ಪದ್ಯ ೩೯: ಶಲ್ಯನ ರಥಕ್ಕೆ ಅಡ್ಡವಾಗಿ ಯಾವ ರಥ ನಿಂತಿತು?

ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ
ರಾಯದಳ ದೆಸೆಗೆಟ್ಟು ದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ (ಶಲ್ಯ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಗಾಯಗೊಂಡನು, ಗಾಯಗಳು ಅತಿಶಯವಾಗಲು ನಕುಲ ಸಹದೇವರ ಶೌರ್ಯ ಮುರಿದು ಓಡಿಹೋದರು. ಪೆಟ್ಟುತಿಂದ ಧರ್ಮಜನು ಕಳವಳಿಸಿದನು. ಸೈನ್ಯ ದಿಕ್ಕುಗಾಣದೆ ಎಲ್ಲ ಕಡೆ ಚದುರಿ ಹೋಯಿತು. ಒಟ್ಟಾಗಿ ಬಂದ ವೀರರು ಮಡಿದರು. ಶ್ರೀಕೃಷ್ಣನು ಇದನ್ನು ನೋಡಿ ಅರ್ಜುನನ ರಥವನ್ನು ಶಲ್ಯನಿಗೆ ಅಡ್ಡವಾಗಿ ತಂದನು.

ಅರ್ಥ:
ಘಾಯ: ಪೆಟ್ಟು; ಸುತ: ಮಗ; ಪೂರಾಯ: ಪರಿಪೂರ್ಣ; ಓಡು: ಧಾವಿಸು; ಮಾದ್ರೇಯ: ಮಾದ್ರಿಯ ಮಕ್ಕಳು; ಉಬ್ಬಟೆ: ಅತಿಶಯ; ಮುರಿ: ಸೀಳು; ಬೆಬ್ಬಳಿ: ಕಳವಳ; ಅವನೀಶ: ರಾಜ; ರಾಯ: ರಾಜ; ದಳ: ಸೈನ್ಯ; ದೆಸೆ: ದಿಕ್ಕು; ದೆಸೆಗೆಟ್ಟು: ದಿಕ್ಕು ಕಾಣದೆ; ಒಗ್ಗು: ಗುಂಪು, ಸಮೂಹ; ನಾಯಕ: ಒಡೆಯ; ನುಗ್ಗು: ತಳ್ಳು; ಯಾದವರಾಯ: ಕೃಷ್ಣ; ಕಂಡು: ನೋಡು; ರಥ: ಬಂಡಿ; ಅಡಹಾಯ್ಸಿ: ಮಧ್ಯ ಕರೆತಂದು;

ಪದವಿಂಗಡಣೆ:
ಘಾಯವಡೆದನು +ದ್ರುಪದ+ಸುತ +ಪೂ
ರಾಯದ್+ಏರಿನಲ್+ಓಡಿದರು +ಮಾ
ದ್ರೇಯರ್+ಉಬ್ಬಟೆ +ಮುರಿದು +ಬೆಬ್ಬಳೆವೋದನ್+ಅವನೀಶ
ರಾಯದಳ +ದೆಸೆಗೆಟ್ಟುದ್ + ಒಗ್ಗಿನ
ನಾಯಕರು +ನುಗ್ಗಾಯ್ತು+ ಯಾದವ
ರಾಯ +ಕಂಡನು+ ರಥವನ್+ಅಡಹಾಯ್ಸಿದನು +ಫಲುಗುಣನ

ಅಚ್ಚರಿ:
(೧) ಘಾಯ, ಪೂರಾಯ, ರಾಯ, ಯಾದವರಾಯ, ಮಾದ್ರೇಯ – ಪ್ರಾಸ ಪದಗಳು
(೨) ಕೃಷ್ಣನನ್ನು ಯಾದವರಾಯ; ನಕುಲ ಸಹದೇವರನ್ನು ಮಾದ್ರೇಯ ಎಂದು ಕರೆದಿರುವುದು

ಪದ್ಯ ೭೨: ಸಂಜಯನು ರಾಜನಿಗೆ ಏನು ಹೇಳಿದನು?

ತೀರಿತೇ ಮಗನುಬ್ಬಟೆಯ ಜ
ಜ್ಝಾರತನವಾಚಾರ್ಯನಳಿದನ
ದಾರು ನಮಗಾಪ್ತಿಗರು ದೊರೆಯಿನ್ನಾರು ಸಂಗರಕೆ
ಆರು ನಿಮಗಿದ್ದೇಗುವರು ರಣ
ವೀರರಗ್ಗದ ದೈವವೇ ಮನ
ವಾರೆ ಮೆಚ್ಚಿಹುದವರನಿನ್ನೇನರಸ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೭೨ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಿನ್ನ ಮಗ ಸುಯೋಧನನ ಶೌರ್ಯ ಮುಗಿಯಿತೇ? ಗರುಡಿಯಾಚಾರ್ಯನು ಹೋದ ಮೇಲೆ ನಮಗೆ ಆಪ್ತರು ಇನ್ನಾರು? ಯುದ್ಧಕ್ಕೆ ಸೇನಾಪತಿಯಾರು? ಯಾರು ಇದ್ದರೂ ನಮಗೆ ಏನು ಸಹಾಯ ಮಾಡಿಯಾರು? ಪರಾಕ್ರಮಿಗಳ ಅಧಿದೇವತೆಯೇ ಪಾಂಡವರಿಗೆ ಮನಸಾರೆ ಒಲಿದಿದೆ, ಇನ್ನೇನು ಉಳಿಯಿತು ಎಂದು ಹೇಳಿದನು.

