ಪದ್ಯ ೪೯: ಭೀಮನೆಂದು ಜನಿಸಿದನು?

ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭೀಮಸೇನನ ಜನನದದ್ಭುತವ (ಆದಿ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಂಗಳವಾರ, ತ್ರಯೋದಶೀ ದಿನದಂದು ಮಧ್ಯಾಹ್ನ ಕಾಲದಲ್ಲಿ ಮಘಾ ನಕ್ಷತ್ರದ ಶುಭಲಗ್ನದಲ್ಲಿ ಭೀಮನು ಜನಿಸಿದನು. ಅವನು ಜನಿಸುತ್ತಲೇ ಶತ್ರುರಾಜರೂ ನಡುಗಿದರು. ಜನಮೇಜಯ ರಾಜ, ಕೇಳು ಅವನ ಜನನಕ್ಕೆ ಹೊಂದಿದ ಅದ್ಭುತವ.

ಅರ್ಥ:
ಅವನಿಸುತ: ಭೂಮಿಯ ಮಗ (ಮಂಗಳ); ವಾರ: ದಿನ; ತ್ರಯೋದಶಿ: ಹದಿಮೂರು; ಮಧ್ಯ: ಮಧ್ಯಾಹ್ನ; ಅರ್ಕ: ಸೂರ್ಯ; ಸಂಭವಿಸು: ಹುಟ್ಟು; ಮಘೆ: ಮಾಘಮಾಸ; ಶುಭ: ಮಂಗಳ; ಗ್ರಹ: ಆಕಾಶಚರಗಳು; ಲಗ್ನ: ಶುಭ ಸಮಯ; ಉದಯ: ಹುಟ್ಟು; ಭವ: ಇರುವಿಕೆ, ಅಸ್ತಿತ್ವ, ಹುಟ್ಟು; ಅಹಿತ: ವೈರಿ; ಪಾರ್ಥಿವ: ಭೂಮಿಯನ್ನು ಆಳುವವನು; ನಿವಹ: ಗುಂಪು; ನಡುಗು: ಅಲ್ಲಾಡು; ಭೂಮಿಪತಿ: ರಾಜ; ಹೇಳು: ತಿಳಿಸು; ಜನನ: ಹುಟ್ಟು; ಅದ್ಭುತ: ಆಶ್ಚರ್ಯ;

ಪದವಿಂಗಡಣೆ:
ಅವನಿಸುತವಾರ +ತ್ರಯೋದಶಿ
ದಿವದ +ಮಧ್ಯದೊಳ್+ಅರ್ಕನಿರೆ +ಸಂ
ಭವಿಸಿದನು +ಮಘೆಯಲಿ +ಶುಭಗ್ರಹ+ ಲಗ್ನದ್+ಉದಯದಲಿ
ಭವದ +ಮಾತ್ರದೊಳ್+ಅಹಿತ +ಪಾರ್ಥಿವ
ನಿವಹ +ನಡುಗಿತು +ಭೂಮಿಪತಿ +ಹೇ
ಳುವೆನ್+ಅದೇನನು +ಭೀಮಸೇನನ +ಜನನದ್+ಅದ್ಭುತವ

ಅಚ್ಚರಿ:
(೧) ಮಂಗಳವಾರವನ್ನು ಅವನಿಸುತವಾರ ಎಂದು ಕರೆದಿರುವುದು
(೨) ಭೀಮನ ಪರಾಕ್ರಮವನ್ನು ಹೇಳುವ ಪರಿ – ಭವದ ಮಾತ್ರದೊಳಹಿತ ಪಾರ್ಥಿವನಿವಹ ನಡುಗಿತು
(೩) ಸಂಭವಿಸು, ಉದಯ, ಜನನ, ಭವ – ಸಾಮ್ಯಾರ್ಥ ಪದಗಳು

ಪದ್ಯ ೧೪: ಅಶ್ವತ್ಥಾಮನ ಯುದ್ಧದ ವೈಖರಿ ಹೇಗಿತ್ತು?

