ಪದ್ಯ ೭೦: ಮುನಿಗಳು ಮಕ್ಕಳನ್ನು ಹೇಗೆ ಸಂಭೋದಿಸಿದರು?

ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಬಳಿಕ ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಭೇದ ರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ (ಆದಿ ಪರ್ವ, ೪ ಸಂಧಿ, ೭೦ ಪದ್ಯ)

ತಾತ್ಪರ್ಯ:
ಮೊದಲನೆಯವನು ಧರ್ಮಜ, ಎರಡನೆಯವನು ಭೀಮ, ಮೂರನೆಯವನು ಅರ್ಜುನ, ನಕುಲನು ನಾಲ್ಕನೆಯವನು, ಐದನೆಯವಉ ಸಹದೇವ. ಕುಂತಿಯ ಮಕ್ಕಳು ಮಾದ್ರಿಯ ಮಕ್ಕಳೆಂಬ ಭೇದವು ಇವರಲ್ಲಿಲ್ಲ. ಇವರು ಪಾಂಡವರು, ಎಂದು ಅಲ್ಲಿದ್ದ ಋಷಿಗಳೆಲ್ಲರೂ ಸಂತೋಷದಿಂದ ಹೇಳಿದರು.

ಅರ್ಥ:
ಅತಿಶಯ: ಹೆಚ್ಚು; ಭೇದ: ಅಂತರ; ರಹಿತ: ಇಲ್ಲದ; ಖ್ಯಾತ: ಪ್ರಸಿದ್ಧಿ; ಪರಮ: ಶ್ರೇಷ್ಠ; ಮುನಿ: ಋಷಿ; ನಂದನ: ಮಕ್ಕಳು;

ಪದವಿಂಗಡಣೆ:
ಈತನೇ+ ಧರ್ಮಜನು +ಎರಡನೆ
ಯಾತ +ಭೀಮನು +ಬಳಿಕ +ಮೂರನೆ
ಯಾತನ್+ಅರ್ಜುನ +ನಕುಲನ್+ಐದನೆಯಾತ +ಸಹದೇವ
ಈತಗಳು +ಕೌಂತೇಯ +ಮಾದ್ರೇಯ
ಅತಿಶಯ +ಪರಿಭೇದ +ರಹಿತ
ಖ್ಯಾತರೆಂದರು +ಪರಮ+ಮುನಿಗಳು +ಪಾಂಡು+ನಂದನರ

ಅಚ್ಚರಿ:
(೧) ಈತ, ಖ್ಯಾತ, ಆತ – ಪ್ರಾಸ ಪದಗಳು

ಪದ್ಯ ೩೯: ಶಲ್ಯನ ರಥಕ್ಕೆ ಅಡ್ಡವಾಗಿ ಯಾವ ರಥ ನಿಂತಿತು?

ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ
ರಾಯದಳ ದೆಸೆಗೆಟ್ಟು ದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ (ಶಲ್ಯ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಗಾಯಗೊಂಡನು, ಗಾಯಗಳು ಅತಿಶಯವಾಗಲು ನಕುಲ ಸಹದೇವರ ಶೌರ್ಯ ಮುರಿದು ಓಡಿಹೋದರು. ಪೆಟ್ಟುತಿಂದ ಧರ್ಮಜನು ಕಳವಳಿಸಿದನು. ಸೈನ್ಯ ದಿಕ್ಕುಗಾಣದೆ ಎಲ್ಲ ಕಡೆ ಚದುರಿ ಹೋಯಿತು. ಒಟ್ಟಾಗಿ ಬಂದ ವೀರರು ಮಡಿದರು. ಶ್ರೀಕೃಷ್ಣನು ಇದನ್ನು ನೋಡಿ ಅರ್ಜುನನ ರಥವನ್ನು ಶಲ್ಯನಿಗೆ ಅಡ್ಡವಾಗಿ ತಂದನು.

ಅರ್ಥ:
ಘಾಯ: ಪೆಟ್ಟು; ಸುತ: ಮಗ; ಪೂರಾಯ: ಪರಿಪೂರ್ಣ; ಓಡು: ಧಾವಿಸು; ಮಾದ್ರೇಯ: ಮಾದ್ರಿಯ ಮಕ್ಕಳು; ಉಬ್ಬಟೆ: ಅತಿಶಯ; ಮುರಿ: ಸೀಳು; ಬೆಬ್ಬಳಿ: ಕಳವಳ; ಅವನೀಶ: ರಾಜ; ರಾಯ: ರಾಜ; ದಳ: ಸೈನ್ಯ; ದೆಸೆ: ದಿಕ್ಕು; ದೆಸೆಗೆಟ್ಟು: ದಿಕ್ಕು ಕಾಣದೆ; ಒಗ್ಗು: ಗುಂಪು, ಸಮೂಹ; ನಾಯಕ: ಒಡೆಯ; ನುಗ್ಗು: ತಳ್ಳು; ಯಾದವರಾಯ: ಕೃಷ್ಣ; ಕಂಡು: ನೋಡು; ರಥ: ಬಂಡಿ; ಅಡಹಾಯ್ಸಿ: ಮಧ್ಯ ಕರೆತಂದು;

