ಪದ್ಯ ೧೯: ಭಾರತದ ಕತೆಯನ್ನು ಕೇಳುವುದರ ಉಪಯೋಗವೇನು?

ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ರೀ ಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು (ಗದಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ, ಮಹರ್ಷಿಗಳೇ, ವೈಶಂಪಾಯನನಿಂದ ಮಹಾಭಾರತವನ್ನು ಕೇಳಿದ ಜನಮೇಜಯರಾಯನು, ಸರ್ಪಯಾಗದಿಮ್ದಾದ ಪಾಪಕರ್ಮದ ದರ್ಪವನ್ನು ತೆಗೆದೊಗೆದು, ಸೂರ್ಯನ ತೇಜಸ್ಸಿಗೆ ಮೀರಿದ ತೇಜಸ್ಸಿನಿಂದ ಹೊಳೆದನು. ಅದನ್ನು ಕಂಡು ಮನುಷ್ಯರೂ, ದೇವತೆಗಳೂ ಬೆರಗಾದರು. ಈ ಭಾರತದ ಕತೆಯನ್ನು ತಪ್ಪದೇ ಕೇಳಿದವನಿಗೆ ದೇವೇಂದ್ರನ ಪದವಿ ದೊರಕುತ್ತದೆ ಎಂದು ಬಿನ್ನೈಸಿದನು.

ಅರ್ಥ:
ಸರ್ಪ: ಹಾವು, ಉರಗ; ಯಾಗ: ಯಜ್ಞ, ಕ್ರತು; ಕರ್ಮ: ಕೆಲಸ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೆಳಗು: ಪ್ರಕಾಶ; ಉಪ್ಪರ:ಅತಿಶಯ; ರವಿ: ಸೂರ್ಯ; ತೇಜಸ್ಸು: ಪ್ರಕಾಶ; ಸುರ: ದೇವತೆ; ನರ: ಮನುಷ್ಯ; ಬೆರಗು: ಆಶ್ಚರ್ಯ; ತಪ್ಪದು: ಸರಿಯಾಗದು; ಅಪ್ಪುದು: ಆಲಿಂಗಿಸು, ಒಪ್ಪು; ಒಪ್ಪು: ಸಮ್ಮತಿ; ಅಮರಸ್ತ್ರೀ: ಅಪ್ಸರೆ; ಕದಂಬ: ಸಮೂಹ; ಒಪ್ಪು: ಸಮ್ಮತಿ; ಇಂದ್ರ: ದೇವತೆಗಳ ಅರಸ; ಪದವಿ: ಪಟ್ಟ; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸರ್ಪಯಾಗದೊಳ್+ಆದ+ ಕರ್ಮದ
ದರ್ಪವನು+ ಕೆಡೆ+ಒದೆದು+ ಬೆಳಗಿದನ್
ಉಪ್ಪರದ +ರವಿತೇಜದಲಿ+ ಸುರನರರು +ಬೆರಗಾಗೆ
ತಪ್ಪದೀ +ಭಾರತವ +ಕೇಳ್ದಂಗ್
ಅಪ್ಪುದ್+ಅಮರಸ್ರೀ+ ಕದಂಬದೊಳ್
ಒಪ್ಪುವ್+ಇಂದ್ರನ +ಪದವಿ+ಎಂದನು +ಸೂತ +ಕೈಮುಗಿದು

ಅಚ್ಚರಿ:
(೧) ರೂಪಕದ ಪ್ರಯೋಗ – ಬೆಳಗಿದನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ

ಪದ್ಯ ೧೩: ಜಲಸಂಧನನ್ನು ಯಾರು ಕೊಂದರು?

ಎಡಬಲಕೆ ತೂಳುವ ಮದೇಭವ
ಕಡಿದು ಹರಹಿದನೌಕಿ ಚೂರಿಸಿ
ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು
ಕಡಿದು ಬಿಸುಟನು ಕೇಣವಿಲ್ಲದೆ
ಕಡುಗಲಿಗಲನು ವೈರಿಸೇನೆಯ
ನಡಗುದರಿದನು ಕೆಡಹಿದನು ಜಲಸಂಧಭೂಪತಿಯ (ದ್ರೋಣ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಎಡಬಲಗಳಲ್ಲಿ ಬಂದ ಮದಗಜಗಳನ್ನು ಕಡಿದು ಹರಡಿದನು. ಚೂರಿಹಿಡಿದು ಬಂದ ರಾಜರಿಗೆ ದೇವ ಪದವಿಯನ್ನಿತ್ತನು. ಯಾವ ಮಿತಿಯೂ ಇಲ್ಲದೆ ವೀರರನ್ನು ಸಂಹರಿಸಿ, ಕಡಿಖಂಡ ಮಾಡಿದನು. ಜಲಸಂಧನೆಂಬ ರಾಜನನ್ನು ಕೊಂದನು.

