ಪದ್ಯ ೪೨: ಯಾವ ಸದ್ದು ಆಕಾಶವನ್ನು ವ್ಯಾಪಿಸಿತು?

ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಲವನಳ್ಳಿರಿದುದಾ ಸ್ತುತಿಪಾಠಕರ ರಭಸ (ಗದಾ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೇಲೆ ಮತ್ತೆ ಹೂ ಮಳೆಗಳು ವರ್ಷಿಸಿದವು. ಶ್ರೀ ಕೃಷ್ಣನು ಧರ್ಮಜನ ಕೈಗೆ ಕೈಗೂಡಿಸಿ ಹೊರಟು ಹೋದನು. ವಂದಿಮಾಗಧರು ಕೌರವನನ್ನು ಹೊಗಳಿದ ಸದ್ದು ಆಕಾಶವನ್ನು ವ್ಯಾಪಿಸಿತು.

ಅರ್ಥ:
ಮತ್ತೆ: ಪುನಃ; ಹೂವು: ಮಲರ್; ಮಳೆ: ವರ್ಷ; ನೆತ್ತಿ: ಶಿರ; ಸುರಿ: ವರ್ಷಿಸು; ಮುರಾಂತಕ: ಕೃಷ್ಣ; ತಿರುಗು: ಸುತ್ತು; ಅವನಿಪತಿ: ರಾಜ; ಕರತಳ: ಹಸ್ತ; ತಳುಕು: ಹೆಣಿಕೆ, ಜೋಡಣೆ; ಮುತ್ತು: ಆವರಿಸು; ವಂದಿ: ಹೊಗಳುಭಟ್ಟ; ಅರಿ: ತಿಳಿ; ಅರಸ: ರಾಜ; ಅಳ್ಳಿರಿ: ನಡುಗಿಸು, ಚುಚ್ಚು; ಸ್ತುತಿಪಾಠಕ: ಹೊಗಳುಭಟ್ಟ; ರಭಸ: ವೇಗ;

ಪದವಿಂಗಡಣೆ:
ಮತ್ತೆ +ಹೂವಿನ +ಮಳೆಗಳ್+ಆತನ
ನೆತ್ತಿಯಲಿ +ಸುರಿದವು +ಮುರಾಂತಕನ್
ಅತ್ತ+ ತಿರುಗಿದನ್+ಅವನಿಪತಿ +ಕರತಳವ +ತಳುಕಿಕ್ಕಿ
ಮುತ್ತಿದರು+ ಮಾಗಧರು +ವಂದಿಗಳ್
ಎತ್ತಣದು+ ನಾನರಿಯೆನ್+ಅರಸ +ವಿ
ಯತ್ತಲವನ್+ಅಳ್ಳಿರಿದುದಾ +ಸ್ತುತಿಪಾಠಕರ +ರಭಸ

ಅಚ್ಚರಿ:
(೧) ಮಾಗಧ, ವಂದಿ, ಸ್ತುತಿಪಾಠಕ – ಸಾಮ್ಯಾರ್ಥ ಪದಗಳು

ಪದ್ಯ ೩೬: ಜಯದ ಸೂಚನೆಯನ್ನು ಯಾರು ನೀಡಿದರು?

ನಗೆ ಮಸಗಿ ಕರತಳವ ಹೊಯ್ ಹೊ
ಯ್ಡೊಗುಮಿಗೆಯ ಹರುಷದಲಿ ನಕುಲಾ
ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ
ಅಗಿದು ಗುಡಿಗಟ್ಟಿದವು ಮುಂಗಾ
ಲುಗಳ ಹೊಯ್ಲಲಿ ತೇಜಿಗಳು ಕೈ
ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು (ಗದಾ ಪರ್ವ, ೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಕ್ಕು, ಕೈತಟ್ಟಿ, ಅತಿಶಯ ಹರ್ಷದಿಂದ ನಕುಲನೇ ಮೊದಲಾದವರು ಬೊಬ್ಬಿರಿದರು. ವಾದ್ಯಗಳ ಶಬ್ದ ಹೆಚ್ಚಾಯಿತು. ಕುದುರೆಗಳು ಮುಂಗಾಲಿನಿಂದ ನೆಲವನ್ನು ಹೊಯ್ದವು. ಆನೆಗಳು ಸೊಂಡಿಲನ್ನೆತ್ತಿ ಸದ್ದುಮಾಡಿ ಜಯದ ಸೂಚನೆಯನ್ನು ಕೊಟ್ಟವು.