ಅರ್ಥ:
ತೀರು: ಕಳೆದು; ಮಗ: ಸುತ; ಉಬ್ಬಟೆ: ಅತಿಶಯ, ಸಹಸ; ಜಜ್ಝಾರ: ಪರಾಕ್ರಮಿ, ಶೂರ; ಆಚಾರ್ಯ: ಗುರು; ಅಳಿ: ನಾಶ; ಆಪ್ತ: ಹತ್ತಿರದವ; ದೊರೆ: ರಾಜ; ಸಂಗರ: ಯುದ್ಧ; ಏಗು: ಸಹಿಸು, ತಾಳು; ರಣ: ಯುದ್ಧ; ವೀರ: ಶೂರ; ಅಗ್ಗ: ಶ್ರೇಷ್ಠ; ದೈವ: ಭಗವಂತ; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತೀರಿತೇ +ಮಗನ್+ಉಬ್ಬಟೆಯ +ಜ
ಜ್ಝಾರತನವ್+ಆಚಾರ್ಯನ್+ಅಳಿದನ್
ಅದಾರು +ನಮಗ್+ಆಪ್ತಿಗರು +ದೊರೆ+ಇನ್ನಾರು +ಸಂಗರಕೆ
ಆರು+ ನಿಮಗಿದ್+ಏಗುವರು +ರಣ
ವೀರರ್+ಅಗ್ಗದ +ದೈವವೇ +ಮನ
ವಾರೆ +ಮೆಚ್ಚಿಹುದ್+ಅವರನಿನ್ನೇನ್+ಅರಸ +ಕೇಳೆಂದ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ತೀರಿತೇ ಮಗನುಬ್ಬಟೆಯ ಜಜ್ಝಾರತನ
(೨) ದೊರೆ, ಅರಸ – ಸಮಾನಾರ್ಥಕ ಪದ

ಪದ್ಯ ೧೨: ಕೌರವರ ಧೈರ್ಯವೇಕೆ ಹಾರಿತು?

ಗರುಡನುಬ್ಬಟೆಗಹಿನಿಕರ ಜ
ಜ್ಝರಿತವಾದವೊಲಿವನ ಕಡು ನಿ
ಬ್ಬರದ ಧಾಳಿಗೆ ಧೈರ್ಯಗೆಟ್ಟುದು ಕೂಡೆ ಕುರುಸೇನೆ
ಹೊರಳಿಯೊಡೆದರು ಭಟರು ಸಿಡಿದರು
ಜರುಗಿದರು ಜವಗುಂದಿದರು ಮಡ
ಮುರಿದು ಬಿರುದರು ತಣಿದುದೈ ಪರಿಭವದ ಸೂರೆಯಲಿ (ದ್ರೋಣ ಪರ್ವ, ೧೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಗರುಡನ ದಾಳಿಗೆ ಹಾವುಗಳು ಜರ್ಝರಿತವಾದ ಹಾಗೆ, ಘಟೋತ್ಕಚನ ನಿಷ್ಠುರ ದಾಳಿಗೆ ಕುರುಸೈನ್ಯದ ಧೈರ್ಯ ಹಾರಿಹೋಯಿತು. ಸೈನಿಕರು ಕಂಡಕಂಡ ಕಡೆಗಳಿಗೋಡಿದರು. ಹೊಡೆತಗಳಿಗೆ ಸಿಡಿದರು. ಧೈರ್ಯಗುಂದಿದರು. ಬಿರುದುಳ್ಳ ಭಟರು ಸೋಲಿನ ಸೂರೆಯಲ್ಲಿ ತೃಪ್ತಿಹೊಂದಿದರು.

ಅರ್ಥ:
ಗರುಡ: ಖಗದ ಜಾತಿ; ಉಬ್ಬಟೆ: ಅತಿಶಯ; ಅಹಿ: ಹಾವು; ನಿಕರ: ಗುಂಪು; ಜರ್ಜ್ಝರಿತ: ಚೂರು ಚೂರಾಗು; ಕಡು: ಬಹಳ; ನಿಬ್ಬರ: ಅತಿಶಯ, ಹೆಚ್ಚಳ; ಧಾಳಿ: ಆಕ್ರಮಣ; ಧೈರ್ಯ: ಎದೆಗಾರಿಕೆ, ಕೆಚ್ಚು; ಹೊರಳು: ತಿರುವು, ಬಾಗು; ಒಡೆ: ಸೀಳು; ಭಟ: ಸೈನಿಕ; ಸಿಡಿ: ಸೀಳು; ಜರುಗು: ಪಕ್ಕಕ್ಕೆ ಸರಿ, ಜರಿ; ಜವ: ಯಮ; ಕುಂದು: ಕೊರತೆ, ನೂನ್ಯತೆ; ಮಡ: ಪಾದದ ಹಿಂಭಾಗ, ಹಿಮ್ಮಡಿ; ಮುರಿ: ಸೀಳು; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ತಣಿ: ತೃಪ್ತಿಹೊಂದು; ಪರಿಭವ: ಅಪಮಾನ, ಸೋಲು; ಸೂರೆ: ಕೊಳ್ಳೆ, ಲೂಟಿ;

