ಪದ್ಯ ೩೧: ಅಭಿಮನ್ಯುವು ಪದ್ಮವ್ಯೂಹದಲ್ಲಿ ಹೇಗೆ ಸಂಚರಿಸಿದನು?

ದಳವು ದಳವುಳವಾಯ್ತು ಕೇಸರ
ದೊಳಗೆ ವಿಸಟಂಬರಿದು ಕರ್ಣಿಕೆ
ಯೊಳಗೆ ರಿಂಗಣಗುಣಿದು ಸಂಗರ ಜಯದ ಮಡುವಿನಲಿ
ಸಲೆ ಸೊಗಸಿ ತನಿ ಸೊಕ್ಕಿ ದೆಸೆ ಪಟ
ದುಳಿದು ಸೌಭದ್ರೇಯಭೃಂಗನ
ಬಿಲುದನಿಯ ಭರವಂಜಿಸಿತು ಜಯಯುವತಿ ವಿರಹಿಗಳ (ದ್ರೋಣ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಪದ್ಮವ್ಯೂಹ ದಳವು ಕೊಳ್ಳೆಹೋಯಿತು. ಕೇಸರದಲ್ಲಿ ಸ್ವೇಚ್ಛಾವಿಹಾರ ಮಾಡಿ, ಕರ್ಣಿಕೆಯಲ್ಲಿ ರಿಂಗಣಗುಣಿದು ಯುದ್ಧವಿಜಯದ ಸರೋವರದಲ್ಲಿ ಸೊಗಸಿನಿಂದ ಎತ್ತೆತ್ತಲೋ ಸ್ವೇಚ್ಛೆಯಿಂದ ವಿಹರಿಸಿದ ಅಭಿಮನ್ಯುವೆಂಬ ದುಂಬಿಯ ಝೇಂಕಾರವು ಜಯಲಕ್ಷ್ಮಿಯ ವಿರಹಿಗಳನ್ನು ಹೆದರಿಸಿತು.

ಅರ್ಥ:
ದಳ: ಸೈನ್ಯ; ಕೇಸರ: ಹೂವಿನಲ್ಲಿರುವ ಕುಸುರು; ದಳವುಳ: ಸೂರೆ; ವಿಸಟ:ಯಥೇಚ್ಛವಾಗಿ, ಮನ ಬಂದಂತೆ; ಕರ್ಣಿಕೆ: ಕಮಲದ ಮಧ್ಯ ಭಾಗ; ರಿಂಗಣ: ಸುತ್ತುತ್ತಾ, ಒಂದು ಬಗೆಯ ನೃತ್ಯ; ಸಂಗರ: ಯುದ್ಧ; ಜಯ: ಗೆಲುವು; ಮಡುವು: ಆಶ್ರಯಸ್ಥಾನ, ಆಳವಾದ ನೀರಿರುವ ಪ್ರದೇಶ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಸೊಗಸು: ಚೆಲುವು; ತನಿ: ಚೆನ್ನಾಗಿ ಬೆಳೆದುದು; ಸೊಕ್ಕು: ಅಮಲು, ಮದ; ದೆಸೆ: ದಿಕ್ಕು; ಪಟ: ಬಾವುಟ; ಉಳಿದು: ಹೊರತಾಗು; ಸೌಭದ್ರೇಯ: ಅಭಿಮನ್ಯು; ಭೃಂಗ: ದುಂಬಿ; ಬಿಲುದನಿ: ಚಾಪದ ಧ್ವನಿ; ಭರವು: ವೇಗ; ಅಂಜಿಸು: ಹೆದರಿಸು; ಜಯ: ಗೆಲುವು; ಯುವತಿ: ಹೆಣ್ಣು; ಜಯಯುವತಿ: ವಿಜಯಲಕ್ಷ್ಮಿ; ವಿರಹಿ: ವಿಯೋಗಿ, ಪ್ರಿಯೆಯನ್ನು ಅಗಲಿದ ವ್ಯಕ್ತಿ;

ಪದವಿಂಗಡಣೆ:
ದಳವು +ದಳವುಳವಾಯ್ತು +ಕೇಸರ
ದೊಳಗೆ +ವಿಸಟಂಬರಿದು +ಕರ್ಣಿಕೆ
ಯೊಳಗೆ+ ರಿಂಗಣ+ಕುಣಿದು+ ಸಂಗರ +ಜಯದ +ಮಡುವಿನಲಿ
ಸಲೆ +ಸೊಗಸಿ +ತನಿ +ಸೊಕ್ಕಿ +ದೆಸೆ +ಪಟ
ದುಳಿದು +ಸೌಭದ್ರೇಯ+ಭೃಂಗನ
ಬಿಲುದನಿಯ +ಭರವ್+ಅಂಜಿಸಿತು +ಜಯಯುವತಿ +ವಿರಹಿಗಳ

ಅಚ್ಚರಿ:
(೧) ಅಭಿಮನ್ಯುವನ್ನು ದುಂಬಿಗೆ ಹೋಲಿಸಿರುವ ಪರಿ
(೨) ವೈರಿಗಳ ಭಾವನೆಯನ್ನು ಹೇಳುವ ಸಾಲು – ಸೌಭದ್ರೇಯಭೃಂಗನ ಬಿಲುದನಿಯ ಭರವಂಜಿಸಿತು ಜಯಯುವತಿ ವಿರಹಿಗಳ

ಪದ್ಯ ೪: ಅಭಿಮನ್ಯುವಿನ ಪರಾಕ್ರಮವು ಹೇಗಿತ್ತು?

