ಪದ್ಯ ೨೦: ಭಾರತ ಕಥೆಯನ್ನು ಆಲಿಸುವುದರಿಂದ ಯಾವ ಫಲವು ದೊರೆಯುತ್ತದೆ?

ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ (ಗದಾ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ಮಹಾಭಾರತದ ಒಂದು ಅಕ್ಷರವನ್ನು ಪ್ರೀತಿಯಿಂದ ಕೇಳಿದವರಿಗೆ ವೇದ ಪಾರಾಯಣದ ಫಲ, ಗಂಗಾದಿ ತೀರ್ಥಗಳಲ್ಲಿ ಸ್ನಾನ ಮಾಡಿದ ಫಲ, ಕೃಚ್ಛ್ರಾದಿ ತಪಸ್ಸುಗಲನ್ನು, ಜ್ಯೋತಿಷ್ಟೋಮ ಯಾಗವನ್ನು ಮಾಡಿದ ಫಲ, ಪ್ರೀತಿಯಿಂದ ಭೂದಾನ, ವಸ್ತ್ರದಾನ, ಕನ್ಯಾದಾನಗಳನ್ನು ಮಾಡಿದ ಫಲವೂ ದೊರೆಯುತ್ತದೆ.

ಅರ್ಥ:
ವೇದ: ಶೃತಿ; ಪಾರಾಯಣ: ಗ್ರಂಥಾದಿಗಳನ್ನು ಮೊದಲಿನಿಂದ ಕಡೆಯವರೆಗೆ ಓದುವುದು; ಫಲ: ಪ್ರಯೋಜನ; ಗಂಗೆ: ಜಾಹ್ನವಿ; ತೀರ್ಥ: ಪವಿತ್ರವಾದ ಜಲ, ನೀರು; ಸ್ನಾನ: ಜಳಕ; ತಪಸ್ಸು: ಧ್ಯಾನ ಮಾಡುವುದು; ಜ್ಯೋತಿ: ಬೆಳಕು; ಯಾಗ: ಯಜ್ಞ; ಮೇದಿನಿ: ಭೂಮಿ; ಒಲಿದು: ಪ್ರೀತಿಸು; ವಸ್ತ್ರ: ಬಟ್ಟೆ; ಕನ್ಯ: ಹೆಣ್ಣು; ದಾನ: ನೀಡು; ಆದರ: ಗೌರವ; ಅಕ್ಷರ: ಅಕ್ಕರ; ಕೇಳು: ಆಲಿಸು;

ಪದವಿಂಗಡಣೆ:
ವೇದಪಾರಾಯಣದ +ಫಲ +ಗಂ
ಗಾದಿ +ತೀರ್ಥ+ಸ್ನಾನ+ಫಲ+ ಕೃ
ಚ್ಛ್ರಾದಿ +ತಪಸಿನ +ಫಲವು +ಜ್ಯೋತಿಷ್ಟೋಮ+ಯಾಗ+ಫಲ
ಮೇದಿನಿಯನ್+ಒಲಿದಿತ್ತ+ ಫಲ+ ವ
ಸ್ತ್ರಾದಿ +ಕನ್ಯಾದಾನ+ಫಲವಹುದ್
ಆದರಿಸಿ +ಭಾರತದೊಳ್+ಒಂದಕ್ಷರವ+ ಕೇಳ್ದರಿಗೆ

ಅಚ್ಚರಿ:
(೧) ಫಲ ಪದದ ಪ್ರಯೋಗ – ೬ ಬಾರಿ ಪ್ರಯೋಗ

ಪದ್ಯ ೧೯: ಭಾರತದ ಕತೆಯನ್ನು ಕೇಳುವುದರ ಉಪಯೋಗವೇನು?

ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ರೀ ಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು (ಗದಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ, ಮಹರ್ಷಿಗಳೇ, ವೈಶಂಪಾಯನನಿಂದ ಮಹಾಭಾರತವನ್ನು ಕೇಳಿದ ಜನಮೇಜಯರಾಯನು, ಸರ್ಪಯಾಗದಿಮ್ದಾದ ಪಾಪಕರ್ಮದ ದರ್ಪವನ್ನು ತೆಗೆದೊಗೆದು, ಸೂರ್ಯನ ತೇಜಸ್ಸಿಗೆ ಮೀರಿದ ತೇಜಸ್ಸಿನಿಂದ ಹೊಳೆದನು. ಅದನ್ನು ಕಂಡು ಮನುಷ್ಯರೂ, ದೇವತೆಗಳೂ ಬೆರಗಾದರು. ಈ ಭಾರತದ ಕತೆಯನ್ನು ತಪ್ಪದೇ ಕೇಳಿದವನಿಗೆ ದೇವೇಂದ್ರನ ಪದವಿ ದೊರಕುತ್ತದೆ ಎಂದು ಬಿನ್ನೈಸಿದನು.