ಅರ್ಥ:
ನಗೆ: ಹರುಷ; ಮಸಗು: ಹರಡು; ಕರತಳ: ಹಸ್ತ; ಹೊಯ್: ಹೊಡೆ; ಹರುಷ: ಸಂತಸ; ಆದಿ: ಮುಂತಾದ; ಬೊಬ್ಬಿರಿ: ಗರ್ಜಿಸು; ವಾದ್ಯ: ಸಂಗೀತದ ಸಾಧನ; ರವ: ಶಬ್ದ; ಅಗಿ: ಜಗಿ, ಆವರಿಸು; ಗುಡಿ: ಗುಂಪುಗೂಡು; ಮುಂಗಾಲು: ಮುಂದಿನ ಕಾಲು; ಹೊಯ್ಲು: ಹೊಡೆತ; ತೇಜಿ: ಕುದುರೆ; ಕೈ: ಹಸ್ತ; ನೆಗಹು: ಮೇಲೆತ್ತು; ಜಯ: ಗೆಲುವು; ಸೂಚನೆ: ತಿಳಿಸುವಿಕೆ; ಒಲಿ: ಪ್ರೀತಿಸು, ಒಪ್ಪು, ಸಮ್ಮತಿಸು; ಆನೆ: ಗಜ;

ಪದವಿಂಗಡಣೆ:
ನಗೆ +ಮಸಗಿ +ಕರತಳವ +ಹೊಯ್ +ಹೊ
ಯ್ಡೊಗುಮಿಗೆಯ +ಹರುಷದಲಿ+ ನಕುಲಾ
ದಿಗಳು +ಬೊಬ್ಬಿರಿದಾರಿದರು +ಬಹುವಾದ್ಯ+ರವದೊಡನೆ
ಅಗಿದು +ಗುಡಿಗಟ್ಟಿದವು +ಮುಂಗಾ
ಲುಗಳ +ಹೊಯ್ಲಲಿ +ತೇಜಿಗಳು+ ಕೈ
ನೆಗಹಿ +ಜಯಸೂಚನೆಯಲ್+ಒಲೆದವು +ಪಟ್ಟದಾನೆಗಳು

ಅಚ್ಚರಿ:
(೧) ಸಂತೋಷವನ್ನು ಸೂಚಿಸುವ ಪರಿ – ಕರತಳವ ಹೊಯ್ ಹೊಯ್ಡೊಗುಮಿಗೆಯ ಹರುಷದಲಿ; ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ

ಪದ್ಯ ೩೪: ಕೌರವನು ಸರೋವರದಿಂದ ಹೇಗೆ ಬಂದನು?

ಜಲಧಿ ಮಧ್ಯದೊಳೇಳ್ವ ವಡಬಾ
ನಲನವೊಲು ತವಕದಲಿ ತಡಿಗ
ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ
ಹೊಳೆವ ಭಾರಿಯ ಹೆಗಲ ಗದೆ ಕರ
ತಳದ ವಿಪುಳ ಸಘಾಡಗರ್ವದ
ಚಳನಯನದ ಛಡಾಳಛಲದ ನೃಪಾಲ ಹೊರವಂಟ (ಗದಾ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸರೋವರದ ಮಧ್ಯದಿಂದ ಏಳುವಡಬಾಗ್ನಿಯಂತೆ ಕೌರವನು ದಡಕ್ಕೆ ಬಂದನು. ಕೋಪಾಗ್ನಿಯಿಂದ ಅವನ ಕಣ್ಣುಗಳು ಕಿಡಿಯುಗುಳುತ್ತಿದ್ದವು. ಕೈಯಲ್ಲಿ ಭಾರಿಯ ಗದೆಯನ್ನು ಹಿಡಿದು ಹೆಗಲಮೇಲಿಟ್ಟುಕೊಂಡು ಗರ್ವಾಡಂಬರವನ್ನು ತೋರುತ್ತಾ ಆಚೀಚೆಗೆ ಚಲಿಸುವ ಕಣ್ಣುಗಳಿಂದ ನೋಡುತ್ತಾ, ಅತಿಶಯ ಛಲವಂತ ಕೌರವನು ದಡದಲ್ಲಿ ನಿಂತನು.

