ಪದ್ಯ ೨೮: ಮುನಿಗಳು ಭೀಷ್ಮರಿಗೆ ಯಾವ ವಿಷಯವನ್ನು ತಿಳಿಸಿದರು?

ಇವರ ಜನನ ಕ್ರಮವನಾ ಪಾಂ
ಡುವಿನ ವಿಕ್ರಮವನು ತಪೋಧನ
ನಿವಹ ಕೊಂಡಾಡಿದುದು ಬಳಿಕಿನ ಮರಣಸಂಗತಿಯ
ಅವನಿಪನ ಸಂಸ್ಕಾರ ಮಾದ್ರೀ
ಯುವತಿ ಸಹಗಮನೋರ್ಧ್ವ ದೇಹಿಕ
ವಿವಿಧ ಕೃತ್ಯವನೀ ಪ್ರಪಂಚವನವರಿಗರುಹಿದರು (ಆದಿ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪಾಂಡವರ ಜನನವನ್ನೂ, ಪಾಂಡುವಿನ ಪರಾಕ್ರಮವನ್ನೂ, ಋಷಿಗಳು ಹೊಗಳಿದರು. ನಂತರ ಪಾಂಡುವಿನ ಮರಣ, ಮಾದ್ರಿಯ ಸಹಗಮನ, ಅವರ ಅಪರಕ್ರಿಯೆಗಳ ವಿಷಯಗಳೆಲ್ಲವನ್ನೂ ಭೀಷ್ಮನೇ ಮೊದಲಾದವರಿಗೆ ತಿಳಿಸಿದರು.

ಅರ್ಥ:
ಜನನ: ಹುಟ್ಟು; ಕ್ರಮ: ನಡೆಯುವಿಕೆ; ವಿಕ್ರಮ: ಶೌರ್ಯ; ತಪೋಧನ: ಋಷಿ; ನಿವಹ: ಗುಂಪು; ಕೊಂಡಾಡು: ಹೊಗಳು; ಬಳಿಕ: ನಂತರ; ಮರಣ: ಸಾವು; ಸಂಗತಿ: ವಿಚಾರ; ಅವನಿಪ: ರಾಜ; ಸಂಸ್ಕಾರ: ತಿದ್ದುಪಾಟು, ಪರಿಷ್ಕರಣ; ಯುವತಿ: ಹೆಣ್ಣು; ಸಹಗಮನ: ಪತಿಯ ಶವದ ಜೊತೆಯಲ್ಲಿಯೇ ಪತ್ನಿಯು ಚಿತೆಯೇರುವುದು; ಊರ್ಧ್ವ: ಕ್ರಿಯೆ ಅಂತ್ಯಕ್ರಿಯೆ; ದೇಹಿಕ: ಬೇಡುವವ; ವಿವಿಧ: ಹಲವಾರು; ಕೃತ್ಯ: ಕಾರ್ಯ; ಪ್ರಪಂಚ: ಜಗತ್ತು; ಅರುಹು: ಹೇಳು;

ಪದವಿಂಗಡಣೆ:
ಇವರ +ಜನನ +ಕ್ರಮವನ್+ಆ+ ಪಾಂ
ಡುವಿನ +ವಿಕ್ರಮವನು+ ತಪೋಧನ
ನಿವಹ +ಕೊಂಡಾಡಿದುದು +ಬಳಿಕಿನ +ಮರಣ+ಸಂಗತಿಯ
ಅವನಿಪನ +ಸಂಸ್ಕಾರ +ಮಾದ್ರೀ
ಯುವತಿ +ಸಹಗಮನ+ಊರ್ಧ್ವ +ದೇಹಿಕ
ವಿವಿಧ +ಕೃತ್ಯವನೀ +ಪ್ರಪಂಚವನ್+ಅವರಿಗ್+ಅರುಹಿದರು

ಅಚ್ಚರಿ:
(೧) ಮುನಿಗಳು ಎಂದು ಹೇಳಲು ತಪೋಧನ ಪದದ ಬಳಕೆ

ಪದ್ಯ ೨೯: ದುರ್ಯೋಧನನು ಭೀಮನ ಹೊಟ್ಟೆಯಿಂದ ಯಾರನ್ನು ತೆಗೆಯುತ್ತೇನೆಂದನು?

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದೆಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ನನ್ನ ಮನಸ್ಸು ಕದಡಿದೆ, ಆದರೆ ಪರಾಕ್ರಮದ ಕಡಲು ಬತ್ತಿಲ್ಲ, ನೆಲೆನಿಂತಿದೆ. ಅರ್ಥವಿಲ್ಲದೆ ಮಾತಾಡಿ ಏನು ಪ್ರಯೋಜನ? ಸಂಜಯ ಹಿಂದಾದುದನ್ನು ಲೆಕ್ಕಿಸಬೇಡ. ಯುದ್ಧದಲ್ಲಿ ಭೀಮನು ದುಶ್ಯಾಸನನನ್ನು ತಿಂದು ತೇಗಿದನಲ್ಲವೇ? ನನ್ನ ತಮ್ಮನನ್ನು ಭೀಮನ ಹೊಟ್ಟೆಯಿಂದ ತೆಗೆಯುತ್ತೇನೆ, ಆ ವಿಚಿತ್ರವನು ನೋಡು ಎಂದು ಹೇಳಿದನು.

