ಪದ್ಯ ೮೨: ಮೂದಲಿಸುವ ಮಾತುಗಳು ಏನನ್ನು ಪ್ರಜ್ವಲಿಸಿದವು?

ಕೇಳುತಿದ್ದರು ಪತಿಯ ಮೂದಲೆ
ಗಾಳಿಯಲೆ ದಳ್ಳಿಸುವ ಶೌರ್ಯ
ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ
ಆಳುತನವುಬ್ಬೆದ್ದು ಕಡು ಹೀ
ಹಾಳಿಕಾರರು ಕೈದುಕೊಂಡರು
ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ (ದ್ರೋಣ ಪರ್ವ, ೫ ಸಂಧಿ, ೮೨ ಪದ್ಯ)

ತಾತ್ಪರ್ಯ:
ಒಡೆಯನ ಹಂಗಿಸುವ ಮಾತುಗಳನ್ನು ಕೇಳಿದರು. ಮೂದಲಿಸುವ ಗಾಳಿ ಅವರ ಶೌರ್ಯದ ಜ್ವಾಲೆಯನ್ನು ಧಗ್ಗನೆ ಹೊತ್ತಿಸಿತು. ಅವರ ಪರಾಕ್ರಮವು ಉಬ್ಬಿ ಮುಖಗಳು ಕೋಪದಿಂದ ಕಠೋರವಾದವು. ತೆಗಳಿಕೆಯಿಂದ ನೊಂದು ಕೌರವವೀರರು ಆಯುಧಗಳನ್ನು ಹಿಡಿದು ಅಭಿಮನ್ಯುವನ್ನು ತಡೆದರು.

ಅರ್ಥ:
ಕೇಳು: ಆಲಿಸು; ಪತಿ: ಒಡೆಯ; ಮೂದಲೆ: ಹಂಗಿಸು, ಬಯ್ಗುಳ; ಗಾಳಿ: ವಾಯು, ಪವನ; ದಳ್ಳಿಸು: ಧಗ್ ಎಂದು ಉರಿ; ಶೌರ್ಯ: ಪರಾಕ್ರಮ; ಜ್ವಾಲೆ: ಬೆಂಕಿ; ಜಡಿ: ಬೆದರಿಕೆ; ಖಾತಿ: ಕೋಪ; ಹೊಗರು: ಕಾಂತಿ, ಪ್ರಕಾಶ; ಆನನ: ಮುಖ; ಆಳುತನ: ಪರಾಕ್ರಮ; ಉಬ್ಬೆದ್ದು: ಹೆಚ್ಚಾಗು; ಹೀಹಾಳಿ: ತೆಗಳಿಕೆ, ಅವಹೇಳನ; ಕೈದು: ಆಯುಧ; ಬಾಲಕ: ಚಿಕ್ಕವ; ತರುಬು: ತಡೆ, ನಿಲ್ಲಿಸು; ದೊರೆ: ರಾಜ, ಒಡೆಯ;

ಪದವಿಂಗಡಣೆ:
ಕೇಳುತಿದ್ದರು +ಪತಿಯ +ಮೂದಲೆ
ಗಾಳಿಯಲೆ +ದಳ್ಳಿಸುವ +ಶೌರ್ಯ
ಜ್ವಾಲೆ +ಜಡಿದುದು +ಖಾತಿಯಲಿ +ಹೊಗರ್+ಏರಿದ್+ಆನನದ
ಆಳುತನವ್+ಉಬ್ಬೆದ್ದು +ಕಡು +ಹೀ
ಹಾಳಿಕಾರರು +ಕೈದುಕೊಂಡರು
ಬಾಲಕನ +ತರುಬಿದರು +ದೊರೆಗಳು +ಕೇಳು +ಧೃತರಾಷ್ಟ್ರ

ಅಚ್ಚರಿ:
(೧) ರೂಪಕದ ಪ್ರಯೋಗ – ಪತಿಯ ಮೂದಲೆಗಾಳಿಯಲೆ ದಳ್ಳಿಸುವ ಶೌರ್ಯಜ್ವಾಲೆ ಜಡಿದುದು

ಪದ್ಯ ೮೧: ದುರ್ಯೋಧನನು ದ್ರೋಣರನ್ನು ಹೇಗೆ ಬಯ್ದನು?

ಕುಲವ ನೋಡಿದಡಿಲ್ಲ ತನ್ನಯ
ಬಲುಹ ನೋಡಿದಡಿಲ್ಲ ಕದನದೊ
ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ
ಇಳೆಯೊಳೋಲೆಯಕಾರರೆಂಬರ
ತಲೆಗೆ ತಂದನು ತೃಣವನೆಂದ
ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ (ದ್ರೋಣ ಪರ್ವ, ೫ ಸಂಧಿ, ೮೧ ಪದ್ಯ)