ಅರ್ಥ:
ಜಲಧಿ: ಸಾಗರ; ಮಧ್ಯ: ನಡುವೆ; ಏಳು: ಮೇಲೆ ಹತ್ತು; ವಡಬಾನಲ: ಸಮುದ್ರದ ನಡುವೆ ಇರುವ ಬೆಂಕಿ; ತವಕ: ಬಯಕೆ, ಆತುರ; ತಡಿ: ದಡ; ಅವ್ವಳಿಸು: ಅಪ್ಪಳಿಸು; ಕ್ರೋಧ: ಕೋಪ; ಶಿಖಿ: ಬೆಂಕಿ; ಕಿಡಿ: ಬೆಂಕಿ, ಜ್ವಾಲೆ; ಮಸಗು: ಹರಡು; ಕಂಗಳು: ಕಣ್ಣು; ಹೊಳೆ: ಪ್ರಕಾಶ; ಭಾರಿ: ಬಹಳ; ಹೆಗಲು: ಭುಜ; ಗದೆ: ಮುದ್ಗರ; ಕರತಳ: ಕೈ, ಹಸ್ತ; ವಿಪುಳ: ಬಹಳ; ಸಘಾಡ: ರಭಸ; ಗರ್ವ: ಅಹಂಕಾರ; ಚಳ: ಅಲುಗುವ; ನಯನ: ಕಣ್ಣು; ಛಡಾಳ: ಹೆಚ್ಚಳ, ಆಧಿಕ್ಯ; ಛಲ: ನೆಪ, ವ್ಯಾಜ, ದೃಢ ನಿಶ್ಚಯ; ನೃಪಾಲ: ರಾಜ; ಹೊರವಂಟ: ಆಚೆಗೆ ಬಾ;

ಪದವಿಂಗಡಣೆ:
ಜಲಧಿ +ಮಧ್ಯದೊಳ್+ಏಳ್ವ +ವಡಬಾ
ನಲನವೊಲು +ತವಕದಲಿ +ತಡಿಗ್
ಅವ್ವಳಿಸಿದನು +ತತ್ಕ್ರೋಧಶಿಖಿ+ ಕಿಡಿಮಸಗೆ +ಕಂಗಳಲಿ
ಹೊಳೆವ +ಭಾರಿಯ +ಹೆಗಲ +ಗದೆ +ಕರ
ತಳದ +ವಿಪುಳ +ಸಘಾಡ+ಗರ್ವದ
ಚಳನಯನದ +ಛಡಾಳ+ಛಲದ +ನೃಪಾಲ +ಹೊರವಂಟ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಲಧಿ ಮಧ್ಯದೊಳೇಳ್ವ ವಡಬಾನಲನವೊಲು

ಪದ್ಯ ೧೯: ಕೌರವನನ್ನು ನೋಡಿ ಹೆಂಗಸರೇಕೆ ನಗುವರು?

ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದುಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ (ಗದಾ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಂದು ನಿನ್ನ ಆಸ್ಥಾನದಲ್ಲಿ ಇದ್ದ ಸ್ತ್ರೀಯರ ಸಮ್ಮುಖದಲ್ಲಿ ಪಾಂಡವರಿಗೆ ಭೂಮಿಯನ್ನು ಕೊಡುವುದಿಲ್ಲ, ಅವರಿಗೆ ಕಾಡೇಗತಿ ಎಂದು ಘೋಷಿಸಿ ಖಡ್ಗವನ್ನು ಹಿರಿದೆಯಲ್ಲವೇ? ಆ ಖಡ್ಗವನ್ನು ರಣಭೂಮಿಯಲ್ಲೆಸೆದು ಓಡಿಬಂದು ಕೊಳದ ಮಧ್ಯದಲ್ಲಿ ಅವಿತುಕೊಂಡರೆ, ಆ ಹೆಣ್ಣುಮಕ್ಕಳು ಕೈ ತಟ್ಟಿ ನಗುವುದಿಲ್ಲವೇ ಎಂದು ಧರ್ಮಜನು ಹಂಗಿಸಿದನು.