ಅರ್ಥ:
ಎಡಬಲ: ಅಕ್ಕಪಕ್ಕ; ತೂಳು: ಬೆನ್ನಟ್ಟು, ಹಿಂಬಾಲಿಸು; ಮದ: ಅಮಲು; ಇಭ: ಆನೆ; ಕಡಿ: ಸೀಳು; ಹರಹು: ವಿಸ್ತಾರ, ವೈಶಾಲ್ಯ; ಔಕು: ನೂಕು; ಚೂರಿಸು: ಕತ್ತರಿಸು; ಗಡಣ: ಗುಂಪು; ಭೂಪ: ರಾಜ; ಅಮರ: ದೇವತೆ; ಪದವಿ: ಅಂತಸ್ತು, ಸ್ಥಾನ; ಕಡಿ: ಸೀಳು; ಬಿಸುಟು: ಹೊರಹಾಕು; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಡುಗಲಿ: ಪರಾಕ್ರಮಿ; ವೈರಿ: ಶತ್ರು; ಸೇನೆ: ಸೈನ್ಯ; ಅಡಗು: ಅವಿತುಕೊಳ್ಳು; ಅರಿ: ಸೀಳು; ಕೆಡಹು: ಬೀಳಿಸು; ಭೂಪತಿ: ರಾಜ;

ಪದವಿಂಗಡಣೆ:
ಎಡಬಲಕೆ +ತೂಳುವ +ಮದ+ಇಭವ
ಕಡಿದು +ಹರಹಿದನ್+ಔಕಿ +ಚೂರಿಸಿ
ಗಡಣಿಸುವ +ಭೂಪರಿಗೆ +ಮಾಡಿದನ್+ಅಮರ+ಪದವಿಯನು
ಕಡಿದು +ಬಿಸುಟನು +ಕೇಣವಿಲ್ಲದೆ
ಕಡುಗಲಿಗಲನು+ ವೈರಿ+ಸೇನೆಯ
ನಡಗುದ್+ಅರಿದನು +ಕೆಡಹಿದನು +ಜಲಸಂಧ+ಭೂಪತಿಯ

ಅಚ್ಚರಿ:
(೧) ಸಾಯಿಸಿದ ಎಂದು ಹೇಳಲು – ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು

ಪದ್ಯ ೨೩: ಉತ್ತರನು ಅರ್ಜುನನಿಗೆ ಯಾವ ಉತ್ತರವನ್ನಿತ್ತನು?

ಧುರದೊಳೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಒಲಿದು
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನ ನಮಗಿಂದ್ರಪದವಿಯು ಬಿಟ್ಟು ಕಳುಹೆಂದ (ವಿರಾಟ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನ ಮಾತಿಗೆ ಉತ್ತರನು ಪ್ರತಿಕ್ರಯಿಸುತ್ತಾ, ರಣರಂಗದಿಂದ ಓಡಿ ಹೋದ ಪಾಪಕ್ಕೆ ನಮ್ಮ ಬ್ರಾಹ್ಮಣರು ಪ್ರಾಯಶ್ಚಿತ್ತ ಮಾಡಿಸುತ್ತಾರೆ. ಬದುಕಿದರೆ ನಾವೇ ಅಶ್ವಮೇಧವನ್ನು ಮಾಡಬಹುದು. ನನಗೆ ಅಪ್ಸರೆಯರು ಬೇಕಿಲ್ಲ. ಅರಮನೆಯ ನಾರಿಯರೇ ಸಾಕು. ನನ್ನ ಅರಸುತನವೇ ಇಂದ್ರ ಪದವಿ, ನನ್ನನ್ನು ದಯವಿಟ್ಟು ಬಿಟ್ಟು ಕಳಿಸು ಎಂದು ಬೇಡಿದನು.

ಅರ್ಥ:
ಧುರ: ಯುದ್ಧ, ಕಾಳಗ; ಓಡು: ಧಾವಿಸು; ಪಾತಕ: ಪಾಪ; ಭೂಸುರ: ಬ್ರಾಹ್ಮಣ; ಕಳೆ: ಹೋಗಲಾಡಿಸು; ಧರಣಿ: ಭೂಮಿ; ಪ್ರತ್ಯಕ್ಷ: ಗೋಚರ; ಒಲಿ: ಒಪ್ಪು, ಸಮ್ಮತಿಸು; ಸುರ: ದೇವತೆ; ಸತಿ: ಹೆಂಗಸು; ಒಲ್ಲೆ: ಬೇಡ; ನಾರಿ: ಹೆಣ್ಣು; ಅರಮನೆ: ರಾಜರ ಆಲಯ; ಅರಸು: ರಾಜ; ಬಿಟ್ಟು: ತೊರೆ;

ಪದವಿಂಗಡಣೆ:
ಧುರದೊಳ್+ಓಡಿದ +ಪಾತಕವ+ ಭೂ
ಸುರರು +ಕಳೆದಪರ್+ಅಶ್ವಮೇಧವ
ಧರಣಿಯಲಿ+ ಪ್ರತ್ಯಕ್ಷವಾಗಿಯೆ +ಮಾಡಬಹುದ್+ಒಲಿದು
ಸುರರ +ಸತಿಯರನ್+ಒಲ್ಲೆವ್+ಎಮಗ್
ಎಮ್ಮ್+ಅರಮನೆಯ +ನಾರಿಯರೆ +ಸಾಕ್
ಎಮ್ಮರಸುತನ+ ನಮಗ್+ಇಂದ್ರ+ಪದವಿಯು +ಬಿಟ್ಟು +ಕಳುಹೆಂದ

ಅಚ್ಚರಿ:
(೧) ಇಂದ್ರ ಪದವಿ ಅಪ್ಸರೆಯರು ಬೇಡ ಎಂದು ಹೇಳುವ ಪರಿ – ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆಮ್ಮರಸುತನ ನಮಗಿಂದ್ರಪದವಿ