ತಾತ್ಪರ್ಯ:
ತಮ್ಮ ಕುಲದ ಹಿರಿಮೆಯನ್ನು ನೆನಪಿಡಲಿಲ್ಲ, ತಮ್ಮ ಮಹಾಶಕ್ತಿಯನ್ನು ಗಣಿಸಲಿಲ್ಲ, ಅದು ಹಾಗಿರಲಿ, ಈ ಯುದ್ಧದಲ್ಲಿ ತಮ್ಮ ಒಡೆಯನೆಂಬ ಪಾಪಿಯು ಉಳಿಯುವುದು ಹೇಗೆಂಬುದನ್ನು ಚಿಂತಿಸಲಿಲ್ಲ. ಮನುಷ್ಯತ್ವವನ್ನು ಮರೆತು ತಲೆಯ ಮೇಲೆ ಹುಲ್ಲು ಕಟ್ಟಿ ಮಾರಾಟಕ್ಕಿರುವ ಪಶುಗಳಂತೆ ದ್ರೋಣನು ಕೀಳಾದನು, ಎಂದು ದುರ್ಯೋಧನನು ಬೈಯ್ದು ಮೂದಲಿಸಿದನು.

ಅರ್ಥ:
ಕುಲ: ವಂಶ; ನೋಡು: ವೀಕ್ಷಿಸು; ಬಲುಹು: ಶಕ್ತಿ; ಕದನ: ಯುದ್ಧ; ಉಳಿವು: ಜೀವನ; ಪತಿ: ಒಡೆಯ; ಪಾತಕಿ: ಪಾಪಿ; ಇಳೆ: ಭೂಮಿ; ಓಲೆಯಕಾರ: ಸೇವಕ; ತಲೆ: ಶಿರ; ತಂದು: ಬರೆಮಾಡು; ತೃಣ: ಹುಲ್ಲು; ಅಗ್ಗ: ಶ್ರೇಷ್ಠ; ಮೂದಲಿಸು: ಹಂಗಿಸು; ಬಯ್ದು: ಜರೆದು; ಸುಯ್ದು: ನಿಟ್ಟುಸಿರು; ರಾಯ: ರಾಜ;

ಪದವಿಂಗಡಣೆ:
ಕುಲವ +ನೋಡಿದಡಿಲ್ಲ+ ತನ್ನಯ
ಬಲುಹ +ನೋಡಿದಡಿಲ್ಲ +ಕದನದೊಳ್
ಉಳಿವ +ನೋಡಿದರಿಲ್ಲಲಾ+ ಪತಿಯೆಂಬ +ಪಾತಕಿಯ
ಇಳೆಯೊಳ್+ಓಲೆಯಕಾರರೆಂಬರ
ತಲೆಗೆ +ತಂದನು +ತೃಣವನ್+ಎಂದ್
ಅಗ್ಗಳೆಯರನು+ ಮೂದಲಿಸಿ+ ಬಯ್ದನು +ಸುಯ್ದು +ಕುರುರಾಯ

ಅಚ್ಚರಿ:
(೧) ದ್ರೋಣರನ್ನು ಬಯ್ದ ಪರಿ – ಇಳೆಯೊಳೋಲೆಯಕಾರರೆಂಬರ ತಲೆಗೆ ತಂದನು ತೃಣವನೆಂದ
ಗ್ಗಳೆಯರನು ಮೂದಲಿಸಿ ಬಯ್ದನು

ಪದ್ಯ ೮೦: ದುರ್ಯೋಧನನು ತನ್ನ ಮಕ್ಕಳ ಸಾವನ್ನು ನೋಡಿ ಏನೆಂದನು?

ಇಕ್ಕಿದಿರಲಾ ರಾಜಪುತ್ರರ
ನಕ್ಕಟಕಟಾ ಸ್ವಾಮಿದ್ರೋಹರು
ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು
ಹಕ್ಕಲಾದುದು ನಮ್ಮ ಬಲ ಶಿಶು
ಸಿಕ್ಕನಿನ್ನೂ ಪಾಂಡವರ ಪು
ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ (ದ್ರೋಣ ಪರ್ವ, ೫ ಸಂಧಿ, ೮೦ ಪದ್ಯ)

ತಾತ್ಪರ್ಯ:
ತನ್ನ ಪುತ್ರರು ಸತ್ತುದನ್ನು ನೋಡಿದ ಕೌರವನು, ಅಯ್ಯಯ್ಯೋ ಸ್ವಾಮಿದ್ರೋಹಿಗಳಾದ ನೀವೆಲ್ಲರೂ ರಾಜಪುತ್ರರನ್ನು ಸಾಯಲು ಬಿಟ್ಟಿರಿ, ದ್ರೋಣನೇ ಮೊದಲಾದ ನಾಯಕರು ಯಾವ ಮನೆಯನ್ನು ಹೊಕ್ಕರೂ ಅದು ಹಾಳಾಗುತ್ತದೆ, ನಮ್ಮ ಸೈನ್ಯವು ಕೊಯಿಲಾಗಿ ಚೆದುರಿಹೋಯಿತು. ಆ ಬಾಲಕನು ಇನ್ನೂ ಸಿಕ್ಕಲಿಲ್ಲ. ಪಾಂಡವರ ಪುಣ್ಯಕ್ಕೆ ಸರಿಯೇ ಇಲ್ಲ ಎಂದು ಗರ್ಜಿಸಿದ.