ಅರ್ಥ:
ಸರ್ಪ: ಹಾವು, ಉರಗ; ಯಾಗ: ಯಜ್ಞ, ಕ್ರತು; ಕರ್ಮ: ಕೆಲಸ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೆಳಗು: ಪ್ರಕಾಶ; ಉಪ್ಪರ:ಅತಿಶಯ; ರವಿ: ಸೂರ್ಯ; ತೇಜಸ್ಸು: ಪ್ರಕಾಶ; ಸುರ: ದೇವತೆ; ನರ: ಮನುಷ್ಯ; ಬೆರಗು: ಆಶ್ಚರ್ಯ; ತಪ್ಪದು: ಸರಿಯಾಗದು; ಅಪ್ಪುದು: ಆಲಿಂಗಿಸು, ಒಪ್ಪು; ಒಪ್ಪು: ಸಮ್ಮತಿ; ಅಮರಸ್ತ್ರೀ: ಅಪ್ಸರೆ; ಕದಂಬ: ಸಮೂಹ; ಒಪ್ಪು: ಸಮ್ಮತಿ; ಇಂದ್ರ: ದೇವತೆಗಳ ಅರಸ; ಪದವಿ: ಪಟ್ಟ; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸರ್ಪಯಾಗದೊಳ್+ಆದ+ ಕರ್ಮದ
ದರ್ಪವನು+ ಕೆಡೆ+ಒದೆದು+ ಬೆಳಗಿದನ್
ಉಪ್ಪರದ +ರವಿತೇಜದಲಿ+ ಸುರನರರು +ಬೆರಗಾಗೆ
ತಪ್ಪದೀ +ಭಾರತವ +ಕೇಳ್ದಂಗ್
ಅಪ್ಪುದ್+ಅಮರಸ್ರೀ+ ಕದಂಬದೊಳ್
ಒಪ್ಪುವ್+ಇಂದ್ರನ +ಪದವಿ+ಎಂದನು +ಸೂತ +ಕೈಮುಗಿದು

ಅಚ್ಚರಿ:
(೧) ರೂಪಕದ ಪ್ರಯೋಗ – ಬೆಳಗಿದನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ

ಪದ್ಯ ೧೮: ಜನಮೇಜಯ ರಾಜನು ಯಾವ ದಾನಗಳನ್ನು ನೀಡಿದನು?

ಅರಸ ವೈಶಂಪಾಯನಿಗೆ ನಿಜ
ಕರವ ಮುಗಿದು ಸುವರ್ಣವಸ್ತ್ರಾ
ಭರಣ ಗೋವ್ರಜ ಭೂಮಿ ಕನ್ಯಾದಾನ ಮಣಿಗಣದಿ
ಹಿರಿದು ಪರಿಯಲಿ ಮನದಣಿವವೋ
ಲುರುತರದ ದ್ರವ್ಯಾದಿಗಳ ಭೂ
ಸುರರಿಗಿತ್ತನು ರಾಯ ಜನಮೇಜಯಮಹೀಪಾಲ (ಗದಾ ಪರ್ವ, ೧೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಹಾಭಾರತವನ್ನು ಕೇಳಿದ ಜನಮೇಜಯ ಮಹಾರಾಜನು ವೈಶಂಪಾಯನ ಮುನಿಗಳಿಗೆ ನಮಸ್ಕರಿಸಿ, ಬ್ರಾಹ್ಮಣರಿಗೆ ಬಂಗಾರ, ಬಟ್ಟೆ, ಒಡವೆ, ಗೋವು, ಭೂಮಿ, ಕನ್ಯಾ, ರತ್ನ ಮೊದಲಾದ ದಾನಗಳನ್ನು ನೀಡಿದನು.

ಅರ್ಥ:
ಅರಸ: ರಾಜ; : ಕರಮುಗಿದು: ನಮಸ್ಕರಿಸು; ಸುವರ್ಣ: ಚಿನ್ನ; ವಸ್ತ್ರ: ಬಟ್ಟೆ; ಆಭರಣ: ಒಡವೆ; ಗೋ: ಗೋವು, ವ್ರಜ: ಗುಂಪು; ಭೂಮಿ: ಮಹಿ, ಅವನಿ; ಕನ್ಯ: ಹೆಣ್ಣು; ದಾನ: ನೀಡು; ಮಣಿ: ಬೆಲೆಬಾಳುವ ರತ್ನ; ಹಿರಿ: ದೊಡ್ಡ; ಪರಿ: ರೀತಿ; ಮನ: ಮನಸ್ಸು; ದಣಿ: ಆಯಾಸ; ಉರುತರ: ಅತಿಶ್ರೇಷ್ಠ; ದ್ರವ್ಯ: ವಸ್ತು, ಪದಾರ್ಥ; ಆದಿ: ಮುಂತಾದ; ಭೂಸುರ: ಬ್ರಾಹ್ಮಣ; ರಾಯ: ರಾಜ; ಮಹೀಪಾಲ: ರಾಜ;