ಪದವಿಂಗಡಣೆ:
ಗರುಡನ್+ಉಬ್ಬಟೆಗ್+ಅಹಿ+ನಿಕರ+ ಜ
ಜ್ಝರಿತವಾದವೊಲ್+ಇವನ +ಕಡು +ನಿ
ಬ್ಬರದ +ಧಾಳಿಗೆ +ಧೈರ್ಯ+ಕೆಟ್ಟುದು +ಕೂಡೆ +ಕುರುಸೇನೆ
ಹೊರಳಿ+ಒಡೆದರು +ಭಟರು +ಸಿಡಿದರು
ಜರುಗಿದರು +ಜವ+ಕುಂದಿದರು +ಮಡ
ಮುರಿದು +ಬಿರುದರು +ತಣಿದುದೈ +ಪರಿಭವದ +ಸೂರೆಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರುಡನುಬ್ಬಟೆಗಹಿನಿಕರ ಜಜ್ಝರಿತವಾದವೊಲಿ

ಪದ್ಯ ೪೨: ಶ್ರೀಕೃಷ್ಣನು ಯಾರನ್ನು ಯುದ್ಧಕ್ಕೆ ಬರಲು ಹೇಳಿದನು?

ಭಟರು ಬಳಲಿದರಿಂದು ರಣವು
ತ್ಕಟವು ಧೀವಶಿಗಳು ಮಹಾರಥ
ರಟಕಟಿಸುತಿದೆ ಮತ್ತೆ ನಾವಿದನೇನ ಹೇಳುವೆವು
ಕುಟಿಲ ಭಾರದ್ವಾಜನಿವನು
ಬ್ಬಟೆಗೆ ಮದ್ದರೆವೆನು ನಿಶಾಪರಿ
ಯಟನಪಟುಗಳು ಬರಲಿ ಕಾಳೆಗಕೆಂದನಸುರಾರಿ (ದ್ರೋಣ ಪರ್ವ, ೧೫ ಸಂಧಿ, ೪೨ ಪದ್ಯ)

ತಾತ್ಪರ್ಯ:
ನಮ್ಮ ಯೋಧರು ಬಳಲಿದ್ದಾರೆ, ಇಂದಿನ ಯುದ್ಧವು ಮಹೋಗ್ರವಾಗಿತ್ತು. ಈ ರಾತ್ರಿಯೂ ಭಯಂಕರ ಕದನ ನಡೆಯಬೇಕಾಗಿದೆ. ಮಹಾರಥರು ಆಯಾಸದಿಂದ ಹಿಂಜರಿಯುತ್ತಿದ್ದಾರೆ. ಇದಕ್ಕೆ ನಾವೇನು ಮಾಡಲು ಸಾಧ್ಯ? ಕುಟಿಲನಾದ ದ್ರೋಣನ ಸಾಮರ್ಥ್ಯಕ್ಕೆ ಮದ್ದನ್ನರೆಯುತ್ತೇನೆ. ದೈತ್ಯ ಬಲವು ಯುದ್ಧಕ್ಕಿಳಿಯಲಿ ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಭಟ: ಸೈನಿಕ; ಬಳಲು: ಆಯಾಸಗೊಳ್ಳು; ರಣ: ಯುದ್ಧಭೂಮಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಧೀವಶಿ: ಬುದ್ಧಿಗೆ ವಶನಾದವನು; ಮಹಾರಥ: ಪರಾಕ್ರಮಿ; ಅಟಕಟಿಸು: ಆಯಾಸಗೊಳ್ಳು; ಹೇಳು: ತಿಳಿಸು; ಕುಟಿಲ: ಮೋಸ; ಭಾರದ್ವಾಜ: ದ್ರೋಣ; ಉಬ್ಬಟೆ: ಅತಿಶಯ, ಹಿರಿಮೆ; ಮದ್ದು: ಔಷಧ; ಅರೆ: ಪುಡಿ ಮಾಡು; ನಿಶ: ರಾತ್ರಿ; ಪಟು: ಪರಾಕ್ರಮಿ; ನಿಶಾಪರಿಯಟ: ದೈತ್ಯ, ರಾತ್ರಿಯಲ್ಲಿ ಸಂಚರಿಸುವವ; ಬರಲಿ: ಆಗಮಿಸು; ಕಾಳೆಗ: ಯುದ್ಧ; ಅಸುರಾರಿ: ಅಸುರರ ವೈರಿ (ಕೃಷ್ಣ);

