ಪದ್ಯ ೩೪: ವಿಚಿತ್ರವೀರ್ಯನೊಡನೆ ಯಾರು ವಿವಾಹವಾದರು?

ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ (ಆದಿ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅಂಬೆ, ಅಂಬಿಕೆ, ಅಂಬಾಲಿಕೆ ಇವರಲ್ಲಿ ಮೊದಲನೆಯವಳಾದ ಅಂಬೆಯು ಭೀಷ್ಮನನ್ನೇ ಮದುವೆಯಾಗುವೆನೆಂದು ಭಾಷೆಯನ್ನು ಮಾಡಿ ವಿಚಿತ್ರವೀರ್ಯನೊಡನೆ ವಿವಾಹವಾಗಲು ನಿರಾಕರಿಸಿದಳು. ಆಗ ಭೀಶ್ಮನು ಅವಳು ಬರುವುದು ಬೇಡ, ಉಳಿದಿಬ್ಬರನ್ನು ಕರೆದು ತನ್ನಿರೆಂದು ಹೇಳಿ ಮಹಾಸಂಭ್ರಮದಿಂದ ವಿಚಿತ್ರವೀರ್ಯನೊಡನೆ ಮದುವೆಯನ್ನು ಮಾಡಿಸಿದನು.

ಅರ್ಥ:
ಕಮಲಲೋಚನೆ: ಕಮಲದಂತ ಕಣ್ಣುಳ್ಳವಳು (ಸುಂದರಿ); ಗಂಡ: ಪತಿ; ನೂಕು: ತಳ್ಳು; ಛಲ: ದೃಢ ನಿಶ್ಚಯ; ಬಿಗು: ಗಟ್ಟಿ; ಮಾಣು: ನಿಲ್ಲು; ಮಿಕ್ಕ: ಉಳಿದ; ವೈದಿಕ: ವೇದಕ್ಕೆ ಸಂಬಂಧಿಸಿದ; ಲೌಕಿಕ: ಲೋಕಕ್ಕೆ ಸಂಬಂಧಿಸಿದುದು, ಪ್ರಾಪಂಚಿಕವಾದುದು; ಉತ್ಸವ: ಸಂಭ್ರಮ; ಮದುವೆ: ವಿವಾಹ;

ಪದವಿಂಗಡಣೆ:
ಆ +ಕಮಲಲೋಚನೆಯರೊಳು+ ಮೊದ
ಲಾಕೆ +ಭೀಷ್ಮನ+ ಗಂಡನೆಂದೇ
ನೂಕಿ +ಭಾಷೆಯ +ಮಾಡಿ +ನಿಂದಳು +ಛಲದ +ಬಿಗುಹಿನಲಿ
ಆಕೆ +ಮಾಣಲಿ +ಮಿಕ್ಕವರು+ ಬರ
ಲೀ +ಕುಮಾರಂಗೆಂದು +ವೈದಿಕ
ಲೌಕಿಕೋತ್ಸವದಿಂದ +ಮದುವೆಯ +ಮಾಡಿದನು +ಭೀಷ್ಮ

ಪದ್ಯ ೧೩: ಕೃಷ್ಣನು ಎಲ್ಲಿಗೆ ಹೊರಟನು?

ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿ ಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ (ಗದಾ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮಹಾಭಾರತ ಯುದ್ಧದಲ್ಲಿ ರಾಕ್ಷಸರನ್ನು ಸಂಹರಿಸಿ, ಆಡಳಿತವನ್ನು ಮತ್ತೊಬ್ಬರಿಗೆ ವಹಿಸಿ, ಮಮಪ್ರಾಣಾಹಿ ಪಾಂಡವಾ ಎಂಬ ಪ್ರತಿಜ್ಞೆಯನ್ನು ನೆರವೇರಿಸಿ, ಭೀಷ್ಮನಿಗೆ ಪರಾನಂದ ಪದವಿಯನ್ನು ನೀಡಿ, ಅಪರಿಮಿತ ಪರಮ ಸಂತೋಷದಿಂದ ಶ್ರೀಕೃಷ್ಣನು ತನ್ನ ಊರಿಗೆ ಪ್ರಯಾಣ ಮಾಡಿದನು.