ಎಸಲು ತಲೆವರಿಗೆಯಲಿ ಕವಿದುದು
ದೆಸೆಯ ಹಳುವಿಂಗೌಕುವತಿರಥ
ರುಸುರುಮಾರಿಗಳೇರಿ ಹೊಯ್ದರು ರಾಯ ರಾವುತರು
ನುಸುಳಿದರು ನಾಚಿಕೆಯಲಾತನ
ವಿಶಿಖಜಲದಲಿ ತೊಳೆದರತಿರಥ
ರಸಮ ಸಂಗರವಾಯ್ತು ಮತ್ತಭಿಮನ್ಯುವಿದಿರಿನಲಿ (ದ್ರೋಣ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಬಾಣಗಳನ್ನು ನೋಡಿ, ದಿಕ್ಕು ದಿಕ್ಕುಗಳಲ್ಲಿ ಕವಿದು ಬರುವ ಬಾಣಗಳ ಅರಣ್ಯಕ್ಕೆ ತಲೆಗೆ ಹರಿಗೆಯನ್ನು ಹಿಡಿದು ತಮ್ಮ ಪ್ರಾಣವನ್ನು ಮಾರಿಕೊಂಡ ರಾಜರ ರಾವುತರು ಅಭಿಮನ್ಯುವನ್ನು ಹೊಡೆದರು. ಅಭಿಮನ್ಯುವಿನ ಬಾಣಗಳ ನೀರಿನಲ್ಲಿ ಅವರು ತೇಲಿಹೋದರು. ನಾಚಿಕೆಪಟ್ಟು ಓಡಿಹೋದರು. ಯುದ್ಧವು ಅಸಮವಾಯಿತು, ಅಭಿಮನ್ಯುವಿನ ಪರಾಕ್ರಮಕ್ಕೆ ಅವರು ಯಾರೂ ಸಮವಾಗಲಿಲ್ಲ.

ಅರ್ಥ:
ಎಸಲು: ಚಿಗುರು; ತಲೆವರಿಗೆ: ಗುರಾಣಿ; ಕವಿ: ಆವರಿಸು; ದೆಸೆ: ದಿಕ್ಕು; ಹಳುವು: ಕಾಡು; ಔಕು: ತಳ್ಳು; ಅತಿರಥ: ಪರಾಕ್ರಮಿ; ಉಸುರು: ಜೀವ; ಮಾರಿ: ಕ್ಷುದ್ರ ದೇವತೆ; ಹೊಯ್ದು: ಹೊಡೆ; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನುಸುಳು: ಇಕ್ಕಟ್ಟಾದ ಸಂದಿಯಲ್ಲಿ ತೂರುವಿಕೆ; ನಾಚಿಕೆ: ಲಜ್ಜೆ; ವಿಶಿಖ: ಬಾಣ, ಅಂಬು; ಜಲ: ನೀರು; ತೊಳೆ: ಸ್ವಚ್ಛಮಾಡು; ಅಸಮ: ಸಮವಲ್ಲದ; ಸಂಗರ: ಯುದ್ಧ; ಇದಿರು: ಎದುರು;

ಪದವಿಂಗಡಣೆ:
ಎಸಲು +ತಲೆವರಿಗೆಯಲಿ +ಕವಿದುದು
ದೆಸೆಯ +ಹಳುವಿಂಗ್+ಔಕುವ್+ಅತಿರಥರ್
ಉಸುರು+ಮಾರಿಗಳ್+ಏರಿ +ಹೊಯ್ದರು +ರಾಯ +ರಾವುತರು
ನುಸುಳಿದರು +ನಾಚಿಕೆಯಲ್+ಆತನ
ವಿಶಿಖ+ಜಲದಲಿ +ತೊಳೆದರ್+ಅತಿರಥರ್
ಅಸಮ +ಸಂಗರವಾಯ್ತು +ಮತ್ತ್+ಅಭಿಮನ್ಯುವ್+ಇದಿರಿನಲಿ

ಅಚ್ಚರಿ:
(೧) ಬಾಣದ ನೀರಿನಲ್ಲಿ ತೇಲಿದರು ಎಂದು ಹೇಳುವ ಪರಿ – ನುಸುಳಿದರು ನಾಚಿಕೆಯಲಾತನ ವಿಶಿಖಜಲದಲಿ ತೊಳೆದರತಿರಥ

ಪದ್ಯ ೨: ಅಭಿಮನ್ಯುವಿನ ವೇಗವು ಹೇಗಿತ್ತು?

