ಪದ್ಯ ೨೧: ಪಾಂಡವರನ್ನು ಯಾರು ಸಂತೈಸಿದರು?

ಕೇಳಿ ಹರಿತಂದುದು ಮುನಿವ್ರಜ
ವೇಳಿಗೆಯ ಕದುಶೋಕರಸದ ಛ
ಡಾಳವನು ನಿಲಿಸಿದರು ಸಂತೈಸಿಯೆ ಕುಮಾರಕರ
ಆಲಿಸಿದಳಾ ಕುಂತಿ ಮೂರ್ಛಾ
ವ್ಯಾಳವಿಷ ಪರಿಹರಿಸಿ ಧರಣೀ
ಪಾಲಕನ ನೋಡಿದಳು ಬಿಸುಟೈ ತನ್ನನಿಂದೆನುತ (ಆದಿ ಪರ್ವ, ೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಈ ಪ್ರಲಾಪವನ್ನು ಕೇಳಿ ಮುನಿಗಳು ಅಲ್ಲಿಗೆ ಹೋದರು. ಪಾಂಡವರನ್ನು ಸಂತೈಸಿ, ಅವರ ದುಃಖಭರವನ್ನು ನಿವಾರಿಸಿದರು. ಕುಂತಿಯು ಮೂರ್ಛೆಯನ್ನು ಕಳೆದುಕೊಂಡು ಪಾಂಡುವನ್ನು ನೋಡಿ ಇಂದು ನನ್ನನ್ನು ಬಿಟ್ಟುಬಿಟ್ಟೆಯಾ ಎಂದಳು.

ಅರ್ಥ:
ಕೇಳು: ಆಲಿಸು; ಹರಿತಂದು: ವೇಗವಾಗಿ ಬಂದು; ಮುನಿ: ಋಷಿ; ವ್ರಜ: ಗುಂಪು; ಏಳಿಗೆ: ಹೆಚ್ಚು; ಕಡುಶೋಕ: ತುಂಬ ದುಃಖ; ರಸ: ಸಾರ; ಛಡಾಳ: ಹೆಚ್ಚಳ, ಆಧಿಕ್ಯ; ನಿಲಿಸು: ತಡೆ; ಸಂತೈಸು: ಸಮಾಧಾನಪಡಿಸು; ಕುಮಾರ: ಮಕ್ಕಳು; ಆಲಿಸು: ಕೇಳು; ಮೂರ್ಛೆ: ಜ್ಞಾನತಪ್ಪಿರುವ ಸ್ಥಿತಿ; ವ್ಯಾಳ: ಸರ್ಪ, ಮೋಸಗಾರ; ವಿಷ: ಗರಳ; ಪರಿಹರಿಸು: ನಿವಾರಿಸು; ಧರಣೀಪಾಲಕ: ರಾಜ; ನೋಡು: ವೀಕ್ಷಿಸು; ಬಿಸುಟು: ಹೊರಹಾಕು;

ಪದವಿಂಗಡಣೆ:
ಕೇಳಿ +ಹರಿತಂದುದು +ಮುನಿವ್ರಜ
ವೇಳಿಗೆಯ +ಕಡು+ಶೋಕರಸದ +ಛ
ಡಾಳವನು +ನಿಲಿಸಿದರು +ಸಂತೈಸಿಯೆ +ಕುಮಾರಕರ
ಆಲಿಸಿದಳಾ +ಕುಂತಿ +ಮೂರ್ಛಾ
ವ್ಯಾಳವಿಷ+ ಪರಿಹರಿಸಿ+ ಧರಣೀ
ಪಾಲಕನ +ನೋಡಿದಳು +ಬಿಸುಟೈ +ತನ್ನನ್+ಇಂದ್ +ಎನುತ

ಅಚ್ಚರಿ:
(೧) ರೂಪಕದ ಪ್ರಯೋಗ – ಮೂರ್ಛಾವ್ಯಾಳವಿಷ ಪರಿಹರಿಸಿ

ಪದ್ಯ ೭೧: ಕುಂತಿಯು ಧರ್ಮಜನಿಗೆ ಏನು ಮಾಡಲು ಹೇಳಿದಳು?