ಅರ್ಥ:
ಇಕ್ಕು: ಇರಿಸು, ಇಡು; ರಾಜಪುತ್ರ: ಅರಸನ ಮಕ್ಕಳು; ಅಕಟಕಟಾ: ಅಯ್ಯಯ್ಯೋ; ಸ್ವಾಮಿ: ಒಡೆಯ; ದ್ರೋಹ: ಮೋಸ; ಹೊಕ್ಕು: ಸೇರು; ಮನೆ: ಆಲಯ; ಹಾಳು: ನಾಶ; ನಾಯಕ: ಒಡೆಯ; ಹಕ್ಕಲು: ಒಣಗಿದ್ದು, ಪಾಳುಭೂಮಿ; ಬಲ: ಶಕ್ತಿ, ಸೈನ್ಯ; ಶಿಶು: ಚಿಕ್ಕವ; ಪುಣ್ಯ: ಶುಭ, ಸದಾಚಾರ; ಸರಿ: ಸಮಾನ; ಗರ್ಜಿಸು: ಕೂಗು;

ಪದವಿಂಗಡಣೆ:
ಇಕ್ಕಿದಿರಲ್+ಆ+ ರಾಜಪುತ್ರರನ್
ಅಕ್ಕಟಕಟಾ +ಸ್ವಾಮಿದ್ರೋಹರು
ಹೊಕ್ಕಮನೆ+ ಹಾಳಹುದಲಾ +ದ್ರೋಣಾದಿ +ನಾಯಕರು
ಹಕ್ಕಲಾದುದು +ನಮ್ಮ +ಬಲ +ಶಿಶು
ಸಿಕ್ಕನಿನ್ನೂ +ಪಾಂಡವರ +ಪು
ಣ್ಯಕ್ಕೆ +ಸರಿಯಿಲ್ಲೆನುತ +ಕೌರವರಾಯ +ಗರ್ಜಿಸಿದ

ಅಚ್ಚರಿ:
(೧) ದ್ರೋಣಾದಿಯರನ್ನು ಬಯ್ಯುವ ಪರಿ – ಸ್ವಾಮಿದ್ರೋಹರು ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು

ಪದ್ಯ ೭೯: ಸತ್ತ ಕೌರವರು ಹೇಗೆ ಕಂಡರು?

ತಳಿತ ಚೂತದ ಸಸಿಗಳವನಿಗೆ
ಮಲಗುವಂತಿರೆ ರಾಜಪುತ್ರರು
ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ
ಬಳಿರಕುತದಲಿ ನನೆದ ಸೀರೆಯ
ತಳಿತ ಖಂಡದ ಬಿಗಿದ ಹುಬ್ಬಿನ
ದಳಿತ ದಂಷ್ಟ್ರಾನನದಲೆಸೆದನು ಸಾಲಶಯನದಲಿ (ದ್ರೋಣ ಪರ್ವ, ೫ ಸಂಧಿ, ೭೯ ಪದ್ಯ)

ತಾತ್ಪರ್ಯ:
ಕೌರವ ರಾಜಪುತ್ರರು ಹೊಳೆಯುವ ಪದಕಗಳು, ತಲೆದಿಂಬಾದ ತೋಳುಗಳು, ರಕ್ತದಿಂದ ನೆನೆದ ವಸ್ತ್ರಗಳು, ಕೆಂಪಾದ ಮಾಂಸಖಂಡಗಳು, ಬಿಗಿದ ಹುಬ್ಬುಗಳು, ಕಚ್ಚಿದ ಹಲ್ಲುಗಳೊಡನೆ ಚಿಗುರಿದ ಮಾವಿನ ಸಸಿಗಳು ಭೂಮಿಯಲ್ಲಿ ಬೀಳುವಂತೆ ಸಾಲಾಗಿ ಸತ್ತು ಬಿದ್ದಿದ್ದರು.

ಅರ್ಥ:
ತಳಿತ: ಚಿಗುರಿದ; ಚೂತ; ಮಾವು; ಸಸಿ: ಚಿಕ್ಕ ಗಿಡ; ಅವನಿ: ಭೂಮಿ; ಮಲಗು: ನಿದ್ದೆಮಾಡು; ರಾಜಪುತ್ರ: ಅರಸನ ಮಕ್ಕಳು; ಹೊಳೆ: ಪ್ರಕಾಶ; ಪದಕ: ಹುದ್ದೆಯ ಗುರುತಾಗಿ ಧರಿಸುವ ಲಾಂಛನ; ಕೊರಳು: ಕುತ್ತಿಗೆ; ತಲೆ: ಶಿರ; ಇಂಬು: ಎಡೆ, ಆಶ್ರಯ, ಒರಗು; ತೋಳು: ಬಾಹು; ಬಳಿ: ಹತ್ತಿರ; ರಕುತ: ನೆತ್ತರು; ನನೆ: ತೋಯ್ದು; ಸೀರೆ: ಬಟ್ಟೆ; ಖಂಡ: ತುಂಡು, ಚೂರು; ಬಿಗಿ: ಭದ್ರವಾಗಿರುವುದು; ಹುಬ್ಬು: ಕಣ್ಣಿನ ಮೇಲಿನ ಕೂದಲು; ದಂಷ್ಟ್ರ: ಕೋರೆಹಲ್ಲು, ದಾಡೆ; ಎಸೆ: ಬಾಣ ಪ್ರಯೋಗ ಮಾದು; ಸಾಲು: ಪಂಕ್ತಿ, ಓಲಿ; ಶಯನ: ನಿದ್ರೆ; ಸಾಲ: ಒಂದು ಬಗೆಯ ಮರ;