ಹರಿಯ ಚಕ್ರ ವರೂಥ ಚಕ್ರದೊ
ಳುರವಣಿಪ ತೇಜಿಗಳ ಕಡುಹಿನ
ಖುರನ ಹೊಯ್ಲಲಿ ವಿಲಯಪವನನ ಗರಿಯ ಗಾಳಿಯಲಿ
ಹರನ ನಯನಜ್ವಾಲೆ ಪಾರ್ಥಿಯ
ಸರಳ ಕಿಡಿಯಲಿ ಪಲ್ಲಟಿಸೆ ಸಂ
ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ (ದ್ರೋಣ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಹರಿಸುದರ್ಶನ ಚಕ್ರವು ಅಭಿಮನ್ಯುವಿನ ರಥದ ಚಕ್ರಗಳಲ್ಲಿ ಮತ್ತು ರಥಾಶ್ವಗಳ ಗೊರಸುಗಳ ಹೊಯ್ಲಿನಲ್ಲಿ, ಪ್ರಳಯ ಕಾಲದ ವಾಯುವಿನ ಜೋರು ಅವನ ಬಾಣಗಳ ಗರಿಗಳ ಗಾಳಿಯಲ್ಲಿ, ಶಿವನ ಹಣೆಗಣ್ಣಿನ ಕಿಡಿಯು ಅವನ ಬಾಣಗಳಿಂದ ಹೊರಟ ಕಿಡಿಗಳಲ್ಲಿ ಸೇರಿಕೊಂಡವು. ಅಭಿಮನ್ಯುವು ವ್ಯೂಹವನ್ನು ಹೊಕ್ಕು ಸಕಲ ಸೈನಿಕರನ್ನೂ ಸಂಹರಿಸಿದನು.

ಅರ್ಥ:
ಹರಿ: ಕೃಷ್ಣ; ಚಕ್ರ: ಗಾಲಿ; ವರೂಥ: ತೇರು, ರಥ; ಉರವಣೆ: ಆತುರ, ಅವಸರ; ತೇಜಿ:ಕುದುರೆ; ಕಡು: ವಿಶೇಷ, ಅಧಿಕ; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಹೊಯ್ಲು: ಏಟು, ಹೊಡೆತ; ವಿಲಯ: ನಾಶ, ಪ್ರಳಯ; ಪವನ: ವಾಯು; ಗರಿ: ರೆಕ್ಕೆ; ಗಾಳಿ: ವಾಯು; ಹರ: ಶಂಕರ; ನಯನ: ಕಣ್ಣು; ಜ್ವಾಲೆ: ಬೆಂಕಿ; ಪಾರ್ಥಿ: ಅರ್ಜುನನ ಮಗ; ಸರಳ: ಬಾಣ; ಕಿಡಿ: ಬೆಂಕಿ; ಪಲ್ಲಟ: ಮಾರ್ಪಾಟು; ಸಂಗರ: ಯುದ್ಧ; ಸೈವರಿ: ನೇರವಾಗಿ ಸಾಗು, ಮುಂದಕ್ಕೆ ಹೋಗು; ಸದೆ: ಕೊಲ್ಲು; ಸಕಲ: ಎಲ್ಲಾ; ಸೈನಿಕ: ಕಾಲಾಳು;

ಪದವಿಂಗಡಣೆ:
ಹರಿಯ +ಚಕ್ರ +ವರೂಥ +ಚಕ್ರದೊಳ್
ಉರವಣಿಪ +ತೇಜಿಗಳ +ಕಡುಹಿನ
ಖುರನ +ಹೊಯ್ಲಲಿ +ವಿಲಯ+ಪವನನ +ಗರಿಯ +ಗಾಳಿಯಲಿ
ಹರನ +ನಯನ+ಜ್ವಾಲೆ +ಪಾರ್ಥಿಯ
ಸರಳ +ಕಿಡಿಯಲಿ +ಪಲ್ಲಟಿಸೆ +ಸಂ
ಗರದೊಳಗೆ +ಸೈವರಿದು +ಸದೆದನು+ ಸಕಲ+ ಸೈನಿಕರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಯ ಚಕ್ರ ವರೂಥ ಚಕ್ರದೊಳ್, ವಿಲಯಪವನನ ಗರಿಯ ಗಾಳಿಯಲಿ, ಹರನ ನಯನಜ್ವಾಲೆ ಪಾರ್ಥಿಯ ಸರಳ ಕಿಡಿಯಲಿ

ಪದ್ಯ ೪೩: ಅಭಿಮನ್ಯುವು ತನ್ನ ಸಾಮರ್ಥ್ಯದ ಬಗ್ಗೆ ಏನು ಹೇಳಿದ?