ಏಳು ಧರ್ಮಜ ಪುತ್ರಶೋಕ
ವ್ಯಾಳವಿಷಮೂರ್ಛಿತೆಯಲಾ ಪಾಂ
ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ
ಬಾಲೆಯರನಾ ಭಾನುಮತಿಯ ಛ
ಡಾಳದುಃಖವನಪಹರಿಸು ಪಡಿ
ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ (ಗದಾ ಪರ್ವ, ೧೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಮಕ್ಕಳನ್ನು ಸಂತೈಸುತ್ತಾ, ಧರ್ಮಜ, ದ್ರೌಪದಿಯು ಪುತ್ರಶೋಕ ಸರ್ಪವಿಷದಿಂದ ಮೂರ್ಛಿತಳಾಗಿದ್ದಾಳೆ. ಅವಳನ್ನು ಸಂತೈಸು. ಗಾಂಧಾರಿಯನ್ನು ಭೇಟಿ ಮಾಡಿಸು. ಭಾನುಮತಿಯ ಮಹಾದುಃಖವನ್ನು ಪರಿಹರಿಸು, ತಡಮಾಡುವುದು ಬೇಡ ಎಂದು ಹೇಳಲು ಪಾಂಡವರು ದ್ರೌಪದಿಯ ಬಳಿಗೆ ಬಂದರು.

ಅರ್ಥ:
ಏಳು: ಮೇಲೇರು, ಹತ್ತು; ಪುತ್ರ: ಸುತ; ಶೋಕ: ದುಃಖ; ವ್ಯಾಳ: ಸರ್ಪ; ವಿಷ: ಗರಳ; ಮುರ್ಛಿತ: ಜ್ಞಾನತಪ್ಪು; ಸುತೆ: ಮಗಳು; ತಿಳುಹಿ: ತಿಳಿದು, ಅರಿ; ಕಾಣು: ತೋರು; ನಂದನೆ: ಮಗಳು; ಬಾಲೆ: ಅಬಲೆ, ಹೆಣ್ಣು; ಛಡಾಳ:ಹೆಚ್ಚಳ, ಆಧಿಕ್ಯ; ದುಃಖ: ದುಗುಡ; ಅಪಹರಿಸು: ದೂರಮಾಡು, ಪರಿಹರಿಸು; ಪಡಿ: ಪ್ರತಿಯಾದುದು, ಬದಲು; ತಾಳು: ನಿಲ್ಲು; ಬೇಡ: ಸಲ್ಲದು; ಬಂದರು: ಆಗಮಿಸು; ನಿಂದರು: ನಿಲ್ಲು; ಹೊರೆ: ಬಳಿ, ಹತ್ತಿರ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಏಳು +ಧರ್ಮಜ +ಪುತ್ರ+ಶೋಕ
ವ್ಯಾಳ+ವಿಷ+ಮೂರ್ಛಿತೆಯಲ್+ಆ+ ಪಾಂ
ಚಾಲಸುತೆಯನು +ತಿಳುಹಿ +ಕಾಣಿಸು +ಸುಬಲ+ನಂದನೆಯ
ಬಾಲೆಯರನ್+ಆ+ ಭಾನುಮತಿಯ +ಛ
ಡಾಳ+ದುಃಖವನ್+ಅಪಹರಿಸು +ಪಡಿ
ತಾಳ +ಬೇಡೆನೆ +ಬಂದರ್+ಅನಿಬರು +ದ್ರೌಪದಿಯ +ಹೊರೆಗೆ

ಅಚ್ಚರಿ:
(೧) ದುಃಖವನ್ನು ವಿವರಿಸುವ ಪರಿ – ಪುತ್ರಶೋಕವ್ಯಾಳವಿಷಮೂರ್ಛಿತೆಯಲಾ ಪಾಂಚಾಲಸುತೆ

ಪದ್ಯ ೩೪: ಕೌರವನು ಸರೋವರದಿಂದ ಹೇಗೆ ಬಂದನು?

