ಪದ್ಯ ೧: ಸಂಜಯನು ಯಾರನ್ನು ಹುಡುಕಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ (ಗದಾ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ರಣರಂಗಕ್ಕೆ ರಕ್ಷಣೆಗಾಗಿ ಬಂದ ಕುದುರೆಗಳೊಡನೆ ರಣರಂಗದ ಉದ್ದಗಲಕ್ಕೂ ಚಲಿಸಿ ದುರ್ಯೋಧನನ ಬಗ್ಗೆ ಕೇಳುತ್ತಾ ಕುರುಪತಿಯನ್ನು ಹುಡುಕಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಭೂಪಾಲಕ: ರಾಜ; ಅರಸು: ಹುಡುಕು; ಸಂಗರ: ಯುದ್ಧ; ರಂಗಭೂಮಿ: ಯುದ್ಧಭೂಮಿ, ಕಳ; ಸುಯಿಧಾನ: ರಕ್ಷಣೆ; ತುರಂಗ: ಕುದುರೆ; ಜಾಲ: ಗುಮ್ಫು; ಸಹಿತ: ಜೊತೆ; ಅಗಲ: ವಿಸ್ತಾರ; ಭೂಪಾಲ: ರಾಜ; ಆವೆಡೆ: ಎಲ್ಲಿ; ಬೆಸ: ಕೇಳು; ನೃಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ+ ಬಂದು+ ಕುರುಭೂ
ಪಾಲಕನನ್+ಅರಸಿದನು +ಸಂಗರ +ರಂಗಭೂಮಿಯಲಿ
ಮೇಲುಸುಯಿಧಾನದ +ತುರಂಗಮ
ಜಾಲ +ಸಹಿತ್+ಅಗಲದಲಿ +ಕುರು+ಭೂ
ಪಾಲನ್+ಆವೆಡೆ+ಎನುತ +ಬೆಸಗೊಳುತ್+ಅರಸಿದನು+ ನೃಪನ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ, ನೃಪ – ಸಮಾನಾರ್ಥಕ ಪದ
(೨) ಕುರುಭೂಪಾಲ – ೨, ೫ ಸಾಲಿನ ಕೊನೆಯ ಪದ

ಪದ್ಯ ೭೨: ಸಂಜಯನು ರಾಜನಿಗೆ ಏನು ಹೇಳಿದನು?

ತೀರಿತೇ ಮಗನುಬ್ಬಟೆಯ ಜ
ಜ್ಝಾರತನವಾಚಾರ್ಯನಳಿದನ
ದಾರು ನಮಗಾಪ್ತಿಗರು ದೊರೆಯಿನ್ನಾರು ಸಂಗರಕೆ
ಆರು ನಿಮಗಿದ್ದೇಗುವರು ರಣ
ವೀರರಗ್ಗದ ದೈವವೇ ಮನ
ವಾರೆ ಮೆಚ್ಚಿಹುದವರನಿನ್ನೇನರಸ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೭೨ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಿನ್ನ ಮಗ ಸುಯೋಧನನ ಶೌರ್ಯ ಮುಗಿಯಿತೇ? ಗರುಡಿಯಾಚಾರ್ಯನು ಹೋದ ಮೇಲೆ ನಮಗೆ ಆಪ್ತರು ಇನ್ನಾರು? ಯುದ್ಧಕ್ಕೆ ಸೇನಾಪತಿಯಾರು? ಯಾರು ಇದ್ದರೂ ನಮಗೆ ಏನು ಸಹಾಯ ಮಾಡಿಯಾರು? ಪರಾಕ್ರಮಿಗಳ ಅಧಿದೇವತೆಯೇ ಪಾಂಡವರಿಗೆ ಮನಸಾರೆ ಒಲಿದಿದೆ, ಇನ್ನೇನು ಉಳಿಯಿತು ಎಂದು ಹೇಳಿದನು.

ಅರ್ಥ:
ತೀರು: ಕಳೆದು; ಮಗ: ಸುತ; ಉಬ್ಬಟೆ: ಅತಿಶಯ, ಸಹಸ; ಜಜ್ಝಾರ: ಪರಾಕ್ರಮಿ, ಶೂರ; ಆಚಾರ್ಯ: ಗುರು; ಅಳಿ: ನಾಶ; ಆಪ್ತ: ಹತ್ತಿರದವ; ದೊರೆ: ರಾಜ; ಸಂಗರ: ಯುದ್ಧ; ಏಗು: ಸಹಿಸು, ತಾಳು; ರಣ: ಯುದ್ಧ; ವೀರ: ಶೂರ; ಅಗ್ಗ: ಶ್ರೇಷ್ಠ; ದೈವ: ಭಗವಂತ; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತೀರಿತೇ +ಮಗನ್+ಉಬ್ಬಟೆಯ +ಜ
ಜ್ಝಾರತನವ್+ಆಚಾರ್ಯನ್+ಅಳಿದನ್
ಅದಾರು +ನಮಗ್+ಆಪ್ತಿಗರು +ದೊರೆ+ಇನ್ನಾರು +ಸಂಗರಕೆ
ಆರು+ ನಿಮಗಿದ್+ಏಗುವರು +ರಣ
ವೀರರ್+ಅಗ್ಗದ +ದೈವವೇ +ಮನ
ವಾರೆ +ಮೆಚ್ಚಿಹುದ್+ಅವರನಿನ್ನೇನ್+ಅರಸ +ಕೇಳೆಂದ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ತೀರಿತೇ ಮಗನುಬ್ಬಟೆಯ ಜಜ್ಝಾರತನ
(೨) ದೊರೆ, ಅರಸ – ಸಮಾನಾರ್ಥಕ ಪದ