ಅರ್ಥ:
ಕದನ: ಯುದ್ಧ; ಕೈ: ಹಸ್ತ; ದೈತ್ಯ: ರಾಕ್ಷಸ; ಸದೆ: ಕುಟ್ಟು, ಪುಡಿಮಾಡು; ಭೂ: ಭೂಮಿ; ಭಾರ: ಹೊರೆ; ಪರ: ಬೇರೆ; ಹಸ್ತ: ಕೈ; ಕಟ್ಟು: ನಿರ್ಮಿಸು; ಕೊಟ್ಟ: ನೀಡಿದ; ಭಾಷೆ: ನುಡಿ; ನದಿ: ಸರೋವರ; ನಂದನ: ಮಗ; ಆನಂದ: ಸಂತಸ; ಸೇರು: ಜೊತೆಗೂಡು; ಪರಮ: ಶ್ರೇಷ್ಠ; ಪರಿತೋಷ: ಸಂತಸ; ಪಯಣ: ಪ್ರಯಾಣ; ಮುರವೈರಿ: ಕೃಷ್ಣ; ಪುರಿ: ಊರು;

ಪದವಿಂಗಡಣೆ:
ಕದನದಲಿ +ಕಯ್ಯಾರೆ ದೈತ್ಯರ
ಸದೆದು+ ಭೂಭಾರವನು +ಪರ+ಹ
ಸ್ತದಲಿ +ಕಟ್ಟಿಸಿ +ಕೊಟ್ಟ+ಭಾಷೆಯನ್+ಉತ್ತರಾಯೆನಿಸಿ
ನದಿಯ +ನಂದನನನು +ಪರಾನಂ
ದದಲಿ+ ಸೇರಿಸಿ+ ಪರಮ +ಪರಿತೋ
ಷದಲಿ +ಪಯಣವ +ಮಾಡಿದನು +ಮುರವೈರಿ +ನಿಜಪುರಿಗೆ

ಅಚ್ಚರಿ:
(೧) ಪ್ರಾಣ ಬಿಟ್ಟರು ಎಂದು ಹೇಳುವ ಪರಿ – ನದಿಯ ನಂದನನನು ಪರಾನಂದದಲಿ ಸೇರಿಸಿ
(೨) ಪ ಕಾರದ ತ್ರಿವಳಿ ಪದ – ಪರಮ ಪರಿತೋಷದಲಿ ಪಯಣವ

ಪದ್ಯ ೨೭: ಭೀಮಾರ್ಜುನರು ಭಾಷೆಯನ್ನು ಹೇಗೆ ನೆರವೇರಿಸಿದರು?

ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿದರು ಸಾಹಸ
ವಳುಕಿಸದೆ ಮೂಜಗದ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ತಲೆಯನ್ನುರುಳಿಸುವೆವೆಂದು ಮಾಡಿದ ಭಾಷೆಯನ್ನುಳಿಸಿಕೊಳ್ಳಲು ಭೀಮಾರ್ಜುನರು ಅಶ್ವತ್ಥಾಮನ ಕಿರೀಟದ ಮಾಣಿಕ್ಯವನ್ನು ತೆಗೆದುಕೊಂಡು ಹೋದರು. ಪಾಂಡವರು ವಿಜಯಶಾಲಿಗಳಾದರು. ಯದುಕುಲ ತಿಲಕನಾದ ವೀರನಾರಾಯಣನ ಕರುಣೆಯಿರಲು ಅವರ ಪರಾಕ್ರಮಕ್ಕೆ ಮೂರು ಲೋಕಗಳೂ ಅಳುಕದಿರುವುದೇ?

ಅರ್ಥ:
ತಲೆ: ಶಿರ; ಕೊಂಬು: ತೆಗೆದುಕೋ; ಅವಗಡ: ಅಸಡ್ಡೆ; ಭಾಷೆ: ನುಡಿ; ಸಲಿಸು: ದೊರಕಿಸಿ ಕೊಡು, ಪೂರೈಸು; ತನುಜ: ಮಗ; ಹೊಳೆ: ಪ್ರಕಾಶಿಸು; ಮಕುಟ: ಕಿರೀಟ; ಮಾಣಿಕ: ಮಾಣಿಕ್ಯ; ಕೊಂಡು: ಪಡೆದು; ಗೆಲಿದು: ಜಯಶಾಲಿ; ತಿರುಗು: ಸುತ್ತು, ಸಂಚರಿಸು; ಸಾಹಸ: ಪರಾಕ್ರಮ, ಶೌರ್ಯ; ಅಳುಕು: ಹೆದರು; ಮೂಜಗ: ತ್ರಿಜಗತ್ತು; ತಿಲಕ: ಶ್ರೇಷ್ಥ; ಕರುಣ: ದಯೆ; ಉತ್ತರಾಯ: ಜವಾಬುದಾರಿ;