ಅರ್ಥ:
ಅಡವಿ: ಕಾಡು; ನೆಲೆ: ಭೂಮಿ; ಸುತ: ಮಕ್ಕಳು; ಕೊಡೆ: ನೀಡುವುದಿಲ್ಲ; ಧರಣಿ: ಭೂಮಿ; ಖಡುಗ: ಕತ್ತಿ; ಜಡಿ: ಬೀಸು; ಓಲಗ: ದರ್ಬಾರು; ನಾರಿ: ಸ್ತ್ರೀ; ಸಮ್ಮುಖ: ಎದುರು; ಕಳ: ರಣರಂಗ; ಹಾಯಿಕು: ಹಾಕು, ಬಿಸಾಡು; ನಡು: ಮಧ್ಯ; ಕೊಳ: ಸರಸಿ; ಓಡು: ಧಾವಿಸು; ಹೊಕ್ಕು: ಸೇರು; ಮಡದಿ: ಹೆಂಡತಿ; ನಗು: ಹರ್ಷಿಸು; ಹೊಯ್ದು: ಹೊಡೆ; ಕರತಳ: ಹಸ್ತ, ಕೈ;

ಪದವಿಂಗಡಣೆ:
ಅಡವಿಯೇ +ನೆಲೆ +ಪಾಂಡುಸುತರಿಗೆ
ಕೊಡೆನು+ ಧರಣಿಯನೆಂದು+ಖಡುಗವ
ಜಡಿದೆಲಾ +ನಿನ್ನೋಲಗದ +ನಾರಿಯರ +ಸಮ್ಮುಖದಿ
ಖಡುಗವನು +ಕಳನೊಳಗೆ +ಹಾಯಿಕಿ
ನಡು+ಕೊಳನ +ನೀನೋಡಿ+ ಹೊಕ್ಕಡೆ
ಮಡದಿಯರು +ತಮತಮಗೆ+ ನಗರೇ+ ಹೊಯ್ದು +ಕರತಳವ

ಅಚ್ಚರಿ:
(೧) ನಾರಿಯರು ನಗುವ ಪರಿ – ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ

ಪದ್ಯ ೩೫: ಕುದುರೆಗಳ ಪುಣ್ಯವು ಎಂತಹದು?

ಕರತಳದಿ ಮೈದಡವಿ ಗಾಯದ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ
ಹರುಷ ಮಿಗೆ ಕೊರಳೆತ್ತಿ ನಯನವ
ತಿರುಹಿ ದೇವನ ನೋಡುತಿರ್ದುವು
ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ (ದ್ರೋಣ ಪರ್ವ, ೧೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅವನು ಕೈಯಿಂದ ಅವುಗಲ ಮೈದಡವಿ, ನಟ್ಟಿದ್ದ ಬಾಣಗಳನ್ನು ಕಿತ್ತು, ಗಾಯಕ್ಕೆ ಔಷಧವನ್ನು ಲೇಪಿಸಿ, ಕರುಣದಿಂದ ಅವುಗಲ ಕತ್ತನ್ನು ಚಪ್ಪರಿಸಿದನು. ಕುದುರೆಗಳು ಹರ್ಷಾತಿರೇಕದಿಂದ ಕೊರಳನ್ನೆತ್ತಿ, ಕಣ್ಣುಗಳನ್ನು ತಿರುಗಿಸಿ ಕೃಷ್ಣನನ್ನು ನೋಡುತ್ತಿದ್ದವು. ಆ ಕುದುರೆಗಳ ಪುಣ್ಯ ಸನಕಾದಿಗಳಿಗೂ ಇಲ್ಲ.