ಪದ್ಯ ೩೯: ಕೃಷ್ಣನು ದ್ರೋಣನನ್ನು ಸೋಲಿಸಲು ಯಾವ ಉಪಾಯವನ್ನು ಹೇಳಿದನು?

ಧುರದ ಜಯವಹುದೊಂದು ಪರಿಯಲಿ
ನಿರುತವಲ್ಲದ ನುಡಿಯ ನುಡಿದರೆ
ಪರಿಹರಿಸಬಹುದೆಂದನಸುರಾರಾತಿ ನಸುನಗುತ
ನರನದೆಂತೆನೆ ಗುರುತನುಜ ಸಂ
ಗರದೊಳೊರಗಿದನೆಂದು ದ್ರೋಣಂ
ಗರುಹು ಫಲುಗುಣ ಮನದೊಳಳುಕದೆ ಬೇಗ ಮಾಡೆಂದ (ದ್ರೋಣ ಪರ್ವ, ೧೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಈ ಯುದ್ಧದಲ್ಲಿ ಗೆಲ್ಲಲು ಒಂದೇ ಒಂದು ಉಪಾಯವಿದೆ, ಅದೇನೆಂದರೆ ಸುಳ್ಳನ್ನು ಹೇಳುವುದು ಎಂದು ಕೃಷ್ಣನು ತಿಳಿಸಲು, ಅರ್ಜುನನು ಅದಾದರು ಹೇಗೆ ಎಂದು ಹೇಳಲು, ಕೃಷ್ಣನು ಉಪಾಯವನ್ನು ಹೇಳುತ್ತಾ, ದ್ರೋಣನಿಗೆ ಅಶ್ವತ್ಥಾಮನು ಸತ್ತನೆಂದು ಬೇಗ ತಿಳಿಸುವುದು. ಇದನ್ನು ತಿಳಿಸಲು ಸ್ವಲ್ಪವೂ ಅಳುಕಬೇಡ ಎಂದು ಕೃಷ್ಣನು ಹೇಳಿದನು.

ಅರ್ಥ:
ಧುರ: ಯುದ್ಧ, ಕಾಳಗ; ಜಯ: ಗೆಲುವು; ಪರಿ: ರೀತಿ; ನಿರುತ: ದಿಟ, ಸತ್ಯ; ನುಡಿ: ಮಾತು; ಪರಿಹರಿಸು: ನಿವಾರಿಸು; ಅಸುರ: ದಾನವ; ಅರಾತಿ: ವೈರಿ; ನಸುನಗು: ಹಸನ್ಮುಖ; ನರ: ಅರ್ಜುನ; ತನುಜ: ಮಗ; ಸಂಗರ: ಯುದ್ಧ; ಒರಗು: ಸಾಯು, ಮರಣ ಹೊಂದು; ಅರುಹು: ತಿಳಿಸು, ಹೇಳು; ಅಳುಕು: ದೆಹರು;

ಪದವಿಂಗಡಣೆ:
ಧುರದ +ಜಯವಹುದ್+ಒಂದು +ಪರಿಯಲಿ
ನಿರುತವಲ್ಲದ+ ನುಡಿಯ +ನುಡಿದರೆ
ಪರಿಹರಿಸಬಹುದೆಂದನ್+ಅಸುರ+ಅರಾತಿ +ನಸುನಗುತ
ನರನ್+ಅದೆಂತೆನೆ+ ಗುರುತನುಜ +ಸಂ
ಗರದೊಳ್+ಒರಗಿದನೆಂದು+ ದ್ರೋಣಂಗ್
ಅರುಹು +ಫಲುಗುಣ +ಮನದೊಳ್+ಅಳುಕದೆ +ಬೇಗ +ಮಾಡೆಂದ

ಅಚ್ಚರಿ:
(೧) ಕೃಷ್ಣನ ಉಪಾಯ – ಗುರುತನುಜ ಸಂಗರದೊಳೊರಗಿದನೆಂದು ದ್ರೋಣಂಗರುಹು
(೨) ಒಂದೇ ಪದದ ರಚನೆ – ಪರಿಹರಿಸಬಹುದೆಂದನಸುರಾರಾತಿ
(೩) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು

ಪದ್ಯ ೩೮: ಧರ್ಮಜನು ಕೃಷ್ಣನಿಗೆ ಏನು ಹೇಳಿದ?

