ಪದ್ಯ ೬೩: ಭೀಮನನ್ನು ಕರ್ಣನು ಹೇಗೆ ಹಂಗಿಸಿದನು?

ಎಲ್ಲಿ ಷಡುರಸಮಯದ ಭೋಜನ
ವೆಲ್ಲಿ ಮಧುರ ಫಲೌಘದುಬ್ಬರ
ವೆಲ್ಲಿ ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು
ಅಲ್ಲಿ ನಿನ್ನುರವಣೆಗಳೊಪ್ಪುವ
ದಲ್ಲದೀ ಸಂಗ್ರಾಮ ಮುಖದಲಿ
ಬಿಲ್ಲಹಬ್ಬದ ತುಷ್ಟಿ ನಿನಗೇಕೆಂದನಾ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಎಲ್ಲಿ ಷಡ್ರಸ ಭರಿತವಾದ ಊಟವಿದೆಯೋ, ಎಲ್ಲಿ ಸಿಹಿ ಹಣ್ಣುಗಳು ಹೇರಳವಾಗಿವೆಯೋ, ಎಲ್ಲಿ ಭಕ್ಷ್ಯದ ಬೆಟ್ಟಗಳು, ತುಪ್ಪದ ಸಾಗರಗಳಿವೆಯೋ, ಅಲ್ಲಿ ನಿನ್ನ ಪರಾಕ್ರಮವು ಸಾರ್ಥಕವೆನ್ನಿಸುವುದೇ ಹೊರತು, ಯುದ್ಧರಂಗದಲ್ಲಿ ಬಿಲ್ಲಹಬ್ಬದಿಂದ ನಿನಗೆ ತೃಪ್ತಿಯಾಗಲು ಸಾಧ್ಯವೇ ಎಂದು ಕರ್ಣನು ಭೀಮನನ್ನು ಮೂದಲಿಸಿದನು.

ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಭೋಜನ: ಊಟ; ಮಧುರ: ಸಿಹಿ; ಫಲ: ಹಣ್ಣು; ಔಘ: ಗುಂಪು, ಸಮೂಹ; ಉಬ್ಬರ: ಅತಿಶಯ; ನಾನಾ: ಹಲವಾರು; ಭಕ್ಷ್ಯ: ಊಟ; ಗಿರಿ: ಬೆಟ್ಟ; ಘೃತ: ತುಪ್ಪ; ಕಡಲು: ಸಾಗರ; ಉರವಣೆ: ಆತುರ, ಅವಸರ, ಅಬ್ಬರ; ಸಂಗ್ರಾಮ: ಯುದ್ಧ; ಮುಖ: ಆನನ; ಬಿಲ್ಲ: ಚಾಪ; ಹಬ್ಬ: ಸಡಗರ; ತುಷ್ಟಿ: ತೃಪ್ತಿ, ಆನಂದ;

ಪದವಿಂಗಡಣೆ:
ಎಲ್ಲಿ +ಷಡುರಸಮಯದ +ಭೋಜನವ್
ಎಲ್ಲಿ +ಮಧುರ +ಫಲೌಘದ್+ಉಬ್ಬರವ್
ಎಲ್ಲಿ +ನಾನಾ+ಭಕ್ಷ್ಯ+ಗಿರಿಗಳು +ಘೃತದ +ಕಡಲುಗಳು
ಅಲ್ಲಿ+ ನಿನ್ನ್+ಉರವಣೆಗಳ್+ಒಪ್ಪುವದ್
ಅಲ್ಲದ್+ಈ+ ಸಂಗ್ರಾಮ +ಮುಖದಲಿ
ಬಿಲ್ಲ+ಹಬ್ಬದ+ ತುಷ್ಟಿ+ ನಿನಗೇಕೆಂದನಾ +ಕರ್ಣ

ಅಚ್ಚರಿ:
(೧) ರೂಪಕಗಳನ್ನು ಬಳಸುವ ಪರಿ – ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು

ಪದ್ಯ ೧೫: ಪಾರ್ಥನು ವೀರರಿಗೆ ಏನು ಹೇಳಿದನು?

ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
ಮಕ್ಕಳೊಳು ನೋಡಿದನು ಕಂದನ
ನಿಕ್ಕಿದಿರಲಾ ಲೇಸು ಮಾಡಿದಿ
ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ (ದ್ರೋಣ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶೋಕದ ಕಡಲು ಉಕ್ಕಿ ಪಾರ್ಥನನ್ನು ಉಗುಳಿತು. ಆ ಶೋಕ ಸಮುದ್ರವನ್ನು ಕೋಪವು ವಡಬಾಗ್ನಿಯಂತೆ ಹೊಕ್ಕು ಹೆಚ್ಚಿತು. ರಾಜಕುಮಾರರಿರುವ ಕಡೆಗೆ ನೋಡಿ, ಅಲ್ಲಿ ಅಭಿಮನ್ಯುವನ್ನು ಕಾಣದೆ, ಮಗನನ್ನ್ ಕೊಂದು ಮಹಾವೀರರಾದ ನೀವು ಒಳಿತನ್ನೇ ಮಾಡಿದಿರಿ ಎಂದು ಹೇಳುತ್ತಾ ಧರ್ಮಜನಿಗೆ ನಮಸ್ಕರಿಸಿದನು.