ಅರ್ಥ:
ಕರ: ಕೈ; ಕರತಳ: ಅಂಗೈ; ಮೈ: ತನು; ತಡವು: ನೇವರಿಸು; ಗಾಯ: ಪೆಟ್ಟು; ಸರಳ: ಬಾಣ; ಕಿತ್ತು: ಹೊರಹಾಕು; ಔಷಧಿ: ಮದ್ದು; ಲೇಪಿಸು: ಬಳಿ, ಹಚ್ಚು; ಒರಸು: ಸಾರಿಸು, ನಾಶಮಾಡು, ಅಳಿಸು; ಕರುಣ: ದಯೆ; ಚಪ್ಪರಿಸು: ಸವಿ, ರುಚಿನೋಡು; ಕಂಧರ: ಕೊರಳು; ಹರುಷ: ನಗು; ಮಿಗೆ: ಹೆಚ್ಚು; ಕೊರಳು: ಗಂಟಲು; ನಯನ: ಕಣ್ಣು; ತಿರುಹು: ತಿರುಗಿಸು; ದೇವ: ಭಗವಮ್ತ; ನೋಡು: ವೀಕ್ಷಿಸು; ತುರಗ: ಅಶ್ವ; ಪುಣ್ಯ: ಸದಾಚಾರ; ಆದಿ: ಮುಂತಾದ;

ಪದವಿಂಗಡಣೆ:
ಕರತಳದಿ +ಮೈದಡವಿ +ಗಾಯದ
ಸರಳ +ಕಿತ್+ಔಷಧಿಯ +ಲೇಪವನ್
ಒರಸಿದನು+ ಕರುಣದಲಿ +ಚಪ್ಪರಿಸಿದನು +ಕಂಧರವ
ಹರುಷ +ಮಿಗೆ +ಕೊರಳೆತ್ತಿ+ ನಯನವ
ತಿರುಹಿ +ದೇವನ+ ನೋಡುತಿರ್ದುವು
ತುರಗ +ನಾಲ್ಕರ +ಪುಣ್ಯ +ಸನಕಾದಿಗಳಿಗಿಲ್ಲೆಂದ

ಅಚ್ಚರಿ:
(೧) ಕುದುರೆಗಳು ಕೃಷ್ಣನನ್ನು ನೋಡಿದ ಪರಿ – ಹರುಷ ಮಿಗೆ ಕೊರಳೆತ್ತಿ ನಯನವ ತಿರುಹಿ ದೇವನ ನೋಡುತಿರ್ದುವು

ಪದ್ಯ ೪೨: ಅಭಿಮನ್ಯುವಿನ ಖಡ್ಗದ ಯುದ್ಧವು ಹೇಗೆ ತೋರಿತು?

ಕರುಳ ಹೂಗೊಂಚಲಿನ ಮೂಳೆಯ
ಬರಿಮುಗುಳ ನವ ಖಂಡದಿಂಡೆಯ
ಕರತಳದ ತಳಿರೆಲೆಯ ಕಡಿದೋಳುಗಳ ಕೊಂಬುಗಳ
ಬೆರಳ ಕಳಿಕೆಯ ತಲೆಯ ಫಲ ಬಂ
ಧುರದ ಘೂಕಧ್ವಾಂಕ್ಷ ನವ ಮಧು
ಕರದ ರಣವನವೆಸೆದುದೀತನ ಖಡ್ಗಚೈತ್ರದಲಿ (ದ್ರೋಣ ಪರ್ವ, ೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಖಡ್ಗ ಚೈತ್ರಮಾಸಕ್ಕೆ ಕರುಳಿನ ಹೂಗೊಂಚಲು, ಮೂಳೆಯೇ ಬಿರಿದ ಮೊಗ್ಗು, ಹೊಸ ಮಾಂಸ ಖಂಡಗಳು ಕೈಗಳ ಚಿಗುರೆಲೆಗಳು, ಕಡಿದುಬಿದ್ದ ತೋಳುಗಳೇ ಕೊಂಬುಗಳು, ಬೆರಳುಗಳೇ ದೀಪ, ತಲೆಗಳೇ ಹಣ್ಣುಗಳು, ಗೂಬೆ ಕಾಗೆಗಳೇ ಮರಿ ದುಂಬಿಗಳು.