ಕರಸಿದನು ಹರಿ ಧರ್ಮಪುತ್ರನ
ನರಸ ಕೇಳಿಂದಿನಲಿ ಗುರುವನು
ಸರಳ ಮೊನೆಯಲಿ ಗೆಲಲು ನೂಕದು ಭೂತನಾಥಂಗೆ
ತೆರಳಿ ಬರುತಿದೆ ನಮ್ಮ ಬಲ ಸಂ
ಗರದ ಜಯವಹುದೆಂತು ಹೇಳೈ
ಧರಣಿಪತಿ ನೀನೆನಲು ನೀವೇ ಬಲ್ಲಿರಿದನೆಂದ (ದ್ರೋಣ ಪರ್ವ, ೧೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮಜನನ್ನು ಕರೆಸಿಕೊಂಡು, ಅರಸ, ಈ ದಿನ ದ್ರೋಣನನ್ನು ಗೆಲ್ಲಲೂ ಶಿವನಿಗೂ ಸಾಧ್ಯವಿಲ್ಲ. ನಮ್ಮ ಸೈನ್ಯ ಓಡಿ ಬರುತ್ತಿದೆ. ಯುದ್ಧದಲ್ಲಿ ಗೆಲ್ಲುವುದು ಹೇಗೆ ಎನ್ನುವುದನ್ನು ಹೇಳು ಎನಲು, ಎಲೈ ಕೃಷ್ಣ ಗೆಲ್ಲುವುದು ಹೇಗೆಂದು ನಿಮಗೇ ಗೊತ್ತು, ನೀವೇ ಹೇಳಿರಿ ಎಂದು ನಿವೇದಿಸಿದನು.

ಅರ್ಥ:
ಕರಸು: ಬರೆಮಾಡು; ಹರಿ: ವಿಷ್ಣು; ಪುತ್ರ: ಸುತ; ಅರಸ: ರಾಜ; ಕೇಳು: ಆಲಿಸು; ಗುರು: ಆಚಾರ್ಯ; ಸರಳ: ಬಾಣ; ಮೊನೆ: ತುದಿ; ಗೆಲಲು: ಜಯಿಸಲು; ನೂಕು: ತಳ್ಳು; ಭೂತನಾಥ: ಶಿವ; ತೆರಳು: ಹೋಗು, ನಡೆ; ಬರುತಿದೆ: ಆಗಮಿಸು; ಬಲ: ಶಕ್ತಿ; ಸಂಗರ: ಯುದ್ಧ; ಜಯ: ಗೆಲುವು; ಹೇಳು: ತಿಳಿಸು; ಧರಣಿಪತಿ: ರಾಜ; ಬಲ್ಲಿರಿ: ತಿಳಿದಿರುವಿರಿ;

ಪದವಿಂಗಡಣೆ:
ಕರಸಿದನು +ಹರಿ+ ಧರ್ಮಪುತ್ರನನ್
ಅರಸ +ಕೇಳ್+ಇಂದಿನಲಿ+ ಗುರುವನು
ಸರಳ+ ಮೊನೆಯಲಿ+ ಗೆಲಲು+ ನೂಕದು+ ಭೂತನಾಥಂಗೆ
ತೆರಳಿ +ಬರುತಿದೆ +ನಮ್ಮ +ಬಲ +ಸಂ
ಗರದ + ಜಯವಹುದೆಂತು+ ಹೇಳೈ
ಧರಣಿಪತಿ+ ನೀನೆನಲು+ ನೀವೇ+ ಬಲ್ಲಿರಿದನೆಂದ

ಅಚ್ಚರಿ:
(೧) ಅರಸ, ಧರಣಿಪತಿ – ಸಮಾನಾರ್ಥಕ ಪದ
(೨) ದ್ರೋಣನ ಶಕ್ತಿಯನ್ನು ವಿವರಿಸುವ ಪರಿ – ಸರಳ ಮೊನೆಯಲಿ ಗೆಲಲು ನೂಕದು ಭೂತನಾಥಂಗೆ

ಪದ್ಯ ೯: ದ್ರೋಣರಿಗೆ ಭೀಮನು ಹೇಗೆ ಉತ್ತರಿಸಿದನು?