ಪವನಜನನೆಂಟಂಬಿನಲಿ ಪಾಂ
ದವಸುತರನೈವತ್ತರಲಿ ಯಾ
ದವನನಿಪ್ಪತ್ತಂಬಿನಲಿ ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ ಮುರಿ
ದವಗಡಿಸಿ ಪಾಂಚಾಲ ಸೃಂಜಯ
ನಿವಹವನು ನೂರಂಬಿನಲಿ ಕೆಡೆಯೆಚ್ಚು ಬೊಬ್ಬಿರಿದ (ಶಲ್ಯ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನನ್ನು ಎಂಟು ಬಾಣಗಳಿಂದಲೂ, ಉಪಪಾಂಡವರನ್ನು ಐವತ್ತು ಬಾಣಗಳಿಂದಲೂ, ಕೃಷ್ಣನನ್ನು ಇಪ್ಪತ್ತು ಬಾಣಗಳಿಂದಲೂ, ನಕುಲ ಸಹದೇವರನ್ನು ಇಪ್ಪತ್ತು ಕವಲುಗೋಲುಗಳಿಂದಲೂ, ನೂರು ಬಾಣಗಳಿಂದ ಪಾಂಚಾಲ ಸೃಂಜಯರನ್ನೂ ಬೀಳುವಂತೆ ಹೊಡೆದು ಅಶ್ವತ್ಥಾಮನು ಗರ್ಜಿಸಿದನು.

ಅರ್ಥ:
ಪವನಜ: ಭೀಮ; ಅಂಬು: ಬಾಣ; ಸುತ: ಮಗ; ಕವಲುಗೋಲು: ಬಾಣದ ಪ್ರಾಕಾರ; ಮುರಿ: ಸೀಳು; ಅವಗಡಿಸು: ಕಡೆಗಣಿಸು; ನಿವಹ: ಗುಂಪು; ನೂರು: ಶತ; ಕೆಡೆ: ಬೀಳು, ಕುಸಿ; ಎಚ್ಚು: ಬಾಣ ಪ್ರಯೋಗ ಮಾದು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಪವನಜನನ್+ ಎಂಟಂಬಿನಲಿ +ಪಾಂ
ಡವಸುತರನ್+ಐವತ್ತರಲಿ+ ಯಾ
ದವನನ್+ಇಪ್ಪತ್ತಂಬಿನಲಿ +ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ+ ಮುರಿದ್
ಅವಗಡಿಸಿ +ಪಾಂಚಾಲ +ಸೃಂಜಯ
ನಿವಹವನು+ ನೂರಂಬಿನಲಿ +ಕೆಡೆ+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಅಂಬಿನಲಿ ಪದದ ಬಳಕೆ – ೧,೩, ೬ ಸಾಲುಗಳಲ್ಲಿ

ಪದ್ಯ ೫: ಅರ್ಜುನನು ಏನೆಂದು ಘೋಷಿಸಿದನು?

ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಶಿವಶಿವಾ ಸೈನ್ಯವು ಹೋರಾಡಿ ಬಳಲಿದೆ, ನಿದ್ದೆಯ ಕಾಟ ಹೆಚ್ಚಿದೆ, ಕತ್ತಲು ಹೋಗುವವರೆಗೂ ಯುದ್ಧಬೇಡ, ಎಂದು ಚಿಂತಿಸಿ ಸೈನ್ಯಕ್ಕೆ ಲಗ್ಗೆಯನ್ನು ನಿಲ್ಲಿಸಿ ಎಂದು ಅರ್ಜುನನು ಗಂಭೀರ ಘೋಷ ಮಾಡಿದನು.

ಅರ್ಥ:
ಬಳಲು: ಆಯಾಸಗೊಳ್ಳು; ಅವಗಡಿಸು: ಕಡೆಗಣಿಸು; ನಿದ್ದೆ: ಶಯನ; ನೂಕು: ತಳ್ಳು; ಬವರ: ಕಾಳಗ, ಯುದ್ಧ; ಉಬ್ಬು: ಹೆಚ್ಚಾಗು; ತಿಮಿರ: ಕತ್ತಲೆ; ಸಾಕು: ನಿಲ್ಲು ರಣ: ಯುಚ್ಛ; ದಿವಿಜಪತಿ: ದೇವತೆಗಳ ಒಡೆಯ (ಇಂದ್ರ); ಸುತ: ಪುತ್ರ; ಎದ್ದು: ಮೇಲೇಳು; ನಿವಹ: ಗುಂಪು; ಸಾರು: ಹತ್ತಿರಕ್ಕೆ ಬರು; ಲಗ್ಗೆ: ಆಕ್ರಮಣ; ರವ: ಶಬ್ದ; ನಿಲಿಸು: ನಿಲ್ಲು; ಘನ: ಗಟ್ಟಿ; ಗಂಭೀರ: ಆಳವಾದ, ಗಹನವಾದ; ನಾದ: ಶಬ್ದ;