ಅರ್ಥ:
ಉಕ್ಕು: ಹೊಮ್ಮಿ ಬರು; ಶೋಕ: ದುಃಖ; ಕಡಲು: ಸಾಗರ; ಮುಕ್ಕುಳಿಸು: ಹೊರಹಾಕು; ಶರಧಿ: ಸಾಗರ; ಹೊಕ್ಕು: ಸೇರು; ಬೆಳೆ: ಎತ್ತರವಾಗು; ಕೋಪ: ಸಿಟ್ಟು; ಶಿಖಿ: ಬೆಂಕಿ; ವಡಬಾಗ್ನಿ: ಸಮುದ್ರದೊಳಗಿನ ಬೆಂಕಿ; ಮಕ್ಕಳು: ಸುತರು; ನೋಡು: ವೀಕ್ಷಿಸು; ಕಂದ: ಮಗ; ಇಕ್ಕು: ಬಿಟ್ಟು ಹೋಗು; ಲೇಸು: ಒಳಿತು; ಎಕ್ಕತುಳ: ಮಹಾವೀರ; ಭೂಪತಿ: ರಾಜ; ಪೊಡವಡು: ನಮಸ್ಕರಿಸು;

ಪದವಿಂಗಡಣೆ:
ಉಕ್ಕಿ+ ಶೋಕದ +ಕಡಲು +ಪಾರ್ಥನ
ಮುಕ್ಕುಳಿಸಿತ್+ಆ+ ಶೋಕ+ಶರಧಿಯ
ಹೊಕ್ಕು +ಬೆಳೆದುದು +ಕೋಪ+ಶಿಖಿ+ವಡಬಾಗ್ನಿಯಂದದಲಿ
ಮಕ್ಕಳೊಳು +ನೋಡಿದನು+ ಕಂದನನ್
ಇಕ್ಕಿದಿರಲಾ +ಲೇಸು +ಮಾಡಿದಿರ್
ಎಕ್ಕತುಳದಾಳುಗಳ್+ಎನುತ +ಭೂಪತಿಗೆ+ ಪೊಡವಂಟ

ಅಚ್ಚರಿ:
(೧) ಶೋಕದ ತೀವ್ರತೆಯನ್ನು ವಿವರಿಸುವ ಪರಿ – ಉಕ್ಕಿ ಶೋಕದ ಕಡಲು ಪಾರ್ಥನ ಮುಕ್ಕುಳಿಸಿತಾ; ಶೋಕಶರಧಿಯ ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
(೨) ಕಡಲು, ಶರಧಿ – ಸಮಾನಾರ್ಥಕ ಪದ

ಪದ್ಯ ೭೭: ಅಭಿಮನ್ಯುವು ಕೌರವನ ಮಕ್ಕಳನ್ನು ಎಲ್ಲಿಗೆ ಸೇರಿಸಿದನು?

ಸರಳ ಮೊನೆಯಲಿ ವೈರಿ ಸುಭಟರ
ಕರುಳ ತೆಗೆದನು ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ
ತರಳನರೆಯಟ್ಟಿದನು ಧುರದಲಿ
ದುರುಳ ದುರಿಯೋಧನನ ಮಕ್ಕಳ
ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು (ದ್ರೋಣ ಪರ್ವ, ೫ ಸಂಧಿ, ೭೭ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಶತ್ರು ಸೈನಿಕರ ಕರುಳನ್ನು ಬಾಣಗಳಿಂದ ಹೊರತೆಗೆದನು. ರಣ ಪಿಶಾಚರನ್ನು ರಕ್ತದ ಕಡಲಿನಿಂದ ತಣಿಸಿದನು. ಲಕ್ಷಣಾದಿ ಕೌರವನ ಮಕ್ಕಳನ್ನು ಅರೆಯಟ್ಟಿ, ಅವರು ಹಿಮ್ದಿರುಗದಂತೆ ಅವರ ಪ್ರಾಣಗಳನ್ನು ಕೇಣಿಗೆ ತೆಗೆದುಕೊಂಡನು.

ಅರ್ಥ:
ಸರಳು: ಬಾಣ; ಮೊನೆ: ತುದಿ; ವೈರಿ: ಶತ್ರು; ಸುಭಟ: ಪರಾಕ್ರಮಿ; ಕರುಳು: ಪಚನಾಂಗ; ತೆಗೆ: ಹೊರತರು; ರಣ: ಯುದ್ಧ; ಮರುಳ: ತಿಳಿಗೇಡಿ, ದಡ್ಡ; ಬಳಗ: ಗುಂಪು; ತಣಿಸು: ತಣ್ಣಗೆ ಮಾಡು, ಆರಿಸು; ಕಡಲು: ಸಾಗರ; ಅರುಣಜಲ: ಕೆಂಪಾದ ನೀರು (ರಕ್ತ); ತರಳ: ಬಾಲಕ; ಅಟ್ಟು: ಬೆನ್ನಟ್ಟುವಿಕೆ; ಧುರ: ಯುದ್ಧ, ಕಾಳಗ; ಮಕ್ಕಳು: ಕುಮಾರ; ಮರುಳ: ತಿಳಿಗೇಡಿ, ದಡ್ಡ; ಭಟ: ಸೈನಿಕ; ಕೇಣಿ: ಗುತ್ತಿಗೆ, ಗೇಣಿ;