ಧರಣಿಪತಿ ಕೇಳುಳಿದ ಪುಷ್ಪದ
ಪರಿಮಳವು ಪಥಿಸಿದರೆ ಸಂಪಗೆ
ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ
ಅರಿಭಟರು ಭೀಮಾದಿಗಳ ಗೆಲಿ
ದಿರಲಿ ಹೊಲ್ಲಹವೇನು ಘನ ಸಂ
ಗರದೊಳಗೆ ನನ್ನೊಡನೆ ತುಡುಕಿದಡರಿಯಬಹುದೆಂದ (ದ್ರೋಣ ಪರ್ವ್, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾಜ, ದುಂಬಿಗಳ ಹಿಂಡಿಗೆ ಎಲ್ಲಾ ಹೂಗಳ ಮಕರಂದವು ಇಷ್ಟವಾದರೆ, ಸಂಪಗೆಯ ಪರಿಮಳವು ಪಥ್ಯವಾದೀತೇ? ಭೀಮಾದಿಗಳನ್ನು ಶತ್ರುಗಳು ಗೆದ್ದರೇನಂತೆ? ನನ್ನ ಮೇಲೆ ಯುದ್ಧವನ್ನು ಮಾಡಲು ಬಂದರೆ ಅವರು ತಮ್ಮ ಯೋಗ್ಯತೆಯನ್ನು ತಿಳಿದುಕೊಳ್ಳುತ್ತಾರೆ ಎಂದು ಅಭಿಮನ್ಯುವು ನುಡಿದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಉಳಿದ: ಮಿಕ್ಕ; ಪುಷ್ಪ: ಹೂವು; ಪರಿಮಳ: ಸುವಾಸನೆ; ಪಥಿಸು: ಒಗ್ಗು, ಹಿಡಿಸು; ಸಂಪಗೆ: ಚಂಪಕ; ಅರಳು: ಹೂವು; ಪಥ್ಯ:ಯೋಗ್ಯವಾದುದು, ಹಿತವಾದುದು; ತುಂಬಿ: ಭ್ರಮರ; ತಿಂತಿಣಿ: ಗುಂಪು; ಅರಿ: ವೈರಿ; ಭಟ: ಸೈನಿಕ; ಗೆಲಿದು: ಜಯಿಸು; ಹೊಲ್ಲ: ಹೀನವಾದುದು, ಕೆಟ್ಟದ್ದು; ಘನ: ಶ್ರೇಷ್ಠ; ಸಂಗರ: ಯುದ್ಧ; ತುಡುಕು: ಹೋರಾಡು, ಸೆಣಸು; ಅರಿ: ತಿಳಿ;

ಪದವಿಂಗಡಣೆ:
ಧರಣಿಪತಿ +ಕೇಳ್+ಉಳಿದ +ಪುಷ್ಪದ
ಪರಿಮಳವು +ಪಥಿಸಿದರೆ +ಸಂಪಗೆ
ಅರಳ +ಪರಿಮಳ +ಪಥ್ಯವೇ +ತುಂಬಿಗಳ +ತಿಂತಿಣಿಗೆ
ಅರಿಭಟರು +ಭೀಮಾದಿಗಳ +ಗೆಲಿ
ದಿರಲಿ +ಹೊಲ್ಲಹವೇನು+ ಘನ +ಸಂ
ಗರದೊಳಗೆ +ನನ್ನೊಡನೆ +ತುಡುಕಿದಡ್+ಅರಿಯಬಹುದೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪುಷ್ಪದ ಪರಿಮಳವು ಪಥಿಸಿದರೆ ಸಂಪಗೆ ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ

ಪದ್ಯ ೨೬: ಅರ್ಜುನನು ಕೃಷ್ಣನಿಗೆ ಏನು ಕೇಳಿದ?

ಚರರ ಕಳುಹಿದನಸುರವೈರಿಗೆ
ಕರವ ಮುಗಿದನು ಪಾರ್ಥನೀ ಸಂ
ಗರದೊಳಗೆ ನಿಮ್ಮಡಿಯ ಚಿತ್ತದೊಳಾವ ಥಟ್ಟಿನಲಿ
ಬೆರಸುವೆವು ನಾವಿಂದಿನೀ ಮೋ
ಹರದ ಮುರಿವಸದಳ ನಿಧಾನಿಸ
ಲರಿದೆನಲು ಮನದೊಳಗೆ ನಿಶ್ಚೈಸಿದನು ಮುರವೈರಿ (ದ್ರೋಣ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನನು ದ್ರೋಣನ ದೂತರನ್ನು ಹಿಂದಕ್ಕೆ ಕಳುಹಿಸಿ ಶ್ರೀಕೃಷ್ಣನಿಗೆ ಕೈಮುಗಿದು ಇಂದು ಯಾವ ಸೈನ್ಯದಲ್ಲಿ ನಾವು ಯುದ್ಧಮಾಡೋಣ, ಇಂದಿನ ಪದ್ಮವ್ಯೂಹದ ರಚನೆಯಲ್ಲಿ ನಿಂತ ಸೈನ್ಯವನ್ನು ಮುರಿಯುವುದಸಾಧ್ಯ ಎಂದು ಕೇಳಲು ಶ್ರೀಕೃಷ್ಣನು ಮನಸ್ಸಿನಲ್ಲಿ ಹೀಗೆಂದು ನಿಶ್ಚೈಸಿದನು.

