ಪದ್ಯ ೪೬: ಕೌರವರು ಏಕೆ ಅಳುಕಿದರು?

ದ್ರೋಹಿ ಸಿಲುಕಿದನೆನುತೆ ಜೀವ
ಗ್ರಾಹವೋ ಸಾಹಸ ವಿಚಾರಿಸು
ಬೇಹವರನೆನುತೊರಲಿ ಧೃಷ್ಟದ್ಯುಮ್ನನಿದಿರಾಗೆ
ಸಾಹಸಿಕರಳುಕಿದರು ಕೌರವ
ಮೋಹರದ ಮೊನೆಯಾಳುಗಳು ಸ
ನ್ನಾಹದಲಿ ಪಡಿತಳಿಸಿ ಕರ್ಣ ಕೃಪಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ನುಡಿಯುತ್ತಾ, ದ್ರೋಹಿಯಾದ ದ್ರೋಣನು ಸಿಕ್ಕಿಹಾಕಿಕೊಂಡ, ಜೀವವನ್ನು ತೆಗೆಯಬೇಕೋ ಹೇಗೆ, ಅವನ ಆಪ್ತರನ್ನು ವಿಚಾರಿಸು, ಎನ್ನುತ್ತಾ ಇದಿರಾದನು. ಕೌರವ ಸೇನೆಯ ವೀರರಾದ ಕರ್ಣ ಕೃಪ ಮೊದಲಾದವರು ಪಾಂಡವ ಸೇನೆಗಿದಿರಾಗಲು ಸಜ್ಜಾದರೂ ದ್ರೋಣನು ಸಿಲುಕುವನೆಂಬ ಅಳುಕು ಅವರಲ್ಲಿತ್ತು.

ಅರ್ಥ:
ದ್ರೋಹ: ವಿಶ್ವಾಸಘಾತ, ವಂಚನೆ; ಸಿಲುಕು: ಬಂಧನಕ್ಕೊಳಗಾಗು; ಜೀವ: ಪ್ರಾಣ; ಗ್ರಾಹ: ಹಿಡಿಯುವುದು; ಸಾಹಸ: ಪರಾಕ್ರಮ; ವಿಚಾರಿಸು: ಪರ್ಯಾಲೋಚನೆ; ಬೇಹು: ಗೂಢಚರ್ಯೆ; ಒರಲು: ಅರಚು, ಕೂಗಿಕೊಳ್ಳು; ಇದಿರು: ಎದುರು; ಸಾಹಸಿ: ಪರಾಕ್ರಮಿ; ಅಳುಕು: ಹೆದರು; ಮೋಹರ: ಯುದ್ಧ; ಮೊನೆ: ತುದಿ, ಕೊನೆ, ಹರಿತ; ಆಳು: ಸೇವಕ; ಸನ್ನಾಹ: ಬಂಧನ; ನಾಯಕ: ಒಡೆಯ;

ಪದವಿಂಗಡಣೆ:
ದ್ರೋಹಿ+ ಸಿಲುಕಿದನ್+ಎನುತೆ +ಜೀವ
ಗ್ರಾಹವೋ +ಸಾಹಸ +ವಿಚಾರಿಸು
ಬೇಹವರನ್+ಎನುತ್+ಒರಲಿ +ಧೃಷ್ಟದ್ಯುಮ್ನನ್+ಇದಿರಾಗೆ
ಸಾಹಸಿಕರ್+ಅಳುಕಿದರು +ಕೌರವ
ಮೋಹರದ +ಮೊನೆ+ಆಳುಗಳು +ಸ
ನ್ನಾಹದಲಿ +ಪಡಿತಳಿಸಿ +ಕರ್ಣ +ಕೃಪಾದಿ +ನಾಯಕರು

ಅಚ್ಚರಿ:
(೧) ದ್ರೋಣನನ್ನು ದ್ರೋಹಿ ಎಂದು ಧೃಷ್ಟದ್ಯುಮ್ನ ಕರೆದಿರುವುದು

ಪದ್ಯ ೨೪: ಭೀಮನೊಡನೆ ಯುದ್ಧಕ್ಕೆ ಯಾರು ಹೊರಟರು?