ಪದವಿಂಗಡಣೆ:
ಶಿವಶಿವಾ +ಬಳಲಿದುದು +ಬಲವಗಿದ್
ಅವಗಡಿಸಿದುದು +ನಿದ್ದೆ +ನೂಕದು
ಬವರವ್+ಉಬ್ಬಿದ +ತಿಮಿರವಳಿಯಲಿ +ಸಾಕು +ರಣವೆನುತ
ದಿವಿಜಪತಿಸುತನ್+ಎದ್ದು +ಸೇನಾ
ನಿವಹದಲಿ +ಸಾರಿದನು +ಲಗ್ಗೆಯ
ರವವ+ ನಿಲಿಸಿದನ್+ಅಖಿಳ +ಘನಗಂಭೀರ+ನಾದದಲಿ +ಪಾರ್ಥ

ಅಚ್ಚರಿ:
(೧) ಅರ್ಜುನನನ್ನು ದಿವಿಜಪತಿಸುತ ಎಂದು ಕರೆದಿರುವುದು
(೨) ಬವರ, ರಣ – ಸಮಾನಾರ್ಥಕ ಪದಗಳು

ಪದ್ಯ ೪೭: ದುಶ್ಯಾಸನ ಮತ್ತು ಅಭಿಮನ್ಯುವಿನ ಯುದ್ಧ ಹೇಗೆ ನಡೆಯಿತು?

ಅವನ ನೂರಂಬುಗಳ ಕಡಿದವ
ನವಯವವ ಕೀಲಿಸಿದಡಾಕ್ಷಣ
ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ
ಅವಗಡಿಸಿ ಖಾತಿಯಲಿ ಖಳ ಶರ
ನಿವಹವನು ತುಡುಕಿದನು ಕೊಡಹಿದ
ವವನು ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು (ದ್ರೋಣ ಪರ್ವ, ೫ ಸಂಧಿ, ೪೭ ಪದ್ಯ
)

ತಾತ್ಪರ್ಯ:
ದುಶ್ಯಾಸನನ ನೂರು ಬಾಣಗಳನ್ನು ಕಡಿದು ಅಭಿಮನ್ಯುವು ಲೆಕ್ಕವಿಲ್ಲದಷ್ಟು ಬಾಣಗಳಿಂದ ಅವನ ಮೇಲೆ ಬಿಡಲು, ದುಶ್ಯಾಸನನ ಪಕ್ಕೆಯಲ್ಲಿ ಅವನ ಕರುಳುಗಳು ಬಿದ್ದಹಾಗಾದವು. ಅದನ್ನು ಸಹಿಸಿಕೊಂಡು ದುಶ್ಯಾಸನನು ಬಾಣಗಳನ್ನು ಬಿಡಲು, ಅವನ್ನು ಅಭಿಮನ್ಯುವಿನ ಬಾಣಗಳು ತುಂಡುಮಾಡಿದವು.

ಅರ್ಥ:
ನೂರು: ಶತ; ಅಂಬು: ಬಾಣ; ಕಡಿ: ಸೀಳು; ಅವಯವ: ಅಂಗ; ಕೀಲಿಸು: ಜೋಡಿಸು, ನಾಟು; ಕ್ಷಣ: ಸಮಯ; ಅವನಿ: ಭೂಮಿ; ಬಲು: ಬಹಳ ಕರುಳು: ಪಚನಾಂಗ; ಬಿದ್ದು: ಬೀಳು; ಭಟ: ಸೈನಿಕ; ಕಿಬ್ಬರಿ: ಪಕ್ಕೆಯ ಕೆಳ ಭಾಗ; ಅವಗಡಿಸು: ಕಡೆಗಣಿಸು; ಖಾತಿ: ಕೋಪ, ಕ್ರೋಧ; ಖಳ: ದುಷ್ಟ; ಶರ: ಬಾಣ; ನಿವಹ: ಗುಂಪು; ತುಡುಕು: ಹೋರಾಡು, ಸೆಣಸು; ಕೊಡಹು: ಬೀಳಿಸು, ತಳ್ಳು; ನಿಮಿಷ: ಕ್ಷಣಮಾತ್ರದಿ; ಆತ್ಮಕ: ಮಗ; ಅಗಣಿತ: ಲೆಕ್ಕವಿಲ್ಲದಷ್ಟು; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಅವನ+ ನೂರಂಬುಗಳ +ಕಡಿದವನ್
ಅವಯವವ +ಕೀಲಿಸಿದಡ್+ಆ+ಕ್ಷಣವ್
ಅವನಿಯಲಿ +ಬಲುಗರುಳು +ಬಿದ್ದವು +ಭಟನ +ಕಿಬ್ಬರಿಯ
ಅವಗಡಿಸಿ +ಖಾತಿಯಲಿ +ಖಳ +ಶರ
ನಿವಹವನು +ತುಡುಕಿದನು +ಕೊಡಹಿದವ್
ಅವನು +ನಿಮಿಷದೊಳ್+ಅರ್ಜುನಾತ್ಮಕನ್+ಅಗಣಿತ+ಅಸ್ತ್ರಗಳು

