ಪದ್ಯ ೫೨: ಸೈನ್ಯವು ಭೀಮನನ್ನು ಹೇಗೆ ಹೊಗಳಿತು?

ಹಾರ ಹರಿದುದು ಕರ್ಣಪೂರದ
ಚಾರು ಮೌಕ್ತಿಕನಿಕರ ಸಿಡಿದವು
ಧಾರಿಡುವ ರಕುತಾಂಬು ಮಡುಗಟ್ಟಿದುದು ಮಗ್ಗುಲಲಿ
ವೀರ ಭೀಮಾ ಮಝ ಎನುತ ಬಲ
ವಾರಿದುದು ನಿಸ್ಸಾಳ ಸೂಳಿನ
ವೀರಪಣಹದ ಲಗ್ಗೆ ಮಸಗಿತು ಪರರ ಥಟ್ಟಿನಲಿ (ಗದಾ ಪರ್ವ, ೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೌರವನ ಹಾರ ಹರಿಯಿತು. ಕರ್ಣಕುಂಡಲದ ಮುತ್ತುಗಳು ಸಿಡಿದು ಹೋದವು. ಧಾರಾಕಾರವಾಗಿ ಹರಿದ ರಕ್ತವು ಅವನ ಮಗ್ಗುಲಲ್ಲಿ ಮಡುಗಟ್ಟಿತು. ಸೇನೆಯು ಭಲೇ ವೀರಭೀಮ ಎಂದು ಕೂಗಿತು. ಭೇರಿ ತಮ್ಮಟೆಗಳು ಬಾರಿಸಿದವು.

ಅರ್ಥ:
ಹಾರ: ಮಾಲೆ; ಹರಿ: ಸೀಳು; ಕರ್ಣ: ಕಿವಿ; ಕರ್ಣಪೂರ: ಕಿವಿಯ ಆಭರಣ, ಕರ್ಣಕುಂಡಲ; ಚಾರು: ಸುಂದರ; ಮೌಕ್ತಿಕ: ಮಣಿ; ನಿಕರ: ಗುಂಪು; ಸಿಡಿ: ಸ್ಫೋಟ, ಹಾರಿದ ಸಣ್ಣ ಚೂರು; ಧಾರ: ಒಂದೇ ಸಮನೆ, ವರ್ಷ; ರಕುತಾಂಬು: ರಕ್ತದ ನೀರು; ಮಡು:ನದಿ, ಹೊಳೆ; ಮಗ್ಗುಲ: ಪಕ್ಕ, ಪಾರ್ಶ್ವ; ವೀರ: ಶೂರ; ಮಝ: ಭಲೇ; ಬಲ: ಸೈನ್ಯ; ಅರಿ: ಚೀರು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳು: ಆರ್ಭಟ, ಬೊಬ್ಬೆ; ಪಣಹ: ನಗಾರಿ; ಲಗ್ಗೆ: ವಾದ್ಯಗಳಮೇಳ, ಮುತ್ತಿಗೆ; ಮಸಗು: ಹರಡು; ಕೆರಳು; ಪರರ: ಬೇರೆಯ; ಥಟ್ಟು: ಗುಂಪು;

ಪದವಿಂಗಡಣೆ:
ಹಾರ +ಹರಿದುದು +ಕರ್ಣಪೂರದ
ಚಾರು +ಮೌಕ್ತಿಕ+ನಿಕರ +ಸಿಡಿದವು
ಧಾರಿಡುವ +ರಕುತಾಂಬು +ಮಡುಗಟ್ಟಿದುದು +ಮಗ್ಗುಲಲಿ
ವೀರ +ಭೀಮಾ +ಮಝ +ಎನುತ+ ಬಲ
ವಾರಿದುದು +ನಿಸ್ಸಾಳ+ ಸೂಳಿನ
ವೀರಪಣಹದ +ಲಗ್ಗೆ+ ಮಸಗಿತು +ಪರರ+ ಥಟ್ಟಿನಲಿ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಧಾರಿಡುವ ರಕುತಾಂಬು ಮಡುಗಟ್ಟಿದುದು ಮಗ್ಗುಲಲಿ

ಪದ್ಯ ೫೫: ಧರ್ಮಜನು ಅಪ್ಪಣೆ ಏನಾಗಿತ್ತು?