ಪದವಿಂಗಡಣೆ:
ತಲೆಯ +ಕೊಂಬ್+ಅವಗಡದ +ಭಾಷೆಯ
ಸಲಿಸಲೆಂದ್+ಆ+ ದ್ರೋಣ+ತನುಜನ
ಹೊಳೆವ +ಮಕುಟದ +ಮಾಣಿಕವ +ಕೊಂಡ್+ಉತ್ತರಾಯದಲಿ
ಗೆಲಿದು +ತಿರುಗಿದ್+ಅರಿದರು+ ಸಾಹಸವ್
ಅಳುಕಿಸದೆ +ಮೂಜಗದ +ಯದುಕುಲ
ತಿಲಕ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಭಾಷೆಯನ್ನು ತೀರಿಸಿದ ಪರಿ – ದ್ರೋಣತನುಜನ ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ

ಪದ್ಯ ೨೩: ಬಲರಾಮನು ಪಾಂಡವರ ಬಗ್ಗೆ ಏನು ಹೇಳಿದನು?

ಎಲವೆಲವೊ ಪಾಂಡವರಿರಾ ನೀ
ವಳುಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂದಿರಿ ಕೌರವೇಶ್ವರನ (ಗದಾ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲವೆಲವೋ ಪಾಂಡವರಿರಾ, ನೀವು ತಪ್ಪಿದಿರಿ, ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು. ಇದು ಧರ್ಮನಿರ್ಣಯ. ಅನ್ಯಾಯದಿಂದ ಕೌರವನನ್ನು ಕೊಂದು ನೀವು ಅಳಿದಿರಿ ಎಂದು ಬಲರಾಮನು ಹೇಳಿದನು.

ಅರ್ಥ:
ಅಳುಪು: ಭಂಗತರು; ನಾಭಿ: ಹೊಕ್ಕಳು; ಕೈ: ಹಸ್ತ; ಸಲ್ಲದು: ಸರಿಯಲ್ಲದು; ಗದೆ: ಮುದ್ಗರ; ಕದನ: ಯುದ್ಧ; ಚಲಿಸು: ಓಡಾಡು; ಧರ್ಮ: ಧಾರಣೆ ಮಾಡಿದುದು; ನಿರ್ಣಯ: ನಿರ್ಧಾರ; ಭಾಷೆ: ನುಡಿ; ಅಳಿ: ನಾಶ; ನ್ಯಾಯ: ಯೋಗ್ಯವಾದುದು; ಕೊಂದು: ಕೊಲ್ಲು;

ಪದವಿಂಗಡಣೆ:
ಎಲವೆಲವೊ +ಪಾಂಡವರಿರಾ +ನೀವ್
ಅಳುಪಿದಿರಲಾ +ನಾಭಿಯಿಂದವೆ
ಕೆಳಗೆ +ಕೈ +ಮಾಡುವುದು +ಸಲ್ಲದು+ ಗದೆಯ +ಕದನದಲಿ
ಚಲಿಸಲಾಗದು +ಧರ್ಮ+ನಿರ್ಣಯ
ದೊಳಗಿದ್+ಒಂದೇ +ಭಾಷೆ +ಮಾಡಿದಿರ್
ಅಳಿದಿರ್+ಅನ್ಯಾಯದಲಿ +ಕೊಂದಿರಿ +ಕೌರವೇಶ್ವರನ

ಅಚ್ಚರಿ:
(೧) ಗದಾಯುದ್ಧದ ನಿಯಮ: ನಾಭಿಯಿಂದವೆ ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ

ಪದ್ಯ ೧೧: ಯಾವ ಭಾಷೆಯನ್ನು ಭೀಮನು ತೀರಿಸಿಕೊಂಡನು?

ಸಂದುದೇ ನೀ ಮೆಚ್ಚಿ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ
ಕೊಂದು ದುಶ್ಶಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಕೇಳೆಂದ (ಗದಾ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಹಿಂದೆ ನಿನ್ನೆದುರಿನಲ್ಲೇ ಸಭೆಯಲ್ಲಿ ಮಾಡಿದ ಪ್ರತಿಜ್ಞೆಯನ್ನು ಪೂರೈಸಿದೆನಲ್ಲವೇ? ನೂರ್ವರು ಕೌರವರನ್ನು ಯುದ್ಧದಲ್ಲಿ ಕೊಂದು ದುಶ್ಶಾಸನನ ಮಾಂಸವನ್ನು ತಿಂದು ರಕ್ತವನ್ನು ಕುಡಿದು, ಗದೆಯಿಮ್ದ ನಿನ್ನ ತೊಡೆಗಳನ್ನು ಮುರಿದೆನಲ್ಲವೆ ದುರ್ಯೋಧನ ಹೇಳು ಎಂದು ಭೀಮನು ನುಡಿದನು.