ಗುರುವೆಮಗೆ ನೀವ್ ನಿಮಗೆ ನಾವ್ ಡಿಂ
ಗರಿಗರೆಮ್ಮಿತ್ತಂಡವಿದರಲಿ
ವರ ವಿನೀತರು ಕೆಲರು ಕೆಲಬರು ಧೂರ್ತರಾಗಿಹರು
ನರ ಯುಧಿಷ್ಠಿರ ನಕುಳ ಸಹದೇ
ವರವೊಲೆನಗಿಲ್ಲತಿ ಭಕುತಿ ಸಂ
ಗರದೊಳೆನ್ನಯ ದಂಡಿ ಹೊಸಪರಿ ಬೇಡ ಮರಳೆಂದ (ದ್ರೋಣ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಮನು ಉತ್ತರಿಸುತ್ತಾ, ನೀವು ನಮ್ಮ ಗುರುಗಳು, ನಾವು ನಿಮ್ಮ ಸೇವಕರು, ನಮ್ಮಲ್ಲಿ ಎರಡು ಪಂಗಡಗಳಿವೆ. ಕೆಲವರು ವಿನಯಪರರು, ಕೆಲವರು ಧೂರ್ತರು. ಧರ್ಮಜ, ಅರ್ಜುನ, ನಕುಲ ಸಹದೇವರಂತೆ ನನಗೆ ನಿಮ್ಮಲ್ಲಿ ಬಹಳ ಭಕ್ತಿಯಿಲ್ಲ. ಯುದ್ಧದಲ್ಲಿ ನನ್ನ ವರಸೆಯು ಹೊಸ ರೀತಿಯದ್ದು, ನೀವು ಹಿಂದಿರುಗಿ ಎಂದು ಹೇಳಿದನು.

ಅರ್ಥ:
ಗುರು: ಆಚಾರ್ಯ; ಡಿಂಗರಿಗ: ಭಕ್ತ; ತಂಡ: ಗುಂಪು; ವರ: ಶ್ರೇಷ್ಠ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಧೂರ್ತ: ದುಷ್ಟ; ನರ: ಅರ್ಜುನ; ಭಕುತಿ: ಹಿರಿಯರಲ್ಲಿ ತೋರುವ ಆದರ; ಸಂಗರ: ಯುದ್ಧ; ದಂಡಿ: ಘನತೆ, ಹಿರಿಮೆ; ಹೊಸ: ನವೀನ; ಪರಿ: ರೀತಿ; ಬೇಡ: ತ್ಯಜಿಸು; ಮರಳು: ಹಿಂದಿರುಗು;

ಪದವಿಂಗಡಣೆ:
ಗುರುವೆಮಗೆ +ನೀವ್ +ನಿಮಗೆ+ ನಾವ್+ ಡಿಂ
ಗರಿಗರ್+ಎಮ್ಮಿತ್ತಂಡವ್+ಇದರಲಿ
ವರ+ ವಿನೀತರು +ಕೆಲರು +ಕೆಲಬರು +ಧೂರ್ತರಾಗಿಹರು
ನರ +ಯುಧಿಷ್ಠಿರ +ನಕುಳ +ಸಹದೇ
ವರವೊಲ್+ಎನಗಿಲ್ಲ್+ಅತಿ +ಭಕುತಿ +ಸಂ
ಗರದೊಳ್+ಎನ್ನಯ +ದಂಡಿ +ಹೊಸಪರಿ +ಬೇಡ +ಮರಳೆಂದ

ಅಚ್ಚರಿ:
(೧) ವಿನೀತ, ಧೂರ್ತ – ವಿರುದ್ಧಾರ್ಥಕ ಪದ

ಪದ್ಯ ೨೨: ಭೀಮನೆದುರು ರಾಜರು ಹೇಗೆ ನಾಶರಾದರು?

ತನತನಗೆ ಮುಂಕೊಂಡು ಸಂಗರ
ವೆನಗೆ ತನಗೆಂಬಖಿಳವೀರಾ
ವನಿಪರಹಮಿಕೆಯಿಂದ ಹೊಯ್ದರು ಪವನನಂದನನ
ಮೊನೆಯಲಗಿನಂಬುಗಳ ಬಿರುಸರಿ
ಗನಿಬರಂಗವ ತೆತ್ತುವಾತಾ
ಯನಿತವಿಗ್ರಹವಾಯ್ತು ನಿಗ್ರಹದತಿಮಹಾರಥರು (ದ್ರೋಣ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ವೀರರಾದ ರಾಜರು, ನಾ ಮುಂದು ತಾ ಮುಂದು ಎಂದು ನುಗ್ಗಿ ಅಹಂಕಾರದಿಂದ ಭೀಮನನ್ನು ಹೊಯ್ದರು. ಮೊನೆಯಾದ ಅಲಗಿನಿಂದ ಅವರೆಲ್ಲರನ್ನೂ ಭೀಮನು ಘಾತಿಸಲು, ಅವರೆಲ್ಲರೂ ಗವಾಕ್ಷಿಯೊಳಗೆ ತೂರಿಸಿದ ವಿಗ್ರಹದಂತೆ ಮುಳುಗಿ ಹೋಗಿ ಕಾಣೆಯಾದರು.

