ಪದ್ಯ ೬೩: ಗಾಂಧಾರಿ ಭೀಮನನ್ನು ಹೇಗೆ ಬಯ್ದಳು?

ಕದನವಿಜಯದ ಭಂಗಿ ತಲೆಗೇ
ರಿದುದೊ ಮೇಲಂಕಣದಲೊಡವು
ಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು
ಇದಿರಲಿರದಿರು ಸಾರು ಕರೆ ಧ
ರ್ಮದ ವಿಡಂಬದ ಧರ್ಮಪುತ್ರನ
ಹದನ ಕೇಳುವೆನೆನುತ ಕಳವಳಿಸಿದಳು ಗಾಂಧಾರಿ (ಗದಾ ಪರ್ವ, ೧೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ಯುದ್ಧದ ವಿಜಯವೆಂಬ ಭಂಗಿ ತಲೆಗೇರಿದ್ದಲ್ಲದೆ ರಣರಂಗದಲ್ಲಿ ಸಹೋದರನ ರಕ್ತ ಕುಡಿದವನೇ, ನಿನ್ನೊಡನೆ ನನಗೇನು ಮಾತು. ನನ್ನಿದಿರು ನಿಲ್ಲದೆ ದೂರ ಹೋಗು. ಧರ್ಮದ ಅಪಹಾಸ್ಯಮಾಡಿದ ಧರ್ಮಜನು ಏನೆನ್ನುತ್ತಾನೆಂದು ಕೇಳುತ್ತೇನೆ ಎಂದು ಗಾಂಧಾರಿಯು ಕಳವಳಗೊಂಡು ಹೇಳಿದಳು.

ಅರ್ಥ:
ಕದನ: ಯುದ್ಧ; ವಿಜಯ: ಗೆಲುವು; ಭಂಗಿ: ರೀತಿ; ತಲೆ: ಶಿರ; ಏರು: ಹತ್ತು; ಅಂಕಣ: ಸ್ಥಳ; ಒಡವುಟ್ಟಿದ: ಸಹೋದರ, ಜೊತೆಯಲ್ಲಿ ಜನಿಸಿದ; ನೆತ್ತರು: ರಕ್ತ; ಕುಡಿ: ಪಾನಮಾಡು; ಇದಿರು: ಎದುರು; ಸಾರು: ಜರುಗು; ಮಾತು: ವಾಣಿ; ಕರೆ: ಬರೆಮಾಡು; ಧರ್ಮ: ಧಾರಣೆ ಮಾಡಿದುದು; ವಿಡಂಬ: ಅನುಸರಣೆ, ಸೋಗು; ಪುತ್ರ: ಸುತ; ಹದ: ಸ್ಥಿತಿ; ಕೇಳು: ಆಲಿಸು; ಕಳವಳ: ಗೊಂದಲ, ಚಡಪಡಿಸು;

ಪದವಿಂಗಡಣೆ:
ಕದನ+ವಿಜಯದ +ಭಂಗಿ +ತಲೆಗೇ
ರಿದುದೊ +ಮೇಲ್+ಅಂಕಣದಲ್+ಒಡವು
ಟ್ಟಿದನ +ನೆತ್ತರು+ಕುಡಿಹಿ+ ನಿನ್ನೊಡನ್+ಎನಗೆ +ಮಾತೇನು
ಇದಿರಲ್+ಇರದಿರು +ಸಾರು +ಕರೆ +ಧ
ರ್ಮದ +ವಿಡಂಬದ +ಧರ್ಮಪುತ್ರನ
ಹದನ +ಕೇಳುವೆನ್+ಎನುತ +ಕಳವಳಿಸಿದಳು +ಗಾಂಧಾರಿ

ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಒಡವುಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು
ಇದಿರಲಿರದಿರು ಸಾರು
(೨) ಧರ್ಮ ಪದದ ಬಳಕೆ – ಧರ್ಮದ ವಿಡಂಬದ ಧರ್ಮಪುತ್ರನ ಹದನ ಕೇಳುವೆ

ಪದ್ಯ ೨೩: ಬಲರಾಮನು ಪಾಂಡವರ ಬಗ್ಗೆ ಏನು ಹೇಳಿದನು?

ಎಲವೆಲವೊ ಪಾಂಡವರಿರಾ ನೀ
ವಳುಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂದಿರಿ ಕೌರವೇಶ್ವರನ (ಗದಾ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲವೆಲವೋ ಪಾಂಡವರಿರಾ, ನೀವು ತಪ್ಪಿದಿರಿ, ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು. ಇದು ಧರ್ಮನಿರ್ಣಯ. ಅನ್ಯಾಯದಿಂದ ಕೌರವನನ್ನು ಕೊಂದು ನೀವು ಅಳಿದಿರಿ ಎಂದು ಬಲರಾಮನು ಹೇಳಿದನು.