ಪದವಿಂಗಡಣೆ:
ಅರಸ +ವೈಶಂಪಾಯನಿಗೆ +ನಿಜ
ಕರವ +ಮುಗಿದು +ಸುವರ್ಣ+ವಸ್ತ್ರಾ
ಭರಣ+ ಗೋವ್ರಜ+ ಭೂಮಿ +ಕನ್ಯಾದಾನ +ಮಣಿಗಣದಿ
ಹಿರಿದು +ಪರಿಯಲಿ +ಮನದಣಿವವೋಲ್
ಉರುತರದ+ ದ್ರವ್ಯಾದಿಗಳ+ ಭೂ
ಸುರರಿಗ್+ಇತ್ತನು+ ರಾಯ +ಜನಮೇಜಯ+ಮಹೀಪಾಲ

ಅಚ್ಚರಿ:
(೧) ಅರಸ, ರಾಯ, ಮಹೀಪಾಲ – ಸಮಾನಾರ್ಥಕ ಪದ
(೨) ಉಪಮಾನದ ಪ್ರಯೋಗ -ಹಿರಿದು ಪರಿಯಲಿ ಮನದಣಿವವೊಲ್

ಪದ್ಯ ೧೭: ಯಾರು ನಮ್ಮನ್ನು ಪ್ರೀತಿಯಿಂದ ರಕ್ಷಿಸಲು ಕುಮಾರವ್ಯಾಸರು ಬೇಡುತ್ತಾರೆ?

ಶ್ರೀಮದಮರಾಧೀಶ ನುತಗುಣ
ತಾಮರಸಪದ ವಿಪುಳನಿರ್ಮಳ
ನಾಮನನುಪಮ ನಿಖಿಳಯತಿಪತಿದಿವಿಜವಂದಿತನು
ರಾಮನೂರ್ಜಿತನಾಮ ಸುಧೆಯಾ
ರಾಮನಾಹವಭೀಮ ರಘುಕುಲ
ರಾಮ ಪಾಲಿಸುವೊಲಿದು ಗದುಗಿನ ವೀರನಾರಯಣ (ಗದಾ ಪರ್ವ, ೧೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೇವತೆಗಳ ಅಧಿಪತಿಯೂ, ಸಮಸ್ತ ಸದ್ಗುಣಯುಕ್ತವಾದ ಪಾದಕಮಲಗಲನ್ನುಳ್ಳವನೂ, ನಿರ್ಮ್ಲನಾಮನೂ, ಸಮಸ್ತಯತಿಗಳಿಂದಲೂ ದೇವತೆಗಳಿಂದಲೂ ನಮಸ್ಕರಿಸಲ್ಪಡುವವನೂ, ಆನಂದನೂ, ಊರ್ಜಿತನಾಮನೂ, ಯುದ್ಧದಲ್ಲಿ ಶತ್ರು ಭಯಂಕರನೂ ರಘುಕುಲಭೂಷಣನೂ ಆದ ಶ್ರೀರಾಮನೇ, ಗದುಗಿನ ವೀರನಾರಾಯಣನೇ ಪ್ರೀತಿಯಿಂದ ಪಾಲಿಸು.

ಅರ್ಥ:
ಅಮರಾಧೀಶ: ದೇವತೆಗಳ ಅಧಿಪತಿ; ನುತ: ಹೊಗಳಿದ; ಗುಣ: ನಡತೆ, ಸ್ವಭಾವ, ಸತ್ತ್ವ; ತಾಮರಸ: ಕಮಲ, ತಾವರೆ; ಪದ: ಚರಣ; ಅನುಪಮ: ಉತ್ಕೃಷ್ಟ; ವಿಪುಳ: ವಿಶೇಷ; ನಿರ್ಮಳ: ಶುದ್ಧ; ಯತಿ: ಸಂನ್ಯಾಸಿ; ದಿವಿಜ: ದೇವತೆ; ವಂದಿತ: ನಮಸ್ಕರಿಸಲ್ಪಟ್ಟ; ಊರ್ಜಿತ: ಶಕ್ತಿಯಿಂದ ಕೂಡಿದ; ನಾಮ: ಹೆಸರು; ಸುಧೆ: ಅಮೃತ; ಆಹವ: ಯುದ್ಧ; ಭೀಮ: ಶಕ್ತಿ, ಭಯಂಕರ; ಕುಲ: ವಂಶ; ಪಾಲಿಸು: ರಕ್ಷಿಸು, ಕಾಪಾಡು; ಒಲಿ: ಪ್ರೀತಿ;