ಅರ್ಥ:
ಕದಡು: ಬಗ್ಗಡ, ರಾಡಿ; ಅಂತಃಕರಣ: ಒಳ ಮನಸ್ಸು; ವಿಕ್ರಮ: ಪರಾಕ್ರಮಿ; ಉದಧಿ: ಸಾಗರ; ನೆಲೆ: ಸ್ಥಾನ; ನಿರರ್ಥಕ: ಪ್ರಯೋಜನವಿಲ್ಲದ; ಒದರು: ಹೇಳು, ಹೊರಹಾಕು; ಫಲ: ಪ್ರಯೋಜನ; ಹಿಂದನ: ಪೂರ್ವ, ನಡೆದ; ಎಣಿಸು: ಲೆಕ್ಕಿಸು; ಕದನ: ಯುದ್ಧ; ತೇಗು: ಢರಕೆ, ತಿಂದು ಮುಗಿಸು; ಬಕ: ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ; ಬಕವೈರಿ: ಭೀಮ; ತಮ್ಮ: ಸಹೋಅರ; ಉದರ: ಹೊಟ್ಟೆ; ತೆಗೆ: ಈಚೆಗೆ ತರು, ಹೊರತರು; ವಿಚಿತ್ರ: ಬೆರಗುಗೊಳಿಸುವಂತಹುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಕದಡಿತ್+ಅಂತಃಕರಣ+ ವಿಕ್ರಮದ್
ಉದಧಿ +ನೆಲೆಯಾಯಿತು +ನಿರರ್ಥಕೆ
ಒದರಿದೆಡೆ +ಫಲವೇನು +ಸಂಜಯ +ಹಿಂದನ್+ಎಣಿಸದಿರು
ಕದನದಲಿ +ದುಶ್ಯಾಸನನ +ತೇ
ಗಿದನಲಾ +ಬಕವೈರಿ +ತಮ್ಮನನ್
ಉದರದಲಿ +ತೆಗೆವೆನು +ವಿಚಿತ್ರವ +ನೋಡು +ನೀನೆಂದ

ಅಚ್ಚರಿ:
(೧) ದುರ್ಯೋಧನನ ಶಕ್ತಿಯನ್ನು ವಿವರಿಸುವ ಪರಿ – ವಿಕ್ರಮದುದಧಿ ನೆಲೆಯಾಯಿತು
(೨) ಭೀಮನನ್ನು ಬಕವೈರಿ ಎಂದು ಕರೆದಿರುವುದು

ಪದ್ಯ ೩೬: ಕೌರವನು ಧರ್ಮಜನಿಗೇನು ಹೇಳಿದ?

ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ (ಗದಾ ಪರ್ವ, ೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲವೋ ನಪುಂಸಕ ಧರ್ಮಜ, ತೊಲಗಿ ಉಳಿದುಕೋ, ಭೀಮನ ಶಕ್ತಿಯೇ ನಿನ್ನ ಶಕ್ತಿ, ಅರ್ಜುನನ ಪೌರುಷವೇ ನಿನ್ನ ಪೌರುಷ. ನನ್ನನ್ನಿದಿರಿಸಿ ಕ್ಷತ್ರಧರ್ಮವನ್ನು ಪಾಲಿಸು. ಹೆದರಿ ಓಡಬೇಡ, ನಿಲ್ಲು ಎಂದು ಕೌರವನು ಕೂಗುತ್ತಾ ಬರುವುದು ಭೀಮನಿಗೆ ಕೇಳಿಸಿತು.

ಅರ್ಥ:
ನಪುಂಸಕ: ಷಂಡ, ಖೋಜಾ; ಸುತ: ಮಗ; ಫಡ: ತಿರಸ್ಕಾರದ ಮಾತು; ತೊಲಗು: ದೂರ ಸರಿ; ಕರೆ: ಬರೆಮಾಡು; ಬಲುಹ: ಶಕ್ತಿ; ವಿಕ್ರಮ: ಶೂರ, ಸಾಹಸ; ಮಲೆತು: ಕೊಬ್ಬಿದ; ಮೆರೆ: ಹೊಳೆ, ಪ್ರಕಾಶಿಸು; ಕ್ಷತ್ರಧರ್ಮ: ಕ್ಷತ್ರಿಯ; ಧರ್ಮ: ಧಾರಣ ಮಾಡಿದುದು, ನಿಯಮ; ಅಳುಕು: ಹೆದರು; ನಿಲ್ಲು: ತಡೆ; ಇಟ್ಟಳಿಸು: ದಟ್ಟವಾಗು; ಊಳಿಗ: ಕೆಲಸ, ಕಾರ್ಯ; ಬೊಬ್ಬೆ: ಕೂಗು;