ನುಡಿದು ಭಂಗಿಸಲೇಕೆ ಸದರವ
ಕೊಡುವುದಾಹವವೊಮ್ಮೆ ಮಗುಳವ
ಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ
ಪಡೆ ಸವೆದುದಿನ್ನೇನೆನುತ ಬಿಲು
ದುಡುಕಿ ಹೊಕ್ಕನು ಪಾರ್ಥನನಿಲಜ
ನೊಡನೆ ಬಳಿಸಂಧಿಸಿತು ಸನ್ನಾಹದಲಿ ಪರಿವಾರ (ದ್ರೋಣ ಪರ್ವ, ೧೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾತಿನಿಂದ ಭಂಗಿಸುವುದು ಸರಿಯಲ್ಲ. ಮುಹೂರ್ತದ ದೆಸೆಯಿಂದ ಯುದ್ಧದಲ್ಲಿ ಒಮ್ಮೆ ಜಯವಾಗುತ್ತದೆ. ಇನ್ನೊಮ್ಮೆ ಸೋಲಾಗುತ್ತದೆ. ಇದರಿಂದ ಪರಾಕ್ರಮಕ್ಕೆ ಯಾವ ಕುಂದೂ ಉಂಟಾಗುವುದಿಲ್ಲ. ನಮ್ಮ ಸೈನ್ಯ ಸವೆಯಿತು ಎಂದು ಅರ್ಜುನನು ಬಿಲ್ಲನ್ನು ಹಿಡಿದು ಭೀಮನೊಡನೆ ಹೊರಟನು. ಸೈನ್ಯವು ಜೊತೆಗೆ ಹೊರಟಿತು.

ಅರ್ಥ:
ನುಡಿ: ಮಾತು; ಭಂಗ: ಮುರಿಯುವಿಕೆ; ಸದರ: ಸಲಿಗೆ, ಸಸಾರ; ಕೊಡು: ನೀಡು; ಆಹವ: ಯುದ್ಧ; ಮಗುಳು: ಹಿಂತಿರುಗು; ಅವಗಡಿಸು: ಕಡೆಗಣಿಸು; ವಿಕ್ರಮ: ಪರಾಕ್ರಮ; ಕುಂದು: ಕೊರತೆ; ಮುಹೂರ್ತ: ಸಮಯ; ವಶ: ಅಧೀನ, ಅಂಕೆ; ಪಡೆ: ಸೈನ್ಯ, ಬಲ; ಸವೆದು: ಕೊರಗು, ಕಡಿಮೆಯಾಗು; ಬಿಲು: ಬಿಲ್ಲು, ಚಾಪ; ದುಡುಕು: ಆತುರ, ಅವಸರ; ಹೊಕ್ಕು: ಸೇರು; ಅನಿಲಜ: ಭೀಮ; ಬಳಿ: ಹತ್ತಿರ; ಸಂಧಿಸು: ಕೂಡು, ಸೇರು; ಸನ್ನಾಹ: ಸನ್ನೆ, ಸುಳಿವು, ಜಾಡು; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ನುಡಿದು +ಭಂಗಿಸಲೇಕೆ +ಸದರವ
ಕೊಡುವುದ್+ಆಹವವ್+ಒಮ್ಮೆ +ಮಗುಳ್+ಅವ
ಗಡಿಸುವುದು+ ವಿಕ್ರಮಕೆ +ಕುಂದೇನ್+ಇದು +ಮುಹೂರ್ತ +ವಶ
ಪಡೆ +ಸವೆದುದ್+ಇನ್ನೇನ್+ಎನುತ +ಬಿಲು
ದುಡುಕಿ +ಹೊಕ್ಕನು +ಪಾರ್ಥನ್+ಅನಿಲಜನ್
ಒಡನೆ +ಬಳಿ+ಸಂಧಿಸಿತು +ಸನ್ನಾಹದಲಿ+ ಪರಿವಾರ

ಅಚ್ಚರಿ:
(೧) ಧೈರ್ಯ ತುಂಬವ ಪದಗಳು – ಆಹವವೊಮ್ಮೆ ಮಗುಳವಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ

ಪದ್ಯ ೩೭: ದ್ರೋಣನು ಪಾಂಡವ ಸೈನ್ಯಕ್ಕೆ ಏನೆಂದು ಹೇಳಿದನು?

ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾಗದೆ ಜೋಡಿಸೆನುತಿದಿರಾದನಾ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೃಷ್ಣನ ಕಪಟಮಂತ್ರವೇ ನಮಗೆ ಬಾಧಕವಾಗಿ ಈ ಹಗಲು ನಾವು ಸೋತೆವು. ಅಯ್ಯೋ ಕುನ್ನಿಗಳೇ, ನೀವಲ್ಲ ಗೆದ್ದದ್ದು, ನಿಮಗೆ ಕುರುಸೇನೆ ಸೋತೀತೇ? ಸಮಸ್ತ ಸನ್ನಾಹದೊಡನೆ ಈ ರಾತ್ರಿ ನಾವು ಯಾದವರೊಡನೆ ಯುದ್ಧಕ್ಕೆ ಬಂದಿದ್ದೇವೆ, ವಿಸ್ಮಯ ಪಡದೆ ಯುದ್ಧಕ್ಕೆ ಬನ್ನಿ ಎಂದು ದ್ರೋಣನು ಕೂಗಿದನು.

ಅರ್ಥ:
ಅಕಟ: ಅಯ್ಯೋ; ಫಡ: ತಿರಸ್ಕಾರದ ಮಾತು; ಕುನ್ನಿ: ನಾಯಿ; ಅಸುರ: ರಾಕ್ಷಸ; ಅಂತಕ: ಸಾವು; ಅಸುರಾಂತಕ: ಕೃಷ್ಣ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಬಾಧಕ: ತೊಂದರೆ ಮಾಡುವವ; ಸೋಲು: ಪರಾಭವ; ಸಕಲ: ಎಲ್ಲಾ; ಸನ್ನಾಹ: ಸನ್ನೆ, ಸುಳಿವು; ನಿಕರ: ಗುಂಪು; ಸಹೀತ: ಜೊತೆ; ಇರುಳು: ರಾತ್ರಿ; ರಣ: ಯುದ್ಧ; ಚಕಿತ: ಬೆರಗುಗೊಂಡು; ಜೋಡಿಸು: ಸೇರಿಸು; ಇದಿರು: ಎದುರು;

ಪದವಿಂಗಡಣೆ:
ಅಕಟ+ ಫಡ +ಕುನ್ನಿಗಳಿಗ್+ಅಸುರಾಂ
ತಕನ +ಕಪಟದ +ಮಂತ್ರವೇ +ಬಾ
ಧಕವ್+ಇದಲ್ಲದೆ +ನಿಮಗೆ +ಸೋಲುವುದುಂಟೆ +ಕುರುಸೇನೆ
ಸಕಲ +ಸನ್ನಾಹದಲಿ +ಯಾದವ
ನಿಕರ+ ಸಹಿತ್+ಈ+ಇರುಳು +ರಣದಲಿ
ಚಕಿತರಾಗದೆ +ಜೋಡಿಸೆನುತ್+ಇದಿರಾದನಾ +ದ್ರೋಣ

ಅಚ್ಚರಿ:
(೧) ಕೌರವರಿಗೆ ತೊಂದರೆಯಾದದ್ದು – ಅಸುರಾಂತಕನ ಕಪಟದ ಮಂತ್ರವೇ ಬಾಧಕವ್
(೨) ಪಾಂಡವರನ್ನು ತೆಗಳುವ ಪರಿ – ಅಕಟ ಫಡ ಕುನ್ನಿಗಳ್

ಪದ್ಯ ೪೯: ಧರ್ಮಜನೇಕೆ ಹಿಗ್ಗಿದನು?