ಅರ್ಥ:
ಅಳುಪು: ಭಂಗತರು; ನಾಭಿ: ಹೊಕ್ಕಳು; ಕೈ: ಹಸ್ತ; ಸಲ್ಲದು: ಸರಿಯಲ್ಲದು; ಗದೆ: ಮುದ್ಗರ; ಕದನ: ಯುದ್ಧ; ಚಲಿಸು: ಓಡಾಡು; ಧರ್ಮ: ಧಾರಣೆ ಮಾಡಿದುದು; ನಿರ್ಣಯ: ನಿರ್ಧಾರ; ಭಾಷೆ: ನುಡಿ; ಅಳಿ: ನಾಶ; ನ್ಯಾಯ: ಯೋಗ್ಯವಾದುದು; ಕೊಂದು: ಕೊಲ್ಲು;

ಪದವಿಂಗಡಣೆ:
ಎಲವೆಲವೊ +ಪಾಂಡವರಿರಾ +ನೀವ್
ಅಳುಪಿದಿರಲಾ +ನಾಭಿಯಿಂದವೆ
ಕೆಳಗೆ +ಕೈ +ಮಾಡುವುದು +ಸಲ್ಲದು+ ಗದೆಯ +ಕದನದಲಿ
ಚಲಿಸಲಾಗದು +ಧರ್ಮ+ನಿರ್ಣಯ
ದೊಳಗಿದ್+ಒಂದೇ +ಭಾಷೆ +ಮಾಡಿದಿರ್
ಅಳಿದಿರ್+ಅನ್ಯಾಯದಲಿ +ಕೊಂದಿರಿ +ಕೌರವೇಶ್ವರನ

ಅಚ್ಚರಿ:
(೧) ಗದಾಯುದ್ಧದ ನಿಯಮ: ನಾಭಿಯಿಂದವೆ ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ

ಪದ್ಯ ೪೧: ಕೌರವನು ಕೃಪಾದಿಗಳಿಗೆ ಹೊರಡಲೇಕೆ ಹೇಳಿದನು?

ಸಲಿಲ ಮಧ್ಯದೊಳಿಂದಿನಿರುಳನು
ಕಳೆದೆನಾದಡೆ ಪಾಂಡುಪುತ್ರರ
ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ
ಅಳುಕಿ ಕದನದೊಳೋಡಿ ನಗರಿಯ
ಲಲನೆಯರ ಮರೆಗೊಂಬೆನೇ ನೀವ್
ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ (ಗದಾ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಈ ರಾತ್ರಿಯನ್ನು ನೀರಿನೊಳಗೆ ನಾನು ಕಳೆದರೆ, ನಾಳೆ ಪಾಂಡವರನ್ನು ಗೆಲ್ಲುತ್ತೇನೆ, ಎಂದು ನಿಶ್ಚಯಿಸಿದ್ದೇನೆ. ಹೆದರಿ ಓಡಿಹೋಗಿ ಕೋಟೆಯ, ಸ್ತ್ರೀಯರ ಮರೆಯಲ್ಲಿರುವವನಾನಲ್ಲ. ಭೀಮನ ಬೇಹುಗಾರರು ಬರುವುದು ಖಂಡಿತ. ನೀವಿಲ್ಲಿರುವುದು ತರವಲ್ಲ. ದೂರಕ್ಕೆ ಹೊರಟುಹೋಗಿರಿ ಎಂದನು.

ಅರ್ಥ:
ಸಲಿಲ: ನೀರು; ಮಧ್ಯ: ನಡುವೆ; ಇಂದಿನ: ಇವತ್ತು; ಇರುಳು: ರಾತ್ರಿ; ಕಳೆ: ಸಾಗಿಸು, ದೂಡು; ಗೆಲುವು: ಜಯ; ಉದಯ: ಹುಟ್ಟು; ನಿಶ್ಚಯ: ಖಂಡಿತ; ಚಿತ್ತ: ಮನಸ್ಸು; ಅಳುಕು: ಹೆದರು; ಕದನ: ಯುದ್ಧ; ನಗರ: ಊರು; ಲಲನೆ: ಸ್ತ್ರೀ; ಮರೆ: ಕಳೆದುಕೊಳ್ಳು, ತಿರಸ್ಕರಿಸು; ತೊಲಗು: ಹೊರಡು; ಬೇಹು: ಗೂಢಚರ್ಯೆ;

