ಪದ್ಯ ೪: ವ್ಯಾಸರು ಪಾಂಡವರಬಗ್ಗೆ ಏನು ಹೇಳಿದರು?

ಸೈರಿಸಿದರೇ ಪಾಂಡುಸುತರಂ
ಭೋರುಹಾಕ್ಷಿ ರಜಸ್ವಲೆಯ ಸುಲಿ
ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ
ವೈರಬಂಧದ ವಿವಿಧ ವಿಷಮ ವಿ
ಕಾರದಲಿ ವಿರ್ಗ್ರಹಮುಖವ ವಿ
ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ (ಗದಾ ಪರ್ವ, ೧೧ ಸಂಧಿ, ೪ ಪದ್ಯ)

ತಾತ್ಪರ್ಯ:
ಅದನ್ನ್ ಪಾಂಡವರು ಸೈರಿಸಿದರೇ? ರಜಸ್ವದ ಅಲೆಯಾದ ದ್ರೌಪದಿಯ ಸೀರೆಯನ್ನು ಸುಲಿದಾಗ ಅದಕ್ಕೂ ಮೊದಲು ಅರಗಿನ ಮನೆಯನ್ನು ಸುಟ್ಟಾಗ, ವೈರವನ್ನು ವಿವಿಧ ರೀತಿಗಳಲ್ಲಿ ವ್ಯಕ್ತಪಡಿಸಿದಾಗ ಅವರು ಸೈರಿಸಲಿಲ್ಲವೇ? ಯುದ್ಧಕ್ಕೆ ಬಂದರೇ? ಪಾಂಡವರು ಉತ್ತಮರೇ? ಹೇಳು ಎಂದು ವ್ಯಾಸರು ಕೇಳಿದರು.

ಅರ್ಥ:
ಸೈರಿಸು: ತಾಳು, ಸಹಿಸು; ಸುತ: ಮಕ್ಕಳು; ಅಂಬೋರುಹ: ಕಮಲ; ಅಕ್ಷಿ: ಕಣ್ಣು; ರಜ: ಮೂರು ಗುಣಗಳಲ್ಲಿ ಒಂದು; ಅಲೆ: ತೆರೆ; ಸುಲಿ: ತೆಗೆ, ಕಳಚು; ಸೀರೆ: ಬಟ್ಟೆ; ಪೂರ್ವ: ಹಿಂದಿನ; ಕೃತ: ಕೆಲಸ; ಜತು: ಅರಗು, ಲಾಕ್ಷ; ಗೇಹ: ಮನೆ; ದಾಹ: ಉರಿ, ಕಿಚ್ಚು; ವೈರ: ಶತ್ರು; ಬಂಧ: ಕಟ್ಟು, ಬಂಧನ; ವಿವಿಧ: ಹಲವರು; ವಿಷಮ: ಸಮವಾಗಿಲ್ಲದಿರುವುದು, ಕಷ್ಟ ಪರಿಸ್ಥಿತಿ; ವಿಕಾರ: ಮಾರ್ಪಾಟು; ವಿಗ್ರಹ: ರೂಪ; ಯುದ್ಧ; ಮುಖ: ಆನನ; ವಿಸ್ತಾರಿಸು: ಹರಡು; ಸುತ: ಮಗ; ಉತ್ತಮ: ಶ್ರೇಷ್ಠ; ಹೇಳು: ತಿಳಿಸು;

ಪದವಿಂಗಡಣೆ:
ಸೈರಿಸಿದರೇ+ ಪಾಂಡುಸುತರ್
ಅಂಭೋರುಹಾಕ್ಷಿ+ ರಜಸ್ವಲೆಯ+ ಸುಲಿ
ಸೀರೆಯಲಿ +ತತ್ಪೂರ್ವ+ಕೃತ +ಜತುಗೇಹ+ದಾಹದಲಿ
ವೈರಬಂಧದ +ವಿವಿಧ +ವಿಷಮ +ವಿ
ಕಾರದಲಿ +ವಿಗ್ರಹ+ಮುಖವ+ ವಿ
ಸ್ತಾರಿಸಿದರೇ+ ಪಾಂಡುಸುತರ್+ಉತ್ತಮರೆ +ಹೇಳೆಂದ

ಅಚ್ಚರಿ:
(೧) ದ್ರೌಪದಿಯನ್ನು ಅಂಭೋರುಹಾಕ್ಷಿ ಎಂದು ಕರೆದಿರುವುದು
(೨) ವ ಕಾರದ ಸಾಲು ಪದ – ವೈರಬಂಧದ ವಿವಿಧ ವಿಷಮ ವಿಕಾರದಲಿ ವಿರ್ಗ್ರಹಮುಖವ ವಿಸ್ತಾರಿಸಿದರೇ

ಪದ್ಯ ೪೯: ಕೃಷ್ಣನು ಧರ್ಮಜನ ನಿರ್ಧಾರವನ್ನೇಕೆ ಟೀಕಿಸಿದ?