ಪದವಿಂಗಡಣೆ:
ಶ್ರೀಮದ್+ಅಮರಾಧೀಶ +ನುತ+ಗುಣ
ತಾಮರಸ+ಪದ+ ವಿಪುಳ+ನಿರ್ಮಳ
ನಾಮನ್+ಅನುಪಮ +ನಿಖಿಳ+ಯತಿಪತಿ+ದಿವಿಜ+ವಂದಿತನು
ರಾಮನ್+ಊರ್ಜಿತ+ನಾಮ +ಸುಧೆಯಾ
ರಾಮನ್+ಆಹವ+ಭೀಮ +ರಘುಕುಲ
ರಾಮ +ಪಾಲಿಸು+ಒಲಿದು +ಗದುಗಿನ +ವೀರನಾರಯಣ

ಅಚ್ಚರಿ:
(೧) ಒಂದೇ ಪದವಾಗಿ ರಚನೆ: ವಿಪುಳನಿರ್ಮಳನಾಮನನುಪಮ ನಿಖಿಳಯತಿಪತಿದಿವಿಜವಂದಿತನು

ಪದ್ಯ ೧೬: ಯಾರ ನಾಮಸ್ಮರಣೆ ಭವಸಾಗರದ ದುಃಖವನ್ನು ತಪ್ಪಿಸುತ್ತದೆ?

ಭವದುರಿತಹರವಕಟ ಹರಿನಾ
ಮವನು ನೆನೆವರು ಕಾಲಚಕ್ರದ
ಜವನ ಬೇಗೆಯ ಜುಣುಗಿ ಜಾರುವರಖಿಳ ಮಾನವರು
ಕವಿ ಕುಮಾರವ್ಯಾಸಸೂಕ್ತದ
ಸವೆಯದಮೃತವನೊಲಿದೊಲಿದು ಸು
ಶ್ರವಣದಲಿ ಕುಡಿಕುಡಿದು ಪದವಿಯ ಪಡೆವುದೀ ಲೋಕ (ಗದಾ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅಯ್ಯೋ ಈ ಲೋಕದ ಕಾಲಚಕ್ರದ ಉರುಳಿನಲ್ಲಿ ಸಿಲುಕಿದವರು, ಹರಿನಾಮವನ್ನು ನೆನೆದರೆ ಆ ಯಮನ ದಾಳಿಯಿಂದ ತಪ್ಪಿಸಿಕೊಂಡು ಬಿಡುತ್ತಾರೆ. ಕುಮಾರವ್ಯಾಸ ಕವಿಯು ಚೆನ್ನಾಗಿ ಹೇಳಿರುವ ಭಾರತದ ತೀರದಮೃತವನ್ನು ಪ್ರೀತಿಯಿಂದ ಕೇಳಿ ಕೇಳಿ ಕುಡಿದು ಈ ಲೋಕವು ಶಾಶ್ವತ ಪದವಿಯನ್ನು ಪಡೆಯುತ್ತದೆ.

ಅರ್ಥ:
ಭವ: ಇರುವಿಕೆ, ಅಸ್ತಿತ್ವ; ದುರಿತ: ಪಾಪ, ಕಷ್ಟ; ಹರ: ಹೋಗಲಾಡಿಸು; ಅಕಟ: ಅಯ್ಯೋ; ಹರಿ: ವಿಷ್ಣು; ನಾಮ: ಹೆಸರು; ನೆನೆ: ಜ್ಞಾಪಿಸು; ಕಾಲ: ಸಮಯ; ಚಕ್ರ: ಗಾಲಿ; ಜವ: ಯಮ; ಬೇಗೆ: ಬೆಂಕಿ, ಕಿಚ್ಚು; ಜುಣುಗು: ಜಾರಿಕೊಳು; ಜಾರು: ತಪ್ಪಿಸಿಕೊಳ್ಳು, ಬೀಳು; ಅಖಿಳ: ಎಲ್ಲಾ; ಮಾನವ: ಮನುಷ್ಯ; ಸೂಕ್ತ: ಒಳ್ಳೆಯ ಮಾತು; ಸವೆ: ರಚಿತವಾಗು, ಉಂಟಾಗು; ಅಮೃತ: ಸುಧೆ; ಒಲಿದು: ಪ್ರೀತಿಸು; ಶ್ರವಣ: ಕಿವಿ; ಕುಡಿ: ಪಾನಮಾಡು; ಪದವಿ: ಪಟ್ಟ; ಪಡೆ:ದೊರಕು; ಲೋಕ: ಜಗತ್ತು;