ಪದವಿಂಗಡಣೆ:
ಸಲಿಲ +ಮಧ್ಯದೊಳ್+ಇಂದಿನ್+ಇರುಳನು
ಕಳೆದೆನಾದಡೆ +ಪಾಂಡುಪುತ್ರರ
ಗೆಲುವೆನ್+ಉದಯದೊಳ್+ಇದುವೆ+ ನಿಶ್ಚಯವೆನ್ನ+ ಚಿತ್ತದಲಿ
ಅಳುಕಿ +ಕದನದೊ ಳ್ಳೋ+ಓಡಿ+ ನಗರಿಯ
ಲಲನೆಯರ +ಮರೆಗೊಂಬೆನೇ +ನೀವ್
ತೊಲಗಿ+ ಭೀಮನ+ ಬೇಹು +ಬಹುದ್+ಇರಬೇಡ+ ನೀವೆಂದ

ಅಚ್ಚರಿ:
(೧) ಕೌರವನ ದಿಟ್ಟತನ – ಅಳುಕಿ ಕದನದೊಳೋಡಿ ನಗರಿಯ ಲಲನೆಯರ ಮರೆಗೊಂಬೆನೇ

ಪದ್ಯ ೩೧: ಕೌರವನು ಕೋಪದಿಂದ ಏನು ಕೇಳಿದನು?

ಬದುಕಿ ಬಂದರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ (ಗದಾ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವನು ಅದನ್ನು ಕೇಳಿ ಸಿಟ್ಟಿನಿಂದ, ಭೀಮನು ನಿಮಗೆ ಗದೆಯ ಸವಿಯನ್ನು ಉಣೀಸಲಿಲ್ಲವೇ? ಒಡೆಯನ ಕಷ್ಟಕಾಲದ ಸಮಯದಲ್ಲಿ ಜೊತೆಗ್ಯಾಗಿ ಬಂದೊದಗಿದಿರಲ್ಲವೇ? ಹೌದು ಶಕುನಿ ಸುಶರ್ಮರ ಸೈನ್ಯವನ್ನೂ ವೈರಿಗಳು ಸಂಹರಿಸಿದರಲ್ಲಾ ಆಗ ನೀವೇನು ಮಾಡುತ್ತಿದ್ದೀರಿ ಎಂದು ಕೇಳಿದನು.

ಅರ್ಥ:
ಬದುಕು: ಜೀವಿಸು; ಬಂದು: ಆಗಮಿಸು; ಗದೆ: ಮುದ್ಗರ; ಸವಿ: ಸಿಹಿ; ಕಾಣಿಸು: ತೋರು; ಸಾಕು: ಸಲಹು; ಸಮಯ: ಕಾಲ; ಸುಳಿ: ಕಾಣಿಸಿಕೊಳ್ಳು; ಸಾಹಿತ್ಯ: ಸಾಹಚರ್ಯ, ಸಂಬಂಧ; ರೇಖೆ: ಗೆರೆ, ಗೀಟು; ಕದನ: ಯುದ್ಧ; ಹೊದರು: ಗುಂಪು, ಸಮೂಹ; ಹರೆ: ಸೀಳು; ಪರಾಕ್ರಮ: ಶೌರ್ಯ; ನೃಪತಿ: ರಾಜ; ಖಾತಿ: ಕೋಪ, ಕ್ರೋಧ;

ಪದವಿಂಗಡಣೆ:
ಬದುಕಿ+ ಬಂದರೆ +ಭೀಮ +ನಿಮ್ಮನು
ಗದೆಯ +ಸವಿಗಾಣಿಸನಲ್+ಆ+ ಸಾ
ಕಿದನ +ಸಮಯಕೆ +ಸುಳಿದಿರೈ +ಸಾಹಿತ್ಯ+ರೇಖೆಯಲಿ
ಕದನದಲಿ +ಸೌಬಲ+ ಸುಶರ್ಮರ
ಹೊದರ +ಹರೆಗಡಿವಲ್ಲಿ +ನೀವ್ +ಮಾ
ಡಿದ +ಪರಾಕ್ರಮವಾವುದೆಂದನು +ನೃಪತಿ +ಖಾತಿಯಲಿ

ಅಚ್ಚರಿ:
(೧) ಸ ಕಾರದ ಸಾಲು ಪದಗಳು – ಸವಿಗಾಣಿಸನಲಾ ಸಾಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ

ಪದ್ಯ ೨೯: ದುರ್ಯೋಧನನು ಭೀಮನ ಹೊಟ್ಟೆಯಿಂದ ಯಾರನ್ನು ತೆಗೆಯುತ್ತೇನೆಂದನು?