ಪದವಿಂಗಡಣೆ:
ಸರಳ +ಮೊನೆಯಲಿ +ವೈರಿ +ಸುಭಟರ
ಕರುಳ+ ತೆಗೆದನು+ ರಣದೊಳ್+ಆಡುವ
ಮರುಳ +ಬಳಗವ+ ತಣಿಸಿದನು +ಕಡಲಾದುದ್+ಅರುಣಜಲ
ತರಳನ್+ಅರೆಯಟ್ಟಿದನು +ಧುರದಲಿ
ದುರುಳ +ದುರಿಯೋಧನನ+ ಮಕ್ಕಳ
ಮರಳಲೀಯದೆ+ ಭಟರ+ ಕೇಣಿಯ +ಕೊಂಡನ್+ಅಭಿಮನ್ಯು

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ಧುರದಲಿ ದುರುಳ ದುರಿಯೋಧನನ
(೨) ರಕ್ತದ ಸಾಗರ ಎಂದು ಹೇಳುವ ಮೂಲಕ ಯುದ್ಧದ ತೀವ್ರತೆಯನ್ನು ವಿವರಿಸುವ ಪರಿ – ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ

ಪದ್ಯ ೩೦: ಹಿಮ್ಮೆಟ್ಟಿದ ಸೈನ್ಯವನ್ನು ಯಾರು ಮುಂದೆ ತಂದರು?

ಕಡುಹು ಮುರಿದುದು ಕೌರವೇಂದ್ರನ
ಪಡೆಯ ತರಹರ ದಿಕ್ಕುಗೆಟ್ಟುದು
ಮಡಮುರಿಯಲಂಗೈಸಿದರು ದುಶ್ಯಾಸನಾದಿಗಳು
ಕಡಲು ಮೈದೆಗೆವಂತೆ ಬಹ ಬಹು
ಪಡೆಯ ಕಂಡನು ದ್ರೋಣ ಫಡಫಡ
ಪಡೆಯ ತೆಗೆದರೆ ರಾಯನಾಣೆಯೆನುತ್ತ ಮಾರಾಂತ (ಭೀಷ್ಮ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೌರವರ ಸೈನ್ಯದ ಜೋರು ತಗ್ಗಿ ದಿಕ್ಕುಗೆಟ್ಟಿತು. ದುಶ್ಯಾಸನನೇ ಮೊದಲಾದವರ ಹಿಮ್ಮಡಿಗಳು ನಿಸ್ಸತ್ವವಾದವು. ಸಮುದ್ರವು ಹಿಂದಕ್ಕೆ ಹೊರಳಿ ಬಂದಂತೆ ಬರುವ ತಮ್ಮ ಸೈನ್ಯವನ್ನು ನೋಡಿ, ನೀವು ಹಿಮ್ಮೆಟ್ಟಿದರೆ ರಾಜನಾಣೆ ಎಂದು ಗರ್ಜಿಸಿ ದ್ರೋಣನು ಬಂದನು.

ಅರ್ಥ:
ಕಡುಹು: ಸಾಹಸ; ಮುರಿ: ಸೀಳು; ಪಡೆ: ಸೈನ್ಯ, ಬಲ; ತರಹರ: ಸೈರಣೆ, ಸಹನೆ; ದಿಕ್ಕು: ದಿಶೆ; ಕೆಟ್ಟು: ಕೆಡು; ಮಡ: ಪಾದದ ಹಿಂಭಾಗ, ಹರಡು; ಅಂಗೈಸು: ಜತೆಯಾಗು; ಆದಿ: ಮುಂತಾದವರು; ಕಡಲು: ಸಾಗರ; ಮೈದೆಗೆ: ತೋರು, ಪ್ರತ್ಯಕ್ಷವಾಗು; ಬಹು: ಬಹಳ; ಪಡೆ: ಸೈನ್ಯ; ಕಂಡು: ನೋಡು; ಫಡ: ಮೂದಲಿಸುವ ಪದ; ಪಡೆ: ಸೈನ್ಯ; ತೆಗೆ: ತೋರು; ರಾಯ: ರಾಜ; ಆಣೆ: ಪ್ರತಿಜ್ಞೆ; ಮಾರ: ಕೊಲ್ಲುವಿಕೆ; ಮಾರಾಂತ: ಎದುರಾಗಿ;

ಪದವಿಂಗಡಣೆ:
ಕಡುಹು +ಮುರಿದುದು +ಕೌರವೇಂದ್ರನ
ಪಡೆಯ +ತರಹರ +ದಿಕ್ಕುಗೆಟ್ಟುದು
ಮಡಮುರಿಯಲ್+ಅಂಗೈಸಿದರು+ ದುಶ್ಯಾಸನಾದಿಗಳು
ಕಡಲು +ಮೈದೆಗೆವಂತೆ+ ಬಹ +ಬಹು
ಪಡೆಯ +ಕಂಡನು +ದ್ರೋಣ +ಫಡಫಡ
ಪಡೆಯ +ತೆಗೆದರೆ+ ರಾಯನ್+ಆಣೆ+ಎನುತ್ತ +ಮಾರಾಂತ

ಅಚ್ಚರಿ:
(೧) ಪಡೆಯ – ೨, ೫, ೬ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ಕಡಲು ಮೈದೆಗೆವಂತೆ ಬಹ ಬಹುಪಡೆಯ ಕಂಡನು ದ್ರೋಣ

ಪದ್ಯ ೬೨: ರಾವುತರ ಯುದ್ಧ ವೈಖರಿ ಹೇಗಿತ್ತು?

ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದವು ಲೋಹ ಸೀಸಕ
ವಡಸಿ ಬಲ್ಲೆಯ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ರಾವುತರ ದೂಹತ್ತಿಗಳ ಹೊಡೆತಕ್ಕೆ ಲೋಹದ ಶಿರಸ್ತ್ರಾಣಗಳು ಸಿಡಿದವು. ಈಟಿಯ ಮೂತಿಗಳು ಸರಪಣಿಗಳನ್ನು ಪುಡಿಪುಡಿ ಮಾದಿದವು. ಲೌಡಿಗಳು ನೆತ್ತಿಗಳನ್ನು ಒಡೆಯಲು ಮಿದುಳು ಹಾರಿತು. ಎರಡೂ ಕಡೆಗಳಿಂದ ರಕ್ತದ ಕಡಲು ಉಕ್ಕಿ ಒಂದಾದವು.

ಅರ್ಥ:
ಹೊಡೆ: ಏಟು, ಹೊಡೆತ; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಘಾಯ; ಪೆಟ್ಟು; ಸಿಡಿ: ಚಿಮ್ಮು; ಲೋಹ: ಕಬ್ಬಿಣ, ಉಕ್ಕು; ಸೀಸಕ: ಶಿರಸ್ತ್ರಾಣ; ಬಲ್ಲೆ: ಈಟಿ; ಬಿಗಿ: ಕಟ್ಟು; ನಟ್ಟು: ತಾಗು; ಸರಪಣಿ: ಸಂಕೋಲೆ, ಶೃಂಖಲೆ; ಝಗೆ: ಹೊಳಪು, ಪ್ರಕಾಶ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಒತ್ತು: ಚುಚ್ಚು; ನೆತ್ತಿ: ಶಿರ; ಬಿಡುಮಿದುಳು: ಒಡೆದ ತಲೆಯದಂಗ; ಕೆದರು: ಹರಡು; ರಕುತ: ನೆತ್ತರು; ಕಡಲು: ಸಾಗರ; ಕೂಡೆ: ಜೊತೆ; ಹೊಯ್ದಾಡು: ಹೋರಾಡು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಅಡಸು: ಬಿಗಿಯಾಗಿ ಒತ್ತು, ಆಕ್ರಮಿಸು;

ಪದವಿಂಗಡಣೆ:
ಹೊಡೆವ +ದೂಹತ್ತಿಗಳ +ಘಾಯದಲ್
ಒಡೆದು +ಸಿಡಿದವು+ ಲೋಹ +ಸೀಸಕವ್
ಅಡಸಿ +ಬಲ್ಲೆಯ+ ಬಗಿದು+ ನಟ್ಟುದು +ಸರಪಣಿಯ +ಝಗೆಯ
ಹೊಡೆವ+ ಲೌಡಿಗಳೊತ್ತಿ+ ನೆತ್ತಿಯ
ಬಿಡುಮಿದುಳ +ಕೆದರಿದವು +ರಕುತದ
ಕಡಲು+ ಕಡಲನು+ ಕೂಡೆ +ಹೊಯ್ದಾಡಿದರು+ ರಾವುತರು

ಅಚ್ಚರಿ:
(೧) ಯುದ್ದದ ತೀವ್ರತೆ – ರಕುತದ ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು

ಪದ್ಯ ೯: ಸೇನೆಗಳು ಹೋರಾಟ ಯಾವ ಸಮುದ್ರವನ್ನು ರಚಿಸಿದವು?

ಬಿಡದೆ ಕಡಿದಾಡಿದರು ಸೇನಾ
ಗಡಲು ರಕುತದ ಕಡಲನುಗುಳಿತು
ಬಿಡದೆ ಸುಂಟರಗಾಳಿ ವಿಲಯದ ಮಳೆಯ ಪಡೆದಂತೆ
ಒಡೆದು ನಾನಾ ಥಟ್ಟುಗಳ ಮೈ
ವಿಡಿದು ವಾರಿಡುವರುಣಜಲದಲಿ
ಕಡಿಕುಗಳು ಬೆಂಡೇಳೆ ದಂತಿಗಳಟ್ಟೆ ಕೊಡೆ ನೆಗೆಯೆ (ಭೀಷ್ಮ ಪರ್ವ, ೪ ಸಂಧಿ, ೯ ಪದ್ಯ)