ಪದವಿಂಗಡಣೆ:
ಘಾಯವಡೆದನು +ದ್ರುಪದ+ಸುತ +ಪೂ
ರಾಯದ್+ಏರಿನಲ್+ಓಡಿದರು +ಮಾ
ದ್ರೇಯರ್+ಉಬ್ಬಟೆ +ಮುರಿದು +ಬೆಬ್ಬಳೆವೋದನ್+ಅವನೀಶ
ರಾಯದಳ +ದೆಸೆಗೆಟ್ಟುದ್ + ಒಗ್ಗಿನ
ನಾಯಕರು +ನುಗ್ಗಾಯ್ತು+ ಯಾದವ
ರಾಯ +ಕಂಡನು+ ರಥವನ್+ಅಡಹಾಯ್ಸಿದನು +ಫಲುಗುಣನ

ಅಚ್ಚರಿ:
(೧) ಘಾಯ, ಪೂರಾಯ, ರಾಯ, ಯಾದವರಾಯ, ಮಾದ್ರೇಯ – ಪ್ರಾಸ ಪದಗಳು
(೨) ಕೃಷ್ಣನನ್ನು ಯಾದವರಾಯ; ನಕುಲ ಸಹದೇವರನ್ನು ಮಾದ್ರೇಯ ಎಂದು ಕರೆದಿರುವುದು

ಪದ್ಯ ೧೬: ಅಭಿಮನ್ಯುವಿನ ಪರಾಕ್ರಮವು ಹೇಗಿತ್ತು?

ಎಡೆದೊಳೌಕುವ ಕೃಪನನೆಚ್ಚನು
ತಡೆಯಲಶ್ವತ್ಥಾಮನನು ರಥ
ಕೆಡೆಯಲೆಚ್ಚನು ತೊಡಚಿ ಕೈಯಲಿ ಕೌರವಾನುಜನ
ಮಿಡುಕಲೆಚ್ಚನು ಹಿಂದು ಮುಂದವ
ಗಡಿಸಿದಾ ಮಾದ್ರೇಯ ರವಿಸುತ
ರೊಡಲೊಳಂಬನು ಹೂಳಿದನು ಸೀಳಿದನು ಸಮರಥರ (ದ್ರೋಣ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಡದಿಂದ ನುಗ್ಗಿದ ಕೃಪನಿಗೆ ಹೊಡೆದನು. ಅಶ್ವತ್ಥಾಮನ ರಥವು ಬೀಳುವಂತೆ ಬಾಣಗಳನ್ನು ಬಿಟ್ಟನು. ದುಶ್ಯಾಸನನನ್ನು ನಡುಗುವಂತೆ ಬಾಣ ಬಿಟ್ಟನು. ಹಿಂದೆ ಮುಂದೆ ಬಂದ ಶಲ್ಯ, ಕರ್ಣರ ದೇಹದಲ್ಲಿ ಬಾಣಗಳು ನೆಟ್ಟಿಕೊಳ್ಳುವಂತೆ ಮಾಡಿದನು. ಪರಾಕ್ರಮಿಗಳನ್ನು ಸೀಳಿ ಹಾಕಿದನು.

ಅರ್ಥ:
ಎಡ: ವಾಮಭಾಗ; ಔಕು: ತಳ್ಳು; ಎಚ್ಚು: ಬಾಣ ಪ್ರಯೋಗ ಮಾಡು; ತಡೆ: ನಿಲ್ಲು; ರಥ: ಬಂಡಿ; ಕೆಡೆ: ಬೀಳು, ಕುಸಿ; ರಥ: ಬಂಡಿ; ತೊಡಚು: ಕಟ್ಟು, ಬಂಧಿಸು; ಅನುಜ: ತಮ್ಮ; ಮಿಡುಕು: ಅಲುಗಾಟ, ಚಲನೆ; ಹಿಂದು: ಹಿಂಭಾಗ; ಮುಂದು: ಮುಂಭಾಗ; ಅವಗಡಿಸು: ಕಡೆಗಣಿಸು; ರವಿಸುತ: ಸೂರ್ಯನ ಪುತ್ರ (ಕರ್ಣ); ಒಡಲು: ದೇಹ; ಅಂಬು: ಬಾಣ; ಹೂಳು: ಹೂತು ಹಾಕು, ಮುಚ್ಚು; ಸೀಳು: ಕತ್ತರಿಸು; ಸಮರಥ: ಪರಾಕ್ರಮಿ;