ಪದವಿಂಗಡಣೆ:
ಭವ+ದುರಿತ+ಹರವ್+ಅಕಟ +ಹರಿ+ನಾ
ಮವನು +ನೆನೆವರು+ ಕಾಲ+ಚಕ್ರದ
ಜವನ +ಬೇಗೆಯ +ಜುಣುಗಿ +ಜಾರುವರ್+ಅಖಿಳ+ ಮಾನವರು
ಕವಿ +ಕುಮಾರವ್ಯಾಸ+ಸೂಕ್ತದ
ಸವೆಯದ್+ಅಮೃತವನ್+ಒಲಿದೊಲಿದು +ಸು
ಶ್ರವಣದಲಿ +ಕುಡಿಕುಡಿದು +ಪದವಿಯ +ಪಡೆವುದೀ +ಲೋಕ

ಅಚ್ಚರಿ:
(೧) ಹರಿ ನಾಮದ ಹಿರಿಮೆ – ಹರಿನಾಮವನು ನೆನೆವರು ಕಾಲಚಕ್ರದ ಜವನ ಬೇಗೆಯ ಜುಣುಗಿ ಜಾರುವರಖಿಳ ಮಾನವರು
(೨) ಒಲಿದೊಲಿದು, ಕುಡಿಕುಡಿ – ಜೋಡಿ ಪದಗಳ ಬಳಕೆ

ಪದ್ಯ ೧೫: ಶ್ರೀಕೃಷ್ಣನ ದ್ವಾರಕೆಯ ಪ್ರವೇಶ ಹೇಗಿತ್ತು?

ದೇವ ದುಂದುಭಿರವದ ಗಗನದ
ಹೂವಳೆಯ ಪುರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಾಯಣ (ಗದಾ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದ್ವಾರಕೆಯನ್ನು ಸೇರುತ್ತಿರಲು, ದೇವ ನಗಾರಿಗಳು ಮೊಳಗಿದವು. ಆಕಾಶದಿಮ್ದ ಹೂಮಳೆಗಳು ಸುರಿದವು. ಜನರೆಲ್ಲರೂ ಜೀಯಾ ಎಂದು ಜಯಕಾರ ಕೂಗಿದರು. ದೇವಕಿ, ವಸುದೇವ, ರುಕ್ಮಿಣೀ ದೇವಿ ಮೊದಲಾದವರ ಹರುಷವು ಹೆಚ್ಚಿತು.

ಅರ್ಥ:
ದೇವ: ಭಗವಂತ; ದುಂದುಭಿ: ಒಂದು ಬಗೆಯ ಚರ್ಮ ವಾದ್ಯ, ನಗಾರಿ; ರವ: ಶಬ್ದ; ಗಗನ: ಆಗಸ; ಹೂವಳೆ: ಹೂವಿನ ಮಳೆ; ಪೂರ: ತುಂಬ; ಸಮಸ್ತ: ಎಲ್ಲಾ; ಜನಾವಳಿ: ಜನರ ಗುಂಪು; ಜಯ: ಉಘೆ; ಜೀಯ: ಒಡೆಯ; ಘೋಷ: ಕೂಗು; ಗಡಾವಣೆ: ಗಟ್ಟಿಯಾದ ಶಬ್ದ; ಹರುಷ: ಸಂತಸ; ಆವಿರ್ಭಾವ: ಹುಟ್ಟುವುದು; ಪುರ: ಊರು; ಹೊಕ್ಕು: ಸೇರು;

ಪದವಿಂಗಡಣೆ:
ದೇವ +ದುಂದುಭಿ+ರವದ +ಗಗನದ
ಹೂವಳೆಯ +ಪುರದ +ಸಮಸ್ತ+ ಜ
ನಾವಳಿಯ +ಜಯ+ಜೀಯ +ನಿರ್ಘೋಷದ +ಗಡಾವಣೆಯ
ದೇವಕಿಯ +ವಸುದೇವ +ರುಕುಮಿಣಿ
ದೇವಿ+ಆದಿಯ +ಹರುಷದ್+ಆವಿ
ರ್ಭಾವ +ಮಿಗೆ +ನಿಜಪುರವ +ಹೊಕ್ಕನು+ ವೀರನಾರಾಯಣ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜನಾವಳಿಯ ಜಯಜೀಯ
(೨) ರವ, ನಿರ್ಘೋಷ – ಸಾಮ್ಯಾರ್ಥ ಪದ

ಪದ್ಯ ೧೪: ಶ್ರೀಕೃಷ್ಣನು ದ್ವಾರಕೆಗೆ ತೆರಳಲು ಯಾರಿಂದ ಬೀಳ್ಕೊಂಡನು?