ಅಚ್ಚರಿ:
(೧) ಅವನ, ಅವನಿ, ಅವಯವ, ಅವನು, ಅವಗಡಿಸು – ಪದಗಳ ಬಲಕೆ

ಪದ್ಯ ೪೩: ಪಾಳಯಕ್ಕೆ ಹಿಂದಿರುಗಿದ ಪಾಂಡವರ ಮನದ ಭಾವ ಹೇಗಿತ್ತು?

ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ (ಭೀಷ್ಮ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪಾಂಡವರು ಭೀಷ್ಮನನ್ನು ಬೀಳುಕೊಂಡು ಒಮ್ಮೆ ಸಂತಸ ಒಮ್ಮೆ ಭೀಷ್ಮನಿಗೆ ತಪ್ಪಿದೆವೆಂಬ ದುಃಖಗಳ ಕವಲು ಮನಸ್ಸಿನಿಂದ ವೀರ ನಾರಾಯಣನ ಕರುಣೆಯಿಂದ ತಮ್ಮ ಶಿಬಿರಗಳನ್ನು ಹೊಕ್ಕರು.

ಅರ್ಥ:
ಬೀಳುಕೊಂಡು: ತೆರಳು; ಉತ್ಸವ: ಸಂಭ್ರಮ; ಹರುಷ: ಸಂತಸ; ಭವ: ಹುಟ್ಟು; ತಪ್ಪು: ಸರಿಯಲ್ಲದ; ದುಗುಡ: ದುಃಖ; ಭಾರ: ಹೊರೆ; ಚಿಂತಿಸು: ಯೋಚಿಸು; ಕವಲು: ಟಿಸಿಲು, ಭಿನ್ನತೆ; ಮನ: ಮನಸ್ಸು; ಕಂಪಿಸು: ನಡುಗು; ಶಿಬಿರ: ಪಾಳೆಯ; ಹೊಕ್ಕು: ಸೇರು; ನಿಖಿಲ: ಎಲ್ಲಾ; ನಿವಹ: ಗುಂಪು; ಸಹಿತ: ಜೊತೆ; ಕರುಣ: ದಯೆ;

ಪದವಿಂಗಡಣೆ:
ಇವರು +ಭೀಷ್ಮನ +ಬೀಳುಕೊಂಡ್
ಉತ್ಸವದ +ಹರುಷದಲ್+ಒಮ್ಮೆ+ ಗಂಗಾ
ಭವಗೆ +ತಪ್ಪಿದ +ದುಗುಡ +ಭಾರದಲ್+ಒಮ್ಮೆ +ಚಿಂತಿಸುತ
ಕವಲು +ಮನದಲಿ +ಕಂಪಿಸುತ +ಶಿಬಿ
ರವನು +ಹೊಕ್ಕರು +ನಿಖಿಲ +ಸೇನಾ
ನಿವಹ +ಸಹಿತವೆ +ವೀರ +ನಾರಾಯಣನ +ಕರುಣದಲಿ

ಅಚ್ಚರಿ:
(೧) ಪಾಂಡವರ ಸ್ಥಿತಿ – ಕವಲು ಮನದಲಿ ಕಂಪಿಸುತ ಶಿಬಿರವನು ಹೊಕ್ಕರು

ಪದ್ಯ ೫೦: ಯುದ್ಧದಲ್ಲಿ ಯಾವುದು ವಿನೋದವಾಗಿ ಕಂಡಿತು?

