ಪದ್ಯ ೫೫: ಧರ್ಮಜನು ಗಾಂಧಾರಿಗೆ ಏನೆಂದು ಹೇಳಿದನು?

ತಾಯೆ ಖತಿಬೇಡಿನ್ನು ಧರಣಿಗೆ
ರಾಯನೇ ಧೃತರಾಷ್ಟ್ರನಾತನ
ಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು
ತಾಯೆ ನೀವಿನ್ನೆಮಗೆ ಕುಂತಿಯ
ತಾಯಿತನವಂತಿರಲಿ ಕರುಣಿಸಿ
ಕಾಯಬೇಕೆಂದರಸ ಮಗುಳೆರಗಿದನು ಚರಣದಲಿ (ಗದಾ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧರ್ಮಜನು ಗಾಂಧಾರಿಯ ಮಾತಿಗೆ ಉತ್ತರಿಸುತ್ತಾ, ತಾಯೇ ಇನ್ನೂ ನಮ್ಮ ಮೇಲೆ ಕೋಪವೇ? ಇನ್ನು ಮುಂದೆ ಧೃತರಾಷ್ಟ್ರನೇ ರಾಜ ಅವನ ಬಾಯತೊಂಬುಲ ಬೀಳಲು ಅದನ್ನು ಸ್ವೀಕರಿಸಿ ಅದರ ಬಲದಿಮ್ದ ಬದುಕುತ್ತೇವೆ. ನಮಗೆ ಕುಂತಿಯು ತಾಯಿ ನಿಮ, ಅದು ಹಾಗಿರಲಿ, ಇನ್ನು ಮೇಲೆ ನೀವೇ ನಮಗೆ ತಾಯಿ. ಕರುಣಿಸಿ ಕಾಪಾಡು ಎನ್ನುತ್ತಾ ಮತ್ತೆ ನಮಸ್ಕರಿಸಿದನು.

ಅರ್ಥ:
ತಾಯಿ: ಮಾತೆ; ಖತಿ: ಕೋಪ; ಧರಣಿ: ಭೂಮಿ; ರಾಯ: ರಾಜ; ತಂಬುಲ: ತಾಂಬೂಲ; ಬೀಳು: ಕೆಳಕ್ಕೆ – ಕೆಡೆ, ಕುಸಿ; ಬಲ: ಶಕ್ತಿ; ಬದುಕು: ಜೀವಿಸು; ಕರುಣೆ: ದಯೆ; ಕಾಯು: ರಕ್ಷಿಸು, ಕಾಪಾಡು; ಅರಸ: ರಾಜ; ಮಗುಳು: ಪುನಃ, ಮತ್ತೆ; ಎರಗು: ನಮಸ್ಕರಿಸು; ಚರಣ: ಪಾದ;

ಪದವಿಂಗಡಣೆ:
ತಾಯೆ+ ಖತಿಬೇಡ್+ಇನ್ನು +ಧರಣಿಗೆ
ರಾಯನೇ+ ಧೃತರಾಷ್ಟ್ರನ್+ಆತನ
ಬಾಯ +ತಂಬುಲ +ಬೀಳುಡೆಯ +ಬಲದಿಂದ+ ಬದುಕುವೆವು
ತಾಯೆ +ನೀವಿನ್ನೆಮಗೆ+ ಕುಂತಿಯ
ತಾಯಿತನವಂತಿರಲಿ +ಕರುಣಿಸಿ
ಕಾಯಬೇಕೆಂದ್+ಅರಸ +ಮಗುಳ್+ಎರಗಿದನು +ಚರಣದಲಿ

ಅಚ್ಚರಿ:
(೧) ಬ ಕಾರದ ಸಾಲು ಪದ – ಬಾಯತಂಬುಲ ಬೀಳುಡೆಯ ಬಲದಿಂದ ಬದುಕುವೆವು
(೨) ಗಾಂಧಾರಿಯನ್ನು ಕಾಣುವ ಪರಿ – ತಾಯೆ ನೀವಿನ್ನೆಮಗೆ ಕುಂತಿಯ ತಾಯಿತನವಂತಿರಲಿ ಕರುಣಿಸಿ ಕಾಯಬೇಕೆಂದರಸ

ಪದ್ಯ ೧೯: ಕೌರವನನ್ನು ನೋಡಿ ಹೆಂಗಸರೇಕೆ ನಗುವರು?

ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದುಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ (ಗದಾ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಂದು ನಿನ್ನ ಆಸ್ಥಾನದಲ್ಲಿ ಇದ್ದ ಸ್ತ್ರೀಯರ ಸಮ್ಮುಖದಲ್ಲಿ ಪಾಂಡವರಿಗೆ ಭೂಮಿಯನ್ನು ಕೊಡುವುದಿಲ್ಲ, ಅವರಿಗೆ ಕಾಡೇಗತಿ ಎಂದು ಘೋಷಿಸಿ ಖಡ್ಗವನ್ನು ಹಿರಿದೆಯಲ್ಲವೇ? ಆ ಖಡ್ಗವನ್ನು ರಣಭೂಮಿಯಲ್ಲೆಸೆದು ಓಡಿಬಂದು ಕೊಳದ ಮಧ್ಯದಲ್ಲಿ ಅವಿತುಕೊಂಡರೆ, ಆ ಹೆಣ್ಣುಮಕ್ಕಳು ಕೈ ತಟ್ಟಿ ನಗುವುದಿಲ್ಲವೇ ಎಂದು ಧರ್ಮಜನು ಹಂಗಿಸಿದನು.

