ಪದ್ಯ ೧೮: ಅಶ್ವತ್ಥಾಮನ ಬಾಣಗಳ ಸ್ಥಿತಿ ಏನಾಯಿತು?

ಬೆಚ್ಚಿದನೆ ಭಾರಣೆಯ ಭೂತವ
ನೆಚ್ಚು ಬೊಬ್ಬಿರಿದಾರಿದನು ಮಗು
ಳೆಚ್ಚನೈದಾರೇಳುನೂರೈನೂರು ಸಾವಿರವ
ಎಚ್ಚು ಹಾಯ್ದಂಬುಗಳು ಭೂತದ
ಬಿಚ್ಚುಗಂಗಳ ಕೊಂಡದುರಿಯಲಿ
ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ (ಗದಾ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಆ ಭೂತವನ್ನು ಕಂಡು ಅಶ್ವತ್ಥಾಮನೇನು ಬೆಚ್ಚಿದನೇ, ಬೆದರಿದನೇ? ಅದರ ಮೇಲೆ ಬಾಣವನ್ನು ಬಿಟ್ಟು ಅಬ್ಬರಿಸಿದನು. ಮತ್ತೆ ಐದು, ಆರು, ಏಳುನೂರು ಸಾವಿರ ಬಾಣಗಳನ್ನು ಪ್ರಯೋಗಿಸಿದನು. ಆ ಬಾಣಗಳು ಭೂತದ ಬಿಡುಗಣ್ಣಿನಿಂದ ಬಂದ ಉರಿಯಲ್ಲಿ ಗರಿ ಸೀದು ನಿಷ್ಪ್ರಯೊಜಕವಾಯಿತು.

ಅರ್ಥ:
ಬೆಚ್ಚು: ಹೆದರು; ಭಾರಣೆ: ಮಹಿಮೆ, ಗೌರವ; ಭೂತ: ಪಿಶಾಚಿ; ಎಚ್ಚು: ಸವರು, ಬಾಣಬಿಡು; ಬೊಬ್ಬಿರಿ: ಗರ್ಜಿಸು; ಅರಿ: ಕತ್ತರಿಸು, ನಾಶಮಾಡು; ಮಗುಳು: ಪುನಃ; ನೂರು: ಶತ; ಸಾವಿರ: ಸಹಸ್ರ; ಹಾಯ್ದು: ಹೊಡೆ; ಅಂಬು: ಬಾಣ; ಬಿಚ್ಚುಗಂಗಳು: ಬಿಡುಕಣ್ಣು; ಕಂಗಳು: ನಯನ; ಉರಿ: ಬೆಂಕಿ; ಬಚ್ಚಿಡು: ಅಡಗಿಸಿ ಇಡು, ನಿಕ್ಷೇಪಿಸು; ಗರಿ: ಬಾಣದ ಹಿಂಭಾಗ; ಸೀದು: ಕರಕಲಾಗು; ಸೀಕರಿ: ಸೀಕಲು, ಕರಿಕು; ನಿಮಿಷ: ಕ್ಷಣಮಾತ್ರ;

ಪದವಿಂಗಡಣೆ:
ಬೆಚ್ಚಿದನೆ +ಭಾರಣೆಯ +ಭೂತವನ್
ಎಚ್ಚು +ಬೊಬ್ಬಿರಿದ್+ ಅರಿದನು +ಮಗುಳ್
ಎಚ್ಚನ್+ಐದಾರೇಳುನೂರೈನೂರು +ಸಾವಿರವ
ಎಚ್ಚು +ಹಾಯ್ದ್+ಅಂಬುಗಳು +ಭೂತದ
ಬಿಚ್ಚುಗಂಗಳ +ಕೊಂಡದ್+ಉರಿಯಲಿ
ಬಚ್ಚಿಸಿದ +ಗರಿ +ಸೀದು +ಸೀಕರಿಯೋಗಿ +ನಿಮಿಷದಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬೆಚ್ಚಿದನೆ ಭಾರಣೆಯ ಭೂತವನೆಚ್ಚು ಬೊಬ್ಬಿರಿದಾರಿದನು
(೨) ಬಾಣದ ಸ್ಥಿತಿ – ಬಿಚ್ಚುಗಂಗಳ ಕೊಂಡದುರಿಯಲಿ ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ

ಪದ್ಯ ೧೫: ಭೀಮನ ಗದೆ ಕೌರವನ ಕಿರುದೊಡೆಯನ್ನು ಮುರಿಯಲು ಎಂದು ಸಿದ್ಧವಾಗಿತ್ತು?