ಪದವಿಂಗಡಣೆ:
ಎಡೆದೊಳ್+ಔಕುವ +ಕೃಪನನ್+ಎಚ್ಚನು
ತಡೆಯಲ್+ಅಶ್ವತ್ಥಾಮನನು +ರಥ
ಕೆಡೆಯಲ್+ಎಚ್ಚನು +ತೊಡಚಿ +ಕೈಯಲಿ +ಕೌರವ+ಅನುಜನ
ಮಿಡುಕಲ್+ಎಚ್ಚನು +ಹಿಂದು +ಮುಂದ್
ಅವಗಡಿಸಿದಾ +ಮಾದ್ರೇಯ +ರವಿಸುತರ್
ಒಡಲೊಳ್+ಅಂಬನು +ಹೂಳಿದನು+ ಸೀಳಿದನು+ ಸಮರಥರ

ಅಚ್ಚರಿ:
(೧) ಎಚ್ಚನು – ಪದದ ಬಲಕೆ ೩ ಬಾರಿ ಪ್ರಯೋಗ
(೨) ತಡೆಯಲ್, ಕೆಡೆಯಲ್, ಮಿಡುಕಲ್, ಒಡಲೊಳ್ – ಪದಗಳ ಬಳಕೆ

ಪದ್ಯ ೨೪: ಪದ್ಮವ್ಯೂಹವನ್ನು ಭೇದಿಸಲಾರಿಗೆ ಅಸಾಧ್ಯ?

ಖರೆಯರಹಿರುಂಟುಂಟು ನೆರವನೆ
ಕರಸಿಕೊಂಡೇ ಬಹೆನೆನುತ ರಿಪು
ಚರರ ಕಳುಹಲು ದ್ರೋಣನಟ್ಟಿದ ದೂತರೈತಂದು
ಕರೆದರ್ಜುನನನು ವೃಕೋದರ
ಧರಣಿಪತಿ ಮಾದ್ರೇಯ ಹೈಡಿಂ
ಬರಿಗೆ ನೂಕದು ಪಾರ್ಥ ಪದ್ಮವ್ಯೂಹವಿಂದಿನಲಿ (ದ್ರೋಣ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಅರ್ಜುನನು, ನೀವು ನಿಷ್ಠುರ ಸತ್ಯವನ್ನೇ ಹೇಳುತ್ತಿದ್ದೀರಿ, ಸರಿಯಾದ ಸಹಾಯವನ್ನು ತೆಗೆದುಕೊಂಡೇ ಬರುತ್ತೇನೆ ಎಂದನು. ದ್ರೋಣನ ದೂತರು ಇದಕ್ಕೆ ಪ್ರತಿಯಾಗಿ, ಅರ್ಜುನನನ್ನು ಕರೆಯುತ್ತಾ ಇಂದಿನ ಪದ್ಮವ್ಯೂಹವು ಭೀಮ, ಧರ್ಮಜ, ನಕುಲ, ಸಹದೇವ, ಘಟೋತ್ಕಚರಿಗೆ ಅಸಾಧ್ಯವಾದುದು ಎಂದನು.

ಅರ್ಥ:
ಖರೆ: ದಿಟ, ಸತ್ಯ; ಅರುಹು: ಹೇಳು; ನೆರವು: ಸಹಾಯ; ಕರಸಿ: ಬರೆಮಾಡಿ; ಬಹೆ: ಬರು; ರಿಪು: ವೈರಿ; ಕಳುಹು: ತೆರಳು; ಅಟ್ಟು: ಹಿಂಬಾಲಿಸು; ದೂತ: ಸೇವಕ, ಸೈನಿಕ; ಐತಂದು: ಬಂದು ಸೇರು; ಕರೆ: ಬರೆಮಾಡು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಧರಣಿಪತಿ: ರಾಜ; ಮಾದ್ರೇಯ: ನಕುಲ, ಸಹದೇವ; ಹೈಡಿಂಬ: ಘಟೋತ್ಕಚ; ನೂಕು: ತಳ್ಳು;