ಪದವಿಂಗಡಣೆ:
ತಳಿತ +ಚೂತದ +ಸಸಿಗಳ್+ಅವನಿಗೆ
ಮಲಗುವಂತಿರೆ+ ರಾಜಪುತ್ರರು
ಹೊಳೆವ+ ಪದಕದ +ಕೊರಳ +ತಲೆಗಿಂಬಾದ +ತೋಳುಗಳ
ಬಳಿ+ರಕುತದಲಿ +ನನೆದ +ಸೀರೆಯ
ತಳಿತ +ಖಂಡದ +ಬಿಗಿದ +ಹುಬ್ಬಿನ
ದಳಿತ +ದಂಷ್ಟ್ರ+ಆನನದಲ್+ಎಸೆದನು +ಸಾಲ+ಶಯನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಳಿತ ಚೂತದ ಸಸಿಗಳವನಿಗೆ ಮಲಗುವಂತಿರೆ

ಪದ್ಯ ೭೮: ಅಭಿಮನ್ಯು ಲಕ್ಷಣನನ್ನು ಹೇಗೆ ಸಂಹರಿಸಿದನು?

ಉರಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ (ದ್ರೋಣ ಪರ್ವ, ೫ ಸಂಧಿ, ೭೮ ಪದ್ಯ)

ತಾತ್ಪರ್ಯ:
ಸರ್ಪವು ಎರಡು ತುಂಡಾದ ಹುಲ್ಲಿನ ಹಗ್ಗಕ್ಕೆ ಅಂಜುವುದೇ? ಕರ್ಣಾದಿಗಳನ್ನೇ ಕಡ್ಡಿಗೂ ಸಮವಲ್ಲವೆಂದು ಭಾವಿಸುವವನು, ಈ ಬಿದಿರು ಬೊಂಬೆಗಳನ್ನು ಲೆಕ್ಕಿಸುವವನೇ? ಎರಡು ಬಾಣಗಳಿಂದ ಲಕ್ಷಣನನ್ನು ಸಂಹರಿಸಿ, ಹದಿನೈದು ಬಾಣಗಳಿಂದ ಉಳಿದವರೆಲ್ಲರನ್ನೂ ಕ್ಷಣಮಾತ್ರದಲ್ಲಿ ಕೊಂದನು.

ಅರ್ಥ:
ಉರಗ: ಹಾವು; ಇಕ್ಕಡಿಗಡಿ: ಎರಡು ತುಂಡಾಗಿ ಕತ್ತರಿಸು; ಹುಲ್ಲು: ತೃಣ; ಸರವಿ: ಹಗ್ಗ, ಹುರಿ; ಅಂಜು: ಹೆದರು; ಆದಿ: ಮುಂತಾದ; ಕಡ್ಡಿ: ಮರದತುಂಡು, ಕಾಷ್ಠ; ಬಗೆ: ಆಲೋಚನೆ, ಯೋಚನೆ; ಹೂಹೆ: ಹಸುಳೆ, ಶಿಶು; ಗಣಿಸು: ಲೆಕ್ಕಿಸು; ಶರ: ಬಾಣ; ಸಂಹರ: ನಾಶ; ಅರಿ: ನಾಶ; ಉಳಿದ: ಮಿಕ್ಕ; ಕುಮಾರ: ಪುತ್ರರು; ನಿಮಿಷ: ಕ್ಷಣಮಾತ್ರ;

ಪದವಿಂಗಡಣೆ:
ಉರಗನ್+ಇಕ್ಕಡಿಗಾರ +ಹುಲ್ಲಿನ
ಸರವಿಗ್+ಅಂಜುವುದುಂಟೆ +ಕರ್ಣಾ
ದ್ಯರನು +ಕಡ್ಡಿಗೆ +ಬಗೆಯನ್+ಈ+ ಹೂಹೆಗಳ+ ಗಣಿಸುವನೆ
ಎರಡು+ ಶರದಲಿ +ಲಕ್ಷಣನ+ ಸಂ
ಹರಿಸಿದನು +ಹದಿನೈದು +ಬಾಣದಲ್
ಅರಿದನ್+ಉಳಿದ +ಕುಮಾರಕರನ್+ಅಭಿಮನ್ಯು +ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಗನಿಕ್ಕಡಿಗಾರ ಹುಲ್ಲಿನಸರವಿಗಂಜುವುದುಂಟೆ
(೨) ಕರ್ಣನನ್ನು ಹೋಲಿಸಿದ ಪರಿ – ಕರ್ಣಾದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
(೩) ಶರ, ಬಾಣ – ಸಮಾನಾರ್ಥಕ ಪದ

ಪದ್ಯ ೭೭: ಅಭಿಮನ್ಯುವು ಕೌರವನ ಮಕ್ಕಳನ್ನು ಎಲ್ಲಿಗೆ ಸೇರಿಸಿದನು?

