೈ ಕರುಣದಲಿ ಗದುಗಿನ ವೀರನಾರಯಣ (ಉದ್ಯೋಗ ಪರ್ವ, ೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತಾನು ಯುದ್ಧಕ್ಕೆ ಸಿದ್ಧನೆಂದು ಹೇಳುವ ಪರಿ ಈ ಪದ್ಯದಲ್ಲಿ ಕಾಣಬಹುದು. ಎಲ್ಲರ ಮಾತುಗಳನ್ನು ಕೇಳಿ, ಕಾಪಾಡುವನು, ಕೊಲ್ಲುವನು ಅವನೇ ಆಗಿರುವುದರಿಂದ ಅವನ ಕೈಯಲ್ಲೇ ಸಾಯುತ್ತೇನೆ. ನೀವು ಪಾಂಡವರೊಂದಿಗೆ ಸುಖವಾಗಿ ರಾಜ್ಯವನ್ನಾಳಿಕೊಂಡಿರಿ. ಸಾಯುವ ನನಗೇ ಹೆದರಿಕೆಯಿಲ್ಲ, ಬದುಕುವ ನಿಮಗೆ ಏನು ಚಿಂತೆ? ಗದುಗಿನ ವೀರನಾರಾಯಣನು ನಿಮ್ಮನ್ನು ಕರುಣೆಯಿಂದ ಕಾಪಾಡುತ್ತಾನೆ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಕಾವು: ಕಾವಲು, ರಕ್ಷಿಸು; ಕೊಲು: ಸಾಯಿಸು; ಸಾವು: ಮರಣ; ಸುಖ: ಸಂತೋಷ; ರಾಜ್ಯ: ದೇಶ; ಆಳು: ಅಧಿಕಾರ ನಡೆಸು; ಅಂಜಿಕೆ; ಹೆದರಿಕೆ; ಬದುಕು: ಜೀವಿಸು; ಚಿಂತೆ: ಯೋಚನೆ; ಕರುಣ: ದಯೆ;

ಪದವಿಂಗಡಣೆ:
ಕಾವನಾತನು+ ಕೊಲುವನಾತನು
ಸಾವೆನಾತನ +ಕೈಯಬಾಯಲಿ
ನೀವು +ಪಾಂಡವರೊಡನೆ +ಸುಖದಲಿ +ರಾಜ್ಯವಾಳುವುದು
ಸಾವ +ನಾನಂಜದೊಡೆ +ಬದುಕುವ
ನೀವು +ಚಿಂತಿಸಲೇಕೆ +ನಿಮ್ಮನು
ಕಾವನೈ +ಕರುಣದಲಿ +ಗದುಗಿನ +ವೀರನಾರಯಣ

ಅಚ್ಚರಿ:
(೧) ಕಾವ – ೧, ೬ ಸಾಲಿನ; ನೀವು – ೩, ೫ ಸಾಲಿನ; ಮೊದಲ ಪದ
(೨) ಕಾವ, ಕೊಲುವ, ಸಾವೆ – ನಾತನ ಪದದಿಂದ ಕೊನೆಗೊಳ್ಳುವ ಪದಗಳ ರಚನೆ
(೩) ಕೈಯಬಾಯಲಿ – ಕೈಯಿಂದಲೂ ಬಾಯಿಂದಲೂ, ಆಯುಧದಿಂದ ಮಾತಿನಿಂದ ಎಂಬ ಅರ್ಥದಿಂದ ರಚಿಸಿದ ಪದ