ಕರೆ ಮುಕುಂದನನರ್ಜುನನ ಸಂ
ವರಣೆ ಬರಲಿ ಶಿಖಂಡಿ ಪಾಂಚಾ
ಲರಿಗೆ ನೇಮಿಸು ಕರಸು ಧೃಷ್ಟದ್ಯುಮ್ನ ಸೃಂಜಯರ
ಕರಿ ತುರಗ ರಥವಿಶ್ರಮವನಿಂ
ದಿರುಳಿನಲಿ ನೂಕುವುದು ಹೊರವಡಿ
ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ (ಗದಾ ಪರ್ವ, ೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನ ಮಾತುಗಳನ್ನು ಕೇಳಿ, ಕೃಷ್ಣಾರ್ಜುನರನ್ನು ಬರೆಮಾಡಿ, ಶಿಖಂಡಿ, ಪಾಂಚಾಲರು, ಧೃಷ್ಟದ್ಯುಮ್ನ, ಸೃಂಜಯ, ಚತುರಂಗ ಸೇನೆಯೊಡನೆ ಸಿದ್ಧರಾಗಿ ಬರಲಿ. ರಾತ್ರಿಯೇ ವಿಶ್ರಾಂತಿ, ಈಗಲ್ಲ ಎನ್ನಲು, ರಣಭೇರಿಗಳು ಮೊಳಗಿದವು.

ಅರ್ಥ:
ಕರೆ: ಬರೆಮಾಡು; ಮುಕುಂದ: ಶ್ರೀಕೃಷ್ಣ; ಸಂವರಣೆ: ಸಜ್ಜು, ಸನ್ನಾಹ; ಬರಲಿ: ಆಗಮಿಸು; ನೇಮಿಸು: ಅಪ್ಪಣೆ ಮಾಡು; ಕರಸು: ಬರೆಮಾಡು; ಕರಿ: ಆನೆ; ತುರಗ: ಅಶ್ವ; ರಥ: ಬಂಡಿ; ವಿಶ್ರಮ: ಪರಿಹಾರ; ಇರುಳು: ರಾತ್ರಿ; ನೂಕು: ತಳ್ಳು; ಹೊರವಡಿ: ಹೊರದಿ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳವಿಸು: ಸೂಳೈಸು, ಧ್ವನಿಮಾಡು; ಲಗ್ಗೆ: ವಾದ್ಯಗಳಮೇಳ, ಆರ್ಭಟ;

ಪದವಿಂಗಡಣೆ:
ಕರೆ +ಮುಕುಂದನನ್+ಅರ್ಜುನನ +ಸಂ
ವರಣೆ +ಬರಲಿ +ಶಿಖಂಡಿ +ಪಾಂಚಾ
ಲರಿಗೆ +ನೇಮಿಸು +ಕರಸು +ಧೃಷ್ಟದ್ಯುಮ್ನ +ಸೃಂಜಯರ
ಕರಿ +ತುರಗ+ ರಥ+ವಿಶ್ರಮವನ್
ಇಂದ್+ಇರುಳಿನಲಿ+ ನೂಕುವುದು +ಹೊರವಡಿ
ಹೊರವಡ್+ಎನೆ +ನಿಸ್ಸಾಳ +ಸೂಳವಿಸಿದವು+ ಲಗ್ಗೆಯಲಿ

ಅಚ್ಚರಿ:
(೧) ಬೇಗನೆ ನಡೆಯಿರಿ ಎಂದು ಹೇಳುವ ಪರಿ – ಹೊರವಡಿ ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ

ಪದ್ಯ ೨: ಸಂಜಯನು ಯಾರನ್ನು ಪ್ರಶ್ನಿಸಿದನು?

ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ (ಗದಾ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಹೊಗಳುಭಟ್ಟರು, ಭೇರಿ ಹೊಡೆಯುವವರು, ಹಡಪಿಗರು, ಸೂತರ ಗುಂಪುನಿಲ್ಲಿದ್ದವರು, ಚಾಮರ ಬೀಸುವವರು, ಔಷಧಿಯನ್ನು ಕೊಡುವವರು, ಆನೆ, ಕುದುರೆಯ ಮೇಲ್ವಿಚಾರಣೆಯನ್ನು ಮಾಡುವವರು ಅಸಂಖ್ಯಾತ ಸಂಖ್ಯೆಯಲ್ಲಿದ್ದರು. ಅವರೆಲ್ಲರನ್ನೂ ಸಂಜಯನು ಚಂದ್ರವಂಶ ಸಂಭೂತ ದುರ್ಯೋಧನನ್ನು ಕಂಡಿರಾ ಎಂದು ಪ್ರಶ್ನಿಸಿದನು.

ಅರ್ಥ:
ವಂದಿ: ಹೊಗಳುಭಟ್ಟ; ನಿಸ್ಸಾಳ: ಚರ್ಮವಾದ್ಯ; ಬಡಿಕರ: ಹೊಡೆಯುವವ; ಮಂದಿ: ಜನ; ಹಡಪಿಗ: ಚೀಲವನ್ನಿಟ್ಟುಕೊಂಡಿರುವವ; ಚಾಹಿ: ಚಾಮರ ಬೀಸುವವ; ಸೂತ: ಸಾರಥಿ; ಸಂದಣಿ: ಗುಂಪು; ಔಷಧಿಕ: ವೈದ್ಯ, ಔಷಧಿ ಕೊಡುವವ; ಹಯ: ಕುದುರೆ; ಗಜ: ಆನೆ; ಸಂವಿಧಾಯಕ: ವಿದ್ಯುಕ್ತವಾದುದು, ನಿರ್ಧರಿಸುವ; ನಿಂದು: ನಿಲ್ಲು; ಅಸಂಖ್ಯಾತ: ಲೆಕ್ಕವಿಲ್ಲದಷ್ಟು; ಇನಿಬರು: ಇಷ್ಟು ಜನ; ಕರೆದು: ಬರೆಮಾಡು; ಕೇಳು: ಆಲಿಸು; ಇಂದು: ಚಂದ್ರ; ಕುಲ: ವಂಶ; ಸಂಭವ: ಹುಟ್ಟು; ಕಂಡಿರೆ: ನೋಡಿದಿರೆ;