ಪದವಿಂಗಡಣೆ:
ಭಟರು+ ಬಳಲಿದರ್+ಇಂದು +ರಣವ್
ಉತ್ಕಟವು +ಧೀವಶಿಗಳು +ಮಹಾರಥರ್
ಅಟಕಟಿಸುತಿದೆ +ಮತ್ತೆ +ನಾವಿದನೇನ+ ಹೇಳುವೆವು
ಕುಟಿಲ +ಭಾರದ್ವಾಜನ್+ಇವನ್
ಉಬ್ಬಟೆಗೆ +ಮದ್ದ್+ಅರೆವೆನು+ ನಿಶಾಪರಿ
ಯಟನ+ಪಟುಗಳು +ಬರಲಿ +ಕಾಳೆಗಕ್+ಎಂದನ್+ಅಸುರಾರಿ

ಅಚ್ಚರಿ:
(೧) ದೈತ್ಯರು ಎಂದು ಹೇಳಲು – ನಿಶಾಪರಿಯಟನಪಟುಗಳು ಪದದ ಬಳಕೆ
(೨) ಬಳಲು, ಅಟಕಟಿಸು – ಸಾಮ್ಯಾರ್ಥ ಪದಗಳು

ಪದ್ಯ ೨೩: ಸೈನ್ಯವು ಹೇಗೆ ಸಿದ್ಧವಾಯಿತು?

ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ (ದ್ರೋಣ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುದ್ಧ ಲಂಪಟರಾದ ವೀರರು, ಸೈಂಧವನ ಸೇಡು ನಮ್ಮದು, ಅರ್ಜುನನನ್ನು ಕರೆಯಿರಿ ಎಂದು ಅಬ್ಬರಿಸಿ ನುಗ್ಗಿದರು. ಒಂದೇ ಸಾಲಿನಲ್ಲಿ ಉತ್ಸಾಹಿಸಿ ಸೈನ್ಯವು ರಾತ್ರಿಯಲ್ಲಿ ನಿಂತಿತು. ಅವರ ಉತ್ಸಾಹವು ಶತ್ರು ವೀರರ ಧೈರ್ಯವನ್ನು ಅಲುಗಾಡಿಸಿತು.

ಅರ್ಥ:
ನರ: ಅರ್ಜುನ; ಕರೆ: ಬರೆಮಾಡು; ರಾಜ: ಅರಸ; ಹರಿಬ: ಕೆಲಸ, ಕಾರ್ಯ; ಅಬ್ಬರಿಸು: ಗರ್ಜಿಸು; ನೂಕು: ತಳ್ಳು; ಕದನ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ಪಟುಭಟ: ಪರಾಕ್ರಮಿ; ಸರಿಸ:ನೇರವಾಗಿ, ಸರಳವಾಗಿ; ಲಟಕಟ: ಉದ್ರೇಕ, ಚಕಿತನಾಗು; ಮೋಹರ: ಯುದ್ಧ; ಮರಳಿ: ಹಿಂದಿರುಗು ನಿಂದು: ನಿಲ್ಲು; ರಣ: ಯುದ್ಧ; ರಜನೀ: ರಾತ್ರಿ; ಚರರು: ಓಡಾಡುವ; ಥಟ್ಟಣೆ: ಗುಂಪು; ಧಾತು: ತೇಜಸ್ಸು, ಮೂಲವಸ್ತು; ಕೆಡಿಸು: ಹಾಳುಮಾಡು; ದಿಟ್ಟ: ವೀರ; ಉಬ್ಬಟೆ: ಅತಿಶಯ, ಹಿರಿಮೆ;

ಪದವಿಂಗಡಣೆ:
ನರನ +ಕರೆ +ಕರೆ +ಸಿಂಧುರಾಜನ
ಹರಿಬವ್+ಎಮ್ಮದು +ತಮ್ಮದೆಂದ್
ಅಬ್ಬರಿಸಿ +ನೂಕಿತು +ಕದನ +ಲಂಪಟರಾಗಿ +ಪಟುಭಟರು
ಸರಿಸದಲಿ +ಲಟಕಟಿಸಿ +ಮೋಹರ
ಮರಳಿ +ನಿಂದುದು +ರಣಕೆ +ರಜನೀ
ಚರರ +ಥಟ್ಟಣೆ +ಧಾತುಗೆಡಿಸಿತು +ದಿಟ್ಟರ್+ಉಬ್ಬಟೆಯ

ಅಚ್ಚರಿ:
(೧) ಶೂರರ ಉತ್ಸಾಹ – ಅಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
(೨) ಲಟಕಟಿಸಿ, ಲಂಪಟ – ಲ ಕಾರದ ಪದಗಳ ಬಳಕೆ

ಪದ್ಯ ೭೧: ಕೌರವನ ಮಕ್ಕಳು ಯುದ್ಧಕ್ಕೆ ಹೇಗೆ ಬಂದರು?