ಅರ್ಥ:
ಸಂದು: ಪಡೆದ; ಮೆಚ್ಚು: ಹೊಗಳು, ಪ್ರಶಂಶಿಸು; ಸಭೆ: ದರ್ಬಾರು; ಹಿಂದೆ: ನಡೆದ ಘಟನೆ, ಭೂತಕಾಲ; ಭಾಷೆ: ನುಡಿ; ಕುರುಡ: ಅಂಧ; ನಂದನ: ಮಗ; ಇಮ್ಮಡಿ: ಎರಡು ಪಟ್ಟು; ರಣ: ಯುದ್ಧಭೂಮಿ; ಅಗ್ರ: ಮುಂಭಾಗ; ಕೊಂದು: ಸಾಯಿಸು; ಖಂಡ: ಮೂಳೆಯಿಲ್ಲದ ಮಾಂಸ; ರಕುತ: ನೆತ್ತರು; ಕುಡಿ: ಪಾನಮಾಡು; ಬಲುಗದೆ: ದೊಡ್ಡ ಮುದ್ಗರ; ತೊಡೆ: ಊರು; ಉಡಿ: ಮುರಿ; ಭೂಪ: ರಾಜ;

ಪದವಿಂಗಡಣೆ:
ಸಂದುದೇ +ನೀ +ಮೆಚ್ಚಿ+ ಸಭೆಯಲಿ
ಹಿಂದೆ +ಮಾಡಿದ +ಭಾಷೆ +ಕುರುಡನ
ನಂದನರನ್+ಇಮ್ಮಡಿಸಿದ್+ಐವತ್ತನು +ರಣಾಗ್ರದಲಿ
ಕೊಂದು +ದುಶ್ಶಾಸನನ +ಖಂಡವ
ತಿಂದು +ರಕುತವ +ಕುಡಿದು +ಬಲುಗದೆ
ಯಿಂದ +ನಿನ್ನಯ +ತೊಡೆಯನ್+ಉಡಿದೆನೆ +ಭೂಪ +ಕೇಳೆಂದ

ಅಚ್ಚರಿ:
(೧) ನೂರು ಜನರು ಎಂದು ಹೇಳಲು – ಇಮ್ಮಡಿಸಿದೈವತ್ತನು ಪದದ ಪ್ರಯೋಗ
(೨) ಕೊಂದು, ತಿಂದು, ಸಂದು – ಪ್ರಾಸ ಪದಗಳು

ಪದ್ಯ ೫೦: ಕೌರವನು ಭೀಮನ ಮೇಲೆ ಹೇಗೆ ಎರಗಿದನು?

ಭಾಷೆಗಳುಪರು ಪಾಂಡುಸುತರೆಂ
ಬಾಸೆಯಲಿ ನಿನ್ನಾತ ಮೈಮರೆ
ದೋಸರಿಸದಿದಿರಾದನುರುದ್ವಯವ ವಂಚಿಸದೆ
ಶ್ವಾಸ ಮರಳಿತೆ ನಿನಗೆ ಯೋಗಾ
ಭ್ಯಾಸಿಯಹೆಯೋ ಭೀಮ ಸೈರಣೆ
ಲೇಸು ಮೆಚ್ಚಿದೆನೆನುತ ನೃಪನೆರಗಿದನು ಪವನಜನ (ಗದಾ ಪರ್ವ, ೭ ಸಂಧಿ, ೫೦ ಪದ್ಯ)

ತಾತ್ಪರ್ಯ:
ಪಾಂಡವರು ಧರ್ಮಮಾಗರ್ಕ್ಕೆ ತಪ್ಪುವುದಿಲ್ಲವೆಂಬ ಆಶೆಯಿಂದ ನಿನ್ನ ಮಗನು ನನ್ನ ತೊಡೆಗಳನ್ನು ರಕ್ಷಿಸಿಕೊಳ್ಳದೆ ಭೀಮನನ್ನಿದಿರಿಸಿದನು. ಭೀಮ ನೀನು ಯೋಗಾಭ್ಯಾಸಿಯೇ ಸರಿ. ಹೋದ ಉಸಿರನ್ನು ಹಿಂದಕ್ಕೆ ತಂದುಕೊಂಡೆ ಎಂದು ಕೌರವನು ಭೀಮನ ಮೇಲೆರಗಿದನು.