ಅರ್ಥ:
ಕರುಳು: ಪಚನಾಂಗ; ಹೂ: ಪುಷ್ಪ; ಗೊಂಚಲು: ಗುಂಪು; ಮೂಳೆ: ಎಲುಬು; ಬಿರಿ: ಬಿರುಕು, ಸೀಳು; ಮುಗುಳು: ಮೊಗ್ಗು, ಕುಟ್ಮಲ; ನವ: ಹೊಸ; ಖಂಡ: ತುಂಡು; ಖಂಡದಿಂಡೆ: ಮಾಂಸದ ತುಂಡು; ಕರತಳ: ಅಂಗೈ; ತಳಿರು: ಚಿಗುರು; ಎಲೆ: ಪರ್ಣ; ಕಡಿ: ಸೀಳು; ತೋಳು: ಬಾಹು; ಕೊಂಬು: ವಾದ್ಯ; ಬೆರಳು: ಅಂಗುಲಿ; ಕಳಿಕೆ: ದೀಪದ ಕುಡಿ; ತಲೆ: ಶಿರ; ಫಲ: ಹಣ್ಣು; ಬಂಧುರ: ಬಾಗಿರುವುದು; ಘೂಕ: ಗೂಬೆ; ಧ್ವಾಂಕ್ಷ: ಕಾಗೆ; ನವ: ಹೊಸ; ಮಧುಕರ: ದುಂಬಿ, ಭ್ರಮರ; ರಣ: ಯುದ್ಧಭೂಮಿ; ವನ: ಕಾಡು; ಎಸೆದು: ತೋರು; ಖಡ್ಗ: ಕತ್ತಿ; ಚೈತ್ರ: ವಸಂತಮಾಸ, ಆರಂಭದ ಸಂಕೇತ;

ಪದವಿಂಗಡಣೆ:
ಕರುಳ +ಹೂಗೊಂಚಲಿನ +ಮೂಳೆಯ
ಬರಿಮುಗುಳ+ ನವ+ ಖಂಡ+ದಿಂಡೆಯ
ಕರತಳದ +ತಳಿರ್+ಎಲೆಯ +ಕಡಿ+ತೋಳುಗಳ +ಕೊಂಬುಗಳ
ಬೆರಳ +ಕಳಿಕೆಯ +ತಲೆಯ +ಫಲ+ ಬಂ
ಧುರದ +ಘೂಕ+ಧ್ವಾಂಕ್ಷ +ನವ +ಮಧು
ಕರದ +ರಣವನವ್+ಎಸೆದುದ್+ಈತನ +ಖಡ್ಗ+ಚೈತ್ರದಲಿ

ಅಚ್ಚರಿ:
(೧) ಅತ್ಯಂತ ಸುಂದರವಾದ ಹೋಲಿಕೆ, ಖಡ್ಗದ ಹೋರಾಟವನ್ನು ಚೈತ್ರಮಾಸಕ್ಕೆ ಹೋಲಿಸುವ ಪರಿ

ಪದ್ಯ ೮: ಖಳಶಿರೋಮಣಿಗಳ ವರ್ತನೆ ಹೇಗಿತ್ತು?