ಪದವಿಂಗಡಣೆ:
ಖರೆ+ಅರುಹಿರ್+ಉಂಟುಂಟು +ನೆರವನೆ
ಕರಸಿಕೊಂಡೇ +ಬಹೆನ್+ಎನುತ +ರಿಪು
ಚರರ +ಕಳುಹಲು +ದ್ರೋಣನ್+ಅಟ್ಟಿದ +ದೂತರ್+ಐತಂದು
ಕರೆದರ್+ಅರ್ಜುನನನು +ವೃಕೋದರ
ಧರಣಿಪತಿ+ ಮಾದ್ರೇಯ +ಹೈಡಿಂ
ಬರಿಗೆ +ನೂಕದು +ಪಾರ್ಥ +ಪದ್ಮವ್ಯೂಹವಿಂದಿನಲಿ

ಅಚ್ಚರಿ:
(೧) ಖರೆ, ಕರೆ – ಪದದ ಬಳಕೆ

ಪದ್ಯ ೫೯: ಸೈನ್ಯವು ಏಕೆ ದಿಕ್ಕು ದಿಕ್ಕಿಗೆ ಓಡಿತು?

ಹಾ ಯುಧಿಷ್ಠಿರ ರಾಯ ಶಿವ ಶಿವ
ವಾಯುಸುತ ಹಾ ಪಾರ್ಥ ಹಾ ಮಾ
ದ್ರೇಯರಿರ ಹಾಯೆನುತ ಹರೆದುದು ಸೇನೆ ದೆಸೆದೆಸೆಗೆ
ಬಾಯ ಬಿಟ್ಟುದು ದಿವಿಜಬಲ ನಿ
ರ್ದಾಯದಲಿ ನೆಲನಾಯಿತಲ ಕುರು
ರಾಯಗೆನುತಿರ್ದುದು ಜಗತ್ರಯವೊಂದು ನಿಮಿಷದಲಿ (ದ್ರೋಣ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಹಾ ಯುಧಿಷ್ಠಿರ, ಹಾ ಭೀಮ, ಹಾ ಅರ್ಜುನ, ಹಾ ನಕುಲ ಸಹದೇವರೇ ಎಂದು ಪ್ರಲಾಪಿಸುತ್ತಾ ಸೈನ್ಯವು ದಿಕ್ಕು ದಿಕ್ಕಿಗೆ ಓಡಿತು. ದೇವತೆಗಳೆಲ್ಲರೂ ಬಾಯಿಬಿಟ್ಟರು. ಕೌರವನಿಗೆ ಸಮಸ್ತ ಭೂಮಂಡಾವೂ ವಶವಾಯಿತಲ್ಲಾ ಎಂದು ಮೂರೂ ಲೋಕಗಳೂ ದುಃಖಿಸಿದವು.

ಅರ್ಥ:
ರಾಯ: ರಾಜ; ವಾಯು: ಅನಿಲ; ಸುತ: ಭೀಮ; ಮಾದ್ರೇಯ: ನಕುಲ ಮತ್ತು ಸಹದೇವ; ಹರೆ:ವ್ಯಾಪಿಸು; ಸೇನೆ: ಸೈನ್ಯ; ದೆಸೆ: ದಿಕ್ಕು; ಬಿಟ್ಟು: ಬಿಡು, ತೊರೆ; ದಿವಿಜ: ದೇವತೆ; ಬಲ: ಸೈನ್ಯ; ನಿರ್ದಾಯದ: ಅಖಂಡ; ನೆಲ: ಭೂಮಿ; ಜಗ: ಪ್ರಪಂಚ; ತ್ರಯ: ಮೂರು; ನಿಮಿಷ: ಕ್ಷಣ;

ಪದವಿಂಗಡಣೆ:
ಹಾ +ಯುಧಿಷ್ಠಿರ +ರಾಯ +ಶಿವ +ಶಿವ
ವಾಯುಸುತ +ಹಾ +ಪಾರ್ಥ +ಹಾ +ಮಾ
ದ್ರೇಯರಿರ+ ಹಾ+ಎನುತ +ಹರೆದುದು +ಸೇನೆ +ದೆಸೆದೆಸೆಗೆ
ಬಾಯ +ಬಿಟ್ಟುದು +ದಿವಿಜಬಲ +ನಿ
ರ್ದಾಯದಲಿ +ನೆಲನ್+ಆಯಿತಲ +ಕುರು
ರಾಯಗ್+ಎನುತಿರ್ದುದು +ಜಗತ್ರಯವ್+ಒಂದು+ ನಿಮಿಷದಲಿ

ಅಚ್ಚರಿ:
(೧) ಅಚ್ಚರಿಗೊಂಡುದನ್ನು ಚಿತ್ರಿಸುವ ಪರಿ – ಬಾಯ ಬಿಟ್ಟುದು ದಿವಿಜಬಲ