ಅರ್ಥ:
ಸಂಗರ: ಯುದ್ಧ; ಅಖಿಳ: ಎಲ್ಲಾ; ವೀರ: ಶೂರ; ಅವನಿಪ: ರಾಜ; ಅಹಂ: ಅಹಂಕಾರ; ಹೊಯ್ದು: ಹೋರಾಡು; ಪವನ: ವಾಯು; ನಂದನ: ಪುತ್ರ; ಮೊನೆ: ತುದಿ, ಚೂಪು; ಅಲಗು: ಆಯುಧಗಳ ಹರಿತವಾದ ಅಂಚು; ಅಂಬು: ಬಾಣ; ಬಿರುಸು: ವೇಗ; ಅರಿ: ಚುಚ್ಚು; ಅನಿಬರು: ಅಷ್ಟು ಜನ; ಅಂಗ: ದೇಹದ ಭಾಗ; ತೆತ್ತು: ತಿರಿಚು, ಸುತ್ತು; ವಿಗ್ರಹ: ಮೂರ್ತಿ, ಪ್ರತಿಮೆ; ನಿಗ್ರಹ: ಅಂಕೆ, ಹತೋಟಿ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ತನತನಗೆ +ಮುಂಕೊಂಡು +ಸಂಗರವ್
ಎನಗೆ +ತನಗ್+ಎಂಬ್+ಅಖಿಳ+ವೀರ
ಅವನಿಪರ್+ಅಹಮಿಕೆಯಿಂದ +ಹೊಯ್ದರು +ಪವನನಂದನನ
ಮೊನೆ+ಅಲಗಿನ್+ಅಂಬುಗಳ +ಬಿರುಸರಿಗ್
ಅನಿಬರ್+ಅಂಗವ +ತೆತ್ತುವಾತಾ
ಅನಿತ+ವಿಗ್ರಹವಾಯ್ತು +ನಿಗ್ರಹದ್+ಅತಿ+ಮಹಾರಥರು

ಅಚ್ಚರಿ:
(೧) ವಿಗ್ರಹ, ನಿಗ್ರಹ – ಪ್ರಾಸ ಪದಗಳು
(೨) ವೀರ, ಮಹಾರಥ – ಸಮಾನಾರ್ಥಕ ಪದ

ಪದ್ಯ ೧೫: ಕೃತವರ್ಮನು ಯಾರ ಜೊತೆ ಯುದ್ಧಮಾಡಿದನು?

ನರನ ಮೈಗಂಡೀತನಲಿ ಸಂ
ಗರವನಾದರಿಸುವೆನು ಬಳಿಕೆಂ
ದರಿದು ಕೃತವರ್ಮನ್ಕನ ರಥವನು ಧನುವ ಸಾರಥಿಯ
ಸರಳು ಮೂರರಲೆಚ್ಚು ರಿಪುವನು
ಧುರದಿ ಹಿಂಗಿಸಿ ಹಂಸಮಯ ಮೋ
ಹರದೊಳಗೆ ಮೊಳಗಿದನು ತಾಗಿದನತಿರಥಾವಳಿಯ (ದ್ರೋಣ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಅರ್ಜುನನನ್ನು ನೋಡಿ ಬಳಿಕ ಇವನೊಡನೆ ಯುದ್ಧಮಾಡುತ್ತೇನೆ, ಎಂದು ಚಿಂತಿಸಿ ಕೃತವರ್ಮನ ರಥ, ಧನುಸ್ಸು, ಸಾರಥಿಗಲನ್ನು ಮುರು ಬಾಣಗಳಿಂದ ಹೊಡೆದು, ಅವನನ್ನು ಹಿಮ್ಮೆಟ್ಟಿಸಿ ಹಂಸವ್ಯೂಹವನ್ನು ಹೊಕ್ಕು, ಗರ್ಜಿಸಿ, ಅತಿರಥರೊಡನೆ ಯುದ್ಧವನ್ನಾರಂಭಿಸಿದನು.