ಅರ್ಥ:
ಭಾಷೆ: ನುಡಿ; ಸುತ: ಮಗ; ಆಸೆ: ಬಯಕೆ, ಅಪೇಕ್ಷೆ; ನಿನ್ನಾತ: ನಿನ್ನ ಮಗ; ಮೈಮರೆ: ಎಚ್ಚರತಪ್ಪು; ಓಸರಿಸು: ಹಿಂಜರಿ; ಇದಿರು: ಎದುರು; ಊರು: ಜಂಘೆ; ದ್ವಯ: ಎರಡು; ವಂಚಿಸು: ವಂಚನೆಗೊಳಿಸು, ಮೋಸಮಾಡು; ಶ್ವಾಸ: ಉಸಿರು; ಮರಳು: ಹಿಂದಿರುಗು; ಯೋಗ: ಹೊಂದಿಸುವಿಕೆ; ಅಭ್ಯಾಸ: ರೂಢಿ, ವ್ಯಾಸಂಗ; ಸೈರಣೆ: ತಾಳ್ಮೆ, ಸಹನೆ; ಲೇಸು: ಒಳಿತು; ಮೆಚ್ಚು: ಒಲುಮೆ, ಪ್ರೀತಿ; ನೃಪ: ರಾಜ; ಎರಗು: ಬಾಗು; ಪವನಜ: ಭೀಮ;

ಪದವಿಂಗಡಣೆ:
ಭಾಷೆಗಳ್+ಉಪರು +ಪಾಂಡುಸುತರೆಂಬ್
ಆಸೆಯಲಿ +ನಿನ್ನಾತ +ಮೈಮರೆದ್
ಓಸರಿಸದ್+ಇದಿರಾದನ್+ಉರು+ದ್ವಯವ +ವಂಚಿಸದೆ
ಶ್ವಾಸ +ಮರಳಿತೆ +ನಿನಗೆ +ಯೋಗಾ
ಭ್ಯಾಸಿ+ಅಹೆಯೋ +ಭೀಮ +ಸೈರಣೆ
ಲೇಸು +ಮೆಚ್ಚಿದೆನ್+ಎನುತ +ನೃಪನ್+ಎರಗಿದನು +ಪವನಜನ

ಅಚ್ಚರಿ:
(೧) ಪಾಂಡವರ ಬಗ್ಗೆ ಕೌರವನಲ್ಲಿದ್ದ ಧೋರಣೆ – ಭಾಷೆಗಳುಪರು ಪಾಂಡುಸುತರೆಂಬಾಸೆಯಲಿ

ಪದ್ಯ ೩೭: ದುರ್ಯೋಧನನು ಅಶ್ವತ್ಥಾಮನಿಗೆ ಏನೆಂದು ಉತ್ತರಿಸಿದ?

ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯೇಸ ಪತಿಕರಿಸಿದೆನು ಕರ್ಣನನಂದು ನೀನರಿಯ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ (ಗದಾ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಅಶ್ವತ್ಥಾಮನಿಗೆ ಉತ್ತರಿಸುತ್ತಾ, ಮೊದಲು ಭೀಷ್ಮನಿಗೆ ಸೇನಾಧಿಪತ್ಯವನ್ನು ಕೊಟ್ಟು ಸೇಸೆಯನ್ನಿಟ್ಟೆ, ನಿಮ್ಮ ತಂದೆಯು ಮಾಡಿದ ಮಹಾ ಪ್ರತಿಜ್ಞೆಯು ವ್ಯರ್ಥವಾಯಿತು. ಕರ್ಣನನ್ನು ಹೇಗೆ ಮನ್ನಿಸಿ ಸೇನಾಧಿಪತ್ಯವನ್ನು ಕೊಟ್ಟೆನೆಂಬುದು ನೀನು ತಿಳಿದಿರುವೆ. ಶಲ್ಯನೇನು ಜಾರಿಕೊಂಡು ಹೋದನೇ, ಇವೆಲ್ಲದರ ನಂತರ ಹೀಗಾಗಿದೆ, ದೈವದ ಕೃಪೆ ಜಾರಿಹೋದರೆ ನೀವೇನು ಮಾಡೀರಿ ಎಂದನು.