ಪದವಿಂಗಡಣೆ:
ವಂದಿಗಳ+ ನಿಸ್ಸಾಳ+ಬಡಿಕರ
ಮಂದಿ +ಹಡಪಿಗ +ಚಾಹಿ +ಸೂತರ
ಸಂದಣಿಗಳ್+ಔಷಧಿಕ +ಹಯ+ಗಜ+ಸಂವಿಧಾಯಕರು
ನಿಂದುದದ್+ಅಸಂಖ್ಯಾತವ್+ಇನಿಬರನ್
ಅಂದು +ಸಂಜಯ +ಕರೆದು +ಕೇಳಿದನ್
ಇಂದುಕುಲ+ಸಂಭವನ +ಕಂಡಿರೆ +ಕೌರವೇಶ್ವರನ

ಅಚ್ಚರಿ:
(೧) ಯುದ್ಧದಲ್ಲಿರುವ ಮಂದಿ – ವಂದಿ, ನಿಸ್ಸಾಳ ಬಡಿಕ, ಹಡಪಿಗ, ಚಾಹಿ, ಸೂತ, ಔಷಧಿಕ
(೨) ದುರ್ಯೋಧನನನ್ನು ಕರೆದ ಪರಿ – ಇಂದುಕುಲಸಂಭವನ ಕಂಡಿರೆ

ಪದ್ಯ ೨೫: ರಣವಾದ್ಯಗಳ ಶಬ್ದವು ಹೇಗಿದ್ದವು?

ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ (ಶಲ್ಯ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಿಷ್ಠುರ ಗರ್ಜನೆಗಳು ಹಬ್ಬಿದವು. ಭೇರಿ, ಮೃದಂಗ, ತಮ್ಮಟೆ, ನಗಾರಿ, ರಣಕಹಳೆಯ ರಭಸವು ಕಿವಿಗಳನ್ನು ಕಿವುಡು ಮಾಡಿದವು. ರಥದ ಚೀತ್ಕಾರ, ಕುದುರೆಗಳ ಹೇಷಾರವದ ನಿಷ್ಠುರ ನಾದ ಮೊಳಗಲು ಶಲ್ಯನು ಯುದ್ಧಕ್ಕೆ ಮುಂದಾದನು.

ಅರ್ಥ:
ಬೆರಳು: ಅಂಗುಲಿ; ತುಟಿ: ಅಧರ; ಬೊಬ್ಬೆ: ಆರ್ಭಟ; ಮಿಗಲು: ಹೆಚ್ಚಾಗಲು; ಅಬ್ಬರ: ಜೋರಾದ ಶಬ್ದ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಗುಂಪು; ಜರ್ಝರ: ಭಗ್ನ; ಪಣಹ: ನಗಾರಿ; ಪಟಹ: ತಮಟೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಉರು: ವಿಶೇಷವಾದ; ರಭಸ: ವೇಗ; ಇರಿ: ಚುಚ್ಚು; ರಥ: ಬಂಡಿ; ಚೀತ್ಕರ: ಜೋರಾದ ಶಬ್ದ; ರಥ: ಬಂಡಿ; ಹಯ: ಕುದುರೆ; ಹೇಷಿತ: ಕುದುರೆಯ ಕೂಗು; ನಿಷ್ಠುರ: ಕಠಿಣವಾದುದು; ನಿನಾದ: ಶಬ್ದ; ಔಕು: ಒತ್ತು, ಹಿಚುಕು; ಹೊಕ್ಕು: ಸೇರು; ಆಹವ: ಯುದ್ಧ;

ಪದವಿಂಗಡಣೆ:
ಬೆರಳ +ತುಟಿಗಳ +ಬೊಬ್ಬೆ +ಮಿಗಲ್
ಅಬ್ಬರಿಸಿದವು +ನಿಸ್ಸಾಳ+ತತಿ+ ಜ
ರ್ಝರ +ಮೃದಂಗದ+ ಪಣಹ+ ಪಟಹದ+ ಗೌರು+ಕಹಳೆಗಳ
ಉರು +ರಭಸವಳ್ಳ್+ಇರಿಯೆ +ರಥ+ಚೀ
ತ್ಕರಣೆ+ ರಥಹಯ +ಹೇಷಿತದ +ನಿ
ಷ್ಠುರ +ನಿನಾದದಲ್+ಔಕಿ +ಹೊಕ್ಕನು +ಶಲ್ಯನ್+ಆಹವವ