ಅರ್ಥ:
ನರ: ಅರ್ಜುನ; ಮೈ: ತನು, ದೇಹ; ಸಂಗರ: ಯುದ್ಧ; ಆದರಿಸು: ಗೌರವಿಸು; ಬಳಿಕ: ನಂತರ; ಅರಿ: ಕತ್ತರಿಸು; ರಥ: ಬಂಡಿ; ಧನು: ಬಿಲ್ಲು; ಸಾರಥಿ: ಸೂತ; ಸರಳು: ಬಾಣ; ಎಚ್ಚು: ಬಾಣ ಪ್ರಯೋಗ; ರಿಪು: ವೈರಿ; ಧುರ:ಯುದ್ಧ; ಹಿಂಗಿಸು: ನಿವಾರಿಸು, ಹೋಗಲಾಡಿಸು; ಮೋಹರ: ಯುದ್ಧ; ಮೊಳಗು: ಧ್ವನಿ, ಸದ್ದು; ತಾಗು: ಮುಟ್ಟು; ಅತಿರಥ: ಪರಾಕ್ರಮಿ; ಆವಳಿ: ಗುಂಪು;

ಪದವಿಂಗಡಣೆ:
ನರನ +ಮೈಗಂಡ್+ಈತನಲಿ +ಸಂ
ಗರವನ್+ಆದರಿಸುವೆನು+ ಬಳಿಕೆಂದ್
ಅರಿದು +ಕೃತವರ್ಮಕನ+ ರಥವನು+ ಧನುವ +ಸಾರಥಿಯ
ಸರಳು +ಮೂರರಲ್+ಎಚ್ಚು +ರಿಪುವನು
ಧುರದಿ +ಹಿಂಗಿಸಿ +ಹಂಸಮಯ +ಮೋ
ಹರದೊಳಗೆ +ಮೊಳಗಿದನು +ತಾಗಿದನ್+ಅತಿರಥಾವಳಿಯ

ಅಚ್ಚರಿ:
(೧) ಸಂಗರ, ಮೋಹರ, ಧುರ – ಸಮಾನರ್ಥಕ ಪದ

ಪದ್ಯ ೩೨: ಅರ್ಜುನನು ವೈರಿಗಳನ್ನು ಹೇಗೆ ಸಂಹಾರ ಮಾಡಿದನು?

ವರುಣ ಬಾಣದಲುದಕವನು ತ
ತ್ಸರಸಿಯಲಿ ತುಂಬಿದನು ತಮಗವ
ಸರವಿದೆಂದೌಕುವ ಮಹೀಶರ ಮತ್ತೆ ಬರಿಕೈದು
ಕರಿ ರಥಾಶ್ವಪದಾತಿಯನು ಸಂ
ಗರದ ಮಧ್ಯದೊಳೊಬ್ಬನೇ ಸಂ
ಹರಿಸಿದನು ಶತಗುಣವನೊಂದೇ ಲೋಭ ಗೆಲುವಂತೆ (ದ್ರೋಣ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ವರುಣಾಸ್ತ್ರದಿಂದ ಆ ಸರೋವರದಲ್ಲಿ ನೀರನ್ನು ತುಂಬಿದನು. ಇದೇ ಸಮಯವೆಂದು ಮೇಲೆ ಬಿದ್ದ ರಾಜರನ್ನು ನಿರ್ನಾಮ ಮಾಡಿ, ರಣರಂಗ ಮಧ್ಯದಲ್ಲಿ ತನ್ನ ಮೇಲೆ ಬಿದ್ದ ಸೈನ್ಯವನ್ನು ಮನುಷ್ಯನಲ್ಲಿರುವ ನೂರು ಗುಣಗಳನ್ನು ಲೋಭವೊಂದೇ ಹಾಲು ಮಾಡುವಮ್ತೆ ಕೊಂದು ಹಾಕಿದನು.

ಅರ್ಥ:
ವರುಣ: ನೀರಿನ ಅಧಿದೇವತೆ; ಬಾಣ: ಅಂಬು, ಸರಳು; ಉದಕ: ನೀರು; ಸರಸಿ: ಸರೋವರ; ತುಂಬು: ಪೂರ್ಣವಾಗು; ಅವಸರ: ಬೇಗ, ಲಗುಬಗೆ; ಮಹೀಶ: ರಾಜ; ಕೈದು: ಆಯುಧ; ಕರಿ: ಆನೆ; ರಥ: ಬಂಡಿ; ಅಶ್ವ: ಕುದುರೆ; ಪದಾತಿ: ಕಾಲಾಳು; ಸಂಗರ: ಯುದ್ಧ; ಮಧ್ಯ: ನಡುವೆ; ಸಂಹರಿಸು: ಸಾಯಿಸು; ಶತ: ನೂರು; ಗುಣ: ನಡತೆ; ಲೋಭ: ಅತಿಯಾಸೆ, ದುರಾಸೆ; ಗೆಲುವು: ಜಯ;

