ಪದ್ಯ ೩೭: ದುರ್ಯೋಧನನು ಅಶ್ವತ್ಥಾಮನಿಗೆ ಏನೆಂದು ಉತ್ತರಿಸಿದ?

ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯೇಸ ಪತಿಕರಿಸಿದೆನು ಕರ್ಣನನಂದು ನೀನರಿಯ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ (ಗದಾ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಅಶ್ವತ್ಥಾಮನಿಗೆ ಉತ್ತರಿಸುತ್ತಾ, ಮೊದಲು ಭೀಷ್ಮನಿಗೆ ಸೇನಾಧಿಪತ್ಯವನ್ನು ಕೊಟ್ಟು ಸೇಸೆಯನ್ನಿಟ್ಟೆ, ನಿಮ್ಮ ತಂದೆಯು ಮಾಡಿದ ಮಹಾ ಪ್ರತಿಜ್ಞೆಯು ವ್ಯರ್ಥವಾಯಿತು. ಕರ್ಣನನ್ನು ಹೇಗೆ ಮನ್ನಿಸಿ ಸೇನಾಧಿಪತ್ಯವನ್ನು ಕೊಟ್ಟೆನೆಂಬುದು ನೀನು ತಿಳಿದಿರುವೆ. ಶಲ್ಯನೇನು ಜಾರಿಕೊಂಡು ಹೋದನೇ, ಇವೆಲ್ಲದರ ನಂತರ ಹೀಗಾಗಿದೆ, ದೈವದ ಕೃಪೆ ಜಾರಿಹೋದರೆ ನೀವೇನು ಮಾಡೀರಿ ಎಂದನು.

ಅರ್ಥ:
ಸೇಸೆ: ಮಂತ್ರಾಕ್ಷತೆ; ಅಗ್ಗ: ಶ್ರೇಷ್ಠ; ಭಾಷೆ: ಮಾತು; ಅಯ್ಯ: ತಂದೆ; ಗತ: ಹಿಂದೆ ಆದುದು, ಹೋದ; ಪತಿಕರಿಸು: ದಯೆತೋರು, ಅನುಗ್ರಹಿಸು; ಅರಿ: ತಿಳಿ; ಓಸರಿಸು: ಓರೆಮಾಡು, ಹಿಂಜರಿ; ಮಾದ್ರಪತಿ: ಶಲ್ಯ; ಬಳಿಕ: ನಂತರ; ಈಸು: ಇಷ್ಟು; ಬಂದು: ಆಗಮಿಸು; ದೈವ: ಭಗವಂತ; ಒಲವು: ಪ್ರೀತಿ; ಪೈಸರ: ಜಾರುವಿಕೆ, ಹಿಂದಕೆ ಸರಿ; ಭೂಪ: ರಾಜ;

ಪದವಿಂಗಡಣೆ:
ಸೇಸೆ+ತಳಿದೆನು +ಭೀಷ್ಮಗ್+ಅಗ್ಗದ
ಭಾಷೆ +ನಿಮ್ಮಯ್ಯನಲಿ +ಗತವಾಯ್ತ್
ಏಸ +ಪತಿಕರಿಸಿದೆನು+ ಕರ್ಣನನ್+ಅಂದು +ನೀನರಿಯ
ಓಸರಿಸಿದನೆ+ ಮಾದ್ರಪತಿ+ ಬಳಿಕ್
ಈಸು +ಬಂದುದು +ದೈವದ್+ಒಲಹಿನ
ಪೈಸರಕೆ+ ನೀವೇನ +ಮಾಡುವಿರೆಂದನಾ +ಭೂಪ

ಅಚ್ಚರಿ:
(೧) ದೈವದ ಕೃಪೆಯ ಮಹತ್ವ: ದೈವದೊಲಹಿನ ಪೈಸರಕೆ ನೀವೇನ ಮಾಡುವಿರೆಂದನಾ

ಪದ್ಯ ೭೨: ಸಂಜಯನು ರಾಜನಿಗೆ ಏನು ಹೇಳಿದನು?