ಅರ್ಥ:
ಅಡವಿ: ಕಾಡು; ನೆಲೆ: ಭೂಮಿ; ಸುತ: ಮಕ್ಕಳು; ಕೊಡೆ: ನೀಡುವುದಿಲ್ಲ; ಧರಣಿ: ಭೂಮಿ; ಖಡುಗ: ಕತ್ತಿ; ಜಡಿ: ಬೀಸು; ಓಲಗ: ದರ್ಬಾರು; ನಾರಿ: ಸ್ತ್ರೀ; ಸಮ್ಮುಖ: ಎದುರು; ಕಳ: ರಣರಂಗ; ಹಾಯಿಕು: ಹಾಕು, ಬಿಸಾಡು; ನಡು: ಮಧ್ಯ; ಕೊಳ: ಸರಸಿ; ಓಡು: ಧಾವಿಸು; ಹೊಕ್ಕು: ಸೇರು; ಮಡದಿ: ಹೆಂಡತಿ; ನಗು: ಹರ್ಷಿಸು; ಹೊಯ್ದು: ಹೊಡೆ; ಕರತಳ: ಹಸ್ತ, ಕೈ;

ಪದವಿಂಗಡಣೆ:
ಅಡವಿಯೇ +ನೆಲೆ +ಪಾಂಡುಸುತರಿಗೆ
ಕೊಡೆನು+ ಧರಣಿಯನೆಂದು+ಖಡುಗವ
ಜಡಿದೆಲಾ +ನಿನ್ನೋಲಗದ +ನಾರಿಯರ +ಸಮ್ಮುಖದಿ
ಖಡುಗವನು +ಕಳನೊಳಗೆ +ಹಾಯಿಕಿ
ನಡು+ಕೊಳನ +ನೀನೋಡಿ+ ಹೊಕ್ಕಡೆ
ಮಡದಿಯರು +ತಮತಮಗೆ+ ನಗರೇ+ ಹೊಯ್ದು +ಕರತಳವ

ಅಚ್ಚರಿ:
(೧) ನಾರಿಯರು ನಗುವ ಪರಿ – ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ

ಪದ್ಯ ೧೮: ಅಶ್ವತ್ಥಾಮನ ಸಮ್ಮುಖಕ್ಕೆ ಯಾರು ಬಂದರು?

ಮತ್ತೆ ಕವಿದುದು ಪಾಂಡುಬಲವರು
ವತ್ತು ಸಾವಿರ ಕುದುರೆ ನೂರಿ
ಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ
ಸತ್ತಿಗೆಯ ಸಾಲಿನಲಿ ಧರಣಿಯ
ಕಿತ್ತು ಮಗುಚುವ ವಾದ್ಯರಭಸದ
ಲೆತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ (ಶಲ್ಯ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಆಮೇಲೆ ಪಾಂಡವ ಬಲದ ಅರವತ್ತು ಸಾವಿರ ಕುದುರೆ, ನೂರಿಪ್ಪತ್ತು ಆನೆಗಳು, ನೂರು ರಥಗಳು, ಲಕ್ಷ ಪದಾತಿಗಳು ಭೂಮಿಯನ್ನು ತಲೆಕೆಳಗು ಮಾಡುವ ವಾದ್ಯರಭಸದಿಂದ ಕೊಡೆಗಳು ಸಾಲುಗಟ್ಟಿರಲು, ಅಶ್ವತ್ಥಾಮನ ಸಮ್ಮುಖಕ್ಕೆ ಬಂದವು.

ಅರ್ಥ:
ಕವಿ: ಆವರಿಸು; ಸಾವಿರ: ಸಹಸ್ರ; ಕುದುರೆ: ಅಶ್ವ; ಗಜ: ಆನೆ; ರಥ: ಬಂಡಿ; ಮೀರು: ಅತಿಕ್ರಮಿಸು; ಲಕ್ಕ: ಲಕ್ಷ; ಪಾಯದಳ: ಸೈನಿಕ; ಸತ್ತಿಗೆ: ಕೊಡೆ, ಛತ್ರಿ; ಮಗುಚು: ಹಿಂದಿರುಗಿಸು, ಮರಳಿಸು; ವಾದ್ಯ: ಸಂಗೀತದ ಸಾಧನ; ರಭಸ: ವೇಗ; ನೂಕು: ತಳ್ಳು; ಗುರು: ಆಚಾರ್ಯ; ತನುಜ: ಮಗ; ರಥ: ಬಂಡಿ; ಸಮ್ಮುಖ: ಎದುರುಗಡೆ, ಮುಂಭಾಗ;