ಸವೆದು ಸವೆಯದು ಪೂತು ಮಝ ಕೌ
ರವನ ಸೇನಾಜಲಧಿ ನಾಯಕ
ನಿವಹವನಿತುವ ನೂಕಿ ಸವೆಯರು ಗುರುಸುತಾದಿಗಳು
ಕವಿಯಲೀ ಬಲ ಮತ್ತೆ ಸಂದಣಿ
ತವಕಿಸಲಿ ತಾವನಿಬರುರೆ ಮಗು
ಳವಗಡಿಸಲಿ ವಿನೋದವೈಸಲೆಯೆನುತ ನರನೆಚ್ಚ (ಭೀಷ್ಮ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಭಲೇ ಕೌರವ ಸೈನ್ಯದ ಸತ್ವವು ಕಡಿಮೆಯಾದರೂ ಮತ್ತೆ ಬಂದು ಮುತ್ತಿಗೆ ಹಾಕಿತು. ಅಶ್ವತ್ಥಾಮನೇ ಮೊದಲಾದ ದಳಪತಿಗಳು ಸೈನ್ಯವನ್ನು ಕೊಲ್ಲಿಸುವರೇ ಹೊರತು ತಾವು ಸುರಕ್ಷಿತವಾರಿಗುತ್ತಾರೆ. ಸೈನ್ಯವು ಈಗ ಮತ್ತೆ ಮುತ್ತುತ್ತಿದೆ, ಮತ್ತೆ ಸಾಯುತ್ತಿದೆ, ದಳಪತಿಗಳು ಮತ್ತೆ ಬರಲೇಬೇಕು, ಇದು ಎಂತಹ ವಿನೋದ ಎಂದು ಅರ್ಜುನನು ಕೌರವ ಸೈನ್ಯದ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಸವೆ: ಕಡಿಮೆಯಾಗು; ಪೂತು: ಭಲೇ; ಮಝ:ಕೊಂಡಾಟದ ಮಾತು; ಸೇನಾಜಲಧಿ: ಸೈನ್ಯ ಸಾಗರ; ನಾಯಕ: ಒಡೆಯ; ನಿವಹ: ಗುಂಪು; ನೂಕು: ತಳ್ಳು; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಕವಿ: ಆವರಿಸು; ಬಲ: ಶಕ್ತಿ, ಸೈನ್ಯ; ಸಂದಣಿ: ಗುಂಪು; ತವಕ: ಬಯಕೆ, ಆಸೆ; ಅನಿಬರ: ಆಷ್ಟುಜನ; ಅವಗಡಿಸು: ಕಡೆಗಣಿಸು; ವಿನೋದ: ವಿಹಾರ, ಕ್ರೀಡೆ; ಐಸಲೇ: ಅಲ್ಲವೇ; ನರ:ಅರ್ಜುನ; ಎಚ್ಚು: ಬಾಣಗಳನ್ನು ಬಿಡು;

ಪದವಿಂಗಡಣೆ:
ಸವೆದು +ಸವೆಯದು +ಪೂತು +ಮಝ +ಕೌ
ರವನ +ಸೇನಾಜಲಧಿ+ ನಾಯಕ
ನಿವಹವನಿತುವ+ ನೂಕಿ +ಸವೆಯರು +ಗುರುಸುತಾದಿಗಳು
ಕವಿಯಲೀ +ಬಲ+ ಮತ್ತೆ+ ಸಂದಣಿ
ತವಕಿಸಲಿ +ತಾವ್+ಅನಿಬರ್+ಉರೆ +ಮಗುಳ್
ಅವಗಡಿಸಲಿ +ವಿನೋದವ್+ಐಸಲೆ+ಎನುತ +ನರನ್+ಎಚ್ಚ

ಅಚ್ಚರಿ:
(೧) ವಿರುದ್ದ ಪದಗಳ ಬಳಕೆ – ಸವೆದು, ಸವೆಯದು
(೨) ಸೇನೆಯ ಗಾತ್ರವನ್ನು ವರ್ಣಿಸಲು – ಸೇನಾಜಲಧಿ

ಪದ್ಯ ೩: ಮಾಂಸಖಂಡಗಳು ಹೇಗೆ ಕಂಡವು?

ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹಯವನಡೆಗೆಡೆ
ವಾನೆಗಳ ಹೊದರೆದ್ದು ಮುಗ್ಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ
ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ (ಭೀಷ್ಮ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ಉಭಯ ಸೈನ್ಯಗಳಲ್ಲೂ ಕುದುರೆ, ಆನೆ, ರಥ, ಅಶ್ವ, ಯೋಧರು ಕಡಿದ ಪರಿಣಾಮವಾಗಿ ತುಂಡಾದ ಮಾಂಸ ರಕ್ತಗಳು ಬೆಟ್ಟ ಹೊಳೆಗಳಂತೆ ಕಾಣಿಸಿದವು.