ಜಲಧಿ ಮಧ್ಯದೊಳೇಳ್ವ ವಡಬಾ
ನಲನವೊಲು ತವಕದಲಿ ತಡಿಗ
ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ
ಹೊಳೆವ ಭಾರಿಯ ಹೆಗಲ ಗದೆ ಕರ
ತಳದ ವಿಪುಳ ಸಘಾಡಗರ್ವದ
ಚಳನಯನದ ಛಡಾಳಛಲದ ನೃಪಾಲ ಹೊರವಂಟ (ಗದಾ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸರೋವರದ ಮಧ್ಯದಿಂದ ಏಳುವಡಬಾಗ್ನಿಯಂತೆ ಕೌರವನು ದಡಕ್ಕೆ ಬಂದನು. ಕೋಪಾಗ್ನಿಯಿಂದ ಅವನ ಕಣ್ಣುಗಳು ಕಿಡಿಯುಗುಳುತ್ತಿದ್ದವು. ಕೈಯಲ್ಲಿ ಭಾರಿಯ ಗದೆಯನ್ನು ಹಿಡಿದು ಹೆಗಲಮೇಲಿಟ್ಟುಕೊಂಡು ಗರ್ವಾಡಂಬರವನ್ನು ತೋರುತ್ತಾ ಆಚೀಚೆಗೆ ಚಲಿಸುವ ಕಣ್ಣುಗಳಿಂದ ನೋಡುತ್ತಾ, ಅತಿಶಯ ಛಲವಂತ ಕೌರವನು ದಡದಲ್ಲಿ ನಿಂತನು.

ಅರ್ಥ:
ಜಲಧಿ: ಸಾಗರ; ಮಧ್ಯ: ನಡುವೆ; ಏಳು: ಮೇಲೆ ಹತ್ತು; ವಡಬಾನಲ: ಸಮುದ್ರದ ನಡುವೆ ಇರುವ ಬೆಂಕಿ; ತವಕ: ಬಯಕೆ, ಆತುರ; ತಡಿ: ದಡ; ಅವ್ವಳಿಸು: ಅಪ್ಪಳಿಸು; ಕ್ರೋಧ: ಕೋಪ; ಶಿಖಿ: ಬೆಂಕಿ; ಕಿಡಿ: ಬೆಂಕಿ, ಜ್ವಾಲೆ; ಮಸಗು: ಹರಡು; ಕಂಗಳು: ಕಣ್ಣು; ಹೊಳೆ: ಪ್ರಕಾಶ; ಭಾರಿ: ಬಹಳ; ಹೆಗಲು: ಭುಜ; ಗದೆ: ಮುದ್ಗರ; ಕರತಳ: ಕೈ, ಹಸ್ತ; ವಿಪುಳ: ಬಹಳ; ಸಘಾಡ: ರಭಸ; ಗರ್ವ: ಅಹಂಕಾರ; ಚಳ: ಅಲುಗುವ; ನಯನ: ಕಣ್ಣು; ಛಡಾಳ: ಹೆಚ್ಚಳ, ಆಧಿಕ್ಯ; ಛಲ: ನೆಪ, ವ್ಯಾಜ, ದೃಢ ನಿಶ್ಚಯ; ನೃಪಾಲ: ರಾಜ; ಹೊರವಂಟ: ಆಚೆಗೆ ಬಾ;

ಪದವಿಂಗಡಣೆ:
ಜಲಧಿ +ಮಧ್ಯದೊಳ್+ಏಳ್ವ +ವಡಬಾ
ನಲನವೊಲು +ತವಕದಲಿ +ತಡಿಗ್
ಅವ್ವಳಿಸಿದನು +ತತ್ಕ್ರೋಧಶಿಖಿ+ ಕಿಡಿಮಸಗೆ +ಕಂಗಳಲಿ
ಹೊಳೆವ +ಭಾರಿಯ +ಹೆಗಲ +ಗದೆ +ಕರ
ತಳದ +ವಿಪುಳ +ಸಘಾಡ+ಗರ್ವದ
ಚಳನಯನದ +ಛಡಾಳ+ಛಲದ +ನೃಪಾಲ +ಹೊರವಂಟ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಲಧಿ ಮಧ್ಯದೊಳೇಳ್ವ ವಡಬಾನಲನವೊಲು

ಪದ್ಯ ೩೦: ಸೈನ್ಯವು ದ್ರೋಣರನ್ನು ಹೇಗೆ ಎದುರು ನೋಡಿತು?