ಈಗಳನುವಾದೆನೆ ಧರಿತ್ರಿಯ
ಭಾಗವನು ಬೇಡಿದಡೆ ನೀ ಮುರಿ
ದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ
ತಾಗಿ ನೋಡಿನ್ನೊಮ್ಮೆನುತ ಮೈ
ಲಾಗಿನಲಿ ಹೊಳೆಹೊಳೆದು ಕೈದುವ
ತೂಗಿ ತುಡುಕಿದನರಸನನು ಬೊಬ್ಬಿರಿದು ಕಲಿ ಭೀಮ (ಗದಾ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಗರ್ಜಿಸುತ್ತಾ, ನಾನು ಈಗ ಸಿದ್ಧನಾಗಬೇಕಾಗಿಲ್ಲ, ನಮ್ಮ ಭಾಗದ ಭೂಮಿಯನ್ನು ಕೇಳಿದರೆ, ನೀನು ಸಾಧ್ಯವಿಲ್ಲ ಎಂದೆಯಲ್ಲಾ ಆಗಲೇ ಈ ಗದೆ ನಿನ್ನ ಕಿರುದೊಡೆಯನ್ನು ಮುರಿಯಲು ಸಿದ್ಧವಾಗಿತ್ತು. ಇನ್ನೊಮ್ಮೆ ನನ್ನನ್ನು ಹೊಡೆಯಲು ಬಂದು ನೋಡು, ಎನ್ನುತ್ತಾ ಭೀಮನು ಗದೆಯನ್ನು ತೂಗಿ ಗರ್ಜಿಸಿ ಕೌರವನನ್ನು ತುಡುಕಿದನು.

ಅರ್ಥ:
ಅನುವಾಗು: ಸಿದ್ಧನಾಗು; ಧರಿತ್ರಿ: ಭೂಮಿ; ಭಾಗ: ಅಂಶ, ಪಾಲು; ಬೇಡು: ಕೇಳು; ಮುರಿ: ಸೀಳು; ಗದೆ: ಮುದ್ಗರ; ಕಿರು: ಚಿಕ್ಕ; ತೊಡೆ: ಊರು; ತಾಗು: ಮುಟ್ತು; ನೋಡು: ವೀಕ್ಷಿಸು; ಮೈಲಾಗು: ದೇಹದ ಚುರುಕುತನ, ಚಳಕ; ಹೊಳೆ: ಪ್ರಕಾಶಿಸು; ಕೈದು: ಆಯುಧ; ತೂಗು: ಅಲ್ಲಾಡಿಸು; ತುಡುಕು: ಹೋರಾಡು, ಸೆಣಸು, ಮುಟ್ಟು; ಅರಸ: ರಾಜ; ಬೊಬ್ಬಿರಿ: ಗರ್ಜಿಸು; ಕಲಿ: ಶೂರ;

ಪದವಿಂಗಡಣೆ:
ಈಗಳ್+ಅನುವಾದೆನೆ +ಧರಿತ್ರಿಯ
ಭಾಗವನು +ಬೇಡಿದಡೆ+ ನೀ +ಮುರಿ
ದಾಗಲ್+ಅನುವಾದುದು +ಕಣಾ +ಗದೆ +ನಿನ್ನ+ ಕಿರುದೊಡೆಗೆ
ತಾಗಿ+ ನೋಡ್+ಇನ್ನೊಮ್ಮ್+ಎನುತ +ಮೈ
ಲಾಗಿನಲಿ +ಹೊಳೆಹೊಳೆದು +ಕೈದುವ
ತೂಗಿ +ತುಡುಕಿದನ್+ಅರಸನನು +ಬೊಬ್ಬಿರಿದು +ಕಲಿ +ಭೀಮ

ಅಚ್ಚರಿ:
(೧) ಭೀಮನ ಉತ್ತರ – ಧರಿತ್ರಿಯ ಭಾಗವನು ಬೇಡಿದಡೆ ನೀ ಮುರಿದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ

ಪದ್ಯ ೩೬: ಜಯದ ಸೂಚನೆಯನ್ನು ಯಾರು ನೀಡಿದರು?