ಅಚ್ಚರಿ:
(೧) ರಣವಾದ್ಯಗಳು – ನಿಸ್ಸಾಳ, ಮೃದಂಗ, ಪಣಹ, ಪಟಹ, ಕಹಳೆ
(೨) ಶಬ್ದವನ್ನು ವಿವರಿಸುವ ಪದ – ಬೊಬ್ಬೆ, ಅಬ್ಬರಿಸು, ಜರ್ಝರ, ಇರಿ, ಚೀತ್ಕರ, ಹೇಷಿತ, ನಿನಾದ

ಪದ್ಯ ೨೩: ಧರ್ಮಜನ ಜೊತೆಗೆ ಯಾರು ಯುದ್ಧಕ್ಕೆ ಬಂದರು?

ಪಡಿತಳಿಸಿ ಸಹದೇವ ನಕುಲರ
ನಡೆಗಲಸಿತರ್ಜುನನ ರಥ ನರ
ನೊಡನೆ ಹೊಕ್ಕನು ಭೀಮನುರು ಪಾಂಚಾಲಬಲ ಸಹಿತ
ಜಡಿವ ನಿಸ್ಸಾಳದಲಿ ಜಗ ಕಿವಿ
ಗೆಡೆ ಯುಧಿಷ್ಠಿರರಾಯನೌಕಿದ
ನೆಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು (ಶಲ್ಯ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಕುಲ ಸಹದೇವರ ಜೊತೆಗೆ ಅರ್ಜುನನ ರಥವೂ ಬಂದಿತು. ಭೀಮನು ಪಾಂಚಾಲ ಸೈನ್ಯದೊಡನೆ ನುಗ್ಗಿದನು. ಭೇರಿಗಳ ಬಡಿತಕ್ಕೆ ಕಿವಿ ಕಿವುಡಾಗಲು ಧರ್ಮಜನೂ ಬಂದನು. ಅವನ ಎಡಬಲಗಲಲ್ಲಿ ಯುಯುತ್ಸು, ಶಿಖಂಡಿ, ಸೃಂಜಯರೂ ಬಂದರು.

ಅರ್ಥ:
ಪಡಿತಳ: ಇದಿರು, ಚೂಣಿ; ರಥ: ಬಂದಿ; ನರ: ಅರ್ಜುನ; ಹೊಕ್ಕು: ಸೇರು; ಉರು: ಅತಿದೊಡ್ಡ, ಹೆಚ್ಚಾದ; ಬಲ: ಸೈನ್ಯ; ಸಹಿತ: ಜೊತೆ; ಜಡಿ: ಬೆದರಿಕೆ, ಹೆದರಿಕೆ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಜಗ: ಪ್ರಪಂಚ; ಕಿವಿ: ಕರ್ಣ; ಔಕು: ಒತ್ತು,ಹಿಚುಕು; ಎಡಬಲ: ಅಕ್ಕಪಕ್ಕ;

ಪದವಿಂಗಡಣೆ:
ಪಡಿತಳಿಸಿ +ಸಹದೇವ +ನಕುಲರನ್
ಅಡೆಗಲಸಿತ್+ಅರ್ಜುನನ +ರಥ+ ನರ
ನೊಡನೆ +ಹೊಕ್ಕನು +ಭೀಮನ್+ಉರು +ಪಾಂಚಾಲ+ಬಲ +ಸಹಿತ
ಜಡಿವ +ನಿಸ್ಸಾಳದಲಿ +ಜಗ+ ಕಿವಿ
ಗೆಡೆ +ಯುಧಿಷ್ಠಿರರಾಯನ್+ಔಕಿದನ್
ಎಡಬಲನ +ಕೊಂಡರು +ಯುಯುತ್ಸು +ಶಿಖಂಡಿ +ಸೃಂಜಯರು

ಅಚ್ಚರಿ:
(೧) ರಣವಾದ್ಯದಬ್ಬರ – ಜಡಿವ ನಿಸ್ಸಾಳದಲಿ ಜಗ ಕಿವಿಗೆಡೆ

ಪದ್ಯ ೩: ಕೌರವರ ಸೈನ್ಯವು ಎಷ್ಟು ಕ್ಷೀಣಿಸಿತ್ತು?

ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿಶಿರವ
ಆಳು ನೆರೆದಿರೆ ನಾಲ್ಕುದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ (ಶಲ್ಯ ಪರ್ವ, ೨ ಸಂಧಿ, ೩ ಪದ್ಯ)

ತಾತ್ಪರ್ಯ:
ಸನ್ನೆಯಾದೊಡನೆ ರಣಭೇರಿಗಳು ಬಡಿದವು. ಸೇನಾಧಿಪತಿಯು ತನ್ನ ಸೈನ್ಯವನ್ನು ನೋಡಿ ತಲೆದೂಗಿ, ಈ ಮೊದಲು ನಮ್ಮ ಸೈನ್ಯಕ್ಕೆ ನಾಲ್ಕು ದಿಕ್ಕಿನ ಮೂಲೆಗಳೂ ಸಾಲದಾಗಿದ್ದವು, ಈಗಲಾದರೋ ರಣಭೂಮಿಯಿಂದ ಪಾಳೆಯದ ವರೆಗಾಗುವಷ್ಟು ಯೋಧರಿಲ್ಲ, ಶಿವ ಶಿವಾ ಎಂದುಕೊಂಡನು.

ಅರ್ಥ:
ಸೂಳವಿಸು: ಧ್ವನಿಮಾಡು; ಸನ್ನೆ: ಗುರುತು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ದಳಪತಿ: ಸೇನಾಧಿಪತಿ; ದೆಖ್ಖಾಳ: ಗೊಂದಲ; ನೋಡು: ವೀಕ್ಷಿಸು; ತೂಗಾಡು: ಅಲ್ಲಾಡು; ಮಣಿಶಿರ: ಕಿರೀಟ; ಮಣಿ: ಬೆಲೆಬಾಳುವ ರತ್ನ; ಆಳು: ಸೇವಕ; ನೆರೆ: ಗುಂಪು; ದಿಕ್ಕು: ದಿಸೆ, ದೆಸೆ; ಮೂಲೆ: ಕೊನೆ; ನೆರೆ: ಪಕ್ಕ, ಪಾರ್ಶ್ವ; ಮುನ್ನ: ಮೊದಲು; ಪಾಳೆಯ: ಬೀಡು, ಶಿಬಿರ; ಕಡೆ: ಕೊನೆ, ಪಕ್ಕ; ಐದು: ಬಂದು ಸೇರು;

ಪದವಿಂಗಡಣೆ:
ಸೂಳವಿಸಿದುವು +ಸನ್ನೆಯಲಿ +ನಿ
ಸ್ಸಾಳ +ದಳಪತಿ +ಕುರುಬಲದ +ದೆ
ಖ್ಖಾಳವನು +ನೋಡಿದನು +ತೂಗಾಡಿದನು +ಮಣಿಶಿರವ
ಆಳು +ನೆರೆದಿರೆ+ ನಾಲ್ಕು+ದಿಕ್ಕಿನ
ಮೂಲೆ +ನೆರೆಯದು +ಮುನ್ನವ್+ಈಗಳು
ಪಾಳೆಯದ +ಕಡೆವೀಡಿಗ್+ಐದದು +ಶಿವಶಿವಾಯೆಂದ

ಅಚ್ಚರಿ:
(೧) ಸೂಳ, ನಿಸ್ಸಾಳ,ದೆಖ್ಖಾಳ – ಪ್ರಾಸ ಪದಗಳು
(೨) ಕೌರವ ಸೈನ್ಯದ ವಿಸ್ತಾರ – ಆಳು ನೆರೆದಿರೆ ನಾಲ್ಕುದಿಕ್ಕಿನ ಮೂಲೆ ನೆರೆಯದು

ಪದ್ಯ ೫೦: ನಾರಾಯಣಾಸ್ತ್ರವು ಯಾರ ಪಾದವನ್ನು ಸೇರಿತು?

ಮುರಿಮುರಿದು ಕಬ್ಬೊಗೆಯ ಹೊದರಿನ
ಹೊರಳಿ ಹರೆದುದು ಸೂಸುಗಿಡಿಗಳ
ನೆರವಿ ನಸಿದುದು ನಿಮಿರ್ದ ಹೊಂಗರಿಯಂಬು ಹೊಳೆ ಹೊಳೆದು
ಮುರಹರನ ಪಾದಾರವಿಂದದ
ಹೊರೆಯೊಳಡಗಿತು ಹೋಯ್ತು ಭಯವು
ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು (ದ್ರೋಣ ಪರ್ವ, ೧೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಕರಿದಾದ ಹೊಗೆಯ ಹೊರಳಿಗಳು ಇಲ್ಲವಾದವು. ಸಿಡಿಯುವ ಕಿಡಿಗಳು ಕಾಣಲಿಲ್ಲ. ಬಂಗಾರದ ಗರಿಯ ನಾರಾಯಣಾಸ್ತ್ರವು ಹೊಳೆಯುತ್ತಾ ಬಂದು ಶ್ರೀಕೃಷ್ಣನ ಪಾದಾರವಿಂದಗಳಲ್ಲಡಗಿತು. ಭಯ ಹೋಗಿತು. ಪಾಂಡವ ಸೈನ್ಯದಲ್ಲಿ ಅಸಂಖ್ಯಾತ ನಿಸ್ಸಾಳಗಳು ಮೊರೆದವು.