ತಳಿತ ಸತ್ತಿಗೆಗಳ ವಿಡಾಯಿಯ
ಲೋಲೆವ ಚಮರಿಯ ವಜ್ರ ಮಕುಟದ
ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ
ಕೆಲಬಲದ ವೇಲಾಯತರ ವೆ
ಗ್ಗಳದ ರಾವ್ತರ ಗಡಣ ನಾಲಗೆ
ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು (ದ್ರೋಣ ಪರ್ವ, ೫ ಸಂಧಿ, ೭೧ ಪದ್ಯ)

ತಾತ್ಪರ್ಯ:
ಛತ್ರ, ಚಾಮರಗಳಿಂದ ಸುತ್ತುವರೆದು, ವಜ್ರ ಕಿರೀಟಗಳನ್ನು ಧರಿಸಿ, ಮೀಸೆ ತಿರುವುತ್ತಾ, ರಾವುತರು ಹಿಂಡಿನೊಂದಿಗೆ ಹೊಳೆ ಹೊಳೆವ ಆಯುಧಗಳನ್ನು ಹಿಡಿದು ಕೌರವನ ಮಕ್ಕಳು ಬಂದರು. ಭಟ್ಟರು ಅವರ ಬಿರುದುಗಳನ್ನು ಉದ್ಘೋಷಿಸಿದರು.

ಅರ್ಥ:
ತಳಿತ: ಚಿಗುರಿದ; ಸತ್ತಿಗೆ: ಕೊಡೆ, ಛತ್ರಿ; ವಿಡಾಯಿ: ಶಕ್ತಿ, ಆಡಂಬರ; ಒಲೆ: ತೂಗಾಡು; ಚಮರಿ: ಚಾಮರ; ವಜ್ರ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಹೊಳಹು: ಕಾಂತಿ, ಪ್ರಕಾಶ; ಹೊಗೆ: ಉಗುಳು, ಪ್ರಜ್ವಲಿಸು; ಕೆದರು: ಹರಡು; ಬಿದು: ಜೋರಾದ; ಉಬ್ಬಟೆ: ಅತಿಶಯ; ಕೆಲಬಲ: ಅಕ್ಕಪಕ್ಕ; ವೇಳಾಯಿತ: ಸಮಯಕ್ಕೆ ಆಗುವವನು; ವೆಗ್ಗಳ: ಹೆಚ್ಚಳ; ರಾವ್ತರು: ಕುದುರೆ ಸವಾರ, ಅಶ್ವಾರೋಹಿ; ಗಡಣ: ಗುಂಪು; ನಾಲಗೆ: ಜಿಹ್ವೆ; ಎಳೆ:ತನ್ನ ಕಡೆಗೆ ಸೆಳೆದುಕೊ; ಹೊಳೆ: ಪ್ರಕಾಶ; ಆಯುಧ: ಶಸ್ತ್ರ; ಭಟ: ಸೈನಿಕ; ನೂಕು: ತಳ್ಳು;

ಪದವಿಂಗಡಣೆ:
ತಳಿತ +ಸತ್ತಿಗೆಗಳ +ವಿಡಾಯಿಯಲ್
ಒಲೆವ +ಚಮರಿಯ +ವಜ್ರ +ಮಕುಟದ
ಹೊಳಹುಗಳ+ ಹೊಗೆ +ಮೀಸೆ+ಕೆದರಿನ +ಬಿರುದಿನ್+ಉಬ್ಬಟೆಯ
ಕೆಲಬಲದ +ವೇಲಾಯತರ +ವೆ
ಗ್ಗಳದ +ರಾವ್ತರ +ಗಡಣ +ನಾಲಗೆ
ದಳೆದುದೆನೆ+ ಹೊಳೆಹೊಳೆವಡ್+ಆಯುಧ +ಭಟರು +ನೂಕಿದರು

ಅಚ್ಚರಿ:
(೧) ಹೊಳಹು, ಹೊಳೆ – ಸಾಮ್ಯಾರ್ಥ ಪದ

ಪದ್ಯ ೭: ದುರ್ಯೋಧನನು ಯಾವ ನೋವಿನ ಮಾತುಗಳನ್ನಾಡಿದನು?

ಬಲದೊಳಗೆ ಹೆಸರುಳ್ಳವರು ಮು
ಮ್ಮಳಿತವಾಯಿತ್ತಾನೆ ಕುದುರೆಗ
ಳಳಿದುದಕೆ ಕಡೆಯಿಲ್ಲ ಪವನಜ ಪಾರ್ಥರುಬ್ಬಟೆಯ
ನಿಲಿಸುವಾಪತ್ತಿಗರು ನಮಗಿ
ಲ್ಲಳಲಿ ಮಾಡುವುದೇನೆನುತ ನೃಪ
ತಿಲಕ ಬೇಸರ ನುಡಿಯೆ ಬಳಿಕಿಂತೆಂದನಾ ದ್ರೋಣ (ದ್ರೋಣ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ನಮ್ಮ ಸೈನ್ಯದಲ್ಲಿ ಹೆಸರಾಂತ ವೀರರಿಗೆ ಸೋಲುಂಟಾಯಿತು. ಲೆಕ್ಕವಿಲ್ಲದಷ್ಟು ಆನೆ, ಕುದುರೆಗಳು ನಾಶವಾದವು. ಭೀಮಾರ್ಜುನರ ಅಬ್ಬರವನ್ನು ತಡೆದು ನಮ್ಮ ಆಪತ್ತಿಗಾಗುವವರು ನಮ್ಮಲ್ಲಿಲ್ಲ. ಸುಮ್ಮನೆ ಅಳಲಿ, ನಾವೇನು ಮಾಡಲು ಸಾಧ್ಯ ಎಂದು ಕೌರವನು ಬೇಸರದಿಂದ ಹೇಳಲು, ದ್ರೋಣನು ಹೀಗೆಂದು ಹೇಳಿದನು.