ಅರ್ಥ:
ಚರ: ದೂತ, ಚಲಿಸುವವ; ಕಳುಹು: ತೆರಳು; ಅಸುರವೈರಿ: ಕೃಷ್ಣ; ಕರ: ಹಸ್ತ; ಕರಮುಗಿದು: ನಮಸ್ಕರಿಸು; ಸಂಗರ: ಯುದ್ಧ; ನಿಮ್ಮಡಿ: ನಿಮ್ಮ ಪಾದ; ಚಿತ್ತ: ಮನಸ್ಸು; ಥಟ್ಟು: ಗುಂಪು, ಸೈನ್ಯ; ಬೆರಸು: ಕೂಡು; ಮೋಹರ: ಯುದ್ಧ; ಮುರಿ: ಸೀಳು; ಅಸದಳ: ಅಸಾಧ್ಯ; ನಿಧಾನ: ಸಾವಕಾಶ; ಅರಿ: ತಿಳಿ; ಮನ: ಮನಸ್ಸು; ನಿಶ್ಚೈಸು: ನಿರ್ಧರಿಸು; ಮುರವೈರಿ: ಕೃಷ್ಣ;

ಪದವಿಂಗಡಣೆ:
ಚರರ +ಕಳುಹಿದನ್ +ಅಸುರವೈರಿಗೆ
ಕರವ ಮುಗಿದನು+ ಪಾರ್ಥನ್+ಈ+ ಸಂ
ಗರದೊಳಗೆ +ನಿಮ್ಮಡಿಯ +ಚಿತ್ತದೊಳ್+ಆವ +ಥಟ್ಟಿನಲಿ
ಬೆರಸುವೆವು +ನಾವ್+ಇಂದಿನೀ+ ಮೋ
ಹರದ +ಮುರಿವ್+ಅಸದಳ +ನಿಧಾನಿಸಲ್
ಅರಿದೆನಲು+ ಮನದೊಳಗೆ +ನಿಶ್ಚೈಸಿದನು +ಮುರವೈರಿ

ಅಚ್ಚರಿ:
(೧) ಮುರವೈರಿ, ಅಸುರವೈರಿ – ಕೃಷ್ಣನನ್ನು ಕರೆದ ಪರಿ
(೨) ಸಂಗರ, ಮೋಹರ – ಸಮಾನಾರ್ಥಕ ಪದ

ಪದ್ಯ ೪೧: ಭಗದತ್ತನು ಯಾರನ್ನು ಕರೆಯಲು ಹೇಳಿದನು?

ಸಾಕು ಬಳಲಿದಿರಕಟಕಟ ನಿಮ
ಗೇಕೆ ಸಂಗರವಾನೆಯೊಡನೆ ಪಿ
ನಾಕಿ ಸಮರದೊಳಳುಕುವನು ಕರಿ ನಿಮ್ಮ ಪಾಡೇನು
ಆ ಕಿರೀಟಿಯ ಕರಸಿಕೊಳ್ಳಿ ವಿ
ವೇಕವುಳ್ಳರೆ ತೊಲಗಿಯೆನುತವೆ
ನೂಕಿದನು ಭಗದತ್ತನನಿಬರ ಮೇಲೆ ದಿಗ್ಗಜವ (ದ್ರೋಣ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಆಗ ಭಗದತ್ತನು, ನೀವು ಹೋರಾಡಿ ಬಳಲಿರುವಿರಿ, ಸುಪ್ರತೀಕದೊಡನೆ ಕಾದಲು ಶಿವನೇ ಅಳುಕುತ್ತಾನೆ, ಇನ್ನು ನಿಮ್ಮ ಪಾಡೇನು? ಅರ್ಜುನನನ್ನು ಕರೆಸಿಕೊಳ್ಳಿರಿ, ನಿಮಗೆ ವಿವೇಕವಿದ್ದರೆ ತೊಲಗಿರಿ ಎನ್ನುತ್ತಾ ಭಗದತ್ತನು ಅವರೆಲ್ಲರ ಮೇಲೆ ದಿಗ್ಗಜವನ್ನು ಬಿಟ್ಟನು.

ಅರ್ಥ:
ಸಾಕು: ನಿಲ್ಲಿಸು; ಬಳಲು: ಆಯಾಸಗೊಳ್ಳು; ಅಕಟ: ಅಯ್ಯೋ; ಸಂಗರ: ಯುದ್ಧ; ಆನೆ: ಕರಿ; ಪಿನಾಕಿ: ಈಶ್ವರ; ಸಮರ: ಯುದ್ಧ; ಅಳುಕು: ಹೆದರು; ಕರಿ: ಆನೆ; ಪಾಡು: ಸ್ಥಿತಿ; ಕಿರೀಟಿ: ಅರ್ಜುನ; ಕರಸು: ಬರೆಮಾಡು; ವಿವೇಕ: ಯುಕ್ತಾಯುಕ್ತ ವಿಚಾರ; ತೊಲಗು: ದೂರ ಸರಿ; ನೂಕು: ತಳ್ಳು; ಅನಿಬರ: ಅಷ್ಟುಜನ; ದಿಗ್ಗಜ: ಭೂಭಾಗವನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು;

ಪದವಿಂಗಡಣೆ:
ಸಾಕು+ ಬಳಲಿದಿರ್+ಅಕಟಕಟ +ನಿಮ
ಗೇಕೆ +ಸಂಗರವ್+ಆನೆಯೊಡನೆ+ ಪಿ
ನಾಕಿ +ಸಮರದೊಳ್+ಅಳುಕುವನು +ಕರಿ +ನಿಮ್ಮ +ಪಾಡೇನು
ಆ+ ಕಿರೀಟಿಯ +ಕರಸಿಕೊಳ್ಳಿ +ವಿ
ವೇಕವುಳ್ಳರೆ +ತೊಲಗಿ+ಎನುತವೆ
ನೂಕಿದನು +ಭಗದತ್ತನ್+ಅನಿಬರ +ಮೇಲೆ +ದಿಗ್ಗಜವ

ಅಚ್ಚರಿ:
(೧) ಸುಪ್ರತೀಕದ ಹಿರಿಮೆ – ಪಿನಾಕಿ ಸಮರದೊಳಳುಕುವನು ಕರಿ ನಿಮ್ಮ ಪಾಡೇನು

ಪದ್ಯ ೨೯: ಕೌರವ ಸೈನ್ಯದವರು ಹೇಗೆ ಯುದ್ಧ ಮಾಡಿದರು?

ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ (ದ್ರೋಣ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ದ್ರೋಣನ ಯುದ್ಧದ ಪರಿಯನ್ನು ಕೇಳು, ದೇವತೆಗಳು ಮತ್ತು ದಾನವರ ನಡುವೆ ನಡೆದ ಯುದ್ಧದ ಪರಿ, ಅದ್ಭುತ ಯುದ್ಧವೇ ನಡೆಯಿತು. ನಿನ್ನ ಸೈನ್ಯದ ಸುಭಟರೇನು ಪರಾಕ್ರಮವಿಲ್ಲದವರೇ? ಅವರ ಆಕ್ರಮನವನ್ನು ತಡೆದುಕೊಳ್ಳಲು ಯಾರಿಗೆ ಸಾಧ್ಯ ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ದಾನವ: ರಾಕ್ಷಸ; ಅಮರ: ದೇವತೆ; ಅದುಭುತ: ಆಶ್ಚರ್ಯ; ಆಹವ: ಯುದ್ಧ; ನಿರಂತರ: ಸದಾ; ವಿಕ್ರಮ: ಪರಾಕ್ರಮ; ಉನ್ನತ: ಹೆಚ್ಚು; ಭಟ: ಸೈನಿಕ; ಬವರ: ಕಾಳಗ, ಯುದ್ಧ; ನೂಕು: ತಳ್ಳು; ಸೂನು: ಮಗ; ಸುಭಟ: ಪರಾಕ್ರಮಿ; ಪರಾಕ್ರಮ: ಶಕ್ತಿ; ಹೀನ: ತೊರೆದ, ತ್ಯಜಿಸು; ಕೇಳು: ಆಲಿಸು; ಸಂಗರ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಇತ್ತಲ್+ಆದುದು
ದಾನವ+ಅಮರರ್+ಅದುಭುತ+ಆಹವವ್
ಆ+ ನಿರಂತರ +ವಿಕ್ರಮ+ಉನ್ನತ+ ಭಟರ +ಬವರದಲಿ
ಆನಲಾರಿಗೆ+ ನೂಕುವುದು +ತವ
ಸೂನುವಿನ +ಸುಭಟರು +ಪರಾಕ್ರಮ
ಹೀನರೇ +ಧೃತರಾಷ್ಟ್ರ +ಕೇಳೈ +ದ್ರೋಣ +ಸಂಗರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ದಾನವಾಮರರದುಭುತಾಹವವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ

ಪದ್ಯ ೭: ತ್ರಿಗರ್ತರ ಶಪಥವೇನು?

ನರನ ಬಿಡಲಾಗದು ಮಹಾ ಸಂ
ಗರದೊಳೊಬ್ಬರನೊಬ್ಬರೊಪ್ಪಿಸಿ
ತೆರಳಲಾಗದು ಮುರಿಯಲಾಗದು ಕೊಂಡ ಹೆಜ್ಜೆಗಳ
ಹೊರಳಿವೆಣನನು ಮೆಟ್ಟಿ ಮುಂದಣಿ
ಗುರವಣಿಸುವುದು ತಪ್ಪಿದವರಿಗೆ
ನರಕವೀ ಪಾತಕರ ಗತಿ ನಮಗೆಮ್ದು ಸಾರಿದರು (ದ್ರೋಣ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ತ್ರಿಗರ್ತರು ಅಗ್ನಿಸಾಕ್ಷಿಯಾಗಿ ಹೀಗೆಂದು ಶಪಥಮಾಡಿದರು, ಅರ್ಜುನನನ್ನು ಬೇರೆಡೆಗೆ ಬಿಡಬಾರದು, ಮಹಾಸಂಗ್ರಾಮದಲ್ಲಿ ನಾವು ಒಬ್ಬರನ್ನೊಬ್ಬರು ಬಿಟ್ಟು ಅಥವಾ ಶತ್ರುವಿಗೆ ಕೊಟ್ಟು ಹೋಗಬಾರದು. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬಾರದು. ಹೆಣಗಳನ್ನು ತುಳಿದು ಮುನ್ನುಗ್ಗಬೇಕು, ಇದಕ್ಕೆ ತಪ್ಪಿದರೆ ನಮಗೆ ಇಂಥಿಂಥಾ ಪಾಪಿಗಳ ಗತಿ ಬರಲಿ ಎಂದು ಹೇಳಿದರು.