ಬಲವ ಕಲಿಯೇರಿಸಿ ಛಡಾಳದೊ
ಳುಲಿವ ಪಟಹ ಮೃದಂಗ ಕಹಳಾ
ವಳಿಯ ಬೊಗ್ಗಿನ ಬೊಬ್ಬಿರಿವ ನಿಸ್ಸಾಳ ಕೋಟಿಗಳ
ತಳಿತ ಝಲ್ಲರಿಗಳ ಪತಾಕಾ
ವಳಿಯ ಬಲಿದು ಪವಾಡಿಗಳ ಕಳ
ಕಳದ ಕೈವಾರದಲಿ ಕವಿದರು ದ್ರೋಣನಿದಿರಿನಲಿ (ದ್ರೋಣ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸೈನ್ಯಕ್ಕೆ ಪ್ರೋತ್ಸಾಹವನ್ನು ಕೊಟ್ಟು ಪಟಹ, ಮೃದಂಗ, ಕಹಳೆ, ನಿಸ್ಸಾಳ, ನಗಾರಿಗಳ ಸದ್ದು ಬೊಬ್ಬಿರಿಯುತ್ತಿರಲು, ಝಲ್ಲರಿ, ಧ್ವಜಗಳನ್ನು ಎತ್ತಿ ಕಟ್ಟಿರಲು, ಹೊಗಳುಭಟ್ಟರು ಘೋಷಿಸುತ್ತಿರಲು ಅವರು ದ್ರೋಣನನ್ನಿದಿರಿಸಿದರು.

ಅರ್ಥ:
ಬಲ: ಸೈನ್ಯ; ಕಲಿ: ಶೌರ್ಯ; ಏರು: ಹೆಚ್ಚಾಗು; ಛಡಾಳ: ಹೆಚ್ಚಳ, ಆಧಿಕ್ಯ; ಉಲಿ: ಶಬ್ದ; ಪಟಹ: ನಗಾರಿ; ಕಹಳೆ: ಕಾಳೆ, ರಣವಾದ್ಯ; ಆವಳಿ: ಗುಂಪು; ಬೊಗ್ಗು: ಕಹಳೆ; ಬೊಬ್ಬಿರಿ: ಗರ್ಜಿಸು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ತಳಿತ: ಚಿಗುರಿದ; ಝಲ್ಲರಿ: ಕುಚ್ಚು; ಪತಾಕ: ಬಾವುಟ; ಬಲಿ: ಹೆಚ್ಚು; ಪವಾಡಿ: ಹೊಗಳುಭಟ್ಟ, ಸ್ತುತಿಪಾಠಕ; ಕಳಕಳ: ಉದ್ವಿಗ್ನತೆ; ಕೈವಾರ: ಕೊಂಡಾಟ; ಕವಿ: ಆವರಿಸು; ಇದಿರು: ಎದುರು;

ಪದವಿಂಗಡಣೆ:
ಬಲವ+ ಕಲಿ+ಏರಿಸಿ +ಛಡಾಳದೊಳ್
ಉಲಿವ +ಪಟಹ +ಮೃದಂಗ +ಕಹಳಾ
ವಳಿಯ +ಬೊಗ್ಗಿನ +ಬೊಬ್ಬಿರಿವ +ನಿಸ್ಸಾಳ +ಕೋಟಿಗಳ
ತಳಿತ +ಝಲ್ಲರಿಗಳ +ಪತಾಕಾ
ವಳಿಯ +ಬಲಿದು +ಪವಾಡಿಗಳ +ಕಳ
ಕಳದ +ಕೈವಾರದಲಿ +ಕವಿದರು +ದ್ರೋಣನ್+ಇದಿರಿನಲಿ

ಅಚ್ಚರಿ:
(೧) ಕಹಳಾವಳಿ, ಪತಾಕಾವಳಿ – ಆವಳಿ ಪದದ ಬಳಕೆ
(೨) ಪಟಹ, ಮೃದಂಗ, ಕಹಳ, ಬೊಗ್ಗು, ನಿಸ್ಸಾಳ – ರಣವಾದ್ಯಗಳು

ಪದ್ಯ ೧೬: ಜೀಮೂತನು ಮಲ್ಲರಿಗೆ ಯಾವ ಆದೇಶವನ್ನು ನೀಡಿದನು?