ಅರ್ಥ:
ಮುರಿ: ಸೀಳು; ಕಬ್ಬೊಗೆ: ದಟ್ಟವಾದ ಹೊಗೆ; ಹೊದರು: ತೊಡಕು, ತೊಂದರೆ; ಹೊರಳು: ತಿರುವು, ಬಾಗು; ಹರೆ: ವ್ಯಾಪಿಸು; ಸೂಸು: ಎರಚು, ಚಲ್ಲು; ಕಿಡಿ: ಬೆಂಕಿ; ನೆರವಿ: ಗುಂಪು, ಸಮೂಹ; ನಸಿ: ಹಾಳಾಗು, ನಾಶವಾಗು; ಹೊಂಗರಿ: ಚಿನ್ನದ ಬಣ್ಣವನ್ನು ಹೋಲುವ ಬಾಣದ ಹಿಂಭಾಗ; ಹೊಳೆ: ಪ್ರಕಾಶ; ಮುರಹರ: ಕೃಷ್ಣ; ಪಾದಾರವಿಂದ: ಚರಣ ಕಮಲ; ಹೊರೆ: ರಕ್ಷಣೆ, ಆಶ್ರಯ; ಅಡಗು: ಅವಿತುಕೊಳ್ಳು; ಹೋಯ್ತು: ತೆರಳು; ಭಯ: ಅಂಜಿಕೆ; ಉಬ್ಬರ: ಅತಿಶಯ; ಬೊಬ್ಬಿರಿ: ಗರ್ಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ;

ಪದವಿಂಗಡಣೆ:
ಮುರಿಮುರಿದು+ ಕಬ್ಬೊಗೆಯ +ಹೊದರಿನ
ಹೊರಳಿ +ಹರೆದುದು+ ಸೂಸು+ಕಿಡಿಗಳ
ನೆರವಿ+ ನಸಿದುದು +ನಿಮಿರ್ದ +ಹೊಂಗರಿ+ಅಂಬು +ಹೊಳೆ +ಹೊಳೆದು
ಮುರಹರನ +ಪಾದಾರವಿಂದದ
ಹೊರೆಯೊಳ್+ಅಡಗಿತು+ ಹೋಯ್ತು +ಭಯವ್
ಉಬ್ಬರದೊಳಗೆ +ಬೊಬ್ಬಿರಿದವ್+ಉರು + ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಮುರಿಮುರಿ, ಹೊಳೆ ಹೊಳೆ – ಜೋಡಿ ಪದಗಳು
(೨) ಹ ಕಾರದ ತ್ರಿವಳಿ ಪದ – ಹೊದರಿನ ಹೊರಳಿ ಹರೆದುದು; ಹೊಂಗರಿಯಂಬು ಹೊಳೆ ಹೊಳೆದು
(೩) ನ ಕಾರದ ತ್ರಿವಳಿ ಪದ – ನೆರವಿ ನಸಿದುದು ನಿಮಿರ್ದ

ಪದ್ಯ ೩೦: ಸೈನ್ಯವು ದ್ರೋಣರನ್ನು ಹೇಗೆ ಎದುರು ನೋಡಿತು?

ಬಲವ ಕಲಿಯೇರಿಸಿ ಛಡಾಳದೊ
ಳುಲಿವ ಪಟಹ ಮೃದಂಗ ಕಹಳಾ
ವಳಿಯ ಬೊಗ್ಗಿನ ಬೊಬ್ಬಿರಿವ ನಿಸ್ಸಾಳ ಕೋಟಿಗಳ
ತಳಿತ ಝಲ್ಲರಿಗಳ ಪತಾಕಾ
ವಳಿಯ ಬಲಿದು ಪವಾಡಿಗಳ ಕಳ
ಕಳದ ಕೈವಾರದಲಿ ಕವಿದರು ದ್ರೋಣನಿದಿರಿನಲಿ (ದ್ರೋಣ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸೈನ್ಯಕ್ಕೆ ಪ್ರೋತ್ಸಾಹವನ್ನು ಕೊಟ್ಟು ಪಟಹ, ಮೃದಂಗ, ಕಹಳೆ, ನಿಸ್ಸಾಳ, ನಗಾರಿಗಳ ಸದ್ದು ಬೊಬ್ಬಿರಿಯುತ್ತಿರಲು, ಝಲ್ಲರಿ, ಧ್ವಜಗಳನ್ನು ಎತ್ತಿ ಕಟ್ಟಿರಲು, ಹೊಗಳುಭಟ್ಟರು ಘೋಷಿಸುತ್ತಿರಲು ಅವರು ದ್ರೋಣನನ್ನಿದಿರಿಸಿದರು.