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದೆಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ನನ್ನ ಮನಸ್ಸು ಕದಡಿದೆ, ಆದರೆ ಪರಾಕ್ರಮದ ಕಡಲು ಬತ್ತಿಲ್ಲ, ನೆಲೆನಿಂತಿದೆ. ಅರ್ಥವಿಲ್ಲದೆ ಮಾತಾಡಿ ಏನು ಪ್ರಯೋಜನ? ಸಂಜಯ ಹಿಂದಾದುದನ್ನು ಲೆಕ್ಕಿಸಬೇಡ. ಯುದ್ಧದಲ್ಲಿ ಭೀಮನು ದುಶ್ಯಾಸನನನ್ನು ತಿಂದು ತೇಗಿದನಲ್ಲವೇ? ನನ್ನ ತಮ್ಮನನ್ನು ಭೀಮನ ಹೊಟ್ಟೆಯಿಂದ ತೆಗೆಯುತ್ತೇನೆ, ಆ ವಿಚಿತ್ರವನು ನೋಡು ಎಂದು ಹೇಳಿದನು.

ಅರ್ಥ:
ಕದಡು: ಬಗ್ಗಡ, ರಾಡಿ; ಅಂತಃಕರಣ: ಒಳ ಮನಸ್ಸು; ವಿಕ್ರಮ: ಪರಾಕ್ರಮಿ; ಉದಧಿ: ಸಾಗರ; ನೆಲೆ: ಸ್ಥಾನ; ನಿರರ್ಥಕ: ಪ್ರಯೋಜನವಿಲ್ಲದ; ಒದರು: ಹೇಳು, ಹೊರಹಾಕು; ಫಲ: ಪ್ರಯೋಜನ; ಹಿಂದನ: ಪೂರ್ವ, ನಡೆದ; ಎಣಿಸು: ಲೆಕ್ಕಿಸು; ಕದನ: ಯುದ್ಧ; ತೇಗು: ಢರಕೆ, ತಿಂದು ಮುಗಿಸು; ಬಕ: ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ; ಬಕವೈರಿ: ಭೀಮ; ತಮ್ಮ: ಸಹೋಅರ; ಉದರ: ಹೊಟ್ಟೆ; ತೆಗೆ: ಈಚೆಗೆ ತರು, ಹೊರತರು; ವಿಚಿತ್ರ: ಬೆರಗುಗೊಳಿಸುವಂತಹುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಕದಡಿತ್+ಅಂತಃಕರಣ+ ವಿಕ್ರಮದ್
ಉದಧಿ +ನೆಲೆಯಾಯಿತು +ನಿರರ್ಥಕೆ
ಒದರಿದೆಡೆ +ಫಲವೇನು +ಸಂಜಯ +ಹಿಂದನ್+ಎಣಿಸದಿರು
ಕದನದಲಿ +ದುಶ್ಯಾಸನನ +ತೇ
ಗಿದನಲಾ +ಬಕವೈರಿ +ತಮ್ಮನನ್
ಉದರದಲಿ +ತೆಗೆವೆನು +ವಿಚಿತ್ರವ +ನೋಡು +ನೀನೆಂದ

ಅಚ್ಚರಿ:
(೧) ದುರ್ಯೋಧನನ ಶಕ್ತಿಯನ್ನು ವಿವರಿಸುವ ಪರಿ – ವಿಕ್ರಮದುದಧಿ ನೆಲೆಯಾಯಿತು
(೨) ಭೀಮನನ್ನು ಬಕವೈರಿ ಎಂದು ಕರೆದಿರುವುದು

ಪದ್ಯ ೨೯: ಶಲ್ಯನೆದುರು ಯುದ್ಧ ಮಾಡಲು ಯಾರು ನಿಂತರು?

ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲಮೋಹರವ
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ (ಶಲ್ಯ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದ ಸೋಮಕ ಪಾಂಚಾಲ ಸೃಂಜಯರ ಸೈನ್ಯವು ರಣರಂಗವನ್ನು ಬಿಟ್ಟುಹೋಯಿತು. ಅಕ್ಕ ಪಕ್ಕದಲ್ಲಿ ಭೀಮಾರ್ಜುನರು ಧನುಷ್ಠಂಕಾರವನ್ನು ಮಾಡುತ್ತಿರಲು, ಶತ್ರು ಸಂಹಾರಕನಾದ ಯುಧಿಷ್ಠಿರನು ಶಲ್ಯನಿಗೆ ಇದಿರಾಗಿ ನಿಂತನು.