ಯಮಸುತನ ತಕ್ಕೈಸಿ ಭೀಮನ
ಮಮತೆಯನು ಭುಲ್ಲೈಸಿ ಪಾರ್ಥನ
ನಮಿತ ಮಕುಟವ ನೆಗಹಿ ಪುಳಕಾಶ್ರುಗಳ ಪುರದಲಿ
ಯಮಳರನು ಬೋಳೈಸಿ ರಾಯನ
ರಮಣಿಯನು ಸಂತೈಸಿ ವಿದುರ
ಪ್ರಮುಖರನು ಬೀಳ್ಕೊಟ್ಟು ಬಿಜಯಂಗೈದನಸುರಾರಿ (ಗದಾ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನನ್ನು ಅಪ್ಪಿಕೊಂಡು, ಭೀಮನ ಮಮತೆಯನ್ನು ಹೆಚ್ಚಿಸಿ, ತಲೆಬಾಗಿ ನಮಸ್ಕರಿಸಿದ ಅರ್ಜುನನ ಕಿರೀಟವನ್ನು ಮೇಲೆತ್ತಿ, ಆನಂದದ ಕಣ್ಣೀರಿನಲ್ಲಿ ತೋಯ್ದ ನಕುಲ ಸಹದೇವರ ಮೈದಡವಿ, ದ್ರೌಪದಿಯನ್ನು ಸಮಾಧಾನ ಪಡಿಸಿ, ವಿದುರಾದಿ ಪ್ರಮುಖರಿಂದ ಬೀಳ್ಕೊಂಡು ಶ್ರೀಕೃಷ್ಣನು ದ್ವಾರಕೆಗೆ ಪ್ರಯಾಣ ಮಾಡಿದನು.

ಅರ್ಥ:
ಸುತ: ಮಗ; ತಕ್ಕೈಸು: ಅಪ್ಪಿಕೋ; ಮಮತೆ: ಪ್ರೀತಿ; ಭುಲ್ಲೈಸು: ಹೆಚ್ಚಿಸು; ನಮಿಸು: ನಮಸ್ಕರಿಸು, ಎರಗು; ಮುಕುಟ: ಕಿರೀಟ; ನೆಗಹು: ಮೇಲೆತ್ತು; ಪುಳುಕಾಶ್ರು: ಆನಂದ ಭಾಷ್ಪ; ಯಮಳ: ಅವಳಿ ಮಕ್ಕಳು; ರಾಯ: ರಾಜ; ರಮಣಿ: ಪ್ರಿಯತಮೆ; ಸಂತೈಸು: ಸಮಾಧಾನಪಡಿಸು; ಬೀಳ್ಕೊಡು: ತೆರಳು; ಬಿಜಯಂಗೈ: ಬೀಳ್ಕೊಡು, ತೆರಳು; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಯಮಸುತನ +ತಕ್ಕೈಸಿ +ಭೀಮನ
ಮಮತೆಯನು +ಭುಲ್ಲೈಸಿ +ಪಾರ್ಥನ
ನಮಿತ +ಮಕುಟವ +ನೆಗಹಿ +ಪುಳಕಾಶ್ರುಗಳ + ಪೂರದಲಿ
ಯಮಳರನು +ಬೋಳೈಸಿ +ರಾಯನ
ರಮಣಿಯನು +ಸಂತೈಸಿ +ವಿದುರ
ಪ್ರಮುಖರನು +ಬೀಳ್ಕೊಟ್ಟು +ಬಿಜಯಂಗೈದನ+ಅಸುರಾರಿ

ಅಚ್ಚರಿ:
(೧) ತಕ್ಕೈಸಿ, ಭುಲ್ಲೈಸಿ, ಬೋಳೈಸಿ, ಸಂತೈಸಿ – ಪ್ರಾಸ ಪದಗಳು

ಪದ್ಯ ೧೩: ಕೃಷ್ಣನು ಎಲ್ಲಿಗೆ ಹೊರಟನು?

ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿ ಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ (ಗದಾ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮಹಾಭಾರತ ಯುದ್ಧದಲ್ಲಿ ರಾಕ್ಷಸರನ್ನು ಸಂಹರಿಸಿ, ಆಡಳಿತವನ್ನು ಮತ್ತೊಬ್ಬರಿಗೆ ವಹಿಸಿ, ಮಮಪ್ರಾಣಾಹಿ ಪಾಂಡವಾ ಎಂಬ ಪ್ರತಿಜ್ಞೆಯನ್ನು ನೆರವೇರಿಸಿ, ಭೀಷ್ಮನಿಗೆ ಪರಾನಂದ ಪದವಿಯನ್ನು ನೀಡಿ, ಅಪರಿಮಿತ ಪರಮ ಸಂತೋಷದಿಂದ ಶ್ರೀಕೃಷ್ಣನು ತನ್ನ ಊರಿಗೆ ಪ್ರಯಾಣ ಮಾಡಿದನು.