ಅರ್ಥ:
ಬಲ: ಸೈನ್ಯ; ಕಲಿ: ಶೌರ್ಯ; ಏರು: ಹೆಚ್ಚಾಗು; ಛಡಾಳ: ಹೆಚ್ಚಳ, ಆಧಿಕ್ಯ; ಉಲಿ: ಶಬ್ದ; ಪಟಹ: ನಗಾರಿ; ಕಹಳೆ: ಕಾಳೆ, ರಣವಾದ್ಯ; ಆವಳಿ: ಗುಂಪು; ಬೊಗ್ಗು: ಕಹಳೆ; ಬೊಬ್ಬಿರಿ: ಗರ್ಜಿಸು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ತಳಿತ: ಚಿಗುರಿದ; ಝಲ್ಲರಿ: ಕುಚ್ಚು; ಪತಾಕ: ಬಾವುಟ; ಬಲಿ: ಹೆಚ್ಚು; ಪವಾಡಿ: ಹೊಗಳುಭಟ್ಟ, ಸ್ತುತಿಪಾಠಕ; ಕಳಕಳ: ಉದ್ವಿಗ್ನತೆ; ಕೈವಾರ: ಕೊಂಡಾಟ; ಕವಿ: ಆವರಿಸು; ಇದಿರು: ಎದುರು;

ಪದವಿಂಗಡಣೆ:
ಬಲವ+ ಕಲಿ+ಏರಿಸಿ +ಛಡಾಳದೊಳ್
ಉಲಿವ +ಪಟಹ +ಮೃದಂಗ +ಕಹಳಾ
ವಳಿಯ +ಬೊಗ್ಗಿನ +ಬೊಬ್ಬಿರಿವ +ನಿಸ್ಸಾಳ +ಕೋಟಿಗಳ
ತಳಿತ +ಝಲ್ಲರಿಗಳ +ಪತಾಕಾ
ವಳಿಯ +ಬಲಿದು +ಪವಾಡಿಗಳ +ಕಳ
ಕಳದ +ಕೈವಾರದಲಿ +ಕವಿದರು +ದ್ರೋಣನ್+ಇದಿರಿನಲಿ

ಅಚ್ಚರಿ:
(೧) ಕಹಳಾವಳಿ, ಪತಾಕಾವಳಿ – ಆವಳಿ ಪದದ ಬಳಕೆ
(೨) ಪಟಹ, ಮೃದಂಗ, ಕಹಳ, ಬೊಗ್ಗು, ನಿಸ್ಸಾಳ – ರಣವಾದ್ಯಗಳು

ಪದ್ಯ ೨೬: ಭೀಮನ ತಲೆ ಯಾರಿಗೆ ಮೀಸಲು?

ನಿಲಿಸಿದರು ರವಿಸುತನನೀತನ
ತಲೆಯ ಮೀಸಲು ತಮ್ಮ ಸರಳದು
ಗೆಲವು ನಿಮಗಲ್ಲೆನುತ ಹೊಕ್ಕರು ಕೌರವಾನುಜರು
ಚಲಿಸಿತರನೆಲೆ ಕೋಡಕೈಯಲಿ
ಮೊಳಗಿದವು ನಿಸ್ಸಾಳ ಬಲು ಮಂ
ಡಳಿಕರೆಡಬಲವಂಕದಲಿ ನೆರೆದುದು ಕುಮಾರಕರ (ದ್ರೋಣ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕೌರವನ ತಮ್ಮಂದಿರು ಕರ್ಣನನ್ನು ತಡೆದು, ಭೀಮನ ತಲೆ ನಮ್ಮ ಬಾಣಗಳಿಗೆ ಮೀಸಲು, ನಿನಗಲ್ಲ ಎಂದು ಹೇಳಿ ಸಿದ್ಧರಾದರು. ದೊರೆಯ ಬೇಡಿನಿಂದ ಅವರು ಹೊರಡಲು ನಿಸ್ಸಾಳಗಳು ಮೊಳಗಿದವು. ಕುಮಾರರ ಎಡಬಲಗಳಲ್ಲಿ ಮಾಂಡಲೀಕರು ಗುಂಪಾಗಿ ಸೇರಿದರು.

ಅರ್ಥ:
ನಿಲಿಸು: ತಡೆ; ರವಿಸುತ: ಸೂರ್ಯನ ಪುತ್ರ (ಕರ್ಣ); ತಲೆ: ಶಿರ; ಮೀಸಲು: ಮುಡಿಪು, ಪ್ರತ್ಯೇಕತೆ; ಸರಳು: ಬಾಣ; ಗೆಲವು: ಜಯ; ಹೊಕ್ಕು: ಸೇರು; ಅನುಜ: ತಮ್ಮ; ಚಲಿಸು: ನಡೆ; ಮೊಳಗು: ಹೊರಹೊಮ್ಮು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಬಲು: ಬಹಳ; ಮಂಡಳಿಕ: ಒಂದು ಪ್ರಾಂತ್ಯ; ಎಡಬಲ: ಅಕ್ಕಪಕ್ಕ; ಅಂಕ: ಯುದ್ಧ; ನೆರೆ: ಗುಂಪು; ಕುಮಾರ: ಮಕ್ಕಳು;