ಕಾಲಗತಿಯೆಂತಹುದೊ ರಿಪುಗಳು
ಶೀಲವುಳ್ಳವರೆಂದು ನುಡಿವರು
ಮೇಲೆಯಪಜಯವಹುದು ರಣದಲಿ ಸಾಕದಂತಿರಲಿ
ಕೇಳುತಾ ಜೀಮೂತಮಲ್ಲನು
ಹೇಳು ಹೇಳಿನ್ನೊಮ್ಮೆ ಸಿಡಿಲು ಛ
ಡಾಳದಲಿ ನೆರೆಯೆರಗಿತೇ ಸಟೆಯೆನುತ ನಡೆಗೊಂಡ (ವಿರಾಟ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕನಸು ಕಂಡವನು ಮುಂದೇನಾಗುವುದೋ, ನಮ್ಮ ರಾಜನ ಶತ್ರುಗಳು ಸುಶೀಲರೆಂದು ಜನರು ಮಾತನಾಡಿಕೊಳ್ಳುತ್ತಾರೆ, ಮುಂದೆ ಬರುವ ಮಲ್ಲ ಯುದ್ಧದಲ್ಲಿ ನಾವು ಸೋಲುತ್ತೇವೆ ಎನ್ನುವ ಮಾತನ್ನು ಜೀಮೂತನು ಕೇಳಿ, ಹೇಳು ಇನ್ನೊಮ್ಮೆ ಹೇಳು, ಬರಸಿಡಿಲು ಬಡಿಯಿತೇ ಸುಳ್ಳು ಎಂದು ಅವರ ಮಾತನ್ನು ಮನ್ನಿಸದೆ ಪ್ರಯಾಣವನ್ನು ಮುನ್ನಡೆಸಲು ಸೂಚಿಸಿದನು.

ಅರ್ಥ:
ಕಾಲ: ಸಮಯ; ಗತಿ: ವೇಗ; ರಿಪು: ವೈರಿ; ಶೀಲ: ಗುಣ; ನುಡಿ: ಮಾತು; ಅಪಜಯ: ಸೋಲು; ರಣ: ಯುದ್ಧ; ಕೇಳು: ಆಲಿಸು; ಮಲ್ಲ: ಜಟ್ಟಿ; ಹೇಳು: ತಿಳಿಸು; ಸಿಡಿಲು: ಅಶನಿ; ಛಡಾಳ: ಹೆಚ್ಚಳ, ಆಧಿಕ್ಯ; ನೆರೆ: ಗುಂಪು; ಎರಗು: ಬೀಳು; ಸಟೆ: ಹುಸಿ, ಸುಳ್ಳು; ನಡೆ: ಚಲಿಸು;

ಪದವಿಂಗಡಣೆ:
ಕಾಲಗತಿ+ಎಂತಹುದೊ +ರಿಪುಗಳು
ಶೀಲವುಳ್ಳವರೆಂದು +ನುಡಿವರು
ಮೇಲೆ+ಅಪಜಯವಹುದು +ರಣದಲಿ +ಸಾಕದಂತಿರಲಿ
ಕೇಳುತಾ +ಜೀಮೂತ+ಮಲ್ಲನು
ಹೇಳು+ ಹೇಳಿನ್ನೊಮ್ಮೆ +ಸಿಡಿಲು+ ಛ
ಡಾಳದಲಿ+ ನೆರೆ+ಎರಗಿತೇ +ಸಟೆ+ಎನುತ +ನಡೆಗೊಂಡ

ಅಚ್ಚರಿ:
(೧) ಜೀಮೂತನ ಪ್ರತಿಕ್ರಿಯೆ – ಹೇಳು ಹೇಳಿನ್ನೊಮ್ಮೆ ಸಿಡಿಲು ಛಡಾಳದಲಿ ನೆರೆಯೆರಗಿತೇ ಸಟೆಯೆನುತ

ಪದ್ಯ ೪೮: ಶಲ್ಯನು ಯಾರ ನೆರವಿಗೆ ರಥವನ್ನು ತಿರುಗಿಸಿದನು?