ಮರುಳೆ ನೀ ಹೆಚ್ಚಾಳುತನಕು
ಬ್ಬರಿಸಿ ನುಡಿದೆ ಸುಯೋಧನನ ನೀ
ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ
ಸರಿಸದಲಿ ಮಲೆತವನು ಜೀವಿಸಿ
ಮರಳರರಿವನೆ ನಮ್ಮೊಳೊಬ್ಬನ
ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ (ಗದಾ ಪರ್ವ, ೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮಜನನ್ನು ಕರೆದು, ಎಲೈ ಧರ್ಮಜು ನೀನು ಮಾಢನಾಗಿ ವರ್ತಿಸಿದೆ. ದೊಡ್ಡಸ್ತಿಕೆ ತೋರಿಸಿ ಏನೋ ಹೇಳಿಬಿಟ್ಟೆ. ಸುಯೋಧನನ ಇದಿರು ಯುದ್ಧದಲ್ಲಿ ನಿಂತವನು ಯುದ್ದರಂಗದಿಂದ ಬದುಕಿ ಹೊರಬರಲು ಸಾಧ್ಯವೇ? ನಮ್ಮಲ್ಲಿ ಒಬ್ಬನನ್ನು ಯುದ್ಧಕ್ಕೆ ಆರಿಸಿಕೋ ಎಂದು ಹೇಳಿ ನೀನು ನಮ್ಮನ್ನು ಕೊಂದೆ ಎಂದು ಹೇಳಿದನು.

ಅರ್ಥ:
ಮರುಳ: ಮೂಢ; ಹೆಚ್ಚು: ಅಧಿಕ; ಆಳುತನ: ಶೂರತನ, ದಿಟ್ಟತನ; ಉಬ್ಬರಿಸು: ಅಧಿಕ, ಹೆಚ್ಚು; ನುಡಿ: ಮಾತು; ಅರಿ: ತಿಳಿ; ಕೈ: ಹಸ್ತ; ಬಂದು: ಆಗಮಿಸು; ಕದನಭೂಮಿ: ರಣರಂಗ; ಸರಿಸ: ನೇರವಾಗಿ; ಮಲೆತ: ಗರ್ವಿಸಿದ, ಸೊಕ್ಕಿದ; ಜೀವಿಸು: ಬದುಕಿಸು; ಮರಳು: ಹಿಂದಿರುಗು; ವರಿಸು: ಕೈಹಿಡಿ, ಒಪ್ಪಿಕೊಳ್ಳು; ವಿಗ್ರಹ: ರೂಪ; ಯುದ್ಧ; ಕೊಂದೆ: ಸಾಯಿಸಿದೆ;

ಪದವಿಂಗಡಣೆ:
ಮರುಳೆ+ ನೀ +ಹೆಚ್ಚಾಳುತನಕ್
ಉಬ್ಬರಿಸಿ+ ನುಡಿದೆ +ಸುಯೋಧನನ+ ನೀನ್
ಅರಿಯಲಾಗದೆ+ ಕೈಗೆ +ಬಂದರೆ +ಕದನಭೂಮಿಯಲಿ
ಸರಿಸದಲಿ+ ಮಲೆತವನು +ಜೀವಿಸಿ
ಮರಳರ್+ಅರಿವನೆ+ ನಮ್ಮೊಳೊಬ್ಬನ
ವರಿಸು +ವಿಗ್ರಹಕೆಂದು +ನಮ್ಮನು +ಕೊಂದೆ +ನೀನೆಂದ

ಅಚ್ಚರಿ:
(೧) ಸುಯೋಧನನ ಪರಾಕ್ರಮ – ಸರಿಸದಲಿ ಮಲೆತವನು ಜೀವಿಸಿ ಮರಳರರಿವನೆ

ಪದ್ಯ ೨೨: ಭೀಮನೆದುರು ರಾಜರು ಹೇಗೆ ನಾಶರಾದರು?

ತನತನಗೆ ಮುಂಕೊಂಡು ಸಂಗರ
ವೆನಗೆ ತನಗೆಂಬಖಿಳವೀರಾ
ವನಿಪರಹಮಿಕೆಯಿಂದ ಹೊಯ್ದರು ಪವನನಂದನನ
ಮೊನೆಯಲಗಿನಂಬುಗಳ ಬಿರುಸರಿ
ಗನಿಬರಂಗವ ತೆತ್ತುವಾತಾ
ಯನಿತವಿಗ್ರಹವಾಯ್ತು ನಿಗ್ರಹದತಿಮಹಾರಥರು (ದ್ರೋಣ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ವೀರರಾದ ರಾಜರು, ನಾ ಮುಂದು ತಾ ಮುಂದು ಎಂದು ನುಗ್ಗಿ ಅಹಂಕಾರದಿಂದ ಭೀಮನನ್ನು ಹೊಯ್ದರು. ಮೊನೆಯಾದ ಅಲಗಿನಿಂದ ಅವರೆಲ್ಲರನ್ನೂ ಭೀಮನು ಘಾತಿಸಲು, ಅವರೆಲ್ಲರೂ ಗವಾಕ್ಷಿಯೊಳಗೆ ತೂರಿಸಿದ ವಿಗ್ರಹದಂತೆ ಮುಳುಗಿ ಹೋಗಿ ಕಾಣೆಯಾದರು.