ಪದವಿಂಗಡಣೆ:
ವರುಣ +ಬಾಣದಲ್+ಉದಕವನು +ತತ್
ಸರಸಿಯಲಿ +ತುಂಬಿದನು +ತಮಗ್+ಅವ
ಸರವಿದೆಂದ್+ಔಕುವ +ಮಹೀಶರ+ ಮತ್ತೆ+ ಬರಿಕೈದು
ಕರಿ +ರಥ+ಅಶ್ವ+ಪದಾತಿಯನು +ಸಂ
ಗರದ +ಮಧ್ಯದೊಳ್+ಒಬ್ಬನೇ +ಸಂ
ಹರಿಸಿದನು +ಶತಗುಣವನ್+ಒಂದೇ +ಲೋಭ +ಗೆಲುವಂತೆ

ಅಚ್ಚರಿ:
(೧) ಚತುರಂಗ ಎಂದು ಹೇಳುವ ಪರಿ – ಕರಿ ರಥಾಶ್ವಪದಾತಿಯನು
(೨) ರೂಪಕದ ಪ್ರಯೋಗ – ಸಂಗರದ ಮಧ್ಯದೊಳೊಬ್ಬನೇ ಸಂಹರಿಸಿದನು ಶತಗುಣವನೊಂದೇ ಲೋಭ ಗೆಲುವಂತೆ
(೩) ಸಂ ಪದ – ೪, ೫ ಸಾಲಿನ ಕೊನೆಯ ಪದ

ಪದ್ಯ ೧೧: ಯುಧಿಷ್ಠಿರನು ಯಾವ ಅಪ್ಪಣೆಯನ್ನು ನೀಡಿದನು?

ಉಲಿವ ಮಂಗಳಪಾಠಕರ ಕಳೆ
ಕಳೆದೊಳುಪ್ಪವಡಿಸಿದನವನಿಪ
ತಿಲಕ ಮಾಡಿದನಮಲಸಂಧ್ಯಾವಂದನಾದಿಗಳ
ನಳಿನನಾಭನ ಪಾದಪದ್ಮವ
ನೊಲವಿನಿಂದಭಿನಮಿಸಿ ಸುಭಟಾ
ವಳಿಗೆ ನೇಮವ ಕೊಟ್ಟನಂತಕಸೂನು ಸಂಗರಕೆ (ದ್ರೋಣ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಧರ್ಮರಾಯನು ಪಾಥಕರ ಮಮ್ಗಳಕರ ಶಬ್ದಗಳನ್ನು ಕೇಳುತ್ತಾ, ಎದ್ದು ಸ್ನಾನ ಸಂಧ್ಯಾವಂದನೆಯೇ ಮೊದಲಾದುದನ್ನು ಮಾದಿದನು. ಶ್ರೀಕೃಷ್ಣನ ಪಾದಗಳಿಗೆ ಪ್ರೀತಿಯಿಂದ ನಮಸ್ಕರಿಸಿ, ಸೈನ್ಯದ ಸುಭಟರನ್ನು ಕರೆದು ಯುದ್ಧಮಾಡಲು ಅಪ್ಪಣೆಯನ್ನಿತ್ತನು.

ಅರ್ಥ:
ಉಲಿ: ಶಬ್ದ; ಮಂಗಳ: ಶುಭ; ಪಾಠಕ: ಬಿರುದಾವಳಿಗಳನ್ನು ಹೊಗಳಿ ಹಾಡುವವನು; ಕಳಕಳ: ಉದ್ವಿಗ್ನತೆ; ಉಪ್ಪವಡಿಸು: ಮೇಲೇಳು; ಅವನಿಪ: ರಾಜ; ತಿಲಕ: ಶ್ರೇಷ್ಠ; ಅಮಲ: ನಿರ್ಮಲ; ಸಂಧ್ಯಾವಂದನೆ: ಸಂಧ್ಯಾಕಾಲದ ಪೂಜೆ; ಆದಿ: ಮುಂತಾದ; ನಳಿನನಾಭ: ಕೃಷ್ಣ; ಪಾದ: ಚರಣ; ಪದ್ಮ: ಕಮಲ; ಒಲವು: ಪ್ರೀತಿ; ಅಭಿನಮಿಸು: ನಮಸ್ಕರಿಸು; ಸುಭಟ: ಪರಾಕ್ರಮಿ; ಆವಳಿ: ಗುಂಪು, ಸಾಲು; ನೇಮ: ನಿಯಮ, ವ್ರತ; ಅಂತಕಸೂನು: ಯಮನ ಮಗ; ಸಂಗರ: ಯುದ್ಧ;

ಪದವಿಂಗಡಣೆ:
ಉಲಿವ +ಮಂಗಳ+ಪಾಠಕರ+ ಕಳೆ
ಕಳೆದೊಳ್+ಉಪ್ಪವಡಿಸಿದನ್+ಅವನಿಪ
ತಿಲಕ +ಮಾಡಿದನ್+ಅಮಲ+ಸಂಧ್ಯಾವಂದನಾದಿಗಳ
ನಳಿನನಾಭನ+ ಪಾದಪದ್ಮವನ್
ಒಲವಿನಿಂದ್+ಅಭಿನಮಿಸಿ +ಸುಭಟಾ
ವಳಿಗೆ +ನೇಮವ +ಕೊಟ್ಟನ್+ಅಂತಕಸೂನು+ ಸಂಗರಕೆ

ಅಚ್ಚರಿ:
(೧) ಯುಧಿಷ್ಠಿರನನ್ನು ಅಂತಕಸೂನು, ಅವನಿಪತಿಲಕ ಎಂದು ಕರೆದಿರುವುದು

ಪದ್ಯ ೩: ಕೃಷ್ಣನು ಏನೆಂದು ಮನದಲ್ಲಿ ನಿಶ್ಚಯಿಸಿದನು?