ಕೇಳಿದನು ಕಳವಳವ ಕಿವಿಗೊ
ಟ್ಟಾಲಿಸಿದನೆಲೆ ಕರ್ಣ ಕರ್ಣ ಛ
ಡಾಳ ರವವೇನದು ಸುಯೋಧನ ಸೈನ್ಯಮಧ್ಯದಲಿ
ಖೂಳ ಬಡಿಸಾ ಭೀಮಸೇನನ
ತೋಳುವಲೆಯಲಿ ಸಿಕ್ಕಿದನು ಭೂ
ಪಾಲನಕಟಕಟೆನುತ ತೇಜಿಯ ತಿರುಹಿದನು ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಶಲ್ಯನು ಯುದ್ಧರಂಗದ ಮಧ್ಯೆ ಗೊಂದಲದ ಶಬ್ದವನ್ನು ಕೇಳಿ, ಎಲೈ ಕರ್ಣ ನೀನು ಕಿವಿಗೊಟ್ಟಾಲಿಸು, ಯುದ್ಧ ಮಧ್ಯದಲ್ಲಿ ಕರ್ಣ ಭೇದಕವಾದ ಹುಯಿಲು ಕೇಳುತ್ತಿದೆಯಲ್ಲಾ ಏನದು ಎನ್ನಲು, ದುರ್ಯೋಧನನು ಭೀಮನ ತೋಳಿನ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ, ಎಲೋ ಖೂಳ ಅವನನ್ನು ಬಿಡಿಸು ಎಂದು ಕರ್ಣನ ರಥದ ಕುದುರೆಗಳನ್ನು ಅತ್ತ ತಿರುಗಿಸಿದನು.

ಅರ್ಥ:
ಕೇಳು: ಆಲಿಸು; ಕಳವಳ: ಚಿಂತೆ; ಕಿವಿ: ಶ್ರವಣಸಾಧನವಾದ ಅವಯವ; ಆಲಿಸು: ಕೇಳು; ಛಡಾಳ: ಹೆಚ್ಚಳ, ಆಧಿಕ್ಯ; ರವ: ಶಬ್ದ; ಸೈನ್ಯ: ದಳ; ಮಧ್ಯ: ನಡುವೆ; ಖೂಳ: ದುಷ್ಟ; ಬಿಡಿಸು: ಬಂಧಮುಕ್ತ; ತೋಳು: ಬಾಹು; ವಲೆ: ಬಲೆ, ಬಂಧನ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಭೂಪಾಲ: ರಾಜ; ಅಕಟಕಟ: ಅಯ್ಯೋ; ತೇಜಿ: ಕುದುರೆ; ತಿರುಹು: ದಿಕ್ಕನ್ನು ಬದಲಿಸು;

ಪದವಿಂಗಡಣೆ:
ಕೇಳಿದನು +ಕಳವಳವ+ ಕಿವಿಗೊಟ್
ಆಲಿಸಿದನ್+ಎಲೆ +ಕರ್ಣ +ಕರ್ಣ +ಛ
ಡಾಳ +ರವವೇನದು +ಸುಯೋಧನ +ಸೈನ್ಯ+ಮಧ್ಯದಲಿ
ಖೂಳ +ಬಡಿಸಾ +ಭೀಮಸೇನನ
ತೋಳುವಲೆಯಲಿ +ಸಿಕ್ಕಿದನು +ಭೂ
ಪಾಲನ್+ಅಕಟಕಟ್+ಎನುತ +ತೇಜಿಯ +ತಿರುಹಿದನು +ಶಲ್ಯ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೇಳಿದನು ಕಳವಳವ ಕಿವಿಗೊಟ್ಟಾಲಿಸಿದನೆಲೆ ಕರ್ಣ ಕರ್ಣ

ಪದ್ಯ ೧೫: ಧೃತರಾಷ್ಟ್ರನ ಚಿಂತೆಯಾದರು ಏನು?