ತೀರಿತೇ ಮಗನುಬ್ಬಟೆಯ ಜ
ಜ್ಝಾರತನವಾಚಾರ್ಯನಳಿದನ
ದಾರು ನಮಗಾಪ್ತಿಗರು ದೊರೆಯಿನ್ನಾರು ಸಂಗರಕೆ
ಆರು ನಿಮಗಿದ್ದೇಗುವರು ರಣ
ವೀರರಗ್ಗದ ದೈವವೇ ಮನ
ವಾರೆ ಮೆಚ್ಚಿಹುದವರನಿನ್ನೇನರಸ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೭೨ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಿನ್ನ ಮಗ ಸುಯೋಧನನ ಶೌರ್ಯ ಮುಗಿಯಿತೇ? ಗರುಡಿಯಾಚಾರ್ಯನು ಹೋದ ಮೇಲೆ ನಮಗೆ ಆಪ್ತರು ಇನ್ನಾರು? ಯುದ್ಧಕ್ಕೆ ಸೇನಾಪತಿಯಾರು? ಯಾರು ಇದ್ದರೂ ನಮಗೆ ಏನು ಸಹಾಯ ಮಾಡಿಯಾರು? ಪರಾಕ್ರಮಿಗಳ ಅಧಿದೇವತೆಯೇ ಪಾಂಡವರಿಗೆ ಮನಸಾರೆ ಒಲಿದಿದೆ, ಇನ್ನೇನು ಉಳಿಯಿತು ಎಂದು ಹೇಳಿದನು.

ಅರ್ಥ:
ತೀರು: ಕಳೆದು; ಮಗ: ಸುತ; ಉಬ್ಬಟೆ: ಅತಿಶಯ, ಸಹಸ; ಜಜ್ಝಾರ: ಪರಾಕ್ರಮಿ, ಶೂರ; ಆಚಾರ್ಯ: ಗುರು; ಅಳಿ: ನಾಶ; ಆಪ್ತ: ಹತ್ತಿರದವ; ದೊರೆ: ರಾಜ; ಸಂಗರ: ಯುದ್ಧ; ಏಗು: ಸಹಿಸು, ತಾಳು; ರಣ: ಯುದ್ಧ; ವೀರ: ಶೂರ; ಅಗ್ಗ: ಶ್ರೇಷ್ಠ; ದೈವ: ಭಗವಂತ; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತೀರಿತೇ +ಮಗನ್+ಉಬ್ಬಟೆಯ +ಜ
ಜ್ಝಾರತನವ್+ಆಚಾರ್ಯನ್+ಅಳಿದನ್
ಅದಾರು +ನಮಗ್+ಆಪ್ತಿಗರು +ದೊರೆ+ಇನ್ನಾರು +ಸಂಗರಕೆ
ಆರು+ ನಿಮಗಿದ್+ಏಗುವರು +ರಣ
ವೀರರ್+ಅಗ್ಗದ +ದೈವವೇ +ಮನ
ವಾರೆ +ಮೆಚ್ಚಿಹುದ್+ಅವರನಿನ್ನೇನ್+ಅರಸ +ಕೇಳೆಂದ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ತೀರಿತೇ ಮಗನುಬ್ಬಟೆಯ ಜಜ್ಝಾರತನ
(೨) ದೊರೆ, ಅರಸ – ಸಮಾನಾರ್ಥಕ ಪದ

ಪದ್ಯ ೨೬: ಕಾಲನ ಪ್ರಭಾವವು ಎಂತಹುದು?