ಅರ್ಥ:
ಬಲ: ಸೈನ್ಯ; ಹೆಸರು: ನಾಮ; ಮುಮ್ಮುಳಿತವಾಗು: ರೂಪಿಳಿದ ಸಾವಾಗು; ಆನೆ: ಗಜ; ಕುದುರೆ: ಅಶ್ವ; ಅಳಿ: ನಾಶ; ಕಡೆ: ಕೊನೆ; ಪವನಜ: ಭೀಮ; ಉಬ್ಬಟೆ: ಅತಿಶಯ, ಹಿರಿಮೆ; ನಿಲಿಸು: ತಾಳು; ಆಪತ್ತು: ತೊಂದರೆ; ಅಳಲು: ದುಃಖಿಸು; ನೃಪ: ರಾಜ; ತಿಲಕ: ಶ್ರೇಷ್ಠ; ಬೇಸರ: ನೋವು; ನುಡಿ: ಮಾತು; ಬಳಿಕ: ನಂತರ;

ಪದವಿಂಗಡಣೆ:
ಬಲದೊಳಗೆ +ಹೆಸರುಳ್ಳವರು +ಮು
ಮ್ಮಳಿತವಾಯಿತ್+ಆನೆ +ಕುದುರೆಗಳ್
ಅಳಿದುದಕೆ +ಕಡೆಯಿಲ್ಲ +ಪವನಜ+ ಪಾರ್ಥರ್+ಉಬ್ಬಟೆಯ
ನಿಲಿಸುವ್+ಆಪತ್ತಿಗರು+ ನಮಗಿಲ್
ಅಳಲಿ +ಮಾಡುವುದೇನ್+ಎನುತ +ನೃಪ
ತಿಲಕ +ಬೇಸರ +ನುಡಿಯೆ +ಬಳಿಕಿಂತೆಂದನಾ +ದ್ರೋಣ

ಅಚ್ಚರಿ:
(೧) ವೀರರು ಎಂದು ಹೇಳಲು – ಬಲದೊಳಗೆ ಹೆಸರುಳ್ಳವರು
(೨) ಕೌರವನನ್ನು ನೃಪತಿಲಕ ಎಂದು ಕರೆದಿರುವುದು

ಪದ್ಯ ೫೮: ಪಾಂಡವ ಸೈನ್ಯವೇಕೆ ತಲ್ಲಣಿಸಿತು?

ತೀರಿತಿನ್ನೇನಕಟ ಪಾಂಡವ
ವೀರರುಬ್ಬಟೆ ಹಾರಿತೇ ತ್ರಿಪು
ರಾರಿಯುರಿಗಣ್ಣಿಂಗೆ ಸೋಲದ ಕೈದುಗೊಂಡನಲ
ಧಾರುಣಿಯನಿನ್ನುಣಲಿ ಧರ್ಮ ಕು
ಮಾರನಕಟಿನ್ನಾರು ಕಾವವ
ರಾರೆನುತ ತಲ್ಲಣಿಸುತಿರ್ದುದು ಪಾಂಡುಸುತ ಸೇನೆ (ದ್ರೋಣ ಪರ್ವ, ೩ ಸಂಧಿ, ೫೮ ಪದ್ಯ
)

ತಾತ್ಪರ್ಯ:
ಪಾಂದವ ಸೈನ್ಯವು ಗಾಬರಿಗೊಂಡು, ಪಾಂಡವರ ಕತೆ ಮುಗಿಯಿತು. ಅವರ ವೀರರ ಸಾಹಸ ಹಾರಿಹೋಯಿತು, ಶಿವನ ಉರಿಗಣ್ಣಿಗೂ ಸೋಲದ ಆಯುಧವನ್ನು ಭಗದತ್ತನು ಪ್ರಯೋಗಿಸಿ ಬಿಟ್ಟ, ಧರ್ಮರಾಜನು ಇನ್ನು ರಾಜ್ಯವನ್ನಾಳಲಿ! ಅಯ್ಯೋ ನಮ್ಮನ್ನು ರಕ್ಷಿಸುವವರಾರು ಎಂದು ತಲ್ಲಣಿಸಿತು.