ಪದವಿಂಗಡಣೆ:
ಮತ್ತೆ +ಕವಿದುದು +ಪಾಂಡುಬಲವ್+ಅರು
ವತ್ತು +ಸಾವಿರ +ಕುದುರೆ +ನೂರಿ
ಪ್ಪತ್ತು +ಗಜರಥ +ನೂರ +ಮೀರಿತು +ಲಕ್ಕ+ಪಾಯದಳ
ಸತ್ತಿಗೆಯ +ಸಾಲಿನಲಿ+ ಧರಣಿಯ
ಕಿತ್ತು +ಮಗುಚುವ +ವಾದ್ಯ+ರಭಸದ
ಲೆತ್ತಿ +ನೂಕಿತು +ಗುರುತನೂಜನ +ರಥದ+ ಸಮ್ಮುಖಕೆ

ಪದ್ಯ ೫೬: ಶಲ್ಯನು ಧರ್ಮಜನನ್ನು ಹೇಗೆ ಕೆಣಕಿದನು?

ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೋ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೨ ಸಂಧಿ, ೫೬ ಪದ್ಯ)

ತಾತ್ಪರ್ಯ:
ಬರೀ ಅಬ್ಬರಿಸುವೆಯೋ? ಬಾಣಗಳಿಂದ ಹೊಡೆಯುವುದು ಹೇಗೆಂಬ ಅರಿವಿದೆಯೋ? ನಿಮ್ಮೈವರಿಗೂ ದ್ರೌಪದಿಯು ಪತ್ನಿ, ಹಾಗೆಯೇ ಭೂಮಿಯು ಸಹ. ಕೌರವನಾದರೋ ಹೊರಗಿನವನು, ಅವನನ್ನು ಬಿಟ್ಟು, ಈ ಭೂಮಿಯ ಚಕ್ರಾಧಿಪತ್ಯದ ಅಭಿಷೇಕ ನೆನಗೆ ಎಂದಾಗುತ್ತದೆ ಎಂದು ಹೇಳುತ್ತ ಬಾಣಗಳನ್ನು ಬಿಟ್ಟನು.

ಅರ್ಥ:
ಬರಿ: ಕೇವಲ; ಬೊಬ್ಬಾಟ: ಆರ್ಭಟ, ಅಬ್ಬರ; ಶರಾವಳಿ: ಬಾಣಗಳ ಸಾಲು; ಕೆಲಸ: ಕಾರ್ಯ; ಧರಣಿ: ಭೂಮಿ; ಎರಕ: ಪ್ರೀತಿ, ಅನುರಾಗ; ಗಡ: ಅಲ್ಲವೆ; ಸಮ: ಸರಿಯಾದ; ಹೊರಗು: ಆಚೆಯವ; ರಾಯ: ರಾಜ; ಮುಡಿ: ತಲೆ; ಸಿರಿ: ಐಶ್ವರ್ಯ; ನೀರು: ಜಲ; ಎರೆವ: ಹಾಕುವ, ಸಲುಹು; ಪಟ್ಟ: ಅಧಿಕಾರ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬರಿಯ +ಬೊಬ್ಬಾಟವೊ +ಶರಾವಳಿ
ಯಿರಿ+ಕೆಲಸವೇನುಂಟೊ +ಧರಣಿಯಲ್
ಎರಕ +ನಿಮ್ಮೈವರಿಗೆ+ ಗಡ+ ದ್ರೌಪದಿಗೆ +ಸಮವಾಗಿ
ಹೊರಗು+ ಗಡ+ ಕುರುರಾಯನ್+ಈಗಳೊ
ಮರುದಿವಸವೋ +ಸಿರಿಮುಡಿಗೆ+ ನೀ
ರೆರೆವ+ ಪಟ್ಟವದೆಂದು +ನಿಮಗೆನುತ್+ಎಚ್ಚನಾ +ಶಲ್ಯ

ಅಚ್ಚರಿ:
(೧) ರಾಜ್ಯಾಭಿಷೇಕ ಎಂದು ಹೇಳುವ ಪರಿ – ಸಿರಿಮುಡಿಗೆ ನೀರೆರೆವ ಪಟ್ಟ
(೨) ಧರ್ಮಜನನ್ನು ಹಂಗಿಸುವ ಪರಿ – ಬರಿಯ ಬೊಬ್ಬಾಟವೊ ಶರಾವಳಿಯಿರಿಗೆಲಸವೇನುಂಟೊ

ಪದ್ಯ ೧೪: ಉಭಯ ಬಲದವರು ಭೀಮನನ್ನು ಹೇಗೆ ಹೊಗಳಿದರು?