ಅಳಲುವೀ ಧೃತರಾಷ್ಟ್ರನುರು ಕಳ
ಕಳವ ಕೇಳಿದನು ಕರ್ಣ ಶಕುನಿಗ
ಳುಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ
ಖಳಶಿರೋಮಣಿಗಳು ಮಹೀಶನ
ನಿಳಯ ಕೈತಂದರು ಸುಲೋಚನ
ಜಲವ ಸೆರಗಿನೊಳೊರಸಿ ನುಡಿದರು ಖೇದವೇಕೆನುತ (ಅರಣ್ಯ ಪರ್ವ, ೧೮ ಸಂಧಿ, ೮ ಪದ್ಯ)

ತಾತ್ಪರ್ಯ:
ಧೃತರಾಷ್ಟನ ಅಳಲಿನ ವಿಷಯವನ್ನು ಕೇಳಿ, ಖಳಶಿರೋಮಣಿಗಳಾದ ಕರ್ಣ, ಶಕುನಿಗಳು ಕೈತಟ್ಟಿ ತಂಬುಲವ ಹೊರಹಾಕುವಂತೆ ಜೋರಾಗಿ ನಕ್ಕರು. ನಂತರ, ಧೃತರಾಷ್ಟನ ಮನೆಗೆ ಹೋಗಿ ಅವನ ಕಣ್ಣಿರನ್ನು ಅವರ ಸೆರಗಿನಲ್ಲಿ ಒರಸಿ ದುಃಖವೇಕೆ ಎಂದು ಕೇಳಿದರು.

ಅರ್ಥ:
ಅಳಲು: ಶೋಕ, ದುಃಖಿಸು; ಉರು: ಹೆಚ್ಚು; ಕಳಕಳ: ವ್ಯಥೆ; ಕೇಳು: ಆಲಿಸು; ಉಲಿ: ಕೂಗು; ತಂಬುಲ: ಅಗಿದು ಉಗುಳುವ ಕವಳ – ತಾಂಬೂಲ; ಸೂಸು: ಎರಚುವಿಕೆ; ನಗು: ನಲಿ, ಸಂತೋಷ; ಹೊಯ್ದು: ಹೊಡೆ; ಕರತಳ: ಕೈ; ಖಳಶಿರೋಮಣಿ: ದುಷ್ಟರಲ್ಲಿ ಅಗ್ರಮಾನ್ಯ; ಮಹೀಶ; ರಾಜ; ನಿಳಯ: ಮನೆ; ಐತಂದರು: ಆಗಮಿಸು; ಸುಲೋಚನ: ಕಣ್ಣು; ಜಲ: ನೀರು; ಸೆರಗು: ಬಟ್ಟೆಯ ತುದಿ; ಒರಸು: ಸಾರಿಸು; ನುಡಿ: ಮಾತಾಡು; ಖೇದ: ದುಃಖ;

ಪದವಿಂಗಡಣೆ:
ಅಳಲುವ್+ಈ+ ಧೃತರಾಷ್ಟ್ರನ್+ಉರು +ಕಳ
ಕಳವ+ ಕೇಳಿದನು +ಕರ್ಣ +ಶಕುನಿಗಳ್
ಉಲಿದು +ತಂಬುಲ +ಸೊಸೆ +ನಕ್ಕರು +ಹೊಯ್ದು +ಕರತಳವ
ಖಳಶಿರೋಮಣಿಗಳು+ ಮಹೀಶನ
ನಿಳಯಕ್ +ಐತಂದರು +ಸುಲೋಚನ
ಜಲವ +ಸೆರಗಿನೊಳ್+ಒರಸಿ +ನುಡಿದರು +ಖೇದವೇಕೆನುತ

ಅಚ್ಚರಿ:
(೧) ದುರ್ಯೋಧನನ ಕಡೆಯವರನ್ನು ಖಳಶಿರೋಮಣಿ ಎಂದು ಕರೆದಿರುವುದು
(೨) ದುಷ್ಟರ ನಗುವಿನ ಚಿತ್ರಣ – ಉಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ

ಪದ್ಯ ೪೧: ಭೀಮ ದುಶ್ಯಾಸನರು ಮಲ್ಲಯುದ್ಧಕ್ಕೆ ಹೇಗೆ ಸಿದ್ಧರಾದರು?