ನಗೆ ಮಸಗಿ ಕರತಳವ ಹೊಯ್ ಹೊ
ಯ್ಡೊಗುಮಿಗೆಯ ಹರುಷದಲಿ ನಕುಲಾ
ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ
ಅಗಿದು ಗುಡಿಗಟ್ಟಿದವು ಮುಂಗಾ
ಲುಗಳ ಹೊಯ್ಲಲಿ ತೇಜಿಗಳು ಕೈ
ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು (ಗದಾ ಪರ್ವ, ೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಕ್ಕು, ಕೈತಟ್ಟಿ, ಅತಿಶಯ ಹರ್ಷದಿಂದ ನಕುಲನೇ ಮೊದಲಾದವರು ಬೊಬ್ಬಿರಿದರು. ವಾದ್ಯಗಳ ಶಬ್ದ ಹೆಚ್ಚಾಯಿತು. ಕುದುರೆಗಳು ಮುಂಗಾಲಿನಿಂದ ನೆಲವನ್ನು ಹೊಯ್ದವು. ಆನೆಗಳು ಸೊಂಡಿಲನ್ನೆತ್ತಿ ಸದ್ದುಮಾಡಿ ಜಯದ ಸೂಚನೆಯನ್ನು ಕೊಟ್ಟವು.

ಅರ್ಥ:
ನಗೆ: ಹರುಷ; ಮಸಗು: ಹರಡು; ಕರತಳ: ಹಸ್ತ; ಹೊಯ್: ಹೊಡೆ; ಹರುಷ: ಸಂತಸ; ಆದಿ: ಮುಂತಾದ; ಬೊಬ್ಬಿರಿ: ಗರ್ಜಿಸು; ವಾದ್ಯ: ಸಂಗೀತದ ಸಾಧನ; ರವ: ಶಬ್ದ; ಅಗಿ: ಜಗಿ, ಆವರಿಸು; ಗುಡಿ: ಗುಂಪುಗೂಡು; ಮುಂಗಾಲು: ಮುಂದಿನ ಕಾಲು; ಹೊಯ್ಲು: ಹೊಡೆತ; ತೇಜಿ: ಕುದುರೆ; ಕೈ: ಹಸ್ತ; ನೆಗಹು: ಮೇಲೆತ್ತು; ಜಯ: ಗೆಲುವು; ಸೂಚನೆ: ತಿಳಿಸುವಿಕೆ; ಒಲಿ: ಪ್ರೀತಿಸು, ಒಪ್ಪು, ಸಮ್ಮತಿಸು; ಆನೆ: ಗಜ;

ಪದವಿಂಗಡಣೆ:
ನಗೆ +ಮಸಗಿ +ಕರತಳವ +ಹೊಯ್ +ಹೊ
ಯ್ಡೊಗುಮಿಗೆಯ +ಹರುಷದಲಿ+ ನಕುಲಾ
ದಿಗಳು +ಬೊಬ್ಬಿರಿದಾರಿದರು +ಬಹುವಾದ್ಯ+ರವದೊಡನೆ
ಅಗಿದು +ಗುಡಿಗಟ್ಟಿದವು +ಮುಂಗಾ
ಲುಗಳ +ಹೊಯ್ಲಲಿ +ತೇಜಿಗಳು+ ಕೈ
ನೆಗಹಿ +ಜಯಸೂಚನೆಯಲ್+ಒಲೆದವು +ಪಟ್ಟದಾನೆಗಳು

ಅಚ್ಚರಿ:
(೧) ಸಂತೋಷವನ್ನು ಸೂಚಿಸುವ ಪರಿ – ಕರತಳವ ಹೊಯ್ ಹೊಯ್ಡೊಗುಮಿಗೆಯ ಹರುಷದಲಿ; ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ

ಪದ್ಯ ೩: ಕೊಳದ ಬಳಿ ಯಾರು ಬಂದು ನಿಂತರು?

ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ (ಗದಾ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ಶತ್ರುಸೇನೆಯು ಬಂದು ಕೊಳದ ತೀರವನ್ನು ಮುತ್ತಿ ಸುತ್ತುವರಿದು ಭೂಮಿ ಬಿರಿಯುವಂತೆ ಬೊಬ್ಬೆಯನ್ನು ಹಾಕಿದರು. ಯುಧಿಷ್ಠಿರನು ಪಲ್ಲಕ್ಕಿಯಲ್ಲಿ ಬಂದಿಳಿದು ನಿಂತನು. ಅವನೊಡನೆ ಭೀಮಾರ್ಜುನನಕುಲಸಹದೇವರೂ, ಶ್ರೀಕೃಷ್ಣನೂ ಧೃಷ್ಟದ್ಯುಮ್ನ ಶಿಖಂಡಿ ಬಂದು ನಿಂತರು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಕೊಳ: ಸರೋವರ; ತೀರ: ದಡ; ವೇಡೈಸು: ಸುತ್ತುವರಿ; ಸರಸಿ: ಸರೋವರ; ಬಂದಿಕಾರ: ಕಳ್ಳ, ಸೆರೆಹಿಡಿಯಲ್ಪಟ್ಟವ; ಬೊಬ್ಬಿರಿ: ಗರ್ಜಿಸು; ಅಬ್ಬರ: ಆರ್ಭಟ; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಅಂದಣ: ಪಲ್ಲಕ್ಕಿ, ಮೇನೆ; ಐತಂದು: ಬಂದು ಸೇರು; ಸೂನು: ಮಗ; ಸಹಿತ: ಜೊತೆ; ನಿಂದು: ನಿಲ್ಲು; ಯಮಳ: ನಕುಲ ಸಹದೇವ;