ಸರಳ ಮೊನೆಯಲಿ ವೈರಿ ಸುಭಟರ
ಕರುಳ ತೆಗೆದನು ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ
ತರಳನರೆಯಟ್ಟಿದನು ಧುರದಲಿ
ದುರುಳ ದುರಿಯೋಧನನ ಮಕ್ಕಳ
ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು (ದ್ರೋಣ ಪರ್ವ, ೫ ಸಂಧಿ, ೭೭ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಶತ್ರು ಸೈನಿಕರ ಕರುಳನ್ನು ಬಾಣಗಳಿಂದ ಹೊರತೆಗೆದನು. ರಣ ಪಿಶಾಚರನ್ನು ರಕ್ತದ ಕಡಲಿನಿಂದ ತಣಿಸಿದನು. ಲಕ್ಷಣಾದಿ ಕೌರವನ ಮಕ್ಕಳನ್ನು ಅರೆಯಟ್ಟಿ, ಅವರು ಹಿಮ್ದಿರುಗದಂತೆ ಅವರ ಪ್ರಾಣಗಳನ್ನು ಕೇಣಿಗೆ ತೆಗೆದುಕೊಂಡನು.

ಅರ್ಥ:
ಸರಳು: ಬಾಣ; ಮೊನೆ: ತುದಿ; ವೈರಿ: ಶತ್ರು; ಸುಭಟ: ಪರಾಕ್ರಮಿ; ಕರುಳು: ಪಚನಾಂಗ; ತೆಗೆ: ಹೊರತರು; ರಣ: ಯುದ್ಧ; ಮರುಳ: ತಿಳಿಗೇಡಿ, ದಡ್ಡ; ಬಳಗ: ಗುಂಪು; ತಣಿಸು: ತಣ್ಣಗೆ ಮಾಡು, ಆರಿಸು; ಕಡಲು: ಸಾಗರ; ಅರುಣಜಲ: ಕೆಂಪಾದ ನೀರು (ರಕ್ತ); ತರಳ: ಬಾಲಕ; ಅಟ್ಟು: ಬೆನ್ನಟ್ಟುವಿಕೆ; ಧುರ: ಯುದ್ಧ, ಕಾಳಗ; ಮಕ್ಕಳು: ಕುಮಾರ; ಮರುಳ: ತಿಳಿಗೇಡಿ, ದಡ್ಡ; ಭಟ: ಸೈನಿಕ; ಕೇಣಿ: ಗುತ್ತಿಗೆ, ಗೇಣಿ;

ಪದವಿಂಗಡಣೆ:
ಸರಳ +ಮೊನೆಯಲಿ +ವೈರಿ +ಸುಭಟರ
ಕರುಳ+ ತೆಗೆದನು+ ರಣದೊಳ್+ಆಡುವ
ಮರುಳ +ಬಳಗವ+ ತಣಿಸಿದನು +ಕಡಲಾದುದ್+ಅರುಣಜಲ
ತರಳನ್+ಅರೆಯಟ್ಟಿದನು +ಧುರದಲಿ
ದುರುಳ +ದುರಿಯೋಧನನ+ ಮಕ್ಕಳ
ಮರಳಲೀಯದೆ+ ಭಟರ+ ಕೇಣಿಯ +ಕೊಂಡನ್+ಅಭಿಮನ್ಯು

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ಧುರದಲಿ ದುರುಳ ದುರಿಯೋಧನನ
(೨) ರಕ್ತದ ಸಾಗರ ಎಂದು ಹೇಳುವ ಮೂಲಕ ಯುದ್ಧದ ತೀವ್ರತೆಯನ್ನು ವಿವರಿಸುವ ಪರಿ – ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ

ಪದ್ಯ ೭೬: ಕೌರವನ ಮಕ್ಕಳು ಅಭಿಮನ್ಯುವನ್ನು ಹೇಗೆ ಹಂಗಿಸಿದರು?

ಫಡ ಕುಮಾರಕ ದೊದ್ದೆಗರ ಸದೆ
ಬಡಿದ ಗರ್ವಿತತನವಕಟ ನ
ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ
ಒಡನೊಡನೆ ನಾರಾಚ ನಿಚಯವ
ಗಡಣಿಸಿದರೇನೆಂಬೆನವರು
ಗ್ಗಡದ ಬಿಲುವಿದ್ಯಾತಿಶಯವನು ಸಮರಭೂಮಿಯಲಿ (ದ್ರೋಣ ಪರ್ವ, ೫ ಸಂಧಿ, ೭೬ ಪದ್ಯ)

ತಾತ್ಪರ್ಯ:
ಕೌರವನ ಮಕ್ಕಳೂ ಬಿಲ್ಲುವಿದ್ಯೆಯಲ್ಲಿ ವಿಶಾರದರು, ಛೇ ಅಭಿಮನ್ಯು ಕ್ಷುಲ್ಲಕರನ್ನು ಗೆದ್ದ ಗರ್ವವನ್ನು ನಮ್ಮೊಡನೆ ತೋರಿಸುವೆಯಾ, ನೋಡು ನಮಗೆ ನೀನು ಸರಿಸಮನೇ, ಸುಮ್ಮನೆ ಆಚೆ ಹೋಗು ಎನ್ನುತ್ತಾ ಮೂದಲಿಸುತ್ತಾ ಮತ್ತೆ ಮತ್ತೆ ಬಾಣಗಳನ್ನು ಬಿಟ್ಟರು.