ಅರ್ಥ:
ಸಂಗರ: ಯುದ್ಧ; ಅಖಿಳ: ಎಲ್ಲಾ; ವೀರ: ಶೂರ; ಅವನಿಪ: ರಾಜ; ಅಹಂ: ಅಹಂಕಾರ; ಹೊಯ್ದು: ಹೋರಾಡು; ಪವನ: ವಾಯು; ನಂದನ: ಪುತ್ರ; ಮೊನೆ: ತುದಿ, ಚೂಪು; ಅಲಗು: ಆಯುಧಗಳ ಹರಿತವಾದ ಅಂಚು; ಅಂಬು: ಬಾಣ; ಬಿರುಸು: ವೇಗ; ಅರಿ: ಚುಚ್ಚು; ಅನಿಬರು: ಅಷ್ಟು ಜನ; ಅಂಗ: ದೇಹದ ಭಾಗ; ತೆತ್ತು: ತಿರಿಚು, ಸುತ್ತು; ವಿಗ್ರಹ: ಮೂರ್ತಿ, ಪ್ರತಿಮೆ; ನಿಗ್ರಹ: ಅಂಕೆ, ಹತೋಟಿ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ತನತನಗೆ +ಮುಂಕೊಂಡು +ಸಂಗರವ್
ಎನಗೆ +ತನಗ್+ಎಂಬ್+ಅಖಿಳ+ವೀರ
ಅವನಿಪರ್+ಅಹಮಿಕೆಯಿಂದ +ಹೊಯ್ದರು +ಪವನನಂದನನ
ಮೊನೆ+ಅಲಗಿನ್+ಅಂಬುಗಳ +ಬಿರುಸರಿಗ್
ಅನಿಬರ್+ಅಂಗವ +ತೆತ್ತುವಾತಾ
ಅನಿತ+ವಿಗ್ರಹವಾಯ್ತು +ನಿಗ್ರಹದ್+ಅತಿ+ಮಹಾರಥರು

ಅಚ್ಚರಿ:
(೧) ವಿಗ್ರಹ, ನಿಗ್ರಹ – ಪ್ರಾಸ ಪದಗಳು
(೨) ವೀರ, ಮಹಾರಥ – ಸಮಾನಾರ್ಥಕ ಪದ

ಪದ್ಯ ೪೫: ದ್ರೋಣನ ಬಾಣಗಳು ಯಾರ ಮೈಯನ್ನು ನಟ್ಟವು?

ಎಲೆ ಮರುಳೆ ಮುಂದಿದ್ದ ನಮ್ಮಯ
ವಿಲಗವನು ಪರಿಹರಿಸಿ ಸೈಂಧವ
ನಳಿವುಪಾಯವ ಮಾಡುಗರುವರು ನುಡಿದು ಕೆಡಿಸುವರೆ
ಅಳವಿಗೊಡು ಕೊಳ್ಳಂಬನೆನುತ
ಗ್ಗಳೆಯನೆಚ್ಚನು ನರನ ಮೆಯ್ಯಲಿ
ತಳಿತವಂಬುಗಳೇನನೆಂಬೆನು ವಿಗಡ ವಿಗ್ರಹವ (ದ್ರೋಣ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ದ್ರೋಣನು ಉತ್ತರಿಸುತ್ತಾ, ಎಲೋ ಮರುಳೇ, ಮುಂದೆಯೇ ನಿಂತಿರುವ ನನ್ನ ಪ್ರತಿರೋಧವನ್ನು ಪರಿಹಾರಮಾಡಿಕೊಂಡು ಆಮೇಲೆ ಸೈಂಧವನ ಸಂಹಾರವನ್ನು ಕುರಿತು ಚಿಂತಿಸು, ಧೀರರು ಆಡಿದ ಮಾತಿಗೆ ತಪ್ಪುವರೇ? ನನ್ನೊಡನೆ ಯುದ್ಧವನ್ನು ಮಾಡು, ಎನ್ನುತ್ತಾ ಬಾಣಗಳನ್ನು ಬಿಡಲು, ಅವು ಅರ್ಜುನನ ಮೈಯಲ್ಲಿ ನಟ್ಟವು.

ಅರ್ಥ:
ಮರುಳ: ಹುಚ್ಚ; ವಿಲಗ: ತೊಂದರೆ, ಕಷ್ಟ; ಪರಿಹರಿಸು: ನಿವಾರಿಸು; ಅಳಿ: ನಾಶ; ಉಪಾಯ: ಯುಕ್ತಿ; ಗರುವ: ಹಿರಿಯ, ಶ್ರೇಷ್ಠ; ನುಡಿ: ಮಾತು; ಕೆಡಿಸು: ಹಾಳುಮಾಡು; ಅಳವಿ: ಶಕ್ತಿ; ಕೊಳ್ಳು: ತೆಗೆದುಕೋ; ಅಂಬು: ಬಾಣ; ಅಗ್ಗಳೆ: ಶ್ರೇಷ್ಠ; ಎಚ್ಚು: ಬಾಣ ಪ್ರಯೋಗ ಮಾಡು; ನರ: ಮನುಷ್ಯ; ಮೆಯ್ಯು: ದೇಹ, ತನು; ತಳಿತ: ಚಿಗುರಿದ; ಅಂಬು: ಬಾಣ; ವಿಗಡ: ಶೌರ್ಯ, ಪರಾಕ್ರಮ; ವಿಗ್ರಹ: ಮೂರ್ತಿ, ಪ್ರತಿಮೆ;