ಪದವಿಂಗಡಣೆ:
ಬಂದುದ್+ಅರಿಬಲ+ ಕೊಳನ +ತೀರದಲ್
ಅಂದು +ವೇಢೈಸಿದರು+ ಸರಸಿಯ
ಬಂದಿಕಾರರು +ಬೊಬ್ಬಿರಿದರ್+ಅಬ್ಬರಕೆ +ಧರೆ +ಬಿರಿಯೆ
ಅಂದಣದಲ್+ಐತಂದು +ಧರ್ಮಜ
ನಿಂದನ್+ಅರ್ಜುನ +ಭೀಮ +ಯಮಳ +ಮು
ಕುಂದ +ಸಾತ್ಯಕಿ +ದ್ರುಪದ+ಸೂನು +ಶಿಖಂಡಿಗಳು+ ಸಹಿತ

ಅಚ್ಚರಿ:
(೧) ಕೊಳ, ಸರಸಿ – ಸಮಾನಾರ್ಥಕ ಪದ
(೨) ಶಬ್ದದ ತೀವ್ರತೆ – ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ

ಪದ್ಯ ೫೬: ಭೀಮನು ಆನೆಗಳನ್ನು ಹೇಗೆ ಹೊಯ್ದನು?

ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ
ತಿವಿದನಣಸಿನಲೂರಿ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ (ಗದಾ ಪರ್ವ, ೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಭೀಮನು ಧರ್ಮಜನನ್ನು ಹಿಂದಕ್ಕಿಟ್ಟು ಗಜಸೈನ್ಯವನ್ನು ಅದು ಚೆದುರಿ ಹೋಗುವಂತೆ ಬಡಿದನು. ಆನೆಗಳನ್ನು ಹಾರಿಹೋಗುವಂತೆ ಮಾಡಿ ಹೊಡೆದು ಬೊಬ್ಬಿರಿದನು. ಅವನ್ನು ಅಣಸಿನಿಂದ ತಿವಿದು, ಗದೆಯ ಮೊನೆಯಿಂದ ಎರಡೆರಡು ಆನೆಗಳನ್ನೆತ್ತಿ ಎಸೆದನು. ಎಡಬಲದ ಬವರಿಯಲ್ಲಿ ತಡೆಗಾಲು ಕೊಟ್ಟು ಹೊಡೆದನು.

ಅರ್ಥ:
ಅವನಿಪ: ರಾಜ; ಹಿಂದಿಕ್ಕು: ಹಿಂದೆ ಸರಿಸು; ಗಜ: ಆನೆ; ಯೂಥ: ಗುಂಪು, ಹಿಂಡು; ವಿಭಾಡಿಸು: ನಾಶಮಾಡು; ಹಿಂಡ: ಗುಂಪು; ಕೆದರು: ಹರಡು; ಅವಗಡಿಸು: ಕಡೆಗಣಿಸು; ಹಾರು: ಲಂಘಿಸು; ಊದು: ಕೂಗು; ಒದೆ: ತಳ್ಳು, ನೂಕು; ಬೊಬ್ಬಿರಿ: ಗರ್ಜಿಸು; ತಿವಿ: ಚುಚ್ಚು; ಅಣಸು: ಆನೆಯ ದಂತಕ್ಕೆ ಅಳವಡಿಸುವ ಲೋಹದ ಕಟ್ಟು; ಮೊನೆ: ತುದಿ, ಕೊನೆ, ಹರಿತವಾದ; ಸವಡಿ: ಜೊತೆ, ಜೋಡಿ; ಎತ್ತು: ಮೇಲಕ್ಕೆ ತರು; ಬಲ: ಶಕ್ತಿ; ಬವರಿ: ತಿರುಗುವುದು; ತಡೆಗಾಲು: ಅಡ್ಡಮಾಡುತ್ತಿರವ ಕಾಲು; ಹೊಯ್ದು: ಹೊಡೆ;