ಅರ್ಥ:
ನರ: ಅರ್ಜುನ; ಬಿಡು: ತೊರೆ; ಮಹಾ: ದೊಡ್ಡ; ಸಂಗರ: ಯುದ್ಧ; ಒಪ್ಪು: ಒಪ್ಪಿಗೆ, ಸಮ್ಮತಿ; ತೆರಳು: ಹೋಗು, ನಡೆ; ಮುರಿ: ಸೀಳು; ಹೆಜ್ಜೆ: ಪಾದ; ಹೊರಳು: ತಿರುವು, ಬಾಗು; ಮೆಟ್ಟು: ತುಳಿತ; ಮುಂದಣಿ: ಮುಂಚೂಣಿ; ಉರವಣಿಸು: ಆತುರಿಸು; ನರಕ: ಅಧೋಲೋಕ; ಪಾತಕ: ಬೀಳುವಂತೆ ಮಾಡುವುದು; ಗತಿ: ವೇಗ; ಸಾರು: ಹರಡು;

ಪದವಿಂಗಡಣೆ:
ನರನ +ಬಿಡಲಾಗದು +ಮಹಾ +ಸಂ
ಗರದೊಳ್+ಒಬ್ಬರನ್+ಒಬ್ಬರ್+ಒಪ್ಪಿಸಿ
ತೆರಳಲಾಗದು +ಮುರಿಯಲಾಗದು+ ಕೊಂಡ +ಹೆಜ್ಜೆಗಳ
ಹೊರಳಿವೆಣನನು+ ಮೆಟ್ಟಿ+ ಮುಂದಣಿಗ್
ಉರವಣಿಸುವುದು +ತಪ್ಪಿದವರಿಗೆ
ನರಕವೀ +ಪಾತಕರ+ ಗತಿ+ ನಮಗೆಂದು+ ಸಾರಿದರು

ಅಚ್ಚರಿ:
(೧) ಬಿಡಲಾಗದು, ತೆರಳಲಾಗದು, ಮುರಿಯಲಾಗದು – ಪದಗಳ ಬಳಕೆ

ಪದ್ಯ ೧೯: ಚತುರಂಗ ಸೈನ್ಯವೇಕೆ ಕಾರಣದಾಯಿತು?

ಕೊರಳ ತೆತ್ತುದು ಚೂಣಿ ದಳ ಮು
ಖ್ಯರಿಗೆ ಹೇಳಿಕೆಯಾಯ್ತು ಮೋಹರ
ವೆರಡರಲಿ ಮೊನೆಯುಳ್ಳ ನಾಯಕವಾಡಿ ನಲವಿನಲಿ
ಕರಿ ತುರಗ ರಥ ಪಾಯದಳದಲಿ
ಹೊರಳಿ ತಗ್ಗಿತು ರಥದ ಲಗ್ಗೆಯ
ಧರಧುರದ ದೆಖ್ಖಾಳ ಮಿಗೆ ನೂಕಿದರು ಸಂಗರಕೆ (ಭೀಷ್ಮ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮುಂಚೂಣೀಯಲ್ಲಿದ್ದ ಸೈನ್ಯದ ತುಕುಡಿಯ ಸೈನಿಕರು ಮಡಿದರು, ನಾಯಕರು ಬರಬೇಕೆಂದು ಸಾರಿದರು, ಎರಡೂ ದಳಗಳಲ್ಲಿ ನಾಯಕರು ತಮ್ಮ ರಥಗಳಲ್ಲಿ ಯುದ್ಧಕ್ಕೆ ನುಗ್ಗಿದರು. ಚತುರಂಗ ಸೈನ್ಯವು ಕಾಣದಾಯಿತು.

ಅರ್ಥ:
ಕೊರಳು: ಗಂಟಲು; ತೆತ್ತು: ತಿರಿಚು, ಸುತ್ತು; ಚೂಣಿ:ಮುಂದಿನ ಸಾಲು, ಮುಂಭಾಗ; ದಳ: ಸೈನ್ಯ; ಮುಖ್ಯ: ಪ್ರಮುಖ; ಹೇಳು: ತಿಳಿಸು; ಮೋಹರ: ಯುದ್ಧ; ಮೊನೆ: ತುದಿ; ನಾಯಕ: ಒಡೆಯ; ನಲವು: ಸಂತೋಷ; ಕರಿ: ಆನೆ; ತುರಗ: ಅಶ್ವ; ರಥ: ಬಂಡಿ; ಪಾಯದಳ: ಸೈನಿಕ; ಹೊರಳು: ತಿರುವು, ಬಾಗು; ತಗ್ಗು: ಬಾಗು; ರಥ: ಬಂಡಿ; ಲಗ್ಗೆ: ಮುತ್ತಿಗೆ, ಆಕ್ರಮಣ; ಧರಧುರ: ಆಧಿಕ್ಯ, ಅತಿಶಯ; ದೆಖ್ಖಾಳ: ಗೊಂದಲ, ಗಲಭೆ; ಮಿಗೆ: ಅಧಿಕ; ನೂಕು: ತಳ್ಳು; ಸಂಗರ: ಯುದ್ಧ;