ಪದವಿಂಗಡಣೆ:
ಎಲೆ +ಮರುಳೆ +ಮುಂದಿದ್ದ +ನಮ್ಮಯ
ವಿಲಗವನು +ಪರಿಹರಿಸಿ+ ಸೈಂಧವನ್
ಅಳಿ+ಉಪಾಯವ +ಮಾಡು+ಗರುವರು +ನುಡಿದು +ಕೆಡಿಸುವರೆ
ಅಳವಿಗೊಡು +ಕೊಳ್ಳ್+ಅಂಬನೆನುತ್
ಅಗ್ಗಳೆಯನ್+ಎಚ್ಚನು +ನರನ +ಮೆಯ್ಯಲಿ
ತಳಿತವ್+ಅಂಬುಗಳ್+ಏನನೆಂಬೆನು +ವಿಗಡ +ವಿಗ್ರಹವ

ಅಚ್ಚರಿ:
(೧) ವ ಕಾರದ ಜೋಡಿ ಪದ – ವಿಗಡ ವಿಗ್ರಹವ
(೨) ನೀತಿ ಮಾತು – ಗರುವರು ನುಡಿದು ಕೆಡಿಸುವರೆ

ಪದ್ಯ ೩೪: ಭೀಮನ ಬಾಹುಬಲ ಎಂತಹುದು?

ಭುಜದ ಸಾಹಸ ಹತ್ತು ಸಾವಿರ
ಗಜದ ಘಾಡಿಕೆ ಸಿಂಹನಾದದ
ವಿಜಯ ವಿಗ್ರಹ ವೀರ ಹಳಚಿದನಮಮ ಮದಕರಿಯ
ತ್ರಿಜಗ ತಲೆಕೆಳಗಾಗೆ ದಿವಿಜ
ವ್ರಜ ಭಯಂಗೊಳೆ ಮಿಕ್ಕು ಸುರಪನ
ಗಜದ ಹೊಯ್ಕೈಯ್ಯಾನೆ ಹೆಣಗಿತು ಭೀಮಸೇನನಲಿ (ದ್ರೋಣ ಪರ್ವ, ೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹತ್ತು ಸಾವಿರ ಆನೆಗಳ ಬಲಕ್ಕೆ ಸಮವಾದ ತೋಳ್ಬಲವುಳ್ಳ ಭೀಮನು ಸಿಂಹನಾದಮಾಡುತ್ತಾ ಆನೆಯೊಂದಿಗೆ ಕಾದಿದನು. ಇಂದ್ರನ ಐರಾವತಕ್ಕೆ ಸರಿಮಿಗಿಲಾದ ಸುಪ್ರತೀಕವು ಭೀಮನೊಡನೆ ಹೋರಾಡಿತು.

ಅರ್ಥ:
ಭುಜ: ಬಾಹು; ಸಾಹಸ: ಪರಾಕ್ರಮ; ಸಾವಿರ: ಸಹಸ್ರ; ಗಜ: ಆನೆ; ಘಾಡಿಸು: ವ್ಯಾಪಿಸು; ಸಿಂಹನಾದ: ಗರ್ಜನೆ; ನಾದ: ಶಬ್ದ; ಸಿಂಹ: ಕೇಸರಿ; ವಿಜಯ: ಗೆಲುವು; ವಿಗ್ರಹ: ಯುದ್ಧ; ಹಳಚು: ತಾಗು, ಬಡಿ; ಅಮಮ: ಅಬ್ಬಬ್ಬ; ಮದ: ಅಮಲು, ಮತ್ತು; ಕರಿ: ಆನೆ; ತ್ರಿಜಗ: ಮೂರು ಲೋಕ; ತಲೆ: ಶಿರ; ದಿವಿಜ: ದೈವ; ವ್ರಜ: ಗುಂಪು; ಭಯ: ಅಂಜಿಕೆ; ಮಿಕ್ಕು: ಉಳಿದ; ಸುರಪ: ಇಂದ್ರ; ಗಜ: ಆನೆ; ಸುರಪನಗಜ: ಐರಾವತ; ಹೊಯ್: ಹೊಡೆ; ಹೆಣಗು: ಹೋರಾಡು; ಹೊಯ್ಕೈ: ಸಮಾನ;

ಪದವಿಂಗಡಣೆ:
ಭುಜದ+ ಸಾಹಸ +ಹತ್ತು +ಸಾವಿರ
ಗಜದ +ಘಾಡಿಕೆ +ಸಿಂಹನಾದದ
ವಿಜಯ +ವಿಗ್ರಹ +ವೀರ +ಹಳಚಿದನ್+ಅಮಮ +ಮದಕರಿಯ
ತ್ರಿಜಗ+ ತಲೆಕೆಳಗಾಗೆ+ ದಿವಿಜ
ವ್ರಜ +ಭಯಂಗೊಳೆ +ಮಿಕ್ಕು +ಸುರಪನ
ಗಜದ +ಹೊಯ್ಕೈ+ ಆನೆ +ಹೆಣಗಿತು +ಭೀಮಸೇನನಲಿ