ತರಿಸಿ ಬಿಗಿದರು ಚಲ್ಲಣವ ಠ
ಪ್ಪರವನಳವಡೆಗಟ್ಟಿದರು ಕ
ಸ್ತುರಿಯ ತಿಲಕವನೊಟ್ಟಿದರು ನೊಸಲಿನಲಿ ಮುಡುಹಿನಲಿ
ಕರತಳವ ಮಾರುದ್ದಿ ಭುಜದಲಿ
ಶಿರದಲಂದಕ್ಕಡದ ಮಣ್ಣನು
ಬೆರಳಲುದುರಿಚಿ ಬಾಳುಗೆಂದರು ನೆನೆದು ನಿಂಬಜೆಯ (ಕರ್ಣ ಪರ್ವ, ೧೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಇಬ್ಬರೂ ಮಲ್ಲಯುದ್ಧಕ್ಕೆ ಬೇಕಾದ ಬಟ್ಟೆಯನ್ನು ತರಿಸಿ ಬಿಗಿದುಕೊಂಡರು. ಸೊಂಟದ ಪಟ್ಟಿಯನ್ನು ಅಡ್ಡಗಟ್ಟಿದರು. ಕಸ್ತೂರಿಯ ತಿಲಕವನ್ನು ಹಣೆಯಲ್ಲೂ ಭುಜದಲ್ಲೂ ಇಟ್ಟುಕೊಂಡರು. ಅಂಗೈಯನ್ನು ಮಣ್ಣಿನಲ್ಲಿ ಇಟ್ಟು ಭುಜದಲ್ಲೂ ತಲೆಯಲ್ಲೂ ಮುಟ್ಟಿಕೊಂಡು, ಬೆರಳಿಗಂಟಿದ್ದ ಮಣ್ಣನ್ನು ಉದುರಿಸಿ ಚಂಡಿಯನ್ನು ಹೊಗಳಿದರು.

ಅರ್ಥ:
ತರಿಸು: ಬರೆಮಾಡು; ಬಿಗಿ: ಬಂಧಿಸು; ಚಲ್ಲಣ: ತೊಡೆ ಮುಚ್ಚುವ ಚೆಡ್ಡಿ; ಠಪ್ಪರ: ಸೊಂಟದ ಪಟ್ಟಿ; ಅಳವಡು: ಪ್ರಾಪ್ತನಾವು; ಕಸ್ತುರಿ: ಮೃಗಮದ; ತಿಲಕ: ಹಣೆಯಲ್ಲಿಡುವ ಬೊಟ್ಟು; ನೊಸಲು: ಹಣೆ; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಕರತಳ: ಅಂಗೈ; ಮಾರುದ್ದ: ದೊಡ್ಡದು; ಭುಜ: ಬಾಹು; ಶಿರ: ತಲೆ; ಅಕ್ಕಡ: ಅಖಾಡ; ಮಣ್ಣು: ಧೂಳು; ಬೆರಳು ಅಂಗುಲಿ; ಉದುರು: ಬಿಡಿಬಿಡಿಯಾಗಿರುವುದು; ನಿಂಬಜೆ: ಮಾರಿ, ಮೃತ್ಯುದೇವತೆ; ನೆನೆ: ಜ್ಞಾಪಿಸಿಕೊ;

ಪದವಿಂಗಡಣೆ:
ತರಿಸಿ +ಬಿಗಿದರು +ಚಲ್ಲಣವ +ಠ
ಪ್ಪರವನ್+ಅಳವಡೆ+ಕಟ್ಟಿದರು +ಕ
ಸ್ತುರಿಯ+ ತಿಲಕವನ್+ಒಟ್ಟಿದರು +ನೊಸಲಿನಲಿ+ ಮುಡುಹಿನಲಿ
ಕರತಳವ +ಮಾರುದ್ದಿ +ಭುಜದಲಿ
ಶಿರದಲಂದ್+ಅಕ್ಕಡದ+ ಮಣ್ಣನು
ಬೆರಳಲ್+ಉದುರಿಚಿ+ ಬಾಳುಗೆಂದರು+ ನೆನೆದು +ನಿಂಬಜೆಯ

ಅಚ್ಚರಿ:
(೧) ಮಲ್ಲಯುದ್ಧಕ್ಕೆ ತಯಾರಾಗುವ ಚಿತ್ರಣವನ್ನು ತೋರಿಸುವ ಪದ್ಯ