ಇದೆ ಸಮೀರಕುಮಾರಕನ ಜಯ
ಮದದ ಸಿಂಹಧ್ವನಿಯೆನುತ ಹಿ
ಗ್ಗಿದನು ಧರ್ಮಜನೊದರಿದವು ಗಂಭೀರಭೇರಿಗಳು
ಕದನ ಲಗ್ಗೆಯ ಕಹಳೆ ಬಹು ವಾ
ದ್ಯದ ಮಹಾದ್ಭುತರಭಸ ಮಿಗೆ ಹೂ
ಡಿದನು ಸನ್ನಾಹದಲಿ ಹೊಕ್ಕನು ಮತ್ತೆ ಕಲಿಕರ್ಣ (ದ್ರೋಣ ಪರ್ವ, ೧೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಮನು ಜಯವನ್ನು ಸಾಧಿಸಿ ಸಿಂಹನಾದವನ್ನು ಮೊಳಗಿಸಿದನು, ಇದನ್ನು ಕೇಳುತ್ತಾ ಧರ್ಮಜನು ಸಂತೋಷಪಟ್ಟನು. ರಣಭೇರಿಗಳ ಸದ್ದು ಹಬ್ಬಿತು. ಆಗ ಲಗ್ಗೆಯ ಕಹಳೆ, ವಾದ್ಯಗಳ ಅದ್ಭುತ ರಭಸ ಹೆಚ್ಚಿತು. ಹೊಸ ರಥವನ್ನು ಹೂಡಿ ಸಮಗ್ರ ಸನ್ನಾಹದಿಂದ ಕರ್ಣನು ಯುದ್ಧಕ್ಕೆ ಬಂದು ಭೀಮನನೆದುರು ಯುದ್ಧಮಾಡಲು ಸಿದ್ಧನಾದನು.

ಅರ್ಥ:
ಸಮೀರ: ವಾಯು; ಕುಮಾರ: ಪುತ್ರ; ಜಯ: ಗೆಲುವು; ಮದ: ಅಹಂಕಾರ; ಸಿಂಹಧ್ವನಿ: ಗರ್ಜನೆ; ಧ್ವನಿ: ಉಲಿ; ಹಿಗ್ಗು: ಸಂತೋಷ; ಒದರು: ಕೊಡಹು, ಜಾಡಿಸು; ಗಂಭೀರ: ಆಳವಾದ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ; ಕದನ: ಯುದ್ಧ; ಲಗ್ಗೆ: ಮುತ್ತಿಗೆ, ಆಕ್ರಮಣ; ಕಹಳೆ: ಕಾಳೆ, ಉದ್ದವಾಗಿ ಬಾಗಿರುವ ತುತ್ತೂರಿ; ಬಹು: ಬಹಳ; ವಾದ್ಯ: ಸಂಗೀತದ ಸಾಧನ; ಅದ್ಭುತ: ಆಶ್ಚರ್ಯ; ರಭಸ: ವೇಗ; ಮಿಗೆ: ಹೆಚ್ಚು; ಹೂಡು: ಜೋಡಿಸು; ಸನ್ನಾಹ: ಅಣಿ ಮಾಡಿಕೊಳ್ಳುವುದು; ಹೊಕ್ಕು: ಸೇರು; ಕಲಿ: ಶೂರ;

ಪದವಿಂಗಡಣೆ:
ಇದೆ +ಸಮೀರಕುಮಾರಕನ+ ಜಯ
ಮದದ +ಸಿಂಹಧ್ವನಿ+ಎನುತ +ಹಿ
ಗ್ಗಿದನು +ಧರ್ಮಜನ್+ಒದರಿದವು +ಗಂಭೀರ+ಭೇರಿಗಳು
ಕದನ +ಲಗ್ಗೆಯ +ಕಹಳೆ +ಬಹು +ವಾ
ದ್ಯದ +ಮಹಾದ್ಭುತ+ರಭಸ +ಮಿಗೆ +ಹೂ
ಡಿದನು +ಸನ್ನಾಹದಲಿ +ಹೊಕ್ಕನು +ಮತ್ತೆ+ ಕಲಿಕರ್ಣ

ಅಚ್ಚರಿ:
(೧) ಭೀಮನ ಗರ್ಜನೆಯನ್ನು ವರ್ಣಿಸುವ ಪರಿ – ಸಮೀರಕುಮಾರಕನ ಜಯಮದದ ಸಿಂಹಧ್ವನಿ

ಪದ್ಯ ೧೨: ರಣರಂಗಕ್ಕೆ ಚತುರಂಗ ಸೈನ್ಯವು ಹೇಗೆ ಬಂದಿತು?