ಪದವಿಂಗಡಣೆ:
ಅವನಿಪನ +ಹಿಂದಿಕ್ಕಿ +ಗಜ+ಯೂ
ಥವ +ವಿಭಾಡಿಸಿ +ಹಿಂಡ +ಕೆದರಿದನ್
ಅವಗಡಿಸಿದನು +ಹಾರಲ್+ ಊದಿದನ್+ಒದೆದು +ಬೊಬ್ಬಿರಿದ
ತಿವಿದನ್+ಅಣಸಿನಲ್+ಊರಿ +ಮೊನೆಯಲಿ
ಸವಡಿ+ ಆನೆಯನ್+ಎತ್ತಿದನು +ಬಲ
ಬವರಿ+ಎಡಬವರಿಯಲಿ +ತಡೆಗಾಲ+ಒಯ್ದನಾ +ಭೀಮ

ಅಚ್ಚರಿ:
(೧) ಯೂಥ, ಹಿಂಡು – ಸಾಮ್ಯಾರ್ಥ ಪದ
(೨) ಬಲಬವರಿ, ಎಡಬವರಿ – ಪದಗಳ ಬಳಕೆ

ಪದ್ಯ ೫೯: ಧರ್ಮಜನ ಸಹಾಯಕ್ಕೆ ಯಾರು ಬಂದರು?

ಅಕಟಕಟ ಧರ್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ
ವಿಕಟ ರೋಷಶಿಖಿ ಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ (ಶಲ್ಯ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಶಲ್ಯನ ಆಟೋಪವನ್ನು ಕಂಡು ಪಾಂಡವರು ಪಾಪಿಗಳು, ಧರ್ಮಜನನ್ನು ಶಲ್ಯನ ಕೈಗೆ ಕೊಟ್ಟರು ಎಂದು ಸೇನೆಯು ಗೊಂದಲಕ್ಕೀಡಾಯಿತು. ಆಗ ಭೀಮನು ಮಹಾಕೋಪದಿಂದ ಕಿಡಿಕಾರುತ್ತಾ ಶಲ್ಯನ ಖಡ್ಗವನ್ನು ಕತ್ತರಿಸಿ ಗರ್ಜಿಸಿದನು.

ಅರ್ಥ:
ಅಕಟಕಟ: ಅಯ್ಯೋ; ಕಂಟಕ: ತೊಂದರೆ; ವರ್ತಿಸು: ವಿನಿಯೋಗವಾಗು; ಪಾತಕ: ಪಾಪಿ; ಬಲ: ಸೈನ್ಯ; ಸಮತಳ: ಮಟ್ಟಮಾಡು; ವಿಕಟ: ಕುರೂಪಗೊಂಡ; ರೋಷ: ಕೋಪ; ಶಿಖಿ: ಬೆಂಕಿ; ಸ್ಫುಲಿಂಗ: ಬೆಂಕಿಯ ಕಿಡಿ; ಪ್ರಕಟ: ಸ್ಪಷ್ಟವಾದುದು; ಭೀಷಣ: ಭಯಂಕರವಾದ; ಸಹಿತ: ಜೊತೆ; ಕೌಕ್ಷೇಯಕ: ಕತ್ತಿ, ಖಡ್ಗ; ಖಂಡಿಸು: ತುಂಡು ಮಾಡು; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಅಕಟಕಟ+ ಧರ್ಮಜನನ್+ಈ+ ಕಂ
ಟಕಕೆ +ಕೈವರ್ತಿಸಿದರೇ +ಪಾ
ತಕರು +ಪಾಂಡವರ್+ಎನುತ +ಕುರುಬಲವೆಲ್ಲ+ ಸಮತಳಿಸೆ
ವಿಕಟ+ ರೋಷಶಿಖಿ+ ಸ್ಫುಲಿಂಗ
ಪ್ರಕಟ +ಭೀಷಣ+ಸಹಿತ+ ಕೌಕ್ಷೇ
ಯಕವ +ಖಂಡಿಸಿ +ಧರೆ +ಬಿರಿಯೆ +ಬೊಬ್ಬಿರಿದನಾ +ಭೀಮ

ಅಚ್ಚರಿ:
(೧) ಗರ್ಜನೆಯನ್ನು ವರ್ಣಿಸುವ ಪರಿ – ಧರೆ ಬಿರಿಯೆ ಬೊಬ್ಬಿರಿದನಾ ಭೀಮ
(೨) ಭೀಮನು ಬಂದ ಪರಿ – ವಿಕಟ ರೋಷಶಿಖಿ ಸ್ಫುಲಿಂಗ ಪ್ರಕಟ ಭೀಷಣಸಹಿತ ಕೌಕ್ಷೇಯಕವ ಖಂಡಿಸಿ
(೩) ವಿಕಟ, ಪ್ರಕಟ, ಅಕಟ – ಪ್ರಾಸ ಪದಗಳು

ಪದ್ಯ ೫೨: ಧರ್ಮಜನು ಶಲ್ಯನತ್ತ ಹೇಗೆ ಬಾಣಗಳನ್ನು ಬಿಟ್ಟನು?

ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್ಕ್ಷೇತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯೆಲ್ಲವೂ ಕೂಡಿ ಗರ್ಜಿಸಿತು. ಸೋಲಿನ ಮಬ್ಬು ಹಾರಿತು, ಧರ್ಮಜನು ಜಯದ ಉತ್ಸಾಹದಿಂದುಬ್ಬಿದನು. ಅವನಲ್ಲಿದ್ದ ಕ್ಷಾತ್ರತೇಜಸ್ಸು ಹೊರಹೊಮ್ಮಿತು. ಅವನು ಗರ್ಜಿಸಿ ಹೆದೆಯನ್ನು ನೇವರಿಸಿ ಬಾಣವನ್ನು ಹೂಡಿ ಅಸ್ತ್ರಗಳ ಸಮುದ್ರವನ್ನೇ ಶಲ್ಯನತ್ತ ತೂರಿದನು.

ಅರ್ಥ:
ಬೊಬ್ಬಿರಿ: ಗರ್ಜಿಸು; ಸೇನೆ: ಸೈನ್ಯ; ರಾಯ: ರಾಜ; ಸರ್ಬದಳ: ಎಲ್ಲಾ ಸೈನ್ಯ; ಜೋಡು: ಕೂಡಿಸು; ಸೋಲು: ಪರಾಭವ; ಮಬ್ಬು: ನಸುಗತ್ತಲೆ, ಮಸುಕು; ಹರೆ: ವ್ಯಾಪಿಸು; ಜಯ: ಗೆಲುವು; ಜಸ: ಯಶಸ್ಸು; ಏರು: ಮೇಲೇಳು; ನರನಾಥ: ರಾಜ; ಉಬ್ಬು: ಹಿಗ್ಗು, ಗರ್ವಿಸು; ಕ್ಷತ್ರ: ಕ್ಷತ್ರಿಯ; ತೇಜ: ಕಾಂತಿ; ಗರ್ಭ: ಹೊಟ್ಟೆ; ಗಾಢಿಸು: ತುಂಬಿಕೊಳ್ಳು; ಅರಿ: ವೈರಿ; ಮಿಡಿ: ತವಕಿಸು; ತೆಬ್ಬು: ಬಿಲ್ಲಿನ ತಿರುವು; ಅಸ್ತ್ರ: ಶಸ್ತ್ರ; ತೂಗು: ಅಲ್ಲಾಡು; ತುಳುಕು: ತುಂಬಿ ಹೊರಸೂಸು; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ಬೊಬ್ಬಿರಿದುದಾ +ಸೇನೆ +ರಾಯನ
ಸರ್ಬದಳ+ ಜೋಡಿಸಿತು +ಸೋಲದ
ಮಬ್ಬು +ಹರೆದುದು +ಜಯದ +ಜಸವೇರಿದನು +ನರನಾಥ
ಉಬ್ಬಿದನು +ಸತ್ಕ್ಷತ್ರ+ತೇಜದ
ಗರ್ಭ +ಗಾಡಿಸಿತ+ಅರಿ+ ಮಿಡಿದನು
ತೆಬ್ಬಿನಸ್ತ್ರವ +ತೂಗಿ +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಎಷ್ಟು ಬಾಣಗಳಿದ್ದವೆಂದು ವಿವರಿಸುವ ಪರಿ – ತುಳುಕಿದನಂಬಿನಂಬುಧಿಯ

ಪದ್ಯ ೪೬: ಕುರುಸೇನೆಯೇಕೆ ಸಂತಸಪಟ್ಟಿತು?