ಪದವಿಂಗಡಣೆ:
ನಿಲಿಸಿದರು +ರವಿಸುತನನ್+ಈತನ
ತಲೆಯ +ಮೀಸಲು +ತಮ್ಮ +ಸರಳದು
ಗೆಲವು +ನಿಮಗಲ್ಲ್+ಎನುತ+ ಹೊಕ್ಕರು +ಕೌರವಾನುಜರು
ಚಲಿಸಿತರನ್+ಎಲೆ +ಕೋಡಕೈಯಲಿ
ಮೊಳಗಿದವು +ನಿಸ್ಸಾಳ +ಬಲು +ಮಂ
ಡಳಿಕರ್+ಎಡಬಲವ್+ಅಂಕದಲಿ +ನೆರೆದುದು +ಕುಮಾರಕರ

ಅಚ್ಚರಿ:
(೧) ಕೌರವಾನುಜರ ದಿಟ್ಟ ನುಡಿ – ಈತನ ತಲೆಯ ಮೀಸಲು ತಮ್ಮ ಸರಳದು

ಪದ್ಯ ೪೧: ಕೌರವನು ಯುದ್ಧಕ್ಕೆ ಹೇಗೆ ಬಂದನು?

ತಳಿತವಮಳಚ್ಛತ್ರ ಚಾಮರ
ವಲುಗಿದವು ನವಹೇಮ ದಂಡದ
ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ
ಮೊಳಗಿದವು ನಿಸ್ಸಾಳ ಬಿರುದಾ
ವಳಿಯ ಕಹಳೆಗಳೊದಿದವು ನೆಲ
ಮೊಳಗಿದಂತಿಗೆ ಬಿರುದ ಹೊಗಳಿತು ಭಟ್ಟ ಸಂದೋಹ (ದ್ರೋಣ ಪರ್ವ, ೧೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಛತ್ರ ಚಾಮರಗಳು ಸಜ್ಜಾದವು. ಬಂಗಾರಾ ದಂಡಕ್ಕೆ ಸರ್ಪಧ್ವಜವನ್ನೇರಿಸಿದರು. ನಿಸ್ಸಾಳಗಳನ್ನು ಬಡಿದರು. ಬಿರುದನ್ನು ಘೋಷಿಸಿ ಕಹಳೆಗಳನ್ನೂದಿದರು. ಭಟ್ಟರು ಕೌರವನ ಬಿರುದಾವಳಿಗಳನ್ನು ಉಚ್ಛಸ್ವರದಲ್ಲಿ ಘೋಷಿಸಿದರು.

ಅರ್ಥ:
ತಳಿತ: ಚಿಗುರಿದ; ಅಮಳ: ನಿರ್ಮಲ; ಛತ್ರ: ಕೊಡೆ, ಚತ್ತರಿಗೆ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಅಲುಗು: ಅಳ್ಳಾಡು, ಅದುರು; ನವ: ಹೊಸ; ಹೇಮ: ಚಿನ್ನ; ದಂಡ: ಕೋಲು; ಹಳವಿಗೆ: ಬಾವುಟ; ತುದಿ: ಕೊನೆ; ಅಲಗು: ಆಯುಧದ ಮೊನೆ, ಕತ್ತಿ; ಹಾಯ್ಕು: ಇಡು, ಇರಿಸು; ಪನ್ನಗ: ಹಾವು; ಮೊಳಗು: ಹೊರಹೊಮ್ಮು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಬಿರುದು: ಗೌರವ ಸೂಚಕ ಪದ; ಆವಳಿ: ಗುಂಪು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಊದು: ಶಬ್ದ ಮಾಡು; ನೆಲ: ಭೂಮಿ; ಮೊಳಗು: ಧ್ವನಿ, ಸದ್ದು; ದಂತಿ: ಆನೆ; ಹೊಗಳು: ಪ್ರಶಂಶಿಸು; ಭಟ್ಟ: ಸೈನಿಕ; ಸಂದೋಹ: ಗುಂಪು, ಸಮೂಹ;

ಪದವಿಂಗಡಣೆ:
ತಳಿತವ್+ಅಮಳ+ಚ್ಛತ್ರ +ಚಾಮರವ್
ಅಲುಗಿದವು +ನವ+ಹೇಮ +ದಂಡದ
ಹಳವಿಗೆಯ +ತುದಿವ್+ಅಲಗೆಯಲಿ +ಹಾಯ್ಕಿದರು +ಪನ್ನಗನ
ಮೊಳಗಿದವು +ನಿಸ್ಸಾಳ +ಬಿರುದಾ
ವಳಿಯ +ಕಹಳೆಗಳ್+ಊದಿದವು +ನೆಲ
ಮೊಳಗಿ+ದಂತಿಗೆ +ಬಿರುದ +ಹೊಗಳಿತು +ಭಟ್ಟ +ಸಂದೋಹ

ಅಚ್ಚರಿ:
(೧) ಬಾವುಟ ಹಾರಿಸಿದರು ಎಂದು ಹೇಳುವ ಪರಿ – ನವಹೇಮ ದಂಡದ ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