ನಡೆದುದುರುಸನ್ನಾಹದಲಿ ಸೂ
ಳಡಸಿ ಮೊರೆವ ಗಭೀರ ಭೇರಿಯ
ಕಡುರವದ ರಿಪುಭಟರ ಬೈಗುಳ ಗೌರುಗಹಳೆಗಳ
ಎಡಬಲಕೆ ತನಿಹೊಳೆವ ತೇಜಿಯ
ಕಡುಮದದ ಕರಿಘಟೆಯ ತೇರಿನ
ನಿಡುವರಿಯ ಕಾಲಾಳ ಕಳಕಳವಾಯ್ತು ರಣದೊಳಗೆ (ದ್ರೋಣ ಪರ್ವ, ೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಮತ್ತೆ ಮತ್ತೆ ಗಂಭೀರ ಶಬ್ದಮಾಡುವ ಭೇರಿ, ಜೋರಾಗಿ ಶಬ್ದಮಾಡುವ ಕಹಳೆ, ಸುತ್ತೆತ್ತ ಹಬ್ಬುತ್ತಿರಲು, ಕುದುರೆ, ಆನೆ, ರಥ ಕಾಲಾಳುಗಳು ಸದ್ದುಮಾಡುತ್ತಾ ರಣರಂಗಕ್ಕೆ ಬಂದವು.

ಅರ್ಥ:
ನಡೆದು: ಮುಂದುವರೆದು; ಉರು: ವಿಶೇಷವಾದ; ಸನ್ನಾಹ: ಕವಚ, ಜೋಡು, ಗುಂಪು; ಸೂಳು: ಸರದಿ, ಸಮಯ; ಅಡಸು: ಬಿಗಿಯಾಗಿ ಒತ್ತು, ಆಕ್ರಮಿಸು; ಮೊರೆ: ಕೂಗು; ಗಭೀರ: ಆಳವಾದುದು, ಗಹನ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ಕಡು: ದೊಡ್ಡ; ರವ: ಶಬ್ದ; ರಿಪು: ವೈರಿ; ಭಟ: ಸೈನಿಕ; ಬೈಗುಳ: ಜರೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಎಡಬಲ: ಅಕ್ಕಪಕ್ಕ; ತನಿ: ಹೆಚ್ಚಾಗು; ಹೊಳೆ: ಪ್ರಕಾಶ; ತೇಜಿ: ಕುದುರೆ; ಕಡು: ಬಹಳ; ಮದ: ಗರ್ವ; ಕರಿಘಟೆ: ಆನೆಯ ಗುಂಪು; ತೇರು: ಬಂಡಿ; ನಿಡು: ದೀರ್ಘ, ಉದ್ದವಾದ; ಕಾಲಾಳು: ಸೈನಿಕ; ಕಳಕಳ: ಉದ್ವಿಗ್ನ; ರಣ: ಯುದ್ಧಭೂಮಿ;

ಪದವಿಂಗಡಣೆ:
ನಡೆದುದ್+ಉರು+ಸನ್ನಾಹದಲಿ +ಸೂಳ್
ಅಡಸಿ +ಮೊರೆವ+ ಗಭೀರ +ಭೇರಿಯ
ಕಡುರವದ +ರಿಪುಭಟರ +ಬೈಗುಳ +ಗೌರು+ಕಹಳೆಗಳ
ಎಡಬಲಕೆ +ತನಿಹೊಳೆವ +ತೇಜಿಯ
ಕಡುಮದದ +ಕರಿಘಟೆಯ +ತೇರಿನ
ನಿಡುವರಿಯ +ಕಾಲಾಳ +ಕಳಕಳವಾಯ್ತು +ರಣದೊಳಗೆ

ಅಚ್ಚರಿ:
(೧) ಮೊರೆ, ಗಭೀರ, ಕಡುರವ, ಗೌರು, ಕಳಕಳ – ಶಬ್ದವನ್ನು ವರ್ಣಿಸುವ ಪದಗಳು

ಪದ್ಯ ೧೨: ಅಭಿಮನ್ಯುವು ಹೇಗೆ ಹೋರಾಡಿದನು?