ಅರ್ಥ:
ಚೆಲ್ಲು: ಹರಡು; ಮುಖ: ಆನನ; ನಿಂದು: ನಿಲ್ಲು; ಆದಿ: ಮುಂತಾದ; ಕಾಣು: ತೋರು; ಮೋಹರ: ಯುದ್ಧ; ಕೆಲ್ಲೆ: ಸಿಗುರು, ಸಿಬುರು; ಬಲು: ಹೆಚ್ಚು; ಬಿಲ್ಲು: ಚಾಪ; ಒದರು: ಕೊಡಹು, ಜಾಡಿಸು; ಕದನ: ಯುದ್ಧ; ಚೌಪಟಮಲ್ಲ: ನಾಲ್ಕು ದಿಕ್ಕಿನಲ್ಲಿಯೂ ಯುದ್ಧ ಮಾಡುವವನು, ವೀರ; ಇದಿರು: ಎದುರು; ನಿಂದನು: ನಿಲ್ಲು; ರಾಯ: ರಾಜ;

ಪದವಿಂಗಡಣೆ:
ಚೆಲ್ಲಿತದು+ ನಾನಾಮುಖಕೆ+ ನಿಂ
ದಲ್ಲಿ +ನಿಲ್ಲದೆ +ಸೃಂಜಯಾದ್ಯರನ್
ಅಲ್ಲಿ +ಕಾಣೆನು +ಸೋಮಕರ +ಪಾಂಚಾಲ+ಮೋಹರವ
ಕೆಲ್ಲೆಯಲಿ +ಭೀಮಾರ್ಜುನರು +ಬಲು
ಬಿಲ್ಲನ್+ಒದರಿಸೆ+ ಕದನ+ಚೌಪಟ
ಮಲ್ಲ +ತಾನ್+ಇದಿರಾಗಿ +ನಿಂದನು +ಪಾಂಡವರ +ರಾಯ

ಅಚ್ಚರಿ:
(೧) ಶಲ್ಯನನ್ನು ಕದನಚೌಪಟಮಲ್ಲ ನೆಂದು ಕರೆದಿರುವುದು

ಪದ್ಯ ೨೮: ಶಲ್ಯನು ಪಾಂಡವ ಸೇನೆಗೆ ಯಾರನ್ನು ಕರೆತರಲು ಹೇಳಿದನು?

ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಲ್ಯನು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿ, ನಿಮ್ಮ ದೊರೆಯೆಲ್ಲಿ? ಅವನು ಯುದ್ಧಕ್ಕೆ ಬರಲಿ, ನೀವು ಯುದ್ಧ ಮಾಡಬಹುದು, ನಾನು ಅದನ್ನು ಸ್ವೀಕರಿಸುವುದಿಲ್ಲ. ಕೌರವನೊಡನೆ ಯುದ್ಧಮಾಡುವುದು ಧರ್ಮಜನಿಗೆ ಸಲ್ಲದು, ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಕ್ಕೆ ಬರಲಿ ಎಂದು ಘೋಷಿಸಿದನು.

ಅರ್ಥ:
ತಡೆ: ನಿಲ್ಲಿಸು; ನಿಂದು: ನಿಲ್ಲು; ಪರಬಲ: ವೈರಿಸೈನ್ಯ; ಒಡೆಯ: ನಾಯಕ; ಆವೆಡೆ: ಯಾವ ಕಡೆ; ಸೇನೆ: ಸೈನ್ಯ; ಕದನ: ಯುದ್ಧ; ಕೊಂಬು: ಸ್ವೀಕರಿಸು; ಕೈದು: ಆಯುಧ; ಸೆಳೆ: ಆಕರ್ಷಿಸು; ಉಳಿದ: ಮಿಕ್ಕ; ಪೊಡವಿ: ಭೂಮಿ; ಸಲ್ಲದು: ಸರಿಯಾದುದಲ್ಲ; ಗಡ: ಅಲ್ಲವೆ; ಶರಾಸನ: ಬಿಲ್ಲು; ಆಸನ: ಕೂರುವ ಸ್ಥಳ; ಶರ: ಬಾಣ; ವಿಡಿದು: ಹಿಡಿದು, ಗ್ರಹಿಸು; ಉರುಬು: ಅತಿಶಯವಾದ ವೇಗ;