ಅಚ್ಚರಿ:
(೧) ಭೀಮನ ಶಕ್ತಿ – ಭುಜದ ಸಾಹಸ ಹತ್ತು ಸಾವಿರ ಗಜದ ಘಾಡಿಕೆ
(೨) ಭುಜದ, ಗಜದ – ಪ್ರಾಸ ಪದ

ಪದ್ಯ ೯: ಧೃತರಾಷ್ಟ್ರನು ಕೌರವನಿಗೇನು ಬುದ್ಧಿ ಹೇಳಿದ್ದನು?

ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರೆವುದು ಬಂಧು ವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ (ದ್ರೋಣ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಾತನ್ನು ಮುಂದುವರಿಸುತ್ತಾ, ಮಗನೇ ಪಾಂಡವರೊಡನೆ ಸಂಧಿಯನ್ನು ಮಾಡಿಕೋ, ದ್ವೇಷವನ್ನು ಬೆಳೆಸಬೇಡ, ಶ್ರೀಕೃಷ್ಣನೊಡನೆ ಕದನ ಮಾಡುವುದು ಒಳಿತಲ್ಲ, ಅವನು ಪರಮಾತ್ಮ, ನಮ್ಮ ಹವಣಿಕೆ ತಪ್ಪಿದ ಮೇಲೆ ವಿನಯದಿಂದ ಸಂಧಿಯನ್ನು ಮಾಡಿಕೊಳ್ಳಬೇಕು, ಬಂಧುಗಳೊಡನೆ ಛಲ ಸ್ಪರ್ಧೆ ಸಲ್ಲದು ಎಂದು ನಾನವನಿಗೆ ಹೇಳಿದುದು ನಿನಗೆ ತಿಳಿದಿಲ್ಲವೇ ಎಂದು ಕೇಳಿದನು.

ಅರ್ಥ:
ಬೇಡ: ತ್ಯಜಿಸು; ಮಗ: ಸುತ; ಸಂಧಿ: ಒಡಂಬಡಿಕೆ; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಕೂಡೆ: ಜೊತೆ; ವಿಗ್ರಹ: ಯುದ್ಧ; ಹಗೆ: ವೈರ; ಹೊಲ್ಲ: ಕೆಟ್ಟುದು; ದೈವ: ಭಗವಂತ; ಪಾಡು: ಸ್ಥಿತಿ; ಬಳಿಕ: ನಂತರ; ವಿನಯ: ಸೌಜನ್ಯ; ಮೆರೆ: ಹೊಳೆ; ಬಂಧು: ಸಂಬಂಧಿಕರು; ವರ್ಗ: ಗುಂಪು; ವಾಸಿ: ಸ್ಪರ್ಧೆ; ಮನ: ಮನಸ್ಸು; ಅರಿ: ತಿಳಿ;

ಪದವಿಂಗಡಣೆ:
ಬೇಡ+ ಮಗನೇ +ಪಾಂಡು+ಸುತರಲಿ
ಮಾಡು +ಸಂಧಿಯನ್+ಅಸುರರಿಪುವಿನ
ಕೂಡೆ +ವಿಗ್ರಹವ್+ಒಳ್ಳಿತೇ +ಹಗೆ +ಹೊಲ್ಲ +ದೈವದಲಿ
ಪಾಡು +ತಪ್ಪಿದ+ ಬಳಿಕ+ ವಿನಯವ
ಮಾಡಿ +ಮೆರೆವುದು +ಬಂಧು +ವರ್ಗದ
ಕೂಡೆ +ವಾಸಿಗಳೇತಕ್+ಎನ್ನೆನೆ +ನಿನ್ನ +ಮನವರಿಯೆ

ಅಚ್ಚರಿ:
(೧) ಬುದ್ಧಿಮಾತು – ಹಗೆ ಹೊಲ್ಲ ದೈವದಲಿ; ಬಂಧು ವರ್ಗದ ಕೂಡೆ ವಾಸಿಗಳೇತಕೆ

ಪದ್ಯ ೮: ಮೂರನೆಯ ದಿನದ ಯುದ್ಧವು ಹೇಗೆ ಆರಂಭವಾಯಿತು?