ಅರ್ಥ:
ಸೇಸೆ: ಮಂತ್ರಾಕ್ಷತೆ; ಅಗ್ಗ: ಶ್ರೇಷ್ಠ; ಭಾಷೆ: ಮಾತು; ಅಯ್ಯ: ತಂದೆ; ಗತ: ಹಿಂದೆ ಆದುದು, ಹೋದ; ಪತಿಕರಿಸು: ದಯೆತೋರು, ಅನುಗ್ರಹಿಸು; ಅರಿ: ತಿಳಿ; ಓಸರಿಸು: ಓರೆಮಾಡು, ಹಿಂಜರಿ; ಮಾದ್ರಪತಿ: ಶಲ್ಯ; ಬಳಿಕ: ನಂತರ; ಈಸು: ಇಷ್ಟು; ಬಂದು: ಆಗಮಿಸು; ದೈವ: ಭಗವಂತ; ಒಲವು: ಪ್ರೀತಿ; ಪೈಸರ: ಜಾರುವಿಕೆ, ಹಿಂದಕೆ ಸರಿ; ಭೂಪ: ರಾಜ;

ಪದವಿಂಗಡಣೆ:
ಸೇಸೆ+ತಳಿದೆನು +ಭೀಷ್ಮಗ್+ಅಗ್ಗದ
ಭಾಷೆ +ನಿಮ್ಮಯ್ಯನಲಿ +ಗತವಾಯ್ತ್
ಏಸ +ಪತಿಕರಿಸಿದೆನು+ ಕರ್ಣನನ್+ಅಂದು +ನೀನರಿಯ
ಓಸರಿಸಿದನೆ+ ಮಾದ್ರಪತಿ+ ಬಳಿಕ್
ಈಸು +ಬಂದುದು +ದೈವದ್+ಒಲಹಿನ
ಪೈಸರಕೆ+ ನೀವೇನ +ಮಾಡುವಿರೆಂದನಾ +ಭೂಪ

ಅಚ್ಚರಿ:
(೧) ದೈವದ ಕೃಪೆಯ ಮಹತ್ವ: ದೈವದೊಲಹಿನ ಪೈಸರಕೆ ನೀವೇನ ಮಾಡುವಿರೆಂದನಾ

ಪದ್ಯ ೨೯: ಕೃಷ್ಣನಲ್ಲಿ ಧರ್ಮಜನು ಏನನ್ನು ಕೇಳಿದನು?

ದೇವ ಚಿತ್ತೈಸಿದರೆ ಬೊಪ್ಪನ
ಭಾವನನು ಸೇನಾಧಿಪತ್ಯದ
ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ
ಆವನಂಘೈಸುವನೊ ಪಾರ್ಥನೊ
ಪಾವಮಾನಿಯೊ ನಕುಲನೋ ಸಹ
ದೇವನೋ ತಾನೋ ನಿದಾನಿಸಲರಿಯೆ ನಾನೆಂದ (ಶಲ್ಯ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧರ್ಮಜನು, ದೇವಾ ಕೇಳಿದಿರಾ? ನಮ್ಮ ತಂದೆಯಾದ ಪಾಂಡು ಮಹಾರಾಜನ ಭಾವನಿಗೆ ಸೇನಾಧಿಪತ್ಯವನ್ನು ದುರ್ಯೋಧನನು ಕೊಟ್ಟಿದ್ದಾನೆ. ಅವನೊಡನೆ ಯುದ್ಧಮಾಡುವವರಾರು? ಅರ್ಜುನನೋ, ಭೀಮನೋ, ನಕುಲನೋ, ಸಹದೇವನೋ, ನಾನೋ, ನನಗೆ ತಿಳಿಯುತ್ತಿಲ್ಲ ಎಂದು ಕೃಷ್ಣನಲ್ಲಿ ದುರ್ಯೋಧನನು ತಿಳಿಸಿದನು.

ಅರ್ಥ:
ದೇವ: ಭಗವಂತ; ಚಿತ್ತೈಸು: ಗಮನವಿಟ್ಟು ಕೇಳು; ಬೊಪ್ಪ: ತಂದೆ; ಭಾವ: ತಂಗಿಯ ಗಂಡ; ಸೇನಾಧಿಪ: ಸೈನ್ಯದ ಒಡೆಯ; ಓವು: ರಕ್ಷಿಸು; ಭಾಷೆ: ನುಡಿ; ಅಂಗೈಸು: ಅಂಗವಿಸು, ಒಪ್ಪು; ಪಾವಮಾನ: ಭೀಮ; ನಿದಾನ: ಸಾವಕಾಶ, ತಡ; ಅರಿ: ತಿಳಿ;