ಪದವಿಂಗಡಣೆ:
ಎಲೆ+ ನಪುಂಸಕ +ಧರ್ಮಸುತ +ಫಡ
ತೊಲಗು +ಕರೆಯಾ +ನಿನಗೆ +ಭೀಮನ
ಬಲುಹೆ +ಬಲುಹ್+ಅರ್ಜುನನ +ವಿಕ್ರಮ +ವಿಕ್ರಮವು +ನಿನಗೆ
ಮಲೆತು +ಮೆರೆಯಾ +ಕ್ಷತ್ರಧರ್ಮವನ್
ಅಳುಕದಿರು +ನೀ +ನಿಲ್ಲೆನುತಲ್
ಇಟ್ಟಳಿಸಿ+ ಬರಲ್+ಊಳಿಗದ +ಬೊಬ್ಬೆಯ +ಕೇಳಿದನು +ಭೀಮ

ಅಚ್ಚರಿ:
(೧) ಧರ್ಮಜನನ್ನು ಬಯ್ಯುವ ಪರಿ – ಎಲೆ ನಪುಂಸಕ ಧರ್ಮಸುತ ಫಡ ತೊಲಗು

ಪದ್ಯ ೧೩: ಅರ್ಜುನನ ಬಾಣಗಳು ಯಾವ ಪರಿಣಾಮ ಬೀರಿತು?

ಒದೆದು ರಥವನು ಸೂತರಿಳಿದೋ
ಡಿದರು ಚಾಪವನಿಳುಹಿ ಸಮರಥ
ರೆದೆಯ ನೀವಿತು ದೂರದಲಿ ಕರಿಕಂಧರವನಿಳಿದು
ಕೆದರಿತಾರೋಹಕರು ವಿಕ್ರಮ
ವಿದಿತ ವಿಪುಳ ಪದಸ್ಥಭೂಪರು
ಹುದುಗಿತಲ್ಲಿಯದಲ್ಲಿ ಪಾರ್ಥನ ಸರಳ ಘಾತಿಯಲಿ (ಗದಾ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳ ಹೊಡೆತಕ್ಕೆ ಸೂತರು ರಥವನ್ನು ಬಿಟ್ಟೋಡಿದರು. ಸಮರಥರು ಬಿಲ್ಲುಗಳನ್ನು ಕೆಳಗಿಟ್ಟು ದೂರಕ್ಕೆ ಹೋಗಿ ಎದೆಯನ್ನು ನೀವಿಕೊಂಡರು. ಜೋದರು ಆನೆಗಳನ್ನಿಳಿದು ಓಡಿಹೋದರು. ಪರಾಕ್ರಮಿಗಳಾದ ರಾಜರು ಅಲ್ಲಲ್ಲೇ ಅವಿತುಕೊಂಡರು.

ಅರ್ಥ:
ಒದೆ: ನೂಕು; ರಥ: ಬಂಡಿ; ಸೂತ: ಸಾರಥಿ; ಇಳಿ: ಕೆಳಗೆ ಬಾ; ಓಡು: ಧಾವಿಸು; ಚಾಪ: ಬಿಲ್ಲು; ಇಳುಹು: ಇಳಿಸು; ಸಮರಥ: ಪರಾಕ್ರಮ; ಎದೆ: ಉರು; ದೂರ: ದೀರ್ಘವಾದ; ಕರಿ: ಆನೆ; ಕಂಧರ: ಕಂಠ, ಕೊರಳು; ಕೆದರು: ಹರಡು; ಆರೋಹಕ: ಹತ್ತುವವ; ವಿಕ್ರಮ: ಪರಾಕ್ರಮಿ; ವಿಪುಳ: ವಿಸ್ತಾರ; ಪದಸ್ಥ:ಪ್ರವೇಶಿಸಿದ; ಭೂಪ: ರಾಜ; ಹುದುಗು: ಹೊಂದಿಕೆ, ಸಾಮರಸ್ಯ; ಸರಳ: ಬಾಣ; ಘಾತಿ: ಹೊಡೆತ; ನೀವು: ಮೃದುವಾಗಿ ಸವರು;