ಮಸಗಿ ಮದದಾನೆಗಳು ಸಿಂಹದ
ಶಿಶುವ ಮುತ್ತುವವೋಲು ಕವಿಕವಿ
ದೆಸುತ ಬಂದರು ಮಕುಟವರ್ಧನರಸಮ ಬಾಲಕನ
ನುಸುಳದವರವರಸ್ತ್ರವನು ಖಂ
ಡಿಸುತ ಸನ್ನಾಹದಲಿ ಘನ ಪೌ
ರುಷದಲೆಚ್ಚಾಡಿದನು ಹಲಬರ ಕೂಡೆ ಸುಕುಮಾರ (ದ್ರೋಣ ಪರ್ವ, ೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅನೇಕ ಮದದಾನೆಗಳು ಕೋಪದಿಂದ ಸಿಂಹದ ಮರಿಯನ್ನು ಮುತ್ತುವಂತೆ ನಾಯಕರು ಅಭಿಮನ್ಯುವಿನ ಮೇಲೆ ಬಾಣಗಳನ್ನು ಬಿಡುತ್ತಾ ಮುಂದುವರೆದರು. ಆರು ಪರಾಕ್ರಮಿಗಳು ಏಕ ಕಾಲದಲ್ಲಿ ಬಿಟ್ಟ ಬಾಣಗಳನ್ನು ಅಭಿಮನ್ಯುವು ಘನ ಪೌರುಷದಿಂದ ತುಂಡುಮಾಡುತ್ತಾ ಹೋರಾಡಿದನು.

ಅರ್ಥ:
ಮಸಗು: ಹರಡು, ಕೆರಳು; ಮದದಾನೆ: ಸೊಕ್ಕಿದ ಗಜ; ಸಿಂಹ: ಕೇಸರಿ; ಶಿಶು: ಮಗು, ಬಾಲಕ; ಮುತ್ತು: ಆವರಿಸು; ಕವಿ: ಆವರಿಸು; ಎಸು: ಬಾಣ ಪ್ರಯೋಗ ಮಾಡು; ಬಂದು: ಆಗಮಿಸು; ಮಕುಟ: ಕಿರೀಟ; ವರ್ಧನ: ಬೆಳವಣಿಗೆ, ಅಭಿವೃದ್ಧಿ; ಅಸಮ: ಸಮವಲ್ಲದ; ಬಾಲಕ: ಹುಡುಗ; ನುಸುಳು: ತೂರು; ಅಸ್ತ್ರ: ಶಸ್ತ್ರ, ಆಯುಧ; ಖಂಡಿಸು: ತುಂಡು ಮಾಡು; ಸನ್ನಾಹ: ಅಣಿ ಮಾಡಿಕೊಳ್ಳುವುದು; ಘನ: ಶ್ರೇಷ್ಠ; ಪೌರುಷ: ಪರಾಕ್ರಮ; ಎಚ್ಚು: ಬಾಣ ಪ್ರಯೋಗ ಮಾಡು; ಹಲಬರು: ಹಲವಾರು; ಕೂಡೆ: ಜೊತೆಯಾಗು; ಸುಕುಮಾರ: ಒಳ್ಳೆಯ ಪುತ್ರ;

ಪದವಿಂಗಡಣೆ:
ಮಸಗಿ +ಮದದಾನೆಗಳು+ ಸಿಂಹದ
ಶಿಶುವ +ಮುತ್ತುವವೋಲು +ಕವಿಕವಿದ್
ಎಸುತ +ಬಂದರು +ಮಕುಟವರ್ಧನರ್+ಅಸಮ +ಬಾಲಕನ
ನುಸುಳದ್+ಅವರವರ್+ಅಸ್ತ್ರವನು +ಖಂ
ಡಿಸುತ +ಸನ್ನಾಹದಲಿ +ಘನ +ಪೌ
ರುಷದಲ್+ಎಚ್ಚಾಡಿದನು +ಹಲಬರ+ ಕೂಡೆ +ಸುಕುಮಾರ

ಅಚ್ಚರಿ:
(೧)ಉಪಮಾನದ ಪ್ರಯೋಗ – ಮಸಗಿ ಮದದಾನೆಗಳು ಸಿಂಹದಶಿಶುವ ಮುತ್ತುವವೋಲು
(೨) ಶಿಶು, ಸುಕುಮಾರ, ಬಾಲಕ – ಅಭಿಮನ್ಯುವನ್ನು ಕರೆದ ಪರಿ

ಪದ್ಯ ೨೪: ಯಾವ ರೀತಿಯ ಮಳೆಗಾಳ ಸೃಷ್ಟಿಯಾಯಿತು?