ಪದವಿಂಗಡಣೆ:
ದೇವ +ಚಿತ್ತೈಸಿದರೆ+ ಬೊಪ್ಪನ
ಭಾವನನು +ಸೇನಾಧಿಪತ್ಯದಲ್
ಓವಿದರಲೇ +ಶಲ್ಯ +ಮಾಡಿದ +ಭಾಷೆ+ಅವರೊಡನೆ
ಆವನ್+ಅಂಘೈಸುವನೊ+ ಪಾರ್ಥನೊ
ಪಾವಮಾನಿಯೊ+ ನಕುಲನೋ +ಸಹ
ದೇವನೋ +ತಾನೋ +ನಿದಾನಿಸಲ್+ಅರಿಯೆ +ನಾನೆಂದ

ಅಚ್ಚರಿ:
(೧) ಶಲ್ಯನನ್ನು ಬೊಪ್ಪನ ಭಾವ ಎಂದು ಕರೆದಿರುವುದು

ಪದ್ಯ ೧೧: ದುರ್ಯೋಧನನನ್ನು ಹೇಗೆ ಹುರಿದುಂಬಿಸಿದರು?

ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟೆಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಮ್ದರು ಜರೆದು ಕುರುಪತಿಯ (ಶಲ್ಯ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಪ ಅಶ್ವತ್ಥಾಮರು, ಅರಸ, ಎಚ್ಚೆತ್ತುಕೋ, ದಾಯಾದಿಗಳಿಗೆ ನೆಲವನ್ನಾಕ್ರಮಿಸಲು ದಾರಿಯಾಯಿತು. ರಾಜ್ಯವು ಅವರಿಗೆ ಸೇರುವುದು ಖಂಡಿತ. ಭೀಮನು ತನ್ನ ಪ್ರತಿಜ್ಞೆಯನ್ನು ಪೂರೈಸಿಕೊಂಡನು. ಏಳು ನಿನ್ನ ತಮ್ಮಂದಿರನ್ನು ಭೀಮನ ಹೊಟ್ಟೆಯಿಂದಲೂ, ಕರ್ಣನನ್ನು ಅರ್ಜುನನ ಬಾಯಿಂದಲೂ ಹೊರಕ್ಕೆ ತೆಗೆ ಎಂದು ಕೌರವನನ್ನು ಹುರಿದುಂಬಿಸಿದರು.

ಅರ್ಥ:
ರಾಯ: ರಾಜ; ಹದುಳಿಸು: ಸಮಾಧಾನ ಗೊಳ್ಳು; ಅಕಟಾ: ಅಯ್ಯೋ; ದಾಯಿಗರಿ: ದಾಯಾದಿ; ಎಡೆ: ಅವಕಾಶ; ನಿರ್ದಾಯದ: ಅಖಂಡ; ನೆಲ: ಭೂಮಿ; ಹೋಯ್ತು: ಕಳಚು; ಭಾಷೆ: ನುಡಿ; ಸಂದು: ಅವಕಾಶ; ವಾಯುಜ: ಭೀಮ; ಜಠರ: ಹೊಟ್ಟೆ; ತೆಗೆ: ಹೊರತರು; ಜೀಯ: ಒಡೆಯ; ಅನುಜ: ತಮ್ಮ; ಜರೆ: ತೆಗಳು; ಉಗಿ: ಹೊರಹಾಕು; ಸೂತ: ಸಾರಥಿ;

ಪದವಿಂಗಡಣೆ:
ರಾಯ +ಹದುಳಿಸು +ಹದುಳಿಸ್+ಅಕಟಾ
ದಾಯಿಗರಿಗ್+ಎಡೆಗೊಟ್ಟೆಲಾ +ನಿ
ರ್ದಾಯದಲಿ +ನೆಲ +ಹೋಯ್ತು +ಭೀಮನ +ಭಾಷೆ +ಸಂದುದಲಾ
ವಾಯುಜನ +ಜಠರದಲಿ+ ತೆಗೆಯಾ
ಜೀಯ +ನಿನ್ನನುಜರನು+ ಪಾರ್ಥನ
ಬಾಯಲ್+ಉಗಿ +ಸೂತಜನನ್+ಎಂದರು+ ಜರೆದು+ ಕುರುಪತಿಯ

ಅಚ್ಚರಿ:
(೧) ಭೀಮ, ವಾಯುಜ – ಭೀಮನನ್ನು ಕರೆದ ಪರಿ
(೨) ರಾಯ, ಕುರುಪತಿ – ಪದ್ಯದ ಮೊದಲ ಮತ್ತು ಕೊನೆ ಪದ, ದುರ್ಯೋಧನನನ್ನು ಕರೆಯುವ ಪರಿ
(೩) ವಾಯುಜ, ನಿನ್ನನುಜ, ಸೂತಜ – ಪದಗಳ ಬಳಕೆ

ಪದ್ಯ ೬: ಕರ್ಣನು ಅರ್ಜುನನನ್ನು ಹೇಗೆ ಸಾಯಿಸುತ್ತೇನೆಂದನು?