ಅರ್ಥ:
ಹೇಳು: ತಿಳಿಸು; ಉಭಯ: ಎರಡು; ಬಲ: ಸೈನ್ಯ; ಲೂನ: ಕತ್ತರಿಸಿದ, ಕಡಿದ; ನಿವಹ: ಗುಂಪು; ಹಯ: ಕುದುರೆ; ಅಡೆ: ಅಡ್ಡ; ಕೆಡೆ: ಬೀಳು, ಕುಸಿ; ಆನೆ: ಕರಿ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ಮುಗ್ಗು: ಬಾಗು, ಮಣಿ; ರಥ: ಬಂಡಿ; ವಾಜಿ: ಕುದುರೆ; ಮಾನವ: ಮನುಷ್ಯ; ಕಡಿ: ಸೀಳು; ಖಂಡ: ತುಂಡು, ಚೂರು; ದೊಂಡೆ: ಗಂಟಲು, ಕಂಠ; ಹರಿ: ಸಾಗು; ರುಧಿರ: ರಕ್ತ; ಅಂಭೋನಿಧಿ: ಸಾಗರ; ಅಂಬು: ನೀರು; ಹರಹು: ವಿಸ್ತಾರ, ವೈಶಾಲ್ಯ; ಪೂರದ: ಪೂರ್ತಿ, ನೆರೆ; ವಿಗಡ: ಶೌರ್ಯ, ಪರಾಕ್ರಮ; ವಿಗ್ರಹ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಉಭಯ +ಬಲದಲಿ
ಲೂನ +ನಿವಹದ +ಹಯವನ್+ಅಡೆ+ಕೆಡೆವ್
ಆನೆಗಳ +ಹೊದರೆದ್ದು+ ಮುಗ್ಗಿದ+ ರಥದ+ ವಾಜಿಗಳ
ಮಾನವರ+ ಕಡಿ+ಖಂಡ +ದೊಂಡೆಯನ್
ಏನನೆಂಬೆನು+ ಹರಿವ+ ರುಧಿರ
ಅಂಭೋನಿಧಿಯ +ಹರಹುಗಳ+ ಪೂರದ+ ವಿಗಡ+ ವಿಗ್ರಹವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿವ ರುಧಿರಾಂಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ

ಪದ್ಯ ೧: ಸೈನ್ಯವು ಯಾರ ಅಪ್ಪಣೆಗೆ ಕಾದಿತ್ತು?

ಅವಧರಿಸು ಧೃತರಾಷ್ಟ್ರ ಗಂಗಾ
ಭವನ ಸುಯಿಧಾನದಲಿ ಕುರುಬಲ
ನಿವಹ ಧೃಷ್ಟದ್ಯುಮ್ನ್ಯನಾರೈಕೆಯಲಿ ರಿಪುಸೇನೆ
ತವಕ ಮಿಗೆ ಮೋಹರಿಸಿ ಕೈವೀ
ಸುವ ಮಹೀಶರನೀಕ್ಷಿಸುತಲಾ
ಹವ ಮಹೋದ್ಯೋಗಕ್ಕೆ ಬೆರಗಾಯಿತ್ತು ಸುರಕಟಕ (ಭೀಷ್ಮ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧವನ್ನು ವಿವರಿಸುತ್ತಾ, ಕೇಳು ರಾಜ, ಭೀಷ್ಮನು ರಕ್ಷಿಸುತ್ತಿದ್ದ ಕೌರವ ಸೈನ್ಯವೂ, ಧೃಷ್ಟದ್ಯುಮ್ನನು ರಕ್ಷಿಸುತ್ತಿದ್ದ ಪಾಂಡವರ ಸೈನ್ಯವು ಯುದ್ಧಾರಂಭವಾಗುವುದಕ್ಕೆ ನಾಯಕರು ಯಾವಾಗ ಕೈಬೀಸಿ ಅಪ್ಪಣೆ ಕೊಡುವರೋ ಎಂದು ತಮ್ಮ ರಾಜರನ್ನು ನೋಡುತ್ತಾ ಕಾಯುತ್ತಿದ್ದರು, ಅವನ್ನು ನೋಡಿ ದೇವತೆಗಳು ಬೆರಗಾದರು.