ನಕುಲ ಕುಂತೀಭೋಜಸುತ ಸೋ
ಮಕ ಘಟೋತ್ಕಚ ದ್ರುಪದ ಪ್ರತಿವಿಂ
ಧ್ಯಕ ಶತಾನೀಕಾಭಿಮನ್ಯು ಯುಯುತ್ಸು ಸೃಂಜಯರು
ಸಕಲ ಸನ್ನಾಹದಲಿ ಯುದ್ಧೋ
ದ್ಯುಕುತರಾದರು ಚಕಿತಚಾಪರು
ಮುಕುತ ಶಸ್ತ್ರಾವಳಿಯ ಮಳೆಗಾಲವನು ನಿರ್ಮಿಸುತ (ಭೀಷ್ಮ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ನಕುಲ, ಕುಂತೀಭೋಜನ ಮಗ, ಸೋಮಕ, ಘಟೋತ್ಕಚ, ದ್ರುಪದ, ಪ್ರತಿವಿಂಧ್ಯ, ಶತಾನೀಕ, ಅಭಿಮನ್ಯು, ಯುಯುತ್ಸು, ಸೃಂಜಯರು ಎಲ್ಲಾ ಯುದ್ಧಸನ್ನಾಹದೊಡನೆ ಬಿಲ್ಲನ್ನು ಒದರಿಸಿ ಬಾಣಗಳ ಮಳೆಗಾಲವನ್ನುಂಟು ಮಾಡಿದರು.

ಅರ್ಥ:
ಸಕಲ: ಎಲ್ಲಾ; ಸನ್ನಾಹ: ಯುದ್ಧಕ್ಕೆ ಸನ್ನದ್ಧವಾದ ಸೇನೆ; ಉದ್ಯುಕ್ತ: ತೊಡಗುವವನು; ಚಕಿತ: ಬೆರಗುಗೊಂಡ; ಚಾಪ: ಬಿಲ್ಲು, ಧನುಸ್ಸು; ಮುಕುತ: ಮುಕ್ತ; ಶಸ್ತ್ರಾವಳಿ: ಆಯುಧಗಳ ಗುಂಪು; ಮಳೆಗಾಲ: ವರ್ಷಧಾರೆ; ನಿರ್ಮಿಸು: ಕಟ್ಟು, ರಚಿಸು;

ಪದವಿಂಗಡಣೆ:
ನಕುಲ +ಕುಂತೀಭೋಜಸುತ +ಸೋ
ಮಕ +ಘಟೋತ್ಕಚ+ ದ್ರುಪದ+ ಪ್ರತಿ+ವಿಂ
ಧ್ಯಕ+ ಶತಾನೀಕ+ಅಭಿಮನ್ಯು+ ಯುಯುತ್ಸು +ಸೃಂಜಯರು
ಸಕಲ+ ಸನ್ನಾಹದಲಿ +ಯುದ್ಧೋ
ದ್ಯುಕುತರಾದರು +ಚಕಿತ+ಚಾಪರು
ಮುಕುತ +ಶಸ್ತ್ರಾವಳಿಯ +ಮಳೆಗಾಲವನು+ ನಿರ್ಮಿಸುತ

ಅಚ್ಚರಿ:
(೧) ಆಯುಧಗಳ ರಭಸವನ್ನು ತಿಳಿಸುವ ಪರಿ – ಚಕಿತಚಾಪರು ಮುಕುತ ಶಸ್ತ್ರಾವಳಿಯ ಮಳೆಗಾಲವನು ನಿರ್ಮಿಸುತ