ಗಗನದಲಿ ರಥ ಯೋಜನಾಂತಕೆ
ಚಿಗಿದು ಧರಣಿಯ ಮೇಲೆ ಬೀಳಲು
ನಗುತ ಕರಣವ ಹಾಯ್ಕಿ ಮಂಡಿಯೊಳಿರ್ದನಾ ದ್ರೋಣ
ಜಗದೊಳಾವಭ್ಯಾಸಿಯೋ ತಾ
ಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ ಭಾಪೆಂದುದುಭಯ ಬಲ (ದ್ರೋಣ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ಎಸೆದ ದ್ರೋಣನ ರಥವು ಒಮ್ದು ಯೋಜನದ ವರೆಗೆ ಹೋಗಿ ಭೂಮಿಯ ಮೇಲೆ ಬಿದ್ದಿತು. ದ್ರೋಣನು ಮಂಡಿ ಹಚ್ಚಿ ನಗುತ್ತಾ ಕುಳಿತಿದ್ದನು. ಉಭಯ ಬಲದವರೂ ಅದಾವ ಅಭ್ಯಾಸದಿಮ್ದ ರಥವನ್ನೆತ್ತಿ ಎಸೆಯುವ ಸಾಹಸ ಬಂದಿತೋ, ಭೀಮ ಭಲೇ ಎಂದು ಹೊಗಳಿದರು.

ಅರ್ಥ:
ಗಗನ: ಬಾನು, ಆಗಸ; ರಥ: ಬಂಡಿ; ಯೋಜನ: ಅಂತ: ಕೊನೆ; ಚಿಗಿ: ಬೆರಳುಗಳಿಂದ ಚಿಮ್ಮಿಸು; ಧರಣಿ: ಭೂಮಿ; ಬೀಳು: ಕುಸಿ; ನಗು: ಹರ್ಷ; ಕರಣ: ಕೆಲಸ; ಹಾಯ್ಕು: ಧರಿಸು, ತೊಡು; ಮಂಡಿ: ಮೊಳಕಾಲು, ಜಾನು; ಜಗ: ಪ್ರಪಂಚ; ಅಭ್ಯಾಸ: ವ್ಯಾಸಂಗ; ತಾಳಿಗೆ: ಗಂಟಲು; ತಲ್ಲಣ: ಅಂಜಿಕೆ, ಭಯ; ನೆಗಹು: ಮೇಲೆತ್ತು; ಸುಗಮ: ನಿರಾಯಾಸ; ಸಾಹಸ: ಪರಾಕ್ರಮ; ಅರರೆ: ಅಬ್ಬಾ; ಮಝ: ಭಲೇ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಗಗನದಲಿ +ರಥ +ಯೋಜನಾಂತಕೆ
ಚಿಗಿದು +ಧರಣಿಯ +ಮೇಲೆ +ಬೀಳಲು
ನಗುತ +ಕರಣವ +ಹಾಯ್ಕಿ +ಮಂಡಿಯೊಳ್+ಇರ್ದನಾ +ದ್ರೋಣ
ಜಗದೊಳಾವ್+ಅಭ್ಯಾಸಿಯೋ +ತಾ
ಳಿಗೆಯ +ತಲ್ಲಣದೊಳಗೆ +ನೆಗಹಿನ
ಸುಗಮ +ಸಾಹಸನ್+ಅರರೆ +ಮಝ +ಭಾಪೆಂದುದ್+ಉಭಯ +ಬಲ

ಅಚ್ಚರಿ:
(೧)ಭೀಮನನ್ನು ಹೊಗಳಿದ ಪರಿ – ಜಗದೊಳಾವಭ್ಯಾಸಿಯೋ ತಾಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ

ಪದ್ಯ ೫೦: ಕುರುಸೇನೆಯು ಎಲ್ಲಿಗೆ ಬಂದಿತು?

ಅರರೆ ನಡೆದುದು ಸೇನೆ ಕುಲಗಿರಿ
ಯೆರಡು ಕೂರುಮ ಫಣಿಪರಿಬ್ಬಿ
ಬ್ಬರ ದಿಶಾಮಾತಂಗಗಳ ಹದಿನಾರನಳವಡಿಸಿ
ಸರಸಿಜೋದ್ಭವ ಸೃಜಿಸದಿರ್ದರೆ
ಧರಿಸಲಾಪುದೆ ಧರಣಿಯೆನೆ ಕುರು
ಧರೆಗೆ ಬಂದುದು ಸೇನೆ ಪಯಣದ ಮೇಲೆ ಪಯಣದಲಿ (ಭೀಷ್ಮ ಪರ್ವ, ೧ ಸಂಧಿ, ೫೦ ಪದ್ಯ)

ತಾತ್ಪರ್ಯ:
ಆಬ್ಬಾ ಆ ಕುರುಸೈನ್ಯದ ಭರದ ವೇಗವಾದ ನಡಿಗೆಗೆ ಭೂಮಿಯು ನಡುಗಿತು. ಎರಡು ಕುಲಗಿರಿಗಳಾದ ಮೇರು, ವಿಂಧ್ಯಾ, ಆಮೆ, ಆದಿಶೇಷರಿಬ್ಬರು, ಹದಿನಾರು ದಿಕ್ಕುಗಳು ಇವೆಲ್ಲವನ್ನು ಬ್ರಹ್ಮನು ಸೃಷ್ಟಿಸಿ ಭೂಮಿಯನ್ನು ನಿಲ್ಲಿಸದೆ ಹೋಗಿದ್ದರೆ, ಈ ಸೈನ್ಯವನ್ನು ಭೂಮಿಯು ಹೊರಬಲ್ಲುದೆ ಎನ್ನಿಸುವಂತೆ, ಕೌರವನ ಸೈನ್ಯವು ಪಯಣಗಳನ್ನು ಮಾಡಿ ಕುರುಕ್ಷೇತ್ರಕ್ಕೆ ಬಂದಿತು.