ಹರನೊಡನೆ ಹೊಯ್ದಾಡಿದಗ್ಗದ
ನರನು ತಂದೆ ಸಮಸ್ತ ಭುವನೇ
ಶ್ವರನಲಾ ಮುರವೈರಿ ಮಾವನು ನಿನ್ನ ತನಯನಿಗೆ
ಧುರದೊಳೀ ಹದನಾಯ್ತು ಮಿಕ್ಕಿನ
ನೊರಜುಗಳ ಪಾಡೇನು ಕಾಲನು
ಹರಿ ಹರ ಬ್ರಹ್ಮಾದಿಗಳ ಕೈಕೊಂಬನಲ್ಲೆಂದ (ದ್ರೋಣ ಪರ್ವ, ೭ ಸಂಧಿ, ೨೬ ಪದ್ಯ
)

ತಾತ್ಪರ್ಯ:
ಶಿವನೊಡನೆ ಹೋರಾಡಿದ ಅರ್ಜುನನೇ ಇವನ ತಂದೆ, ಸಮಸ್ತ ಭುವನಗಳ ಒಡೆಯನಾದ ಕೃಷ್ಣನೇ ಇವನ ಸೋದರ ಮಾವ. ಅಂತಹ ನಿನ್ನ ಮಗನಿಗೇ ಯುದ್ಧದಲ್ಲಿ ಹೀಗಾಯಿತೆಂದರೆ ಉಳಿದ ನೊರಜುಗಳ ಪಾಡೇನು, ಕಾಲನು ಹರಿ ಹರ ಬ್ರಹ್ಮಾದಿಗಳನ್ನು ಲೆಕ್ಕಿಸನು ಎಂದು ವ್ಯಾಸರು ತಿಳಿಸಿದರು.

ಅರ್ಥ:
ಹರ: ಈಶ್ವರ; ಹೊಯ್ದು: ಹೋರಾಡು; ಅಗ್ಗ: ಶ್ರೇಷ್ಠ; ನರ: ಮನುಷ್ಯ, ಅರ್ಜುನ; ತಂದೆ: ಪಿತ; ಸಮಸ್ತ: ಎಲ್ಲಾ; ಭುವನ: ಭೂಮಿ; ಈಶ್ವರ: ಒಡೆಯ; ಮುರವೈರಿ: ಕೃಷ್ಣ; ಮಾವ: ತಾಯಿಯ ತಮ್ಮ; ತನಯ: ಮಗ; ಧುರ: ಯುದ್ಧ; ಹದ: ಸ್ಥಿತಿ; ಮಿಕ್ಕ: ಉಳಿದ; ನೊರಜು: ಕೀಟ; ಪಾಡು: ಸ್ಥಿತಿ; ಕಾಲ: ಸಮಯ, ವಿಧಿ; ಹರಿ: ವಿಷ್ಣು, ಹರ: ಈಶ್ವರ; ಬ್ರಹ್ಮ: ಅಜ; ಆದಿ: ಮುಂತಾದ; ಕೈಕೊಂಬ: ಸ್ವೀಕರಿಸು; ನೋಡು: ವೀಕ್ಷಿಸು;

ಪದವಿಂಗಡಣೆ:
ಹರನೊಡನೆ +ಹೊಯ್ದಾಡಿದ್+ಅಗ್ಗದ
ನರನು +ತಂದೆ +ಸಮಸ್ತ +ಭುವನೇ
ಶ್ವರನಲಾ +ಮುರವೈರಿ +ಮಾವನು +ನಿನ್ನ +ತನಯನಿಗೆ
ಧುರದೊಳ್+ಈ+ ಹದನಾಯ್ತು +ಮಿಕ್ಕಿನ
ನೊರಜುಗಳ +ಪಾಡೇನು +ಕಾಲನು
ಹರಿ +ಹರ +ಬ್ರಹ್ಮಾದಿಗಳ +ಕೈಕೊಂಬನಲ್ಲೆಂದ