ಬಿದ್ದನಾಚೆಯ ದೊರೆ ಸುಯೋಧನ
ಗೆದ್ದ ನಿನ್ನೇನೆನುತ ಸುಭಟರ
ನದ್ದಿತತಿಸುಮ್ಮಾನಸಾಗರ ನಿನ್ನ ಮೋಹರವ
ಅದ್ದರೋ ಶೋಕಾಮ್ಬುಧಿಯಲೊಡೆ
ಬಿದ್ದರೋ ಭೀಮಾರ್ಜುನರಿಗುಸು
ರಿದ್ದುದೋ ಬರಹೇಳೆನುತ ಬೊಬ್ಬಿರಿದನಾ ಶಲ್ಯ (ಶಲ್ಯ ಪರ್ವ, ೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ನಿನ್ನ ಸೇನೆಯವರು ಪಾಂಡವರ ಅರಸನು ಮಡಿದುಹೋದ, ದುರ್ಯೋಧನನು ಗೆದ್ದ, ಎಂದು ಸಂತೋಷದಲ್ಲಿ ತೇಲಿದರು. ಶಲ್ಯನು ಭೀಮಾರ್ಜುನರು ದುಃಖದಲ್ಲಿ ಮುಳುಗಿದರೋ, ಅವರಿಗೆ ಉಸಿರಾಡುತ್ತಿದೆಯೋ ಅವರನ್ನು ಯುದ್ಧಕ್ಕೆ ಕರೆ ಎಂದು ಶಲ್ಯನು ಗರ್ಜಿಸಿದನು.

ಅರ್ಥ:
ಆಚೆ: ಹೊರಗೆ; ದೊರೆ: ರಾಜ; ಗೆದ್ದು: ಗೆಲ್ಲು; ಸುಭಟ: ಪರಾಕ್ರಮಿ; ಅದ್ದು: ತೋಯು; ಸುಮ್ಮಾನ: ಸಂತೋಷ, ಹಿಗ್ಗ್; ಸಾಗರ: ಸಮುದ್ರ; ಮೋಹರ: ಯುದ್ಧ; ಶೋಕ: ದುಃಖ; ಅಂಬುಧಿ: ಸಾಗರ; ಬಿದ್ದು: ಬೀಳು; ಉಸುರು: ಜೀವ; ಬರಹೇಳು: ಆಗಮಿಸು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಬಿದ್ದನ್+ಆಚೆಯ +ದೊರೆ +ಸುಯೋಧನ
ಗೆದ್ದ+ ನಿನ್ನೇನೆನುತ +ಸುಭಟರನ್
ಅದ್ದಿತ್+ಅತಿ+ಸುಮ್ಮಾನ+ಸಾಗರ+ ನಿನ್ನ+ ಮೋಹರವ
ಅದ್ದರೋ+ ಶೋಕಾಂಬುಧಿಯಲ್+ಒಡೆ
ಬಿದ್ದರೋ +ಭೀಮಾರ್ಜುನರಿಗ್+ಉಸು
ರಿದ್ದುದೋ +ಬರಹೇಳೆನುತ +ಬೊಬ್ಬಿರಿದನಾ+ ಶಲ್ಯ

ಅಚ್ಚರಿ:
(೧) ಸುಮ್ಮಾನಸಾಗರ, ಶೋಕಾಂಬುಧಿ – ಪದಗಳ ಬಳಕೆ

ಪದ್ಯ ೪೪: ಧರ್ಮಜನು ಶಲ್ಯನ ಮೇಲೆ ಎಷ್ಟು ಬಾಣಗಳನ್ನು ಬಿಟ್ಟನು?

ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮುರು ಬಾಣದಲಿ
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ (ಶಲ್ಯ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಧರ್ಮಜನು ಶಲ್ಯನ ಬಾಣವನ್ನು ಕತ್ತರಿಸಿಕಾಹಲು, ಶಲ್ಯನು ಹತ್ತು ಬಾಣಗಳಿಂದ ಧರ್ಮಜನ ಕವಚವನ್ನು, ಮೂರು ಬಾಣಗಳಿಂದ ಸೀಸಕವನ್ನು ಮುರಿದು, ಎರಡು ಮತ್ತೆ ಹತ್ತು ಬಾಣಗಳಿಂದ ಧರ್ಮಜನ ಎದೆಗೆ ಹೊದೆದು ಗರ್ಜಿಸಿದನು.