ದಿನವೆರಡು ಹಿಂದಾದುದಿದು ಮೂ
ರನೆಯ ದಿವಸದ ಬಹಳ ವಿಗ್ರಹ
ದನುವನಾಲಿಸು ರಾಯ ಜನಮೇಜಯ ಮಹೀಪಾಲ
ದಿನಪನುದಯಾಚಲದ ಚಾವಡಿ
ವನೆಗೆ ಬರೆ ಬಲವೆರಡು ಗಳ ಗ
ರ್ಜನದಿ ಬಂದೊಡ್ಡಿದವು ಕಳನೊಳು ಖತಿಯ ಪಡಪಿನಲಿ (ಭೀಷ್ಮ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ವೈಶಂಪಾಯನರು ತಮ್ಮ ಭಾರತದ ಕಥೆಯನ್ನು ಮುಂದುವರೆಸುತ್ತಾ, ಎರಡು ದಿನಗಳ ಯುದ್ಧವಾಯಿತು, ಮೂರನೆಯ ದಿನದ ಯುದ್ಧದ ಬಗೆಯನ್ನು ರಾಜ ಜನಮೇಜಯ ಕೇಳು, ಸೂರ್ಯನು ಪೂರ್ವ ಪರ್ವತದ ಓಲಗಕ್ಕೆ ಬರಲು, ಎರಡು ಸೈನ್ಯಗಳೂ ಗರ್ಜಿಸುತ್ತಾ ಬಂದು ರಣರಂಗದಲ್ಲಿ ವ್ಯೂಹಗಳನ್ನೊಡ್ಡಿದವು.

ಅರ್ಥ:
ದಿನ: ದಿವಸ; ಹಿಂದೆ: ಮುಗಿದ; ಬಹಳ: ತುಂಬ; ವಿಗ್ರಹ: ಯುದ್ಧ; ಅನುವು: ಸೊಗಸು; ಆಲಿಸು: ಕೇಳು; ರಾಯ: ರಾಜ; ಮಹೀಪಾಲ: ರಾಜ; ದಿನಪ: ಸೂರ್ಯ; ಉದಯ: ಹುಟ್ಟು; ಅಚಲ: ಬೆಟ್ಟ; ಚಾವಡಿ: ಸಭಾಸ್ಥಾನ, ಓಲಗ; ಬರೆ: ಆಗಮಿಸು; ಬಲ: ಸೈನ್ಯ; ಗಳ: ಕಂಠ, ಕೊರಳು; ಗರ್ಜನ: ಕೂಗು; ಒಡ್ಡು: ತೋರು; ಕಳ: ರಣರಂಗ; ಖತಿ: ಕೋಪ; ಪಡಪು: ಠೀವಿ;

ಪದವಿಂಗಡಣೆ:
ದಿನವ್+ಎರಡು +ಹಿಂದಾದುದ್+ಇದು +ಮೂ
ರನೆಯ +ದಿವಸದ +ಬಹಳ +ವಿಗ್ರಹದ್
ಅನುವನ್+ಆಲಿಸು+ ರಾಯ +ಜನಮೇಜಯ +ಮಹೀಪಾಲ
ದಿನಪನ್+ಉದಯಾಚಲದ +ಚಾವಡಿ
ವನೆಗೆ+ ಬರೆ +ಬಲವೆರಡು +ಗಳ+ ಗ
ರ್ಜನದಿ +ಬಂದೊಡ್ಡಿದವು +ಕಳನೊಳು +ಖತಿಯ +ಪಡಪಿನಲಿ

ಅಚ್ಚರಿ:
(೧) ದಿನವು ಪ್ರಾರಂಭವಾಯಿತು ಎಂದು ಹೇಳಲು – ದಿನಪನುದಯಾಚಲದ ಚಾವಡಿವನೆಗೆ ಬರೆ
(೨) ಸೈನ್ಯವು ಬಂದ ಪರಿ – ಬಲವೆರಡು ಗಳ ಗರ್ಜನದಿ ಬಂದೊಡ್ಡಿದವು ಕಳನೊಳು ಖತಿಯ ಪಡಪಿನಲಿ
(೩) ದಿನ, ದಿವಸ; ರಾಯ, ಮಹೀಪಾಲ – ಸಮನಾರ್ಥಕ ಪದ

ಪದ್ಯ ೩: ಮಾಂಸಖಂಡಗಳು ಹೇಗೆ ಕಂಡವು?

ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹಯವನಡೆಗೆಡೆ
ವಾನೆಗಳ ಹೊದರೆದ್ದು ಮುಗ್ಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ
ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ (ಭೀಷ್ಮ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ಉಭಯ ಸೈನ್ಯಗಳಲ್ಲೂ ಕುದುರೆ, ಆನೆ, ರಥ, ಅಶ್ವ, ಯೋಧರು ಕಡಿದ ಪರಿಣಾಮವಾಗಿ ತುಂಡಾದ ಮಾಂಸ ರಕ್ತಗಳು ಬೆಟ್ಟ ಹೊಳೆಗಳಂತೆ ಕಾಣಿಸಿದವು.