ಅರ್ಥ:
ಫಡ: ತಿರಸ್ಕಾರದ ಮಾತು; ಕುಮಾರ: ಪುತ್ರ; ದೊದ್ದೆ:ಗುಂಪು; ಸದೆ: ಕುಟ್ಟು, ಪುಡಿಮಾಡು; ಗರ್ವಿತ: ಸೊಕ್ಕಿದ; ಅಕಟ: ಅಯ್ಯೋ; ನೋಡು: ವೀಕ್ಷಿಸು; ಮೇಳ: ಸೇರುವಿಕೆ, ಕೂಡುವಿಕೆ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಒಡನೆ: ಒಮ್ಮೆಲೆ; ನಾರಾಚ: ಬಾಣ, ಸರಳು; ನಿಚಯ: ಗುಂಪು; ಗಡಣ: ಸಮೂಹ; ಉಗ್ಗಡ: ಉತ್ಕಟತೆ, ಅತಿಶಯ; ಬಿಲು: ಬಿಲ್ಲು, ಚಾಪ; ವಿದ್ಯ: ಜ್ಞಾನ; ಅತಿಶಯ: ಹೆಚ್ಚು; ಸಮರಭೂಮಿ: ಯುದ್ಧಭೂಮಿ;

ಪದವಿಂಗಡಣೆ:
ಫಡ +ಕುಮಾರಕ+ ದೊದ್ದೆಗರ+ ಸದೆ
ಬಡಿದ +ಗರ್ವಿತತನವ್+ಅಕಟ +ನ
ಮ್ಮೊಡನೆಯೇ +ನೋಡಿಲ್ಲಿ +ಮೇಳವೆ +ಸಾರು +ಸಾರೆನುತ
ಒಡನೊಡನೆ +ನಾರಾಚ +ನಿಚಯವ
ಗಡಣಿಸಿದರ್+ಏನೆಂಬೆನ್+ಅವರ್
ಉಗ್ಗಡದ +ಬಿಲುವಿದ್ಯ+ಅತಿಶಯವನು +ಸಮರ+ಭೂಮಿಯಲಿ

ಅಚ್ಚರಿ:
(೧) ಅಭಿಮನ್ಯುವನ್ನು ಹಂಗಿಸುವ ಪರಿ – ಫಡ ಕುಮಾರಕ ದೊದ್ದೆಗರ ಸದೆಬಡಿದ ಗರ್ವಿತತನವಕಟ ನ
ಮ್ಮೊಡನೆಯೇ
(೨) ದೊದ್ದೆ, ನಿಚಯ, ಮೇಳ, ಗಡಣ – ಸಮಾನಾರ್ಥಕ ಪದಗಳು

ಪದ್ಯ ೭೫: ಅಭಿಮನ್ಯುವು ಯಾರಿಗೆ ಭೂಮಿವಾಸವನ್ನು ಕೊನೆಗೊಳಿಸಿದನು?

ಆ ಸುಯೋಧನ ಸುತರ ಸರಳ ವಿ
ಳಾಸವನು ಖಂಡಿಸಿದನವದಿರ
ಬೀಸರಕೆ ಬಂದಡ್ಡಬೀಳುವ ಭಟರ ಕೆಡೆಯೆಚ್ಚ
ರೋಷವಹ್ನಿಯ ಕೆದರೆ ಕವಿವ ಮ
ಹೀಶರನು ಮಾಣಿಸಿದನವನೀ
ವಾಸವನು ವಾಸವನ ಮೊಮ್ಮನುದಾರ ಸಮರದಲಿ (ದ್ರೋಣ ಪರ್ವ, ೫ ಸಂದಿ, ೭೫ ಪದ್ಯ)

ತಾತ್ಪರ್ಯ:
ಕೌರವನ ಮಕ್ಕಳ ಬಾಣಗಳನ್ನು ಖಂಡಿಸಿದನು. ಅವರ ರಕ್ಷಣೆಗೆ ಅಡ್ಡವಾಗಿ ಬಂದ ಭಟರನ್ನು ಬೀಳಿಸಿದನು. ಅಭಿಮನ್ಯುವು ಅವರ ಸಹಾಯಕ್ಕೆ ಬಂದ ರಾಜರಿಗೆ ಭೂಮಿಯ ವಾಸವನ್ನು ಕೊನೆಗೊಳಿಸಿದನು.