ಪದವಿಂಗಡಣೆ:
ಒದೆದು +ರಥವನು +ಸೂತರ್+ಇಳಿದ್
ಓಡಿದರು +ಚಾಪವನ್+ಇಳುಹಿ +ಸಮರಥರ್
ಎದೆಯ +ನೀವಿತು +ದೂರದಲಿ +ಕರಿ+ಕಂಧರವನ್+ಇಳಿದು
ಕೆದರಿತ್+ಆರೋಹಕರು+ ವಿಕ್ರಮ
ವಿದಿತ+ ವಿಪುಳ +ಪದಸ್ಥ+ಭೂಪರು
ಹುದುಗಿತ್+ಅಲ್ಲಿಯದಲ್ಲಿ +ಪಾರ್ಥನ +ಸರಳ +ಘಾತಿಯಲಿ

ಅಚ್ಚರಿ:
(೧) ವ ಕಾರದ ತ್ರಿವಳಿ ಪದ – ವಿಕ್ರಮ ವಿದಿತ ವಿಪುಳ
(೨) ಕ ಕಾರದ ತ್ರಿವಳಿ ಪದ – ಕರಿಕಂಧರವನಿಳಿದು ಕೆದರಿತಾರೋಹಕರು

ಪದ್ಯ ೩೦: ಯುದ್ಧದ ಭೀಕರತೆ ಹೇಗಿತ್ತು?

ಬಾಲಸೂರ್ಯನವೊಲ್ ಪ್ರತಿಕ್ಷಣ
ದೇಳಿಗೆಯ ತೇಜದ ವಿಕಾರ ಚ
ಡಾಳಿಸಿತು ವಿಕ್ರಮದ ಝಳ ಜಗವಳುಕೆ ಝೊಂಪಿಸಿತು
ಹೇಳಲೇನರ್ಜುನನ ಭೀಮನ
ಸೋಲವದು ತಾ ಮೃತ್ಯುವೀ ಪರಿ
ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ (ದ್ರೋಣ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಂಜಯನು ಹೇಳಿದನು, ದ್ರೋಣನ ತೇಜಸ್ಸು ಬಾಲ ಸೂರ್ಯನನಂತೆ ಪ್ರತಿಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಅವನ ಗೆಲುವಿನ ಝಳಕ್ಕೆ ಜಗತ್ತು ಅಳುಕಿತು. ಅರ್ಜುನನೂ ಭೀಮನೂ ಒಟ್ಟಾಗಿ ಕಾದಿ ಸೋತು ಹೋದುದು ಮರಣಕ್ಕೆ ಸಮಾನವಾದಂತಿತ್ತು. ದೇವ ದಾನವರ ಸೈನ್ಯಗಳ ಕಾಳಗಗಳಲ್ಲೂ ಇಂತಹ ಕಾಳಗವನ್ನು ನಾನು ಕೇಳಿಲ್ಲ ಎಂದು ಯುದ್ಧದ ಭೀಕರತೆಯನ್ನು ವಿವರಿಸಿದನು.

ಅರ್ಥ:
ಬಾಲ: ಚಿಕ್ಕ; ಸೂರ್ಯ: ರವಿ, ಭಾನು; ಪ್ರತಿಕ್ಷಣ: ಕ್ಷಣ ಕ್ಷಣ; ಏಳಿಗೆ: ಹೆಚ್ಚು; ತೇಜ: ಪ್ರಕಾಶ; ವಿಕಾರ: ಬದಲಾವಣೆ; ಚಡಾಳಿಸು: ವೃದ್ಧಿಹೊಂದು; ಝಳ: ಪ್ರಕಾಶ; ಜಗ: ಪ್ರಪಂಚ; ಅಳುಕು: ಹೆದರು; ಝೊಂಪಿಸು: ಭಯಗೊಳ್ಳು; ಹೇಳು: ತಿಳಿಸು; ಸೋಲು: ಪರಾಭವ; ಮೃತ್ಯು: ಸಾವು; ಕಾಳೆಗ: ಯುದ್ಧ; ಅರಿ: ತಿಳಿ; ಅಮರ: ದೇವತೆ; ಅಸುರ: ರಾಕ್ಷಸ; ಥಟ್ಟು: ಗುಂಪು;

ಪದವಿಂಗಡಣೆ:
ಬಾಲಸೂರ್ಯನವೊಲ್ +ಪ್ರತಿಕ್ಷಣದ್
ಏಳಿಗೆಯ +ತೇಜದ +ವಿಕಾರ +ಚ
ಡಾಳಿಸಿತು +ವಿಕ್ರಮದ +ಝಳ +ಜಗವ್+ಅಳುಕೆ +ಝೊಂಪಿಸಿತು
ಹೇಳಲೇನ್+ಅರ್ಜುನನ +ಭೀಮನ
ಸೋಲವದು+ ತಾ +ಮೃತ್ಯುವ್+ಈ+ ಪರಿ
ಕಾಳೆಗವ+ ನಾನರಿಯೆನ್+ಅಮರ+ಅಸುರರ +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಾಲಸೂರ್ಯನವೊಲ್ ಪ್ರತಿಕ್ಷಣದೇಳಿಗೆಯ ತೇಜದ ವಿಕಾರ ಚಡಾಳಿಸಿತು
(೨) ಉದ್ಧದ ತೀವ್ರತೆ – ಈ ಪರಿ ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ

ಪದ್ಯ ೨೪: ಭೀಮನೊಡನೆ ಯುದ್ಧಕ್ಕೆ ಯಾರು ಹೊರಟರು?