ಕೇಳಿರೈ ಹೇಳುವೆನು ಯಾದವ
ರಾಳು ಬಂದುದು ಗಡ ಜನಾರ್ದನ
ಕೋಳುವೋದನು ಗಡ ಯುಧಿಷ್ಠಿರ ಭೀಮ ಪಾರ್ಥರಿಗೆ
ಗಾಳಿ ಬೆಂಬಲವಾಗಲುರಿಯ ಛ
ಡಾಳವನು ನಿರ್ಣೈಸಬಹುದೆ ವಿ
ತಾಳಿಸಿತಲೈ ನಿಮ್ಮ ಗಾರುಡವೆಂದನಾ ನೃಪತಿ (ಆದಿ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಎಲ್ಲರನ್ನು ಕರೆಸಿ ದೂತರು ಹೇಳಿದ ಮಾತುಗಳನ್ನು ತಿಳಿಸಿದನು. ಯಾದವ ಸೈನ್ಯ ದ್ರುಪದನಗರಕ್ಕೆ ಬಂದಿದೆ, ಶ್ರೀಕೃಷ್ಣನೆ ಯುಧಿಷ್ಟಿರ, ಭೀಮಾರ್ಜುನರ ಸ್ನೇಹದಿಂದ ಬಂಧಿತನಾಗಿದ್ದಾನೆ, ಮೊದಲೇ ದೊಡ್ಡ ಉರಿ, ಗಾಳಿ ಯೊಂದಿಗೆ ಸೇರಿದರೆ ಅದರ ಗತಿ ಮತ್ತು ವ್ಯಾಪ್ತಿಯನ್ನು ನಿರ್ಧರಿಸಬಹುದೆ? ನೀವೆಲ್ಲರು ಮೊದಲು ಪಾಂಡವರ ಮೇಲೆ ಮಾಡಿದ ಮಂತ್ರವು ನಮಗೆ ತಿರುಗಿ ಬಡಿಯಿತು ಎಂದು ಹೇಳಿದನು.

ಅರ್ಥ:
ಕೇಳಿ:ಆಲಿಸಿ; ಹೇಳು: ತಿಳಿಸುವೆ; ಯಾದವ: ಕೃಷ್ಣನ ವಂಶ; ಆಳು: ಸೈನ್ಯ; ಬಂದುದು: ಆಗಮಿಸಿರುವುದು; ಗಡ: ಸಂತೋಷ ಮತ್ತು ಆಶ್ಚರ್ಯವನ್ನು ಸೂಚಿಸುವ ಅವ್ಯಯ, ಬೇಗನೆ, ಜಾಗ್ರತೆ; ಜನಾರ್ದನ: ಕೃಷ್ಣ; ಕೋಳು: ಹೊಡೆತ, ಕೊಳ್ಳೆ, ಪೆಟ್ಟು, ಹಿಡಿತ; ಗಾಳಿ: ವಾಯು; ಬೆಂಬಲ: ಆಧಾರ; ಉರಿ: ಬೆಂಕಿ; ವಿಡಾಯ: ಶಕ್ತಿ; ನಿರ್ಣಯಿಸು: ತೀರ್ಮಾನಿಸು; ವಿತಾಳಿಸು: ಅಧಿಕವಾಗು, ಆವರಿಸು, ವ್ಯಾಪಿಸು; ಗಾರುಡ: ಹಾವುಗಳನ್ನು ವಶಪಡಿಸಿಕೊಳ್ಳುವ ಮಂತ್ರ; ನೃಪ: ರಾಜ;

ಪದವಿಂಗಡಣೆ:
ಕೇಳಿರೈ +ಹೇಳುವೆನು +ಯಾದವ
ರಾಳು +ಬಂದುದು +ಗಡ +ಜನಾರ್ದನ
ಕೋಳುವೋದನು+ ಗಡ +ಯುಧಿಷ್ಠಿರ+ ಭೀಮ +ಪಾರ್ಥರಿಗೆ
ಗಾಳಿ +ಬೆಂಬಲವಾಗಲ್+ಉರಿಯ +ಛ
ಡಾಳವನು +ನಿರ್ಣೈಸಬಹುದೆ+ ವಿ
ತಾಳಿಸಿತಲೈ+ ನಿಮ್ಮ +ಗಾರುಡ+ವೆಂದನಾ +ನೃಪತಿ

ಅಚ್ಚರಿ:
(೧)ಕೇಳು, ಹೇಳು – ಜೋಡಿ ಪದಗಳು, ಪದ್ಯದ ಮೊದಲೆರಡು ಪದವಾಗಿರುವುದು
(೨) ಗಡ – ೨, ೩ ಸಾಲಿನಲ್ಲಿ ಬರುವ ಪದ