ಪದವಿಂಗಡಣೆ:
ತಡೆದು +ನಿಂದನು +ಪರಬಲವ +ನಿಮ್ಮ್
ಒಡೆಯನ್+ಆವೆಡೆ+ ಸೇನೆ +ಕದನವ
ಕೊಡಲಿ +ಕೊಂಬವನಲ್ಲ+ ಕೈದುವ +ಸೆಳೆಯೆನ್+ಉಳಿದರಿಗೆ
ಪೊಡವಿಗ್+ಒಡೆಯನು +ಕೌರವೇಶ್ವರ
ನೊಡನೆ +ಸಲ್ಲದು +ಗಡ +ಶರಾಸನ+
ವಿಡಿಯ +ಹೇಳಾ +ಧರ್ಮಜನನೆಂದ್+ಉರುಬಿದನು +ಶಲ್ಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ
(೨) ಕ ಕಾರದ ಸಾಲು ಪದ – ಕದನವ ಕೊಡಲಿ ಕೊಂಬವನಲ್ಲ ಕೈದುವ

ಪದ್ಯ ೬೨: ಕೃಷ್ಣನು ಧರ್ಮಜನಿಗೆ ಏನು ಹೇಳಲು ಹೇಳಿದ?

ಎಲೆ ಯುಧಿಷ್ಠಿರ ನನ್ನ ಸುತನೇ
ನಳಿದನೇ ಹುಸಿಯಲ್ಲಲೇ ನಿ
ರ್ಮಳವಚೋನಿಧಿ ನೀನು ಹೇಳೆನಲಸುರಹರ ನಗುತ
ಎಲೆಲೆ ನುಡಿಯಾ ಪಾಪಿ ಕದನದೊ
ಳಳಿದುದಶ್ವತ್ಥಾಮನೆಂಬ
ಗ್ಗಳೆಯ ಕರಿ ಮಾಳವರ ಥಟ್ಟೆನೊಳಂಜಬೇಡೆಂದ (ದ್ರೋಣ ಪರ್ವ, ೧೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ದ್ರೋಣನು ಧರ್ಮಜನ ಬಳಿಗೆ ಹೋಗಿ, ಎಲೈ ಯುಧಿಷ್ಠಿರ, ನನ್ನ ಮಗನು ಸತ್ತನೇ? ಈ ಮಾತು ಸುಳ್ಳಲ್ಲ ತಾನೇ? ನಿರ್ಮಲ ಸತ್ಯವಕ್ಯನಾದ ನೀನು ಹೇಳು ಎಂದು ಕೇಳಿದನು. ಕೃಷ್ಣನು ಎಲವೋ ಪಾಪಿ ಹೆದರಬೇಡ, ಈ ದಿನ ಮಾಳವರ ಸೈನ್ಯದಲ್ಲಿ ಅಶ್ವತ್ಥಾಮನೆಂಬ ಮಹಾಗಜವೊಂದು ಸತ್ತಿದೆ ಎಂದು ಹೇಳು ಎಂದು ಧರ್ಮಜನನ್ನು ಪ್ರಚೋದಿಸಿದನು.

ಅರ್ಥ:
ಸುತ: ಮಗ; ಅಳಿ: ಸಾವು; ಹುಸಿ: ಸುಳ್ಳು; ನಿರ್ಮಳ: ಶುದ್ಧ; ವಚೋನಿಧಿ: ಮಾತಿನ ಐಶ್ವರ್ಯ; ಅಸುರಹರ: ಕೃಷ್ಣ; ನಗು: ಹರ್ಷ; ನುಡಿ: ಮಾತು; ಪಾಪಿ: ಪಾತಕ; ಕದನ: ಯುದ್ಧ; ಅಗ್ಗಳೆ: ಶ್ರೇಷ್ಠ; ಕರಿ: ಆನೆ; ಮಾಳವ: ಒಂದು ದೇಶದ ಹೆಸರು; ಥಟ್ಟು: ಗುಂಪು; ಅಂಜು: ಹೆದರು;

ಪದವಿಂಗಡಣೆ:
ಎಲೆ +ಯುಧಿಷ್ಠಿರ +ನನ್ನ +ಸುತನೇನ್
ಅಳಿದನೇ +ಹುಸಿಯಲ್ಲಲೇ+ ನಿ
ರ್ಮಳವಚೋನಿಧಿ+ ನೀನು +ಹೇಳೆನಲ್+ಅಸುರಹರ +ನಗುತ
ಎಲೆಲೆ +ನುಡಿಯಾ +ಪಾಪಿ +ಕದನದೊಳ್
ಅಳಿದುದ್+ಅಶ್ವತ್ಥಾಮನೆಂಬ್
ಅಗ್ಗಳೆಯ +ಕರಿ +ಮಾಳವರ +ಥಟ್ಟೆನೊಳ್+ಅಂಜಬೇಡೆಂದ