ನುಡಿದು ಭಂಗಿಸಲೇಕೆ ಸದರವ
ಕೊಡುವುದಾಹವವೊಮ್ಮೆ ಮಗುಳವ
ಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ
ಪಡೆ ಸವೆದುದಿನ್ನೇನೆನುತ ಬಿಲು
ದುಡುಕಿ ಹೊಕ್ಕನು ಪಾರ್ಥನನಿಲಜ
ನೊಡನೆ ಬಳಿಸಂಧಿಸಿತು ಸನ್ನಾಹದಲಿ ಪರಿವಾರ (ದ್ರೋಣ ಪರ್ವ, ೧೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾತಿನಿಂದ ಭಂಗಿಸುವುದು ಸರಿಯಲ್ಲ. ಮುಹೂರ್ತದ ದೆಸೆಯಿಂದ ಯುದ್ಧದಲ್ಲಿ ಒಮ್ಮೆ ಜಯವಾಗುತ್ತದೆ. ಇನ್ನೊಮ್ಮೆ ಸೋಲಾಗುತ್ತದೆ. ಇದರಿಂದ ಪರಾಕ್ರಮಕ್ಕೆ ಯಾವ ಕುಂದೂ ಉಂಟಾಗುವುದಿಲ್ಲ. ನಮ್ಮ ಸೈನ್ಯ ಸವೆಯಿತು ಎಂದು ಅರ್ಜುನನು ಬಿಲ್ಲನ್ನು ಹಿಡಿದು ಭೀಮನೊಡನೆ ಹೊರಟನು. ಸೈನ್ಯವು ಜೊತೆಗೆ ಹೊರಟಿತು.

ಅರ್ಥ:
ನುಡಿ: ಮಾತು; ಭಂಗ: ಮುರಿಯುವಿಕೆ; ಸದರ: ಸಲಿಗೆ, ಸಸಾರ; ಕೊಡು: ನೀಡು; ಆಹವ: ಯುದ್ಧ; ಮಗುಳು: ಹಿಂತಿರುಗು; ಅವಗಡಿಸು: ಕಡೆಗಣಿಸು; ವಿಕ್ರಮ: ಪರಾಕ್ರಮ; ಕುಂದು: ಕೊರತೆ; ಮುಹೂರ್ತ: ಸಮಯ; ವಶ: ಅಧೀನ, ಅಂಕೆ; ಪಡೆ: ಸೈನ್ಯ, ಬಲ; ಸವೆದು: ಕೊರಗು, ಕಡಿಮೆಯಾಗು; ಬಿಲು: ಬಿಲ್ಲು, ಚಾಪ; ದುಡುಕು: ಆತುರ, ಅವಸರ; ಹೊಕ್ಕು: ಸೇರು; ಅನಿಲಜ: ಭೀಮ; ಬಳಿ: ಹತ್ತಿರ; ಸಂಧಿಸು: ಕೂಡು, ಸೇರು; ಸನ್ನಾಹ: ಸನ್ನೆ, ಸುಳಿವು, ಜಾಡು; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ನುಡಿದು +ಭಂಗಿಸಲೇಕೆ +ಸದರವ
ಕೊಡುವುದ್+ಆಹವವ್+ಒಮ್ಮೆ +ಮಗುಳ್+ಅವ
ಗಡಿಸುವುದು+ ವಿಕ್ರಮಕೆ +ಕುಂದೇನ್+ಇದು +ಮುಹೂರ್ತ +ವಶ
ಪಡೆ +ಸವೆದುದ್+ಇನ್ನೇನ್+ಎನುತ +ಬಿಲು
ದುಡುಕಿ +ಹೊಕ್ಕನು +ಪಾರ್ಥನ್+ಅನಿಲಜನ್
ಒಡನೆ +ಬಳಿ+ಸಂಧಿಸಿತು +ಸನ್ನಾಹದಲಿ+ ಪರಿವಾರ

ಅಚ್ಚರಿ:
(೧) ಧೈರ್ಯ ತುಂಬವ ಪದಗಳು – ಆಹವವೊಮ್ಮೆ ಮಗುಳವಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ

ಪದ್ಯ ೨೯: ಕೌರವ ಸೈನ್ಯದವರು ಹೇಗೆ ಯುದ್ಧ ಮಾಡಿದರು?

ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ (ದ್ರೋಣ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ದ್ರೋಣನ ಯುದ್ಧದ ಪರಿಯನ್ನು ಕೇಳು, ದೇವತೆಗಳು ಮತ್ತು ದಾನವರ ನಡುವೆ ನಡೆದ ಯುದ್ಧದ ಪರಿ, ಅದ್ಭುತ ಯುದ್ಧವೇ ನಡೆಯಿತು. ನಿನ್ನ ಸೈನ್ಯದ ಸುಭಟರೇನು ಪರಾಕ್ರಮವಿಲ್ಲದವರೇ? ಅವರ ಆಕ್ರಮನವನ್ನು ತಡೆದುಕೊಳ್ಳಲು ಯಾರಿಗೆ ಸಾಧ್ಯ ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ದಾನವ: ರಾಕ್ಷಸ; ಅಮರ: ದೇವತೆ; ಅದುಭುತ: ಆಶ್ಚರ್ಯ; ಆಹವ: ಯುದ್ಧ; ನಿರಂತರ: ಸದಾ; ವಿಕ್ರಮ: ಪರಾಕ್ರಮ; ಉನ್ನತ: ಹೆಚ್ಚು; ಭಟ: ಸೈನಿಕ; ಬವರ: ಕಾಳಗ, ಯುದ್ಧ; ನೂಕು: ತಳ್ಳು; ಸೂನು: ಮಗ; ಸುಭಟ: ಪರಾಕ್ರಮಿ; ಪರಾಕ್ರಮ: ಶಕ್ತಿ; ಹೀನ: ತೊರೆದ, ತ್ಯಜಿಸು; ಕೇಳು: ಆಲಿಸು; ಸಂಗರ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಇತ್ತಲ್+ಆದುದು
ದಾನವ+ಅಮರರ್+ಅದುಭುತ+ಆಹವವ್
ಆ+ ನಿರಂತರ +ವಿಕ್ರಮ+ಉನ್ನತ+ ಭಟರ +ಬವರದಲಿ
ಆನಲಾರಿಗೆ+ ನೂಕುವುದು +ತವ
ಸೂನುವಿನ +ಸುಭಟರು +ಪರಾಕ್ರಮ
ಹೀನರೇ +ಧೃತರಾಷ್ಟ್ರ +ಕೇಳೈ +ದ್ರೋಣ +ಸಂಗರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ದಾನವಾಮರರದುಭುತಾಹವವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ

ಪದ್ಯ ೪೫: ಕೌರವ ಸೈನ್ಯವು ಎಷ್ಟು ದೊಡ್ಡದಾಗಿತ್ತು?

ತಳಿತ ಝಲ್ಲರಿಗಳಿಗೆ ಗಗನದ
ವಳಯವೈದದು ನೆರೆದ ಸೇನೆಗೆ
ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಮಕೆ
ಅಳವು ಕಿರಿದರಿರಾಯರಿಗೆ ದಿಗು
ವಳಯುವಿಟ್ಟೆಡೆಯಾಗೆ ರಥ ಹಯ
ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ (ದ್ರೋಣ ಪರ್ವ, ೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎತ್ತಿದ ಛತ್ರಿಗಳಿಗೆ ಆಕಾಶ ಸಾಲಲಿಲ್ಲ. ಸೈನ್ಯಕ್ಕೆ ಭೂಮಿ ಸಾಕಾಗಲಿಲ್ಲ. ವೀರಭಟರ ಪರಾಕ್ರಮವನ್ನು ಸಹಿಸಲು ಶತ್ರು ಸೈನ್ಯಕ್ಕೆ ಶಕ್ತಿಯಿರಲಿಲ್ಲ. ದಿಕ್ಕುಗಳ ಮೂಲೆಗಳು ಸಾಲದಂತೆ ಚತುರಂಗ ಸೈನ್ಯವು ಸಜ್ಜಾಗಿ, ಕೌರವನ ಆಜ್ಞೆಯಂತೆ ಮುನ್ನಡೆಯಿತು.

ಅರ್ಥ:
ತಳಿತ: ಚಿಗುರಿದ; ಝಲ್ಲರಿ: ಜಾಲರಿ, ಕುಚ್ಚು; ಗಗನ: ಆಗಸ; ಐದು: ಹೋಗಿಸೇರು; ವಳಯ: ವರ್ತುಲ, ಪರಿಧಿ; ನೆರೆ: ಗುಂಪು; ಸೇನೆ: ಸೈನ್ಯ; ನೆಲ: ಭೂಮಿ; ಅಗಲ: ವಿಸ್ತಾರ; ನಿರೂಢಿ: ವಿಶೇಷ ರೂಢಿಯಾದ, ಸಾಮಾನ್ಯ; ಭಟ: ಸೈನಿಕ; ವಿಕ್ರಮ: ಪರಾಕ್ರಮ; ಅಳವು: ಶಕ್ತಿ; ಕಿರಿ: ಚಿಕ್ಕದ್ದು; ಆಯ: ಪರಿಮಿತಿ; ದಿಗುವಳಯ: ದಿಕ್ಕು; ರಥ: ಬಂಡಿ; ಹಯ: ಕುದುರೆ; ದಳ: ಗುಂಪು; ನಡೆ: ಚಲಿಸು; ದೊರೆ: ರಾಜ; ನೇಮ: ನಿಯಮ;