ತಾತ್ಪರ್ಯ:
ಛಲದಿಂದ ಕಡಿದಾಡಿದ ಸೇನೆಗಳ ಸಮುದ್ರವು ರಕ್ತಸಮುದ್ರವನ್ನು ರಚಿಸಿತು. ಸುಂಟರಗಾಳಿಯು ಬೀಸಿ ಪ್ರಳಯ ಕಾಲದ ಮಳೆಯನ್ನು ತಂದಂತೆ ರಭಸದಿಂದ ಸೇನೆಗಳ ಮೈಯಲ್ಲಿದ್ದ ರಕ್ತವು ನೀರಿನಂತೆ ಹರಿಯಿತು. ಅದರಲ್ಲಿ ಮಾಂಸದ ತುಂಡುಗಳು ತೇಲಿದವು. ಆನೆಗಳ ಪಾದಗಳು ಅವಕ್ಕೆ ಕೊಡೆಯಂತೆ ಮೇಲೆದ್ದವು.

ಅರ್ಥ:
ಬಿಡು: ತೊರೆ; ಕಡಿದಾಡು: ಹೋರಾಡು; ಸೇನ: ಸೈನ್ಯ; ಕಡಲು: ಸಾಗರ; ರಕುತ: ನೆತ್ತರು; ಉಗುಳಿತು: ಹೊರಹಾಕು; ಸುಂಟರಗಾಳಿ: ಬಿರುಗಾಳಿ; ವಿಲಯ: ನಾಶ, ಪ್ರಳಯ; ಮಳೆ: ವರ್ಷ; ಒಡೆ: ಸೀಳು; ಥಟ್ಟು: ಗುಂಪು, ಸಮೂಹ; ಮೈ: ತನು; ವಾರಿ: ನೀರು; ವರುಣ: ನೀರಿನ ಅಧಿದೇವತೆ; ಜಲ: ನೀರು; ಕಡಿಕು: ತುಂಡು, ಹೋಳು; ಬೆಂಡು: ತಿರುಳಿಲ್ಲದುದು, ಪೊಳ್ಳು; ದಂತಿ: ಆನೆ; ಕೊಡೆ: ಛತ್ರ; ನೆಗೆ: ಜಿಗಿತ;

ಪದವಿಂಗಡಣೆ:
ಬಿಡದೆ+ ಕಡಿದಾಡಿದರು +ಸೇನಾ
ಕಡಲು +ರಕುತದ +ಕಡಲನ್+ಉಗುಳಿತು
ಬಿಡದೆ +ಸುಂಟರಗಾಳಿ+ ವಿಲಯದ +ಮಳೆಯ +ಪಡೆದಂತೆ
ಒಡೆದು +ನಾನಾ +ಥಟ್ಟುಗಳ +ಮೈ
ವಿಡಿದು +ವಾರಿಡು+ವರುಣ+ಜಲದಲಿ
ಕಡಿಕುಗಳು +ಬೆಂಡೇಳೆ +ದಂತಿಗಳಟ್ಟೆ+ ಕೊಡೆ +ನೆಗೆಯೆ

ಅಚ್ಚರಿ:
(೧) ಕಡಲು ಪದದ ಬಳಕೆ – ಸೇನಾಗಡಲು ರಕುತದ ಕಡಲನುಗುಳಿತು
(೨) ಉಪಮಾನದ ಪ್ರಯೋಗ – ಮೈವಿಡಿದು ವಾರಿಡುವರುಣಜಲದಲಿ ಕಡಿಕುಗಳು ಬೆಂಡೇಳೆ ದಂತಿಗಳಟ್ಟೆ ಕೊಡೆ ನೆಗೆಯೆ

ಪದ್ಯ ೧೩: ಕೌರವಸೇನೆ ಏಕೆ ನಗುತ್ತಿತ್ತು?

ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ (ವಿರಾಟ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಉತ್ತರನು ರಥದಿಂದ ಧುಮುಕಿ ಕೆದರುಗೂದಲನ್ನು ಬಿಟ್ಟುಕೊಂಡು, ಸತ್ತೆನೋ ಕೆಟ್ಟೆನೋ ಎಂದು ಓಡುತ್ತಿರುವುದನ್ನು ಅರ್ಜುನನು ನೋಡಿದನು. ಎಲಾ ಈ ಪಾಪಿಯು ಓಡುತ್ತಿದ್ದಾನೆ, ಹಿಡಿಯಬೇಕು ಎಂದುಕೊಂಡು ರಥದ ಗತಿಯನ್ನು ತಡೆದು ಹಿಂದಕ್ಕೆ ರಥವನ್ನು ಬಿಡಲು ಭೂಮಿ ಕುಗ್ಗಿ ಆದಿಶೇಷನು ಬೆದರಿದನು. ಉತ್ತಾರನ ಓಟವನ್ನು ನೋಡಿ ಕೌರವರ ಸೇನೆಯು ನಗೆಗಡಲಿನಲ್ಲಿ ಮುಳುಗಿತು.