ಅಚರಿ:
(೧) ಧರ್ಮಜನನ್ನು ಹೊಗಳಿದ ಪರಿ – ನಿರ್ಮಳವಚೋನಿಧಿ
(೨) ಕೃಷ್ಣನನ್ನು ಕರೆದ ಪರಿ – ಅಸುರಹರ
(೩) ಕೃಷ್ಣನು ಧರ್ಮಜನಿಗೆ ಹೇಳಿದ ಪರಿ – ಪಾಪಿ ಕದನದೊಳಳಿದುದಶ್ವತ್ಥಾಮನೆಂಬಗ್ಗಳೆಯ ಕರಿ ಮಾಳವರ

ಪದ್ಯ ೨೦: ಯುದ್ಧಕ್ಕೆಲ್ಲರು ಹೇಗೆ ಸಿದ್ಧರಾದರು?

ಬಿಗುಹನೇರಿಸಿ ಮತ್ತೆ ತುರಗಾ
ಳಿಗಳ ಬಿಗಿದರು ರಾವುತರು ಹೊರ
ಜಿಗಳ ಜೋಡಿಸಿ ಜೋದರಾಯತವಾಯ್ತು ಕರಿಗಲಲಿ
ಬಿಗಿದು ಕೀಲಚ್ಚುಗಳ ರಥಿಕಾ
ಳಿಗಳು ಮೇಳೈಸಿದರು ಕೈದುವ
ನುಗಿದು ಕಾಲಾಳೆದ್ದು ನಿಂದುದು ಕದನಕನುವಾಗಿ (ದ್ರೋಣ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಹಲ್ಲಣ, ಹೊರಜಿಗಳ ಸಹಾಯದಿಂದ ರಾವುತರು ಜೋದರು ಕುದುರೆ ಆನೆಗಳನ್ನು ಯುದ್ಧಕ್ಕಣಿಮಾಡಿದರು. ಕೀಲುಗಳನ್ನು ಹಾಕಿ ರಥಿಕರು, ಸಿದ್ಧರಾದರು. ಆಯುಧಗಳನ್ನು ಹಿಡಿದ ಕಾಲಾಳುಗಳು ಯುದ್ಧಕ್ಕನುವಾಗಿ ನಿಂತರು.

ಅರ್ಥ:
ಬಿಗುಹು: ಬಿಗಿ; ಏರು: ಹೆಚ್ಚಾಗು; ಮತ್ತೆ: ಪುನಃ; ತುರಗಾಳಿ: ಕುದುರೆಗಳ ಸಾಲು; ಬಿಗಿ: ಭದ್ರವಾಗಿರುವುದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹೊರಜೆ: ಹಗ್ಗ; ಜೋಡಿಸು: ಕೂಡಿಸು; ಜೋಧ: ಸೈನಿಕ; ಆಯತ: ಉಚಿತವಾದ ಕ್ರಮ, ನೆಲೆ; ಕರಿ: ಆನೆ; ಕೀಲು: ಅಗುಳಿ, ಬೆಣೆ; ಅಚ್ಚು: ಪಡಿಯಚ್ಚಿನಲ್ಲಿ ಎರಕಹೊಯ್ದು ತೆಗೆದ ಪ್ರತಿರೂಪ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಆಳಿ: ಸಾಲು; ಮೇಳೈಸು: ಸೇರು, ಜೊತೆಯಾಗು; ಕೈದು: ಆಯುಧ, ಶಸ್ತ್ರ; ಉಗಿ: ಹೊರಹಾಕು; ಕಾಲಾಳು: ಸೈನಿಕ; ಎದ್ದು: ಮೇಲೇಳು; ನಿಂದು: ನಿಲ್ಲು; ಕದನ: ಯುದ್ಧ; ಅನುವು: ಸೊಗಸು, ರೀತಿ;

ಪದವಿಂಗಡಣೆ:
ಬಿಗುಹನೇರಿಸಿ +ಮತ್ತೆ +ತುರಗಾ
ಳಿಗಳ +ಬಿಗಿದರು +ರಾವುತರು +ಹೊರ
ಜಿಗಳ +ಜೋಡಿಸಿ +ಜೋದರಾಯತವಾಯ್ತು +ಕರಿಗಳಲಿ
ಬಿಗಿದು +ಕೀಲಚ್ಚುಗಳ+ ರಥಿಕಾ
ಳಿಗಳು +ಮೇಳೈಸಿದರು +ಕೈದುವನ್
ಉಗಿದು +ಕಾಲಾಳೆದ್ದು +ನಿಂದುದು +ಕದನಕ್+ಅನುವಾಗಿ

ಅಚ್ಚರಿ:
(೧) ತುರಗಾಳಿ, ರಥಿಕಾಳಿ – ಪ್ರಾಸ ಪದಗಳು

ಪದ್ಯ ೩೧: ಕರ್ಣನು ಯಾರ ಮೇಲೆ ಯುದ್ಧವನ್ನು ಸಾರಿದನು?