ಅರ್ಥ:
ಅವಧರಿಸು: ಕೇಳು; ಗಂಗಾಭವ: ಗಂಗೆಯಿಂದ ಹುಟ್ಟಿದ (ಭೀಷ್ಮ); ಸುಯಿಧಾನ: ರಕ್ಷಣೆ; ನಿವಹ: ಗುಂಪು; ಆರೈಕೆ: ಪೋಷಣೆ; ರಿಪು: ವೈರಿ; ಸೇನೆ: ಸೈನ್ಯ; ತವಕ: ಬಯಕೆ, ಆತುರ; ಮಿಗೆ: ಅಧಿಕ; ಮೋಹರ: ಯುದ್ಧ; ಕೈ: ಹಸ್ತ; ವೀಸು: ಬೀಸು, ತೂಗಾಡು; ಮಹೀಶ: ರಾಜ; ಈಕ್ಷಿಸು: ನೋಡು; ಆಹವ: ಯುದ್ಧ; ಮಹಾ: ದೊಡ್ಡ; ಉದ್ಯೋಗ: ಕಾರ್ಯ, ಕೆಲಸ; ಬೆರಗು: ಆಶ್ಚರ್ಯ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಅವಧರಿಸು +ಧೃತರಾಷ್ಟ್ರ +ಗಂಗಾ
ಭವನ +ಸುಯಿಧಾನದಲಿ +ಕುರುಬಲ
ನಿವಹ+ ಧೃಷ್ಟದ್ಯುಮ್ನ್ಯನ್+ಆರೈಕೆಯಲಿ +ರಿಪುಸೇನೆ
ತವಕ+ ಮಿಗೆ +ಮೋಹರಿಸಿ +ಕೈ+ವೀ
ಸುವ +ಮಹೀಶರನ್+ಈಕ್ಷಿಸುತಲ್
ಆಹವ +ಮಹ+ಉದ್ಯೋಗಕ್ಕೆ +ಬೆರಗಾಯಿತ್ತು +ಸುರ+ಕಟಕ

ಅಚ್ಚರಿ:
(೧) ನಿವಹ, ಕಟಕ; ಮೋಹರ, ಆಹವ;ಸುಯಿಧಾನ, ಆರೈಕೆ – ಸಮನಾರ್ಥಕ ಪದಗಳು

ಪದ್ಯ ೧೪: ಅಭಿಮನ್ಯುವಿನ ಪರಾಕ್ರಮವೆಂತಹುದು?

ಅವರ ಹೊರೆಯಲಿ ಫಲುಗುಣಗೆ ಮಲೆ
ವವರ ಗಂಡನು ರಿಪುಕುಮಾರಕ
ನಿವಹ ಕಾಳಾನಳನು ನೋಡಭಿಮನ್ಯುವರ್ಜುನನ
ಕುವರನಿವ ಮಗುವಲ್ಲ ಬಲುಗೆ
ಯ್ಯವನ ಮೋಹರದೊತ್ತಿನಲಿ ನಿಂ
ದವರು ಸಾತ್ಯಕಿ ಚೇಕಿತಾನ ಪ್ರಮುಖ ನಾಯಕರು (ಭೀಷ್ಮ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ದುರ್ಯೋಧನ ಘಟೋತ್ಕಚನ ಸೈನ್ಯದ ಹತ್ತಿರವೇ, ಅರ್ಜುನನ ಶತ್ರುಗಳ ಗಂಡನೂ, ಶತ್ರುಕುಮಾರರಿಗೆ ಕಾಲಗ್ನಿಯೂ ಆದ ಅಭಿಮನ್ಯುವಿದ್ದಾನೆ, ಅವನು ಬಾಲಕನಲ್ಲ, ಮಹಾಪ್ರತಾಪಿ, ಅವನ ಸೈನ್ಯದ ಬಳಿಯಲ್ಲೇ ಸಾತ್ಯಕಿ ಚೇಕಿತಾನ ಮೊದಲಾದ ನಾಯಕರಿದ್ದಾರೆ.

ಅರ್ಥ:
ಹೊರೆ: ಹತ್ತಿರ, ಸಮೀಪ; ಮಲೆ: ಪ್ರತಿಭಟಿಸು; ಗಂಡ: ಶೂರ; ರಿಪು: ವೈರಿ; ಕುಮಾರ: ಮಗ; ನಿವಹ: ಗುಂಫು; ಕಾಳಾನಳ: ಪ್ರಳಯಕಾಲದ ಬೆಂಕಿ; ನೋಡು: ವೀಕ್ಷಿಸು; ಕುವರ: ಮಗ; ಮಗು: ಚಿಕ್ಕವ; ಬಲುಗೆಯ್ಯವ: ಪರಾಕ್ರಮಿ; ಮೋಹರ: ಸೈನ್ಯ, ದಂಡು, ಯುದ್ಧ; ಒತ್ತು: ಹತ್ತಿರ; ಪ್ರಮುಖ: ಮುಖ್ಯರಾದ; ನಾಯಕ: ಒಡೆಯ;

ಪದವಿಂಗಡಣೆ:
ಅವರ+ ಹೊರೆಯಲಿ +ಫಲುಗುಣಗೆ +ಮಲೆ
ವವರ+ ಗಂಡನು +ರಿಪು+ಕುಮಾರಕ
ನಿವಹ+ ಕಾಳಾನಳನು +ನೋಡ್+ಅಭಿಮನ್ಯುವ್+ಅರ್ಜುನನ
ಕುವರನ್+ಇವ +ಮಗುವಲ್ಲ +ಬಲುಗೆ
ಯ್ಯವನ+ ಮೋಹರದ್+ಒತ್ತಿನಲಿ +ನಿಂ
ದವರು +ಸಾತ್ಯಕಿ +ಚೇಕಿತಾನ+ ಪ್ರಮುಖ +ನಾಯಕರು