ಅರ್ಥ:
ನೋಡು: ವೀಕ್ಷಿಸು; ಕಲಿ: ಶೂರ; ಪಾರ್ಥ: ಅರ್ಜುನ; ಕೇಡಾಡಿ: ಕೇಡು ಮಾಡುವ ಸ್ವಭಾವದವ; ಕೆದರು: ಹರಡಿದ; ಕೇಶ: ಕೂದಲು; ಕೆಟ್ಟೋಡು: ಧಾವಿಸು, ಕೆಟ್ಟೆನೋ ಎಂದು ತಿಳಿದು ಓಡು; ಪಾಪಿ: ದುಷ್ಟ; ಹಾಯಿ: ಮೇಲೆಬೀಳು; ಹಿಡಿ: ಬಂಧಿಸು; ಕೂಡೆ: ಒಮ್ಮೆಲೆ; ಸೂಟಿ: ವೇಗ; ಅಟ್ಟು: ಬೆನ್ನುಹತ್ತಿ ಹೋಗು; ಇಳೆ: ಭೂಮಿ; ಅಲ್ಲಾಡು: ನಡುಗು; ಅಹಿಪತಿ: ಆದಿಶೇಶ; ಹೆದರು: ಬೆದರಿಕೆ; ನೋಡು: ವೀಕ್ಷಿಸು; ಸೇನೆ: ಸೈನ್ಯ; ಕೆಡೆ: ಬೀಳು, ಕುಸಿ; ನಗೆ: ಹರ್ಷ; ಕಡಲು: ಸಾಗರ;

ಪದವಿಂಗಡಣೆ:
ನೋಡಿದನು +ಕಲಿ+ಪಾರ್ಥನ್+ಈ+ ಕೇ
ಡಾಡಿ +ಕೆದರಿದ +ಕೇಶದಲಿ +ಕೆಟ್ಟ್
ಓಡುತಿರಲ್+ಎಲೆ+ ಪಾಪಿ +ಹಾಯ್ದನು +ಹಿಡಿಯಬೇಕೆನುತ
ಕೂಡೆ +ಸೂಟಿಯೊಳ್+ಅಟ್ಟಲ್+ಇಳೆ
ಅಲ್ಲಾಡಲ್+ಅಹಿಪತಿ +ಹೆದರಲ್+ಇತ್ತಲು
ನೋಡಿ +ಕೌರವಸೇನೆ +ಕೆಡೆದುದು +ನಗೆಯ +ಕಡಲೊಳಗೆ

ಅಚ್ಚರಿ:
(೧) ಜೋರಾಗಿ ನಕ್ಕರು ಎಂದು ಹೇಳಲು – ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ
(೨) ವೇಗವನ್ನು ವಿವರಿಸುವ ಪರಿ – ಸೂಟಿಯೊಳಟ್ಟಲಿಳೆಯಲ್ಲಾಡಲಹಿಪತಿ ಹೆದರಲು
(೩) ಉತ್ತರನ ಸ್ಥಿತಿ (ಕೆ ಕಾರದ ಸಾಲು ಪದ) – ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲೆ

ಪದ್ಯ ೫೪: ಭೀಮ ಜೀಮೂತರ ಯುದ್ಧ ಹೇಗಿತ್ತು?

ಕಡಲು ಕಡಲೊಳು ಹಳಚುವಂತಿರೆ
ಸಿಡಿಲು ಸಿಡಿಲಿನೊಳೆರಗುವಂತಿರೆ
ಕಡುಹುಮಿಗೆ ಜೀಮೂತ ಭೀಮರ ಹೊಯ್ಲಹೋರಟೆಯ
ಬಿಡದೆ ನೋಡುತ ನಡುಗಿದುದು ವಿಯ
ದೆಡೆಯ ನೋಡುವ ನೆರವಿ ಮೈಮರೆ
ದೊಡಲ ಸಂಚದೊಳಿದ್ದುದಲ್ಲಿಯ ಮಡದಿಯರ ನಿವಹ (ವಿರಾಟ ಪರ್ವ, ೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ಸಮುದ್ರವು ಸಮುದ್ರದೊಡನೆ, ಸಿಡಿಲು ಸಿಡಿಲಿನೊಡನೆ ಹೋರಾಡುವಂತೆ ಭೀಮ ಜೀಮೂತರು ಹೋರಾಡಿದರು. ಹೋರಾಟವನ್ನು ನೋಡುತ್ತಾ ಆಕಾಶದ ದೇವತೆಗಳು ಬೆದರಿದರು. ಆಸ್ಥಾನದಲ್ಲಿದ್ದ ಸ್ತ್ರೀಯರು ಮೈಮರೆತರು.

ಅರ್ಥ:
ಕಡಲು: ಸಾಗರ; ಹಳಚು: ತಾಗು, ಬಡಿ; ಸಿಡಿಲು: ಅಶನ; ಎರಗು: ಬಾಗು; ಕಡುಹು: ಸಾಹಸ, ಹುರುಪು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಬಿಡು: ತೊರೆ; ನೋಡು: ವೀಕ್ಷಿಸು; ನಡುಗು: ಅದುರು, ಕಂಪನ; ವಿಯತ್ತಳ: ಆಗಸ; ನೆರವಿ: ಗುಂಪು, ಸಮೂಹ; ಮೈಮರೆ: ಎಚ್ಚರವಿಲ್ಲದ ಸ್ಥಿತಿ; ಒಡಲು: ದೇಹ; ಸಂಚು: ಉಪಾಯ, ಯುಕ್ತಿ; ಮಡದಿ: ಹೆಂಡತಿ; ನಿವಹ: ಗುಂಪು;