ಇತ್ತಲೈ ದನುಜೇಂದ್ರ ಕದನವ
ದಿತ್ತಲಿತ್ತಲು ಗಮನ ಸುಭಟರ
ಕತ್ತಲೆಯೊಳೋಡಿಸಿದ ಕಡುಹನು ತೋರು ನಮ್ಮೊಡನೆ
ಮೃತ್ಯು ನಿನಗಾನೆನ್ನೊಡನೆ ತಲೆ
ಯೊತ್ತಿನೋಡೆಂದೆನುತ ಬೊಬ್ಬಿರಿ
ವುತ್ತ ದೈತ್ಯನ ತರುಬಿದನು ಬಲವೆಲ್ಲ ಬೆರಗಾಗೆ (ದ್ರೋಣ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನು ಯುದ್ಧವನ್ನು ಮುಂದುವರೆಸುತ್ತಾ, ಎಲೈ ರಾಕ್ಷಸರ ರಾಜ, ಯುದ್ಧ ಇಲ್ಲಿದೆ, ನಿನ್ನ ಗಮನವು ನನ್ನತ್ತ ಬರಲಿ, ಕತ್ತಲೆಯಲ್ಲಿ ಶತ್ರುವೀರರನ್ನೋಡಿಸಿದ ಪೌರುಷವನ್ನು ನಮ್ಮ ಹತ್ತಿರ ತೋರಿಸು. ನಿನ್ನ ಮೃತ್ಯುವಾದ ನನ್ನೊಡನೆ ಯುದ್ಧಮಾಡಿ ತೋರಿಸು ಎಂದು ಗರ್ಜಿಸಿ ಘಟೋತ್ಕಚನನ್ನು ತರುಬಿದನು.

ಅರ್ಥ:
ದನುಜೇಂದ್ರ: ರಾಕ್ಷಸರ ದೊರೆ; ಕದನ: ಯುದ್ಧ; ಗಮನ: ಲಕ್ಷ್ಯ, ಅವಧಾನ; ಸುಭಟ: ಪರಾಕ್ರಮಿ; ಕತ್ತಲೆ: ಅಂಧಕಾರ; ಓಡು: ಧಾವಿಸು; ತೋರು: ಗೋಚರಿಸು; ಮೃತ್ಯು: ಸಾವು; ತಲೆ: ಶಿರ; ಒತ್ತು: ಮುತ್ತು, ಚುಚ್ಚು; ಬೊಬ್ಬಿರಿ: ಆರ್ಭಟಿಸು; ದೈತ್ಯ: ರಾಕ್ಷಸ; ತರುಬು: ತಡೆ, ನಿಲ್ಲಿಸು; ಬಲ: ಶಕ್ತಿ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಇತ್ತಲೈ +ದನುಜೇಂದ್ರ +ಕದನವದ್
ಇತ್ತಲಿತ್ತಲು +ಗಮನ +ಸುಭಟರ
ಕತ್ತಲೆಯೊಳ್+ಓಡಿಸಿದ +ಕಡುಹನು +ತೋರು +ನಮ್ಮೊಡನೆ
ಮೃತ್ಯು +ನಿನಗಾನ್+ಎನ್ನೊಡನೆ +ತಲೆ
ಒತ್ತಿ+ನೋಡೆಂದ್+ಎನುತ +ಬೊಬ್ಬಿರಿ
ವುತ್ತ +ದೈತ್ಯನ +ತರುಬಿದನು +ಬಲವೆಲ್ಲ +ಬೆರಗಾಗೆ

ಅಚ್ಚರಿ:
(೧) ದನುಜ, ದೈತ್ಯ – ಸಮಾನಾರ್ಥಕ ಪದ
(೨) ಘಟೋತ್ಕಚನನ್ನು ಹಂಗಿಸುವ ಪರಿ – ಸುಭಟರ ಕತ್ತಲೆಯೊಳೋಡಿಸಿದ ಕಡುಹನು ತೋರು ನಮ್ಮೊಡನೆ