ಪದವಿಂಗಡನೆ:
ತಳಿತ +ಝಲ್ಲರಿಗಳಿಗೆ+ ಗಗನದ
ವಳಯವ್ +ಐದದು +ನೆರೆದ +ಸೇನೆಗೆ
ನೆಲನ್+ಅಗಲ+ ನೆರೆಯದು +ನಿರೂಢಿಯ +ಭಟರ +ವಿಕ್ರಮಕೆ
ಅಳವು +ಕಿರಿದರಿರ್+ಆಯರಿಗೆ +ದಿಗು
ವಳಯುವ್+ಇಟ್ಟೆಡೆಯಾಗೆ +ರಥ +ಹಯ
ದಳವುಳಕೆ+ ಕುರುಸೇನೆ +ನಡೆದುದು +ದೊರೆಯ +ನೇಮದಲಿ

ಅಚ್ಚರಿ:
(೧) ಆಕಾಶ ಭೂಮಿಗಳೇ ಕೌರವ ಸೇನೆಗೆ ಸಾಕಾಗಲಿಲ್ಲ ಎಂದು ಹೇಳುವ ಪರಿ – ತಳಿತ ಝಲ್ಲರಿಗಳಿಗೆ ಗಗನದವಳಯವೈದದು ನೆರೆದ ಸೇನೆಗೆ ನೆಲನಗಲ ನೆರೆಯದು

ಪದ್ಯ ೨೨: ದುರ್ಯೋಧನನು ಭೀಷ್ಮರಿಗೆ ಏನು ಮಾಡಲು ಹೇಳಿದನು?

ಮಿಕ್ಕ ಮಾತೇಕಿನ್ನು ನೀ ಹಿಂ
ದಿಕ್ಕಿ ಕೊಂಬರೆ ಕೊಲುವನಾವನು
ಮಕ್ಕಳಾವೆನಬೇಡ ಬಲ್ಲೆವು ನಿನ್ನ ವಿಕ್ರಮವ
ಹೊಕ್ಕು ಹಗೆಗಳ ಹೊಯ್ದು ದಿಗುಬಲ
ಯಿಕ್ಕಿ ನನ್ನಯ ಹರುಷ ಜಲಧಿಯ
ನುಕ್ಕಿಸಲು ಬೇಕೆನಲು ಕೇಳಿದು ಭೀಷ್ಮನಿಂತೆಂದ (ಭೀಷ್ಮ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರ ಮಾತುಗಳನ್ನು ಕೇಳಿ, ಬೇರೆ ಮಾತು ಬೇಡ, ನೀನು ನಮ್ಮನ್ನು ರಕ್ಷಿಸಲು ಮನಸ್ಸು ಮಾಡಿದರೆ, ನಮ್ಮನ್ನು ಕೊಲ್ಲುವವರು ಯಾರು ನಾವು ಮಕ್ಕಳೆಂದು ಹೇಳಬೇಡಿ, ನಿಮ್ಮ ಪರಾಕ್ರಮವನ್ನು ನಾವು ಬಲ್ಲೆವು, ಶತ್ರು ಸೈನ್ಯದೊಳಗೆ ಹೊಕ್ಕು ನಮ್ಮ ವೈರಿಗಳನ್ನು ದಿಕ್ಕುಗಳಿಗೆ ಬಲಿಕೊಟ್ಟು ನನ್ನ ಸಂತೋಷ ಸಮುದ್ರವನ್ನು ಉಕ್ಕಿಸಿ ಎಂದು ಹೇಳಲು, ಭೀಷ್ಮನು ಹೀಗೆ ನುಡಿದರು.

ಅರ್ಥ:
ಮಿಕ್ಕ: ಉಳಿದ; ಮಾತು: ವಾಣಿ; ಹಿಂದೆ: ಗತಿಸಿದ; ಕೊಲು:ಸಾಯಿಸು; ಮಕ್ಕಳು: ಸುತರು; ಬಲ್ಲೆ: ತಿಳಿ; ವಿಕ್ರಮ: ಪರಾಕ್ರಮ; ಹೊಕ್ಕು: ಸೇರು; ಹಗೆ: ವೈರಿ; ಹೊಯ್ದು: ಹೊಡೆದು; ದಿಗು: ದಿಕ್ಕು; ಬಲಿ: ಕಾಣಿಕೆ, ಕೊಡುಗೆ; ಹರುಷ: ಸಂತಸ; ಜಲಧಿ: ಸಾಗರ; ಉಕ್ಕಿಸು: ಹೆಚ್ಚಿಸು; ಕೇಳು: ಆಲಿಸು;