ಅರ್ಥ:
ಹೇಳು: ತಿಳಿಸು; ಉಭಯ: ಎರಡು; ಬಲ: ಸೈನ್ಯ; ಲೂನ: ಕತ್ತರಿಸಿದ, ಕಡಿದ; ನಿವಹ: ಗುಂಪು; ಹಯ: ಕುದುರೆ; ಅಡೆ: ಅಡ್ಡ; ಕೆಡೆ: ಬೀಳು, ಕುಸಿ; ಆನೆ: ಕರಿ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ಮುಗ್ಗು: ಬಾಗು, ಮಣಿ; ರಥ: ಬಂಡಿ; ವಾಜಿ: ಕುದುರೆ; ಮಾನವ: ಮನುಷ್ಯ; ಕಡಿ: ಸೀಳು; ಖಂಡ: ತುಂಡು, ಚೂರು; ದೊಂಡೆ: ಗಂಟಲು, ಕಂಠ; ಹರಿ: ಸಾಗು; ರುಧಿರ: ರಕ್ತ; ಅಂಭೋನಿಧಿ: ಸಾಗರ; ಅಂಬು: ನೀರು; ಹರಹು: ವಿಸ್ತಾರ, ವೈಶಾಲ್ಯ; ಪೂರದ: ಪೂರ್ತಿ, ನೆರೆ; ವಿಗಡ: ಶೌರ್ಯ, ಪರಾಕ್ರಮ; ವಿಗ್ರಹ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಉಭಯ +ಬಲದಲಿ
ಲೂನ +ನಿವಹದ +ಹಯವನ್+ಅಡೆ+ಕೆಡೆವ್
ಆನೆಗಳ +ಹೊದರೆದ್ದು+ ಮುಗ್ಗಿದ+ ರಥದ+ ವಾಜಿಗಳ
ಮಾನವರ+ ಕಡಿ+ಖಂಡ +ದೊಂಡೆಯನ್
ಏನನೆಂಬೆನು+ ಹರಿವ+ ರುಧಿರ
ಅಂಭೋನಿಧಿಯ +ಹರಹುಗಳ+ ಪೂರದ+ ವಿಗಡ+ ವಿಗ್ರಹವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿವ ರುಧಿರಾಂಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ

ಪದ್ಯ ೯೩: ಆನೆಗಳ ಯುದ್ಧವಾದ ಮೇಲೆ ಯಾವುದು ಯುದ್ಧಕ್ಕೆ ಬಂತು?

ವಿಗ್ರಹದೊಳಿದಿರಾಂತ ಕರಿಗಳ
ವಿಗ್ರಹಂಗಳು ಕೆಡೆಯೆ ಕಾದಿ ಸ
ಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ
ಉಗ್ರದಾಹವಭೂತಗಣಕೆ ಸ
ಮಗ್ರಭೋಜನವಾಯ್ತು ಸಂಗರ
ದಗ್ರಿಯರು ಕೈವೀಸಿದರು ತೇರುಗಳ ತಿಂತಿಣಿಯ (ಭೀಷ್ಮ ಪರ್ವ, ೪ ಸಂಧಿ, ೯೩ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ಬಂದ ಆನೆಗಳು ಸತ್ತು ಬೀಳಲು, ಜೋದರು ವೀರಮರಣವನ್ನಪ್ಪಿ ದೇವಲೋಕದ ಕೋಟೆಗಳನ್ನು ಗೆಲಿದುಕೊಂಡರು. ಯುದ್ಧರಂಗದ ಭೂತಗಳಿಗೆ ತೃಪ್ತಿಕರವಾದ ಊಟವಾಯಿತು. ಆನೆಗಳ ಕಾಳಗ ಕೆಲಕಾಲ ನಿಲ್ಲಲು, ಸೇನಾ ನಾಯಕರು ಕೈಬೀಸಿ ರಥಗಳನ್ನು ಯುದ್ಧಕ್ಕೆ ಕರೆತಂದರು.

ಅರ್ಥ:
ವಿಗ್ರಹ: ಮೂರ್ತಿ, ಪ್ರತಿಮೆ; ಇದಿರು: ಎದುರು; ಅಂತ: ಕೊನೆ; ಕರಿ: ಆನೆ; ಕೆಡೆ: ಬೀಳು, ಕುಸಿ; ಕಾದಿ: ಹೋರಾಡಿ; ಸಮಗ್ರ: ಎಲ್ಲಾ; ಬಲ: ಶಕ್ತಿ; ಜೋದಾಳಿ: ಯೋಧರ ಗುಂಪು; ಕೊಂಡು: ತೆಗೆದುಕೊ, ಪಡೆ; ಸುರ: ದೇವತೆ; ಕೋಟೆ: ದುರ್ಗ; ಉಗ್ರ: ಭಯಂಕರ; ಆಹವ: ಯುದ್ಧ; ಭೂತ: ದೆವ್ವ; ಗಣ: ಗುಂಪು; ಸಮಗ್ರ: ಒಟ್ಟಾರೆ, ಎಲ್ಲಾ; ಭೋಜನ: ಊಟ; ಸಂಗರ: ಯುದ್ಧ; ಅಗ್ರ: ಮೊದಲು; ವೀಸು: ತೂಗುವಿಕೆ; ಕೈ: ಹಸ್ತ; ತೇರು: ಬಂಡಿ; ತಿಂತಿಣಿ: ಗುಂಪು;