ಅರ್ಥ:
ಅರರೆ: ಆಶ್ಚರ್ಯವನ್ನು ಸೂಚಿಸುವ ಪದ; ನಡೆ: ಚಲಿಸು; ಸೇನೆ: ಸೈನ್ಯ; ಕುಲಗಿರಿ: ಕುಲಾಚಲ, ಎತ್ತರದ ಬೆಟ್ಟ; ಕೂರುಮ: ಆಮೆ; ಫಣಿ: ಹಾವು; ಇಬ್ಬಿಬ್ಬ: ಎರಡೆರಡು; ದಿಶ: ದಿಕ್ಕು; ಮಾತಂಗ: ಪರ್ವತದ ಹೆಸರು; ಅಳವಡಿಸು: ಜೊತೆಕೂಡಿಸು; ಸರಸಿಜೋದ್ಭವ: ಬ್ರಹ್ಮ; ಸರಸಿಜ: ಕಮಲ; ಉದ್ಭವ: ಹುಟ್ಟು; ಸೃಜಿಸು: ರುಚಿಸು, ನಿರ್ಮಿಸು; ಧರಿಸು: ಹೊರು; ಧರಣಿ: ಭೂಮಿ; ಕುರುಧರೆ: ಕುರುಕ್ಷೇತ್ರ; ಪಯಣ: ಪ್ರಯಾಣ;

ಪದವಿಂಗಡಣೆ:
ಅರರೆ +ನಡೆದುದು+ ಸೇನೆ +ಕುಲಗಿರಿ
ಯೆರಡು+ ಕೂರುಮ +ಫಣಿಪರ್+ಇಬ್ಬಿ
ಬ್ಬರ +ದಿಶಾ+ಮಾತಂಗಗಳ+ ಹದಿನಾರನ್+ಅಳವಡಿಸಿ
ಸರಸಿಜೋದ್ಭವ +ಸೃಜಿಸದಿರ್ದರೆ
ಧರಿಸಲಾಪುದೆ +ಧರಣಿ+ಎನೆ +ಕುರು
ಧರೆಗೆ+ ಬಂದುದು +ಸೇನೆ+ ಪಯಣದ+ ಮೇಲೆ +ಪಯಣದಲಿ

ಅಚ್ಚರಿ:
(೧) ಧ ಕಾರದ ತ್ರಿವಳಿ ಪದ – ಧರಿಸಲಾಪುದೆ ಧರಣಿಯೆನೆ ಕುರುಧರೆಗೆ

ಪದ್ಯ ೭೦: ದುರ್ಯೋಧನನು ಅರ್ಜುನನನ್ನು ಹೇಗೆ ಹಂಗಿಸಿದನು?

ಬಾಲವೃದ್ಧರ ವಿಪ್ರರನು ನೀ
ಕಾಳಗದೊಳೋಡಿಸಿದೆನೆಂದೇ
ಮೇಲುಪೋಗಿನಲಿರಲು ಬೇಡಲೆ ಪಾರ್ಥ ಮರುಳಾದೈ
ಆಳಿದಡವಿಯ ರಾಜ್ಯವಲ್ಲದೆ
ಮೇಲೆ ಧರಣಿಯ ಬಯಸಿದೊಡೆ ನಿಮ
ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ (ವಿರಾಟ ಪರ್ವ, ೯ ಸಂಧಿ, ೭೦ ಪದ್ಯ)