ಅರ್ಥ:
ಸರಳ: ಬಾಣ; ಮುರಿ: ಸೀಳು; ಕತ್ತರಿಸು: ಕಡಿ; ಹತ್ತು: ದಶ; ಅಂಬು: ಬಾಣ; ರಾಯ: ರಾಜ; ಬರಿ: ಕೇವಲ, ಪಕ್ಕ, ಬದಿ; ಕವಚ: ಹೊದಿಕೆ, ಉಕ್ಕಿನ ಅಂಗಿ; ಹರಿ: ಸೀಳು; ಎಚ್ಚು: ಬಾಣ ಪ್ರಯೋಗ ಮಾದು; ಬಾಣ: ಅಂಬು; ಶಿರ: ತಲೆ; ಸೀಸಕ: ಶಿರಸ್ತ್ರಾಣ; ನಿಘಾತ: ಹೊಡೆತ, ಕೊಲೆ; ಶರ: ಬಾಣ; ಭೂಪತಿ: ರಾಜ; ಉರ: ಎದೆ; ಉಗುಳು: ಹೊರಹಾಕು; ಮಗುಳು: ಮತ್ತೆ; ಎಚ್ಚು: ಬಾಣ ಪ್ರಯೋಗ ಮಾಡು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಸರಳ +ಮುರಿ+ಎಸಲ್+ಆ +ಸರಳ +ಕ
ತ್ತರಿಸಿ + ಹತ್ತ್+ಅಂಬಿನಲಿ +ರಾಯನ
ಬರಿಯ +ಕವಚವ+ ಹರಿಯಲ್+ಎಚ್ಚನು +ಮೂರು +ಬಾಣದಲಿ
ಶಿರದ +ಸೀಸಕವನು+ ನಿಘಾತದಲ್
ಎರಡು +ಶರದಲಿ+ ಮತ್ತೆ +ಭೂಪತಿ
ಉರವನ್+ಉಗುಳಿದನ್+ಎಂಟರಲಿ +ಮಗುಳ್+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಸರಳ, ಅಂಬು, ಬಾಣ, ಶರ; ಎಸು, ಎಚ್ಚು – ಸಮಾನಾರ್ಥಕ ಪದ

ಪದ್ಯ ೧೪: ಅಶ್ವತ್ಥಾಮನ ಯುದ್ಧದ ವೈಖರಿ ಹೇಗಿತ್ತು?

ಪವನಜನನೆಂಟಂಬಿನಲಿ ಪಾಂ
ದವಸುತರನೈವತ್ತರಲಿ ಯಾ
ದವನನಿಪ್ಪತ್ತಂಬಿನಲಿ ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ ಮುರಿ
ದವಗಡಿಸಿ ಪಾಂಚಾಲ ಸೃಂಜಯ
ನಿವಹವನು ನೂರಂಬಿನಲಿ ಕೆಡೆಯೆಚ್ಚು ಬೊಬ್ಬಿರಿದ (ಶಲ್ಯ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನನ್ನು ಎಂಟು ಬಾಣಗಳಿಂದಲೂ, ಉಪಪಾಂಡವರನ್ನು ಐವತ್ತು ಬಾಣಗಳಿಂದಲೂ, ಕೃಷ್ಣನನ್ನು ಇಪ್ಪತ್ತು ಬಾಣಗಳಿಂದಲೂ, ನಕುಲ ಸಹದೇವರನ್ನು ಇಪ್ಪತ್ತು ಕವಲುಗೋಲುಗಳಿಂದಲೂ, ನೂರು ಬಾಣಗಳಿಂದ ಪಾಂಚಾಲ ಸೃಂಜಯರನ್ನೂ ಬೀಳುವಂತೆ ಹೊಡೆದು ಅಶ್ವತ್ಥಾಮನು ಗರ್ಜಿಸಿದನು.

ಅರ್ಥ:
ಪವನಜ: ಭೀಮ; ಅಂಬು: ಬಾಣ; ಸುತ: ಮಗ; ಕವಲುಗೋಲು: ಬಾಣದ ಪ್ರಾಕಾರ; ಮುರಿ: ಸೀಳು; ಅವಗಡಿಸು: ಕಡೆಗಣಿಸು; ನಿವಹ: ಗುಂಪು; ನೂರು: ಶತ; ಕೆಡೆ: ಬೀಳು, ಕುಸಿ; ಎಚ್ಚು: ಬಾಣ ಪ್ರಯೋಗ ಮಾದು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಪವನಜನನ್+ ಎಂಟಂಬಿನಲಿ +ಪಾಂ
ಡವಸುತರನ್+ಐವತ್ತರಲಿ+ ಯಾ
ದವನನ್+ಇಪ್ಪತ್ತಂಬಿನಲಿ +ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ+ ಮುರಿದ್
ಅವಗಡಿಸಿ +ಪಾಂಚಾಲ +ಸೃಂಜಯ
ನಿವಹವನು+ ನೂರಂಬಿನಲಿ +ಕೆಡೆ+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಅಂಬಿನಲಿ ಪದದ ಬಳಕೆ – ೧,೩, ೬ ಸಾಲುಗಳಲ್ಲಿ