ಪದವಿಂಗಡಣೆ:
ಕಡಲು +ಕಡಲೊಳು+ ಹಳಚುವಂತಿರೆ
ಸಿಡಿಲು +ಸಿಡಿಲಿನೊಳ್+ಎರಗುವಂತಿರೆ
ಕಡುಹುಮಿಗೆ +ಜೀಮೂತ +ಭೀಮರ+ ಹೊಯ್ಲ+ಹೋರಟೆಯ
ಬಿಡದೆ+ ನೋಡುತ +ನಡುಗಿದುದು +ವಿಯದ್
ಎಡೆಯ +ನೋಡುವ +ನೆರವಿ+ ಮೈಮರೆದ್
ಒಡಲ+ ಸಂಚದೊಳಿದ್ದುದ್+ಅಲ್ಲಿಯ+ ಮಡದಿಯರ +ನಿವಹ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲು ಕಡಲೊಳು ಹಳಚುವಂತಿರೆ ಸಿಡಿಲು ಸಿಡಿಲಿನೊಳೆರಗುವಂತಿರೆ
ಕಡುಹುಮಿಗೆ ಜೀಮೂತ ಭೀಮರ ಹೊಯ್ಲಹೋರಟೆಯ

ಪದ್ಯ ೩೯: ಅರ್ಜುನನ ಬಾಣವು ಚಿತ್ರಸೇನನನ್ನು ಹೇಗೆ ಆವರಿಸಿದವು?

ಬಿಡುವೆಯಾದರೆ ನೃಪನ ಸೆರೆಯನು
ಬಿಡಿಸುವೆನು ಮೇಣಲ್ಲದಿರ್ದೊಡೆ
ಬಿಡಿಸುವೆನು ನಿನ್ನುಸುರ ಸೆರ್ಯನು ನಿನ್ನ ದೇಹದಲಿ
ನುಡಿಗೆ ತೆರಹಿಲ್ಲೇಳೆನುತ ಕೈ
ಗಡಿಯಲೆಚ್ಚನು ಕಾಲಕೂಟದ
ಕಡಲು ಕವಿವಂದದಲಿ ಕವಿದವು ಪಾರ್ಥನಂಬುಗಳು (ಅರಣ್ಯ ಪರ್ವ, ೨೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅರ್ಜುನನು ಚಿತ್ರಸೇನನಿಗೆ ಹೇಳುತ್ತಾ, ನೀನು ಕೌರವನನ್ನು ಬಿಡುವೆಯಾದರೆ ನಿನ್ನನ್ನು ಬಿಡುತ್ತೇನೆ, ಇಲ್ಲದಿದ್ದರೆ ನಿನ್ನ ಉಸಿರು ನಿನ್ನ ದೇಹದಲ್ಲಿ ಸರೆಯಾಗಿರುವುದನ್ನು ಬಿಡಿಸುತ್ತೇನೆ. ಈ ಮಾತಿಗೆ ಬೇರಿಲ್ಲ, ಏಳು ಎನ್ನುತ್ತಾ ಚಿತ್ರಸೇನನ ಕೈಚಲಕ ತಪ್ಪುವಂತೆ ಬಾಣಗಳನ್ನು ಬಿಡಲು, ಕಾಲಕೂಟದ ಸಮುದ್ರ ಮುತ್ತುತ್ತಿದೆಯೋ ಎಂಬಂತೆ ಅರ್ಜುನನ ಬಾಣಗಳು ಗಂಧರ್ವನನ್ನು ಕವಿದವು.

ಅರ್ಥ:
ಬಿಡು: ತೊರೆ; ನೃಪ: ರಾಜ; ಸೆರೆ: ಬಂಧನ; ಬಿಡಿಸು: ನಿವಾರಿಸು, ಹೋಗಲಾಡಿಸು; ಮೇಣ್: ಅಥವ; ಉಸುರ: ಜೀವ; ದೇಹ: ಕಾಯ; ನುಡಿ: ಮಾತು; ತೆರಹು: ಎಡೆ, ಜಾಗ; ಎಚ್ಚು: ಬಾಣವನ್ನು ಬಿಡು; ಕಾಲಕೂಟ: ವಿಷ; ಕಡಲು: ಸಾಗರ; ಕವಿ: ಆವರಿಸು; ಅಂಬು: ಬಾಣ;

ಪದವಿಂಗಡಣೆ:
ಬಿಡುವೆಯಾದರೆ +ನೃಪನ +ಸೆರೆಯನು
ಬಿಡಿಸುವೆನು +ಮೇಣ್+ಅಲ್ಲದಿರ್ದೊಡೆ
ಬಿಡಿಸುವೆನು +ನಿನ್ನುಸುರ +ಸೆರೆಯನು +ನಿನ್ನ+ ದೇಹದಲಿ
ನುಡಿಗೆ+ ತೆರಹಿಲ್+ಏಳೆನುತ +ಕೈ
ಗಡಿಯಲ್+ಎಚ್ಚನು +ಕಾಲಕೂಟದ
ಕಡಲು+ ಕವಿವಂದದಲಿ +ಕವಿದವು +ಪಾರ್ಥನ್+ಅಂಬುಗಳು