ಪದವಿಂಗಡಣೆ:
ಮಿಕ್ಕ +ಮಾತೇಕಿನ್ನು +ನೀ +ಹಿಂ
ದಿಕ್ಕಿ+ ಕೊಂಬರೆ +ಕೊಲುವನ್+ಆವನು
ಮಕ್ಕಳಾವ್+ಎನಬೇಡ +ಬಲ್ಲೆವು+ ನಿನ್ನ+ ವಿಕ್ರಮವ
ಹೊಕ್ಕು+ ಹಗೆಗಳ+ ಹೊಯ್ದು +ದಿಗುಬಲ
ಯಿಕ್ಕಿ +ನನ್ನಯ +ಹರುಷ +ಜಲಧಿಯನ್
ಉಕ್ಕಿಸಲು +ಬೇಕೆನಲು+ ಕೇಳಿದು +ಭೀಷ್ಮನ್+ಇಂತೆಂದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಕ್ಕು ಹಗೆಗಳ ಹೊಯ್ದು
(೨) ಅತೀವ ಸಂತಸವನ್ನು ಸೂಚಿಸಲು – ನ್ನಯ ಹರುಷ ಜಲಧಿಯನುಕ್ಕಿಸಲು

ಪದ್ಯ ೩೦: ಉತ್ತರನೇಕೆ ನಾಚಿಕೆ ಪಟ್ಟನು?

ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮದಿ
ಯಾದರಿಸಲೊಡೆಮುರಿಚಬಲ್ಲೆನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡೆಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ (ವಿರಾಟ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ಯುದ್ಧ ಮಾದಿ ಗೆದ್ದವನೇ ಬೇರೆ, ಸಾರಥಿಯಾಗಿದ್ದ ನನಗೇಕೆ ಈ ಸತ್ಕಾರ. ನೀವೇ ಈ ಸತ್ಕಾರ ಮಾಡಿಸುತ್ತಿದ್ದರೆ ನಾನು ಹೇಗೆ ಬೇಡವೆಂದು ಹೇಳಲಿ, ನನ್ನನ್ನು ನಾಚಿಸಬೇಡಿ ಎಂದು ಉತ್ತರನು ಹೇಳಲು, ವಿರಾಟನು ಇದನ್ನು ನಂಬಲಾರದೆ, ಎಲೈ ಮಗನೇ ನೀನೇ ಯುದ್ಧ ಮಾಡಿದ ವೀರ, ಉತ್ತರೆಯ ನಾಟ್ಯ ಗುರುವಾದ ಬೃಹನ್ನಳೆಯು ಸಾರಥಿಯಾಗಿದ್ದ, ಮಗನೇ ವಾದ ಬೇಡ, ನಿನ್ನ ಪರಾಕ್ರಮವನ್ನು ನಾನು ಬಲ್ಲೆ ಎಂದು ಹೇಳಿದನು.

ಅರ್ಥ:
ಕಾದು: ಹೋರಾಡು; ಗೆಲಿದು: ಜಯಿಸು; ಬೇರೆ: ಅನ್ಯ; ಸಾರಥಿ: ಸೂತ; ಆದರ: ಗೌರವ; ಮುರಿ: ಸೀಳು; ನಾಚಿಕೆ: ಲಜ್ಜೆ, ಸಿಗ್ಗು, ಅವಮಾನ; ತಂಗಿ: ಸಹೋದರಿ; ವಾದ: ಚರ್ಚೆ; ಮಗ: ಸುತ; ಬಲ್ಲೆ: ತಿಳಿದಿರುವೆ; ವಿಕ್ರಮ: ಪರಾಕ್ರಮ;

ಪದವಿಂಗಡಣೆ:
ಕಾದಿ +ಗೆಲಿದವ +ಬೇರೆ +ಸಾರಥಿ
ಯಾದ +ತನಗ್+ಈಸೇಕೆ +ನಿಮ್ಮಡಿ
ಆದರಿಸಲ್+ಒಡೆಮುರಿಚಬಲ್ಲೆನೆ+ ನಾಚಿಸದಿರೆನಲು
ಕಾದಿದಾತನು +ನೀನು +ಸಾರಥಿ
ಯಾದವನು+ ತಂಗಿಯ +ಬೃಹನ್ನಳೆ
ವಾದ +ಬೇಡೆಲೆ +ಮಗನೆ +ಬಲ್ಲೆನು +ನಿನ್ನ +ವಿಕ್ರಮವ

ಅಚ್ಚರಿ:
(೧) ವಿರಾಟನ ಕುರುಡು ಪ್ರೀತಿ – ಕಾದಿದಾತನು ನೀನು, ಮಗನೆ ಬಲ್ಲೆನು ನಿನ್ನ ವಿಕ್ರಮವ