ಅಚ್ಚರಿ:
(೧) ಅಭಿಮನ್ಯುವಿನ ಗುಣಗಾನ – ರಿಪುಕುಮಾರಕನಿವಹ ಕಾಳಾನಳನು, ಕುವರನಿವ ಮಗುವಲ್ಲ ಬಲುಗೆ
ಯ್ಯವನ

ಪದ್ಯ ೧೨: ವಿರಾಟನು ಕಂಕನಿಗೆ ಯಾವ ಅಪ್ಪಣೆಯನ್ನು ನೀಡಿದನು?

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯ ಶ್ರವಣ ಸುಖಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು (ವಿರಾಟ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವರು ರಾಜ್ಯವನ್ನು ಪಣವಾಗಿ ಒಡ್ಡಿ ಸೋತು ಕೆಟ್ಟರು, ಆದರೆ ನಾನು ಪಣವನ್ನು ಇಡುತ್ತಿಲ್ಲ, ಏನೋ ಮಗನ ಏಳಿಗೆಯನ್ನು ಕಂಡು ಅತೀವ ಸಂತಸವಾಗಿದೆ, ಈ ಉತ್ಸವ ಕಾಲದಲ್ಲಿ ಪಗಡೆಯಾಡೋಣವೆಂಬ ಬಯಕೆಯಾಗಿದೆ, ಪಗಡೆಯ ಹಾಸನ್ನು ಹಾಕು, ಕಾಯಿಗಳನ್ನು ಹೂಡು ಎಂದು ವಿರಾಟನು ಹೇಳಲು, ಕಂಕನು ರಾಜನ ಆಜ್ಞೆಯನ್ನು ಪಾಲಿಸಲು ಕಾಯಿಗಳನ್ನು ಹೂಡಿ ದಾಳಗಳನ್ನು ಹಾಕಿದನು.

ಅರ್ಥ:
ರಾಜ್ಯ: ರಾಷ್ಟ್ರ; ಒಡ್ಡು: ನೀಡು; ಸೋಲು: ಪರಾಭವ; ಪಣ: ಜೂಜಿಗೆ ಒಡ್ಡಿದ ವಸ್ತು; ಬೇರೆ: ಅನ್ಯ; ಹರ್ಷ: ಸಂತಸ; ಕುಮಾರ: ಮಕ್ಕಳು; ಅಭ್ಯುದಯ: ಏಳಿಗೆ; ವಿಜಯ: ಗೆಲುವು; ಶ್ರವಣ: ಕಿವಿ, ಕೇಳುವಿಕೆ; ಸುಖ: ನೆಮ್ಮದಿ, ಸಂತಸ; ಮನ: ಮನಸ್ಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನಿವಹ: ಗುಂಪು; ಹೂಡು: ಅಣಿಗೊಳಿಸು; ಅವನಿಪತಿ: ರಾಜ; ನಸುನಗು: ಮಂದಸ್ಮಿತ; ಹಾಸಂಗಿ: ಪಗಡೆಯ ಹಾಸು; ಹಾಯ್ಕು: ಇಡು, ಇರಿಸು;

ಪದವಿಂಗಡಣೆ:
ಅವರು +ರಾಜ್ಯವನೊಡ್ಡಿ +ಸೋತವೊಲ್
ಎವಗೆ +ಪಣ +ಬೇರಿಲ್ಲ +ಹರ್ಷೋ
ತ್ಸವ+ ಕುಮಾರ+ಅಭ್ಯುದಯ +ವಿಜಯ +ಶ್ರವಣ +ಸುಖಮಿಗಲು
ಎವಗೆ +ಮನವಾಯ್ತ್+ಒಡ್ಡು +ಸಾರಿಯ
ನಿವಹವನು +ಹೂಡೆನಲು +ಹೂಡಿದನ್
ಅವನಿಪತಿ +ನಸುನಗುತ +ಹಾಸಂಗಿಯನು +ಹಾಯ್ಕಿದನು

ಅಚ್ಚರಿ:
(೧) ಹೂಡೆನಲು ಹೂಡಿದನು, ಹಾಸಂಗಿಯ ಹಾಯ್ಕಿದನು – ಒಂದೇ ಅಕ್ಷರದ ಜೋಡಿ ಪದಗಳು