ಅರ್ಥ:
ತೀರಿತು: ಮುಕ್ತಾಯ; ಅಕಟ: ಅಯ್ಯೋ; ವೀರ: ಶೂರ; ಉಬ್ಬಟೆ: ಹೆಚ್ಚು, ಅಧಿಕ; ಹಾರು: ಇಲ್ಲವಾಗು; ತ್ರಿಪುರಾರಿ: ತ್ರಿಪುರಾಸುರನ ವೈರಿ (ಶಿವ); ಉರಿ: ಬೆಂಕಿ; ಕಣ್ಣು: ನೇತ್ರ; ಸೋಲು: ಪರಾಭವ; ಕೈದು: ಆಯುಧ; ಧಾರುಣಿ: ಭೂಮಿ; ಉಣು: ತಿನ್ನು; ಧರ್ಮ: ಧಾರಣೆ ಮಾಡಿದುದು; ಕುಮಾರ: ಪುತ್ರ; ಕಾವು: ರಕ್ಷಿಸು; ತಲ್ಲಣ: ಭಯ, ಭೀತಿ; ಸುತ: ಮಗ; ಸೇನೆ: ಸೈನ್ಯ;

ಪದವಿಂಗಡಣೆ:
ತೀರಿತ್+ಇನ್ನೇನ್+ಅಕಟ +ಪಾಂಡವ
ವೀರರ್+ಉಬ್ಬಟೆ +ಹಾರಿತೇ +ತ್ರಿಪು
ರಾರಿ+ಉರಿಗಣ್ಣಿಂಗೆ +ಸೋಲದ +ಕೈದು+ಕೊಂಡನಲ
ಧಾರುಣಿಯನಿನ್+ಉಣಲಿ +ಧರ್ಮ +ಕು
ಮಾರನ್+ಅಕಟಿನ್ನಾರು+ ಕಾವವರ್
ಆರೆನುತ +ತಲ್ಲಣಿಸುತಿರ್ದುದು +ಪಾಂಡುಸುತ +ಸೇನೆ

ಅಚ್ಚರಿ:
(೧) ಕುಮಾರ, ಸುತ – ಸಾಮ್ಯಾರ್ಥ ಪದಗಳು
(೨) ಆಯುಧದ ಹಿರಿಮೆ – ತ್ರಿಪುರಾರಿಯುರಿಗಣ್ಣಿಂಗೆ ಸೋಲದ ಕೈದುಗೊಂಡನಲ

ಪದ್ಯ ೬೭: ಅರ್ಜುನನ ಮೇಲೆ ಮಹಾರಥರು ಹೇಗೆ ಆಕ್ರಮಣ ಮಾಡಿದರು?

ಫಡ ಫಡೆಲವೋ ಪಾರ್ಥ ಭೀಷ್ಮನ
ಕೆಡಹಿದುಬ್ಬಟೆ ನಮ್ಮ ಕೂಡಳ
ವಡದು ತೆಗೆ ತೆಗೆಯೆನುತ ತುಳುಕಿದರಂಬಿನಂಬುಧಿಯ
ಗಡಣವೊಳ್ಳಿತು ಗಾಢ ಮಿಗೆ ಬಿಲು
ವಿಡಿಯ ಬಲ್ಲಿರಿ ಸಮರ ಜಯವಳ
ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ (ದ್ರೋಣ ಪರ್ವ, ೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ಎಲವೋ ಎಲವೋ ಅರ್ಜುನ, ಭೀಷ್ಮರನ್ನು ಬಾಣದ ಮಂಚಕ್ಕೆ ಕೆಡಹಿದ ಶೌರ್ಯ ನಮ್ಮ ಹತ್ತಿರ ನಡೆಯುವುದಿಲ್ಲ, ತೆಗೆ, ಎನ್ನುತ್ತಾ ಮಹಾರಥರು ಬಾಣಗಳ ಸಾಗರದಂತೆ ಕಾಣುವಹಾಗೆ ಬಾಣಗಳನ್ನು ಬಿಟ್ಟರು. ಅರ್ಜುನನು ನಿಮಗೆ ಬಿಲ್ಲು ಹಿಡಿಯುವುದು ಚೆನ್ನಾಗಿಯೇ ಬರುತ್ತದೆ, ಆದರೆ ಯುದ್ಧದಲ್ಲಿ ಜಯವು ಸಿಕ್ಕಬಹುದು, ಅಥವ ಸಿಗದಿರಬಹುದು, ತಪ್ಪೇನು ಎಂದು ಪ್ರತಿಯಾಗಿ ಬಾಣಗಳನ್ನು ಬಿಟ್ಟನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಕೆಡಹು: ನಾಶಮಾದು; ಉಬ್ಬಟೆ: ಅತಿಶಯ, ಹಿರಿಮೆ; ಅಳವಡಿಸು: ನಡೆಸು; ತೆಗೆ: ಹೊರತರು; ತುಳುಕು: ಕದಡು; ಅಂಬು: ಬಾಣ; ಅಂಬುಧಿ: ಸಾಗರ; ಗಡಣ; ಗುಂಪು; ಗಾಢ:ಹೆಚ್ಚಳ, ಅತಿಶಯ; ಬಿಲು: ಬಿಲ್ಲು, ಚಾಪ; ಬಲ್ಲಿರಿ: ತಿಳಿದಿರಿ; ಸಮರ: ಯುದ್ಧ; ಜಯ: ಗೆಲುವು; ನರ: ಅರ್ಜುನ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಫಡ+ ಫಡ+ಎಲವೋ +ಪಾರ್ಥ +ಭೀಷ್ಮನ
ಕೆಡಹಿದ್+ಉಬ್ಬಟೆ +ನಮ್ಮ +ಕೂಡ್+ಅಳ
ವಡದು +ತೆಗೆ +ತೆಗೆಯೆನುತ +ತುಳುಕಿದರ್+ಅಂಬಿನ್+ಅಂಬುಧಿಯ
ಗಡಣವೊಳ್ಳಿತು +ಗಾಢ +ಮಿಗೆ +ಬಿಲು
ವಿಡಿಯ +ಬಲ್ಲಿರಿ +ಸಮರ +ಜಯವ್+ಅಳ
ವಡುವುದ್+ಅಳವಡದಿಹುದು +ತಪ್ಪೇನ್+ಎನುತ+ ನರನ್+ಎಚ್ಚ