ಅರ್ಥ:
ಸುತ: ಮಕ್ಕಳು, ಮಗ; ಸರಳ: ಬಾಣ; ವಿಳಾಸ: ಕ್ರೀಡೆ, ವಿಹಾರ; ಖಂಡಿಸು: ಧ್ವಂಸಗೊಳಿಸು; ಅವದಿರ: ಅಷ್ಟು ಜನ; ಬೀಸರ: ವ್ಯರ್ಥವಾದುದು; ಅಡ್ಡಬೀಳು: ಮಧ್ಯ ಪ್ರವೇಶಿಸು; ಭಟ: ಸೈನಿಕ; ಕೆಡೆ: ಬೀಳು, ಕುಸಿ; ಎಚ್ಚು: ಬಾಣ ಪ್ರಯೋಗ ಮಾಡು; ರೋಷ: ಕೋಪ; ವಹ್ನಿ: ಬೆಂಕಿ; ಮಾಣು: ನಿಲ್ಲಿಸು; ಕವಿ: ಆವರಿಸು; ಮಹೀಶ: ರಾಜ; ಅವನೀ: ಭೂಮಿ; ವಾಸ: ಬದುಕು; ವಾಸವ: ಇಂದ್ರ; ಮೊಮ್ಮ: ಮೊಮ್ಮಗ; ಉದಾರ: ವಿಸ್ತಾರವಾದ; ಸಮರ: ಯುದ್ಧ;

ಪದವಿಂಗಡಣೆ:
ಆ +ಸುಯೋಧನ+ ಸುತರ +ಸರಳ+ ವಿ
ಳಾಸವನು +ಖಂಡಿಸಿದನ್+ಅವದಿರ
ಬೀಸರಕೆ+ ಬಂದ್+ಅಡ್ಡಬೀಳುವ +ಭಟರ +ಕೆಡೆ+ಯೆಚ್ಚ
ರೋಷವಹ್ನಿಯ +ಕೆದರೆ+ ಕವಿವ+ ಮ
ಹೀಶರನು+ ಮಾಣಿಸಿದನ್+ಅವನೀ
ವಾಸವನು +ವಾಸವನ+ ಮೊಮ್ಮನ್+ಉದಾರ+ ಸಮರದಲಿ

ಅಚ್ಚರಿ:
(೧) ವಾಸವ ಪದದ ಬಳಕೆ – ಮಹೀಶರನು ಮಾಣಿಸಿದನವನೀವಾಸವನು ವಾಸವನ ಮೊಮ್ಮನುದಾರ ಸಮರದಲಿ
(೨) ಸಾಯಿಸಿದನು ಎಂದು ಹೇಳುವ ಪರಿ – ಮಹೀಶರನು ಮಾಣಿಸಿದನವನೀವಾಸವನು

ಪದ್ಯ ೭೪: ಅಭಿಮನ್ಯುವು ಕೌರವ ಮಕ್ಕಳನ್ನು ಹೇಗೆ ಎದುರಿಸಿದನು?

ದಿಟ್ಟರೋ ಲಕ್ಷಣನವರು ಜಗ
ಜಟ್ಟಿಗಳಲಾ ರಾಜಕುಲದಲಿ
ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ
ಕಟ್ಟಿದನು ಕಣೆಗಳಲಿ ಸುತ್ತಲು
ತಟ್ಟಿವಲೆಗಳ ಸೋಹಿನಲಿ ಬೆ
ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ (ದ್ರೋಣ ಪರ್ವ, ೫ ಸಂಧಿ, ೭೪ ಪದ್ಯ)

ತಾತ್ಪರ್ಯ:
ಲಕ್ಷಣನೂ ಅವನ ತಮ್ಮಂದಿರೂ ಜಗಜಟ್ಟಿಗಳಲ್ಲವೇ? ಇಂತಹ ರಾಜಪುತ್ರರು ಯಾರಾದರೂ ಹುಟ್ಟಿರುವರೇ, ಇಂತಹ ಕೈಚಳಕ ಯಾರಿಗಿದೆ, ಎನ್ನುತ್ತಾ ಅಭಿವನ್ಯುವು ಅವರ ಸುತ್ತಲೂ ಬಾಣಗಳ ಬೇಲಿಯನ್ನು ಕಟ್ಟಿ ಬೆನ್ನಟ್ಟಿ ವೈರಿ ಮೃಗಗಳನ್ನು ಸದೆದು ಹಾಕಿದನು.

ಅರ್ಥ:
ದಿಟ್ಟ: ಧೈರ್ಯವಂತ; ಜಗಜಟ್ಟಿ: ಪರಾಕ್ರಮಿ; ಕುಲ: ವಂಶ; ಹುಟ್ಟು: ಜನಿಸು; ಕೆಲರು: ಕೆಲವರು; ಈಸು: ಇಷ್ಟು; ಚಪಲ:ಚಂಚಲ; ಕಟ್ಟು: ಬಂಧಿಸು; ಕಣೆ: ಬಾಣ; ಸುತ್ತ: ಬಳಸಿಕೊಂಡು; ತಟ್ಟಿ: ಬಿದಿರಿನ ತಡಿಕೆ, ಬಿದಿರಿನ ಗೋಡೆ; ಸೋಹು:ಅಟ್ಟು, ಓಡಿಸು; ಬೆನ್ನಟ್ಟು: ಹಿಂದೆಬೀಳು; ಕುಮಾರ: ಮಗ; ಸದೆ: ಕುಟ್ಟು, ಪುಡಿಮಾಡು; ವೈರಿ: ಶತ್ರು; ಮೃಗ: ಪ್ರಾಣಿ; ಕುಲ: ವಂಶ;