ಅರ್ಥ:
ಕದನ: ಯುದ್ಧ; ಕೈ: ಹಸ್ತ; ದೈತ್ಯ: ರಾಕ್ಷಸ; ಸದೆ: ಕುಟ್ಟು, ಪುಡಿಮಾಡು; ಭೂ: ಭೂಮಿ; ಭಾರ: ಹೊರೆ; ಪರ: ಬೇರೆ; ಹಸ್ತ: ಕೈ; ಕಟ್ಟು: ನಿರ್ಮಿಸು; ಕೊಟ್ಟ: ನೀಡಿದ; ಭಾಷೆ: ನುಡಿ; ನದಿ: ಸರೋವರ; ನಂದನ: ಮಗ; ಆನಂದ: ಸಂತಸ; ಸೇರು: ಜೊತೆಗೂಡು; ಪರಮ: ಶ್ರೇಷ್ಠ; ಪರಿತೋಷ: ಸಂತಸ; ಪಯಣ: ಪ್ರಯಾಣ; ಮುರವೈರಿ: ಕೃಷ್ಣ; ಪುರಿ: ಊರು;

ಪದವಿಂಗಡಣೆ:
ಕದನದಲಿ +ಕಯ್ಯಾರೆ ದೈತ್ಯರ
ಸದೆದು+ ಭೂಭಾರವನು +ಪರ+ಹ
ಸ್ತದಲಿ +ಕಟ್ಟಿಸಿ +ಕೊಟ್ಟ+ಭಾಷೆಯನ್+ಉತ್ತರಾಯೆನಿಸಿ
ನದಿಯ +ನಂದನನನು +ಪರಾನಂ
ದದಲಿ+ ಸೇರಿಸಿ+ ಪರಮ +ಪರಿತೋ
ಷದಲಿ +ಪಯಣವ +ಮಾಡಿದನು +ಮುರವೈರಿ +ನಿಜಪುರಿಗೆ

ಅಚ್ಚರಿ:
(೧) ಪ್ರಾಣ ಬಿಟ್ಟರು ಎಂದು ಹೇಳುವ ಪರಿ – ನದಿಯ ನಂದನನನು ಪರಾನಂದದಲಿ ಸೇರಿಸಿ
(೨) ಪ ಕಾರದ ತ್ರಿವಳಿ ಪದ – ಪರಮ ಪರಿತೋಷದಲಿ ಪಯಣವ

ಪದ್ಯ ೧೨: ಧರ್ಮಜನು ಭೀಷ್ಮನ ಬಳಿ ಯಾವುದನ್ನು ಕಲಿಯಲು ಹೋದನು?

ಬಳಿಕ ಭೀಷ್ಮನ ಬಾಣಶಯನ
ಸ್ಥಳಕೆ ಧರ್ಮಜ ಬಂದು ಧರ್ಮಂ
ಗಳನು ಕೇಳಿದು ರಾಜಧರ್ಮ ಸಮಸ್ತಧರ್ಮವನು
ತಿಳಿದನಗ್ಗದ ದಾನಧರ್ಮಾ
ವಳಿಯನಾತನ ರಾಜ್ಯಪಾಲನ
ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು (ಗದಾ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆ ಬಳಿಕ ಧರ್ಮಜನು ತಮ್ಮಂದಿರು ಶ್ರೀಕೃಷ್ಣ ಇವರೊಡನೆ ಶರಶಯನದಲ್ಲಿದ್ದ ಭೀಷ್ಮನ ಬಳಿಗೆ ಹೋಗಿ ರಾಜಧರ್ಮ, ಮೋಕ್ಷಧರ್ಮ ಮೊದಲಾದ ಸಮಸ್ತ ಧರ್ಮಗಲನ್ನು ಕೇಳಿ ತಿಳಿದುಕೊಂಡು ಬಂದನು. ದಾನ ಧರ್ಮಗಲನ್ನು ಮಾಡಿದನು. ಧರ್ಮರಾಯನ ರಾಜ್ಯ ಪಾಲನೆಯು ನಳ ನಹುಷ ಭರತ ಮೊದಲಾದ ರಾಜ್ಯಪಾಲನೆಗೆ ಗುರುವೆನ್ನುವಂತಿತ್ತು.

ಅರ್ಥ:
ಬಳಿಕ: ನಂತರ; ಬಾಣ: ಸರಳ; ಶಯನ: ನಿದ್ರೆ; ಸ್ಥಳ: ನಿಲಯ; ಕೇಳಿ: ಕ್ರೀಡೆ, ವಿನೋದ; ಸಮಸ್ತ: ಎಲ್ಲಾ; ಧರ್ಮ: ಧಾರಣೆಮಾಡಿದುದು; ತಿಳಿ: ಎಚ್ಚರಾಗು; ಅಗ್ಗ: ಶ್ರೇಷ್ಠ; ಆವಳಿ: ಸಾಲು; ಭೂಪ: ರಾಜ; ಗತಿ: ಗಮನ, ಸಂಚಾರ;