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೈಗಡಿಯಲೆಚ್ಚನು ಕಾಲಕೂಟದ ಕಡಲು ಕವಿವಂದದಲಿ ಕವಿದವು
(೨) ಉಪಮಾನದ ಪ್ರಯೋಗ – ಕಾಲಕೂಟದಕಡಲು ಕವಿವಂದದಲಿ ಕವಿದವು ಪಾರ್ಥನಂಬುಗಳು
(೩) ಸಾಯಿಸುವೆ ಎಂದು ಹೇಳುವ ಪರಿ – ಬಿಡಿಸುವೆನು ನಿನ್ನುಸುರ ಸೆರ್ಯನು ನಿನ್ನ ದೇಹದಲಿ

ಪದ್ಯ ೩೨: ಯುದ್ಧದ ತೀವ್ರತೆ ಹೇಗಿತ್ತು?

ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ ನಿಹಾರದ
ದಡಿಗೆ ದಾನವರೈದಿ ಕವಿದುದು ಕೆದರಿ ಸುರಬಲವ
ಫಡ ಫಡಿದಿರಾಗಲಿ ಸುರೇಂದ್ರನ
ತುಡುಕ ಹೇಳಾ ಕಾಲವಿದಲಾ
ತೊಡರೆನುತ ಹೊಯ್ದುರುಬಿತಸುರರು ಸುರರ ಸಂದಣಿಯ (ಅರಣ್ಯ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಿವ ಶಿವಾ ಭೂಮಿಯೊಡೆಯಿತು. ವಿಷಮಾಗ್ನಿಯ ಸಮುದ್ರ ಎನ್ನುವಂತೆ ಮಹಾಬಲಶಾಲಿಗಳಾದ ಸ್ಥೂಲಕಾಯರಾದ ರಾಕ್ಷಸರು ದೇವಸೈನ್ಯವನ್ನು ಭೇದಿಸಿ ಮತ್ತಿದರು. ಫಡ ಫಡಾ ದೇವೆಂದ್ರನು ಇದಿರಾಗಲಿ, ನಮ್ಮನ್ನು ಕೆಣಕಲಿ. ಯುದ್ಧಕ್ಕೆ ಇದೇ ಕಾಲ ಎನ್ನುತ್ತಾ ರಾಕ್ಷಸರು ದೇವತೆಗಳ ಮೇಲ್ವಾಯ್ದು ಹೋಯ್ದರು.

ಅರ್ಥ:
ಒಡೆದು: ಸೀಳು; ಇಳೆ: ಭೂಮಿ; ಸಮ: ಮಟ್ಟಸವಾದ, ಚಪ್ಪಟೆಯಾದ; ವಿಷಮ: ಸಮವಾಗಿಲ್ಲದಿರುವುದು; ಉರಿ: ಜ್ವಾಲೆ; ಕಡಲು: ಸಮುದ್ರ; ನಿಹಾರ: ಮಂಜಿನಂತೆ ದಟ್ಟವಾಗಿರುವುದು; ಕವಿದು: ಮುಸುಕು; ಕೆದರು: ಹರಡು; ಸುರಬಲ: ದೇವತೆಗಳ ಸೈನ್ಯ; ಫಡ: ಕೋಪಗಳನ್ನು ಸೂಚಿಸುವ ಒಂದು ಮಾತು; ಸುರೇಂದ್ರ: ಇಂದ್ರ; ತುಡುಕು: ಹೋರಾಡು; ಕಾಲ: ಸಮಯ; ತೊಡರು: ಸಂಬಂಧ, ಸಂಕೋಲೆ, ಸರಪಳಿ; ಹೊಯ್ದು: ಹೊಡೆದು; ಉರುಬು: ಅತಿಶಯವಾದ ವೇಗ; ಅಸುರ: ರಾಕ್ಷಸ; ಸುರ: ದೇವತೆ; ಸಂದಣಿ: ಗುಂಪು, ಸಮೂಹ;

ಪದವಿಂಗಡಣೆ:
ಒಡೆದುದ್+ಇಳೆಯೆನೆ +ಸಮ+ ವಿಷಮದ್+ಉರಿ
ಕಡಲು +ಶಿವ +ಶಿವಯೆನೆ +ನಿಹಾರದ
ದಡಿಗೆ+ ದಾನವರ್+ಐದಿ+ ಕವಿದುದು +ಕೆದರಿ +ಸುರಬಲವ
ಫಡ+ ಫಡಿದಿರಾಗಲಿ +ಸುರೇಂದ್ರನ
ತುಡುಕ +ಹೇಳಾ +ಕಾಲವಿದಲಾ
ತೊಡರೆನುತ +ಹೊಯ್ದ್+ಉರುಬಿತ್+ಅಸುರರು+ ಸುರರ+ ಸಂದಣಿಯ

ಅಚ್ಚರಿ:
(೧) ಯುದ್ಧದ ತೀವ್ರತೆಯನ್ನು ಹೇಳುವ ಪರಿ – ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