ಅಚ್ಚರಿ:
(೧) ಫಡ ಫಡೆಲವೋ, ತೆಗೆ ತೆಗೆಯೆನುತ, ಅಂಬಿನಂಬುಧಿ, ಅಳವಡುವುದಳವಡದಿಹುದು – ಜೋದಿ ಪದಗಳು
(೨) ಬಾಣಗಳ ಸಾಗರ ಎಂದು ಹೇಳಲು – ಅಂಬಿನಂಬುಧಿ ಪದದ ಬಳಕೆ

ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ (ಭೀಷ್ಮ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರಲ್ಲಿ ಬಂದು, ಜೀಯಾ ಎಲ್ಲಾ ಸೇನಾನಾಯಕರು ಮೋರೆಗಳಿಗೆ ಮುಸುಕು ಹಾಕಿಕೊಂಡುದನ್ನು ನೋಡಿದಿರಾ? ಯುದ್ಧಕ್ಕೆ ಹೊರಡುವ ಮೊದಲು ಅವರು ಹೊಗಳಿಸಿಕೊಂಡ ಬಿರುದುಗಳ ಆರ್ಭಟವನ್ನು ಕೇಳಿದ್ದಿರಲ್ಲವೇ? ಜಠರ ಪರಾಯಣ ಪರಿಣತರಾದ ಇವರ ಪಲಾಯನದ ಹೆಬ್ಬೆಳಸನ್ನು ನೋಡಿರಿ ಇಂಥವರನ್ನು ಕಳಿಸಿ ನೀವು ಕ್ಷತ್ರಿಯ ಧರ್ಮವನ್ನು ಕಾಪಾಡಿದಿರಲ್ಲವೇ ಎಂದು ಭೀಷ್ಮನಿಗೆ ಹೇಳಲು, ಭೀಷ್ಮನು ಹೀಗೆ ಉತ್ತರಿಸಿದನು.

ಅರ್ಥ:
ಜೀಯ: ಒಡೆಯ; ಚಿತ್ತೈಸು: ಆಲಿಸು; ನಾಯಕ: ಒಡೆಯ; ಮೋರೆ: ಮುಖ, ಆನನ; ಮುಸುಕು: ಹೊದಿಕೆ; ಆಯತ: ವಿಶಾಲವಾದ; ಹೊತ್ತು: ಸಮಯ; ಮುನ್ನ: ಮೊದಲು; ಬಿರು: ಬಿರುಸು, ಕಠೋರ; ಉಬ್ಬಟೆ: ಅತಿಶಯ, ಹಿರಿಮೆ; ಕಾಯಿ: ರಕ್ಷಿಸು; ಜಠರ: ಹೊಟ್ಟೆ; ಪರಾಯಣ: ಪೂರ್ಣವಾದುದು, ತಲ್ಲೀನವಾದ; ಪರಿಣತೆ: ಚಾತುರ್ಯ; ಪಲಾಯನ: ಓಡುವಿಕೆ, ಪರಾರಿ; ಹೆಬ್ಬೆಳಸು: ಸಮೃದ್ಧ ಫಸಲು; ನೋಡು: ವೀಕ್ಷಿಸು;

ಪದವಿಂಗಡಣೆ:
ಜೀಯ +ಚಿತ್ತೈಸಿದರೆ+ ಸೇನಾ
ನಾಯಕರ +ಮೋರೆಗಳ +ಮುಸುಕುಗಳ್
ಆಯತವನ್+ಈ+ ಹೊತ್ತು +ಮುನ್ನಿನ +ಬಿರುದಿನ್+ಉಬ್ಬಟೆಯ
ಕಾಯಿದಿರೆ +ಧರ್ಮವನು +ಜಠರ+ ಪ
ರಾಯಣರ+ ಪರಿಣತೆಯಲಾದ +ಪ
ಲಾಯನದ +ಹೆಬ್ಬೆಳಸ+ ನೋಡ್+ಎನೆ+ ಭೀಷ್ಮನ್+ಇಂತೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪರಾಯಣರ ಪರಿಣತೆಯಲಾದ ಪಲಾಯನದ