ಪದವಿಂಗಡಣೆ:
ಬಳಿಕ+ ಭೀಷ್ಮನ+ ಬಾಣ+ಶಯನ
ಸ್ಥಳಕೆ+ ಧರ್ಮಜ+ ಬಂದು +ಧರ್ಮಂ
ಗಳನು +ಕೇಳಿದು +ರಾಜಧರ್ಮ+ ಸಮಸ್ತ+ಧರ್ಮವನು
ತಿಳಿದನ್+ಅಗ್ಗದ+ ದಾನ+ಧರ್ಮ
ಆವಳಿಯನ್+ಆತನ +ರಾಜ್ಯಪಾಲನ
ನಳ +ನಹುಷ +ಭರತಾದಿ +ಭೂಪರ +ಗತಿಗೆ +ಗುರುವಾಯ್ತು

ಅಚ್ಚರಿ:
(೧) ಧರ್ಮಜ, ರಾಜಧರ್ಮ, ಸಮಸ್ತಧರ್ಮ, ದಾನಧರ್ಮ – ಧರ್ಮ ಪದದ ಬಳಕೆ

ಪದ್ಯ ೧೧: ಧರ್ಮಜನಿಗೆ ಯಾರು ಹೇಗೆ ಹರಸಿದರು?

ಅರಸು ಧರ್ಮಜನಾದ ನಮಗಿ
ನ್ನುರವಣಿಪ ಮನ ಬೇಡ ಬೇಡು
ತ್ತರಿಸುವಿಹಪರವೆರಡ ಪಡೆದೆವು ನಿಖಿಳ ಜಗ ಹೊಗಳೆ
ಪರಿಮಿತದ ಜನ ತಮ್ಮ ಸುಬಲವ
ನಿರದೆ ಮಾಡುವೆವೆಂದು ಮುನಿಜನ
ಧರಣಿಸುರರೊಳಗಾದ ಪುರಜನರೊಲಿದು ಹರಸಿದರು (ಗದಾ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಧರ್ಮಜನು ಅರಸನಾದ ನಮಗಿನ್ನು ಚಿಂತೆಯಿಂದ ಕೊರಗುವ ಹರೀಬೀಳುವ ಮನಸ್ಸುಬೇಡ. ಇಹದಲ್ಲೂ, ಪರದಲ್ಲೂ ನಾವು ಜಯಶಾಲಿಗಳಾಗೋಣ ಎಂದು ದೊರೆಯನ್ನು ಹೊಗಳಿದರು. ಪರಿಮಿತ ಸಂಖ್ಯೆಯ ಜನರೇ ಸುತ್ತಲೂ ಬೆಮ್ಬಲವಾಗಿದ್ದು, ಪ್ರಜೆಗಳ ಹಿತವನ್ನು ಅಭಿವೃದ್ಧಿಪಡಿಸಲೆಂದು ಮುನಿಗಳೂ, ಬ್ರಾಹ್ಮಣರೂ ಪುರಜನರೂ ದೊರೆಯನ್ನು ಹರಸಿದರು.

ಅರ್ಥ:
ಅರಸು: ರಾಜ; ಉರವಣೆ: ಆತುರ, ಅವಸರ; ಮನ: ಮನಸ್ಸು; ಬೇಡ: ತ್ಯಜಿಸು; ಉತ್ತರ: ಪರಿಹಾರ; ಇಹಪರ: ಈ ಜೀವನ ಮತ್ತು ಪರಜೀವನ; ಪಡೆ: ದೊರೆತ; ನಿಖಿಳ: ಎಲ್ಲಾ; ಜಗ: ಜಗತ್ತು ಹೊಗಳು: ಪ್ರಶಂಶಿಸು; ಪರಿಮಿತ: ಸ್ವಲ್ಪ; ಜನ: ಜನರು; ಮುನಿ: ಋಷಿ; ಧರಣಿ: ಭೂಮಿ; ಧರಣಿಸುರ: ಬ್ರಾಹ್ಮಣ; ಪುರಜನ: ಊರಿನ ಜನ; ಹರಸು: ಆಶೀರ್ವದಿಸು;

ಪದವಿಂಗಡಣೆ:
ಅರಸು +ಧರ್ಮಜನಾದ +ನಮಗಿನ್
ಉರವಣಿಪ +ಮನ +ಬೇಡ +ಬೇಡ್
ಉತ್ತರಿಸುವ್+ಇಹಪರವ್+ಎರಡ +ಪಡೆದೆವು +ನಿಖಿಳ +ಜಗ +ಹೊಗಳೆ
ಪರಿಮಿತದ +ಜನ +ತಮ್ಮ +ಸುಬಲವನ್
ಇರದೆ +ಮಾಡುವೆವೆಂದು +ಮುನಿಜನ
ಧರಣಿಸುರರ್+ಒಳಗಾದ +ಪುರಜನರ್+ಒಲಿದು +ಹರಸಿದರು

ಅಚ್ಚರಿ:
(೧) ಬ್ರಾಹ್ಮಣ ಎಂದು ಹೇಳಲು ಧರಣಿಸುರ ಪದದ ಬಳಕೆ