ತಾತ್ಪರ್ಯ:
ಹುಡುಗರು, ಮುದುಕರು, ಬ್ರಾಹ್ಮಣರನ್ನು ಯುದ್ಧದಲ್ಲಿ ಓಡಿಸಿದೆನೆಂದು ಹಿಗ್ಗಬೇಡ. ಅರ್ಜುನ ನಿನಗೆಲ್ಲೋ ಭ್ರಾಂತಿ! ನಿನಗೆ ರಾಜ್ಯ ಬೇಕೇ? ನೀವು ಇದುವರೆಗೆ ಆಳಿದ ಅಡವಿಯ ರಾಜ್ಯವಲ್ಲದೆ ನಿನಗೆ ಇನ್ನಾವ ರಾಜ್ಯವೂ ಸಿಕ್ಕಲಾರದು, ಸಿಕ್ಕಲು ನಾನು ಬಿಡುವುದಿಲ್ಲ. ನೀನು ಅರಣ್ಯಕ್ಕೆ ಹೋಗು ಹೊರಡು ಎನ್ನುತ್ತಾ ಕೌರವನು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಬಾಲ: ಯುವಕ, ಹುಡುಗ; ವೃದ್ಧ: ವಯಸ್ಸಾದ, ಮುದುಕ; ವಿಪ್ರ: ಬ್ರಾಹ್ಮಣ; ಕಾಳಗ: ಯುದ್ಧ; ಓಡಿಸು: ಧಾವಿಸು; ಮೇಲುಪೋಗು: ಮೇಲೇರು, ಅಧಿಕ ಉತ್ಸಾಹಿತನಾಗು; ಮರುಳ: ಹುಚ್ಚ; ಆಳು: ಅಧಿಕಾರ ನಡೆಸು; ಅಡವಿ: ಕಾದು; ರಾಜ್ಯ: ರಾಷ್ಟ್ರ; ಧರಣಿ: ಭೂಮಿ; ಬಯಸು: ಇಚ್ಛೆ; ಅರಣ್ಯ: ಕಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬಾಲ+ವೃದ್ಧರ +ವಿಪ್ರರನು +ನೀ
ಕಾಳಗದೊಳ್+ಓಡಿಸಿದೆನ್+ಎಂದೇ
ಮೇಲುಪೋಗಿನಲ್+ಇರಲು +ಬೇಡಲೆ +ಪಾರ್ಥ +ಮರುಳಾದೈ
ಆಳಿದ್+ಅಡವಿಯ +ರಾಜ್ಯವಲ್ಲದೆ
ಮೇಲೆ +ಧರಣಿಯ+ ಬಯಸಿದೊಡೆ +ನಿಮಗ್
ಆಳಲ್+ಈವೆನೆ +ಹೋಗು +ಹೋಗ್+ ಅರಣ್ಯಕೆನುತ್+ಎಚ್ಚ

ಅಚ್ಚರಿ:
(೧) ದುರ್ಯೋಧನನ ಭಂಡತನದ ಮಾತು – ಆಳಿದಡವಿಯ ರಾಜ್ಯವಲ್ಲದೆ ಮೇಲೆ ಧರಣಿಯ ಬಯಸಿದೊಡೆ ನಿಮಗಾಳಲೀವೆನೆ

ಪದ್ಯ ೨೩: ಉತ್ತರನು ಅರ್ಜುನನಿಗೆ ಯಾವ ಉತ್ತರವನ್ನಿತ್ತನು?

ಧುರದೊಳೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಒಲಿದು
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನ ನಮಗಿಂದ್ರಪದವಿಯು ಬಿಟ್ಟು ಕಳುಹೆಂದ (ವಿರಾಟ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನ ಮಾತಿಗೆ ಉತ್ತರನು ಪ್ರತಿಕ್ರಯಿಸುತ್ತಾ, ರಣರಂಗದಿಂದ ಓಡಿ ಹೋದ ಪಾಪಕ್ಕೆ ನಮ್ಮ ಬ್ರಾಹ್ಮಣರು ಪ್ರಾಯಶ್ಚಿತ್ತ ಮಾಡಿಸುತ್ತಾರೆ. ಬದುಕಿದರೆ ನಾವೇ ಅಶ್ವಮೇಧವನ್ನು ಮಾಡಬಹುದು. ನನಗೆ ಅಪ್ಸರೆಯರು ಬೇಕಿಲ್ಲ. ಅರಮನೆಯ ನಾರಿಯರೇ ಸಾಕು. ನನ್ನ ಅರಸುತನವೇ ಇಂದ್ರ ಪದವಿ, ನನ್ನನ್ನು ದಯವಿಟ್ಟು ಬಿಟ್ಟು ಕಳಿಸು ಎಂದು ಬೇಡಿದನು.

ಅರ್ಥ:
ಧುರ: ಯುದ್ಧ, ಕಾಳಗ; ಓಡು: ಧಾವಿಸು; ಪಾತಕ: ಪಾಪ; ಭೂಸುರ: ಬ್ರಾಹ್ಮಣ; ಕಳೆ: ಹೋಗಲಾಡಿಸು; ಧರಣಿ: ಭೂಮಿ; ಪ್ರತ್ಯಕ್ಷ: ಗೋಚರ; ಒಲಿ: ಒಪ್ಪು, ಸಮ್ಮತಿಸು; ಸುರ: ದೇವತೆ; ಸತಿ: ಹೆಂಗಸು; ಒಲ್ಲೆ: ಬೇಡ; ನಾರಿ: ಹೆಣ್ಣು; ಅರಮನೆ: ರಾಜರ ಆಲಯ; ಅರಸು: ರಾಜ; ಬಿಟ್ಟು: ತೊರೆ;