ಇನ್ನು ನೋಡಾದಡೆ ಕಿರೀಟಿಯ
ಬೆನ್ನಲುಗಿವೆನು ಕರುಳನರ್ಜುನ
ಗನ್ನಗತಕದಲರಿಯ ಹೊಯ್ದನು ಹಾಯ್ಕು ವೀಳೆಯವ
ನಿನ್ನ ಕಂಗಳ ಬರನ ಕಳೆವೆನು
ಬೆನ್ನಲಿರು ನೃಪ ನೋಡು ಚಿತ್ರವ
ನಿನ್ನು ತೋರುವೆನೆನುತ ಭಾಷೆಯ ಕೊಟ್ಟನಾ ಕರ್ಣ (ದ್ರೋಣ ಪರ್ವ, ೧೫ ಸಂಧಿ, ೬ ಪದ್ಯ)

ತಾತ್ಪರ್ಯ:
ಕರ್ಣನು ಮಾತನಾಡುತ್ತಾ, ಎಲೈ ರಾಜನೇ, ಇನ್ನು ನೋಡುತ್ತಿರು, ಅರ್ಜುನನ ಕರುಳುಗಳನ್ನು ಬೆನ್ನಲ್ಲಿ ತೆಗೆಯುತ್ತೇನೆ, ಅವನು ಮೋಸದಿಂದ ಸೈಂಧವನನ್ನು ಕೊಂದನು. ನನಗೆ ವೀಳೆಯವನ್ನು ಕೊಡು. ಹಿಂದೆ ನಿಂತು ನೋಡುತ್ತಿರು, ನಿನ್ನ ಕಣ್ಣುಗಳ ಬರವನ್ನು ಕಳೆಯುತ್ತೇನೆ, ಇನ್ನು ನಡೆಯುವ ಆಶ್ಚರ್ಯವನ್ನು ನೋಡುತ್ತಿರು ಎಂದು ಹೇಳಿದನು.

ಅರ್ಥ:
ನೋಡು: ವೀಕ್ಷಿಸು; ಕಿರೀಟಿ: ಅರ್ಜುನ; ಬೆನ್ನಲು: ಬೆನ್ನ ಎಲುಬು; ಕರುಳ: ಪಚನಾಂಗ; ಹೊಯ್ದು: ಹೊಡೆ; ವೀಳೆಯವ: ತಾಂಬೂಲ; ಕಂಗಳು: ಕಣ್ಣು; ಬರ: ಕ್ಷಾಮ; ಕಳೆ: ನೀಗಿಸು; ನೃಪ: ರಾಜ; ನೋಡು: ವೀಕ್ಷಿಸು; ಚಿತ್ರ: ಬರೆದ ಆಕೃತಿ; ತೋರು: ಗೋಚರಿಸು; ಭಾಷೆ: ನುಡಿ; ಗನ್ನಗತಕ: ಮೋಸ;

ಪದವಿಂಗಡಣೆ:
ಇನ್ನು +ನೋಡ್+ಆದಡೆ +ಕಿರೀಟಿಯ
ಬೆನ್ನಲುಗಿವೆನು +ಕರುಳನ್+ಅರ್ಜುನ
ಗನ್ನಗತಕದಲ್+ ಅರಿಯ+ ಹೊಯ್ದನು +ಹಾಯ್ಕು +ವೀಳೆಯವ
ನಿನ್ನ +ಕಂಗಳ +ಬರನ + ಕಳೆವೆನು
ಬೆನ್ನಲಿರು +ನೃಪ+ ನೋಡು +ಚಿತ್ರವನ್
ಇನ್ನು +ತೋರುವೆನ್+ಎನುತ +ಭಾಷೆಯ +ಕೊಟ್ಟನಾ +ಕರ್ಣ

ಅಚ್ಚರಿ:
(೧) ಅರ್ಜುನನ ಕೊಲ್ಲುವ ಪರಿ – ಕರುಳನರ್ಜುನಗನ್ನಗತಕದಲ ಲರಿಯ ಹೊಯ್ದನು
(೨) ದುರ್ಯೋಧನನಿಗೆ ಧೈರ್ಯ ತುಂಬುವ ಪರಿ – ನಿನ್ನ ಕಂಗಳ ಬರನ ಕಳೆವೆನು ಬೆನ್ನಲಿರು ನೃಪ ನೋಡು