ಪದವಿಂಗಡಣೆ:
ವಿಗ್ರಹದೊಳ್+ಇದಿರ್+ಅಂತ +ಕರಿಗಳ
ವಿಗ್ರಹಂಗಳು+ ಕೆಡೆಯೆ+ ಕಾದಿ+ ಸ
ಮಗ್ರಬಲ +ಜೋದಾಳಿ +ಕೊಂಡುದು +ಸುರರ+ ಕೋಟೆಗಳ
ಉಗ್ರದ್+ಆಹವ+ಭೂತಗಣಕೆ +ಸ
ಮಗ್ರ+ಭೋಜನವಾಯ್ತು +ಸಂಗರದ್
ಅಗ್ರಿಯರು +ಕೈವೀಸಿದರು +ತೇರುಗಳ +ತಿಂತಿಣಿಯ

ಅಚ್ಚರಿ:
(೧) ಉಗ್ರ, ಸಮಗ್ರ – ಪ್ರಾಸ ಪದಗಳು
(೨) ಸತ್ತರು ಎಂದು ಹೇಳಲು – ಸಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ

ಪದ್ಯ ೫೧: ಮುನಿಗಳು ಯಾರ ವೃತ್ತಾಂತವನ್ನು ತಿಳಿಸಿದರು?

ಅಡವಿಯಲಿ ತೊಳಲಿದನು ರಾಮನ
ಮಡದಿಯನು ರಕ್ಕಸನು ಕದ್ದನು
ಬಿಡಿಸಿ ಬಳಿಕರಸಿದನು ರಾಣೀವಾಸವನು ಕೂಡೆ
ಕಡಲ ಮಧ್ಯದ ಖಳನೊಡನೆ ಕೈ
ದುಡುಕಲಲ್ಲಿಗೆ ತೆತ್ತಿಗರು ನಾ
ಡಡವಿಗೋಡಗವಾಳು ಕುದುರೆಗಳಸರುವಿಗ್ರಹಕೆ (ಅರಣ್ಯ ಪರ್ವ, ೨೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ತಂದೆಯ ಮಾತನ್ನು ನಡೆಸಲು ಶ್ರೀರಾಮನು ಕಾಡಿಗೆ ಹೋದನು. ರಾವಣನು ಮೋಸ ಮಾಡಿ ಸೀತಾದೇವಿಯನ್ನು ಕದ್ದನು. ರಾಮನು ತನ್ನ ಮಡದಿಯನ್ನು ಹುಡುಕಿದನು. ಸಮುದ್ರ ಮಧ್ಯದ ಲಂಕಾನಗರಕ್ಕೆ ಸೇತುವೆಯನ್ನು ಕಟ್ಟಿ ಯುದ್ಧಕ್ಕೆ ಹೊರಟಾಗ ಕಾಡಿನ ಕಪಿಗಳೇ ಅವನಿಗೆ ಸೈನಿಕರು, ಕುದುರೆಗಳಾದರು.

ಅರ್ಥ:
ಅಡವಿ: ಕಾಡು; ತೊಳಲು: ಬವಣೆ, ಸಂಕಟ; ಮಡದಿ: ಹೆಂಡತಿ; ರಕ್ಕಸ: ರಾಕ್ಷಸ; ಕದ್ದು: ಅಪಹರಿಸು; ಬಿಡಿಸು: ವಿಮೋಚಿಸು; ಬಳಿಕ: ನಂತರ; ಅರಸು: ಹುಡುಕು; ರಾಣಿ: ಅರಸಿ; ವಾಸ: ಸ್ಥಾನ; ಕೂಡೆ: ಜೊತೆ; ಕಡಲು: ಸಾಗರ; ಮಧ್ಯ: ನಡುವೆ; ಖಳ: ದುಷ್ಟ; ಕೈದುಡುಕು: ಹೋರಾಡು; ತೆತ್ತು: ಕೊಡು, ನೀಡು; ಅಡವಿ: ಕಾಡು; ಓಡ: ದೋಣಿ; ಅಸುರ: ರಾಕ್ಷಸ; ವಿಗ್ರಹ: ಯುದ್ಧ;

ಪದವಿಂಗಡಣೆ:
ಅಡವಿಯಲಿ +ತೊಳಲಿದನು +ರಾಮನ
ಮಡದಿಯನು +ರಕ್ಕಸನು +ಕದ್ದನು
ಬಿಡಿಸಿ +ಬಳಿಕ್+ಅರಸಿದನು +ರಾಣೀವಾಸವನು +ಕೂಡೆ
ಕಡಲ+ ಮಧ್ಯದ +ಖಳನೊಡನೆ +ಕೈ
ದುಡುಕಲ್+ಅಲ್ಲಿಗೆ +ತೆತ್ತಿಗರು+ ನಾಡ್
ಅಡವಿಗೋಡಗವ್+ಆಳು +ಕುದುರೆಗಳ್+ಅಸರು+ವಿಗ್ರಹಕೆ

ಅಚ್ಚರಿ:
(೧) ರಾವಣ ಎಂದು ಬಣ್ಣಿಸಲು – ಕಡಲ ಮಧ್ಯದ ಖಳ
(೨) ರಾಮನಿಗೆ ಸಹಾಯ ಮಾಡಿದವರು – ನಾಡಡವಿಗೋಡಗವಾಳು ಕುದುರೆಗಳಸರುವಿಗ್ರಹಕೆ