ಪದವಿಂಗಡಣೆ:
ದಿಟ್ಟರೋ +ಲಕ್ಷಣನವರು +ಜಗ
ಜಟ್ಟಿಗಳಲಾ +ರಾಜಕುಲದಲಿ
ಹುಟ್ಟಿದರೆ +ಕೆಲರ್+ಈಸು +ಚಪಳತೆ +ಯಾರಿಗುಂಟೆನುತ
ಕಟ್ಟಿದನು +ಕಣೆಗಳಲಿ +ಸುತ್ತಲು
ತಟ್ಟಿವಲೆಗಳ +ಸೋಹಿನಲಿ +ಬೆ
ನ್ನಟ್ಟಿ +ಪಾರ್ಥಕುಮಾರ +ಸದೆದನು +ವೈರಿ+ಮೃಗ +ಕುಲವ

ಅಚ್ಚರಿ:
(೧) ಕಟ್ಟಿ, ಹುಟ್ಟಿ, ಜಟ್ಟಿ, ಬೆನ್ನಟ್ಟಿ, ತಟ್ಟಿ – ಪ್ರಾಸ ಪದಗಳು

ಪದ್ಯ ೭೩: ಕೌರವನ ಮಕ್ಕಳು ಹೇಗೆ ಅಭಿಮನ್ಯುವನ್ನು ಎದುರಿಸಿದರು?

ಮಗುಳದಿರು ಶಲ್ಯಾತ್ಮಕನನುಗು
ಳುಗುಳು ನಿನ್ನಯ ಬಸಿರ ಸೀಳಿಯೆ
ತೆಗೆವೆವೆಮ್ಮಯ ಸಖನನೆನುತಾ ಲಕ್ಷಣಾದಿಗಳು
ತೆಗೆದೆಸುತ ಮೇಲಿಕ್ಕಿದರು ತಾ
ರೆಗಳು ನೆಣಗೊಬ್ಬಿನಲಿ ರಾಹುವ
ತೆಗೆದು ಬದುಕಲು ಬಲ್ಲವೇ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೫ ಸಂಧಿ, ೭೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಅಭಿಮನ್ಯು ಓಡಿಹೋಗಬೇಡ, ನೀನು ನುಂಗಿರುವ ನಮ್ಮ ಮಿತ್ರ ಶಲ್ಯಪುತ್ರನನ್ನು ಹೊರಹಾಕು, ಇಲ್ಲದಿದ್ದರೆ ನಿನ್ನ ಹೊಟ್ಟೆಯನ್ನು ಸೀಳಿ ಅವನನ್ನು ಹೊರತೆಗೆಯುತ್ತೇವೆ ಎಂದು ಕೌರವನ ಪುತ್ರರು ನಕ್ಷತ್ರವು ರಾಹುವನ್ನು ಕೊಬ್ಬಿನಿಂದ ನುಂಗಲು ಹೋದಂತೆ ಬಾಣಗಳಿಂದ ಹೊಡೆಯುತ್ತಾ ಬಂದರು. ನಕ್ಷತ್ರಗಳು ರಾಹುವನ್ನು ನುಂಗಿ ಬದುಕಲು ಸಾಧ್ಯವೇ?

ಅರ್ಥ:
ಮಗುಳು: ಪುನಃ, ಮತ್ತೆ; ಆತ್ಮಕ: ಮಗ; ಉಗುಳು: ಹೊರಹಾಕು; ಬಸಿರು: ಹೊಟ್ಟೆ; ಸೀಳು: ಕತ್ತರಿಸು; ತೆಗೆ: ಹೊರತರು; ಸಖ: ಸ್ನೇಹಿತ; ಲಕ್ಷಣ: ಗುರುತು, ಚಿಹ್ನೆ; ಆದಿ: ಮುಂತಾದ; ಎಸು: ಬಾಣ ಪ್ರಯೋಗ ಮಾಡು; ಮೇಲೆ: ತುದಿಯಲ್ಲಿ; ಇಕ್ಕು: ಇಡು; ತಾರೆ: ನಕ್ಷತ್ರ; ನೆಣ: ಕೊಬ್ಬು; ಕೊಬ್ಬು: ಸೊಕ್ಕು, ಅಹಂಕಾರ; ಬದುಕು: ಜೀವಿಸು; ಬಲ್ಲ: ತಿಳಿ; ಕೇಳು: ಆಲಿಸು;

ಪದವಿಂಗಡಣೆ:
ಮಗುಳದಿರು+ ಶಲ್ಯಾತ್ಮಕನನ್+ಉಗುಳ್
ಉಗುಳು +ನಿನ್ನಯ +ಬಸಿರ +ಸೀಳಿಯೆ
ತೆಗೆವೆವ್+ಎಮ್ಮಯ +ಸಖನನ್+ಎನುತಾ+ ಲಕ್ಷಣಾದಿಗಳು
ತೆಗೆದೆಸುತ +ಮೇಲಿಕ್ಕಿದರು +ತಾ
ರೆಗಳು +ನೆಣಗೊಬ್ಬಿನಲಿ+ ರಾಹುವ
ತೆಗೆದು +ಬದುಕಲು +ಬಲ್ಲವೇ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ತಾರೆಗಳು ನೆಣಗೊಬ್ಬಿನಲಿ ರಾಹುವ ತೆಗೆದು ಬದುಕಲು ಬಲ್ಲವೇ