ಪದವಿಂಗಡಣೆ:
ಕೊರಳ +ತೆತ್ತುದು +ಚೂಣಿ +ದಳ +ಮು
ಖ್ಯರಿಗೆ +ಹೇಳಿಕೆಯಾಯ್ತು +ಮೋಹರವ್
ಎರಡರಲಿ +ಮೊನೆಯುಳ್ಳ +ನಾಯಕವಾಡಿ +ನಲವಿನಲಿ
ಕರಿ +ತುರಗ +ರಥ +ಪಾಯದಳದಲಿ
ಹೊರಳಿ +ತಗ್ಗಿತು +ರಥದ +ಲಗ್ಗೆಯ
ಧರಧುರದ +ದೆಖ್ಖಾಳ +ಮಿಗೆ +ನೂಕಿದರು +ಸಂಗರಕೆ

ಅಚ್ಚರಿ:
(೧) ನಾಯಕ, ದಳಮುಖ್ಯ – ಸಾಮ್ಯಾರ್ಥ ಪದ
(೨) ಚತುರಂಗ ಸೈನ್ಯವನ್ನು ಹೇಳುವ ಪರಿ – ಕರಿ ತುರಗ ರಥ ಪಾಯದಳದಲಿ ಹೊರಳಿ ತಗ್ಗಿತು

ಪದ್ಯ ೯೩: ಆನೆಗಳ ಯುದ್ಧವಾದ ಮೇಲೆ ಯಾವುದು ಯುದ್ಧಕ್ಕೆ ಬಂತು?

ವಿಗ್ರಹದೊಳಿದಿರಾಂತ ಕರಿಗಳ
ವಿಗ್ರಹಂಗಳು ಕೆಡೆಯೆ ಕಾದಿ ಸ
ಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ
ಉಗ್ರದಾಹವಭೂತಗಣಕೆ ಸ
ಮಗ್ರಭೋಜನವಾಯ್ತು ಸಂಗರ
ದಗ್ರಿಯರು ಕೈವೀಸಿದರು ತೇರುಗಳ ತಿಂತಿಣಿಯ (ಭೀಷ್ಮ ಪರ್ವ, ೪ ಸಂಧಿ, ೯೩ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ಬಂದ ಆನೆಗಳು ಸತ್ತು ಬೀಳಲು, ಜೋದರು ವೀರಮರಣವನ್ನಪ್ಪಿ ದೇವಲೋಕದ ಕೋಟೆಗಳನ್ನು ಗೆಲಿದುಕೊಂಡರು. ಯುದ್ಧರಂಗದ ಭೂತಗಳಿಗೆ ತೃಪ್ತಿಕರವಾದ ಊಟವಾಯಿತು. ಆನೆಗಳ ಕಾಳಗ ಕೆಲಕಾಲ ನಿಲ್ಲಲು, ಸೇನಾ ನಾಯಕರು ಕೈಬೀಸಿ ರಥಗಳನ್ನು ಯುದ್ಧಕ್ಕೆ ಕರೆತಂದರು.

ಅರ್ಥ:
ವಿಗ್ರಹ: ಮೂರ್ತಿ, ಪ್ರತಿಮೆ; ಇದಿರು: ಎದುರು; ಅಂತ: ಕೊನೆ; ಕರಿ: ಆನೆ; ಕೆಡೆ: ಬೀಳು, ಕುಸಿ; ಕಾದಿ: ಹೋರಾಡಿ; ಸಮಗ್ರ: ಎಲ್ಲಾ; ಬಲ: ಶಕ್ತಿ; ಜೋದಾಳಿ: ಯೋಧರ ಗುಂಪು; ಕೊಂಡು: ತೆಗೆದುಕೊ, ಪಡೆ; ಸುರ: ದೇವತೆ; ಕೋಟೆ: ದುರ್ಗ; ಉಗ್ರ: ಭಯಂಕರ; ಆಹವ: ಯುದ್ಧ; ಭೂತ: ದೆವ್ವ; ಗಣ: ಗುಂಪು; ಸಮಗ್ರ: ಒಟ್ಟಾರೆ, ಎಲ್ಲಾ; ಭೋಜನ: ಊಟ; ಸಂಗರ: ಯುದ್ಧ; ಅಗ್ರ: ಮೊದಲು; ವೀಸು: ತೂಗುವಿಕೆ; ಕೈ: ಹಸ್ತ; ತೇರು: ಬಂಡಿ; ತಿಂತಿಣಿ: ಗುಂಪು;

ಪದವಿಂಗಡಣೆ:
ವಿಗ್ರಹದೊಳ್+ಇದಿರ್+ಅಂತ +ಕರಿಗಳ
ವಿಗ್ರಹಂಗಳು+ ಕೆಡೆಯೆ+ ಕಾದಿ+ ಸ
ಮಗ್ರಬಲ +ಜೋದಾಳಿ +ಕೊಂಡುದು +ಸುರರ+ ಕೋಟೆಗಳ
ಉಗ್ರದ್+ಆಹವ+ಭೂತಗಣಕೆ +ಸ
ಮಗ್ರ+ಭೋಜನವಾಯ್ತು +ಸಂಗರದ್
ಅಗ್ರಿಯರು +ಕೈವೀಸಿದರು +ತೇರುಗಳ +ತಿಂತಿಣಿಯ

ಅಚ್ಚರಿ:
(೧) ಉಗ್ರ, ಸಮಗ್ರ – ಪ್ರಾಸ ಪದಗಳು
(೨) ಸತ್ತರು ಎಂದು ಹೇಳಲು – ಸಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