ಧುರದ ಕೋಳಾಹಳದ ಢಗೆ ಡಾ
ವರಿಸಿ ಬಳಲಿ ಧನಂಜಯನು ವರ
ಸರಸಿಯಲಿ ಮುಳುಗಿರಲು ನಸು ನಗುತೊಂದುಪಾಯದಲಿ
ನರನೊಳಿನ್ನರುಹುವೆನು ಘನ ಸಂ
ಗರದೊಳಡಗಿದ ರಾಜ ಕುವರನ
ಮರಣವಾರ್ತೆಯನೆಂದು ಮನದಲಿ ನೆನೆದನಸುರಾರಿ (ದ್ರೋಣ ಪರ್ವ, ೮ ಸಂಧಿ, ೩ ಪದ್ಯ)

ತಾತ್ಪರ್ಯ:
ಯುದ್ಧ ಕೋಲಾಹಲದಿಂದ ಆಯಾಸಗೊಂಡಿದ್ದ ಅರ್ಜುನನು ಸರೋವರದಲ್ಲಿ ಮುಳುಗಿದನು. ಆಗ ಶ್ರೀಕೃಷ್ಣನು ನಗುತ್ತಾ ಒಂದು ಉಪಾಯದ ಮಾಡಿದನು. ಅರ್ಜುನನು ಮುಳುಗಿರಲು ಈ ಮಹಾ ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯುವಿನ ಮರಣವಾರ್ತೆಯನ್ನು ಅರ್ಜುನನಿಗೆ ತಿಳಿಸಲು ಮನದಲ್ಲಿ ನಿಶ್ಚಯಿಸಿದನು.

ಅರ್ಥ:
ಧುರ: ಯುದ್ಧ; ಕೋಳಾಹಳ: ಗೊಂದಲ; ಢಗೆ: ಕಾವು, ದಗೆ; ಡಾವರಿಸು: ಸುತ್ತು, ತಿರುಗಾಡು; ಬಳಲು: ಆಯಾಸಗೊಳ್ಳು; ವರ: ಶ್ರೇಷ್ಠ; ಸರಸಿ: ಸರೋವರ; ಮುಳುಗು: ನೀರಿನಲ್ಲಿ ಮೀಯು; ನಸು: ಸ್ವಲ್ಪ; ನಗು: ಸಂತಸ; ಉಪಾಯ: ಯುಕ್ತಿ; ನರ: ಅರ್ಜುನ; ಉರುಹು: ಹೇಳು; ಘನ: ಶ್ರೇಷ್ಠ, ದೊಡ್ಡ; ಸಂಗರ: ಯುದ್ಧ; ಅಡಗು: ಅವಿತುಕೊಳ್ಳು, ಮರೆಯಾಗು; ಕುವರ: ಮಗ; ಮರಣ: ಸಾವು; ವಾರ್ತೆ: ವಿಚಾರ; ಮನ: ಮನಸ್ಸು; ನೆನೆ: ಜ್ಞಾಪಿಸು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಧುರದ +ಕೋಳಾಹಳದ +ಢಗೆ +ಡಾ
ವರಿಸಿ +ಬಳಲಿ +ಧನಂಜಯನು +ವರ
ಸರಸಿಯಲಿ +ಮುಳುಗಿರಲು +ನಸು +ನಗುತ್+ಒಂದ್+ಉಪಾಯದಲಿ
ನರನೊಳ್+ಇನ್ನ್+ಅರುಹುವೆನು +ಘನ +ಸಂ
ಗರದೊಳ್+ಅಡಗಿದ +ರಾಜ +ಕುವರನ
ಮರಣ+ವಾರ್ತೆಯನೆಂದು +ಮನದಲಿ +ನೆನೆದನ್+ಅಸುರಾರಿ

ಅಚ್ಚರಿ:
(೧) ಧುರ, ಸಂಗರ – ಸಮಾನಾರ್ಥಕ ಪದ
(೨) ಸತ್ತ ಎಂದು ಹೇಳಲು – ಘನ ಸಂಗರದೊಳಡಗಿದ ಪದದ ಬಳಕೆ