ಪದವಿಂಗಡಣೆ:
ಧುರದೊಳ್+ಓಡಿದ +ಪಾತಕವ+ ಭೂ
ಸುರರು +ಕಳೆದಪರ್+ಅಶ್ವಮೇಧವ
ಧರಣಿಯಲಿ+ ಪ್ರತ್ಯಕ್ಷವಾಗಿಯೆ +ಮಾಡಬಹುದ್+ಒಲಿದು
ಸುರರ +ಸತಿಯರನ್+ಒಲ್ಲೆವ್+ಎಮಗ್
ಎಮ್ಮ್+ಅರಮನೆಯ +ನಾರಿಯರೆ +ಸಾಕ್
ಎಮ್ಮರಸುತನ+ ನಮಗ್+ಇಂದ್ರ+ಪದವಿಯು +ಬಿಟ್ಟು +ಕಳುಹೆಂದ

ಅಚ್ಚರಿ:
(೧) ಇಂದ್ರ ಪದವಿ ಅಪ್ಸರೆಯರು ಬೇಡ ಎಂದು ಹೇಳುವ ಪರಿ – ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆಮ್ಮರಸುತನ ನಮಗಿಂದ್ರಪದವಿ

ಪದ್ಯ ೨೯: ಮಲ್ಲರನ್ನೆದುರಿಸಲು ಯಾರು ಸಿದ್ಧರಾದರು?

ಬರಲು ಯಿವರಿದಿರಾಗಿ ಬಂದರು
ಕರವ ಧರಣಿಯಲುದ್ದಿ ಮಿಗೆಯ
ಬ್ಬರಿಸಿ ಭುಜವನು ಹೊಡೆದು ನಿಂದಿರೆ ಕಂಡು ಖಾತಿಯಲಿ
ಧುರಕೆ ಎಲಸಿದರಾದರಿವದಿರ
ಶಿರವ ಚೆಂಡಾಡುವೆನೆನುತ ಮೋ
ಹರಿಸಿ ಕಿಡಿಕಿಡಿಯೋಗಿ ಸಿಂಧುರಮಲ್ಲ ಮಾರಾಂತ (ವಿರಾಟ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಜೀಮೂತಾದಿಗಳು ಬರಲು, ವಿರಾಟನ ಮಲ್ಲರು ಎದುರಾಗಿ ಬಂದು ಕೈಯನ್ನು ನೆಲಕ್ಕುದ್ದಿ, ಅಬ್ಬರಿಸಿ ಭುಜವನ್ನು ತಟ್ಟಿದರು. ಇದನ್ನು ನೋದಿ ಸಿಂಧುರನು ಇವರು ನಮ್ಮೊಡನೆ ಮಲ್ಲಯುದ್ಧಕ್ಕೆ ಬಂದರೆ ಇವರ ತಲೆಗಲನ್ನು ಚೆಂಡಾಡುತ್ತೇನೆಂದು ಎದುರು ನಿಂತನು.

ಅರ್ಥ:
ಬರಲು: ಆಗಮಿಸು; ಇದಿರು: ಎದುರು; ಕರ: ಹಸ್ತ; ಧರಣಿ: ಭೂಮಿ; ಉದ್ದು: ತಿಕ್ಕು; ಮಿಗೆ: ಅಧಿಕ; ಅಬ್ಬರಿಸು: ಕೂಗು; ಭುಜ: ಬಾಹು; ಹೊಡೆ: ಏಟು, ಪೆಟ್ಟು; ನಿಂದು: ನಿಲ್ಲು; ಕಂಡು: ನೋದು; ಖಾತಿ:ಕೋಪ; ಧುರ: ಯುದ್ಧ, ಕಾಳಗ; ಎಳಸು: ಬಯಸು; ಶಿರ: ತಲೆ; ಚೆಂಡಾಡು: ತಿರುಗಿಸು; ಮೋಹರ: ಗುಂಪು, ಯುದ್ಧ; ಕಿಡಿಕಿಡಿ: ಕೋಪಗೊಳ್ಳು; ಯೋಗಿ: ಚಿತ್ತವೃತ್ತಿ ನಿರೋಧ ಮಾಡುವವನು; ಮಾರ: ಕಾಮ, ಮನ್ಮಥ; ಅಂತ: ಕೊನೆ, ನಾಶ; ಮಾರಾಂತು: ಎದುರಾಗಿ, ಯುದ್ಧಕ್ಕೆ ನಿಲ್ಲು;

ಪದವಿಂಗಡಣೆ:
ಬರಲು +ಯಿವರಿದಿರಾಗಿ+ ಬಂದರು
ಕರವ +ಧರಣಿಯಲುದ್ದಿ+ ಮಿಗೆ
ಅಬ್ಬರಿಸಿ+ ಭುಜವನು+ ಹೊಡೆದು+ ನಿಂದಿರೆ +ಕಂಡು +ಖಾತಿಯಲಿ
ಧುರಕೆ+ ಎಲಸಿದ+ಆದರ್+ಇವದಿರ
ಶಿರವ+ ಚೆಂಡಾಡುವೆನ್+ಎನುತ +ಮೋ
ಹರಿಸಿ +ಕಿಡಿಕಿಡಿಯೋಗಿ+ ಸಿಂಧುರಮಲ್ಲ+ ಮಾರಾಂತ

ಅಚ್ಚರಿ:
(೧) ಸಿಂಧೂರಮಲ್ಲನನ್ನು ಕರೆದ ಪರಿ – ಕಿಡಿಕಿಡಿಯೋಗಿ

ಪದ್ಯ ೬: ಪಾಂಡವರು ಯಾರನ್ನು ಹಿಂಬಾಲಿಸಿದರು?