ಅಚ್ಚರಿ:
(೧) ಅರ್ಜುನನನ್ನು ವಿವರಿಸುವ ಪರಿ – ಹರನೊಡನೆ ಹೊಯ್ದಾಡಿದಗ್ಗದ ನರನು ತಂದೆ
(೨) ಕಾಲನ ಪ್ರಭಾವ – ಕಾಲನು ಹರಿ ಹರ ಬ್ರಹ್ಮಾದಿಗಳ ಕೈಕೊಂಬನಲ್ಲೆಂದ

ಪದ್ಯ ೨೩: ಕೃಷ್ಣನು ಯಾರ ಮಕ್ಕಳನ್ನು ಅರ್ಜುನನಿಗೆ ತೋರಿಸಿದನು?

ವೀರರಭಿಮನ್ಯುವಿನವೊಲು ರಣ
ಧೀರರವರನು ನೋಡು ಕರ್ಣಕು
ಮಾರಕರು ವೃಷಸೇನನಗ್ಗದ ಚಿತ್ರಸೇನಕರು
ಚಾರುಲಕ್ಷಣರವರು ನೂರು ಕು
ಮಾರರದೆ ದುರ್ಯೋಧನಾತ್ಮಜ
ರಾರುವನು ಕೈಕೊಳ್ಳರವದಿರು ಸುಬಲ ನಂದನರು (ಭೀಷ್ಮ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನ ಅಭಿಮನ್ಯುವಿನಂತೆ ವೀರರಾದ ಕರ್ಣನ ಮಕ್ಕಳು ವೃಷಸೇನ, ಚಿತ್ರಸೇನರನ್ನು ನೋಡು, ಶುಭಲಕ್ಷಣಯುಕ್ತರಾದ ನೂರು ಜನ ಕೌರವನ ಮಕ್ಕಳನ್ನು ನೋಡು, ಅವರು ಯಾರಿಗೂ ಹೆದರುವುದಿಲ್ಲ, ಮಹಾಪರಾಕ್ರಮಿಗಳು, ಶಕುನಿಯ ಪುತ್ರರನ್ನು ಸಹ ನೀನು ನೋಡಬಹುದು.

ಅರ್ಥ:
ವೀರ: ಶೂರ; ರಣ: ಯುದ್ಧ; ಧೀರ: ಪರಾಕ್ರಮಿ; ನೋಡು: ವೀಕ್ಷಿಸು; ಕುಮಾರ: ಮಕ್ಕಳು; ಚಾರು: ಸುಂದರ; ಲಕ್ಷಣ: ಗುರುತು, ಚಿಹ್ನೆ; ನೂರು: ಶತ; ಆತ್ಮಜ: ಮಗ; ಆರು: ಘರ್ಷಿಸು; ಕೈಕೊಳ್ಳು: ಸ್ವೀಕರಿಸು; ಸುಬಲ: ಶಕುನಿ; ನಂದನ: ಮಕ್ಕಳು; ಅಗ್ಗ: ಶ್ರೇಷ್ಠ;

ಪದವಿಂಗಡಣೆ:
ವೀರರ್+ಅಭಿಮನ್ಯುವಿನವೊಲು+ ರಣ
ಧೀರರ್+ಅವರನು +ನೋಡು +ಕರ್ಣ+ಕು
ಮಾರಕರು+ ವೃಷಸೇನನ್+ಅಗ್ಗದ +ಚಿತ್ರಸೇನಕರು
ಚಾರುಲಕ್ಷಣರ್+ಅವರು+ ನೂರು+ ಕು
ಮಾರರದೆ+ ದುರ್ಯೋಧನ್+ಆತ್ಮಜರ್
ಆರುವನು +ಕೈಕೊಳ್ಳರ್+ಅವದಿರು +ಸುಬಲ+ ನಂದನರು

ಅಚ್ಚರಿ:
(೧) ಆತ್ಮಜ, ನಂದನ, ಕುಮಾರ – ಸಮನಾರ್ಥಕ ಪದ