ತರಣಿಯನ್ವಯನಂದು ಮಾಯಾ
ಹರಿಣನನು ಬೆಂಬತ್ತಿ ವಿಹ್ವಲ
ಕರಣನಾದಂದದಲಿ ಮಹದಾರಣ್ಯವಾಸದಲಿ
ಧರಣಿಪತಿ ಬಳಿಸಲಿಸಿ ಮುನಿಪತಿ
ಯರಣಿಯನು ಕೊಂಡೊಯ್ದು ಹುಲುಮೃಗ
ಸರಣಿಯಲಿ ಸೈವರಿದರಂದಾಕರ್ಣ ಮಾರ್ಗಣರು (ಅರಣ್ಯ ಪರ್ವ, ೨೬ ಸಂಧಿ, ೬ ಪದ್ಯ)

ತಾತ್ಪರ್ಯ:
ಸೂರ್ಯವಂಶಜನಾದ ಶ್ರೀರಾಮನು ಮಾಯಾ ಚಿನ್ನದ ಜಿಂಕೆಯನ್ನು ಬೆನ್ನುಹತ್ತಿ ದಿಗ್ಭ್ರಮೆಗೊಂಡು ಬೇಸತ್ತಂಗೆ, ಪಾಂಡವರು ಬಾಣಗಳನ್ನು ಹೂಡಿ ಹೆದೆಯನ್ನು ಕಿವಿವರೆಗೆಳೆದು ಹಿಡಿದು ಬ್ರಾಹ್ಮಣನ ಅರಣಿಯನ್ನು ಕೊಂಡೊಯ್ದ ಜಿಂಕೆಯ ಹಿಂದೆ ಕಾಡಿನಲ್ಲಿ ಹೊರಟರು.

ಅರ್ಥ:
ತರಣಿ: ಸೂರ್ಯ; ಅನ್ವಯ: ವಂಶ; ಮಾಯ: ಗಾರುಡಿ; ಹರಿಣ: ಜಿಂಕೆ; ಬೆಂಬತ್ತು: ಹಿಂಬಾಲಿಸು; ವಿಹ್ವಲ: ಹತಾಶ; ಕರಣ:ಕೆಲಸ; ಮಹದಾರಣ್ಯ: ದೊಡ್ಡ ಕಾಡು; ವಾಸ: ವಾಸಸ್ಥಳ; ಧರಣಿಪತಿ: ರಾಜ; ಬಳಿ: ಹತ್ತಿರ; ಸಲಿಸು: ಪೂರೈಸು; ಮುನಿಪತಿ: ಋಷಿ; ಅರಣಿ: ಯಾಗಕ್ಕೆ ಉಪಯೋಗಿಸುವ ಕೊರಡು; ಹುಲು: ಕ್ಷುದ್ರ, ಅಲ್ಪ; ಮೃಗ: ಜಿಂಕೆ; ಸರಣಿ: ದಾರಿ, ಹಾದಿ; ಸೈವರಿ: ಮುಂದಕ್ಕೆ ಹೋಗು; ಮಾರ್ಗಣ: ಬಾಣ;

ಪದವಿಂಗಡಣೆ:
ತರಣಿ +ಅನ್ವಯನ್+ಅಂದು +ಮಾಯಾ
ಹರಿಣನನು +ಬೆಂಬತ್ತಿ+ ವಿಹ್ವಲ
ಕರಣನಾದಂದದಲಿ+ ಮಹದಾರಣ್ಯ+ವಾಸದಲಿ
ಧರಣಿಪತಿ +ಬಳಿಸಲಿಸಿ+ ಮುನಿಪತಿ
ಅರಣಿಯನು +ಕೊಂಡೊಯ್ದು +ಹುಲು+ಮೃಗ
ಸರಣಿಯಲಿ+ ಸೈವರಿದರಂದ್+ಆ+ಕರ್ಣ+ ಮಾರ್ಗಣರು

ಅಚ್ಚರಿ:
(೧) ಸೂರ್ಯವಂಶ ಎಂದು ಹೇಳುವ ಪರಿ – ತರಣಿಯನ್ವಯ
(೨) ಶ್ರೀರಾಮನನ್ನು ಹೇಳುವ ಪರಿ – ತರಣಿಯನ್ವಯನನ್
(೩) ಧರಣಿ, ತರಣಿ, ಸರಣಿ, ಅರಣಿ – ಪ್ರಾಸ ಪದಗಳು